ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

– ರವಿ ಕೃಷ್ಣಾರೆಡ್ಡಿ

ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ವಹಿಸಿಕೊಂಡಿದೆ. ಬಿಡಿಬಿಡಿಯಾಗಿ ನೋಡುವುದಕ್ಕಿಂತ ಒಟ್ಟಾರೆಯಾಗಿ ಮತ್ತು ಅಂಕಿಸಂಖ್ಯೆಗಳ ದೃಷ್ಟಿಕೋನದಲ್ಲಿ ನೋಡಿದಾಗ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ನಡೆಸಲು ಚುನಾಯಿಸಿದ್ದಾರೆ. ಹಾಗೆಯೇ ಅದು ಬಹುಮತದ ನಿರ್ಣಯವಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ದ್ವಂದ್ವಗಳಿಲ್ಲದ ನಿರ್ಣಯ ಕೊಟ್ಟ ರಾಜ್ಯದ ಜನತೆಯನ್ನು ನಾವು ಅಭಿನಂದಿಸಲೇಬೇಕು.

ಮತ್ತು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. siddaramaiah-cmಕರ್ನಾಟಕ ಕಂಡ ಅನೇಕ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಲು ಹಲವರಿಗಿಂತ ಹೆಚ್ಚು ಅರ್ಹರಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆ ತಮ್ಮ ಹಕ್ಕೆಂಬಂತೆ ಪ್ರತಿಪಾದಿಸುತ್ತ ಬಂದಿದ್ದರು ಸಹ. ಈಗ ಅನೇಕ ರಾಜಕೀಯ ಏಳುಬೀಳಾಟಗಳ, ತಂತ್ರಗಾರಿಕೆಯ, ಜನಾಭಿಪ್ರಾಯದ ನಂತರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೂ ಅಭಿನಂದನೆಗಳು.

ಕಳೆದೆರಡು ದಿನಗಳಲ್ಲಿ ನಡೆದ ಅಪ್ಯಾಯಮಾನವಾದಂತಹ ಘಟನಾವಳಿಗಳೆಂದರೆ, ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ನಿಯೋಜಿತ ಮುಖ್ಯಮಂತ್ರಿಯಾಗಿ ಘೋಷಿತವಾದ ಮೇಲೆ ಸಿದ್ಧರಾಮಯ್ಯನವರು ನಡೆದುಕೊಂಡ ರೀತಿ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದವರೆಲ್ಲ, ಆ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಮಾಡುತ್ತಿದ್ದ ಮೊದಲ ಕೆಲಸ ಮಠಗಳಿಗೆ ಹೋಗಿ ಮಠಾಧೀಶರ ಕಾಲುಗಳಿಗೆ ಎರಗುತ್ತಿದ್ದದ್ದು, ಮತ್ತು ನಂತರ ದೇವಸ್ಥಾನಗಳಿಗೆ, ಅದರಲ್ಲೂ ರಾಜ್ಯದ ಹೊರಗಿನ (ಜಮ್ಮು, ಆಂಧ್ರ, ಕೇರಳ) ದೇವಳಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿ ಬರುತ್ತಿದ್ದದ್ದು. ಅಂತಹ ಒಂದು ದಾಸ್ಯದ ಮತ್ತು ಅವೈಚಾರಿಕ ಮನೋಭಾವನ್ನು ಬದಿಗೊತ್ತಿ, ನಾಡಿನಲ್ಲಿ ಈಗಲೂ ಅಷ್ಟಿಷ್ಟು ಸಾಕ್ಷಿಪ್ರಜ್ಞೆಯಾಗಿ ಬಿಂಬಿತವಾಗಿರುವ ಹೋರಾಟಗಾರರ, ಚಿಂತಕರ, ಕವಿಗಳ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದು. ಇದು ಬಹುಶಃ ಕರ್ನಾಟಕದ ಮುಂದಿನ ನಾಯಕರ ನಡವಳಿಕೆಗಳಿಗೆ ಮುನ್ನುಡಿ ಬರೆದಂತಿದೆ. ಸಿದ್ಧರಾಮಯ್ಯವನರ ಈ ನಡೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಆಶಿಸೋಣ. ಒಬ್ಬ ರಾಜಕೀಯ ನಾಯಕ ನಾಡಿನ ಎಲ್ಲಾ ರಂಗಗಳನ್ನು ಪ್ರಭಾವಿಸಬೇಕು, ಮೇಲಕ್ಕೆತ್ತಬೇಕು. ಅಂತಹ ಒಂದು ಸಾಧ್ಯತೆ ಮತ್ತು ಅವಕಾಶ ಸಿದ್ಧರಾಮಯ್ಯನವರಿಗಿದೆ.

ಆದರೆ, ಇದೇ ಸಂದರ್ಭದಲ್ಲಿ ನಾಡಿನ ಭವಿಷ್ಯದ ಬಗ್ಗೆ ಮತ್ತು ಈ ಸಲದ ಸರ್ಕಾರ ತರಲಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ನಾನು ಆಶಾವಾದಿಯಾಗಿಲ್ಲ. ಸಿದ್ಧರಾಮಯ್ಯನವರ ಜೀವನದ ಮಹತ್ವಾಕಾಂಕ್ಷೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದಾಗಿತ್ತು. ಅದನ್ನವರು ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪ್ರತಿಪಾದಿಸುತ್ತ ಬಂದಿದ್ದರು. ಆದರೆ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಿಂತಹ ಬದಲಾವಣೆಗಳನ್ನು ಮತ್ತು ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದಾಗಲಿ, ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕಲ್ಪನೆಗಳು ಎಂತಹವಿವೆ ಎಂದಾಗಲಿ ಅವರು ಸ್ಪಷ್ಟವಾಗಿ ಜನರ ಮುಂದೆ ಹಂಚಿಕೊಂಡ ಉದಾಹರಣೆಗಳಿಲ್ಲ. ಅವರು ಈ ಹಿಂದೆ ತಮಗೆ ವಹಿಸಿದ್ದ ಖಾತೆಗಳನ್ನು ದಕ್ಷವಾಗಿ ನಿಭಾಯಿಸಿದ ಉದಾಹರಣೆಗಳಿವೆಯೇ ವಿನಃ ಕ್ರಾಂತಿಕಾರಕ ಸಾಧನೆಗಳನ್ನು ಮಾಡಿದ ಉದಾಹರಣೆಗಳಿಲ್ಲ. ಮತ್ತು ಸಿದ್ಧರಾಮಯ್ಯನವರು ಆಲಸಿ ಮತ್ತು ವಿಲಾಸಿ ಎಂಬ ಆರೋಪಗಳಿವೆ. ಹೀಗಿರುವಾಗ ಸಿದ್ಧರಾಮಯ್ಯನವರು ಜೆ.ಎಚ್.ಪಟೇಲರಂತೆ ಒಬ್ಬ well-meaning ಮುಖ್ಯಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಸಂಶಯಗಳನ್ನು ಸುಳ್ಳು ಮಾಡಿ ಸಿದ್ಧರಾಮಯ್ಯನವರು ನಾಡು ಉತ್ತಮ ವಿಚಾರಗಳಿಗೆ ನೆನಪಿಟ್ಟುಕೊಳ್ಳುವಂತಹ ನಾಯಕತ್ವ ನೀಡಲಿ ಎಂದು ಆಶಿಸುತ್ತೇನೆ.

ಇನ್ನು, ಸಿದ್ಧರಾಮಯ್ಯನವರ ಮಂತ್ರಿಮಂಡಲದ ಬಗ್ಗೆ. ಅದು ಮುಖ್ಯಮಂತ್ರಿ ಆಯ್ಕೆಯಾದಷ್ಟು ಸರಳವಾಗಿ ಆಗುತ್ತದೆ ಎಂದು ಹೇಗೆ ಹೇಳುವುದು? Siddaramaiahಹೇಗೋ ಮಂತ್ರಿಮಂಡಲ ರಚನೆಯಾಗುತ್ತದೆ. ಹಿಂದಿನ ಮೂರ್ನಾಲ್ಕು ಸರ್ಕಾರಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ಗೌರವ ಮತ್ತು ಘನತೆ ತರಬಲ್ಲಂತಹ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಬಹುಶಃ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆ ಮಂತ್ರಿಮಂಡಲದಲ್ಲಿ ಖಂಡಿತವಾಗಿ ಪರಮಭ್ರಷ್ಟರು, ಗೂಂಡಾ-ಗಣಿ-ಭೂಮಾಫಿಯಾದ ಹಿನ್ನೆಲೆಯಿಂದ ಬಂದವರು, ಕೆಲಸ ಮಾಡಲಾಗದ ಮುದುಕರು, ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳಿಲ್ಲದ ಯುವಕರು, ಅಸಮರ್ಥರೂ, ಇದ್ದೇ ಇರುತ್ತಾರೆ. ಜೊತೆಗೆ ಮಂತ್ರಿಯಾಗಲಾಗದೆ ಉಳಿದ ಅತೃಪ್ತ ಶಾಸಕರೂ, ಅವರಿಗೊಬ್ಬ ನಾಯಕ, ಅವರ ಬೇಕುಬೇಡಗಳು, ಈ ಪರಂಪರೆ ಖಂಡಿತ ಮುಂದುವರೆಯುತ್ತದೆ. (ಮತ್ತು, ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವರನ್ನು ಅಭಿನಂದಿಸಲು ಅಟ್ಟವೇರಿದ ಮುಖಗಳನ್ನು ನೀವು ನೋಡಿದ್ದರೆ ಕಳ್ಳರ ಮತ್ತು ಸುಳ್ಳರ ದೊಡ್ದ ಗುಂಪೇ ಸಿದ್ಧರಾಮಯ್ಯನವರನ್ನು ಸುತ್ತುವರೆಯಲಿದ್ದಾರೆ ಎನ್ನುವ ಸಂಶಯ ಬರುವುದು ಸಹಜ.) ಸರ್ಕಾರ ನಡೆಸುವ ಪಕ್ಷ ಬದಲಾಗಿದೆ. ಅನೇಕ ಹೊಸ ಶಾಸಕರು ಬಂದಿದ್ಡಾರೆ. ಆದರೆ, ಇವರೆಲ್ಲ ಬಹುತೇಕ ವಿಷಯಗಳಲ್ಲಿ ಅವರ ಹಿಂದಿನವರಿಗಿಂತ ಭಿನ್ನವಾಗೇನೂ ಇಲ್ಲ. ಹೆಚ್ಚುಕಮ್ಮಿ ಒಂದೇ ರೀತಿಯ ಆಟಗಾರರಿರುವ ತಂಡದಿಂದ ಹೊಸ ರೀತಿಯ ಆಟ ನಿರೀಕ್ಷಿಸುವುದು ಅಸಹಜ.

ಒಂದು ವಿಷಯದಲ್ಲಿ ಸಿದ್ಧರಾಮಯ್ಯನವರ ಮೇಲೆ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಒತ್ತಡ ಕಡಿಮೆ ಇರುತ್ತದೆ. ಅದು ಕೇಂದ್ರದ ಕಾಂಗ್ರೆಸ್ ಘಟಕಕ್ಕೆ ಸಂಪನ್ಮೂಲ (ಹಣ ಎಂದು ಓದಿಕೊಳ್ಳುವುದು) ಒದಗಿಸುವ ವಿಚಾರಕ್ಕೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದ್ದು, ದೇಶದ ಹಲವು ಕಡೆಗಳಲ್ಲಿಯೂ ಕಾಂಗ್ರೆಸ್ ಸರ್ಕಾರಗಳು ಇರುವುದರಿಂದ ಎಸ್.ಎಮ್.ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಇದ್ದಷ್ಟು ಒತ್ತಡಗಳು ಸಿದ್ಧರಾಮಯ್ಯನವರಿಗೆ ಇರುವುದಿಲ್ಲ. ಆದರೆ, ಕಾಂಗ್ರೆಸ್ ಕಬಂಧಬಾಹುಗಳಿಗೆ ಮತ್ತು ಆಕ್ಟೋಪಸ್‌ನಷ್ಟು ಅನೇಕ ಹಸ್ತಗಳಿಗೆ ಹೆಸರಾದದ್ದು. ಯಾರು ಯಾರ ಹೆಸರಿನಲ್ಲಿ ಡಿಮಾಂಡ್ ಇಡುತ್ತಾರೆ ಮತ್ತು ವಸೂಲಿ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೈಕಮಾಂಡ್ ನೇರವಾಗಿ ಬೇಡಿಕೆ ಇಡದೆ ಅನೇಕ ಮಧ್ಯವರ್ತಿಗಳ ಕೈಯ್ಯಲ್ಲಿ ಈ ಕೆಲಸಗಳನ್ನು ಮಾಡಿಸುವುದರಿಂದಲೇ ಕಾಂಗ್ರೆಸ್‌ ಪಕ್ಷದಲ್ಲಿ ಭ್ರಷ್ಟಾಚಾರ ಸಾಂಸ್ಥಿಕವಾಗಿರುವುದು. ಸಿದ್ಧರಾಮಯ್ಯನವರು ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೆ ಈ ಕಪ್ಪ-ಕಾಣಿಕೆಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಒಂದು ಗಂಭೀರ ಪ್ರಶ್ನೆ.

ಮತ್ತು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷಗಳು ತಮ್ಮ ಆಡಳಿತ ಮಾದರಿ ಮತ್ತು ನ್ಯಾಯ ಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಎದುರಿಸುವುದಕ್ಕಿಂತ ವಾಮಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಗೆಲ್ಲಲು ಯತ್ನಿಸುವುದು ಚಾರಿತ್ರಿಕವಾಗಿ ಕಂಡುಬರುವ ಅಂಶ. ಇನ್ನಾರು ತಿಂಗಳ ಒಳಗೆ ಬಿಬಿಎಂ‌ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎರಡು ನಗರಸಭೆ ಸ್ಥಾನಗಳಿಗೆ ಮತ್ತು ಸಂಸದರು ಶಾಸಕರಾಗಿ ಆಯ್ಕೆಯಾಗಿರುವ ಎರಡು ಸಂಸತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತದೆ. ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಬೇಕಾದ ಒತ್ತಡದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಈ ಪಕ್ಷದ ಮುಂದಿನ ದಿನಗಳ ನಡೆಯೂ, ಕರ್ನಾಟಕದ ಮುಂದಿನ ದಿನಗಳೂ, ಇರುತ್ತದೆ.

ಇವೆಲ್ಲದಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ಈಗಾಗಲೆ ಬರಗಾಲ ಕಾಲಿಟ್ಟು ಎರಡು-ಮೂರು ವರ್ಷ ಕಳೆದಿದೆ. ಇನ್ನೂ ಒಂದೆರಡು ವರ್ಷ ಇದು ಮುಂದುವರೆಯುತ್ತದೆ. droughtಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಆದರೆ ರೈತರ ಮತ್ತು ಕೃಷಿಕಾರ್ಮಿಕರ ಬಡತನ ಹೆಚ್ಚಾಗಲಿದೆ. ನೀರಿನ ಮತ್ತು ವಿದ್ಯುತ್‌ನ ಸಮಸ್ಯೆಗಳು ಎಲ್ಲಾ ವರ್ಗದ ಜನರನ್ನು ಬಾಧಿಸಲಿದೆ. ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಶಿಕ್ಷಣ ತುಟ್ಟಿಯಾಗುತ್ತಿದೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ರಾಜಕಾರಣಿಗಳಿಂದ ನಾಯಕತ್ವ ಮತ್ತು ಕೆಲಸಗಳನ್ನು ಅಪೇಕ್ಷಿಸುವ ಜನರೂ ಕ್ರಿಯಾಶೀಲರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ನಾಯಕತ್ವ ಮತ್ತು ಪರಿಹಾರ ನೀಡಬಲ್ಲ ಸಾಮರ್ಥ್ಯ ಸಿದ್ಧರಾಮಯ್ಯನವರಿಗಿದ್ದರೂ, ನಮ್ಮ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಇರುತ್ತದೆಯೇ ಎನ್ನುವುದರ ಮೇಲೆ ಈ ಸರ್ಕಾರದ ಭದ್ರತೆ ಅವಲಂಬಿಸಿದೆ.

ಹಾಗೆಯೇ, ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೂ ಇದು ಸೂಕ್ಷ್ಮ ಕಾಲ. ಹೆಚ್ಚೇನೂ ಬದಲಾಗದ ರಾಜಕೀಯ-ಸಾಮಾಜಿಕ ಸಂದರ್ಭದಲ್ಲಿ ತಮ್ಮ ನಡೆಯನ್ನು ಮತ್ತು ಹೋರಾಟವನ್ನು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಮುಂದುವರೆಸುವದಷ್ಟೇ ಅವರು ಮಾಡಬೇಕಾದ ಕೆಲಸ. ಆದರೆ, ಹಲವು ಸ್ತರದ ಜನರೊಡನೆ ಮತ್ತು ಸಮಾನ ಮನಸ್ಕ ಗುಂಪುಗಳೊಡನೆ ಕೆಲಸ ಮಾಡುವುದನ್ನು ಮತ್ತು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದನ್ನು ಅವರು ಆದಷ್ಟು ಬೇಗ ಕಲಿಯಬೇಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇನ್ನಾರು ತಿಂಗಳ ಒಳಗೇ ಈ ಸರ್ಕಾರದ ಮೌಲ್ಯಮಾಪನ ಆರಂಭವಾಗುತ್ತದೆ ಮತ್ತು ಅದರ ಭವಿಷ್ಯದ ಸಾಧನೆಗಳು ಬರೆಯಲ್ಪಡುತ್ತವೆ.

2 thoughts on “ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

  1. ಅರುಣ್ ಜೋಳದಕೂಡ್ಲಿಗಿ

    ಹೌದು ನಿಮ್ಮ ಅನಾಲಿಸಿಸ್ ಸರಿಯಾಗಿದೆ. ಸಾಹಿತಿಗಳು ಕಲಾವಿದರು ಚುನಾವಣೆಗೂ ಮುನ್ನ ಕಾಂಗ್ರೇಸ್ ನ್ನು ಬೆಂಬಲಿಸಿದರು (ಬಿಜೆಪಿಯೇತರ ಸರಕಾರ ಬರಲಿ ಎಂದಷ್ಟೆ) .ಅಂತೆಯೆ ಇನ್ನು ಮುಂದೆಯೂ ಕಾಂಗ್ರೇಸ್ ಸರಕಾರ ತನ್ನ ಆಡಳಿತದಲ್ಲಿಯ ಲೋಪಗಳು ತಪ್ಪು ಹೆಜ್ಜೆಗಳು ಕಂಡಾಗಲೂ ದಿಟ್ಟವಾಗಿ ಪ್ರಶ್ನೆ ಮಾಡುವ ಗುಣವೂ ಸಾಹಿತಿ ಕಲಾವಿದರಲ್ಲಿ ಮೂಡಬೇಕಾಗಿದೆ. ಸಾಹಿತಿ ಕಲಾವಿದರು ಸದಾ ಆಡಳಿತ ಪಕ್ಷದ ವಿರೋಧ ಪಕ್ಷದ ಕೆಲಸ ಮಾಡಬೇಕಾಗಿದೆ. ಈ ವಿಷಯದಲ್ಲಿ ಸಾಹಿತಿಗಳ ನಡೆಯನ್ನು ಕಾದು ನೋಡಬೇಕಿದೆ.

    Reply
  2. Malathi

    ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಸರಕಾರೀ ಕನ್ನಡ ಶಾಲೆಗಳಲ್ಲಿ ಕನ್ನಡವನ್ನೇ ಅರಿಯದ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಲಾಗುತ್ತಿದೆ. ಇದು ಸಂವಿಧಾನದ 350 A ವಿಧಿಗೆ ಬಗೆಯುತ್ತಿರುವ ಅಪಚಾರ ಮಾತ್ರವಲ್ಲ ಆತ್ಮಸಾಕ್ಷಿಯುಳ್ಳ ನರಮನುಷ್ಯರಾರೂ ಸಮರ್ಥಿಸಿಕೊಳ್ಳಲಾಗದ ವಿಚಾರ. ಶಿಕ್ಷಕ ಹುದ್ದೆಗಳಿಗಿರುವ special rule ನಲ್ಲಿ ಒಂದು ಸಣ್ಣ ತಿದ್ದುಪಡಿ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದು. ಭಾಷಾ ಅಲ್ಪಸಂಖ್ಯಾತರು ಸರಕಾರೀ ಸೇವೆಗೆ ಸೇರಿ ಹತ್ತು ವರ್ಷಗಳಲ್ಲಿ ಆಡಳಿತ ಭಾಷೆ ಮಲಯಾಳ ಪರೀಕ್ಷೆ ತೇರ್ಗಡೆಯಾದರೆ ಸಾಕೆಂದು ಸರಕಾರೀ ಆದೇಶವಿದ್ದರೂ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಮಲಯಾಳ ಪ್ರಶ್ನೆಗಳನ್ನು ಕೇಳಿ ಹಿಂದುಳಿದ ಪ್ರದೇಶವಾದ ಕಾಸರಗೋಡಿನ ಕನ್ನಡ ಕಲಿತವರನ್ನು, ಕನ್ನಡಿಗರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತದೆ. ಪಿ. ಎಸ್ .ಸಿ ಚೇರ್ ಮೇನ್ ರಿಗೆ ಸ್ಪಷ್ಟ ಆದೇಶ ನೀಡಿದರೆ ಇದು ಬಗೆಹರಿಯುವ ವಿಷಯ. ಆದರೆ ಸಾವಿರಾರು ಮನವಿ ನೀಡಿದರೂ ಸರಕಾರ ಕೇಳಿಸಿಕೊಳ್ಳುತ್ತಿಲ್ಲ. ಸರಕಾರದ ಮೇಲೆ ಪ್ರಭಾವ ಬೀರಬಲ್ಲ ಕನ್ನಡಿಗ ರಾಜಕೀಯ ನಾಯಕರು ಮೌನವಾಗಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಕಲಿಯುತ್ತಿರುವವರು, ಕನ್ನಡದಿಂದ ಉದ್ಯೋಗ ಪಡೆಯುತ್ತಿರುವವರು, ಕನ್ನಡ ತುಳು ಮಲಯಾಳೀ ಮರಾಟೀ ಉರ್ದು ಬ್ಯಾರಿ ಮೊದಲಾದ ಮಾತೃಭಾಷಿಗರು, ಹಿಂದೂ ಮುಸ್ಲಿಂ ಕ್ರೈಸ್ತ ಮುಂದುವರಿದ ಹಿಂದುಳಿದ ದಲಿತ ಇತ್ಯಾದಿ ಎಲ್ಲ ಜಾತಿ ಮತ ವರ್ಗ ಭಾಷೆ ಪಂಗಡದವರಿರುವ ಕಾರಣ ಇದು ಸಾಮೂಹಿಕ ಹಿತದ ವಿಷಯ. ಕರ್ನಾಟಕದಲ್ಲೂ ಕೇರಳದಲ್ಲೂ ಆಳುತ್ತಿರುವುದು ಒಂದೇ ಪಕ್ಷ! ಆದರೆ ಕನ್ನಡಿಗರ ಸಾಮೂಹಿಕ ಹಿತಕ್ಕೆ ಚಿಂತಿಸದಿದ್ದರೆ ಕನ್ನಡಿಗರ ಶಿಕ್ಷಣ ಉದ್ಯೋಗಾವಕಾಶಕ್ಕೆ ಆಪತ್ತು ಬಂದಾಗಲೂ ಸ್ಪಂದಿಸದಿದ್ದರೆ ಕೇರಳದಲ್ಲಾಗಲೀ ಕರ್ನಾಟಕದಲ್ಲಾಗಲೀ ಯಾರು ಅಧಿಕಾರಕ್ಕೆ ಬಂದರೆ ಯಾರಿಗೆ ಏನು ಪ್ರಯೋಜನ? (kshamisi. Idu Kasaragodu Kannadigara novu. ee comment ninda yaarigaadaroo besaravaaguvantiddare kshamisibidi)

    Reply

Leave a Reply

Your email address will not be published. Required fields are marked *