ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

-ರವಿ ಕೃಷ್ಣಾರೆಡ್ಡಿ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ್ಸೈಡ್‌‌ನ ಅಂಶ ವಾತಾವರಣದಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದಕ್ಕೆ ಸಂಬಂಧಿಸಿದ್ದು. ಅಂದ ಹಾಗೆ, ಇಂಗಾಲದ ಡೈಆಕ್ಸೈಡ್ ಶಾಖವನ್ನು ಹಿಡಿದಿಟ್ಟುಕೊಳ್ಳುವ, ಮತ್ತದನ್ನು ಹೆಚ್ಚಿಸುವ ಹಸಿರುಮನೆ ಅನಿಲಗಳಲ್ಲಿ ಒಂದು.

ಕಳೆದ ಲಕ್ಷಾಂತರ, ಕೋಟ್ಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಇಂಗಾಲದ ಡೈಆಕ್ಸೈಡ್ ಈ ಪ್ರಮಾಣದಲ್ಲಿ ಇರಲಿಲ್ಲ. ಮನುಷ್ಯ ಭೂಮಿಯ ಮೇಲೆ ವಿಕಾಸವಾಗುವುದಕ್ಕಿಂತ ಲಕ್ಷಾಂತರ ವರ್ಷಗಳ ಮೊದಲು ಇತ್ತು, ಅದರೆ ಆತ ಓಡಾಡಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅದು ಶೇಖರಣೆಯಾಗಿದೆ.

ಕೈಗಾರಿಕಾ ಯುಗಕ್ಕೂ ಮೊದಲು ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ದಶಲಕ್ಷಕ್ಕೆ ಕೇವಲ 280 ಅಂಶಗಳಲ್ಲಿತ್ತು (280 parts per million). carbon-atmosphere-440-ppmಕಳೆದ ಎರಡು-ಮೂರು ಶತಮಾನಗಳ ಕೈಗಾರಿಕಾ ಕ್ರಾಂತಿಯಿಂದಾಗಿ ಕಲ್ಲಿದ್ದಲು ಮತ್ತು ತೈಲವನ್ನು ಉಪಯೋಗಿಸಲು ಆರಂಭಿಸಿದಾಗಿನಿಂದ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ವಾತಾವರಣದಲ್ಲಿ ವಿಪರೀತ ಗತಿಯಲ್ಲಿ ಏರುತ್ತಲೇ ಬಂದಿದೆ. 1958ರಲ್ಲಿ ಫೆಸಿಫಿಕ್ ಸಾಗರದ ಹವಾಯಿ ದ್ವೀಪದಲ್ಲಿ ಈ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಅಳೆಯಲು ಆರಂಭಿಸಿದಾಗ ಅದು 318 ppm ಇತ್ತು. 1990ರ ದಶಕದ ಆರಂಭದಲ್ಲಿ ಅದು 350 ppm ದಾಟಿತು. ಕಳೆದ ವಾರ ಅದು ಸರಾಸರಿ 400 ppm ದಾಟಿದೆ.

ಈ 400 ppm ಸಂಖ್ಯೆ ಗಂಭೀರವಾದದ್ದು ಏಕೆಂದರೆ ಹವಾಮಾನ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಈ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಈ ಹಂತದಲ್ಲಿಯೇ ನಿಯಂತ್ರಣ ಮಾಡಿದರೆ ಮಾತ್ರ ಭೂಮಿಯ ಮೇಲಿನ ಶಾಖವನ್ನು ಕೈಗಾರಿಕಾ ಪೂರ್ವ ದಿನಗಳ ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಪ್ರಮಾಣದ ಒಳಗೇ ನಿಯಂತ್ರಿಸಲು ಸಾಧ್ಯ. ಅದು ಸಾಧ್ಯವಾಗದೆ ಭೂಮಿಯ ಮೇಲಿನ ತಾಪಮಾನ ಸರಾಸರಿ 2 ಸೆಲ್ಸಿಯಸ್ ಹೆಚ್ಚಾಗಿದ್ದೇ ಆದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಸಂಕುಲದ ಮೇಲೆ ತೀವ್ರವಾದ ಪರಿಣಾಮಗಳಾಗಲಿವೆ ಮತ್ತು ಅದು ಬಹುಪಾಲು ಮಾರಣಾಂತಿಕವಾಗಲಿದೆ.

ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗದೇ ಹೋದರೆ ಮುಂದಿನ ಬೇಸಿಗೆಗಳ ಉರಿಬಿಸಿಲು ಹೆಚ್ಚುತ್ತದೆ. ಬರಗಾಲಗಳ ಪುನರಾವರ್ತನೆ ಹೆಚ್ಚಾಗಲಿವೆ. ಅನಾವೃಷ್ಟಿ ಮಾತ್ರವಲ್ಲ, ಅಕಾಲಿಕ ಅತಿವೃಷ್ಟಿಗಳೂ ಘಟಿಸಿ ನೂರು-ವರ್ಷಕ್ಕೊಮ್ಮೆಯ ಪ್ರವಾಹಗಳು ಜರುಗಲಿವೆ. ಸಮುದ್ರದ ನೀರಿನ ಮಟ್ಟ ಹೆಚ್ಚಿ ಸಮುದ್ರ ದಂಡೆಯ ಭೂಭಾಗಗಳು ಮುಳುಗಲಿವೆ.

ಇಂದು ಪ್ರಪಂಚದ ಅತಿ ದೊಡ್ಡ ಮಾಲಿನ್ಯ ಉತ್ಪಾದಕರಾದ ಅಮೆರಿಕ, ಚೀನಾ, ಯೂರೋಪ್‌ಗಳಿಗೆ ಮಾತ್ರ ಗಂಭೀರ ವಿಷಯವಲ್ಲ. ಭಾರತದಂತಹ ಸಂಕೀರ್ಣ ಮತ್ತು ವೈವಿಧ್ಯತೆಯ ನಾಡಿನ ಜನರ ಉಳಿವಿನ ಪ್ರಶ್ನೆಯೂ ಆಗಲಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮೊದಲು ತಟ್ಟುವುದೇ ಬಡವರನ್ನು ಮತ್ತು ದುರ್ಬಲರನ್ನು. ಇದು ಅಳಿವು-ಉಳಿವಿನ ಪ್ರಶ್ನೆಯಾಗುವುದಕ್ಕಿಂತ ಮುಂಚೆ ಪ್ರಪಂಚದ ಬಡ ಮತ್ತು ಹಿಂದುಳಿದ ದೇಶಗಳ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿಜ್ಞಾನಿಗಳು ಮತ್ತು ಸಾಮಾಜಿಕ ಹೋರಾಟಗಾರರು ಇದನ್ನು ಪ್ರಸ್ತುತವಾಗಿಸಲು ಪ್ರಯತ್ನಿಸಬಹುದು, ಆದರೆ ರಾಜಕೀಯ ನಾಯಕರಿಗೆ ಇಂತಹ ವಿಷಯಗಳು ಅರ್ಥವಾಗುವಷ್ಟು ಯೋಗ್ಯತೆ ಮತ್ತು ಕಳಕಳಿಗಳಾಗಲಿ, ಚಿತ್ತಶುದ್ಧಿ ಇದೆಯೇ ಎನ್ನುವುದು ಪ್ರಶ್ನೆ.

ಪ್ರಪಂಚದಾದ್ಯಂತ ಬರಲಿರುವ ದಿನಗಳ ರಾಜಕೀಯ ಮತ್ತು ಸಾಮಾಜಿಕ ಹೋರಾಟ ಬೇರೆ ಬಗೆಯದೇ ಇರುತ್ತದೆ. ಆದರೆ ಆ ವಿಷಮ ಘಟ್ಟ ಎಂದಿನಿಂದ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹಾಗಾಗಿಯೇ, ಜಾಗತಿಕ ನಾಯಕತ್ವವೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ, ಬೇಗ ಎಚ್ಚತ್ತುಕೊಂಡು ತಾಪಮಾನದ ಪ್ರಮಾಣವನ್ನು ತಹಬಂದಿಗೆ ತರದೇ ಹೋದರೆ ಏನಾಗಲಿದೆಯೋ ಅದು ಆಗಲಿದೆ.

Leave a Reply

Your email address will not be published. Required fields are marked *