Daily Archives: May 16, 2013

ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

– ಜಿ.ಮಹಂತೇಶ್

 “ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ.ಅಕ್ಕಿ.” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲಿ ತುಂಬಾ ಧಾವಂತದಿಂದಲೇ ಘೋಷಿಸುತ್ತಿದ್ದಂತೆ ಬಿಪಿಎಲ್ ಕುಟುಂಬಗಳು ಅಕ್ಷರಶಃ ಕೈ ಮುಗಿದವು. ಮುಂಬರುವ ಜೂನ್ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಆಗಲಿದೆ ಎಂದು ಹೇಳಿದಾಗಲಂತೂ ಬಿಪಿಎಲ್ ಕಾರ್ಡ್‌ದಾರರು ಧನ್ಯೋಸ್ಮಿ ಎಂದು ಹೇಳಿದ್ದೂ ಉಂಟು.

ಸಿದ್ದರಾಮಯ್ಯ ಅವರ ನೇತೃತ್ವದ ಏಕ ವ್ಯಕ್ತಿ ಸಂಪುಟ ತೆಗೆದುಕೊಂಡಿರುವ ಈ ನಿರ್ಧಾರದಿಂದ 98.17 ಲಕ್ಷ ಜನರಿಗೆ ಅನುಕೂಲವಾಗಲಿದೆ.rice ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 460 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದೂ ಹೇಳಿದರು. (ಇಂದಿನ ಮಾಧ್ಯಮ ವರದಿಗಳು ಅದನ್ನು ವಾರ್ಷಿಕ ರೂ. 2,373 ಕೋಟಿಯಿಂದ ರೂ. 6,650 ಕೋಟಿಯ ತನಕ ಹೊರೆ ಬೀಳಲಿದೆ ಎಂದು ಅಂದಾಜಿಸಿವೆ.)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರ ಅಕ್ಷರಶಃ ಜನಪರವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕದ ಹೊರತು 1 ರೂಪಾಯಿಗೆ ಕೊಡುತ್ತಿರುವ 3- ಕೆ.ಜಿ. ಮತ್ತದೇ ಕಾಳಸಂತೆಕೋರರ ಬೊಕ್ಕಸವನ್ನ ಮತ್ತಷ್ಟು ತುಂಬಿಸಿ, ಅದನ್ನ ಇನ್ನಷ್ಟು ಶ್ರೀಮಂತವಾಗಿಸುವ ಸಾಧ್ಯತೆ ಇದೆ.

ಕಸದ ಬುಟ್ಟಿಗೆ ಸೇರಿರುವ ಬಾಲಸುಬ್ರಹ್ಮಣ್ಯಂ ತನಿಖಾ ವರದಿ:

ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಿಸಬೇಕಿತ್ತು.

ನಮ್ಮ ರಾಜ್ಯದಲ್ಲಿ ತುಂಬಾ ವ್ಯವಸ್ಥಿತವಾಗಿ ಬಡತನವನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಾಲಸುಬ್ರಹ್ಮಣ್ಯ ಅವರು ಕೊಟ್ಟಿರುವ ವರದಿಯ ಪುಟಗಳನ್ನ ತಿರುವಿ ಹಾಕಿದರೆ, ಬಡತನ ಮತ್ತು ಬಿಪಿಎಲ್ ಕಾರ್ಡ್‌ಗಳ ಬಂಡವಾಳ ಬಯಲಾಗುತ್ತದೆ.

ಒಟ್ಟು ಕುಟುಂಬಗಳು 120 ಲಕ್ಷ ಇದ್ದಲ್ಲಿ, ಇದರಲ್ಲಿ ಪಡಿತರ ಚೀಟಿ ಇರುವವರ ಸಂಖ್ಯೆ 159 ಲಕ್ಷ 29 ಸಾವಿರ. ಅಂದರೆ ಇಲ್ಲಿ ಹೆಚ್ಚುವರಿಯಾಗಿ 39 ಲಕ್ಷ 29 ಸಾವಿರ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಹಂಚಿಕೆ ಆಗಿವೆ. ಇವೆಲ್ಲವೂ ಬೋಗಸ್ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ.

ಅಕ್ರಮ ಪಡಿತರ ಚೀಟಿಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ 1737 ಕೋಟಿ ರೂಪಾಯಿ. ನಮ್ಮ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನೆಗೆದು ಬಿದ್ದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಸೋರಿಕೆ ಬಿಟ್ಟರೆ ಬೇರಿನ್ನೇನೂ ಪ್ರಗತಿಯಿಲ್ಲ.

ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರೋ 5.8 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳು ಸಿಕ್ಕಿಯೇ ಇಲ್ಲ. ಇದರಲ್ಲಿ 4.2 ಲಕ್ಷ ಕುಟುಂಬಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಎಪಿಎಲ್ ಪಟ್ಟಿಗೆ ಸೇರಿಸಿದಸರೆ. ಇನ್ನು, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ 1.6 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರಿಲ್ಲ.

ತೀರಾ ಇತ್ತೀಚೆಗೆ ದಾವಣಗೆರೆ ನಗರದಲ್ಲಿ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಒಂದು ದೂರು ದಾಖಲಾಗಿತ್ತು. ಬೋಗಸ್ ಕಾರ್ಡ್‌ಗಳಿಂದ ಕೇವಲ ದಾವಣಗೆರೆ ನಗರವೊಂದರಿಂದಲೇ ಆಗಿರುವ ವಂಚನೆ ಮೊತ್ತ 75 ಕೋಟಿ ರೂಪಾಯಿಗೂ ಅಧಿಕ. ದಾವಣಗೆರೆ ನಗರದಲ್ಲಿ 3 ಲಕ್ಷ 20 ಸಾವಿರ ಕುಟುಂಬಗಳಿದ್ದರೆ, 4 ಲಕ್ಷ 69 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರತಿಷ್ಠಿತರು ಮತ್ತು ಗಣ್ಯಾತಿಗಣ್ಯರು ವಾಸ ಮಾಡುತ್ತಿರುವ ಕಾಲೋನಿಗಳಲ್ಲೂ ಬಿಪಿಎಲ್ ಕಾರ್ಡ್‌ಗಳು ಹಂಚಿಕೆ ಆಗಿವೆ ಎಂದರೆ, ಪಡಿತರ ವ್ಯವಸ್ಥೆ ಹೇಗಿದೆ ಎಂದು ಯಾರೂ ಬೇಕಾದರೂ ಊಹಿಸಿಕೊಳ್ಳಬಹುದು.

ಸಾರ್ವಜನಿಕ ಪಡಿತರ ವ್ಯವಸ್ಥೆ ಇಷ್ಟರ ಮಟ್ಟಿಗೆ ಹದಗೆಟ್ಟಿದ್ದರೂ ಬಿ.ಜೆ.ಪಿ.ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಶೋಭಾ ಕರಂದ್ಲಾಜೆ ಮತ್ತು ಡಿ.ಎನ್.ಜೀವರಾಜ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಬೋಗಸ್ ಕಾರ್ಡ್‌ಗಳ ಭ್ರಷ್ಟಾಚಾರ ಬಯಲಿಗೆ ಬಂದಿತ್ತು. ಆದರೂ ಬಿ.ಜೆ.ಪಿ. ಸರ್ಕಾರ, ಯಥಾ ಪ್ರಕಾರ ಇದನ್ನೂ ಒಂದು ಪ್ರಕರಣ ಎಂದು ಭಾವಿಸಿಕೊಂಡು ಕೈ ತೊಳೆದುಕೊಂಡಿತು. ಎಲ್ಲಾ ತನಿಖಾ ವರದಿಗಳು ಸೇರಿರುವ ಜಾಗಕ್ಕೇ ಈ ವರದಿಯನ್ನು ತಳ್ಳಿತು.

ಈಗ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. siddaramaiah-cmಮುಖ್ಯಮಂತ್ರಿ ಸಿದ್ದರಾಮಯ್ಯ 1 ರೂಪಾಯಿಗೆ 30 ಕೆ.ಜಿ.ಕೊಡುವ ವಿಸ್ತರಿತ ಯೋಜನೆಯನ್ನ ಜಾರಿಗೆ ತರಲು ಹೊರಡುವ ಮೊದಲು, ಲೋಕಾಯುಕ್ತರು ನೇಮಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ವರದಿಯನ್ನ ಅಮೂಲಾಗ್ರವಾಗಿ ಪರಿಶೀಲಿಸಿ, ಲೋಪಗಳನ್ನ ಸರಿಪಡಿಸಿ, 1 ರೂಪಾಯಿ ದರದ 30 ಕೆ.ಜಿ.ಯನ್ನ ನಿಜವಾದ ಬಡವರಿಗೆ ಕೊಡುವುದು ಒಳಿತು. ಇಲ್ಲದಿದ್ದಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ ಬ್ರಹ್ಮಾಂಡ ಹಗರಣವೂ ಸರ್ಕಾರದ ಕಸದ ಬುಟ್ಟಿಗೆ ಸೇರಲಿದೆ.