ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

– ಜಿ.ಮಹಂತೇಶ್

 “ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ.ಅಕ್ಕಿ.” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲಿ ತುಂಬಾ ಧಾವಂತದಿಂದಲೇ ಘೋಷಿಸುತ್ತಿದ್ದಂತೆ ಬಿಪಿಎಲ್ ಕುಟುಂಬಗಳು ಅಕ್ಷರಶಃ ಕೈ ಮುಗಿದವು. ಮುಂಬರುವ ಜೂನ್ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಆಗಲಿದೆ ಎಂದು ಹೇಳಿದಾಗಲಂತೂ ಬಿಪಿಎಲ್ ಕಾರ್ಡ್‌ದಾರರು ಧನ್ಯೋಸ್ಮಿ ಎಂದು ಹೇಳಿದ್ದೂ ಉಂಟು.

ಸಿದ್ದರಾಮಯ್ಯ ಅವರ ನೇತೃತ್ವದ ಏಕ ವ್ಯಕ್ತಿ ಸಂಪುಟ ತೆಗೆದುಕೊಂಡಿರುವ ಈ ನಿರ್ಧಾರದಿಂದ 98.17 ಲಕ್ಷ ಜನರಿಗೆ ಅನುಕೂಲವಾಗಲಿದೆ.rice ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 460 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದೂ ಹೇಳಿದರು. (ಇಂದಿನ ಮಾಧ್ಯಮ ವರದಿಗಳು ಅದನ್ನು ವಾರ್ಷಿಕ ರೂ. 2,373 ಕೋಟಿಯಿಂದ ರೂ. 6,650 ಕೋಟಿಯ ತನಕ ಹೊರೆ ಬೀಳಲಿದೆ ಎಂದು ಅಂದಾಜಿಸಿವೆ.)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರ ಅಕ್ಷರಶಃ ಜನಪರವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕದ ಹೊರತು 1 ರೂಪಾಯಿಗೆ ಕೊಡುತ್ತಿರುವ 3- ಕೆ.ಜಿ. ಮತ್ತದೇ ಕಾಳಸಂತೆಕೋರರ ಬೊಕ್ಕಸವನ್ನ ಮತ್ತಷ್ಟು ತುಂಬಿಸಿ, ಅದನ್ನ ಇನ್ನಷ್ಟು ಶ್ರೀಮಂತವಾಗಿಸುವ ಸಾಧ್ಯತೆ ಇದೆ.

ಕಸದ ಬುಟ್ಟಿಗೆ ಸೇರಿರುವ ಬಾಲಸುಬ್ರಹ್ಮಣ್ಯಂ ತನಿಖಾ ವರದಿ:

ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಿಸಬೇಕಿತ್ತು.

ನಮ್ಮ ರಾಜ್ಯದಲ್ಲಿ ತುಂಬಾ ವ್ಯವಸ್ಥಿತವಾಗಿ ಬಡತನವನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಾಲಸುಬ್ರಹ್ಮಣ್ಯ ಅವರು ಕೊಟ್ಟಿರುವ ವರದಿಯ ಪುಟಗಳನ್ನ ತಿರುವಿ ಹಾಕಿದರೆ, ಬಡತನ ಮತ್ತು ಬಿಪಿಎಲ್ ಕಾರ್ಡ್‌ಗಳ ಬಂಡವಾಳ ಬಯಲಾಗುತ್ತದೆ.

ಒಟ್ಟು ಕುಟುಂಬಗಳು 120 ಲಕ್ಷ ಇದ್ದಲ್ಲಿ, ಇದರಲ್ಲಿ ಪಡಿತರ ಚೀಟಿ ಇರುವವರ ಸಂಖ್ಯೆ 159 ಲಕ್ಷ 29 ಸಾವಿರ. ಅಂದರೆ ಇಲ್ಲಿ ಹೆಚ್ಚುವರಿಯಾಗಿ 39 ಲಕ್ಷ 29 ಸಾವಿರ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಹಂಚಿಕೆ ಆಗಿವೆ. ಇವೆಲ್ಲವೂ ಬೋಗಸ್ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ.

ಅಕ್ರಮ ಪಡಿತರ ಚೀಟಿಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ 1737 ಕೋಟಿ ರೂಪಾಯಿ. ನಮ್ಮ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನೆಗೆದು ಬಿದ್ದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಸೋರಿಕೆ ಬಿಟ್ಟರೆ ಬೇರಿನ್ನೇನೂ ಪ್ರಗತಿಯಿಲ್ಲ.

ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರೋ 5.8 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳು ಸಿಕ್ಕಿಯೇ ಇಲ್ಲ. ಇದರಲ್ಲಿ 4.2 ಲಕ್ಷ ಕುಟುಂಬಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಎಪಿಎಲ್ ಪಟ್ಟಿಗೆ ಸೇರಿಸಿದಸರೆ. ಇನ್ನು, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ 1.6 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರಿಲ್ಲ.

ತೀರಾ ಇತ್ತೀಚೆಗೆ ದಾವಣಗೆರೆ ನಗರದಲ್ಲಿ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಒಂದು ದೂರು ದಾಖಲಾಗಿತ್ತು. ಬೋಗಸ್ ಕಾರ್ಡ್‌ಗಳಿಂದ ಕೇವಲ ದಾವಣಗೆರೆ ನಗರವೊಂದರಿಂದಲೇ ಆಗಿರುವ ವಂಚನೆ ಮೊತ್ತ 75 ಕೋಟಿ ರೂಪಾಯಿಗೂ ಅಧಿಕ. ದಾವಣಗೆರೆ ನಗರದಲ್ಲಿ 3 ಲಕ್ಷ 20 ಸಾವಿರ ಕುಟುಂಬಗಳಿದ್ದರೆ, 4 ಲಕ್ಷ 69 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರತಿಷ್ಠಿತರು ಮತ್ತು ಗಣ್ಯಾತಿಗಣ್ಯರು ವಾಸ ಮಾಡುತ್ತಿರುವ ಕಾಲೋನಿಗಳಲ್ಲೂ ಬಿಪಿಎಲ್ ಕಾರ್ಡ್‌ಗಳು ಹಂಚಿಕೆ ಆಗಿವೆ ಎಂದರೆ, ಪಡಿತರ ವ್ಯವಸ್ಥೆ ಹೇಗಿದೆ ಎಂದು ಯಾರೂ ಬೇಕಾದರೂ ಊಹಿಸಿಕೊಳ್ಳಬಹುದು.

ಸಾರ್ವಜನಿಕ ಪಡಿತರ ವ್ಯವಸ್ಥೆ ಇಷ್ಟರ ಮಟ್ಟಿಗೆ ಹದಗೆಟ್ಟಿದ್ದರೂ ಬಿ.ಜೆ.ಪಿ.ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಶೋಭಾ ಕರಂದ್ಲಾಜೆ ಮತ್ತು ಡಿ.ಎನ್.ಜೀವರಾಜ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಬೋಗಸ್ ಕಾರ್ಡ್‌ಗಳ ಭ್ರಷ್ಟಾಚಾರ ಬಯಲಿಗೆ ಬಂದಿತ್ತು. ಆದರೂ ಬಿ.ಜೆ.ಪಿ. ಸರ್ಕಾರ, ಯಥಾ ಪ್ರಕಾರ ಇದನ್ನೂ ಒಂದು ಪ್ರಕರಣ ಎಂದು ಭಾವಿಸಿಕೊಂಡು ಕೈ ತೊಳೆದುಕೊಂಡಿತು. ಎಲ್ಲಾ ತನಿಖಾ ವರದಿಗಳು ಸೇರಿರುವ ಜಾಗಕ್ಕೇ ಈ ವರದಿಯನ್ನು ತಳ್ಳಿತು.

ಈಗ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. siddaramaiah-cmಮುಖ್ಯಮಂತ್ರಿ ಸಿದ್ದರಾಮಯ್ಯ 1 ರೂಪಾಯಿಗೆ 30 ಕೆ.ಜಿ.ಕೊಡುವ ವಿಸ್ತರಿತ ಯೋಜನೆಯನ್ನ ಜಾರಿಗೆ ತರಲು ಹೊರಡುವ ಮೊದಲು, ಲೋಕಾಯುಕ್ತರು ನೇಮಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ವರದಿಯನ್ನ ಅಮೂಲಾಗ್ರವಾಗಿ ಪರಿಶೀಲಿಸಿ, ಲೋಪಗಳನ್ನ ಸರಿಪಡಿಸಿ, 1 ರೂಪಾಯಿ ದರದ 30 ಕೆ.ಜಿ.ಯನ್ನ ನಿಜವಾದ ಬಡವರಿಗೆ ಕೊಡುವುದು ಒಳಿತು. ಇಲ್ಲದಿದ್ದಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ ಬ್ರಹ್ಮಾಂಡ ಹಗರಣವೂ ಸರ್ಕಾರದ ಕಸದ ಬುಟ್ಟಿಗೆ ಸೇರಲಿದೆ.

8 thoughts on “ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

 1. NagarajaM

  It is well known to all Govts. headed by whichever party, all bureaucrats, all politicians and general public that large scale scam is going on to share the booty. Tax payers money is getting looted in an organized manner by all-as clear as day light.

  Reply
 2. Pavan

  ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಜನಸಾಮಾನ್ಯರನ್ನು, ಕೃಷಿ ಕಾರ್ಮಿಕರನ್ನು, ದಿನಗೂಲಿ ಕೆಲಸಗಾರರನ್ನು, ಸೋಮಾರಿಗಳಾಗುತ್ತಿದ್ದಾರೆ.

  1ರೂ ಗೆ 1 ಕೇಜಿ ಅಕ್ಕಿ ಕೊಡುವ ಸರ್ಕಾರದಿಂದ ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು, ಯುವಕರು, ಸೋಮಾರಿಗಳಾಗಿ ಕಾಲ ಹರಣ ಮಾಡುವಂತಾಗಿದೆ.

  110 ಕೋಟಿ ಜನಸಂಖ್ಯೆಯಿದ್ದರೂ ಯುವಕರು ಮಧ್ಯಮ ವಯಸ್ಕರು ದೇಶಾದ್ಯಂತ ತುಂಬಿದ್ದರೂ, ಇವತ್ತಿಗೂ ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರ ಕೊರತೆ ಕಾಣುತ್ತಿದೆ.

  ಅಂಗಡಿ ಮುಗ್ಗಟ್ಟು, ಸಣ್ಣ ಪುಟ್ಟ ಕೈಗಾರಿಗೆಗಳು, ಗೃಹ ಕೈಗಾರಿಕೆಗಳು ಮತ್ತು
  ಕೃಷಿ ಚಟುವಟಿಕೆಗಳಿಗೂ ಕಾರ್ಮಿಕರ ಕೊರತೆ ಹೆಚ್ಚಾಗಿ ಕಾಣುತ್ತಿದ್ಧೇವೆ.

  ಎಷ್ಟು ಭೂ ಮಾಲೀಕರು ಕೃಷಿ ಕಾರ್ಮಿಕರು ಸಿಗದೇ ಕೃಷಿಯ ಬಗ್ಗೇನೇ ಬೇಸತ್ತು ಹೋಗುತ್ತಿರುವ ನಿದರ್ಶನಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು.

  ದುಡಿಯುವ ಕೈಗಳಿಗೆ ಉದ್ಯೋಗ ನೀಡದೇ ಚಾಕೋಲೆಟ್ ಬೆಲೆಯಲ್ಲಿ ಅಕ್ಕಿ ನೀಡಿದರೆ ತಿಂಗಳಿಗೆ 1000 ದಷ್ಟು ಹಣ ದುಡಿದರೆ ಸಾಕು ಒಂದು ಕುಟುಂಬದ ಜೀವನ ಸಾಗಿಸಬಹುದು ಎಂಬ ಮನೋಭಾವನೆಯಿಂದ ಕಾರ್ಮಿಕರು ಮೈಗಳ್ಳರಾಗುತ್ತಿದ್ದಾರೆ.

  5 ವರ್ಷದಲ್ಲಿ ಮೂರ್ನಾಲ್ಕು ಚುನಾವಣೆಗಳಂತೂ ಬಂದೇ ಬರುತ್ತೆ.
  ಚುನಾವಣೆ ಪ್ರಚಾರಕ್ಕಾಗಿ ಸಾವಿರಾರು ರೂಪಾಯಿಗಳ ಮೇಲ್ಸಂಪಾದನೆ ಜೊತೆಗೆ

  ಒಂದೊಂದು ಮತಕ್ಕೂ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ ಹಾಗೆಯೇ ಕೊಳ್ಳುವವರಿದ್ದಾರೆ.
  ಇಷ್ಟೆಲ್ಲಾ ಇದ್ದ ಮೇಲೆ ದುಡಿಮೆಯ ಚಿಂತೆ ಜನರಿಗೇಕೆ ಬರುತ್ತೆ ಹೇಳಿ.

  ಯುವಶಕ್ತಿಯನ್ನು ಹಾದಿ ತಪ್ಪಿಸುವ ಇಂತಹ ನಿರ್ಧಾರಗಳು ರಾಜಕೀಯ ಸ್ವಾರ್ಥದಿಂದಾಗಿ
  ದೇಶ ಹಿಂದುಳಿಯುವಲ್ಲಿಯೇ ಪ್ರಥಮ ಸ್ಥಾನ ದಲ್ಲಿ ಯೇ ಶಾಶ್ವತವಾಗಿ ನಿಲ್ಲುತ್ತದೆ.

  ಇವೆಲ್ಲಾ ಯಾಕೆ ?

  ಕೋಣ ಈದೈತೆ ಅಂದ್ರೆ ಕೊಟ್ಟಿಗೆಗೆ ಕಟ್ಟು ಅನ್ನೋ ಹಾಗೆ ನಾವು ಜನರೂ ಸಹ ಹಾಗೇಯೇ ಇದ್ದೇವೆ.

  ಯು. ಆರ್. ಆನಂತಮೂರ್ತಿ,ರಂತಹ ಬುದ್ದಿ ಜೀವಿಗಳೆನ್ನಿಸಿಕೊಂಡವರು, ಪ್ರಗತಿಪರರು ಇಂತಹವುಗಳ ಬಗ್ಗೆ ಚಿಂತಿಸುವುದೇ ಇಲ್ಲ.
  ಅವರೂ ಸಹ ಚುನಾವಣಾ ಸಮಯದಲ್ಲಿ ಒಂದು ಪಕ್ಷದ ಪರ ನಿಂತಿರುತ್ತಾರಲ್ಲ.
  ಆಪಕ್ಷಗಳಿಗೆ ಋಣಿಗಳಾಗಿರಬೇಕಾಗುತ್ತೆ.

  ಯಾರಲ್ಲಿ ಹೋಗಿ ಹೇಳಿಕೊಳ್ಳೋಣ ನಮ್ಮ ಗೋಳನ್ನು.

  ಇನ್ನು ಏನೇನು ನೋಡಬೇಕೋ…..

  Reply
 3. Ananda Prasad

  ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಮೊದಲು ಅಥವಾ ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೊದಲು ವಿವೇಚನೆ ನಡೆಸುವ ಅಗತ್ಯ ಇದೆ. ಜನಪ್ರಿಯ ಕಾರ್ಯಕ್ರಮಗಳು ವೋಟು ತರುತ್ತವೆ ಎಂದು ಹೇಳಲಾಗದು. ಅವು ವೋಟು ತರುತ್ತವೆ ಎಂದಿದ್ದರೆ ಯಡಿಯೂರಪ್ಪನವರು ಬಹುಮತದಲ್ಲಿ ಅಧಿಕಾರಕ್ಕೆ ಬರಬೇಕಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೇ ಅಭೂತಪೂರ್ವ ಎಂಬ ರೀತಿಯ ಜನಪ್ರಿಯ, ಬೊಕ್ಕಸಕ್ಕೆ ಹೊರೆಯಾಗುವ ಯೋಜನೆಗಳನ್ನು ಯಡಿಯೂರಪ್ಪನವರು ಜಾರಿಗೆ ತಂದಿದ್ದರು. ಉದಾಹರಣೆಗೆ ಶಾಲಾ ಮಕ್ಕಳಿಗೆ ಸೈಕಲ್, ಭಾಗ್ಯಲಕ್ಷ್ಮಿ, ಬಡ್ಡಿರಹಿತ ಕೃಷಿ ಸಾಲ ಅಥವಾ ಕಡಿಮೆ ಬಡ್ಡಿಯ ಕೃಷಿ ಸಾಲ ಇತ್ಯಾದಿ. ಬೊಕ್ಕಸಕ್ಕೆ ಹೊರೆಯಾಗದ ರೀತಿಯಲ್ಲಿ ಆಡಳಿತ ನಡೆಸದೆ ಹೋದರೆ ಕಲ್ಯಾಣ ರಾಜ್ಯ ಕಟ್ಟುವುದು ಸಾಧ್ಯವಿಲ್ಲ. ಸರಕಾರವೇ ಸಾಲದಲ್ಲಿ ಮುಳುಗಿರುವಾಗ ಇಂಥ ಜನಪ್ರಿಯ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವುದು ಹಾಗೂ ಅವುಗಳನ್ನು ಜಾರಿಗೆ ತರುವುದು ಯೋಗ್ಯವೇನೂ ಅಲ್ಲ. ಜನರಿಗೆ ಬೇಕಾಗಿರುವುದು ಸ್ವಚ್ಛ ಹಾಗೂ ದಕ್ಷ, ಸಂವೇದನಾಶೀಲ ಆಡಳಿತ. ಅದನ್ನು ನೀಡಿದರೆ ಇಂಥ ಅಗ್ಗದ ಜನಪ್ರಿಯ ಬೊಕ್ಕಸಕ್ಕೆ ಹೊರೆಯಾಗುವ ಹಿಂದು-ಮುಂದಿನ ಆಲೋಚನೆ ಇಲ್ಲದ ಯೋಜನೆಗಳ ಅಗತ್ಯ ಬೀಳುವುದಿಲ್ಲ. ಸಿದ್ಧರಾಮಯ್ಯನವರು ರಾಜ್ಯದ ಹಣಕಾಸಿನ ಸ್ಥಿತಿ ಉತ್ತಮವಾಗಿಲ್ಲ ಎಂದು ಟೀಕಿಸುತ್ತಿದ್ದವರು ಇಂಥ ಜನಪ್ರಿಯ ಯೋಜನೆಗಳನ್ನು ಹಿಂದು-ಮುಂದಿನ ಆಲೋಚನೆ ಇಲ್ಲದೆ ಅಧಿಕಾರಿಗಳ ಮಾತನ್ನೂ ಕೇಳದೆ ಘೋಷಿಸಿರುವುದು ವಿವೇಕದ ಕ್ರಮ ಅಲ್ಲ. ಹೀಗೆ ತರಾತುರಿಯಲ್ಲಿ ಯೋಜನೆಗಳನ್ನು ಘೋಷಿಸಬೇಕಾದ ಅಗತ್ಯ ಇರಲಿಲ್ಲ.

  Reply
 4. tuLuva

  ಭಾರತೀಯರನ್ನು ಕ್ರಿಯಾಹೀನರನ್ನಾಗಿಸಲು ಅದೆಷ್ಟು ಕೆಲಸಗಳು ನಡೆಯುತ್ತಿವೆ ಅಲೋಚಿಸಿದ್ದೀರ? ಒಂದು ಕಡೆಯಿಂದ ೧ ರೂಪಾಯಿಗೆ ಅಕ್ಕಿಯಂಥ ಸ್ಕೀಮುಗಳು.. ಮತ್ತೊಂದು ಕಡೆ ಉದ್ಯೋಗ ಖಾತರಿಯಂಥಾ ಉದ್ಯೋಗವೇ ಮಾಡದೆ ಹಣ ಪಡೆಯುವ ಯೋಜನೆಗಳು.. ಇವು ಸಾಲದ್ದಕ್ಕೆ ಟೀವಿಯಲ್ಲಿ ಬಿಗ್ ಬಾಸ್ IPL ನಂಥಾ ಮತಿಹೀನ ಕಾರ್ಯಕ್ರಮಗಳು..

  ನಮ್ಮ ದೇಶದಲ್ಲಿ ಕೃಷಿಯನ್ನು ವ್ಯವಸ್ಥಿತವಾಗಿ ಮೋಲೆಗು೦ಪಾಗಿಸಲಾಗಿದೆ.. ಕೃಷಿಕನ ಪಾಡ೦ತೂ ದೇವರಿಗೆ ಪ್ರೀತಿ..

  Reply
 5. Ananda Prasad

  ಕೃಷಿಕರ ಸಾಲ ಮನ್ನಾ, ಬಡ್ಡಿರಹಿತ ಸಾಲ ಇವುಗಳನ್ನು ಆರಂಭಿಸಿದ ನಂತರ ಸಾಲ ಮನ್ನಾ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಸಾಲ ತೆಗೆಯುವ ಶ್ರೀಮಂತ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಅವರನ್ನು ಕೇಳಿದರೆ ಮಂತ್ರಿಗಳು, ಶಾಸಕರು, ರಾಜಕಾರಣಿಗಳು ಎಲ್ಲರೂ ಕಳ್ಳರೇ, ಅವರು ಬೇಕಾದಷ್ಟು ತಿನ್ನುವಾಗ ನಾವು ಸ್ವಲ್ಪ ಅಕ್ರಮ ಮಾಡಿದರೆ ತಪ್ಪೇನು ಎಂದು ಹೇಳುತ್ತಾರೆ. ಇನ್ನು ಕೆಲವು ಸ್ಥಿತಿವಂತ ಕೃಷಿಕರು ಬಡ್ಡಿರಹಿತ ಸಾಲ ತೆಗೆದುಕೊಂಡು ಅದನ್ನು ಬ್ಯಾಂಕುಗಳಲ್ಲಿ ನಿಶ್ಚಿತ ಅವಧಿಯ ಠೇವಣಿಯಾಗಿರಿಸಿ ಯೋಜನೆಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ಮಾಡುತ್ತಿರುವವರು ನಾಸ್ತಿಕರೆನೂ ಅಲ್ಲ, ಅಪ್ಪಟ ದೈವಭಕ್ತರೇ ಇಂಥ ದೇಶದ್ರೋಹದ ಕೆಲಸವನ್ನು ಮಾಡುತ್ತಾ ಇದ್ದಾರೆ. ಮನುಷ್ಯನ ಲೋಭಕ್ಕೆ ಮಿತಿ ಉಂಟೇ? ಹೀಗೆ ಪ್ರತಿಯೊಬ್ಬನೂ ಬೇರೆಯವರೆಡೆಗೆ ಕೈ ತೋರಿಸಿ ಇಂಥ ಕೆಲಸ ಮಾಡುತ್ತಾ ಹೋದರೆ ದೇಶ ದಿವಾಳಿಯಾಗದೆ ಇನ್ನೇನಾಗುತ್ತದೆ? ಉತ್ತರದಾಯಿತ್ವವಿಲ್ಲದ ಇಂಥ ಯೋಜನೆಗಳನ್ನು ನಿಲ್ಲಿಸಿದರೆ ದೇಶಕ್ಕೆ ಒಳ್ಳೆಯದು. ಸಾಲ ಮನ್ನಾ ಆಗುತ್ತದೆ ಎಂದು ಸಾಲ ತೆಗೆಯಲು ಪ್ರತಿಯೊಬ್ಬ ಕೃಷಿಕನೂ ಮುಂದಾದರೆ ದೇಶದ ಸ್ಥಿತಿ ಏನಾದೀತು ಎಂಬ ಮೂಲಭೂತ ಚಿಂತನೆ ಯಾರಲ್ಲಿಯೂ ಇಲ್ಲ. ಇಂಥ ಮನಸ್ಥಿತಿಯುಳ್ಳ ಜನರಿಂದ ತುಂಬಿದ ದೇಶ ಉದ್ಧಾರ ಆಗುವುದಾದರೂ ಹೇಗೆ? ಬಾಂಬು ಸ್ಫೋಟ, ಭಯೋತ್ಪಾದನೆ ಘಟನೆ ಆಗುವಾಗ ಅದನ್ನು ದೊಡ್ಡ ಸ್ವರ ತೆಗೆದು ಪ್ರತಿಭಟಿಸುವುದು, ಬೇರೆ ಧರ್ಮದ ಜನರನ್ನು ಬೈಯುವುದೇ ದೇಶಭಕ್ತಿ ಎಂದು ನಾವು ತಿಳಿದುಕೊಂಡಿದ್ದೇವೆ. ಸಿರಿವಂತರು ಬಡವರಿಗೆ ಇರುವ ಸೌಲಭ್ಯವನ್ನು ತೆಗೆದು ಕೊಳ್ಳದಿರುವುದೂ ದೇಶಭಕ್ತಿ ಎಂದು ನಾವು ತಿಳಿದು ಕೊಳ್ಳಬೇಕಾದ ಅಗತ್ಯ ಇದೆ. ಸಾಲ ಮನ್ನಾ ಯೋಜನೆ ಕೂಡ ಸೋಮಾರಿಗಳನ್ನು ಸೃಷ್ಟಿಸುತ್ತದೆ. ಬಡ್ಡಿರಹಿತ ಸಾಲ ನೀಡಿದರೆ ತೆಗೆದುಕೊಂಡವರಲ್ಲಿ ಜವಾಬ್ದಾರಿ ಬೆಳೆಯುವುದಿಲ್ಲ. ಜನರಲ್ಲಿ ಜವಾಬ್ದಾರಿ ಪ್ರಜ್ಞೆ ಬೆಳೆಸದಿದ್ದರೆ ಯಾವ ದೇಶವೂ ಉದ್ಧಾರ ಆಗಲಾರದು.

  Reply
 6. vasanth

  ಒಂದು ರೂಗೆ ಅಕ್ಕಿ, ಸಾಲಾ ಮನ್ನಾ ಯೋಜನೆಗಳು ಜನರನ್ನು ಸೆಳೆಯುವ ಅಗ್ಗದ ಯೊಜನೆಗಳಾಗಿವೆ. ಕೆಳ ವರ್ಗದವರಿಗೆ ಕಡಿಮೆ ಬೆಲೆಗೆ ಅಕ್ಕಿ ಸಿಗುತ್ತದೆ. ಶ್ರೀಮಂತರಿಗೆ ರೊಕ್ಕ ಇರುತ್ತೆ. ಬೆಲೆ ಎಷ್ಟಾದರೂ ಕೊಂಡು ತಿನ್ನುತ್ತಾರೆ. ಆದರೆ ಮಧ್ಯಮವರ್ಗದವರ ಪಾಡು ಏನಾಗಬೇಕು. ಇಂತಹ ಯೋಜನೆಗಳು ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತವೆ. ಇಂತಹ ಯೋಜನೆಗಳಿಂದ ಮುಂದೆ ರಾಜ್ಯ ಸಾಲದ ಹೊರೆ ಹೊರಬೇಕಾಗುತ್ತದೆ. ಅದರ ಭಾರ ಎಲ್ಲರ ಮೇಲೆ ಬೀಳಲಿದೆ. ಯೋಜನೆ ಸರಿಯಾದುದಲ್ಲ. ಅನುಭವಿ ಸಿದ್ದು ದೂರಗಾಮಿಯಾಗಿ ಯೋಚಿಸಬೇಕಿತ್ತು.

  Reply
 7. prasad raxidi

  ನಿಜ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಡುದಾರರ ವಿವರವನ್ನು ಇತ್ತೀಚೆಗೆ ಆರ್.ಟಿ.ಐ ಮೂಲಕ ತೆಗೆದೆವು. ಎಪಿ.ಲ್ ಮತ್ತು ಬಿಪಿಎಲ್ ಎರಡೂ ವಿಭಾಗದಲ್ಲೂ ಶೇ.30ರಷ್ಟು ಭೊಗಸ್ ಕಾರ್ಡುಗಳು, ಅನುಕೂಲಸ್ತರಿಗೆ , ಊರಲ್ಲೇ ಇಲ್ಲದವರಿಗೆ ಹೀಗೆ ಮನಸ್ಸಿಗೆ ಬಂದಂತೆ ಕಾರ್ಡು ನೀಡಲಾಗಿದೆ( ಈಬಗ್ಗೆ ಅಧಿಕೃತ ದೂರನ್ನೂ ನೀಡಲಾಗಿದೆ) ಇದರಲ್ಲಿ ಹೆಚ್ಚಿ ಬೋಗಸ್ ಕಾರ್ಡುಗಳು ನ್ಯಾಯಬೆಲೆ ಅಂಗಡಿ ಮಾಲೀಕರ ವಶದಲ್ಲೇ ಇದ್ದು ಪಡಿತರ ದುರ್ಬಳಕೆ ಯಾಗುತ್ತದೆ, ಇದರಲ್ಲಿ ಅಧಿಕಾರಗಳು ಶಾಮೀಲಾಗಿರುತ್ತಾರೆ. ಹಲವು ನ್ಯಾಯಬೆಲೆ ( ! ?) ಅಂಗಡಿಗಳಲ್ಲಿ ದುರ್ಬಳಕೆ ಆದಾಯವೇ (ಸೀಮೆಯೆಣ್ಣೆ ಸೇರಿ ) 50 ಸಾವಿದಿಂದ ೊಂದು ಲಕ್ಷದವರೆಗೂ ಹೋಗಿರುವ ುದಾಹರಣೆ ಇದೆ. ಇದನ್ನೆಲ್ಲ ಸರಿಪಡಿಸುವುದಕ್ಕೆ ಸಮಯ ಮತ್ತು ದೀರ್ಘ ಹೋರಾಟ ೆರಡೂ ಬೇಕು

  Reply
  1. -ಎಚ್. ಸುಂದರ ರಾವ್

   ನೀವು ಅನುಸರಿಸಿದ ವಿಧಾನವೇ ಸರಿ. ಮಾಹಿತಿ ಹಕ್ಕನ್ನು ಬಳಸಿದರೆ ಪ್ರಜೆ ಪ್ರಭುವಾಗುವುದು ಸಾಧ್ಯ. ಎಷ್ಟೋ ಸಮಸ್ಯೆಗಳು ಪರಿಹಾರವಾಗುವುದು ಸಾಧ್ಯ. ಆದರೆ ಅದಕ್ಕೆ ತಾಳ್ಮೆ, ಹಟ, ಧೈರ್ಯ ಎಲ್ಲ ಬೇಕಾಗುತ್ತದೆ. ನಿಮಗೆ ಅಭಿನಂದನೆಗಳು. ನಿಮ್ಮಂಥವರ ಸಂಖ್ಯೆ ಹೆಚ್ಚಲಿ.

   Reply

Leave a Reply to tuLuva Cancel reply

Your email address will not be published.