Daily Archives: May 23, 2013

ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…

– ರವಿ ಕೃಷ್ಣಾರೆಡ್ಡಿ

ಸಂಪುಟ ರಚನೆಯ ನಂತರ ಸಿದ್ದರಾಮಯ್ಯನವರ ಹೊಸ ಸರ್ಕಾರದ ಬಗ್ಗೆ ಒಂದಷ್ಟು ಭರವಸೆ ಮತ್ತು ಆಶಾವಾದ ಇಟ್ಟುಕೊಳ್ಳಬಹುದು ಎನ್ನಿಸಿತ್ತು. siddaramaiah-cmಸಂಪುಟಕ್ಕೆ ಸೇರಿದ ಎಲ್ಲರೂ ಅರ್ಹರು ಮತ್ತು ಪ್ರಾಮಾಣಿಕರು ಎನ್ನುವುದು ಆ ಆಶಾವಾದಕ್ಕೆ ಕಾರಣವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ (ಇದ್ದುದರಲ್ಲಿ) ಉತ್ತಮ ಎನ್ನಬಹುದಾದ ಸಂಪುಟ ಇದು ಎನ್ನುವುದು ಆ ಭರವಸೆಗೆ ಕಾರಣ ಆಗಿತ್ತು. ಇದಕ್ಕೆ ಮತ್ತು ಕೆಲವರನ್ನು ಹೊರಗಿಟ್ಟ ರೀತಿ ಮತ್ತು ನೀತಿಗಳಿಗೆ ಖಂಡಿತವಾಗಿ ಸಿದ್ಧರಾಮಯ್ಯನವರು ಅಭಿನಂದನಾರ್ಹರು.

ಆದರೆ, ಖಾತೆಗಳ ಹಂಚಿಕೆಯ ನಂತರ ಪರಿಸ್ಥಿತಿ ಬದಲಾಗಿದೆ. ಕೆಲವು ಖಾತೆ ಮತ್ತು ಸಚಿವರ ಬಗ್ಗೆ ಭರವಸೆ ಇಟ್ಟುಕೊಳ್ಳುವಂತೆ, ಮತ್ತಷ್ಟು ಖಾತೆಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳು ಖಂಡಿತವಾಗಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ.

ಕೃಷ್ಣ ಭೈರೇಗೌಡರಿಗೆ ಖಂಡಿತವಾಗಿ ಬೇರೆ ಖಾತೆ ಕೊಡಬಹುದಿತ್ತು. ಅವರಿಗೆ ಕೃಷಿ ಖಾತೆಯನ್ನು ನಿಭಾಯಿಸಲಾಗುವುದಿಲ್ಲ ಎಂದು ಈ ಮಾತಿನ ಅರ್ಥವಲ್ಲ. ಅವರ ತಂದೆ ಭೈರೇಗೌಡರೂ ಕೃಷಿ ಸಚಿವರಾಗಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದರು. ಕೃಷ್ಣ ಭೈರೇಗೌಡ ಖಂಡಿತವಾಗಿ ಅದನ್ನು ಆಧುನಿಕ ದೃಷ್ಟಿಕೋನದಿಂದ ನಿಭಾಯಿಸಲಿದ್ದಾರೆ. ಸ್ವತಃ ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರು ಈಗಾಗಲೆ ಅದನ್ನು ಅವರ ಪ್ರಥಮ ಪತ್ರಿಕಾಗೊಷ್ಟಿಯಲ್ಲಿ ನಿರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಭೈರೇಗೌಡರ ಖಾತೆ ನಿರ್ವಹಣೆ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು. krishnabyregowdaಆದರೆ, ಕೃಷ್ಣರಂತಹ ಆಧುನಿಕ ಶಿಕ್ಷಣ ಮತ್ತು ಜಾಗತಿಕ ಉದ್ಯೋಗದ ಅನುಭವ ಇದ್ದವರು ಸಶಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದ್ದ ಹಲವು ಖಾತೆಗಳು ಇದ್ದವು. ಉದಾಹರಣೆಗೆ, ಮಾಹಿತಿ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ಧಿ, ಇತ್ಯಾದಿ. ಕೃಷಿ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಹಲವರು ಈ ಸಂಪುಟದಲ್ಲಿ ಇದ್ದಾರೆ. ಆದರೆ, ನಾನು ಈಗ ಉಲ್ಲೇಖಿಸಿದ ಹಲವು ಖಾತೆಗಳನ್ನು ಭ್ರಷ್ಟಾಚಾರಕ್ಕೆ ಆಸ್ಪದವೀಯದೆ ಮತ್ತು ಅಧಿಕಾರಿಗಳ ಜ್ಞಾನದ ಮೇಲೆ ಅವಲಂಬಿಸದೆ ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ನಿಭಾಯಿಸಬಲ್ಲವರು ಕೆಲವರೇ ಇದ್ದಾರೆ. ಹಾಗಾಗಿ ಕೃಷ್ಣ ಭೈರೇಗೌಡರಂತಹವರನ್ನು ಎಲ್ಲಿ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸಿದ್ಧರಾಮಯ್ಯನವರು ಮತ್ತಷ್ಟು ಗಂಭೀರವಾಗಿ ಯೋಚಿಸಬೇಕು.

ಎಚ್.ಕೆ.ಪಾಟೀಲರಿಗೆ ಸಹಜವಾಗಿ ಎಂಬಂತೆ ಗ್ರಾಮೀಣಾಭಿವೃಧ್ಹಿ ದೊರಕಿದೆ. ಇವರು ಆ ಖಾತೆಯಲ್ಲಿ ಮಾಡಲಿರುವ ಕೆಲಸಗಳ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಶ್ರೀನಿವಾಸ ಪ್ರಸಾದರಿಗೆ ಕಂದಾಯ ಖಾತೆ ದೊರಕಿದೆ. ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರರಿಗೆ ಪ್ರಾಥಮಿಕ ಶಿಕ್ಷಣ ದೊರಕಿದೆ. ಇಲ್ಲಿಯವರೆಗೂ ಗಂಭೀರವಾದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳಿಲ್ಲದ ಸಿದ್ಧರಾಮಯ್ಯನವರ ಹಲವಾರು ಆಪ್ತರಿಗೆ ಒಳ್ಳೆಯ ಖಾತೆಗಳೇ ಲಭಿಸಿವೆ. ಆದರೆ, ಅವರು ಎಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಮತ್ತು ಜನಮುಖಿಯಾದ ಆಡಳಿತ ನಡೆಸುತ್ತಾರೆ ಎನ್ನುವುದು ಬರಲಿರುವ ದಿನಗಳಲ್ಲಿ ಮಾತ್ರವೇ ಗೊತ್ತಾಗಲಿರುವ ವಿಷಯ.

ರಾಜ್ಯದ ರಾಜಕೀಯ ವಲಯದಲ್ಲಿ ಅಷ್ಟೇನೂ ಪರಿಚಿತರಲ್ಲದ ಕೆ.ಜೆ. ಜಾರ್ಜ್‌ರಿಗೆ ಗೃಹ ಖಾತೆಯಂತಹ ಪ್ರಮುಖ ಖಾತೆ ಕೊಡಲಾಗಿದೆ. ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಚಿಂತನೆಗಳಿಲ್ಲದ, ಪೋಲಿಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಮನಸ್ಥಿತಿಯಿಲ್ಲದ ಯಾರಾದರೂ ಗಟ್ಟಿಜೀವ ಈ ಖಾತೆಯನ್ನು ವಹಿಸಿಕೊಳ್ಳುವ ತನಕ ರಾಜ್ಯದ ಪೋಲಿಸ್ ವ್ಯವಸ್ಥೆ ಸುಧಾರಿಸುವುದಿಲ್ಲ ಮತ್ತು ಜನಸ್ನೇಹಿಯಾಗುವುದಿಲ್ಲ. ಜಾರ್ಜ್‌ರ ಬಗ್ಗೆ ಯಾವ ರೀತಿಯ ಭರವಸೆ ಇಟ್ಟುಕೊಳ್ಳಬಹುದೊ ಗೊತ್ತಾಗುತ್ತಿಲ್ಲ.

ಕೆಲವರನ್ನು ಉಲ್ಲೇಖಿಸುವುದಕ್ಕೆ ಮೊದಲು ಎಂದೋ ಓದಿದ ಮತ್ತು ಅಷ್ಟಿಷ್ಟು ಜ್ಞಾಪಕದಲ್ಲಿರುವ ಈ ಉಪಕತೆ ಹೇಳುತ್ತೇನೆ. ಒಬ್ಬ ಪರಮಾತಿಭ್ರಷ್ಟ ಇರುತ್ತಾನೆ. ಯಾವ ಜಾಗದಲ್ಲಿ ಹಾಕಿದರೂ ಅವನು ಲಂಚ ಹೊಡೆಯುವುದರಲ್ಲಿ ನಿಸ್ಸೀಮ. ತಲೆಕೆಟ್ಟ ಅವನ ಮೇಲಧಿಕಾರಿಗಳು ಅವನಿಗೆ ಬೇರೆ ಯಾವ ಕೆಲಸವೂ ಬೇಡ ಎಂದು, ಸಮುದ್ರದಲ್ಲಿ ಅಲೆಗಳನ್ನು ಎಣಿಸುವ ಕೆಲಸ ಮಾಡು ಎಂದು ಅಲ್ಲಿಗೆ ವರ್ಗ ಮಾಡುತ್ತಾರೆ. ಕೆಲವು ದಿನಗಳ ನಂತರ ಆತನ ಮೇಲಧಿಕಾರಿಗಳಿಗೆ ಗೊತ್ತಾಗುತ್ತದೆ, ಸಮುದ್ರದ ಅಲೆಗಳನ್ನು ಎಣಿಸುವ ಕೆಲಸದಲ್ಲೂ ಆತ ಲಂಚ ಹೊಡೆಯುತ್ತಿದ್ದಾನೆ ಎಂದು. ಹೇಗೆ ಎಂದು ವಿಚಾರಿಸಿದರೆ ಗೊತ್ತಾದ ಸಂಗತಿ, ಆತ ಸಮುದ್ರದ ಮುಂದೆ ಕುರ್ಚಿ ಹಾಕಿಕೊಂಡು ಅಲೆಗಳನ್ನು ಎಣಿಸುತ್ತಿರುತ್ತಾನೆ. ಸಮುದ್ರದಲ್ಲಿ ಸಹಜವಾಗಿ ಅತ್ತಿಂದಿತ್ತ ದೋಣಿಗಳು ಮತ್ತು ಹಡಗುಗಳು ಸಂಚರಿಸುತ್ತಿರುತ್ತವೆ. ಇವನು ಅವುಗಳನ್ನು ತಡೆದು ನಿಲ್ಲಿಸಿ, ತನ್ನ ಅಲೆಗಳನ್ನು ಎಣಿಸುವ ಸರ್ಕಾರಿ ಕೆಲಸಕ್ಕೆ ನಿಮ್ಮಿಂದ ತೊಂದರೆಯಾಗಿತ್ತಿದೆ, ಇದು ಕಾನೂನು ವಿರೋಧಿ ಎನ್ನುತ್ತಾನೆ. ದೋಣಿಗಳವರು ಆತನಿಗೆ ಲಂಚ ಕೊಡುವುದನ್ನು ಆರಂಭಿಸುತ್ತಾರೆ.

ಇಂತಹ ಮನಸ್ಥಿತಿಯ ಹಲವು ಜನ ಈ ಸಂಪುಟದಲ್ಲಿದ್ದಾರೆ. ಇವರಿಗೆ ಭಾರೀ ಖಾತೆಗಳೇ ಸಿಗಬಹುದು ಎಂದು ನಿರೀಕ್ಷಿಸಿದ್ದರೂ ಸಿದ್ಧರಾಮಯ್ಯನವರು ಆ ವಿಷಯದಲ್ಲಿ ಅವರಿಗೆ ಸದ್ಯಕ್ಕೆ ಅಷ್ಟೇನೂ ಗಣನೀಯವಲ್ಲದ ಖಾತೆಗಳನ್ನು ನೀಡಿದ್ದಾರೆ. ಆದರೆ ಅವರ ಚಾಳಿ ಹೇಗೆ ಮುಂದುವರೆಯುತ್ತದೆ ಎನ್ನುವುದು ಒಂದಾರು ತಿಂಗಳಿನಲ್ಲಿಯೇ ಗೊತ್ತಾಗಲಿದೆ. ಮತ್ತೆ ಕೆಲವು ಸಚಿವರು ಉದಾಸೀನದಿಂದ ವರ್ತಿಸುವ ನಡವಳಿಕೆಗಳೂ ಹೆಚ್ಚಾಗಲಿವೆ. ನಿನ್ನೆ ಖಾಸಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಡನೆ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವೈದ್ಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನಡೆದುಕೊಂಡ ರೀತಿ. ಸಭೆಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರದ ಸಚಿವರ ಬಗ್ಗೆ ಇಂದಿನ ವಿಜಯ ಕರ್ನಾಟಕದಲ್ಲಿ ಉಲ್ಲೇಖವಿದೆ. ದೇಶಪಾಂಡೆಯಂತಹವರು ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಯುತ್ತಾರೆ ಎಂದು ಭಾವಿಸುವುದು ಮುಗ್ಧತೆಯಾಗುತ್ತದೆ.

ಆರಂಭದ ಪ್ಯಾರಾದಲ್ಲಿ ಮುಖ್ಯಮಂತ್ರಿಗಳು ಕೆಲವು ಖಾತೆಗಳನ್ನು ಹಂಚುವ ವಿಚಾರದಲ್ಲಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದೆ. ಇದು ಎರಡು ಖಾತೆಗಳ ವಿಚಾರವಾಗಿ ಎದ್ದು ಕಾಣುತ್ತದೆ. ಒಂದು, ಸತೀಶ್ ಜಾರಕಿಹೊಳಿಯವರಿಗೆ ನೀಡಿರುವ ಅಬಕಾರಿ ಖಾತೆ ಮತ್ತು ಪ್ರಕಾಶ್ ಹುಕ್ಕೇರಿಯವರಿಗೆ ನೀಡಿರುವ ಸಕ್ಕರೆ ಖಾತೆ. ಸತೀಶ್ ಜಾರಕಿಹೊಳಿಯವರ ತಂದೆ ಬೈಲಹೊಂಗಲದ ಲಕ್ಷ್ಮಣ ಜಾರಕಿಹೊಳಿಯವರು ಎಷ್ಟು ದೊಡ್ಡ ಅಬಕಾರಿ ಗುತ್ತಿಗೆದಾರರಾಗಿದ್ದರು ಎನ್ನುವುದು ಬೆಳಗಾವಿ ಮತ್ತು ಬಿಜಾಪುರದ ಸೀಮೆಯಲ್ಲಿ ಜನಸಾಮಾನ್ಯರಿಗೂ ತಿಳಿದ ವಿಷಯ. ಜಾರಕಿಹೊಳಿಯವರ ಕುಟುಂಬದ ಮೂಲ ಉದ್ಯೋಗ ಮತ್ತು ಆದಾಯ ಅಬಕಾರಿ ಗುತ್ತಿಗೆಗಳದ್ದು. ಇತ್ತೀಚಿನ ವರ್ಷಗಳಲ್ಲಿ ಜಾರಕಿಹೊಳಿ ಸಹೋದರರು ತಮ್ಮ ವ್ಯವಹಾರಗಳನ್ನು Diversify ಮಾಡಿಕೊಂಡಿರಬಹುದು. ಆದರೆ ಅವರಿಗೆ ಅಬಕಾರಿಯಲ್ಲಿ ಆಸಕ್ತಿ ಮತ್ತು ಆದಾಯ ಇದ್ದೇ ಇರುತ್ತದೆ. ಹೀಗಿರುವಾಗ ಸತೀಶ್ ಜಾರಕಿಹೊಳಿಯವರಿಗೆ ಅಬಕಾರಿ ಖಾತೆ ನೀಡಿರುವುದು ಅಸಮಂಜಸ. ಸತೀಶರು ಭ್ರಷ್ಟಾಚಾರ ಎಸಗದೇ ಕಾರ್ಯ ನಿರ್ವಹಿಸಿದರೂ ಇದು “Conflict of Interest” (ಅನೈತಿಕವಾಗಿ ಸ್ವಲಾಭ ಮಾಡಿಕೊಳ್ಳುವ ಸಾಧ್ಯತೆ) ಗೆ ಉದಾಹರಣೆ. ಹಾಗೆಯೇ, ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಮತ್ತವರ ಕುಟುಂಬದವರು ಹಲವಾರು ಸಕ್ಕರೆ ಕಾರ್ಖಾನೆಗಳ ಉದ್ಯಮದಲ್ಲಿ ಪಾಲುದಾರರು. ಇವರು ತಮ್ಮ ಖಾತೆಯನ್ನು ನಿಭಾಯಿಸುವಾಗ ತಮ್ಮ ಮತ್ತು ತಮ್ಮವರ ಹಿತಾಸಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಆಧಾರಗಳೇನಿದೆ?

ಇಂತಹುದಕ್ಕೆ ಆಧಾರಗಳು ಬೇಕಿಲ್ಲ. ಆದರೆ, ಇಂತಹ ಸಂಶಯಗಳು ಬರದೇ ಇರುವಂತೆ ಸೂಕ್ಷ್ನತೆಯಿಂದ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಇದು ಸಿದ್ಧರಾಮಯ್ಯನವರಿಗೆ, ಸತೀಶ್ ಜಾರಕಿಹೊಳಿಯವರಿಗೆ, ಪ್ರಕಾಶ್ ಹುಕ್ಕೇರಿಯವರಿಗೆ, ಮತ್ತು ಆಡಳಿತ ಪಕ್ಷವಾದ ಕಾಂಗ್ರೆಸ್‌ನವರಿಗೆ ಅರ್ಥವಾಗದೇ ಹೋಗಿದ್ದರೆ ಅದು ಅವರ ತಿಳಿವಳಿಕೆ ಮತ್ತು ಪ್ರಬುದ್ಧತೆಯನ್ನು ತೋರಿಸುತ್ತದೆ. ಅರ್ಥವಾಗಿಯೂ ಇದನ್ನು ಮಾಡಿದ್ದರೆ ಅದು ಅಕ್ಷಮ್ಯವಾಗುತ್ತದೆ.

ಒಟ್ಟಿನಲ್ಲಿ. ಸಿದ್ಧರಾಮಯ್ಯನವರ ಸರ್ಕಾರ ಭರವಸೆಗಳನ್ನು ಹುಟ್ಟಿಸುತ್ತಲೇ ಬರಲಿರುವ ದಿನಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಸ್ವಜನಪಕ್ಷಪಾತದ ಬೀಜಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವುದನ್ನು ಕಾಣಿಸುತ್ತಿದೆ.


ಪೂರಕ ಓದಿಗೆ: ಹಿಂದೆ 2009ರಲ್ಲಿ “ವಿಕ್ರಾಂತ ಕರ್ನಾಟಕ”ಕ್ಕೆ “Conflict of Interest” ಹಿನ್ನೆಲೆಯಲ್ಲಿ “ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ.” ಎಂಬ ಲೇಖನ ಬರೆದಿದ್ದೆ. ತಮ್ಮ ಹಿತಾಸಕ್ತಿಗೆ ಹೇಗೆ ಅಧಿಕಾರಸ್ಥರು ತಮ್ಮ ಸ್ಥಾನದ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಮಾರ್ಥಾ ಸ್ಟುವರ್ಟ್ ಮತ್ತು ಕೃಷ್ಣಯ್ಯ ಶೆಟ್ಟಿಯ ಉದಾಹರಣೆಯೊಂದಿಗೆ ಅದನ್ನು ಚರ್ಚಿಸಲಾಗಿದೆ. ಆಸಕತರು ಅದನ್ನು ಇಲ್ಲಿ ಗಮನಿಸಬಹುದು.