Daily Archives: May 25, 2013

ಪ್ರೊ. ಮಾಧವ ಗಾಡ್ಗಿಳ್ ವರದಿ – ಒಂದು ಅವಲೋಕನ

– ಸಿ. ಯತಿರಾಜು

ಸಹ್ಯಾದ್ರಿಯ ಸಂಪತ್ತು

ಭಾರತದ ೭ ಪ್ರಮುಖ ಬೆಟ್ಟ ಸಾಲುಗಳಲ್ಲಿ ಪಶ್ಚಿಮ ಘಟ್ಟಗಳು ಅತ್ಯಂತ ಪ್ರಮುಖವಾದವು. ಇವು ದಕ್ಷಿಣದ ದಖನ್ ಪ್ರಸ್ಥಭೂಮಿಯ ಜಲಗೋಪುರ ಎಂದೇ ಪರಿಗಣಿಸಿಲ್ಪಟ್ಟಿವೆ. ದಖನ್ ಪ್ರಸ್ಥಭೂಮಿಯ ಪ್ರಮುಖವಾದ ೫೮ ನದಿಗಳು ಈ ಪಶ್ಚಿಮ ಘಟ್ಟಗಳಲ್ಲಿ ಜನಿಸುತ್ತವೆ. ಮುಂಗಾರು ಮಳೆಯ ಮಾರುತಗಳು ವರ್ಷದ ಕೆಲವೇ ತಿಂಗಳುಗಳಲ್ಲಿ ೨೦೦೦ ಮಿ.ಮೀ.ನಿಂದ ೮೦೦೦ ಮಿ.ಮೀ.ರವರೆಗೆ ಈ ಪ್ರದೇಶದಲ್ಲಿ ಮಳೆ ಸುರಿಸುತ್ತವೆ. ಪಶ್ಚಿಮ ಘಟ್ಟಗಳು ತಮ್ಮ ವಿಶಿಷ್ಟವಾದ ಭೌಗೋಳಿಕ ಲಕ್ಷಣಗಳಿಂದಾಗಿ ಭಾರತದ ವಾಯುಗುಣದ ಮೇಲೆ ಅದರಲ್ಲೂ ವಿಶೇಷವಾಗಿ ಮಳೆಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಜನಿಸುವ ನದಿಗಳಲ್ಲಿ ೪೭ ನದಿಗಳು ಪೂರ್ವಕ್ಕೆ ಹರಿದು ವಿಶಾಲ ಮೈದಾನ ಪ್ರದೇಶಗಳಿಗೆ ನೀರುಣಿಸುತ್ತವೆ. ೮ ನದಿಗಳು ಪಶ್ಚಿಮಕ್ಕೆ ಹರಿದು ಕರಾವಳಿ ಪ್ರದೇಶದ ಜೀವನಾಡಿಗಳಾಗಿವೆ. ಉಳಿದ ೩ ನದಿಗಳು ದಕ್ಷಿಣಕ್ಕೆ ಹರಿಯುತ್ತವೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, western ghatsತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ಸುಮಾರು ೫೦ಕ್ಕೂ ಅಧಿಕವಾದ ಪ್ರಮುಖ ಅಣೆಕಟ್ಟುಗಳಿವೆ. ಸುಮಾರು ೨೫ ಕೋಟಿ ಜನರು ಈ ನದಿಗಳಿಂದ ಮತ್ತು ಅಣೆಕಟ್ಟುಗಳಿಂದ ಕುಡಿಯುವ ನೀರು, ಕೃಷಿ ನೀರಾವರಿ, ಕೈಗಾರಿಕೆ, ಮುಂತಾದವುಗಳಿಗೆ ಅತ್ಯಗತ್ಯವಾದ ನೀರನ್ನು ಪಡೆಯುತ್ತಿದ್ದಾರೆ. ಹಾಗಾಗಿ ಇಡೀ ದಖನ್ ಪ್ರಸ್ಥಭೂಮಿಯ ಬಹುಪಾಲು ಜನರ ಅಸ್ತಿತ್ವ ಮತ್ತು ಭವಿಷ್ಯ ಪಶ್ಚಿಮ ಘಟ್ಟಾವಲಂಬಿಯಾಗಿದೆ.

ಇಡೀ ಜಗತ್ತಿನ ೩೫ ಜೀವ ವೈವಿಧ್ಯತಾ ಸೂಕ್ಷ್ಮ ತಾಣಗಳಲ್ಲಿ (Biodiversity Hotspots) ಪಶ್ಚಿಮ ಘಟ್ಟವೂ ಒಂದು ಪ್ರಮುಖ ತಾಣವಾಗಿದೆ. ಮಹಾ ಜೀವವೈವಿಧ್ಯತೆಯ ಅತ್ಯಂತ ೮ ಸೂಕ್ಷ್ಮ ತಾಣಗಳ ಪೈಕಿ ಪಶ್ಚಿಮ ಘಟ್ಟವು ಒಂದು ತಾಣವಾಗಿದೆ. ಈ ಘಟ್ಟಗಳು ಜೀವವೈವಿಧ್ಯತೆಯ ಮಹಾಭಂಡಾರಗಳು ೪೦೦೦ ಪ್ರಭೇದದ ಹೂಬಿಡುವ ಸಸ್ಯಗಳು, ೬೪೫ ನಿತ್ಯಹರಿದ್ವರ್ಣ ಜಾತಿ ಮರಗಳು, ೩೫೦ ರೀತಿಯ ಇರುವೆಗಳು, ೩೩೦ ರೀತಿಯ ಚಿಟ್ಟೆಗಳು, ೧೭೪ ಜಾತಿ ಕೀಟಗಳು, ೨೮೮ ಪ್ರಭೇದದ ಮೀನುಗಳು, ೨೨೦ ಉಭಯವಾಸಿ ಪ್ರಭೇದಗಳು, ೨೨೫ ಸರಿಸೃಪ ಪ್ರಭೇದಗಳು ೧೨೦ ಸ್ತನಿ ಪ್ರಭೇದಗಳು, ೫೦೦ಕ್ಕೂ ಅಧಿಕವಾದ ಪಕ್ಷಿ ಪ್ರಭೇದಗಳು ಇಲ್ಲಿ ಆಶ್ರಯ ಪಡೆದಿವೆ. ಈ ಪ್ರಭೇದಗಳಲ್ಲಿ ಅನೇಕವು ಈ ಪ್ರದೇಶಗಳಲ್ಲಿ ಮಾತ್ರ ದೊರಕುವ ಮತ್ತು ಬೇರೆಲ್ಲೂ ಕಾಣಸಿಗದಿರುವ ಸ್ಥಳ ವಿಶಿಷ್ಟ ಅಂತಃಸೀಮಿತ ಪ್ರಭೇದಗಳೆಂಬುದು ಅತ್ಯಂತ ಮಹತ್ವಪೂರ್ಣ ಸಂಗತಿಯಾಗಿದೆ. ಈಗಲೂ ಈ ಪ್ರದೇಶಗಳಲ್ಲಿ ಹೊಸ ಹೊಸ ಜೀವವೈವಿಧ್ಯತೆಯ ಪ್ರಭೇದಗಳು ನಿರಂತರವಾಗಿ ಪತ್ತೆಯಾಗುತ್ತಲೇ ಇವೆ. ಹಾಗಾಗಿ ಪಶ್ಚಿಮ ಘಟ್ಟಗಳು ಅತ್ಯಮೂಲ್ಯವಾದ ಬೆಲೆ ಕಟ್ಟಲಾಗದ ಅಗಣಿತ ಜೀವವೈವಿಧ್ಯತೆಯ ಜೀವಂತ ಗಣಿಯಾಗಿವೆ.

ದಿನೇ ದಿನೇ ಹೆಚ್ಚುತ್ತಾ ಸಾಗಿರುವ ಒತ್ತಡಗಳು

ಇಂತಹ ನಿಸರ್ಗದ ರಮಣೀಯ ಸೃಷ್ಟಿಯಾದ ಪಶ್ಚಿಮಘಟ್ಟಗಳು ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕನುಗುಣವಾಗಿ ಹೆಚ್ಚಾಗುತ್ತಾ ಸಾಗಿರುವ ಅಗತ್ಯಗಳು ಮತ್ತು ಅತಿಯಾಸೆಗಳಿಂದಾಗಿ ಒತ್ತಡಕ್ಕೆ ಸಿಲುಕುತ್ತಿವೆ. ಆಧುನಿಕತೆಯ ಅಗತ್ಯಗಳು ಮತ್ತು ಅತಿಯಾಸೆ ಸೃಷ್ಟಿಸಿರುವ ಬೇಡಿಕೆಗಳ ಪೂರೈಕೆಗಾಗಿ ಪಶ್ಚಿಮ ಘಟ್ಟಗಳ ವನರಾಶಿಯನ್ನು, ಖನಿಜಗಳನ್ನು, ಜೀವವೈವಿಧ್ಯತೆಯನ್ನು ತರಿದು ಚೆಂಡಾಡಲಾಗುತ್ತಿದೆ. ಆಧುನಿಕ ದೇವಾಲಯಗಳೆಂದು ಪರಿಗಣಿತವಾದ ಅಣೆಕಟ್ಟುಗಳಿಗೆ, ಜಲವಿದ್ಯುತ್ ಯೋಜನೆಗಳಿಗೆ ಅನೇಕ ರೀತಿಯ ಗಣಿಗಾರಿಕೆಗೆ, ರಸ್ತೆ ರೈಲು ಮುಂತಾದ ಮೂಲಸೌಕರ್ಯಗಳಿಗೆ, ವಿದ್ಯುತ್ ಸಾಗಾಣಿಕಾ ಲೈನುಗಳಿಗೆ, ಕೃಷಿಗೆ, ಪ್ರವಾಸೋದ್ಯಮಕ್ಕೆ ಇನ್ನೂ ಮುಂತಾದ ಚಟುವಟಿಕೆಗಳಿಗೆ ವಿಶಾಲವಾದ ಪಶ್ಚಿಮ ಘಟ್ಟ ಪ್ರದೇಶಗಳ ಪರಿಸರವನ್ನು ಅನಾಮತ್ತಾಗಿ ಹಾಳುಗೆಡವಲಾಗುತ್ತಿದೆ ಇಲ್ಲವೆ ಮುಳುಗಿಸಲಾಗುತ್ತಿದೆ. ಈ ವಿನಾಶಕಾರಿ ಚಟುವಟಿಕೆಗಳ ಮೂಲಕ ವನ್ಯಜೀವಿಗಳನ್ನು, ಬುಡಕಟ್ಟು ಮತ್ತು ಗಿರಿಜನರನ್ನು ಅವರ ಮೂಲ ನೆಲೆಗಳಿಂದ ಒಕ್ಕಲೆಬ್ಬಿಸಿ ನಿರಾಶ್ರಿತರನ್ನಾಗಿಸಿ ಅವುಗಳ ಸಂತತಿ ಕ್ರಮೇಣವಾಗಿ ಕರಗುತ್ತಾ ಸಾಗಿ ಶಾಶ್ವತವಾಗಿ ಕಣ್ಮರೆಯಾಗುವ ಅಪಾಯಕ್ಕೀಡಾಗುವಂತೆ, ವಿನಾಶವಾಗುವಂತೆ ಮಾಡಲಾಗುತ್ತಿದೆ.

ಸಂರಕ್ಷಣೆಯ ಸಮರಗಳು

ಅತ್ಯಮೂಲ್ಯವಾದ ಪಶ್ಚಿಮ ಘಟ್ಟಗಳನ್ನು ಇಂತಹ ವಿನಾಶಕಾರಿ ಚಟುವಟಿಕೆಗಳಿಂದ ಸಂರಕ್ಷಿಸಿ ಕಾಪಾಡಲು ನಿರಂತರವಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕಾಯ್ದಿರಿಸಿದ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು, ವನ್ಯಜೀವಿಧಾಮಗಳು, ಕಾಯ್ದಿರಿಸಿದ ಜೀವಾವಲಯಗಳು ಮುಂತಾದ ರೂಪಗಳಲ್ಲಿ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿದ್ದರೂ ಅವು ನಿರೀಕ್ಷಿತ ಪ್ರಮಾಣ ಯಶಸ್ಸನ್ನು ಪಡೆಯದೆ ದಿನೇ ದಿನೇ ವಿಕೃತ ಅಭಿವೃದ್ಧಿಯ ಅವ್ಯಾಹತ ದಾಳಿಗೆ ಬಲಿಯಾಗುತ್ತಾ ಸಾಗಿವೆ. ಮೇಲಿನಿಂದ ಹೇರಲ್ಪಟ್ಟ ಎಚ್ಚರಗೇಡಿ, ಅಭಿವೃದ್ಧಿ ಕಾರ್ಯಗಳು ಮತ್ತು ವಿವೇಚನಾರಹಿತ ಸಂರಕ್ಷಣೆಯ ಪ್ರಯತ್ನಗಳು ಇಂದು ಪಶ್ಚಿಮ ಘಟ್ಟಗಳ ಅಸ್ತಿತ್ವಕ್ಕೆ ಕಂಟಕವಾಗಿ ಪರಿಣಮಿಸಿವೆ. ಬೆಲೆ ಕಟ್ಟಲಾಗದ, ಬಹುಪಯೋಗಿ, ಜೀವನಾಧಾರವಾದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕೂಗು ಇಂದು ಹಿಂದೆಂದಿಗಿಂತಲೂ ಅಧಿಕವಾಗಿದೆ. “ಮೌನಕಣಿವೆ ಉಳಿಸಿ ಆಂದೋಲನ” ಮತ್ತು “ಪಶ್ಚಿಮ ಘಟ್ಟ ಉಳಿಸಿ” Kudremukh_National_Park,_Western_Ghats,_Karnatakaಅಭಿಯಾನಗಳಿಂದಾರಂಭಗೊಂಡ ಪಶ್ಚಿಮ ಘಟ್ಟ ಸಂರಕ್ಷಣಾ ಚಳುವಳಿಗಳು ಮತ್ತು ಅನೇಕ ಚದುರಿದಂತಹ ವೈವಿಧ್ಯಮಯ ಸಂರಕ್ಷಣಾ ಪ್ರಯತ್ನಗಳು ಮತ್ತು ಹೋರಾಟಗಳ ನಡುವೆಯೂ ಪಶ್ಚಿಮ ಘಟ್ಟಗಳ ಮೇಲೆ ಬೃಹತ್ ಪ್ರಮಾಣದ ವಿನಾಶಕಾರಿ ಚಟುವಟಿಕೆಗಳ ದಾಳಿ ವ್ಯಾಪಕವಾಗಿ ನಿರಂತರವಾಗಿ ಮುಂದುವರಿದಿದೆ. ಇದರಿಂದಾಗಿ ಜೀವಸಲಿಲವಾಗಿರುವ ಪಶ್ಚಿಮ ಘಟ್ಟಗಳು ದಿನೇ ದಿನೇ ಬರಡಾಗುತ್ತಾ ಬೋಳಾಗುತ್ತಾ ಸಾಗಿವೆ. ಈ ಬೆಳವಣಿಗೆಗಳು ಕೇವಲ ಪಶ್ಚಿಮ ಘಟ್ಟಗಳಿಗೆ ಮಾತ್ರ ಮಾರಕವಾಗಿಲ್ಲ, ಅವು ವಿಶಾಲವಾದ ದಖನ್ ಪ್ರಸ್ಥಭೂಮಿಯ ಮೈದಾನ ಪ್ರದೇಶಗಳಿಗೂ ಮಾರಕವಾಗಿ ಪರಿಣಮಿಸುತ್ತಿವೆ. ಈ ವರ್ಷ ನಮ್ಮ ರಾಜ್ಯದ ಬಹುಪಾಲು ಅಣೆಕಟ್ಟುಗಳ ಜಲಮಟ್ಟ ದಾಖಲೆಯ ಕುಸಿತ ಕಂಡಿದೆ. ಕುಡಿಯುವ ನೀರಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವಾರು ನಗರ ಪಟ್ಟಣಗಳು ಹಾಹಾಕಾರ ಪಡುವಂತಾಗಿದೆ. ಬೃಹತ್ ಅಣೆಕಟ್ಟುಗಳು ಖಾಲಿಯಾಗಿ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಕಂಟಕ ಎದುರಾಗಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಬೇಜವಾಬ್ದಾರಿತನಕ್ಕೆ ನಾವು ಅಪಾರವಾದ ಬೆಲೆ ತೆರಬೇಕಾಗುತ್ತದೆ.

ಸಂಕಷ್ಟಕ್ಕೊಂದು ಸಮಿತಿ

ಇವೆಲ್ಲವನ್ನೂ ಮನವರಿಕೆ ಮಾಡಿಕೊಂಡಿದ್ದ ಕೇಂದ್ರ ಸರ್ಕಾರದ ಅಂದಿನ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಜೈರಾಮ್ ರಮೇಶ್‌ರವರು ಪಶ್ಚಿಮ ಘಟ್ಟಗಳ ಸಮಗ್ರ ಸಂರಕ್ಷಣೆ ಮಾರ್ಗೋಪಾಯಗಳನ್ನು ಸಲಹೆ ಮಾಡಲು ಖ್ಯಾತ ಪರಿಸರ ತಜ್ಞರಾದ ಪ್ರೊ. ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ‘ಪಶ್ಚಿಮ ಘಟ್ಟ ಜೀವಿ ಪರಿಸ್ಥಿತಿ ಪರಿಣಿತರ ತಂಡ’ (Western Ghat’s Ecology Expert Panel) ವೊಂದನ್ನು ನೇಮಿಸಿ ಶೀಘ್ರವಾಗಿ ವರದಿ ನೀಡಲು ಕೋರಿದ್ದರು. ಅವರ ಕೋರಿಕೆಯ ಮೇರೆಗೆ ಸುಮಾರು ೧೮ ತಿಂಗಳು ಪರಿಶ್ರಮ ಹಾಕಿ ಈ ಪರಿಣಿತ ತಂಡ ೩೦-೮-೨೦೧೧ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದೆ ತಡೆಹಿಡಿಯುವ ಪ್ರಯತ್ನ ಮಾಡಿತು. ಇದೇ ಅವಧಿಯಲ್ಲಿ ಜೈರಾಮ್ ರಮೇಶ್‌ರವರ ಸ್ಥಾನದಲ್ಲಿ ಶ್ರೀಮತಿ ಜಯಂತಿ ನಟರಾಜನ್ ಮಂತ್ರಿಯಾಗಿ ಬಂದಿದ್ದರು. ಪರಿಸರವಾದಿಗಳು, ಮಾಹಿತಿ ಹಕ್ಕು ಕಾರ್ಯಕರ್ತರ ಹೋರಾಟದ ಫಲವಾಗಿ ಪ್ರೊ. ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯ ಪರಿಣಿತ ವರದಿ ಸಾರ್ವಜನಿಕರಿಗೆ ಲಭ್ಯವಾಯಿತು. ಈ ವರದಿ ಬಹಿರಂಗಗೊಂಡ ಮೇಲೆ ಪಶ್ಚಿಮ ಘಟ್ಟ ಸಂರಕ್ಷಣೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಸಾರ್ವಜನಿಕ ವಿವಾದ ಆರಂಭಗೊಂಡಿದೆ. ಪಶ್ಚಿಮ ಘಟ್ಟಗಳಿರುವ ರಾಜ್ಯ ಸರ್ಕಾರಗಳು, ಎಲ್ಲ ರಾಜಕೀಯ ಪಕ್ಷಗಳು ಈ ಪರಿಣಿತ ವರದಿಯ ಶಿಫಾರಸ್ಸುಗಳ ಬಗ್ಗೆ ತೀವ್ರ ವಿರೋಧ ಮತ್ತು ಆಕ್ಷೇಪಣೆಗಳನ್ನು ಎತ್ತುತ್ತಿವೆ.

ಪ್ರೊ. ಮಾಧವ್ ಗಾಡ್ಗೀಳ್ ಸಮಿತಿಯ ಪ್ರಮುಖವಾದ ಶಿಫಾರಸ್ಸುಗಳು :

ಜೀವಿ ಪರಿಸರಾತ್ಮಕ ಸೂಕ್ಷ್ಮಪ್ರದೇಶ ಮತ್ತು ವಲಯಗಳು

ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ಪರಿಣಿತ ತಂಡ ನೀಡಿದ ವರದಿಯಲ್ಲಿ ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು ‘ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ’ವೆಂದು (Ecologically Sensitive Area – ESA) ಪರಿಗಣಿಸಬೇಕೆಂದು ಹೇಳಲಾಗಿದೆ. ಮುಂದುವರಿದು ಈ ವರದಿ ಪಶ್ಚಿಮ ಘಟ್ಟಗಳ ವಿವಿಧ ಪ್ರದೇಶಗಳ ಜೀವಿ ಪರಿಸರಾತ್ಮಕ ಸೂಕ್ಷ್ಮತೆಯನ್ನಾಧರಿಸಿ ಇಡೀ ಪ್ರದೇಶವನ್ನು ೩ ಜೀವಿ ಪರಿಸರಾತ್ಮಕ ಸೂಕ್ಷ್ಮ ವಲಯಗಳನ್ನಾಗಿ (Ecologically Sensitive Zones-ESZ) ಗುರುತಿಸಿದೆ. ಅತ್ಯುನ್ನತವಾದ ಸೂಕ್ಷ್ಮತೆಯನ್ನು ಹೊಂದಿರುವ (Highest Sensitivity) ಪ್ರದೇಶಗಳನ್ನು ESZ-1 ಎಂದು ಗುರುತಿಸಿದೆ. ಅತಿ ಸೂಕ್ಷ್ಮತೆಯನ್ನು (High Sensitivity) ಹೊಂದಿರುವ ಪ್ರದೇಶವನ್ನು ESZ-2 ಎಂದು, ಮಧ್ಯಮ ಪ್ರಮಾಣದ ಸೂಕ್ಷ್ಮತೆಯನ್ನು (Moderate Sensitivity) ಹೊಂದಿರುವ ಪ್ರದೇಶವನ್ನು ESZ-3 ಎಂದು ಗುರುತಿಸಿದೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಗಾಗಲೇ ಬೇರೆ ಬೇರೆ ಕಾಯ್ದೆಗಳನ್ವಯ “ಸಂರಕ್ಷಿತ ಪ್ರದೇಶಗಳೆಂದು” (Protected Areas) ಘೋಶಿಸಲ್ಪಟ್ಟಿರುವ ಪ್ರದೇಶಗಳ ನಿರ್ವಹಣೆ ಯಥಾವತ್ತಾಗಿ ಮುಂದುವರಿಯಲಿದೆ. ಅವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಸೂಚಿಸಲಾಗಿಲ್ಲ. ಇವುಗಳಿಗೆ ಪೂರಕವಾಗಿ ಜೀವಿ ಪರಿಸರಾತ್ಮಕ ಸೂಕ್ಷ್ಮವಲಯ ೧, ೨ ಮತ್ತು ೩ನ್ನು ಮರುಗುರುತಿಸಲಾಗುತ್ತದೆ. ಹೀಗಾಗಿ ಈ ಪರಿಣಿತ ವರದಿ ಸಂಪೂರ್ಣವಾಗಿ ಪಶ್ಚಿಮ ಘಟ್ಟ ಪ್ರದೇಶವನ್ನು ‘ಸಂರಕ್ಷಿತ ಪ್ರದೇಶ’, ESZ-1, ESZ-2 ಮತ್ತು ESZ-3 ಎಂಬ ನಾಲ್ಕು ವಲಯಗಳನ್ನು ೨೨೦೦ ಗ್ರಿಡ್‌ಗಳಾಗಿ ವಿಭಜನೆ ಮಾಡಿದೆ. ಈಗ ಹಾಲಿ ಇರುವ ಸಂರಕ್ಷಿತ ಪ್ರದೇಶ ಮತ್ತು ESZ-1 ರ ವಿಸ್ತೀರ್ಣ ಶೇ. ೬೦ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ. ಇದರ ಜೊತೆಗೆ ESZ-2 ರ ಪ್ರದೇಶವನ್ನು ಸೇರಿಸಿಕೊಂಡರೆ ಅದು ಒಟ್ಟು ಪಶ್ಚಿಮ ಘಟ್ಟ ಪ್ರದೇಶದ ಶೇ. ೭೫ ರಷ್ಟಾಗುತ್ತದೆ. ಇನ್ನುಳಿದ ಶೇ. ೨೫ ರಷ್ಟು ಪ್ರದೇಶವನ್ನು ಮಾತ್ರ ESZ-3 ವಲಯವನ್ನಾಗಿ ಗುರುತಿಸಲಾಗಿದೆ. ಸಮಿತಿ ವಲಯಗಳನ್ನಾಗಿ ಗುರುತಿಸುವ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕರಡು ವಿಭಜನೆಯನ್ನು ಮಾತ್ರ ಮಾಡಿದೆ. ಆದರೆ ವಲಯಗಳನ್ನು ಅಂತಿಮವಾಗಿ ನಿರ್ಧರಿಸುವ ಪರಮಾಧಿಕಾರವನ್ನು ಮುಂದೆ ರಚಿತವಾಗಲಿರುವ ‘ಪಶ್ಚಿಮ ಘಟ್ಟ ಜೀವಿ ಪರಿಸರಾತ್ಮಕ ಪ್ರಾಧಿಕಾರ’ದ ಮಾರ್ಗದರ್ಶನದಲ್ಲಿ ಸ್ಥಳೀಯ ಸಂಸ್ಥೆಗಳು ಅಂತಿಮವಾಗಿ ನಿರ್ಧರಿಸಬೇಕೆಂದು ಹೇಳುತ್ತದೆ. ESZ ವಲಯವಾರು ವಿಂಗಡಣೆ ಮತ್ತು ಮರು ಗುರುತಿಸುವಿಕೆಯನ್ನು ಅಧಿಕಾರಿಗಳಿಗೆ ಬಿಡಬಾರದು ಅದನ್ನು ಸ್ಥಳೀಯ ಜನ ನಿರ್ಧಾರ ಮಾಡಬೇಕೆಂದು ಹೇಳುವ ಮೂಲಕ ಅಭಿವೃದ್ಧಿ ಮತ್ತು ಸಂರಕ್ಷಣೆಯ ವಿಚಾರಗಳನ್ನು ಅತ್ಯಂತ ವಿಕೇಂದ್ರಿಕೃತವಾಗಿ ಜನ ಸಹಭಾಗಿತ್ವದಲ್ಲಿ ನಿರ್ಧಾರ ಮಾಡಬೇಕೆಂದು ವರದಿ ತಿಳಿಸಿದೆ.

ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಸೂಚಿತ ನಿಯಂತ್ರಣಗಳು ಮತ್ತು ಪ್ರೋತ್ಸಾಹಕ ಕ್ರಮಗಳು
ಪ್ರಮುಖ ನಿಯಂತ್ರಣ ಕ್ರಮಗಳು

 1. ವಂಶವಾಹಿ ರೂಪಾಂತರಿತ ಬೆಳೆಗಳಿಗೆ ಅವಕಾಶ ನೀಡಬಾರದು.
 2. ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ.
 3. ವಿಶೇಷ ಆರ್ಥಿಕ ವಲಯಗಳಿಗೆ (SEZ) ಅವಕಾಶ ನೀಡಬಾರದು.
 4. ಹೊಸ ಪರ್ವತ ತಾಣಗಳಿಗೆ ಅವಕಾಶ ನೀಡಬಾರದು. (Hill Stations)
 5. ಸಾರ್ವಜನಿಕ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸಬಾರದು.
 6. ಪರಿಸರಸ್ನೇಹಿ ಕಟ್ಟಡ ನೀತಿ ಸಂಹಿತೆ ಅಳವಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಬೇಕು.
 7. ಯಾವುದೇ ಹಳ್ಳ/ನದಿಗಳ ಸ್ವಾಭಾವಿಕ ಹರಿವನ್ನು ವಿದ್ಯುತ್ ಯೋಜನೆಗಳಿಗೆ ತಿರುಗಿಸಬಾರದು.
 8. ಜೀವಿತಾವಧಿ ಪೂರೈಸಿರುವ ಹಳೆ ಅಣೆಕಟ್ಟುಗಳು/ಉಷ್ಣ ಸ್ಥಾವರಗಳನ್ನು ಕಳಚಬೇಕು. (Decommissioned).
 9. ನದೀ ಪಾತ್ರಗಳ ನೀರಿನ ಅಂತರ್‌ವರ್ಗಾವಣೆಗೆ ಅವಕಾಶ ನೀಡಬಾರದು.
 10. ವಾಣಿಜ್ಯ ಬೆಳೆ ಪ್ರದೇಶಗಳಲ್ಲಿ/ರಸ್ತೆಗಳಲ್ಲಿ ಕಳೆನಾಶಕಗಳ ಬಳಕೆಯನ್ನು ನಿಷೇಧಿಸಬೇಕು.

ESZ-1 ರಲ್ಲಿನ ನಿಯಂತ್ರಣಗಳು

 1. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಬಾರದು. ಸ್ಥಳೀಯ ಜನರ ಜನಸಂಖ್ಯಾ ಹೆಚ್ಚಳಕ್ಕನುಸಾರವಾಗಿ ಹಾಲಿ ಇರುವ ನಿವಾಸ ಪ್ರದೇಶಗಳನ್ನು ವಿಸ್ತರಿಸಬಹುದು. ಕೃಷಿ ಭೂಮಿಯನ್ನು ಅರಣ್ಯಗಳಾಗಿ ಇಲ್ಲವೆ ಮರ ಬೆಳೆ ಪ್ರದೇಶಗಳಾಗಿ ಪರಿವರ್ತಿಸಬಹುದು.
 2. ಪರಿಸರ ಸಚಿವಾಲಯದ ಪ್ರವಾಸ ನೀತಿಯನುಸಾರವಾಗಿ ಹಾಲಿ ಇರುವ ಹೋಟೆಲುಗಳು ಮತ್ತು ರೆಸಾರ್ಟ್‌ಗಳನ್ನು ಮುಂದುವರಿಸುವುದು.
 3. ವಿಷಕಾರಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅವಕಾಶ ನೀಡಬಾರದು.
 4. ಸ್ಥಳೀಯ ಯೋಜನಾ ಪ್ರಾಧಿಕಾರಗಳು ಪರಿಸರ ಪರಿಣಾಮ ಅಂದಾಜು ಅಧ್ಯಯನ ನಡೆಸಿ ರಸ್ತೆ ಮತ್ತಿತರ ಮೂಲ ಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬೇಕು.
 5. ಹಂತಹಂತವಾಗಿ ೫ ವರ್ಷಗಳೊಳಗಾಗಿ ರಾಸಾಯನಿಕ ಕೀಟ/ಕಳೆನಾಶಕಗಳನ್ನು ನಿಷೇಧಿಸಬೇಕು.
 6. ಹೊಸದಾಗಿ ಗಣಿ, ಕಲ್ಗಣಿ ಮತ್ತು ಮರಳು ಗಣಿಗಾರಿಕೆಗೆ ಲೈಸೆನ್ಸ್ ನೀಡಬಾರದು. ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ೫ ವರ್ಷಗಳೊಳಗಾಗಿ, ಸಂಪೂರ್ಣವಾಗಿ ನಿಷೇಧಿಸಬೇಕು.
 7. ಯಾವುದೇ ಮಾಲಿನ್ಯ ಉಂಟು ಮಾಡುವ (ಕೆಂಪು ಮತ್ತು ಕಿತ್ತಳೆ) ಹೊಸ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು. ಈಗ ಹಾಲಿ ಇರುವ ಇಂತಹ ಕೈಗಾರಿಕೆಗಳನ್ನು ೨೦೧೬ರ ವೇಳೆಗೆ ಶೂನ್ಯ ಮಾಲಿನ್ಯದ ಹಂತಕ್ಕಿಳಿಸುವುದು.
 8. ದಡ ಮೀರಿ ಹರಿಯದ (Run of the river) ನದೀ ಅಣೆಕಟ್ಟು ಯೋಜನೆಗಳಿಗೆ ೩ ಮೀ ಎತ್ತರದವರೆಗೆ ಮಾತ್ರ ಅನುಮತಿಸುವುದು.
 9. ಹೊಸ ಉಷ್ಣ ಸ್ಥಾವರಗಳು, ಬೃಹತ್ ಪವನ ವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಬಾರದು.
 10. ಹೊಸ ಹೆದ್ದಾರಿಗಳನ್ನು, ವೇಗ ಹೆದ್ದಾರಿಗಳನ್ನು ತಪ್ಪಿಸುವುದು. ಹೊಸ ರೈಲ್ವೆ ಲೈನುಗಳಿಗೆ, ಪ್ರಮುಖ ರಸ್ತೆಗಳಿಗೆ ಅವಕಾಶ ನೀಡಬಾರದು.
 11. ನೀಲಗಿರಿಯಂತಹ ಅನ್ಯ ಪ್ರದೇಶಿಯ ಏಕ ಜಾತಿ ನೆಡುತೋಪುಗಳಿಗೆ ಅವಕಾಶ ನೀಡಬಾರದು.

ಇದೇ ರೀತಿ ESZ-2, ESZ-3 ರಲ್ಲೂ ಅನೇಕ ನಿಯಂತ್ರಣಗಳನ್ನು ಮತ್ತು ಸಡಿಲ ಅವಕಾಶಗಳನ್ನು ವರದಿ ಕಲ್ಪಿಸಿದೆ. ಕೆಲವು ನಿರ್ದಿಷ್ಟ ಪ್ರದೇಶಗಳನ್ನು ‘ಹೋಗಬಹುದಾದ’ (Go Areas) ಪ್ರದೇಶಗಳೆಂದು ಮತ್ತೆ ಕೆಲವನ್ನು ‘ಹೋಗಬಾರದ’ (No-Go Areas) ಪ್ರದೇಶಗಳೆಂದು ಗುರುತಿಸುವುದು ಈ ವಲಯವಾರು ವಿಂಗಡಣೆಯ ಪ್ರಮುಖವಾದ ಉದ್ದೇಶ. ನೀರು ಹರಿವ ದಾರಿ, ಜಲಾಗಾರಗಳು ವಿಶೇಷ ಆವಾಸಗಳು, ಭೌಗೋಳಿಕ ನಿರ್ಮಾಣಗಳು ಜೀವವೈವಿಧ್ಯತೆಯ ಶ್ರೀಮಂತ ಪ್ರದೇಶಗಳು, ಪವಿತ್ರವನಗಳು ಇತ್ಯಾದಿಗಳು ಹೋಗಬಾರದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಮಾನ ಚಟುವಟಿಕೆಗಳ ಮಧ್ಯ ಪ್ರವೇಶ ಇರಲೇ ಬಾರದು. ಅನಿವಾರ್ಯವಾದರೆ ಕನಿಷ್ಟ ಪ್ರಮಾಣದಲ್ಲಿರಬೇಕು. ಮತ್ತೆ ಇನ್ನುಳಿದ ಪ್ರದೇಶಗಳಲ್ಲಿ ನಿಯಂತ್ರಿತ ಮಾನವ ಚಟುವಟಿಕೆಗಳಿಗೆ ಮತ್ತು ಸೀಮಿತ ಮಧ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರೋತ್ಸಾಹಕ ಸಲಹೆಗಳು :

ವರದಿಯಲ್ಲಿ ಕೇವಲ, ನಿಷೇಧಾತ್ಮಕ ಮತ್ತು ನಿಯಂತ್ರಣಗಳನ್ನಷ್ಟೇ ಸಲಹೆ ಮಾಡದೆ ಕೆಲವು ಪ್ರೋತ್ಸಾಹಕ ಮತ್ತು ಧನಾತ್ಮಕ ಸಲಹೆಗಳನ್ನು ನೀಡಲಾಗಿದೆ. (೧) ಸಾವಯವ ಕೃಷಿಗೆ ಪ್ರೋತ್ಸಾಹ ನಿಡುವುದು, (೨) ದೇಶಿಯ ದನಕರುಗಳನ್ನು ಸಾಕುವುದು. (೩) ಗೋಮಾಳ ಹುಲ್ಲುಗಾವಲುಗಳನ್ನು ಮರುಸ್ಥಾಪಿಸುವುದು, (೪) ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. (೫) ಅತಿ ಎತ್ತರದ ಕಣಿವೆ ಜೌಗು ಪ್ರದೇಶಗಳನ್ನು ಜಲಾಗಾರಗಳನ್ನು ರಕ್ಷಿಸುವುದು, (೬) ಸಾವಯವ ಗೊಬ್ಬರ, ಗೋಬರ್ ಅನಿಲ ತಯಾರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹ; (೭) ಸಂರಕ್ಷಣಾ ಸೇವಾ ಶುಲ್ಕವನ್ನು (Conservation Service Charges) ನೀಡುವ ಮೂಲಕ ಸಾಂಪ್ರದಾಯಿಕ ಬೆಳೆಗಳ ಬೀಜಗಳ ಸಂರಕ್ಷಣೆಗೆ, ಸ್ಥಳೀಯ ಮೀನಿನ ಪ್ರಭೇದಗಳನ್ನು ಕೆರೆಕೊಳ ನದಿಗಳಲ್ಲಿ ಸಾಕಲು ಪ್ರೋತ್ಸಾಹ ನೀಡಬೇಕೆಂದು ವರದಿ ಶಿಫಾರಸ್ಸು ಮಾಡುತ್ತದೆ.

ಅರಣ್ಯ ಹಕ್ಕು ಕಾಯ್ದೆಯನ್ನು ಅದರ ಮೂಲ ಆಶಯದಂತೆ ಜಾರಿಗೊಳಿಸಬೇಕು. ಅರಣ್ಯ ಸಂಪನ್ಮೂಲಗಳ ಮೇಲೆ ಜನಗಳಿಗಿರುವ ಸಾಮುದಾಯಿಕ ಹಕ್ಕು ಮತ್ತು ಅರಣ್ಯವಾಸಿಗಳ ಹಕ್ಕುಗಳು ಅವರಿಗೆ ನ್ಯಾಯವಾಗಿ ದೊರಕುವಂತಾಗಬೇಕು. ಜಂಟಿ ಅರಣ್ಯ ನಿರ್ವಹಣಾ ಕಾರ್ಯಕ್ರಮಗಳು ಪೂರ್ಣವಾಗಿ ಅರಣ್ಯವಾಸಿಗಳಿಗೆ ಹಸ್ತಾಂತರಿಸಲ್ಪಡಬೇಕು. ಸಾಂಪ್ರದಾಯಿಕ ಸಣ್ಣ ಖಾಸಗಿ ಭೂಮಿಯುಳ್ಳವರಿಗೆ ಅರಣ್ಯ ಹಕ್ಕು ಕಾಯ್ದೆ ಕೂಡ ಮಾಡುವ ಹಕ್ಕುಗಳನ್ನು ಮಾನ್ಯ ಮಾಡಬೇಕು. ಇವರು ತಮ್ಮ ಜಮೀನಿನಲ್ಲಿ ಹಸಿರು ಹೊದಿಕೆಯನ್ನು ನಿರ್ವಹಣೆ ಮಾಡಲು, ವಾರ್ಷಿಕ ಬೆಳೆಗಳಿಂದ ಬಹುವಾರ್ಷಿಕ ಬೆಳೆಗಳಿಗೆ ಬದಲಾಯಿಸಿಕೊಳ್ಳಲು ವಿವಿಧ ರೂಪಗಳ ಪ್ರೋತ್ಸಾಹಗಳನ್ನು ನೀಡಬೇಕು. ಖಾಸಗಿ ಭೂಮಿಗಳಲ್ಲಿ ಜೀವ ವೈವಿಧ್ಯತಾ ಅಂಶಗಳನ್ನು, ಪವಿತ್ರ ವನಗಳನ್ನು, ಸಮುದಾಯ ಅರಣ್ಯ ಸಂಪನ್ಮೂಲಗಳನ್ನು, ಜಂಟಿ ಅರಣ್ಯ ನಿರ್ವಹಣಾ ಭೂಮಿಗಳನ್ನು ನಿರ್ವಹಿಸಲು ಮತ್ತು ವನ್ಯ ಜೀವಿಗಳಿಂದುಂಟಾಗುವ ಹಾನಿಗಳಿಗೆ ಪರಿಹಾರ ನೀಡಲು ಜೀವವೈವಿಧ್ಯ ನಿರ್ವಹಣಾ ಮಂಡಳಿಗೆ ವಿಶೇಷ ನಿಧಿಯನ್ನು ನೀಡುವುದು.

ಶಾಲೆಗಳಲ್ಲಿ ಕೃಷಿ ಕಲಿಸುವಂತಾಗಬೇಕು. ಮಕ್ಕಳು ಮತ್ತು ಯುವಕರನ್ನು ಸೂಕ್ತ ಪರಿಸರ ಶಿಕ್ಷಣದ ಮೂಲಕ ಸ್ಥಳೀಯ ಪರಿಸರದೊಂದಿಗೆ ಮರುಜೋಡಿಸುವ ಕಾರ್ಯವಾಗಬೇಕು. ಸ್ಥಳೀಯ ಪರಿಸರದ ಸಮಸ್ಯೆಗಳಾದ ಅರಣ್ಯ ನಾಶ, ನೈಸರ್ಗಿಕ ಸಂಪನ್ಮೂಲಗಳ ಹಾಳುಗೆಡವುವಿಕೆ, ಭೂ, ಜಲ ಮತ್ತು ವಾಯು ಮಾಲಿನ್ಯ ಮುಂತಾದವುಗಳ ಬಗ್ಗೆ ಅವರು ಜಾಗೃತರಾಗಿ ಕ್ರಿಯಾಶೀಲರಾಗುವಂತೆ ಮಾಡಬೇಕು. ಹಸಿರು ತಂತ್ರಜ್ಞಾನಗಳನ್ನು ಪರಿಪಕ್ವಗೊಳಿಸಿ ಅವುಗಳು ಸಾಮಾನ್ಯ ಜನರಿಗೂ ದೊರಕುವಂತಾಗಬೇಕು.

ಪರಿಣಿತ ವರದಿ ಪಶ್ಚಿಮ ಘಟ್ಟಗಳ ಬಗ್ಗೆ ಸಂಗ್ರಹಿಸಿರುವ ದತ್ತಾಂಶ ಮಾಹಿತಿ ಕೋಶವನ್ನು, ತೆರೆದ ಪಾರದರ್ಶಕವಾದ ಎಲ್ಲ ಜನ ಭಾಗವಹಿಸುವ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ನಿರಂತರವಾಗಿ ಉನ್ನತೀಕರಿಸುವ ಕಾರ್ಯವಾಗಬೇಕು. ನದಿ ಜಲ ದತ್ತಾಂಶಗಳನ್ನು ಕಾಲಕಾಲಕ್ಕೆ ಉನ್ನತೀಕರಿಸಬೇಕು. ಸಂಶೋಧನಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಸೇರಿ ಪರಿಸರ ಹರಿವು ಸೂಚಕಗಳನ್ನು (Environmental Flow Assessment Indicators) ಗಳನ್ನು ನಿರೂಪಿಸುವಂತಾಗಬೇಕು.

ಪಶ್ಚಿಮ ಘಟ್ಟಗಳ ಜೀವಿ ಪರಿಸರಾತ್ಮಕ ಪ್ರಾಧಿಕಾರ (WEGA)

ಪರಿಣಿತ ತಂಡದ ಮತ್ತೊಂದು ಅತ್ಯಂತ ವಿವಾದಾತ್ಮಕ ಶಿಫಾರಸ್ಸು WEGA. ೬ ರಾಜ್ಯಗಳ ೪೪ ಜಿಲ್ಲೆಗಳ ೧೪೨ ತಾಲ್ಲೂಕುಗಳಲ್ಲಿ ಪರಿಣಿತ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವರದಿಯ ಘೋಷಣೆಗಳಿಂದ ಉದ್ಭವವಾಗುವ ಪರಿಸರಾತ್ಮಕ ಸವಾಲುಗಳನ್ನು ಉದ್ದೇಶಿಸಿ ಇಡೀ ಪ್ರದೇಶದಲ್ಲಿ ಕೆಲಸ ಮಾಡಲು ಒಂದು ಉನ್ನತ ಪ್ರಾಧಿಕಾರ ರಚನೆಯಾಗಬೇಕು. ಇದರೊಟ್ಟಿಗೆ ಪ್ರತಿ ರಾಜ್ಯದಲ್ಲೂ ಆ ರಾಜ್ಯಕ್ಕೆ ಸೀಮಿತವಾಗಿ ಪಶ್ಚಿಮ ಘಟ್ಟ ರಾಜ್ಯ ಪ್ರಾಧಿಕಾರಗಳನ್ನು ಹಾಗೂ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಜೀವಿ ಪರಿಸರಾತ್ಮಕ ಸಮಿತಿಗಳನ್ನು (District Ecology Committees) ರಚಿಸಲು ಪರಿಣಿತ ತಂಡ ಶಿಫಾರಸ್ಸು ಮಾಡಿದೆ. ಪರಿಸರ ಸಂರಕ್ಷಣಾ ಕಾಯಿದೆ-೧೯೮೬ರ ಸೆಕ್ಷನ್ ೩ರ ಅಡಿಯಲ್ಲಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಪ್ರಾಧಿಕಾರವನ್ನು ಒಂದು ಶಾಸನಾತ್ಮಕ ಸಂಸ್ಥೆಯಾಗಿ ರಚಿಸಬೇಕು. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಈ ರಾಜ್ಯ ಪ್ರಾಧಿಕಾರಗಳ ಮೂಲಕ ಜಾರಿ ಮಾಡಬಹುದು. ಕೇಂದ್ರ ಮತ್ತು ರಾಜ್ಯ ಪ್ರಾಧಿಕಾರಗಳು ಈಗಾಗಲೇ ಜಾರಿಯಲ್ಲಿರುವ ೮-೧೦ ಪರಿಸರ ಕಾಯಿದೆಗಳು ನಿಯಮಾವಳಿಗಳು ಹಾಗೂ ನೋಟಿಫಿಕೇಷನ್‌ಗಳಿಗನುಸಾರವಾಗಿ ಪೂರಕವಾಗಿ ಕಾರ್ಯ ನಿರ್ವಹಿಸುವುದು.

ಸುಮಾರು ೨೪ ಸದಸ್ಯರನ್ನುಳ್ಳ ಪಶ್ಚಿಮ ಘಟ್ಟ ಜೀವಿ ಪರಿಸರಾತ್ಮಕ ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವವರು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಇಲ್ಲವೆ ಪಶ್ಚಿಮ ಘಟ್ಟ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕೊಡುಗೆ ನೀಡಿರುವ ಖ್ಯಾತ ಪರಿಸರ ಸಂರಕ್ಷಣಾ ಪರಿಣಿತರಾಗಿರುವುದು. ಇದರಲ್ಲಿ ವಿವಿಧ ವಿಷಯಗಳ ಪರಿಣಿತರು,  ಜೀವಿ ಪರಿಸರಶಾಸ್ತ್ರ ಸಂಪನ್ಮೂಲ ಪರಿಣಿತರು, ಬುಡಕಟ್ಟು ಪ್ರತಿನಿಧಿಗಳು, ನಾಗರಿಕ ಸಮಾಜದ ಮುಖಂಡರು ಹಾಗೂ ಪರಿಸರ ಅರಣ್ಯ ಯೋಜನೆ ಇತ್ಯಾದಿ ಇಲಾಖೆಗಳ, ಮಂಡಳಿಗಳ, ಪ್ರಾಧಿಕಾರಗಳ ಸದಸ್ಯರು ಇಲ್ಲಿ ಪದನಿಮಿತ್ತ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದೆ.

ಇದೇ ಮಾದರಿಯಲ್ಲಿ ಪಶ್ಚಿಮ ಘಟ್ಟದ ೬ ರಾಜ್ಯಗಳಲ್ಲಿ ‘ರಾಜ್ಯ ಪಶ್ಚಿಮ ಘಟ್ಟ ಪ್ರಾಧಿಕಾರ’ (SWGA) ಗಳನ್ನು ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಥಾಪಿಸುವುದು. ೧೧ ಜನ ಸದಸ್ಯರನ್ನುಳ್ಳ ಈ ರಾಜ್ಯ ಪ್ರಾಧಿಕಾರಗಳಿಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಅಥವಾ ಪಶ್ಚಿಮ ಘಟ್ಟ ಪ್ರದೇಶದ ಖ್ಯಾತ ಜೀವಿ ಪರಿಸರ ತಜ್ಞರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕಾಗುತ್ತದೆ. ಇದಲ್ಲದೆ ಖ್ಯಾತ ಪರಿಸರ ಕಾನೂನು ತಜ್ಞರು, ಜೀವಿ ಪರಿಸರ ತಜ್ಞರು, ೪-೬ ಖ್ಯಾತ ನಾಗರೀಕ ಸಮಾಜದ ಪ್ರತಿನಿಧಿಗಳು ಈ ರಾಜ್ಯಮಟ್ಟದ ಪ್ರಾಧಿಕಾರದಲ್ಲಿ ಅಧಿಕಾರೇತರ ಸದಸ್ಯರಾಗಿರುತ್ತಾರೆ. ಇದಲ್ಲದೆ ಅರಣ್ಯ ಮತ್ತು ಪರಿಸರ ಸಚಿವಾಚಲಯದ ಅಧಿಕಾರಿಗಳು ರಾಜ್ಯ ಯೋಜನಾ ಆಯೋಗದ ಪ್ರತಿನಿಧಿ, ಮಾಲಿನ್ಯ ನಿಯಂತ್ರಣ ಮಂಡಳಿ, ಜೀವವೈವಿಧ್ಯ ಮಂಡಳಿಗಳ ಅಧ್ಯಕ್ಷರುಗಳು ಈ ಪ್ರಾಧಿಕಾರದಲ್ಲಿ ಪದನಿಮಿತ್ತ ಸದಸ್ಯರಾಗಿರುತ್ತಾರೆ.

ರಾಜ್ಯ ಪ್ರಾಧಿಕಾರಗಳು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಜೀವಿ ಪರಿಸರಾತ್ಮಕ ಸಮಿತಿಗಳನ್ನು Wಉಇಂ ಮಾರ್ಗದರ್ಶನದಲ್ಲಿ ರಚಿಸುವುದು. ಈ ಸಮಿತಿಯಲ್ಲಿ ವಿಷಯತಜ್ಞರು, ಸಂಪನ್ಮೂಲ ಪರಿಣಿತರು ಇರತಕ್ಕದ್ದು. ಈ ಸಮಿತಿ ತನ್ನ ವ್ಯಾಪ್ತಿ ಪ್ರದೇಶದಲ್ಲಿ ಬರುವ ಜೀವಿ ಪರಿಸರಾತ್ಮಕ ಸೂಕ್ಷ್ಮ ವಲಯದ ಬಗೆಗಿನ ವಿವಾದಗಳನ್ನು ಪರಿಶೀಲಿಸಿ ಮೇಲಿನ ಸಮಿತಿಗೆ ವರದಿ ಮಾಡುವ ಪ್ರಾಥಮಿಕ ಸಮಿತಿಯಾಗಿದೆ.

ಈ ಎಲ್ಲ ಹಂತದ ಪ್ರಾಧಿಕಾರಗಳು/ಸಮಿತಿಗಳ ಅಧಿಕಾರಾವಧಿ ೫ ವರ್ಷಗಳದ್ದಾಗಿರುತ್ತದೆ.

ಕೇರಳದ ಅಥಿರಪಲ್ಲಿ ಮತ್ತು ಕರ್ನಾಟಕದ ಗುಂಡ್ಯ ಜಲವಿದ್ಯುತ್ ಯೋಜನೆಗಳು

ಪರಿಣಿತ ವರದಿ ESZ-1 ಮತ್ತು ESZ-2 ಗಳಲ್ಲಿ ದೊಡ್ಡ ಸಂಗ್ರಹಣಾ ಅಣೆಕಟ್ಟುಗಳಿಗೆ ಅವಕಾಶ ನೀಡಬಾರದೆಂದು ಶಿಫಾರಸ್ಸು ಮಾಡಿದೆ. ಅಥಿರಪಲ್ಲಿ ಅಣೆಕಟ್ಟು ESZ-1 ವಲಯದಲ್ಲಿ ಬರುತ್ತದೆ. ಕರ್ನಾಟಕ ಪವರ್ ಕಾರ್ಪೊರೇಶನ್ ತನ್ನ ಮೂಲ ಪ್ರಸ್ತಾವನೆಯಿಂದ ಹೊಂಗಡಹಳ್ಳ ಅಣೆಕಟ್ಟನ್ನು ಕೈಬಿಟ್ಟು ಗುಂಡ್ಯ ಜಲವಿದ್ಯುತ್ ಯೋಜನೆಯಿಂದ ಈಗ ಮುಳುಗಡೆಯಾಗಬಹುದಾದ ಪ್ರದೇಶವನ್ನು ಶೇ. ೮೦ ರಷ್ಟು ಕಡಿಮೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ ಈಗಲೂ ಈ ಯೋಜನೆಯ ಭಾಗವಾಗಿರುವ ಬೆಟ್ಟ ಕುಮರಿ ಅಣೆಕಟ್ಟು ESZ-1 ರಲ್ಲಿ ಬರುತ್ತದೆ. ಇದಲ್ಲದೆ ಈ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಕಾಯಿದೆಯನ್ವಯ ಬುಡಕಟ್ಟು ಮತ್ತು ಗಿರಿಜನರ ಸಾಂಪ್ರದಾಯಿಕ ಹಕ್ಕುಗಳನ್ನು ಮಾನ್ಯ ಮಾಡುವ ಕಾರ್ಯ ಪೂರ್ಣಗೊಂಡಿಲ್ಲ.

ಅಥಿರಪಲ್ಲಿ ಉನ್ನತ ಸಂರಕ್ಷಣಾ ಮೌಲ್ಯವುಳ್ಳ ಜೀವಿವೈವಿಧ್ಯತೆಯ ಶ್ರೀಮಂತ ಪ್ರದೇಶ. ಈ ಪ್ರದೇಶದ ಜೀವಾವಾಸದ ಮೇಲೆ ಮತ್ತು ಜೀವಿವೈವಿಧ್ಯತೆಯ ಮೇಲೆ ಈ ಯೋಜನೆ ಉಂಟು ಮಾಡುವ ದುಷ್ಪರಿಣಾಮಗಳನ್ನು ಸರಿಪಡಿಸಲಾಗುವುದಿಲ್ಲ. ಈ ಪ್ರದೇಶದಲ್ಲಿ ಅತಿವಿಶಿಷ್ಟವಾದ ಮೀನಿನ ಪ್ರಭೇದಗಳಿವೆ. ಅದರಲ್ಲಿ ೫ ಹೊಸ ಪ್ರಭೇದಗಳು, ೨೨ ಅಂತಃಸೀಮಿತ ಪ್ರಭೇದಗಳು ಮತ್ತು ೯ ಅತ್ಯಂತ ವಿನಾಶದ ಅಪಾಯದಲ್ಲಿರುವ ಪ್ರಭೇಗಳಾಗಿವೆ. ಇದಲ್ಲದೆ ಪಶ್ಚಿಮ ಘಟ್ಟದ ಬೇರಾವ ಪ್ರದೇಶದಲ್ಲೂ ಕಾಣದಿರುವ ವಿಶಿಷ್ಟ ನದೀ ನೀರಿನ ಜೀವಾವಾಸ ಇಲ್ಲಿದೆ. ನಿರ್ಮಾಣದ ದುಬಾರಿ ವೆಚ್ಚ ಅಲ್ಲಿರುವ ಮೂಲ ಕಾಡಾರ್ ಬುಡಕಟ್ಟು ಜನರ ಜೀವಾವಾಸದ ಮೇಲಾಗುವ ಪರಿಣಾಮ ಮತ್ತು ಕೇರಳ ಹೈಕೋರ್ಟ್ ೧೭-೧೦-೨೦೦೧ರಲ್ಲಿ KSEBಗೆ ನೀಡಿರುವ ನಿರ್ದೇಶನ ಇವೆಲ್ಲವನ್ನೂ ಪರಿಶೀಲಿಸಿ ಅಥಿರಪಲ್ಲಿ ಮತ್ತು ವಝಾಚಲ ಪ್ರದೇಶವನ್ನು ಹೀಗಿರುವಂತೆ ಸಂರಕ್ಷಿಸಲು ಶಿಫಾರಸ್ಸು ಮಾಡುತ್ತದೆ. ಚಾಲಕುಡಿ ನದಿಯನ್ನು ಮೀನುಗಳ ಜೀವಿವೈವಿಧ್ಯತೆಯನ್ನು ಹೊಂದಿರುವ ಪ್ರದೇಶವೆಂದು ಘೋಷಿಸಿ ಅದನ್ನು ಕೇರಳದ ‘ಉಡುಂಬಾಂಚೂಲ’ ತಾಲ್ಲೂಕಿನ ಮಾದರಿಯಲ್ಲಿ ನಿರ್ವಹಿಸಬೇಕು. ಆದ್ದರಿಂದ MOEF ಅಥಿರಪಲ್ಲಿ ಯೋಜನೆಗೆ ಅನುಮತಿಸಬಾರದೆಂದು ಶಿಫಾರಸ್ಸು ಮಾಡಿದೆ.

೨ ಹಂತಗಳಲ್ಲಿ ೩ ಮಟ್ಟಗಳಲ್ಲಿ ಜಾರಿಯಾಗಲಿರುವ ಗುಂಡ್ಯಾ ಜಲವಿದ್ಯುತ್ ಯೋಜನೆ ನದೀ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಹೊದಿಕೆ ಬದಲಾವಣೆಗಳನ್ನುಂಟು ಮಾಡುತ್ತದೆ. ಮುಳುಗಡೆಯಾಗುವ ಪ್ರದೇಶವಲ್ಲದೆ ಕಟ್ಟಡ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಈ ಪ್ರದೇಶದ ಜೀವಾವಾಸ ಮತ್ತು ಜೀವಿವೈವಿಧ್ಯತೆಯ ಮೇಲೆ ಅಗಾಧ ಪರಿಣಾಮಗಳನ್ನುಂಟು ಮಾಡಲಿದೆ. ಈ ಯೋಜನೆಯಿಂದಾಗಿ ಈ ಪ್ರದೇಶದ ಜಲಾಡಳಿತ ವಿನ್ಯಾಸ ಬದಲಾಗಲಿದೆ. ಬೆಟ್ಟಕುಮರಿ ಅಣೆಕಟ್ಟಿನಿಂದ ನೀರನ್ನು ತಿರುಗಿಸುವುದರಿಂದ ದೇವಾಲಯದ ಪಟ್ಟಣ ಸುಬ್ರಮಣ್ಯಕ್ಕೆ ನೀರೊದಗಿಸುತ್ತಿರುವ ಕುಮಾರಧಾರ ನದಿಗೆ ನೀರು ಕಡಿಮೆಯಾಗಲಿದೆ. ಈಗ ವರ್ಷವಿಡೀ ಹರಿಯುತ್ತಿರುವ ನದಿಗಳು ಕೆಲವೆ ಋತುಗಳಲ್ಲಿ ಹರಿಯುವ ನದಿಗಳಾಗಿ ರೂಪಾಂತರಗೊಳ್ಳುವ ಅಪಾಯವಿದೆ. ಪ್ರಾಥಮಿಕ ಅರಣ್ಯ ಹೊದಿಕೆಯನ್ನು ಹೊಂದಿರುವ ಪ್ರದೇಶದಲ್ಲಿ ನೆಲಾಂತರಾಳದ (Underground) ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಸುರಂಗಗಳು ಬರುತ್ತವೆ. ಇದು ಅಪೇಕ್ಷಣೀಯವಲ್ಲ. ಏಕೆಂದರೆ ಇದು ಗುಂಡ್ಯಾ ನದೀಪಾತ್ರದಲ್ಲಿ ಉಳಿದುಕೊಂಡಿರುವ ಕೆಲವೇ ಪ್ರಾಥಮಿಕ ನಿತ್ಯಹರಿದ್ವರ್ಣದ ಪ್ರದೇಶವನ್ನು ಹಾಳುಗೆಡಹುವ ಅಪಾಯವಿದೆ. ಈ ಪ್ರದೇಶದ ಭೂ ಹೊದಿಕೆಯ ಬದಲಾವಣೆಯಿಂದ ಅಲ್ಲಿಯ ಜಲಾನಯನ ಪ್ರದೇಶದ ಮೇಲೆ ಹಾಗೂ ನದಿಗಳ ನೀರಿನ ತಿರುವುವಿಕೆಯಿಂದುಂಟಾಗುವ ಪರಿಣಾಮಗಳ ಬಗ್ಗೆ ಸ್ಪಷ್ಟವಾದ ಚಿತ್ರಣವಿಲ್ಲ. ಆದ್ದರಿಂದ ಗುಂಡ್ಯಾ ಜಲವಿದ್ಯುತ್ ಯೋಜನೆಯಿಂದ ಗಣನೀಯ ಪ್ರಮಾಣದಲ್ಲಿ ಜೀವವೈವಿಧ್ಯತಾ ನಷ್ಟ ಮತ್ತು ಪರಿಸರ ಪರಿಣಾಮ ಉಂಟಾಗಲಿರುವುದರಿಂದ ಈ ಯೋಜನೆಯ ಜಾರಿಗೆ ಅನುಮತಿ ನೀಡಬಾರದೆಂದು ಪರಿಣಿತ ಸಮಿತಿ ಶಿಫಾರಸ್ಸು ಮಾಡಿದೆ.

ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧು ದುರ್ಗ್ ಬಗ್ಗೆ

ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧುದುರ್ಗ್ ಜಿಲ್ಲೆಗಳಲ್ಲಿ ಈಗ ನಡೆಯುತ್ತಿರುವ ಗಣಿಗಾರಿಕೆ, ವಿದ್ಯುತ್ ಉತ್ಪಾದನೆ ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ಶಿಫಾರಸ್ಸುಗಳನ್ನು ಮಾಡಲು ಪರಿಣಿತ ಸಮಿತಿಯನ್ನು ಕೋರಲಾಗಿತ್ತು. ಮಹಾರಾಷ್ಟ್ರದ ಈ ಎರಡೂ ಜಿಲ್ಲೆಗಳು ಜೀವಿ ಪರಿಸರಾತ್ಮಕವಾಗಿ ಅತ್ಯಂತ ಶ್ರೀಮಂತವಾದ ಆದರೆ ಅತ್ಯಂತ ನಾಜೂಕಾದ ಜಿಲ್ಲೆಗಳಾಗಿವೆ. ಆದ್ದರಿಂದ ನಾವು ಈ ಜಿಲ್ಲೆಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಮುಂದುವರಿಯಬೇಕಾಗಿದೆ. ಈ ಜಿಲ್ಲೆಗಳ ಪೂರ್ವ ಭಾಗಗಳು ಮಾತ್ರ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುತ್ತವೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶಗಳಲ್ಲಿ ESZ-1 ಮತ್ತು ESZ-2 ವಲಯಗಳಲ್ಲಿ ಹೊಸ ಗಣಿಗಾರಿಕೆಗೆ ಅನಿರ್ದಿಷ್ಟಾವಧಿ ನಿಲುಗಡೆಯನ್ನು ಈ ಕೂಡಲೇ ಜಾರಿ ಮಾಡಲು ಶಿಫಾರಸ್ಸು ಮಾಡಿದೆ. ESZ-1 ನಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ೨೦೧೬ರ ವೇಳೆಗೆ ಹಂತಗಳಲ್ಲಿ ಹೊರಹಾಕುವಂತೆ ಶಿಫಾರಸ್ಸು ಮಾಡಲಾಗಿದೆ. ESZ-2 ರಲ್ಲಿ ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಅತ್ಯಂತ ಕಟ್ಟುನಿಟ್ಟಾದ ನಿಯಮಗಳನುಸಾರ ಪರಿಣಾಮಕಾರಿ ಸಾಮಾಜಿಕ ಆಡಿಟ್‌ನೊಂದಿಗೆ ಮುಂದುವರಿಸಬಹುದೆಂದು ಹೇಳಿದೆ. ESZ-1 ಮತ್ತು ESZ-2 ರಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಘಟಕಗಳನ್ನು ಸೇರಿಸಿಕೊಂಡಂತೆ ಯಾವುದೇ ಕೆಂಪು ಮತ್ತು ಕಿತ್ತಳೆ ಮಾದರಿ ಕೈಗಾರಿಕೆಗಳನ್ನು ಹೊಸದಾಗಿ ಸ್ಥಾಪಿಸಲು ಅವಕಾಶ ನೀಡಬಾರದೆಂದು ಹೇಳಿದೆ. ಈಗ ESZ-1 ಮತ್ತು ESZ-2 ರಲ್ಲಿ ಹಾಲಿ ನಡೆಯುತ್ತಿರುವ ಕೆಂಪು ಮತ್ತು ಕಿತ್ತಳೆ ಕೈಗಾರಿಕೆಗಳನ್ನು ಶೂನ್ಯ ಮಾಲಿನ್ಯವುಂಟು ಮಾಡುವ ಕಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ೨೦೧೬ರ ವೇಳೆಗೆ ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ.

ರತ್ನಗಿರಿ ಮತ್ತು ಸಿಂಧು ದುರ್ಗ್‌ನ ಮೈದಾನ ಮತ್ತು ಕರಾವಳಿ ತೀರ ಪ್ರದೇಶಗಳ ಜೀವಿ ಪರಿಸರಾತ್ಮಕ ಸೂಕ್ಷ್ಮತೆ ಬಗೆಗಿನ ದತ್ತಾಂಶಗಳು ಅತ್ಯಂತ ಸೀಮಿತವಾಗಿ ಲಭ್ಯವಾಗಿತ್ತು. ತಂಡ ಸೀಮಿತವಾದ ತನಿಖೆ ನಡೆಸಿದಾಗ ಈ ಪ್ರದೇಶಗಳ ಮೇಲೆ ತೀವ್ರವಾದ ಪರಿಸರಾತ್ಮಕ ಮತ್ತು ಸಾಮಾಜಿಕ ಒತ್ತಡಗಳಿರುವುದನ್ನು ಗಮನಿಸಿದೆ. ಈ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಉಂಟಾಗಿರುವ ಸಂಚಿತ ಪರಿಣಾಮ ವಿಶ್ಲೇಷಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾದ ಅಗತ್ಯವನ್ನು ತಂಡದ ವರದಿ ಒತ್ತಿ ಹೇಳಿದೆ. ಮಹಾರಾಷ್ಟ್ರದ ರಾಯಘಡ ಮತ್ತು ಗೋವಾ ರಾಜ್ಯದೊಂದಿಗೆ ಸೇರಿಕೊಂಡಂತೆ ಈ ಅಧ್ಯಯನ ನಡೆಯಬೇಕು. ಅದು ಕೇವಲ ಒಂದು ತಾಂತ್ರಿಕ ಪ್ರಧಾನ ಅಧ್ಯಯನ ಮಾತ್ರವಾಗದೆ ಅದು ಸ್ಥಳೀಯ ಜನರ ಆಳವಾದ ಪರಿಸರ ಜ್ಞಾನ ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು ಪ್ರತಿಬಿಂಬಿಸುವಂತಿರುವುದು ತುಂಬಾ ಅಗತ್ಯವೆಂದು ಹೇಳಿದೆ. ಕೇಂದ್ರದ MOEF ಮಂತ್ರಾಲಯ ರಾಜ್ಯ ಅರಣ್ಯ ಇಲಾಖೆಗೆ ಈ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡಲು ಬುಡಕಟ್ಟು ಕಲ್ಯಾಣ ಇಲಾಖೆಗೆ ಸಕ್ರಿಯವಾಗಿ ನೆರವು ನೀಡಬೇಕೆಂದು ತಿಳಿಸಿದೆ. ಇದಲ್ಲದೆ MOEF ಈ ಪ್ರದೇಶದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜೀವವೈವಿಧ್ಯತಾ ನಿರ್ವಹಣಾ ಸಮಿತಿಗಳ ಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಬೇಕು. ರತ್ನಗಿರಿ ಮತ್ತು ಸಿಂಧು ದುರ್ಗ್ ಜಿಲ್ಲೆಗಳ ಧಾರಣ ಸಾಮರ್ಥ್ಯಗಳ ಅಧ್ಯಯನ ಮತ್ತು ವಿಶ್ಲೇಷಣೆ ನಡೆಯುವ ತನಕ ಕೆಂಪು ಮತ್ತು ಕಿತ್ತಳೆ ಮಾದರಿ ಕೈಗಾರಿಕೆಗಳ ಸ್ಥಾಪನೆ, ಗಣಿಗಾರಿಕೆ ಮತ್ತು ವಿದ್ಯುತ್, ಉತ್ಪಾದನಾ ಘಟಕಗಳ ಸ್ಥಾಪನೆಗೆ ಈಗ ಹಾಲಿ ಇರುವ ಸಂಪೂರ್ಣ ತಡೆಯನ್ನು ಮುಂದುವರಿಸಲು ಸಲಹೆ ಮಾಡಿದೆ. ಧಾರಣಾ ಸಾಮರ್ಥ್ಯದ ವಿಶ್ಲೇಷಣೆಯ ನಂತರ ಪರವಾನಗಿ ನೀಡುವ ಬಗ್ಗೆ ಆಲೋಚಿಸಬಹುದೆಂದು ಸಲಹೆ ಮಾಡಿದೆ.

ಗೋವಾ ಗಣಿಗಾರಿಕೆ ಬಗ್ಗೆ

ಗೋವಾದಲ್ಲಿ ಗಣಿಗಾರಿಕೆಗೆ ಸದ್ಯ ಸಂಪೂರ್ಣ ತಡೆ ಜಾರಿಯಲ್ಲಿದೆ. MOEF ಗೋವಾದಲ್ಲಿ ಗಣಿಗಾರಿಕೆಗೆ ಹೊಸ ಲೈಸೆನ್ಸ್‌ಗಳನ್ನು ನೀಡುವ ಬಗ್ಗೆ ಮರುಪರಿಶೀಲನೆ ನಡೆಸಲು ಪರಿಣಿತ ತಂಡದಿಂದ ಸಲಹೆಗಳನ್ನು ಕೋರಿತ್ತು. ಈ ಬಗ್ಗೆ ವಿವರವಾದ ಅಧ್ಯಯನ ನಡೆಸಿದ ತಂಡ ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ/ವಲಯಗಳನ್ನು ಗಣಿಗಾರಿಕೆಯಿಂದ ಮುಕ್ತಗೊಳಿಸಬೇಕೆಂದು ಶಿಫಾರಸ್ಸು ಮಾಡಿದೆ. ಗೋವಾದ ಪಶ್ಚಿಮ ಘಟ್ಟಗಳ ಹಾಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಂದರೆ ರಾಷ್ಟ್ರೀಯ ಉದ್ಯಾನಗಳಲ್ಲಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಪರಿಣಿತ ತಂಡ ಮರುಗುರುತಿಸಿರುವ ಅತಿಹೆಚ್ಚು ಸೂಕ್ಷ್ಮತೆ ಹೊಂದಿರುವ ESZ-1 ಪ್ರದೇಶಗಳಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಶಿಫಾರಸ್ಸು ಮಾಡಿದೆ. ಈ ಪ್ರದೇಶಗಳಲ್ಲಿ ಈಗಾಗಲೇ ಗಣಿಗಾರಿಕೆಗೆ ನೀಡಲಾಗಿರುವ ಪರಿಸರಾತ್ಮಕ ಅನುಮತಿಯ ಪ್ರದೇಶಗಳಲ್ಲಿ ಪ್ರತಿವರ್ಷ ಶೇ. ೨೫ ಗಣಿಗಾರಿಕೆಯನ್ನು ೨೦೧೬ರವರೆಗೆ ಕಡಿಮೆ ಮಾಡುತ್ತಾ ಹೋಗಬೇಕು. ಆ ಅವಧಿಗೆ ESZ-1 ರಲ್ಲಿ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲತಕ್ಕದ್ದು. ಗಣಿಗಾರಿಕೆಯ ಮುಕ್ತಾಯದ ನಂತರ ಈ ಪ್ರದೇಶಗಳಲ್ಲಿ ಪರಿಸರಾತ್ಮಕ ಪುನಶ್ಚೇತನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ESZ-2 ವಲಯಗಳಲ್ಲಿ ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಮುಂದುವರಿಸಬಹುದು. ಆದರೆ ಗಣಿಗಾರಿಕಾ ಪ್ರದೇಶದ ಪರಿಸ್ಥಿತಿ ಉತ್ತಮಗೊಳ್ಳುವವರೆಗೂ ಯಾವುದೇ ಹೊಸ ಗಣಿಗಳಿಗೆ ಪರವಾನಗಿ ನೀಡಬಾರದು. ಗಣಿ ಲೈಸೆನ್ಸ್‌ನಲ್ಲಿ ನಿಗದಿ ಪಡಿಸಲಾಗಿದ್ದ ಅದಿರಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದಿರನ್ನು ತೆಗೆದಿರುವ ಲೈಸೆನ್ಸ್‌ಗಳನ್ನು ಕೂಡಲೇ ರದ್ದು ಮಾಡುವುದು. ESZ-1 ರಲ್ಲಿ ಕಾರ್ಯ ನಡೆಸುತ್ತಿರುವ ಲೀಸ್‌ಗಳನ್ನು ೨೦೧೬ರವೇಳೆಗೆ ರದ್ದುಪಡಿಸುವುದು. ಕಾರ್ಯ ನಡೆಸದಿರುವ ಲೀಸ್‌ಗಳನ್ನು ಕೂಡಲೇ ರದ್ದು ಮಾಡುವುದು. ವನ್ಯಜೀವಿ ಅಭಯಾರಣ್ಯ ಪ್ರದೇಶಗಳ ಗಣಿ ಲೀಸ್‌ಗಳನ್ನು ಶಾಶ್ವತವಾಗಿ ರದ್ದುಪಡಿಸುವುದು. ಕುಡಿಯುವ ನೀರಿಗೆ ಉಪಯೋಗಿಸುವ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಗಣಿ ಲೀಸ್‌ಗಳನ್ನು ಅಂತ್ಯಗೊಳಿಸುವುದು.

ಗೋವಾದಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಕೆಲವು ನದಿ ಭಾಗಗಳಲ್ಲಿ ಮರಳು ಗಣಿಗಾರಿಕಾ ರಜೆ ಜಾರಿಯಾಗಬೇಕು ಮತ್ತು ಮರಳು ಗಣಿಗಾರಿಕೆಯ ಆಡಿಟ್ ನಡೆಯಬೇಕು. ಒಟ್ಟಾರೆ ಸರಾಸರಿ ನಿರ್ವಹಣೆಯನ್ನು ನಿದೀ ನಿರ್ವಹಣೆಯಿಂದ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಈ ಉದ್ದೇಶಕ್ಕೆ ಪ್ರತ್ಯೇಕ ಶಾಸನದ ಅಗತ್ಯವಿದೆ. ನದೀ ಮತ್ತು ಉಪನದೀಗಳ ದಂಡೆಗಳಲ್ಲಿ ಮಾನವ ಮಧ್ಯಪ್ರವೇಶದಿಂದ ಹಾಳಾಗಿರುವ ಪ್ರದೇಶಗಳಲ್ಲಿ ಸ್ವಾಭಾವಿಕ ನದೀ ದಂಡೆ ಸಸ್ಯರಾಶಿಯನ್ನು ಪುನಶ್ಚೇತನಗೊಳಿಸಬಲ್ಲಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಗೋವಾದಲ್ಲಿ ಗಣಿ ಲೀಸ್ ಅರ್ಜಿಗಳನ್ನು ಪರಿಶೀಲಿಸುವಾಗ ಪ್ರತಿ ಲೀಸ್‌ಗೂ ಪ್ರತ್ಯೇಕ ‘ಪರಿಸರ ಪರಿಣಾಮ ಅಂದಾಜು’ (EIA) ನಡೆಸುವುದಕ್ಕಿಂತಲೂ ಸಂಚಿತ ಪರಿಸರ ಪರಿಣಾಮ ಅಂದಾಜು ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯ ಮಾಡಬೇಕು.

ಅಭಿವೃದ್ಧಿಯ ಹೊಸ ಪರಿಭಾಷೆ

‘ಪಶ್ಚಿಮ ಘಟ್ಟ ಜೀವಿ ಪರಿಸ್ಥಿತಿ ಪರಿಣಿತ ತಂಡ’ ಬಹಳ ಮುಖ್ಯವಾಗಿ ಅಭಿವೃದ್ಧಿ ಮತ್ತು ಸಂರಕ್ಷಣೆಯ ಹೊಸ ಪರಿಕಲ್ಪನೆಗಳ ಬಗ್ಗೆ ಮಾತನಾಡುತ್ತದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ನಾವಿಂದು ಅನುಸರಿಸುತ್ತಿರುವ ನೀತಿ ‘ಹೊರಹಾಕುವ/ಹೊರಗಿಡುವ ಅಭಿವೃದ್ಧಿ’ (Development by Exclusion) ಮತ್ತು ಅದರ ಜೊತೆ ಜೊತೆಗೆ ‘ಹೊರಗಿಡುವ ಸಂರಕ್ಷಣೆ’ (Conservation by Exclusion) ರಾಜ್ಯಾಂಗದ ೭೩ ಮತ್ತು ೭೪ನೇ ತಿದ್ದುಪಡಿಗಳು ಅಭಿವೃದ್ದಿಯ ಬಗ್ಗೆ ತೀರ್ಮಾನಿಸುವ ಹಕ್ಕನ್ನು ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಮತ್ತು ನಗರ ಪಾಲಿಕೆಗಳಿಗೆ ವರ್ಗಾಯಿಸಿ ಬಹಳ ಕಾಲವೇ ಆಗಿದೆ. ಆದರೂ ಇಂದಿಗೂ ಎಲ್ಲ ಅಭಿವೃದ್ಧಿಯ ತೀರ್ಮಾನಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಭಾರತೀಯ ಸಮಾಜ ಅತ್ಯಂತ ಶ್ರೀಮಂತವಾದ ನಿಸರ್ಗ ಸಂರಕ್ಷಣಾ ಸಂಪ್ರದಾಯಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ಅಳಿದುಳಿದ ಮೂಲ ಸಸ್ಯರಾಶಿಗಳನ್ನು ಪವಿತ್ರ ವನಗಳಲ್ಲಿ ಕಾಪಿಟ್ಟು ಸಂರಕ್ಷಿಸಲಾಗಿದೆ. ಆದರೆ ಅಧಿಕೃತ ಸಂರಕ್ಷಣಾ ಪ್ರಯತ್ನಗಳಾದಂತಹ ‘ಸಂರಕ್ಷಿತ ಪ್ರದೇಶಗಳ’ ಪರಿಕಲ್ಪನೆ ಇದಕ್ಕೆ ತದ್ವಿರುದ್ಧವಾಗಿದೆ. ಅಧಿಕಾರಿಗಳು ಜೀವಿವೈವಿಧ್ಯತೆಯ ವಿನಾಶಕ್ಕೆ ಸ್ಥಳೀಯ ಜನರೇ ಪ್ರಾಥಮಿಕವಾಗಿ ಜವಾಬ್ದಾರರು ಮತ್ತು ಕಾರಣಕರ್ತರು ಎಂದು ನಂಬಿದ್ದಾರೆ. ಆದ್ದರಿಂದ ಅವರನ್ನು ಆ ಪ್ರದೇಶಗಳಿಂದ ಹೊರ ಹಾಕುವುದಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕೆಂದು ಅವರು ಪ್ರತಿಪಾದಿಸುತ್ತಾರೆ.

ಆದರೆ ಇಂದು ಅಭಿವೃದ್ಧಿ ಯೋಜನೆಗಳನ್ನು ಪೆಡಸಾದ ಚೌಕಟ್ಟಿನಲ್ಲಿರಿಸಬಾರದು. ಅವುಗಳನ್ನು ಸ್ಥಳೀಯ ಪರಿಸ್ಥಿತಿಗೆ ಮತ್ತು ಕಾಲ ವಿಶಿಷ್ಟ ಸ್ಥಿತಿಗೆ ಜೋಡಿಸಿ ಹೊಲೆಯಬೇಕು. ಇವುಗಳಲ್ಲಿ ಜನರು ಪೂರ್ಣವಾಗಿ ಪಾಲ್ಗೊಳ್ಳುವಂತಾಗಬೇಕು. ಈ ಮಾದರಿಯ ಅಭಿವೃದ್ಧಿಯನ್ನು ‘ಮಾರ್ಪಾಟು ಸಹನಿರ್ವಹಣೆ’ (Adaptive Co-management) ಎಂದು ಕರೆಯಲಾಗುತ್ತದೆ. ಯಾವುದು ಹೋಗಬಹುದಾದ (Go) ಮತ್ತು ಯಾವುದು ಹೋಗಬಾರದ (No-go) ಅಭಿವೃದ್ಧಿಯ ಆಯ್ಕೆಯಾಗಬೇಕೆಂಬುದನ್ನು ಪ್ರಕರಣವಾರು ತೀರ್ಮಾನಿಸಬೇಕಲ್ಲದೆ ಸಾರಾಸಗಟಾಗಿ ತೀರ್ಮಾನಿಸಬಾರದು. ಹೀಗೆ ತೀರ್ಮಾನಿಸುವಾಗ ಸ್ಥಳೀಯ ಜನರ ಆಶೋತ್ತರಗಳು, ಸಾಮಾಜಿಕ ಆರ್ಥಿಕ ಸನ್ನಿವೇಶ ಮತ್ತು ವಿಶಿಷ್ಟವಾದ ಪರಿಸರಾತ್ಮಕ ಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ತೀರ್ಮಾನಿಸುವುದು. ಇಂತಹ ಒಂದು ‘ಮಾರ್ಪಾಟು ಸಹನಿರ್ವಹಣಾ’ ವ್ಯವಸ್ಥೆ ಸಂರಕ್ಷಣೆಯನ್ನು ಅಭಿವೃದ್ಧಿಯೊಂದಿಗೆ ಜೋಡಿಸುತ್ತದೆ ಮತ್ತು ಅವುಗಳನ್ನು ಹೊಂದಿಕೆಯಾಗದ ಪ್ರತ್ಯೇಕ ಗುರಿಗಳನ್ನಾಗಿ ನೋಡುವುದಿಲ್ಲ. ಸಾಮಾಜಿಕ ಜೀವಿ ಪರಿಸರಾತ್ಮಕ ವ್ಯವಸ್ಥೆಗಳ ಆಡಳಿತಕ್ಕೆ ‘ಮಾರ್ಪಾಟು ಸಹನಿರ್ವಹಣಾ’ ಕ್ರಮ ಒಂದು ಹೊರಹೊಮ್ಮುತ್ತಿರುವ ವಿನೂತನ ಕ್ರಮವಾಗಿದೆ. ಮಾರ್ಪಾಟು ಸಹನಿರ್ವಹಣಾ ಕ್ರಮ ಪ್ರಧಾನವಾಗಿ ಈ ಕೆಳಕಂಡ ಅಂಶಗಳನ್ನೊಳಗೊಂಡಿರುತ್ತದೆ.

 • ಮಾಡುತ್ತಾ ಕಲಿಯುವುದಕ್ಕೆ ಪ್ರಾಧಾನ್ಯತೆ
 • ವಿವಿಧ ಜ್ಞಾನ ಪದ್ಧತಿಗಳ ಸಂಯೋಜನೆ
 • ಸಮುದಾಯ ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಂತಗಳಲ್ಲಿ ಅಧಿಕಾರ ಹಂಚಿಕೆ ಮತ್ತು ಸಹಕಾರ
 • ನಿರ್ವಹಣೆಯಲ್ಲಿ ನಮ್ಯತೆ

ಈ ಅಂಶಗಳು ಸ್ಥಳ ವಿಶಿಷ್ಟ ಆಡಳಿತ ವಿಕಾಸಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತವೆ. ಇದರಲ್ಲಿ ರೂಪಿಸಲಾಗುವ ಕಾರ್ಯತಂತ್ರಗಳು ಸಾಮಾಜಿಕ ಮತ್ತು ಜೀವಿ ಪರಿಸರಾತ್ಮಕ ಹಿಮ್ಮಾಹಿತಿಗಳಿಗೆ ಸೂಕ್ಷ್ಮವಾಗಿರುತ್ತವೆ ಮತ್ತು ವ್ಯವಸ್ಥೆಯ ಪುನಶ್ಚೇತನ ಮತ್ತು ಸುಸ್ಥಿರತೆ ಕಡೆ ಮುಖ ಮಾಡಿರುತ್ತವೆ. ಮಾರ್ಪಾಟು ನಿರ್ವಹಣೆಯ ಇತರ ಕೆಲವು ಮುಖ್ಯ ವಿಷಯಗಳೆಂದರೆ,

 • ವಿಧಾನ ಮತ್ತು ಫಲಿತಾಂಶಗಳ ಮೌಲ್ಯಮಾಪನ ಕ್ರಮಗಳನ್ನು ಉತ್ತಮಪಡಿಸುವುದು.
 • ಸಾಮಾಜಿಕ-ಜೀವಿ ಪರಿಸರಾತ್ಮಕ ವ್ಯವಸ್ಥೆಗಳ ಆಡಳಿತದಲ್ಲಿ ವಿಶ್ವಾಸ ನಿರ್ಮಾಣ, ಅರ್ಥಪೂರ್ಣ ಒಡನಾಟಗಳು, ಸಾಮಾಜಿಕ ಬಂಡವಾಳದ ಪಾತ್ರ ಮತ್ತು ಅಧಿಕಾರಕ್ಕೆ ಹೆಚ್ಚಿನ ಒತ್ತನ್ನು ನೀಡುವುದು.

ಆದರೆ ನಾವಿಂದು ಸಂರಕ್ಷಣೆಯನ್ನು ಅಭಿವೃದ್ಧಿಯಿಂದ ಬಲಾತ್ಕಾರವಾಗಿ ದೂರತಳ್ಳಿರುವ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡು, ಒದ್ದಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ನೀತಿಗಳು ಕೆಲವು ಪ್ರದೇಶಗಳಲ್ಲಿ ಜಾಗರೂಕತೆಯೇ ಇಲ್ಲದ ಅಭಿವೃದ್ಧಿಯನ್ನು ಹಾಗೂ ಮತ್ತೆ ಕೆಲವು ಪ್ರದೇಶಗಳಲ್ಲಿ ವಿವೇಚನಾರಹಿತ ಸಂರಕ್ಷಣೆಯನ್ನು ಪ್ರೋತ್ಸಾಹಿಸುತ್ತಿವೆ. ಇದರಿಂದಾಗಿ ನಾವಿಂದು ಜೀವಿ ಪರಿಸರಾತ್ಮಕ ವಿನಾಶದ ಮಹಾಸಾಗರಗಳಲ್ಲಿ ಸಂರಕ್ಷಿತ ಪ್ರದೇಶಗಳೆಂಬ ದ್ವೀಪಗಳನ್ನು ನಿರ್ಮಿಸುತ್ತಿದ್ದೇವೆ. ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಹುಲ್ಲು ಕಡ್ಡಿಯನ್ನು ತೆಗೆಯಲು ಬಿಡದಿರುವುದು ಎಷ್ಟು ಅಸಮರ್ಪಕವಾದದ್ದೋ ಅವುಗಳ ಹೊರಭಾಗದಲ್ಲಿ ಮಾಲಿನ್ಯ ನಿಯಂತ್ರಣದ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಅಷ್ಟೆ ಅಸಮರ್ಪಕವಾದ ನಡವಳಿಕೆಯಾಗಿದೆ. ಈಗ ಹಾಲಿ ಅನುಸರಿಸಲಾಗುತ್ತಿರುವ ‘ಜಾಗರೂಕತೆ ಇಲ್ಲದೆ ಅಭಿವೃದ್ಧಿಪಡಿಸಿ-ವಿವೇಚನಾರಹಿತವಾಗಿ ಸಂರಕ್ಷಿಸಿ’ (Develop recklessly – Conserve thoughtlessly) ಎಂಬ ನೀತಿಯನ್ನು ಕೈಬಿಟ್ಟು ಅದರ ಸ್ಥಾನದಲ್ಲಿ ‘ಸುಸ್ಥಿರವಾಗಿ ಅಭಿವೃದ್ಧಿಪಡಿಸಿ-ವಿವೇಕಾಪೂರ್ಣವಾಗಿ ಸಂರಕ್ಷಿಸಿ’ (Develop Sustainably – Conserve thoughtfully) ಎಂಬ ನೀತಿಯನ್ನು ಪ್ರತಿಷ್ಠಾಪಿಸಬೇಕಾಗಿದೆ. ನಾವಿಂದು ಪರಸ್ಪರ ಪೂರಕವಾದ ಅಭಿವೃದ್ಧಿ ಮತ್ತು ಸಂರಕ್ಷಣಾ ಮಾದರಿಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸ್ಥಳೀಯ ಸನ್ನಿವೇಶಕ್ಕೆ ಅಭಿವೃದ್ಧಿ ಮತ್ತು ಸಂರಕ್ಷಣಾ ಅಭ್ಯಾಸಗಳನ್ನು ಅತ್ಯಂತ ಸೂಕ್ಷ್ಮವಾಗಿ ಜೋಡಿಸುವ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳ ಸಂಪೂರ್ಣ ಭಾಗವಹಿಸುವಿಕೆ ತೀರಾ ಅಗತ್ಯವಾಗಿದೆ. ಒಟ್ಟಾರೆಯಾಗಿ ಪರಿಣಿತ ತಂಡ ಸೂಕ್ಷ್ಮ ಪೊರೆಗಳುಳ್ಳ (Layered nuanced participatory) ಪಾಲ್ಗೊಳ್ಳುವ ವಿಧಾನದ ಅಳವಡಿಕೆಯನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ತುಂಡರಿಸಲ್ಪಟ್ಟ ಗಡೀ ರೇಖೆಗಳಿಗೆ ಅನಗತ್ಯವಾದ ಪ್ರಾಮುಖ್ಯತೆ ಪ್ರಾಪ್ತವಾಗದೆ ಪಶ್ಚಿಮ ಘಟ್ಟಗಳ ಹೊರ ಭಾಗದಲ್ಲಿ ಬರುವ ಪ್ರದೇಶಗಳಲ್ಲಿಯೂ ಮಾರ್ಪಾಟು ಸಹನಿರ್ವಹಣಾ ಮಾದರಿಯನ್ನು ಅನುಸರಿಸಲು ಶಿಫಾರಸ್ಸು ಮಾಡಲಾಗಿದೆ.

ಕೃಪೆ: ಧರಣಿಮಂಡಲ