ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಪ್ರಮುಖ ನಿರೂಪಣೆಗಳು

– ಸಿ. ಯತಿರಾಜು

ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ‘ಪರಿಸರ ಪರಿಣಿತರ ತಂಡ’ವನ್ನು ನೇಮಕ ಮಾಡಿದಾಗ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದವರು ಪ್ರೊ. ಜಯರಾಮ್ ರಮೇಶ್‌ರವರು. ೧೮ ತಿಂಗಳಲ್ಲಿ ತಂಡ ತನ್ನ ಅಂತಿಮ ವರದಿಯನ್ನು ಸಲ್ಲಿಸುವ ಹೊತ್ತಿಗೆ ಮಂತ್ರಿಗಳ ಬದಲಾವಣೆಯಾಗಿತ್ತು. ಜಯರಾಮ್ ರಮೇಶ್‌ರವರ ಸ್ಥಾನದಲ್ಲಿ ಶ್ರೀಮತಿ ಜಯಂತಿ ನಟರಾಜನ್ ವಿರಾಜಮಾನರಾಗಿದ್ದರು. ಮಂತ್ರಾಲಯದಲ್ಲಿ ಮಂತ್ರಿಗಳ ಬದಲಾವಣೆಯೊಂದಿಗೆ ಮಂತ್ರಾಲಯದ western ghatsಕೆಲವು ವಿಚಾರಗಳ ಬಗ್ಗೆ ಸರ್ಕಾರದ ಮನೋಭಾವ ಮತ್ತು ದೃಷ್ಟಿಕೋನದಲ್ಲಿ ಅದೆಂತಹ ಬದಲಾವಣೆ ಬರಬಲ್ಲದು ಎಂಬುದಕ್ಕೆ ಇದೊಂದು ಶ್ರೇಷ್ಠ ನಿದರ್ಶನ. ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ಪರಿಸರ ಪರಿಣಿತ ವರದಿ ಹೊಸ ಮಂತ್ರಿಗಳಿಗೆ ಸರ್ವಥಾ ರುಚಿಸಲಿಲ್ಲ. ಹಾಗಾಗಿ ಅವರು ಅದನ್ನು ಬಹಿರಂಗವಾಗಿ ಸಾರ್ವಜನಿಕವಾಗಿ ಬಿಡುಗಡೆ ಮಾಡುವುದನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅತ್ಯಂತ ಬದ್ಧತೆಯಿಂದ ಕೆಲಸ ಮಾಡುವ ಪರಿಸರ ಕಾರ್ಯಕರ್ತರ ಪರಿಶ್ರಮದಿಂದಾಗಿ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲೇಬೇಕಾಯಿತು.

ಈ ವರದಿ ಬಿಡುಗಡೆ ಮಾಡಿದ ನಂತರ ಅದನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಿ ಜಾರಿಗೊಳಿಸುವ ಯಾವ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಮಾಡಲಿಲ್ಲ. ಕನಿಷ್ಠ ಅದನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಅಂಗೀಕರಿಸುವ ಇಲ್ಲವೆ ಸಂಪೂರ್ಣವಾಗಿ ತಿರಸ್ಕರಿಸುವ ಗೋಜಿಗೂ ಸರ್ಕಾರ ಹೋಗಲಿಲ್ಲ. ಅದರ ಬಗ್ಗೆ ಸರ್ಕಾರ ತನ್ನ ಸ್ಪಷ್ಟವಾದ ಅಭಿಪ್ರಾಯ ಮತ್ತು ತೀರ್ಮಾನವನ್ನು ನೀಡದೆ ಹೋದದ್ದು ಅತ್ಯಂತ ದುರದೃಷ್ಟಕರವಾದ ಬೆಳವಣಿಗೆ. ಸಾರ್ವಜನಿಕ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು ವರದಿಯನ್ನು ೧೭-೫-೧೨ರ ನಂತರ ಮಂತ್ರಾಲಯದ ಜಾಲತಾಣದಲ್ಲಿ ಪ್ರಕಟಪಡಿಸಲಾಯಿತು. ಬಲಾತ್ಕರಿಸಿದ ನಂತರ ಬಹಿರಂಗಗೊಂಡ ವರದಿಯ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ/ರಾಜ್ಯಸರ್ಕಾರಗಳ/ಪಣದಾರ ಸಮುದಾಯಗಳ ಅಭಿಪ್ರಾಯಗಳನ್ನು ಕೋರಲಾಯಿತು. ಹೀಗೆ ಮಾಡುವ ಮೂಲಕ ಪ್ರೊ. ಮಾಧವ್ ಗಾಡ್ಗೀಳ್ ಸಮಿತಿ ಸಂಬಂಧಿಸಿದ ರಾಜ್ಯ ಸರ್ಕಾರಗಳೊಂದಿಗೆ ನಡೆಸಿದ ಸಮಾಲೋಚನೆಗಳ ಬಗ್ಗೆ, ಸಾರ್ವಜನಿಕರೊಂದಿಗೆ ಮತ್ತು ಪಣದಾರರ ಅಭಿಪ್ರಾಯ ಸಂಗ್ರಹಣೆ ಬಗ್ಗೆ ತನ್ನ ಅಪನಂಬಿಕೆಯನ್ನು ಅತ್ಯಂತ ಸ್ಪಷ್ಟವಾಗಿ ರುಜುವಾತು ಮಾಡಿತು. ಇದು ಇಷ್ಟಕ್ಕೆ ನಿಲ್ಲಲಿಲ್ಲ.

ಉನ್ನತ ಹಂತದ ಕಾರ್ಯತಂಡದ ರಚನೆ

ಮಂತ್ರಾಲಯದ ಮೇಲಿನ ಕೋರಿಕೆಗೆ ಎಲ್ಲ ಸಂಬಂಧಿಸಿದ ರಾಜ್ಯ ಸರ್ಕಾರಗಳು ತಮ್ಮ ವಿರೋಧವನ್ನು, ಆಕ್ಷೇಪಣೆಗಳನ್ನು ಅಧಿಕೃತವಾಗಿ ದಾಖಲಿಸಿದವು. ಇದಲ್ಲದೆ ಸುಮಾರು ೧೭೫೦ ಪ್ರತಿಕ್ರಿಯೆಗಳು ಮಂತ್ರಾಲಯಕ್ಕೆ ಬಂದವು. ಅದರಲ್ಲಿ ಅತ್ಯಂತ ಪ್ರಮುಖವಾಗಿ ಪಶ್ಚಿಮ ಘಟ್ಟಗಳ ಸಂಕೀರ್ಣವಾದ ಅಂತರರಾಜ್ಯ ಸಂಬಂಧಗಳ ಬಗ್ಗೆ, ಪಾರಿಸಾರಿಕ ಸೂಕ್ಷ್ಮವಲಯಗಳ ಮರುಗುರುತಿಸುವಿಕೆಯ ಬಗ್ಗೆ ಮತ್ತು ಆ ವಲಯಗಳಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ವ್ಯಾಪಕವಾಗಿ ಪ್ರತಿಕ್ರಿಯೆಗಳು ಬಂದವು. ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಶೀಲಿಸಿ ತನ್ನ ತೀರ್ಮಾನವನ್ನು ಕೈಗೊಳ್ಳಬಹುದಿತ್ತು. ಆದರೆ ಅದು ಹಾಗೆ ಮಾಡದೆ ತನ್ನ ಜವಾಬ್ದಾರಿಯನ್ನು ಮತ್ತೊಂದು ಸಮಿತಿಗೆ ವರ್ಗಾಯಿಸಲು ಮುಂದಾಯಿತು. ದಿನಾಂಕ ೧೭-೮-೨೦೧೨ರಂದು ಕೇಂದ್ರ ಸರ್ಕಾರ ಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳು, ಯೋಜನಾ ಆಯೋಗದ ಸದಸ್ಯರೂ ಆದ ಶ್ರೀ ಕೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ‘ಉನ್ನತ ಹಂತದ ಕಾರ್ಯತಂಡ’ (High Level Working Groupವನ್ನು ರಚಿಸಿತು. ದೆಹಲಿ ವಿಶ್ವವಿದ್ಯಾಲಯದ ಸಿ.ಆರ್.ಬಾಲು, ಒಔಇಈ ನ ಮಾಜಿ ವಿಶೇಷ ಕಾರ್ಯದರ್ಶಿ ಜೆ.ಎಂ. ಮಾವಸ್ಕರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್‌ನ ಮಾಜಿ ನಿರ್ದೇಶಕ ಕಾಂಚನ್ ಚೋಪ್ರಾ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಇಂಟಿಗ್ರೇಟಿವ್ ಮೆಡಿಸಿನ್‌ನ ದರ್ಶನ್ ಶಂಕರ್ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್‌ನ ನಿರ್ದೇಶಕಿ ಸುನಿತಾ ನರೇನ್, ಡೆಹ್ರಾಡೂನ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೈನ್ಸಿಂಗ್‌ನ ಪಿ.ಎಸ್. ರಾಯ್, ಯೋಜನಾ ಆಯೋಗದ ವಿಶೇಷ ಆಹ್ವಾನಿತ ಇಂದ್ರಾಣಿ ಚಂದ್ರಶೇಖರ್ MOEF ನ ಜಂಟಿ ಕಾರ್ಯದರ್ಶಿ ಅಜಯ್ ತ್ಯಾಗಿ ಮತ್ತು ಅಡಿಷನಲ್ ಡಿ.ಜಿ.ಆಫ್ ಫಾರೆಸ್ಟ್ (ವೈಲ್ಡ್ ಲೈಫ್) ಜಗದೀಶ್ ಕಿಶ್ವನ್ ರವರುಗಳನ್ನು ಈ ತಂಡದ ಗೌರವಾನ್ವಿತ ಸದಸ್ಯರುಗಳನ್ನಾಗಿ ನೇಮಕ ಮಾಡಿತು. ಹೀಗೆ ಮಾಡುವ ಮೂಲಕ “ಪಶ್ಚಿಮ ಘಟ್ಟ ಪರಿಸರ ಪರಿಣಿತರ ತಂಡ” ನೀಡಿದ ವರದಿ ಮ್ಯಾಲಿನ್ನೊಂದು ವರದಿಯ ತಯಾರಿಕೆಗೆ ನಾಂದಿ ಹಾಡಿತು.

ಉನ್ನತ ಹಂತದ ಕಾರ್ಯ ತಂಡದ ಪರಿಶೀಲನಾ ವಿಷಯಗಳು.

ಮತ್ತೊಂದು ಪ್ರಖ್ಯಾತನಾಮರ ಉನ್ನತ ಹಂತದ ಕಾರ್ಯ ತಂಡಕ್ಕೆ ಈ ಕೆಳಕಂಡ ೫ ವಿಷಯಗಳನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಕೋರಲಾಯಿತು.
1. ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ರಾಜ್ಯ ಸರ್ಕಾರಗಳಿಂದ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಂದ, ಪಣದಾರರಿಂದ ಸ್ವೀಕೃತ ಗೊಂಡಿರುವ ಪ್ರತಿಕ್ರಿಯೆಗಳ ಬೆಳಕಿನಲ್ಲಿ ಸಮಗ್ರವಾಗಿ ಮತ್ತು ಬಹುಶಿಸ್ತೀಯ ಸ್ವರೂಪದಲ್ಲಿ ಪಶ್ಚಿಮಘಟ್ಟಗಳ ಪರಿಸರ ಪರಿಣಿತರ ವರದಿಯನ್ನು ಪರಿಶೀಲಿಸುವುದು. ಹೀಗೆ ಪರಿಶೀಲನೆ ನಡೆಸುವಾಗ ಈ ಕೆಳಕಂಡ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಲು ಸೂಚಿಸಲಾಯಿತು.
ಎ) ಅತ್ಯಮೂಲ್ಯವಾದ ಜೀವ ವೈವಿಧ್ಯತೆ, ವನ್ಯಜೀವಿಗಳು ಮತ್ತು ಸಸ್ಯ ಪ್ರಾಣಿ ಸಂಪತ್ತನ್ನು ಸಂರಕ್ಷಿಸಿಕೊಳ್ಳುತ್ತಲೆ ಹಾಗೂ ಅವುಗಳ ಮುಂದುವರಿದ ನಷ್ಟವನ್ನು ತಡೆಗಟ್ಟಿ ಆ ಪ್ರದೇಶದ ಸಮಾನ ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು.
ಬಿ) ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಐಕ್ಯತೆಯನ್ನು (Integrity) ಸಮಾನ ಆರ್ಥಿಕ ಸಾಮಾಜಿಕ ಬೆಳವಣಿಗೆಯೊಂದಿಗೆ ಸಮತೂಗಿಸಿ ಕೊಳ್ಳುತ್ತಲೆ ಸ್ಥಳೀಯರು ಮತ್ತು ಮೂಲನಿವಾಸಿಗಳು, ಬುಡಕಟ್ಟು ಜನ, ಅರಣ್ಯವಾಸಿಗಳು ಹಾಗೂ ಸ್ಥಳೀಯ ಸಮುದಾಯಗಳ ಹಕ್ಕುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು ಖಾತ್ರಿಪಡಿಸುವುದು.
ಸಿ) ವಾಯುಗುಣ ಬದಲಾವಣೆಯಿಂದ ಪಶ್ಚಿಮ ಘಟ್ಟಗಳ ಪರಿಸರದ ಮೇಲುಂಟಾಗುವ ಪ್ರಭಾವಗಳು ಮತ್ತು ಪರಿಣಾಮಗಳು.
ಡಿ) ಪಶ್ಚಿಮ ಘಟ್ಟಗಳ ಕೆಲವು ಸ್ಥಳಗಳನ್ನು ವಿಶ್ವ ಪಾರಂಪರಿಕ ಸ್ಥಾನಗಳೆಂದು ಮಾನ್ಯ ಮಾಡುವುದರಿಂದ ಪಶ್ಚಿಮ ಘಟ್ಟಗಳ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿ ಮೇಲಾಗಬಹುದಾದ ಪ್ರಭಾವಗಳು
ಇ) ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ವಿಚಾರಗಳಲ್ಲಿ ಕೇಂದ್ರ-ರಾಜ್ಯ ಸಂಬಂಧ ಬಗ್ಗೆ ಉಂಟಾಗ ಬಹುದಾದ ರಾಜ್ಯಾಂಗೀಯ ಪ್ರಭಾವಗಳು.
2. ಪಶ್ಚಿಮ ಘಟ್ಟಗಳ ೬ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮತ್ತು ಇತರ ಪಣದಾರರೊಂದಿಗೆ ಅದರಲ್ಲೂ ವಿಶೇಷವಾಗಿ ಪರಿಸರವಾದಿ ಗಳೊಂದಿಗೆ ಮತ್ತು ಸಂರಕ್ಷಣಾ ತಜ್ಞರೊಂದಿಗೆ ಸಮಾಲೋಚಿಸುವುದು.
3. ಪರಿಣಿತ ವರದಿಯ ಮುಂದಿನ ಕಾರ್ಯಯೋಜನೆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
4. ಕೇಂದ್ರ ಸರ್ಕಾರ ಸಮಿತಿಯ ಪರಿಶೀಲನೆಗೆ ಕಳುಹಿಸುವ ಬೇರಾವುದೇ ವಿಚಾರದ ಬಗ್ಗೆ.
5. ಪರಿಣಿತ ವರದಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸಮಗ್ರವಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆಯನ್ನು ಸಲ್ಲಿಸುವುದು.

ಕಾರ್ಯತಂಡದ ಕಾರ್ಯ ವಿಧಾನ

ಉನ್ನತ ಹಂತದ ಕಾರ್ಯ ತಂಡ ತನ್ನ ಅಧಿಕಾರಾವಧಿಯಲ್ಲಿ ೧೦ ಸಭೆಗಳನ್ನು ೪ ಕ್ಷೇತ್ರ ವೀಕ್ಷಣೆಗಳನ್ನು ನಡೆಸಿತು. ಪಶ್ಚಿಮ ಘಟ್ಟಗಳು ಹಬ್ಬಿರುವ ೬ ರಾಜ್ಯಗಳ ಪೈಕಿ ೪ ರಾಜ್ಯಗಳಿಗೆ ಖುದ್ದು ಭೇಟಿ ನೀಡಿ ಸರ್ಕಾರದ ಮುಖ್ಯಮಂತ್ರಿಗಳೊಂದಿಗೆ ಅಥವಾ ಅವರ ಪ್ರತಿನಿಧಿ ಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿತು. ಪರಿಣಿತ ವರದಿಯನ್ನು ಅತ್ಯಂತ ಜಾಗ್ರತೆಯಿಂದ ಪರಿಶೀಲಿಸಿತು. ೬ ರಾಜ್ಯ ಸರ್ಕಾರಗಳಿಂದ ೧೨ ಕೇಂದ್ರ ಮಂತ್ರಾಲಯಗಳಿಂದ ಮತ್ತು ಪಣದಾರರಿಂದ ಬಂದ ಲಿಖಿತ ವರದಿಗಳನ್ನು ಪರಿಶೀಲನೆ ಮಾಡಿತು. ಪಶ್ಚಿಮ ಘಟ್ಟ ಪ್ರದೇಶಗಳ ರಾಜ್ಯ ಶಾಸನ ಸಭಾ ಸದಸ್ಯರು ಮತ್ತು ಪಾರ್ಲಿಮೆಂಟ್ ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿ ೮ ತಿಂಗಳ ಅವಧಿಯಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ “ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶ” ಗಳನ್ನು ಗುರುತಿಸಲು ವೈಜ್ಞಾನಿಕವಾದ, ವಸ್ತುನಿಷ್ಠವಾದ ಮತ್ತು ಕಾರ್ಯ ಸಾಧ್ಯವಾದ ಮಾರ್ಗವನ್ನು ವಿಕಾಸಪಡಿಸಲು ಮತ್ತು ಅವುಗಳನ್ನು ಹೆಚ್ಚು ಸ್ಪಷ್ಟವಾಗಿ ಗ್ರಾಮವನ್ನು ಘಟಕವನ್ನಾಗಿಟ್ಟುಕೊಂಡು ಮರುಗುರುತಿಸಲು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (NRSC) ಸಹಾಯವನ್ನು ಪಡೆದುಕೊಂಡಿತು. ಜೈವಿಕ ಶ್ರೀಮಂತಿಕೆ, ಛಿದ್ರೀಕರಣ, ಮಾನವ ಜನಸಾಂದ್ರತೆ, ಸಂರಕ್ಷಿತ ಪ್ರದೇಶಗಳು ಮತ್ತು ವಿಶ್ವ ಪಾರಂಪರಿಕ ತಾಣಗಳು, WII ನಲ್ಲಿ ಲಭ್ಯವಿರುವ ಹುಲಿ ಮತ್ತು ಆನೆ ಸಂಚಾರದ ಓಣಿಗಳ ದತ್ತಾಂಶ ಗಣಗಳನ್ನು (Dataset) ಈಗಾಗಲೇ DBT-ISRO ಯೋಜನೆಯ ಭಾಗವಾಗಿ ಸಂಗ್ರಹಿಸಲಾಗಿತ್ತು. ಈ ದತ್ತಾಂಶಗಳನ್ನು ಸೂಕ್ಷ್ಮವಾದ 24m ರೆಸಲ್ಯೂಷನ್ ಆಧಾರದಲ್ಲಿ ಅಳವಡಿಸಿಕೊಂಡು ಜೀವಿಪರಿಸರಾತ್ಮ ಸೂಕ್ಷ್ಮ ಪ್ರದೇಶಗಳನ್ನು ಗ್ರಾಮ ಹಂತದಲ್ಲಿ ಗುರುತಿಸಲಾಯಿತು. ಈ ಭೂಬಾಹ್ಯಾಕಾಶೀಯ (Geospatial) ವಿಶ್ಲೇಷಣೆಯನ್ನು IIಖS ಡೆಹ್ರಾಡೂನ್ ನಿರ್ದೇಶಕರಾದ ಡಾ. ವೈ.ವಿ.ಎನ್. ಕೃಷ್ಣಮೂರ್ತಿ ನೇತೃತ್ವದ ಒಂದು ಸಮಿತಿಯಿಂದ ಪರಿಣಿತ ಪರಿಶೀಲನೆಗೊಳಪಡಿಸಿ ಅಂತಿಮಗೊಳಿಸಲಾಯಿತು.

ಕಾರ್ಯ ತಂಡದ ಅತ್ಯಂತ ಪ್ರಮುಖವಾದ ಶಿಫಾರಸ್ಸುಗಳು

ಕಾರ್ಯ ತಂಡ ಪಶ್ಚಿಮ ಘಟ್ಟಗಳ ವ್ಯಾಪ್ತಿಯನ್ನು 8°0′-22°26’N ಮತ್ತು 72°55′-78°11’E ಅಕ್ಷಾಂಶ ಮತ್ತು ರೇಖಾಂಶಗಳ ನಡುವಿರುವ ೧,೬೪,೨೮೦ ಚ.ಕಿ.ಮೀ. ವಿಸ್ತೀರ್ಣವುಳ್ಳ ಪ್ರದೇಶವೆಂದು ಗುರುತಿಸಿದೆ. ಇದು ೬ ರಾಜ್ಯಗಳ ೧೮೮ ತಾಲ್ಲೂಕುಗಳಲ್ಲಿ ಹರಡಿಕೊಂಡಿದೆ. ಈ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗೆ ನಿಸ್ಸಂದಿಗ್ಧವಾಗಿ ತುರ್ತು ಗಮನ ಹರಿಸಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ ಎಂಬುದು ಅದರ ಪ್ರಧಾನ ಶಿಫಾರಸ್ಸು.

ಕಾರ್ಯತಂಡ ಪಶ್ಚಿಮ ಘಟ್ಟದ ಒಟ್ಟು ಪ್ರದೇಶವನ್ನು ೨ ಭಾಗಗಳಾಗಿ ವಿಭಜನೆ ಮಾಡಿದೆ.

 1. ನೈಸರ್ಗಿಕ ಭೂದೃಶ್ಯಾವಳಿ (Natural Landscape)
 2. ಸಾಂಸ್ಕೃತಿಕ ಭೂದೃಶ್ಯಾವಳಿ (Cultural Landscape)

ಪಶ್ಚಿಮ ಘಟ್ಟಗಳ ಒಟ್ಟು ವಿಸ್ತಾರದ ಶೇ. ೪೧.೫೬ರಷ್ಟು ಭಾಗವನ್ನು ನೈಸರ್ಗಿಕ ಭೂದೃಶ್ಯಾವಳಿ ಎಂದು ಗುರುತಿಸಲಾಗಿದೆ. ನೈಸರ್ಗಿಕ ಭೂದೃಶ್ಯಾವಳಿಯ ಸುಮಾರು ೬೦ ಸಾವಿರ ಚ.ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಅಂದರೆ ಪಶ್ಚಿಮ ಘಟ್ಟ ಪ್ರದೇಶದ ಒಟ್ಟು ವಿಸ್ತಾರದ ಶೇ.೩೭ರಷ್ಟು ಪ್ರದೇಶವನ್ನು ಕಾರ್ಯತಂಡ “ಜೀವಿಪರಿಸಾರಾತ್ಮಕ ಸೂಕ್ಷ್ಮ ಪ್ರದೇಶ”ವೆಂದು (Ecologically Sensitive Area) ಗುರುತಿಸಿದೆ. ಈ ಸೂಕ್ಷ್ಮ ಪ್ರದೇಶ ೬ ರಾಜ್ಯಗಳಲ್ಲಿ ೧೫೦೦ ಕಿ.ಮೀ. ಉದ್ದದವರೆಗೂ ನಿರಂತರವಾಗಿ ಹಬ್ಬಿಕೊಂಡಿದೆ ಮತ್ತು ಸಂರಕ್ಷಿತ ಪ್ರದೇಶಗಳನ್ನು ಹಾಗೂ ವಿಶ್ವ ಪಾರಂಪರಿಕ ತಾಣಗಳನ್ನೂ ಒಳಗೊಂಡಿದೆ. Kudremukh_National_Park,_Western_Ghats,_Karnatakaಈ ಪ್ರದೇಶ ಜೈವಿಕ ಶ್ರೀಮಂತಿಕೆ ಹೊಂದಿರುವ ಪ್ರದೇಶವಾಗಿದೆ. ಕಡಿಮೆ ಛಿದ್ರೀಕರಣ ಮತ್ತು ಜನಸಾಂದ್ರತೆಯನ್ನು ಹೊಂದಿದೆ. ಇದಲ್ಲದೆ ಹುಲಿ ಮತ್ತು ಆನೆಗಳ ಓಡಾಟದ ಓಣಿಗಳನ್ನು ಹೊಂದಿದೆ. ಆದ್ದರಿಂದ ಕಾರ್ಯತಂಡ ಈ ಪ್ರದೇಶಗಳಲ್ಲಿ ನಿಷೇಧಿಸಬೇಕಾದ ಮತ್ತು ನಿಯಂತ್ರಿಸಬೇಕಾದ ಚಟುವಟಿಕೆಗಳ ಒಂದು ಪಟ್ಟಿಯನ್ನು ನೀಡಿದೆ. ಪರಿಸರ ವ್ಯವಸ್ಥೆಯ ಮೇಲೆ ಗರಿಷ್ಠ ಪ್ರಮಾಣದ ಮಧ್ಯಪ್ರವೇಶ ಮತ್ತು ವಿನಾಶಕ ಪರಿಣಾಮಗಳನ್ನುಂಟು ಮಾಡುವ ಚಟುವಟಿಕೆಗಳನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ಆಳ್ವಿಕೆಯೊಂದನ್ನು ಈ ಪಾರಿಸಾರಿಕ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೆ ತರಬೇಕೆಂದು ಕಾರ್ಯತಂಡ ಶಿಫಾರಸ್ಸು ಮಾಡುತ್ತದೆ.

ಪಶ್ಚಿಮ ಘಟ್ಟಗಳ ಉಳಿದ ಶೇ ೫೮.೪೪ರಷ್ಟು ಪ್ರದೇಶವನ್ನು ಕಾರ್ಯತಂಡ ‘ಸಾಂಸ್ಕೃತಿಕ ಭೂದೃಶ್ಯಾವಳಿ’ ಎಂದು ಗುರುತಿಸಿದೆ. ೧೦೪೨೮೦ ಚ.ಕಿ.ಮೀ. ವಿಸ್ತೀರ್ಣದ ಈ ಪ್ರದೇಶ ಕೃಷಿ ಮೈದಾನಗಳನ್ನು ಜಲಾಗಾರಗಳನ್ನು ತೋಟಗಳನ್ನು ಪ್ಲಾಂಟೇಶನ್ ಗಳನ್ನು ವಸತಿ ಪ್ರದೇಶಗಳನ್ನೊಳಗೊಂಡಿದೆ.

ಸಾಂಸ್ಕೃತಿಕ ಭೂ ದೃಶ್ಯಾವಳಿಯ ಪ್ರದೇಶಗಳೂ ಕೂಡ ಜೈವಿಕವಾಗಿ ಅತ್ಯಂತ ಶ್ರೀಮಂತವಾದ ಪ್ರದೇಶಗಳು. ಇಡೀ ಪ್ರದೇಶದ ಆರ್ಥಿಕ ಬೆಳವಣಿಗೆ ಇಲ್ಲಿರುವ ನೀರು, ಅರಣ್ಯಗಳು ಮತ್ತು ಜೀವ ವೈವಿಧ್ಯತೆಗಳೆಂಬ ನೈಸರ್ಗಿಕ ದತ್ತಿಯ ಕೊಡುಗೆಗಳು. ಈ ಕಾರಣಕ್ಕಾಗಿ ಕಾರ್ಯ ತಂಡ ಇಡೀ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಉತ್ತೇಜಕ ಕ್ರಮಗಳನ್ನು ಕೈಗೊಳ್ಳಲು ಸಲಹೆ ಮಾಡಿದೆ. ಸಾಂಸ್ಕೃತಿಕ ಭೂದೃಶ್ಯಾವಳಿಯ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿಯ ನಿಯಂತ್ರಣಗಳನ್ನು ಸೂಚಿಸಿಲ್ಲ. ಹಾಗಾಗಿ ಕಾರ್ಯತಂಡದ ವರದಿಯ ಪ್ರಕಾರ ಪಶ್ಚಿಮ ಘಟ್ಟಗಳ ಶೇ ೫೪.೪ರ ಪ್ರದೇಶದಲ್ಲಿ ಅಂದರೆ ೧,೦೪,೨೮೦ ಚ.ಕಿ.ಮೀ. ವಿಸ್ತೀರ್ಣದ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ನಿಯಂತ್ರಣವಿಲ್ಲದ ಮುಕ್ತ ಅವಕಾಶಗಳನ್ನು ಹೊಂದಿರುವ ಪ್ರದೇಶವಾಗಿದೆ. ಆದರೆ ಈ ಪ್ರದೇಶಗಳಲ್ಲಿ ವಿವಿಧ ಶಾಸನ, ಕಾನೂನುಗಳ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಿರುವ ಹಾಲಿ ನಿಯಂತ್ರಣಗಳು ಹಾಗೆಯೇ ಮುಂದುವರಿಯುತ್ತವೆ. ಕಾರ್ಯಪಡೆ ಯಾವುದೇ ಹೊಸ ನಿಯಂತ್ರಣಗಳನ್ನು ಹೇರಿಲ್ಲ. ಅದಕ್ಕೆ ಬದಲಾಗಿ ಈ ಪ್ರದೇಶದಲ್ಲಿ ‘ಹಸಿರು ಅಭಿವೃದ್ಧಿ’ (Green Growth) ಕಾರ್ಯಗಳನ್ನು ಪಶ್ಚಿಮ ಘಟ್ಟ ಪ್ರದೇಶದಾದ್ಯಂತ ಪ್ರೋತ್ಸಾಹಿಸಲು ಕರೆ ನೀಡುತ್ತದೆ. ಸಾಂಸ್ಕೃತಿಕ ಭೂ ದೃಶ್ಯಾವಳಿಯ ಪ್ರದೇಶಗಳಲ್ಲಿ ಪ್ರಧಾನವಾಗಿ ಪ್ಲಾಂಟೇಷನ್‌ಗಳು ಮತ್ತು ಕೃಷಿ ಭೂಮಿ ಬರುತ್ತವೆ. ಅರಣ್ಯಗಳಿಲ್ಲದೆ ಕೃಷಿಯನ್ನು ಸುಸ್ಥಿರವಾಗಿ ಮುಂದುವರಿಸಲು ಸಾಧ್ಯವಿಲ್ಲ. ಏಕೆಂದರೆ ಕೃಷಿಗೆ ಅಗತ್ಯವಾದ ನೀರು ಮತ್ತು ಪೋಷಕಾಂಶಗಳು ಅರಣ್ಯಗಳಿಂದಲೇ ಬರಬೇಕು. ಆದ್ದರಿಂದ ಪಶ್ಚಿಮ ಘಟ್ಟದ ಬೆಳೆಗಾರರಿಗೆ ಸಾವಯವ ಕೃಷಿ ಕೈಗೊಳ್ಳುವಂತೆ ಕೇಂದ್ರೀಕರಿಸಿದ ಪ್ರೋತ್ಸಾಹಗಳನ್ನು ನೀಡಬೇಕು ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಈ ಸಾವಯವ ಉತ್ಪನ್ನಗಳಿಗೆ ಒಂದು ವಿಶಿಷ್ಟ ಬ್ರ್ಯಾಂಡ್ ಸೃಷ್ಟಿಸಲು ಸಲಹೆ ಮಾಡಲಾಗಿದೆ. ಇದಕ್ಕೆ ಉದಾಹರಣೆಯಾಗಿ ಕೊಡಗಿನ ಕಾಫಿ ಪ್ಲಾಂಟೇಷನ್‌ಗಳಲ್ಲಿ ಸ್ಥಳೀಯ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಕರೆ ನೀಡುತ್ತದೆ.APEDA ಸಾಂಬಾರ ಮಂಡಳಿ, ಕಾಫಿ ಮಂಡಳಿ ಮುಂತಾದ ಏಜೆನ್ಸಿಗಳ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಲಾಗಿದೆ.

ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದ ನಿಷೇಧಾತ್ಮಕ ಮತ್ತು ನಿಯಂತ್ರಕ ಕ್ರಮಗಳು

 • ಈ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯ ಮೇಲೆ ಸಂಪೂರ್ಣ ನಿಷೇಧ. ಈಗ ಹಾಲಿ ನಡೆಸಲಾಗುತ್ತಿರುವ ಗಣಿಗಾರಿಕೆಗಳನ್ನು ೫ ವರ್ಷಗಳ ಅವಧಿಯೊಳಗಾಗಿ ಹೊರದಬ್ಬುವುದು.
 • ಯಾವುದೇ ಶಾಖೋತ್ಪನ್ನ ವಿದ್ಯುದಾಗಾರಗಳಿಗೆ ಈ ಪ್ರದೇಶದಲ್ಲಿ ಅವಕಾಶವಿಲ್ಲ. 
 • ಆದರೆ ಕೆಲವು ಷರತ್ತುಗಳಿಗನುಗುಣವಾಗಿ ಈ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಬಹುದಾಗಿದೆ. 
 • ಕಡಿಮೆ ನೀರು ಹರಿಯುವ ಸಮಯದಲ್ಲಿಯೂ ಅಬಾಧಿತವಾಗಿ ಶೇ. ೩೦ ರಷ್ಟು ಜೀವಿಪರಿಸರಾತ್ಮಕ ಹರಿವಿರುವಂತೆ (Ecological Flow) ನೋಡಿಕೊಳ್ಳತಕ್ಕದ್ದು. 
 • ನದಿ ನೀರಿನ ಹರಿವಿನ ಬಗ್ಗೆ ಆಧಾರ ರೇಖೆಯನ್ನು ಸಮಗ್ರವಾದ ಒಟ್ಟಾರೆ ಹರಿವಿನ ಅಧ್ಯಯನದ ನಂತರ ನಿರ್ಧರಿಸುವುದು. ಪ್ರತಿ ಯೋಜನೆಯು-ನದಿಯ ಹರಿವಿನ ಮೇಲೆ, ಅರಣ್ಯಗಳ ಮೇಲೆ ಮತ್ತು ಜೀವವೈವಿಧ್ಯತೆಯ ನಷ್ಟದ ಮೇಲೆ ಉಂಟು ಮಾಡುವ ಸಂಚಿತ ಪರಿಣಾಮಗಳ ಅಧ್ಯಯನದ ನಂತರ ಲಾಭ ನಷ್ಟ ಅಂದಾಜು ನಡೆಸಿ ತೀರ್ಮಾನಿಸುವುದು. ನದಿ ಕಣಿವೆಯಲ್ಲಿ ಒಂದು ಯೋಜನೆಗೂ ಮತ್ತೊಂದು ಯೋಜನೆಗೂ ಕನಿಷ್ಟ ೩ ಕಿ.ಮೀ. ಅಂತರ ಕಾಪಾಡಿಕೊಳ್ಳತಕ್ಕದ್ದು. ಯಾವುದೇ ಸಮಯದಲ್ಲಿ ನದೀಪಾತ್ರದ ಶೇ. ೫೦ಕ್ಕಿಂತ ಹೆಚ್ಚು ಪ್ರದೇಶ ಬಾಧಿಸಲ್ಪಡಬಾರದು.
 • ಈ ಪ್ರದೇಶದಲ್ಲಿ ಸ್ಥಾಪನೆಗೊಳ್ಳುವ ಪವನಶಕ್ತಿ ಯೋಜನೆಗಳನ್ನೂ ಪರಿಸರ ಪರಿಣಾಮ ಅಂದಾಜು (EIA) ಘೋಷಣೆಯ ವ್ಯಾಪ್ತಿ ಅಡಿಗೆ ತರುವುದು ಮತ್ತು ಅಂದಾಜು ಪ್ರಕ್ರಿಯೆಯ ನಂತರ ತೀರ್ಮಾನಿಸು ವುದು.
 • ಕಟ್ಟುನಿಟ್ಟಾಗಿ ‘ಕೆಂಪು’ ಮಾದರಿ ಕೈಗಾರಿಕೆಗಳನ್ನು ಈ ಪ್ರದೇಶದಲ್ಲಿ ನಿಷೇಧಿಸುವುದು. ‘ಕಿತ್ತಳೆ’ ಮಾದರಿ ಕೈಗಾರಿಕೆಗಳಿಗೆ ಸಂಪೂರ್ಣ ನಿಷೇಧ ವಿಲ್ಲ. ಏಕೆಂದರೆ ಈ ಮಾದರಿಯಲ್ಲಿ ಅನೇಕ ಆಹಾರ ಮತ್ತು ಹಣ್ಣು ಸಂಸ್ಕರಣಾ ಕೈಗಾರಿಕೆಗಳು ಸೇರ್ಪಡೆಗೊಂಡಿವೆ. ಆದರೂ ಕಡಿಮೆ ಪರಿಸರ ಪರಿಣಾಮಗಳನ್ನುಂಟು ಮಾಡುವ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸುವುದು.
 • ೨೦,೦೦೦ ಚ.ಮೀ. ಗಿಂತ ಹೆಚ್ಚಾಗಿರುವ ಕಟ್ಟಡಗಳಿಗೆ ಮತ್ತು ನಿರ್ಮಾಣಗಳಿಗೆ ಈ ಪ್ರದೇಶದಲ್ಲಿ ಅವಕಾಶವಿರಬಾರದು. ನಗರ ಬಡಾವಣೆ ಮತ್ತು ಟೌನ್‌ಶಿಪ್ ಯೋಜನೆಗಳನ್ನು ನಿಷೇಧಿಸಬೇಕು.
 • ಈ ಪ್ರದೇಶದಲ್ಲಿ ಬರುವ ಎಲ್ಲ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆ/ಸ್ಕೀಮುಗಳನ್ನು EIA ನೋಟಿಫಿಕೇಶನ್ ೨೦೦೬ರ A ಮಾದರಿ ಯೋಜನೆಗಳಡಿಯಲ್ಲಿ ಸೇರಿಸಿ ಅನುಮತಿಸುವಂತೆ ಮಾಡಬೇಕು.
 • ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ತೆರವುಗೊಳಿಸುವಿಕೆ ಅನಿವಾರ್ಯವಾದಾಗ ಮತ್ತಷ್ಟು ಅಧಿಕ ಸುರಕ್ಷತೆಗಳನ್ನು ವಿಧಿಸಬೇಕು. ಈ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ತೆರವುಗೊಳಿಸುವ ಅಗತ್ಯ ಪ್ರಕರಣಗಳಲ್ಲಿ ಯೋಜನೆಯ ಎಲ್ಲ ಮಾಹಿತಿಯನ್ನು ಆರಂಭದ ಅರ್ಜಿಯ ಹಂತದಿಂದ ಹಿಡಿದು ಅಂತಿಮ ಅನುಮೋದನೆಯವರೆಗಿನ ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರಣ್ಯ ಮತ್ತು ಪರಿಸರ ಸಚಿವಾಲಯದ ಜಾಲತಾಣದಲ್ಲಿ ಸಾರ್ವಜನಿಕವಾಗಿ ಹಾಕಿರಬೇಕು.
 • ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನೆಗಳಿಗೆ ಅನುಮತಿ ಯನ್ನು ಪಡೆದುಕೊಳ್ಳಲು ಈಗ ಹಾಲಿ ಇರುವ ನಿಯಂತ್ರಣ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಯೋಜನೆಗಳ ಅನುಮೋದನೆಯಾದ ಮೇಲೆ ಅವುಗಳ ಮೇಲೆ ನಿಗಾ ವಹಿಸಲು ಮತ್ತು ಆಡಳಿತವನ್ನು ನಿರ್ವಹಿಸಲು ಕೂಡಾ ಇದರ ಅಗತ್ಯವಿದೆ. ಈಗ ಹಾಲಿ ಈ ಕೆಲಸವನ್ನು ಮಾಡುತ್ತಿರುವ ಈ ನಿಯಂತ್ರಣ ಸಂಸ್ಥೆಗಳನ್ನು ತುಂಬಾ ಬಲಪಡಿಸಬೇಕಾಗಿದೆ ಎಂದು ಕಾರ್ಯತಂಡ ಹೇಳಿದೆ.
 • ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜನತೆಯನ್ನು ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನ ಮಾಡುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಯೋಜನೆಗಳಿಗೆ ಗ್ರಾಮಸಭೆಗಳ ಪೂರ್ವಭಾವಿ, ಮಾಹಿತಿ ಪೂರ್ಣ ಒಪ್ಪಿಗೆ ಅತ್ಯಗತ್ಯ. ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿಯೂ ಈ ಪೂರ್ವ ಭಾವಿ, ಮಾಹಿತಿಪೂರ್ಣ ಒಪ್ಪಿಗೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
 • ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗೆ ಮತ್ತು ಈಗ ಮೇಲೆ ವಿಧಿಸಲಾಗಿರುವ ಅಭಿವೃದ್ಧಿ ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಕೂಡಲೆ ಆಡಳಿತಾತ್ಮಕ ಸಂರಚನೆಗಳನ್ನು ನಿರ್ಮಿಸುವುದು.
 • ವನ್ಯಜೀವಿ ಸಂಚಾರ ಓಣಿಗಳನ್ನು ಯೋಜಿಸಿ ರಕ್ಷಿಸುವಾಗ ರಾಜ್ಯ ಸರ್ಕಾರಗಳು ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚಿಸು ವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ಪಶ್ಚಿಮ ಘಟ್ಟ ಸುಸ್ಥಿರ ಅಭಿವೃದ್ಧಿ ನಿಧಿ

ಪಶ್ಚಿಮ ಘಟ್ಟ ಪ್ರದೇಶದ ಅಭಿವೃದ್ಧಿಗಾಗಿ ಯೋಜನಾ ಆಯೋಗ ಒಂದು ವಿಶೇಷ ‘ಪಶ್ಚಿಮ ಘಟ್ಟ ಸುಸ್ಥಿರ ಅಭಿವೃದ್ಧಿ ನಿಧಿ’ಯನ್ನು ಸೃಷ್ಟಿಸಬೇಕೆಂದು ಹೇಳಿದೆ. ಈ ನಿಧಿಯನ್ನು ಪರಿಣಾಮಕಾರಿ ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದ ಆಡಳಿತ ಮತ್ತು ಹಸಿರು ಅಭಿವೃದ್ಧಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡುವಂತಹ ವಿಶೇಷ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದೆಂದು ಹೇಳಿದೆ. ಪಶ್ಚಿಮ ಘಟ್ಟಗಳ ರಾಜ್ಯಗಳು ಒಗ್ಗೂಡಿ ಕೇಂದ್ರದಿಂದ ನೆರವು ಪಡೆಯಲು ಪ್ರಯತ್ನಿಸಬೇಕು. ಈ ಹಣಕಾಸು ವ್ಯವಸ್ಥೆ ನಿಸರ್ಗ ಸಂರಕ್ಷಣೆಯ ಬದಲಿಗೆ ದೊರಕುವ ಸಾಲದ ಮನ್ನಾ ಸ್ವರೂಪದಲ್ಲಿರಬೇಕು. (Debt for Nature Swap). ಒಂದು ರಾಜ್ಯದ ಬಾಕಿ ಸಾಲವನ್ನು ಆ ರಾಜ್ಯ ಕೈಗೊಳ್ಳುವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ರಚನಾತ್ಮಕ ಪ್ರಯತ್ನಗಳಿಗೆ ವಿನಿಮಯ ಮಾಡಿಕೊಳ್ಳುವಂತಿರಬೇಕು. ಹೀಗೆ ದೊರಕುವ ಸ್ವಲ್ಪ ಹಣವನ್ನು ರಾಜ್ಯ ಸರ್ಕಾರ ಉಳಿಸಿಕೊಂಡು ಉಳಿದ ಭಾಗವನ್ನು ಸ್ಥಳೀಯ ಸಂರಕ್ಷಣಾ ಟ್ರಸ್ಟ್‌ಗಳಿಗೆ ಆರ್ಥಿಕ ನೆರವಾಗಿ ನೀಡಬೇಕು. ಈ ಹಣವನ್ನು ಅರಣ್ಯ ಉತ್ಪಾದಕತೆಯನ್ನು ಮತ್ತು ಸುಸ್ಥಿರ ಅರಣ್ಯಾಧಾರಿತ ಜೀವನೋಪಾಯಗಳನ್ನು ಉತ್ತಮಪಡಿಸುವ ಸಾಮುದಾಯಿಕ ಯೋಜನೆಗಳಿಗೆ ಅನುದಾನದ ರೂಪದಲ್ಲಿ ನೀಡುವಂತಾಗಬೇಕು. ೧೩ನೇ ಹಣಕಾಸು ಆಯೋಗ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ರಾಜ್ಯಗಳಿಗೆ ನೀಡಿದ್ದ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲು ೧೪ನೇ ಹಣಕಾಸು ಆಯೋಗ ಪರಿಶೀಲನೆ ನಡೆಸಬೇಕೆಂದು ಸಲಹೆ ಮಾಡಿದೆ.

ಪಶ್ಚಿಮ ಘಟ್ಟಗಳ ‘ಜೀವಿಪರಿಸರಾತ್ಮಕ ಸೂಕ್ಷ್ಮವಲಯ’ ಮತ್ತು ‘ಜೀವಿಪರಿಸರಾತ್ಮಕ ಸೂಕ್ಷ್ಮವಲ್ಲದ’ ಪ್ರದೇಶಗಳಿಂದ ದೊರಕುವ ಪರಿಸರ ಸೇವೆಗಳಿಗೆ ಹಣ ನೀಡಬೇಕಾಗುವ ವ್ಯವಸ್ಥೆಗಳನ್ನು ರೂಪಿಸುವುದಕ್ಕೆ ಸಲಹೆ ನೀಡಿದೆ. ಈ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಗಳು ಸಂಬಂಧಿಸಿದ ಪಂಚಾಯಿತಿಗಳು ಮತ್ತು ನಗರಸಭೆಗಳೊಂದಿಗೆ ಇಂತಹ ಪ್ರಯತ್ನಗಳ ಬಗ್ಗೆ ಮಾತುಕತೆಯನ್ನಾರಂಭಿಸುವುದು.

ಪರಿಸರ ಸಂರಕ್ಷಣೆಯಲ್ಲಿ ರಾಜ್ಯಗಳ ಪ್ರಗತಿಯನ್ನಾಧರಿಸಿ ಯೋಜನಾ ಆಯೋಗ ಹಾಲಿ ‘ಪರಿಸರಾತ್ಮಕ ಸಾಧನೆ ಸೂಚ್ಯಾಂಕ (Environmental Performance Index) ವೊಂದನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಸೂಚ್ಯಾಂಕವನ್ನಾಧರಿಸಿ ರಾಜ್ಯಗಳಿಗೆ ಹಣ ಬಿಡುಗಡೆಯಾಗಬೇಕು. ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳು ಈ ಹೆಚ್ಚುವರಿ ಹಣವನ್ನು ಪಡೆಯಬೇಕು ಹಾಗೂ ಈ ಹಣ ನೇರವಾಗಿ ಸ್ಥಳೀಯ ಸಮುದಾಯಗಳಿಗೆ ದೊರಕುವಂತಾಗಬೇಕು.

೧೨ನೇ ಯೋಜನೆಗೆ ರೂಪಿಸಲಾಗಿರುವ ‘ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಕ್ರಮ’ಕ್ಕೆ ನಿಗದಿಪಡಿಸಲಾಗಿರುವ ಹಣವನ್ನು ಒಂದು ಸಾವಿರ ಕೋಟಿಗೆ ಹೆಚ್ಚಿಸಬೇಕು. ಮತ್ತು ಈ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೯೦:೧೦ ಅನುಪಾತದಲ್ಲಿ ಭರಿಸುವಂತಾಗಬೇಕು.

ಕಾರ್ಯ ತಂಡದ ವರದಿ ಜಾರಿಗೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆ

ಈಗ ಹಾಲಿ ಇರುವ ಶಾಸನಗಳ ಮತ್ತು ಕಾರ್ಯ ತಂಡದ ಶಿಫಾರಸ್ಸುಗಳ/ಸಲಹೆಗಳ ಅನುಷ್ಠಾನವನ್ನು ನಿಗಾವಣೆ ಮಾಡಲು ಉನ್ನತ ಹಂತದ ಸಮಿತಿಯ ಪುನಃಶ್ಚೇತನ ಮಾಡಿ ಅದನ್ನು ಪುನರ್‌ರೂಪಿಸಬೇಕು. ಈ ಸಮಿತಿ ಪಶ್ಚಿಮ ಘಟ್ಟಗಳ ೬ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡಿರಬೇಕು. ಈ ಸಮಿತಿ ಕಾಲಕಾಲಕ್ಕೆ ‘ಪಶ್ಚಿಮ ಘಟ್ಟ ಪ್ರದೇಶದ ನಿಗಾವಣೆ ಮತ್ತು ನಿರ್ಣಯ ಸಹಾಯಕ ಕೇಂದ್ರ’ (Decision support and Monitoring Centre for Western Ghats Region) ನೀಡುವ ಪರಿಸ್ಥಿತಿ ವರದಿ ಮತ್ತು ಹಾಲಿ ಶಾಸನಗಳ ಅನುಷ್ಠಾನವನ್ನು ಪರಿಶೀಲಿಸತಕ್ಕದ್ದು.

ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ಕೋಶ ಸ್ಥಾಪಿಸಿ ಬಲಪಡಿಸುವುದು. ಈ ಕೋಶಗಳು ಆಯಾ ರಾಜ್ಯಗಳ ಅರಣ್ಯ ಇಲಾಖೆಗಳೊಂದಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಗಳೊಂದಿಗೆ ರಾಜ್ಯ ಪರಿಸರ ಸಲಹಾ ಸಮಿತಿ ಮತ್ತು ರಾಜ್ಯ ಜೀವವೈವಿಧ್ಯ ಪ್ರಾಧಿಕಾರದೊಂದಿಗೆ ಮತ್ತು MOEF ನ ಪ್ರಾದೇಶಿಕ ಕಛೇರಿಯೊಂದಿಗೆ ವ್ಯವಹರಿಸಿ ರಾಜ್ಯ ಸರ್ಕಾರಗಳ ಮಾಹಿತಿ ಮತ್ತು ನಿರ್ಣಯ ಸಹಾಯಕ ಅಗತ್ಯಗಳನ್ನು ಪೂರೈಕೆ ಮಾಡುವಂತಾಗಬೇಕು.

ಪಶ್ಚಿಮ ಘಟ್ಟ ಪ್ರದೇಶ ನಿಗಾವಣೆ ಮತ್ತು ನಿರ್ಣಯ ಸಹಾಯಕ ಕೇಂದ್ರ

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ‘ಪಶ್ಚಿಮ ಘಟ್ಟ ನಿಗಾವಣೆ ಮತ್ತು ನಿರ್ಣಯ ಸಹಾಯಕ ಕೇಂದ್ರ’ವೊಂದನ್ನು ಸ್ಥಾಪಿಸುವುದು. ಪಶ್ಚಿಮ ಘಟ್ಟಗಳ ಯಾವುದಾರೂ ರಾಜ್ಯ ಈ ಕೇಂದ್ರ ಸ್ಥಾಪನೆಗೆ ಆತಿಥ್ಯ ನೀಡಬಹುದಾಗಿದೆ. ಈ ಕೇಂದ್ರ ಪಶ್ಚಿಮ ಘಟ್ಟ ಪ್ರದೇಶದ ೬ ರಾಜ್ಯಗಳ ಜಂಟಿ ನಿರ್ವಹಣೆಯಲ್ಲಿರಬೇಕು. ಪಶ್ಚಿಮ ಘಟ್ಟಗಳ ಪರಿಸರ ನಿರ್ವಹಣೆ ಎಂದರೆ ಅವುಗಳನ್ನು ಕಾಪಾಡುವುದು, ಸಂರಕ್ಷಿಸುವುದು, ಪುನಶ್ಚೇತನಗೊಳಿಸುವುದು ಹಾಗೂ ಸುಸ್ಥಿರ ಅಭಿವೃದ್ಧಿ ಮಾಡುವುದನ್ನು ಒಳಗೊಂಡಿರುತ್ತದೆ. ಹೀಗೆ ಮಾಡಲು ಪಶ್ಚಿಮ ಘಟ್ಟಗಳ ಪರಿಸರ ಮತ್ತು ಪರಿಸರ ವಿಜ್ಞಾನದ ಅನೇಕ ಮಾಹಿತಿಗಳನ್ನು ಕಾಲಕಾಲಕ್ಕೆ ಭೂ ಬಾಹ್ಯಾಕಾಶೀಯ ತಂತ್ರಜ್ಞಾನದಂತಹ ಆಧುನಿಕ ತಂತ್ರಜ್ಞಾನಗಳ ಮೂಲಕ ನಿರಂತರವಾಗಿ ಸಂಗ್ರಹಿಸಿ ಅಂದಂದಿನ ದಿನದವರೆಗೂ, ಉನ್ನತೀಕರಿಸಬೇಕಾಗುತ್ತದೆ. ಈ ಕೆಲಸವನ್ನು ಈ ಕೇಂದ್ರ ನಿರ್ವಹಿಸಬೇಕಾಗುತ್ತದೆ. ಈ ಕೇಂದ್ರ ತಾನು ಸಂಗ್ರಹಿಸುವ ಮಾಹಿತಿಯನ್ನು ಉನ್ನತ ಹಂತದ ಸಮಿತಿಗೆ ನೀಡಬೇಕಾಗುತ್ತದೆ. ಈ ಕೇಂದ್ರ ನೀಡುವ ಸಲಹೆ ಮತ್ತು ದತ್ತಾಂಶಗಳ ಆಧಾರದಲ್ಲಿ ಉನ್ನತ ಸಮಿತಿ ಮತ್ತು ಸರ್ಕಾರ ಪಶ್ಚಿಮ ಘಟ್ಟ ಸಂರಕ್ಷಣೆ ಮತ್ತು ಅಭಿವೃದ್ಧಿಯ ನೀತಿಗಳನ್ನು ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ.

ವಾಯುಗುಣ ಬದಲಾವಣೆ ಮತ್ತು ಪಶ್ಚಿಮ ಘಟ್ಟಗಳು

ವಾಯುಗುಣ ಬದಲಾವಣೆ ಪಶ್ಚಿಮ ಘಟ್ಟ ಪ್ರದೇಶಗಳ ಮೇಲೆ ವ್ಯಾಪಕವಾದ ಪರಿಣಾಮಗಳನ್ನುಂಟು ಮಾಡಲಿದೆ. ತಾಪಮಾನದ ಮತ್ತು ಮಳೆಯ ಹೆಚ್ಚಳ, ತೀವ್ರವಾದ ಘಟನಾವಳಿಗಳೇ ಅಲ್ಲದೆ ಮಳೆ ಬೀಳುವ ಕಾಲಾವಧಿ ಕಡಿಮೆಯಾಗುವುದು ಇವೇ ಮುಂತಾದ ವಾಯುಗುಣ ಬದಲಾವಣೆಯ ಪರಿಣಾಮಗಳು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗಳ ಮೇಲೆ ತೀವ್ರತರವಾದ ಒತ್ತಡವನ್ನುಂಟು ಮಾಡಲಿವೆ. ಇದರಿಂದ ಕಾಡುಗಳು ಜಲ ಅಭಾವದ ಒತ್ತಡಕ್ಕೆ, ಬೆಂಕಿಗೀಡಾಗುವ ಅಪಾಯಕ್ಕೆ, ಮಳೆ ಸುರಿಸುವ ಪ್ರಮಾಣಗಳ ವ್ಯತ್ಯಾಸಗಳಿಗೆ ಹಾಗೂ ಮೇಲ್ಮೈ ಜಲ ಹರಿವಿನ ಒತ್ತಡಕ್ಕೆ ಸಿಲುಕಲಿವೆ. ವಾಯುಗುಣ ಬದಲಾವಣೆಯ ಮುನ್ಸೂಚನೆಗಳನ್ನು ೧೦೦ ಮೀ. ರೆಸಲ್ಯೂಷನ್‌ನ ಜಾಗತಿಕ ವಾಯುಗುಣ ಮಾದರಿ (GCMs) ಮತ್ತು ೨೫ ಮೀ. ರೆಸಲ್ಯೂಷನ್‌ನ ಪ್ರಾದೇಶಿಕ ವಾಯುಗುಣ ಮಾದರಿಗಳಲ್ಲಿ ಮಾಡಲಾಗುತ್ತಿದೆ. ಈ ದತ್ತಾಂಶಗಳನ್ನು ಪಶ್ಚಿಮ ಘಟ್ಟಗಳಿಗೆ ಹೊಂದಿಕೊಳ್ಳುವಂತೆ ಸೂಕ್ತವಾಗಿ ಮಾರ್ಪಡಿಸಬೇಕಾಗುತ್ತದೆ. ಪರಿಸರ ವ್ಯವಸ್ಥೆಗಳ ಬದಲಾವಣಾ ಮಾದರಿಗಳಾದಂತಹ ಡೈನಮಿಕ್ ವೆಜಿಟೇಷನ್ ಗ್ರೋಥ್ ಮಾದರಿ ಮತ್ತು ಈಕಲಾಜಿಕಲ್ ನಿಷೆ ಮಾದರಿಗಳಿಗೆ ಈ ದತ್ತಾಂಶಗಳನ್ನು ರೂಪಾಂತರಿಸಬೇಕಾಗುತ್ತದೆ ಮತ್ತು ಈ ಕಾರ್ಯವನ್ನು ‘ಪಶ್ಚಿಮ ಘಟ್ಟ ನಿಗಾವಣಾ ಮತ್ತು ನಿರ್ಣಯ ಸಹಾಯಕ ಕೇಂದ್ರ’ ಮಾಡಬೇಕೆಂದು ಕಾರ್ಯಪಡೆ ಶಿಫಾರಸ್ಸು ಮಾಡಿದೆ.

ವಾಯುಗುಣ ಬದಲಾವಣೆಯ ಹೊಂದಾಣಿಕಾ ಕಾರ್ಯಕ್ಕೆ ಅಗತ್ಯವಾದ ಈ ಕೆಳಕಂಡ ಕಾರ್ಯತಂತ್ರಗಳನ್ನು ರೂಪಿಸಲು ಈ ಕೇಂದ್ರದ ವಾಯುಗುಣ ಬದಲಾವಣೆಯ ದತ್ತಾಂಶಗಳನ್ನು ಬಳಸಿಕೊಳ್ಳಬಹುದಾಗಿರುತ್ತದೆ. ಅವುಗಳೆಂದರೆ

 1. ಮಿಶ್ರಪ್ರಭೇದಗಳ ಪ್ಲಾಂಟೇಷನ್‌ಗಳು
 2. ಹೆಚ್ಚುವರಿ ತಾಪಮಾನ ಮತ್ತು ಬರಗಳಲ್ಲೂ ಚೇತರಿಕೆ ಸಾಮರ್ಥ್ಯವುಳ್ಳ ಗಡುಸಾದ ಪ್ರಭೇದಗಳನ್ನು ನೆಡುವುದು.
 3. ಎತ್ತರದ ಇಳಿಜಾರುಗಳಲ್ಲಿ ನಿರೀಕ್ಷಣಾ ಪ್ಲಾಂಟೇಷನ್‌ಗಳನ್ನು ಬೆಳೆಸುವಂತಹ ಹೊಂದಾಣಿಕಾ ಯೋಜನೆಗಳನ್ನಾರಂಭಿಸುವುದು. 
 4. ಸಂರಕ್ಷಿತ ಪ್ರದೇಶಗಳನ್ನು ತುಂಡು ಅರಣ್ಯ ಪ್ರದೇಶಗಳೊಂದಿಗೆ ಜೋಡಿಸುವುದು. ೫. ಕಾಡ್ಗಿಚ್ಚು ಮುನ್ನೆಚ್ಚರಿಕಾ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವುದು.

ಅಥಿರಪಲ್ಲಿ ಜಲವಿದ್ಯುತ್ ಯೋಜನೆ ಬಗ್ಗೆ

ಈ ಯೋಜನೆಯ ಮೇಲ್ಭಾಗದ ಸಮೀಪ ದೂರದಲ್ಲಿ ಈಗಾಗಲೇ ಒಂದು ಅಣೆ ಕಟ್ಟಿದೆ. ಈ ಭಾಗದ ನದೀ ನೀರಿನ ಜೀವಿಪರಿಸರಾತ್ಮಕ ಹರಿವಿನ ಬಗ್ಗೆ ಅನಿಶ್ಚಯತೆ ಇದೆ. ಅನಿಶ್ಚಯವಾದ ಮುಂಗಾರಿನಿಂದಾಗಿ ನದೀ ನೀರಿನ ಹರಿವಿನಲ್ಲಿ ವ್ಯತ್ಯಾಸವಾಗುವ ಸಂಭವವಿದೆ. ಇದರಿಂದಾಗಿ ಪ್ಲಾಂಟ್ ಲೋಡ್ ಫ್ಯಾಕ್ಟರ್‌ನಲ್ಲಿ ಏರುಪೇರಾಗುತ್ತದೆ. ಇದಕ್ಕನುಗುಣವಾಗಿ ಉತ್ಪಾದಿತವಾಗುವ ವಿದ್ಯುತ್ಛ್‌ಕ್ತಿಯ ಪ್ರಮಾಣದಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಈ ಎಲ್ಲ ಅಂಶಗಳು ಅಥಿರಪಲ್ಲಿ ಯೋಜನೆಯ ಸೂಕ್ತತೆ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ. ಈ ಅಂಶಗಳ ಬೆಳಕಿನಲ್ಲಿ ಸ್ಥಳೀಯ ಕೆಲವು ಪ್ರಭೇದಗಳಿಂಗುಂಟಾಗುವ ನಷ್ಟವನ್ನು ಮತ್ತು ಯೋಜನೆಯಿಂದ ದೊರಕುವ ಲಾಭಗಳನ್ನು ಹೋಲಿಕೆ ಮಾಡಿ ನೋಡಬೇಕಾಗುತ್ತದೆ. ಇವುಗಳ ಪುನರ್‌ಮೌಲ್ಯೀಕರಣ ಹಾಗೂ ಜೀವಿಪರಿಸರಾತ್ಮಕ ಹರಿವಿನ ದತ್ತಾಂಶಗಳ ಸಂಗ್ರಹಣೆಯ ನಂತರ ಕೇರಳ ಸರ್ಕಾರ ಈ ಯೋಜನೆಯನ್ನು ಮುಂದೆ ಕೊಂಡೊಯ್ಯಲು ಬಯಸಿದರೆ ಪ್ರಸ್ತಾವನೆಯನ್ನು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರಿಶೀಲನೆಗೆ ತೆಗೆದುಕೊಂಡು ಹೋಗಬಹುದೆಂದು ಅಭಿಪ್ರಾಯಪಟ್ಟಿದೆ. ಈ ಯೋಜನೆಯ ಬಗ್ಗೆ ಖಚಿತವಾದ ನಿಲುವನ್ನು ತಾಳದ ಕಾರ್ಯತಂಡ ಮತ್ತಷ್ಟು ಮಾಹಿತಿ, ದತ್ತಾಂಶಗಳ ಕೊರತೆಯನ್ನು ಮುಂದೆ ಮಾಡಿ ತೀರ್ಮಾನವನ್ನು ಮುಂದೂಡಿ ಅನುಮೋದನೆಯ ಚೆಂಡನ್ನು MOEF ನ ಅಂಗಳಕ್ಕೆ ದೂಡಿದೆ.

ಗುಂಡ್ಯ ಜಲವಿದ್ಯುತ್ ಯೋಜನೆ ಬಗ್ಗೆ

ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆ ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದಲ್ಲಿ” ಬರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಮುಂದುವರಿಯಬೇಕಾಗಿದೆ. ಕಾರ್ಯತಂಡ ಸೂಕ್ಷ್ಮ ಪ್ರದೇಶಗಳಲ್ಲಿ ಜಲವಿದ್ಯುತ್ ಯೋಜನೆಗಳ ನಿರ್ಮಾಣದ ಬಗ್ಗೆ ಸಂಪೂರ್ಣ ನಿಷೇಧವನ್ನು ಶಿಫಾರಸ್ಸು ಮಾಡಿಲ್ಲ. ಆದರೆ ವಿದ್ಯುತ್ ಶಕ್ತಿಯ ಅಗತ್ಯವನ್ನು ಪರಿಸರದೊಂದಿಗೆ ಸಮತೋಲನಗೊಳಿಸಿ ನೋಡಬೇಕೆಂಬ ಷರತ್ತನ್ನು ವಿಧಿಸಿದೆ. gundyaಕರ್ನಾಟಕ ಸರ್ಕಾರ ಈ ಪೂರ್ಣ ಪ್ರದೇಶದ ಜಲವೈಜ್ಞಾನಿಕ ದತ್ತಾಂಶಗಳನ್ನು ವಿವರವಾಗಿ ಸಂಗ್ರಹಿಸಬೇಕು. ಯೋಜನೆಯ ಕೆಳಭಾಗದ ನದೀ ಪಾತ್ರದ ಜೀವಿಪರಿಸರಾತ್ಮಕ ಹರಿವಿನ ಬಗ್ಗೆ ಕೂಡ ಮಾಹಿತಿಯನ್ನು ಕಲೆಹಾಕಬೇಕು. ಈ ಮಾಹಿತಿ ಮತ್ತು ದತ್ತಾಂಶಗಳನ್ನು ಪುನರ್ ಮೌಲ್ಯಮಾಪನ ಮಾಡಬೇಕು. ಈ ಯೋಜನೆಯ ನಿರ್ಮಾಣದಿಂದ ಉಂಟಾಗುವ ಎಲ್ಲ ಸ್ಥಳೀಯ ಅರಣ್ಯ ನಾಶದ ಬಗ್ಗೆ ಪುನರ್ ವಿಮರ್ಶಿಸಬೇಕು. ಈ ನಷ್ಟಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದೆಂಬ ಬಗ್ಗೆಯೂ ಚಿಂತಿಸಬೇಕು. ಮೇಲ್ಕಂಡ ಈ ಎಲ್ಲ ಅಂಶಗಳ ಬಗ್ಗೆ ಪುನರ್ ವಿಮರ್ಶೆ ಮತ್ತು ಪುನರ್ ಅಂದಾಜನ್ನು ಮಾಡುವವರೆಗೂ ಈ ಯೋಜನೆಯನ್ನು ಮುಂದುವರಿಸಬಾರದು. ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಸಂಪೂರ್ಣ ನಿಷೇಧವನ್ನು ವಿಧಿಸದ ಕಾರ್ಯ ತಂಡ ಅದರ ಬಗ್ಗೆ ವಿಸ್ತೃತವಾದ ಮಾಹಿತಿ, ದತ್ತಾಂಶ ಸಂಗ್ರಹಣೆ ಮತ್ತು ಆನಂತರ ಅವುಗಳ ಮರುವಿಮರ್ಶೆ, ಪುನರ್‌ವಿಮರ್ಶೆ, ಪುನರ್ ಪರಿಶೀಲನೆಗಳ ಸರಮಾಲೆಯನ್ನು ಶಿಫಾರಸ್ಸು ಮಾಡಿ ಅವುಗಳ ಅರ್ಥವನ್ನೇ ಅಪಹಾಸ್ಯ ಮಾಡುತ್ತಿದೆ. ಗುಂಡ್ಯ ಜಲವಿದ್ಯುತ್ ಯೋಜನೆ ಬಗ್ಗೆ ಅಧ್ಯಯನಗಳು, ವಿಮರ್ಶೆಗಳು ಈಗಾಗಲೇ ಸಾಕಷ್ಟು ಆಗಿವೆ. ಆದರೆ ಕಾರ್ಯ ತಂಡ ಅವುಗಳ ಬಗ್ಗೆ ತೃಪ್ತಿ ಹೊಂದದೆ ಸಮಸ್ಯೆಯನ್ನು ಮತ್ತಷ್ಟು ಗೋಜಲಿಗೆ ದೂಡಿದೆ. ಮರುಪರಿಶೀಲನೆ ನಡೆಸಿದ ನಾಟಕವಾಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ.

ಗೋವಾ ಗಣಿಗಾರಿಕೆ ಬಗ್ಗೆ

ಕಾರ್ಯತಂಡ ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಲಹೆ ಮಾಡಿದೆ. ಆದರೆ ಗೋವಾದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸೂಕ್ತವಲ್ಲವೆಂದು ಭಾವಿಸಿ ಅದರ ಬಗ್ಗೆ ಮೌನವಹಿಸಿದೆ.

ಸಿಂಧು ದುರ್ಗ್ ಮತ್ತು ರತ್ನಗಿರಿ ಬಗ್ಗೆ

ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೂರು ರೀತಿಯ ಪ್ರದೇಶಗಳಿವೆ.

 1. ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪ್ರದೇಶ
 2. ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯ ಹೊರಗೆ ಬರುವ ಆದರೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶ
 3. ಪಶ್ಚಿಮ ಘಟ್ಟಗಳ ವ್ಯಾಪ್ತಿಯಿಂದ ಪೂರ್ಣವಾಗಿ ಹೊರಗಿರುವ ಪ್ರದೇಶ.

ಕಾರ್ಯತಂಡ ಕೆಲವು ಷರತ್ತುಗಳನ್ನು ವಿಧಿಸಿ ಈ ಪ್ರದೇಶಗಳ ಅಭಿವೃದ್ಧಿ ಯೋಜನೆಗಳ ಮೇಲೆ ವಿಧಿಸಿದ್ದ ತಡೆಗಳನ್ನು ತೆರವುಗೊಳಿಸುವಂತೆ ಶಿಫಾರಸ್ಸು ಮಾಡಿದೆ. ಈ ಎರಡೂ ಜಿಲ್ಲೆಗಳಲ್ಲಿ ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಈಗಾಗಲೇ ವಿಧಿಸಲಾಗಿರುವ ವಲಯ ನಿರ್ಬಂಧಗಳು ಮತ್ತಿತರ ನಿಯಮಾವಳಿಗಳು ಅನ್ವಯವಾಗುತ್ತವೆ. ಇದಲ್ಲದೆ ಪಶ್ಚಿಮ ಘಟ್ಟಗಳ ಸೂಕ್ಷ್ಮವಲಯಗಳಿಂದ ೧೦ ಕಿ.ಮೀ. ವ್ಯಾಪ್ತಿಯವರೆಗಿನ ಪ್ರದೇಶಗಳಿಗೆ EIA ನೋಟಿಫಿಕೇಶನ್ ೨೦೦೬ರ ನಿಯಮಾವಳಿಗಳು ಅನ್ವಯವಾಗುತ್ತವೆ. ಇನ್ನುಳಿದ ಪ್ರದೇಶಗಳಾದ ಜೀವಿಪರಿಸರಾತ್ಮಕ ಸೂಕ್ಷ್ಮ ಪ್ರದೇಶದ ಹೊರಗಿರುವ ಆದರೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಪರಿಸರ ಮತ್ತು ಅರಣ್ಯ ನಿಯಮಾವಳಿಗಳು ಹಾಗೂ ಪ್ರಕ್ರಿಯೆಗಳು ಅನ್ವಯವಾಗುತ್ತವೆ. ಹೀಗೆ ಹೇಳಿ ಅಭಿವೃದ್ಧಿಯ ತಡೆಗಳನ್ನು ತೆರವುಗೊಳಿಸಿದ ಕಾರ್ಯ ತಂಡ ಅಭಿವೃದ್ಧಿ ಯೋಜನೆಗಳ ಭಾರದಲ್ಲಿ ಈ ಎರಡೂ ಜಿಲ್ಲೆಗಳ ಪರಿಸರ ಸಮತೋಲನೆ ದುಷ್ಪರಿಣಾಮಕ್ಕೆ ಗುರಿಯಾಗದಂತೆ ತಡೆಯಲು ಮತ್ತೊಂದು ಷರತ್ತನ್ನು ವಿಧಿಸಿದೆ. ಈ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳಿಂದ ಅಲ್ಲಿಯ ಪರಿಸರದ ಮೇಲುಂಟಾಗುವ ಸಂಚಿತ ಪರಿಣಾಮಗಳ ಬಗ್ಗೆ ಪರಿಸರ ಮತ್ತು ಅರಣ್ಯ ಸಚಿವಾಲಯ ನಿಯತವಾಗಿ ನಿಗಾವಣೆ ಮಾಡತಕ್ಕದ್ದು. ಈ ನಿಗಾವಣೆಗಳಿಂದ ಹೊರ ಹೊಮ್ಮುವ ಅಂಶಗಳನ್ನಾಧರಿಸಿ ಸೂಕ್ತ ಕಾಲದಲ್ಲಿ ಸೂಕ್ತವಾದ ನೀತಿಗಳನ್ನು ತೀರ್ಮಾನಿಸಿ ಜಾರಿಗೊಳಿಸುವುದೆಂದು ತಿಳಿಸಿದೆ. ಹೀಗೆ ಹೇಳುವ ಮೂಲಕ ಈ ಎರಡು ಜಿಲ್ಲೆಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಯೋಜನೆಗಳಿಗೆ ಕಾರ್ಯತಂಡ ಹಸಿರು ನಿಷಾನೆ ತೋರಿಸಿದೆ.

ವಿಶ್ವ ಪಾರಂಪರಿಕ ತಾಣಗಳು

IUCN ಪಶ್ಚಿಮ ಘಟ್ಟಗಳಲ್ಲಿ ೩೯ ವಿಶ್ವ ಪಾರಂಪರಿಕ ತಾಣಗಳನ್ನು ಮಾನ್ಯ ಮಾಡಿದೆ. ಹೀಗೆ ಮಾನ್ಯ ಮಾಡಲು Western-Ghats-Matheranಪ್ರಮುಖ ಕಾರಣ ಇಲ್ಲಿಯ ಪ್ರಭೇದಗಳ ಅಂತಃಸ್ಸೀಮಿತತೆ. ಈ ಜೀವವೈವಿಧ್ಯತಾ ಸೂಕ್ಷ್ಮ ತಾಣಗಳಲ್ಲಿ ಶೇ. ೫೪ ರಷ್ಟು ವೃಕ್ಷ ಪ್ರಭೇದಗಳು, ಶೇ. ೬೫ ರಷ್ಟು ಉಭವವಾಸಿಗಳು, ಶೇ. ೬೨ರಷ್ಟು ಉರಗ ಪ್ರಭೇದಗಳು ಮತ್ತು ಶೇ. ೫೩ರಷ್ಟು ಮತ್ಸ್ಯಗಳು ಅಂತಃಸ್ಸೀಮಿತತೆಯನ್ನು ಹೊಂದಿವೆ. ಇದಲ್ಲದೆ ಬಹುದೊಡ್ಡ ಸಂಖ್ಯೆಯ ಧ್ವಜಸ್ವರೂಪಿ ಸ್ತನಿಗಳು ಮತ್ತು ಪರಿಸರ ವ್ಯವಸ್ಥೆಗಳು ಈ ಪ್ರದೇಶದಲ್ಲಿವೆ. UNESCO ದ ಪಾರಂಪರಿಕ ಪಟ್ಟ ಪಶ್ಚಿಮ ಘಟ್ಟಗಳ ಅಗಾಧವಾದ ನೈಸರ್ಗಿಕ ಸಂಪತ್ತಿಗೆ ಜಾಗತಿಕ ಮಾನ್ಯತೆಯನ್ನು ತಂದು ಕೊಟ್ಟಿದೆ. ದೇಶಗಳು ಈ ಮಾನ್ಯತೆಯನ್ನು ಪಡೆಯಲು ಪೈಪೋಟಿ ನಡೆಸುತ್ತವೆ. ಏಕೆಂದರೆ ಇದಕ್ಕೆ ಅಪಾರವಾದ ಪ್ರವಾಸಿ ಮೌಲ್ಯವಿದೆ. ಜಗತ್ತಿನಾದ್ಯಂತ ಜನ ಆ ಪ್ರದೇಶಗಳ ವೀಕ್ಷಣೆಗೆ ಬರುತ್ತಾರೆ. ಕರ್ನಾಟಕದಲ್ಲಿ ಇಂತಹ ೧೦ ಪಾರಂಪರಿಕ ತಾಣಗಳಿವೆ. ಈ ಪ್ರದೇಶಗಳ ಪರಿಸರ ಪ್ರವಾಸೋದ್ಯಮದಲ್ಲಿ ಸ್ಥಳೀಯ ಜನರನ್ನು ತೊಡಗಿಸುವುದು ಬಹಳ ಪ್ರಮುಖವಾಗಿ ಆಗಬೇಕಾದ ಕೆಲಸ. ಈ ಎಲ್ಲ ಪಾರಂಪರಿಕ ತಾಣಗಳು ಈಗಾಗಲೆ ವಿವಿಧ ಶಾಸನಗಳು ಮತ್ತು ಕಾನೂನುಗಳನ್ವಯ ಸಂರಕ್ಷಿಸಲ್ಪಟ್ಟ ಪ್ರದೇಶಗಳಲ್ಲೇ ಬರುವುದರಿಂದ ಇವುಗಳ ಗಡಿಗಳನ್ನು ಅದರೊಳಗೆ ಮರುಗುರುತಿಸಿ ವಿಶೇಷ ಸಂರಕ್ಷಣೆ ಮತ್ತು ಪರಿಸರಸ್ನೇಹಿ ಪ್ರವಾಸೋದ್ಯಮ ವ್ಯವಸ್ಥೆಗಳನ್ನು ಕಲ್ಪಿಸುವುದು ಸ್ಥಳೀಯ ಆರ್ಥಿಕತೆಗೆ ಉತ್ತಮ ಕೊಡುಗೆಯನ್ನು ನೀಡುವಂತಾಗುತ್ತದೆ.

ಕೃಪೆ: ಧರಣಿಮಂಡಲ

Leave a Reply

Your email address will not be published.