Daily Archives: May 29, 2013

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

– ಜಿ.ಮಹಂತೇಶ್

ಛತ್ತೀಸ್​ಗಢವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೋವಾದಿಗಳನ್ನ ಹತ್ತಿಕ್ಕಲು M_Id_52179_Salwa_Judumಸೆಲ್ವಾ ಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್​ಗಢ ಪ್ರಭುತ್ವಕ್ಕೆ ಮಾವೋವಾದಿಗಳು ಮರ್ಮಾಘಾತದ ಹೊಡೆತ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತ್ತು ಅಹಿಂಸೆಯಲ್ಲಿ ನಂಬಿಕೆ ಇರುವವರ್ಯಾರು ಮಾವೋವಾದಿಗಳ ಈ ಕೃತ್ಯವನ್ನ ಬೆಂಬಲಿಸಲಾರರು. ಆದರೆ ಅದೇ ಪ್ರಭುತ್ವ, ಸೆಲ್ವಾ ಜುಡುಂ ಹೆಸರಿನಲ್ಲಿ ಅದೆಷ್ಟೋ ಮಂದಿ ಆದಿವಾಸಿಗಳನ್ನ ಸಾವಿನ ಮನೆಗೆ ಅಟ್ಟಿತ್ತು. ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟಿ ಅವರೊಳಗೇ ಒಬ್ಬ ಗೂಢಚಾರನನ್ನ ನೇಮಿಸಿತ್ತು. ಅದೇ ಗೂಢಚಾರರ ನೆರವಿನಿಂದ ಸದ್ದಿಲ್ಲದೇ ಮಾರಣ ಹೋಮ ನಡೆಸಿತ್ತು.

ಛತ್ತೀಸ್​ಢದಲ್ಲಿ ಮೊನ್ನೆ ನಡೆದ ಮಹೇಂದ್ರ ಕರ್ಮ ಮತ್ತು ಪಿಸಿಸಿ ಅಧ್ಯಕ್ಷ ನಂದಕುಮಾರ್ ಹಾಗೂ ಅವರ ಪುತ್ರನ ಹತ್ಯೆ ಆದಾಗ ಎಲ್ಲರೂ ಮರುಗಿದರು. ಖುದ್ದು ಸೋನಿಯಾ, ರಾಹುಲ್, ಮನಮೋಹನ್​ಸಿಂಗ್ ಭೇಟಿ ಕೊಟ್ಟು ಕಂಬನಿಗರೆದರು. ನಿಷ್ಪಾಪಿ ಆದಿವಾಸಿಗಳ ಮಾರಣ ಹೋಮ ನಡೆದಾಗ ಬಹುತೇಕ ಹೃದಯಗಳು ಅದ್ಯಾಕೋ ಏನೋ ಮರುಗಲಿಲ್ಲ; ಗಲ್ಲದ ಮೇಲೆ ಕಣ್ಣೀರು ಹರಿಯಲಿಲ್ಲ. ಅರಣ್ಯ ಸಂಪತ್ತಿನ ಲೂಟಿಗೆ ತೊಡಕಾಗಿದ್ದ ಆದಿವಾಸಿಗಳು ಅಲ್ಲಿರುವುದು ಯಾರಿಗೂ ಬೇಡವಾಗಿತ್ತು. ವಿಶೇಷವಾಗಿ ಗಣಿ ದೊರೆಗಳು ಮತ್ತು ಅವರ ಬೆನ್ನಿಗೆ ನಿಂತ ಪ್ರಭುತ್ವಕ್ಕೆ ಸುತಾರಾಂ ಬೇಡವಾಗಿತ್ತು.

ಆಗಷ್ಟೇ ರಚನೆಯಾಗಿದ್ದ ಛತ್ತೀಸ್​ಗಢ ರಾಜ್ಯದಲ್ಲಿ ಮಾವೋವಾದ ಚಳವಳಿಯೂ salwajudum398_080211084403ಹೆಡೆ ಎತ್ತತೊಡಗಿತ್ತು. ಇದರ ಹೆಡೆಯನ್ನ ಬಡಿದು ಬಾಯಿಗೆ ಹಾಕಿಕೊಳ್ಳಲು ಅಲ್ಲಿನ ಪ್ರಭುತ್ವವೇ ಭಯೋತ್ಪಾದಕ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕಿದ್ದ ಹೆಸರು ಸೆಲ್ವಾ ಜುಡಂ ಎಂದು.

ಆದಿವಾಸಿ ಗೊಂಡಿ ಭಾಷೆಯಲ್ಲಿ ಸೆಲ್ವಾ ಜುಡುಂ ಎಂದರೇ, ತಣ್ಣನೆ ಸಾಮೂಹಿಕ ಬೇಟೆ ಎಂದು. ಛತ್ತೀಸ್​ಗಢ್ ರಾಜ್ಯದಲ್ಲಿ ಬಸ್ತಾರ್ ಎಂಬುದೊಂದು ಸಣ್ಣ ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಮತ್ತು ಅರಣ್ಯ ಸಂಪತ್ತನ್ನ ಗರ್ಭೀಕರಿಸಿಕೊಂಡಿದೆ. ಇಲ್ಲಿ ಉತ್ಕ್ರಷ್ಟ ದರ್ಜೆಯ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೋಲೋಮೈಟ್, ಬಾಕ್ಸೈಟ್, ವಜ್ರ ಸೇರಿದಂತೆ ಮತ್ತಿತರೆ ಖನಿಜ ಸಂಪತ್ತಿದೆ. ಹೀಗಾಗಿಯೇ ಅಲ್ಲಿನ ಸರ್ಕಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.

ಛತ್ತೀಸ್​ಗಢ ಸರ್ಕಾರ ಇಲ್ಲಿನ ಖನಿಜ ಸಂಪತ್ತನ್ನ ಬಗೆಯಲು mail_today5_070611101748ಹತ್ತಾರು ಖಾಸಗಿ ಗಣಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಮೊತ್ತವೇ 60 ಸಾವಿರ ಕೋಟಿಗಿಂತಲೂ ಅಧಿಕ. ಬಸ್ತಾರ್​ ನೆಲದಲ್ಲಿ ಹುದುಗಿರುವ ಖನಿಜ ಸಂಪತ್ತನ್ನ ಬಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗಷ್ಟೇ ಹೆಡೆ ಎತ್ತಿದ್ದ ಮಾವೋವಾದಿಗಳು ಖನಿಜ ಸಂಪತ್ತನ್ನ ಬಗೆಯುವುದಕ್ಕೆ ವಿರೋಧಿಸಿ, ಆದಿವಾಸಿಗಳ ಬೆನ್ನಿಗೆ ನಿಂತಿದ್ದರು.

ಹೀಗಾಗಿಯೇ, ಅಲ್ಲಿನ ಸರ್ಕಾರ ಆದಿವಾಸಿ ಸಂಸ್ಕೃತಿಯನ್ನ ಬುಡ ಸಮೇತ ಕೀಳಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾ ಜುಡಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನ ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನ ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.

selva judumಸೆಲ್ವಾ ಜುಡುಂ ವಿರುದ್ಧ ಕಳೆದ 5 ವರ್ಷಗಳ ಕೆಳಗೆ “ಆದಿವಾಸಿ ಕಲಾ ಮಂಚ್” ತಂಡ, ದೇಶಾದ್ಯಂತ ಸೆಲ್ವಾ ಜುಡಂನ ಭೀಕರತೆಯನ್ನ ಹೇಳಿತ್ತು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ತಂಡ ಸತ್ಯಾಂಶಗಳನ್ನ ಹೊರಗೆಡವಿತ್ತು. ಅದೇ ತಂಡ ಕರ್ನಾಟಕಕ್ಕೂ ಭೇಟಿ ನೀಡಿ ಶಿವಮೊಗ್ಗದಲ್ಲೂ ಸೆಲ್ವಾ ಜುಡುಂನ ಹಿಂದಿರುವ ಅದೆಷ್ಟೋ ಕರಾಳ ಕೃತ್ಯಗಳ ಕಠೋರ ಸತ್ಯಗಳನ್ನ ಬಿಚ್ಚಿಟ್ಟಿತ್ತು. ಆಗ ಆ ತಂಡದ ನೇತೃತ್ವ ವಹಿಸಿದ್ದು ರಾಜ್​ಕುಮಾರ್ ಎನ್ನುವ ಪುಟ್ಟ ಪೋರ. ಶಿವಮೊಗ್ಗಕ್ಕೆ ಆತ ಬಂದಾಗ ಆತನಿಗಿನ್ನೂ 14 ವರ್ಷ. 5ನೇ ತರಗತಿಗೆ ಶರಣು ಹೊಡೆದು, ತನ್ನ ತಾಯ್ನೆಲದ ಮೇಲಿನ ದೌರ್ಜನ್ಯವನ್ನ ಕಂಡಿದ್ದ ಆತನ ಕಣ್ಣುಗಳು ಆಕ್ರೋಶಗೊಂಡಿದ್ದವು. ಈತ ಹೋದಲೆಲ್ಲಾ ಹೇಳುತ್ತಿದ್ದಿದ್ದು `ಹಮ್ ಆದಿವಾಸಿ ಹೈ…ಜಂಗಲ್ ಬಿ ಹಮಾರಾ ಹೈ..ಜಂಗಲ್ ಮೆ ಮಿಲ್ನಾಕಾ ಸಂಪತ್ತಿ ಬಿ ಹಮಾರಾ ಹೈ(ನಾವು ಆದಿವಾಸಿಗಳು….ಇಲ್ಲಿನ ಅರಣ್ಯವೂ ನಮ್ಮದೇ…ಅರಣ್ಯದಲ್ಲಿ ದೊರಕುವ ಸಂಪತ್ತೂ ಕೂಡ ನಮ್ಮದೇ). ಈತನ ಹಾವ ಭಾವಗಳನ್ನ ನೋಡಿದವರಿಗೆ ಈತನನ್ನ ಎಲ್ಲರೂ ಗದ್ದರ್‌ಗೆ ಹೋಲಿಸುತ್ತಿದ್ದರು. ಈತನ ರಟ್ಟೆಯಲ್ಲಿ ಅಂಥಾ ಕಸುವು ಇರಲಿಲ್ಲ….ಮೀಸೆಯೂ ಮೂಡಿರಲಿಲ್ಲ. ಆದರೂ ರಾಜ್ಯ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದ. ಸೆಟೆದು ನಿಂತುಕೊಂಡೇ ಹೇಳಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

‘ಮೈ ಇದರ್ ದಮನ್ ಕಿ ಸಚ್ಚಾಯೇ ಬತಾನೆ ಆಯಾ ಹೂಂ. ಆಜ್ ಬಸ್ತಾರ್ ಮೇ ಜನತಾ ಕೆ ಊಪರ್ Saket_gaddarಥಂಢಾಕೆ ನಾಮ್ ಸೆ ಹತ್ಯಾರ್ ಚಲಾ ರಹೇ ಹೈ. ಔರ್ ಯೇ ಕಾರ್ವಾಯೇ ಶಾಂತಿ ಕೆ ಅಭಿಯಾನ್ ಕರ್ಕೆ ಸರ್ಕಾರ್ ಚಿಲ್ಲಾ ರಹೇ ಹೈ. ವೇಷ್ ಬದಲ್ಕರ್ ಶೈತಾನ್ ಆತೇ ಹೈ ಸಾಥ್ ಮೇ ಮಾಯಾ ಕಾ ಜಾಲ್ ಲಾತೇ ಹೈ'( ನಾನಿಲ್ಲಿ ನಮ್ಮನ್ನ ಹತ್ತಿಕ್ಕುತ್ತಿರುವ ಸತ್ಯಾಂಶಗಳನ್ನ ಹೇಳಲು ಬಂದಿರುವೆ. ಇವತ್ತು ಬಸ್ತಾರ್ ಜನರ ಮೇಲೆ ತಣ್ಣಗೆ ಆಯುಧಗಳನ್ನಿಡಿದು ನಮ್ಮನ್ನ ಹೊಡೆದುರುಳಿಸುತ್ತಿವೆ. ಇದನ್ನ ಶಾಂತಿ ಅಭಿಯಾನ ಎಂದು ಸರ್ಕಾರ ಕೂಗುತ್ತಿದೆ. ವೇಷ ಬದಲಿಸಿಕೊಂಡು ಸೈತಾನ ಬರುತ್ತಾನೆ ಮತ್ತು ಮಾಯೆಯ ಜಾಲ ಬೀಸುತ್ತಾನೆ.)

ಹಣೆಗೆ ಕೆಂಪು ಪಟ್ಟಿ, ಸೊಂಟಕ್ಕೆ ಹಸಿರು ಹೊದಿಕೆ ಸುತ್ತಿಕೊಂಡು ಹಾಡುತ್ತ ಹಾಡುತ್ತ…`ಸಾಥಿಯೋ ಚಲೇ ಚಲೋ…ದೂರ್ ನಹೀ…ಮುಕ್ತಾ ಕಾ ಮಕಾನ್…ಮುಕ್ತಿ ಗೀತ್ ಗಾತೆ ಕಹೋ….ಶಹೀದ್ ಹೋಂ…ಸಬ್ ಕೋ ಲಾಲ್ ಸಲಾಂ’ ಎಂದು ಹೇಳುವಾಗಲಂತೂ ಇಡೀ ಸಭಾಂಗಣ ಕೆಂಪಾಗಿತ್ತು.

ಮೊನ್ನೆ ಮೊನ್ನೆ ಮಾವೋವಾದಿಗಳು ಛತ್ತೀಸ್ಗಢದಲ್ಲಿ ನಡೆಸಿದ ಹತ್ಯೆಗಳೂ, ತಣ್ಣನೆಯ ಸಾಮೂಹಿಕ ಬೇಟೆಗೆ ಸಹಜವಾಗಿಯೇ ಪ್ರತಿಕಾರವಾಗಿತ್ತು. ಮಾವೋವಾದಿಗಳ ಪ್ರತಿಕಾರದ ಬಗೆ ಮತ್ತು ಪ್ರಭುತ್ವದ ಕಾರ್ಯಾಚರಣೆ ಎರಡೂ ಮನುಷ್ಯ ವಿರೋಧಿ. ಅಲ್ಲಿನ ಸರ್ಕಾರ ಆದಿವಾಸಿಗಳ ಏಳ್ಗೆಗೆ ಶಾಶ್ವತ ಯೋಜನೆಗಳನ್ನ ರೂಪಿಸಿ, ಅವರೂ ನಮ್ಮವರೇ ಎಂದು ಒಳಗೆ ಬಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು.

ನಿಜಕ್ಕೂ ಇಂಥ ಆಶಯ ಇನ್ನಾದರೂ ಈಡೇರಲಿ.

ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

– ಚಿದಂಬರ ಬೈಕಂಪಾಡಿ

ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಮುಖ್ಯವಾಗಿ ಅವರು ಈ ಹುದ್ದೆಯನ್ನು ಏರುವುದೇ ಅನುಮಾನ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆಗಳು ನಡೆದವು, ಆದರೆ ಅವೆಲ್ಲವೂ ಅನಿರೀಕ್ಷಿತವಾದವುಗಳಾಗಿದ್ದವು. ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುತ್ತಲೇ ಬಂದ ವ್ಯಕ್ತಿಗೆ ಎದುರಾದ ಈ ಬೆಳವಣಿಗೆ ಅಸಹಜವೇನಲ್ಲ. ನಿರಾಕರಿಸುವ ಮನಸ್ಸುಗಳ ಮುಂದೆ ಹೇಳಿಕೊಳ್ಳುವುದು ವ್ಯರ್ಥ ಎನ್ನುವುದು ಇತಿಹಾಸ ಹೇಳಿಕೊಟ್ಟಿರುವ ಪಾಠವಾಗಿರುವುದರಿಂದ ಅತ್ಯಂತ ಸಹಜವಾಗಿಯೇ ಉದಾರಿಯಾಗಬಹುದೇನೋ ಎನ್ನುವ ಆಶಯದೊಂದಿಗೆ Siddaramaiahಮುಖ್ಯಮಂತ್ರಿ ಹುದ್ದೆಗೆ ಶೋಷಿತ ಸಮುದಾಯ ಧ್ವನಿ ಎತ್ತಿರುವುದು ನಾಳೆಯ ಬಗ್ಗೆ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾರ್ಥಕವಾಗಿದೆ.

ಪ್ರಧಾನ ಮಂತ್ರಿ ಹುದ್ದೆ ಕೂಡಾ ಶೋಷಿತ ಸಮುದಾಯಕ್ಕೆ ಎಂದೋ ಸಿಗಬೇಕಿತ್ತು, ಆದರೆ ಅದು ಸಿಕ್ಕಿಲ್ಲ ಎನ್ನುವುದನ್ನು ಹೇಗೆ ತಾನೇ ನಿರಾಕರಿಸಲು ಸಾಧ್ಯ?. ಜಗಜೀವನ್‌ರಾಮ್ ಒಂದಲ್ಲ ಒಂದು ದಿನ ಪ್ರಧಾನಿಯಾಗುತ್ತಾರೆಂದೇ ಶೋಷಿತ ಸಮುದಾಯದ ಜನ ಭಾವಿಸಿದ್ದರು ಹೊರತು ಹಕ್ಕೊತ್ತಾಯ ಮಾಡುವಷ್ಟರಮಟ್ಟಿಗೆ ಸಬಲರಾಗಿರಲಿಲ್ಲ ಎನ್ನುವುದಕ್ಕಿಂತಲೂ ಧ್ವನಿ ಎತ್ತುವ ಸಾಮರ್ಥ್ಯವೇ ಬಹುತೇಕ ಜನರಿಗೆ ಆಗ ಇರಲಿಲ್ಲ ಎನ್ನುವುದೇ ಹೆಚ್ಚು ಸೂಕ್ತ. ಬಿ.ರಾಚಯ್ಯ, ರಂಗನಾಥ್ ಅವರೂ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುವಷ್ಟು ಸಾಮರ್ಥ್ಯಹೊಂದಿದ್ದರೂ ಅವಕಾಶ ಸಿಗಲಿಲ್ಲ. ಇವೆಲ್ಲವೂ ಇತಿಹಾಸದ ಪುಟ ತಿರುವಿದರೆ ಗೋಚರವಾಗುವ ವಾಸ್ತವ ಸಂಗತಿಗಳು.

ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುಲಭವಾಗಿ ಆಯ್ಕೆಯಾಗಿಬಿಟ್ಟರು ಎನ್ನುವಂತೆ ಭಾಸವಾಯಿತಾದರೂ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೈಕಮಾಂಡ್ ಇಷ್ಟೊಂದು ತ್ವರಿತವಾಗಿ ನಿರ್ಧಾರ ತೆಗೆದುಕೊಂಡದ್ದೇ ಅಚ್ಚರಿ. ಯಾಕೆಂದರೆ ಈ ಹಿಂದಿನ ಸಂದರ್ಭಗಳನ್ನು ಅವಲೋಕಿಸಿದರೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟುಕೊಡುವ ಒಂದು ಸಾಲಿನ ಸರ್ವಾನುಮತದ ನಿರ್ಣಯ ದೆಹಲಿ ತಲುಪಿ, ಅಲ್ಲಿ ಹೈಕಮಾಂಡ್ ಹಿರಿತಲೆಗಳು ಚರ್ಚಿಸಿ ಅಲ್ಲೂ ವಿಭಿನ್ನ ಅಭಿಪ್ರಾಯಗಳು ಮೂಡಿ ಅಲ್ಲಿ ಅಧ್ಯಕ್ಷರಿಗೆ ಅಧಿಕಾರ ಕೊಟ್ಟು ಕೈತೊಳೆದುಕೊಳ್ಳುವುದು. ಅಧ್ಯಕ್ಷರು ತಮ್ಮದೇ ಆದ ಮಾನದಂಡದ ಮೂಲಕ ಆಪ್ತರೊಂದಿಗೆ ಚರ್ಚಿಸಿ ಹೆಸರನ್ನು ಅಂತಿಮಗೊಳಿಸುವುದು ರೂಢಿ. ಇವೆಲ್ಲಕ್ಕೂ ಕನಿಷ್ಠ ಒಂದೆರಡು ದಿನವಾದರೂ ಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರ ಆಯ್ಕೆ ಕಸರತ್ತು ಕೆಲವೇ ಗಂಟೆಗಳಲ್ಲಿ ಮುಗಿಯುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ, ಹೈಕಮಾಂಡ್ ಮಟ್ಟದಲ್ಲೂ ಬದಲಾವಣೆ ಗಾಳಿಯ ಅನಿವಾರ್ಯತೆಯ ಅರಿವಾಗಿದೆ ಎನ್ನುವಂತಾಯಿತು.

ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವುದು ಖಚಿತವಾದ ಮೇಲೆ ಅವರ ಅಭಿಮಾನಿಗಳು ಖುಷಿಪಟ್ಟರು ಸಹಜವಾಗಿಯೇ. siddaramaiah-cmಆದರೆ ಅಧಿಕಾರ ಪಡೆಯಲಾಗದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅವರ ನಡೆಗಳನ್ನು ಪ್ರಶಂಸೆ ಮಾಡಲೇ ಬೇಕು. ಮಹತ್ವದ ಹುದ್ದೆಗೇರುವ ಅವಕಾಶ ಕೈತಪ್ಪಿದಾಗ ಅವರಿಬ್ಬರೂ ಆಂತರಿಕವಾಗಿ ಬಹಳ ನೊಂದುಕೊಂಡಿರುತ್ತಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ, ಆದರೆ ಹೈಕಮಾಂಡ್ ಆಯ್ಕೆ ವಿರುದ್ಧ ಧ್ವನಿ ಎತ್ತುವ ಅವಕಾಶವಿದ್ದರೂ ಧ್ವನಿ ಎತ್ತಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಂದರ್ಭಕ್ಕೆ ಇಬ್ಬರೂ ನಾಯಕರು ಸಾಕ್ಷಿಗಳಾಗಿ ಹೊಸ ಸಂದೇಶ ರವಾನಿಸಿದರು, ಇದನ್ನು ಸಿದ್ಧರಾಮಯ್ಯ ಅವರೂ ಅರ್ಥಮಾಡಿಕೊಂಡಿರುತ್ತಾರೆ. ಯಾಕೆಂದರೆ ಇಂಥ ಸಮುದಾಯಗಳಿಗೆ ಧ್ವನಿಯಾಗಬೆಕು ಎನ್ನುವ ಆಶಯವನ್ನು ಅವರು ಪ್ರತಿಪಾದಿಸುತ್ತಲೇ ಬಂದವರಾಗಿರುವುದರಿಂದ.

ಸಿದ್ಧರಾಮಯ್ಯ ತಮ್ಮ ಸಂಪುಟ ರಚನೆ ಮಾಡುವಾಗ, ಖಾತೆಗಳನ್ನು ಹಂಚಿಕೆ ಮಾಡುವಾಗಲೂ ಏಕವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳುವಂಥ ಮನಸ್ಸು ಮಾಡಿಲ್ಲ. ಹೈಕಮಾಂಡ್ ಹೆಗಲಿಗೆ ಆಯ್ಕೆಯ ಹೊಣೆ ಹೊರಿಸಿ ನಿರಾಳರಾದರು. ಈ ಸರ್ಕಾರದ ನಡೆಯಲ್ಲಿ ಅವರೂ ಭಾಗಿಗಳಾಗುವಂತೆ ಮಾಡಿದರು. ಬಹುತೇಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ಶರಣಾಗಿ ಶಸ್ತ್ರತ್ಯಾಗ ಮಾಡಿದಂತೆ ಅನೇಕರಿಗೆ ಕಂಡಿದ್ದರೆ ಅಚ್ಚರಿಪಡುವಂಥದ್ದೇನೂ ಇಲ್ಲ. ಯಾಕೆಂದರೆ ಅವರು ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ರೀತಿಯೇ ಹಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಿದ್ಧರಾಮಯ್ಯ ಕೂಡಾ ತಮ್ಮನ್ನು ಬದಲಿಸಿಕೊಂಡಿದ್ದಾರೆಯೇ ಹೊರತು ಆಂತರಿಕವಾದ ಮನಸ್ಸನ್ನು ಬಿಟ್ಟುಕೊಟ್ಟಿಲ್ಲ ಬಿಟ್ಟುಕೊಡುವ ಮನಸ್ಥಿತಿಯವರೂ ಅಲ್ಲ ಎನ್ನುವುದು ಇಲ್ಲಿ ಮುಖ್ಯ.

ಸಿದ್ಧರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಅನೇಕ ಮಂದಿ ಹೋಲಿಕೆ ಮಾಡಿದ್ದರು, ಭಾರೀ ಭರವಸೆಯ ಮಾತುಗಳನ್ನು ಆಡಿದ್ದರು. ಅವುಗಳಲ್ಲಿ ಹೆಚ್ಚಿನವು ಅವರನ್ನು ಮೆಚ್ಚಿಸುವುದಕ್ಕೇ ಹೊರತು ಸಿದ್ಧರಾಮಯ್ಯ ಅವರ ನಿಜವಾದ ಕಾಳಜಿಯನ್ನು ಗುರುತಿಸಿದಂಥವಲ್ಲ. Devaraj Arasಸಿದ್ಧರಾಮಯ್ಯ ಯಾರ ಪಡಿಯಚ್ಚೂ ಆಗುವುದಿಲ್ಲ, ಸಿದ್ಧರಾಮಯ್ಯ ಅವರದ್ದೇ ಆದ ಸ್ವಂತಿಕೆಯನ್ನು ಬೆಳೆಸಿಕೊಂಡೇ ರಾಜಕೀಯದಲ್ಲಿ ಬೆಳೆದು ಬಂದಿರುವುದರಿಂದ ಅವರ ಆಡಳಿತವೂ ಸಿದ್ಧರಾಮಯ್ಯ ಅವರ ಆಡಳಿತವೇ ಆಗಿರುತ್ತದೇ ಹೊರತು ಮತ್ತೊಬ್ಬರದ್ದಲ್ಲ.

ಸಿದ್ಧರಾಮಯ್ಯ ಅವರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡು ಆತ್ಮ ತೃಪ್ತಿಪಡುವ ಜಾಯಮಾನದವರಂತೂ ಖಂಡಿತಾ ಅಲ್ಲ. ಅವರೇ ಚಿಂತಿಸಿ ಜಾರಿಗೆ ತರುವಂಥ ಕಾರ್ಯಕ್ರಮಗಳು ಅವರು ನಿರೀಕ್ಷೆಯಿಟ್ಟುಕೊಂಡ ವ್ಯಕ್ತಿಗೆ ತಲುಪುವಂತೆ ಮಾಡುವ, ಅಧಿಕಾರಿಗಳೇ ತಲುಪಿಸಿ ವರದಿ ಒಪ್ಪಿಸುವಂತೆ ಹೊಣೆಗಾರರನ್ನಾಗಿ ಮಾಡುವಂಥ ಸಾಮರ್ಥ್ಯ, ಜಾಣ್ಮೆ ಸಿದ್ಧರಾಮಯ್ಯ ಅವರಿಗಿದೆ. ಎಲ್ಲಿ ಸೋರಿಕೆಯಾಗುತ್ತದೆ ಎನ್ನುವುದನ್ನು ಗುರುತಿಸುವಷ್ಟು ಸ್ವಂತ ಬುದ್ಧಿಬಲವಿದೆ ಅವರಿಗೆ. ಒಂದು ರೂಪಾಯಿಗೆ ಅಕ್ಕಿ ವಿತರಣೆ, ಸಾಲ ಮನ್ನದಂಥ ಯಾರೂ ಅಷ್ಟು ಬೇಗ ನಿರೀಕ್ಷೆ ಮಾಡದಂಥ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ಮಾಡಿದ್ದು ಆತುರವಾಯಿತು ಎನ್ನುವ ಮಾತುಗಳು ಕೇಳಿಬಂದವು. ಆದರೆ ಅವರ ಈ ಘೋಷಣೆಯ ಹಿಂದೆ ಖಚಿತವಾಗಿ ಕೊರತೆಯನ್ನು ತುಂಬಿಸಿಕೊಳ್ಳುವ ಸ್ಪಷ್ಟ ದಾರಿಗಳನ್ನು ಗುರುತಿಸಿಕೊಂಡಿದ್ದಾರೆ. ಅಧಿಕಾರಿಗಳು ಗುರುತಿಸಿರದ ಹೊಸ ಕಾಲು ದಾರಿಗಳನ್ನು ಸಿದ್ಧರಾಮಯ್ಯ ಗುರುತಿಸಿದ್ದಾರೆ. ಬಹಳ ಮುಖ್ಯವಾಗಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಒಂದು ಸರ್ಕಾರದ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಎಷ್ಟಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ಅವರ ಮುಂದಿರುವ ಸವಾಲು ಕೂಡಾ ಅದೇ ಆಗಿದೆ. ತಮ್ಮ ಯೋಚನೆ, ಯೋಜನೆಗಳು ಸಾಕಾರಗೊಳ್ಳಲು ಎಂಥ ಅಧಿಕಾರಿಗಳನ್ನು ಸುತ್ತಲೂ ಇಟ್ಟುಕೊಳ್ಳಬೇಕು, ಯೋಜನೆಗಳನ್ನು ಮಾನಿಟರಿಂಗ್ ಮಾಡಲು ಯಾರು ಸಮರ್ಥರು ಎನ್ನುವುದನ್ನು ಗುರುತಿಸಿ ನಿಯೋಜಿಸಿದರೆ ಎಲ್ಲವೂ ಸುಗಮವಾಗುತ್ತದೆ.

ಜಾತಿ ಪ್ರೇಮ, ಅಧಿಕಾರದ ಆಸೆ, ಧನದಾಹ ಈ ಮೂರನ್ನೂ ಸಿದ್ಧರಾಮಯ್ಯ ನಿರಾಕರಿಸುತ್ತಾರೆ. ಅದಷ್ಟೇ ಸಾಲದು, ಅವರ ಸುತ್ತಲೂ ಅಂಥ ಮನಸ್ಥಿತಿಯ ಅಧಿಕಾರಿಗಳೇ ಇರಬೇಕು. ಸಿದ್ಧರಾಮಯ್ಯ ಅವರ ಬಗ್ಗೆ ಜನರಿಗೆ ಅಪಾರ ನಿರೀಕ್ಷೆ ಇರುವುದಕ್ಕೆ ಬಲವಾದ ಕಾರಣಗಳೂ ಕೂಡಾ ಇವೇ ಆಗಿವೆ.

ಸಿದ್ಧರಾಮಯ್ಯ ಅವರ ಸೈದ್ಧಾಂತಿಕ ನಿಲುವುಗಳನ್ನು ಕೆಣಕುವಂಥ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ. ಇದಕ್ಕೆ ಉದಾಹರಣೆ ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ತರುವ ಬಗೆಗಿನ ಚಿಂತನೆ. ಇದಕ್ಕೆ ಶತಶತಮಾನಗಳಿಂದ ಬೆಳೆದುಬಂದಿರುವ ಇತಿಹಾಸದ ದೊಡ್ಡ ನಡೆಯಿದೆ. ಸಿಕ್ಸರ್ ಬಾರಿಸಿದರೆ ಗೆಲ್ಲುವುದು ಸಾಧ್ಯವಿಲ್ಲ. ಗೆಲ್ಲಲು ಆರು ರನ್ನು ಅನಿವಾರ್ಯವಾದಾಗ ಒಂದೇ ಚೆಂಡು ಇದ್ದಾಗ ಸಿಕ್ಸರ್ ಬಾರಿಸದೇ ಗೆಲ್ಲುವುದು ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರಿಗೆ ಐದು ವರ್ಷಗಳ ಅವಕಾಶವಿದೆ. ಸಾಕಷ್ಟು ಹೋಮ್ ವರ್ಕ್ ಆಗಬೇಕಾಗುತ್ತದೆ, ನಿಧಾನವಾಗಿ ಯೋಚಿಸಿ. ಯಾಕೆಂದರೆ ಇದು ಸರ್ಕಾರದ ಮೊದಲ ಆದ್ಯತೆಯಲ್ಲ. ಅನ್ನ, ನೀರು, ಮನೆ ಎಲ್ಲರಿಗೂ ಸಿಗುವಂತೆ ಮಾಡುವುದು ಮುಖ್ಯ. ಸಾಧ್ಯವಾದರೆ ಈ ರಾಜ್ಯದಲ್ಲಿ ಅದೆಷ್ಟೋ ದೇವಾಲಯಗಳಲ್ಲಿ ದೇವರಿಗೆ ದೀಪ ಹಚ್ಚಲು ಬೇಕಾಗುವಷ್ಟು ಕಾಣಿಕೆ ಉತ್ಪತ್ತಿಯಾಗದ ದೇವಾಲಯಗಳಿವೆ. ಅಂಥ ದೇವಾಲಯಗಳಿಗೆ ದೀಪ ಉರಿಸಲು ಎಣ್ಣೆಗಾದರೂ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿ. ಅಲ್ಲೂ ದೇವರ ಮೂರ್ತಿಗೆ ಬೆಳಕು ಬೀಳಲಿ. ಆ ಬೆಳಕಿನಲ್ಲಿ ಒಂದಷ್ಟು ಹೊಸ ವಿಚಾರಗಳು ಹೊತ್ತಿ ಉರಿಯಲಿ, ನಾಡಿಗೆ ಬೆಳಕಾಗಲಿ.