ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

– ಚಿದಂಬರ ಬೈಕಂಪಾಡಿ

ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಮುಖ್ಯವಾಗಿ ಅವರು ಈ ಹುದ್ದೆಯನ್ನು ಏರುವುದೇ ಅನುಮಾನ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆಗಳು ನಡೆದವು, ಆದರೆ ಅವೆಲ್ಲವೂ ಅನಿರೀಕ್ಷಿತವಾದವುಗಳಾಗಿದ್ದವು. ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುತ್ತಲೇ ಬಂದ ವ್ಯಕ್ತಿಗೆ ಎದುರಾದ ಈ ಬೆಳವಣಿಗೆ ಅಸಹಜವೇನಲ್ಲ. ನಿರಾಕರಿಸುವ ಮನಸ್ಸುಗಳ ಮುಂದೆ ಹೇಳಿಕೊಳ್ಳುವುದು ವ್ಯರ್ಥ ಎನ್ನುವುದು ಇತಿಹಾಸ ಹೇಳಿಕೊಟ್ಟಿರುವ ಪಾಠವಾಗಿರುವುದರಿಂದ ಅತ್ಯಂತ ಸಹಜವಾಗಿಯೇ ಉದಾರಿಯಾಗಬಹುದೇನೋ ಎನ್ನುವ ಆಶಯದೊಂದಿಗೆ Siddaramaiahಮುಖ್ಯಮಂತ್ರಿ ಹುದ್ದೆಗೆ ಶೋಷಿತ ಸಮುದಾಯ ಧ್ವನಿ ಎತ್ತಿರುವುದು ನಾಳೆಯ ಬಗ್ಗೆ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾರ್ಥಕವಾಗಿದೆ.

ಪ್ರಧಾನ ಮಂತ್ರಿ ಹುದ್ದೆ ಕೂಡಾ ಶೋಷಿತ ಸಮುದಾಯಕ್ಕೆ ಎಂದೋ ಸಿಗಬೇಕಿತ್ತು, ಆದರೆ ಅದು ಸಿಕ್ಕಿಲ್ಲ ಎನ್ನುವುದನ್ನು ಹೇಗೆ ತಾನೇ ನಿರಾಕರಿಸಲು ಸಾಧ್ಯ?. ಜಗಜೀವನ್‌ರಾಮ್ ಒಂದಲ್ಲ ಒಂದು ದಿನ ಪ್ರಧಾನಿಯಾಗುತ್ತಾರೆಂದೇ ಶೋಷಿತ ಸಮುದಾಯದ ಜನ ಭಾವಿಸಿದ್ದರು ಹೊರತು ಹಕ್ಕೊತ್ತಾಯ ಮಾಡುವಷ್ಟರಮಟ್ಟಿಗೆ ಸಬಲರಾಗಿರಲಿಲ್ಲ ಎನ್ನುವುದಕ್ಕಿಂತಲೂ ಧ್ವನಿ ಎತ್ತುವ ಸಾಮರ್ಥ್ಯವೇ ಬಹುತೇಕ ಜನರಿಗೆ ಆಗ ಇರಲಿಲ್ಲ ಎನ್ನುವುದೇ ಹೆಚ್ಚು ಸೂಕ್ತ. ಬಿ.ರಾಚಯ್ಯ, ರಂಗನಾಥ್ ಅವರೂ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುವಷ್ಟು ಸಾಮರ್ಥ್ಯಹೊಂದಿದ್ದರೂ ಅವಕಾಶ ಸಿಗಲಿಲ್ಲ. ಇವೆಲ್ಲವೂ ಇತಿಹಾಸದ ಪುಟ ತಿರುವಿದರೆ ಗೋಚರವಾಗುವ ವಾಸ್ತವ ಸಂಗತಿಗಳು.

ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುಲಭವಾಗಿ ಆಯ್ಕೆಯಾಗಿಬಿಟ್ಟರು ಎನ್ನುವಂತೆ ಭಾಸವಾಯಿತಾದರೂ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೈಕಮಾಂಡ್ ಇಷ್ಟೊಂದು ತ್ವರಿತವಾಗಿ ನಿರ್ಧಾರ ತೆಗೆದುಕೊಂಡದ್ದೇ ಅಚ್ಚರಿ. ಯಾಕೆಂದರೆ ಈ ಹಿಂದಿನ ಸಂದರ್ಭಗಳನ್ನು ಅವಲೋಕಿಸಿದರೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟುಕೊಡುವ ಒಂದು ಸಾಲಿನ ಸರ್ವಾನುಮತದ ನಿರ್ಣಯ ದೆಹಲಿ ತಲುಪಿ, ಅಲ್ಲಿ ಹೈಕಮಾಂಡ್ ಹಿರಿತಲೆಗಳು ಚರ್ಚಿಸಿ ಅಲ್ಲೂ ವಿಭಿನ್ನ ಅಭಿಪ್ರಾಯಗಳು ಮೂಡಿ ಅಲ್ಲಿ ಅಧ್ಯಕ್ಷರಿಗೆ ಅಧಿಕಾರ ಕೊಟ್ಟು ಕೈತೊಳೆದುಕೊಳ್ಳುವುದು. ಅಧ್ಯಕ್ಷರು ತಮ್ಮದೇ ಆದ ಮಾನದಂಡದ ಮೂಲಕ ಆಪ್ತರೊಂದಿಗೆ ಚರ್ಚಿಸಿ ಹೆಸರನ್ನು ಅಂತಿಮಗೊಳಿಸುವುದು ರೂಢಿ. ಇವೆಲ್ಲಕ್ಕೂ ಕನಿಷ್ಠ ಒಂದೆರಡು ದಿನವಾದರೂ ಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರ ಆಯ್ಕೆ ಕಸರತ್ತು ಕೆಲವೇ ಗಂಟೆಗಳಲ್ಲಿ ಮುಗಿಯುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ, ಹೈಕಮಾಂಡ್ ಮಟ್ಟದಲ್ಲೂ ಬದಲಾವಣೆ ಗಾಳಿಯ ಅನಿವಾರ್ಯತೆಯ ಅರಿವಾಗಿದೆ ಎನ್ನುವಂತಾಯಿತು.

ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವುದು ಖಚಿತವಾದ ಮೇಲೆ ಅವರ ಅಭಿಮಾನಿಗಳು ಖುಷಿಪಟ್ಟರು ಸಹಜವಾಗಿಯೇ. siddaramaiah-cmಆದರೆ ಅಧಿಕಾರ ಪಡೆಯಲಾಗದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅವರ ನಡೆಗಳನ್ನು ಪ್ರಶಂಸೆ ಮಾಡಲೇ ಬೇಕು. ಮಹತ್ವದ ಹುದ್ದೆಗೇರುವ ಅವಕಾಶ ಕೈತಪ್ಪಿದಾಗ ಅವರಿಬ್ಬರೂ ಆಂತರಿಕವಾಗಿ ಬಹಳ ನೊಂದುಕೊಂಡಿರುತ್ತಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ, ಆದರೆ ಹೈಕಮಾಂಡ್ ಆಯ್ಕೆ ವಿರುದ್ಧ ಧ್ವನಿ ಎತ್ತುವ ಅವಕಾಶವಿದ್ದರೂ ಧ್ವನಿ ಎತ್ತಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಂದರ್ಭಕ್ಕೆ ಇಬ್ಬರೂ ನಾಯಕರು ಸಾಕ್ಷಿಗಳಾಗಿ ಹೊಸ ಸಂದೇಶ ರವಾನಿಸಿದರು, ಇದನ್ನು ಸಿದ್ಧರಾಮಯ್ಯ ಅವರೂ ಅರ್ಥಮಾಡಿಕೊಂಡಿರುತ್ತಾರೆ. ಯಾಕೆಂದರೆ ಇಂಥ ಸಮುದಾಯಗಳಿಗೆ ಧ್ವನಿಯಾಗಬೆಕು ಎನ್ನುವ ಆಶಯವನ್ನು ಅವರು ಪ್ರತಿಪಾದಿಸುತ್ತಲೇ ಬಂದವರಾಗಿರುವುದರಿಂದ.

ಸಿದ್ಧರಾಮಯ್ಯ ತಮ್ಮ ಸಂಪುಟ ರಚನೆ ಮಾಡುವಾಗ, ಖಾತೆಗಳನ್ನು ಹಂಚಿಕೆ ಮಾಡುವಾಗಲೂ ಏಕವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳುವಂಥ ಮನಸ್ಸು ಮಾಡಿಲ್ಲ. ಹೈಕಮಾಂಡ್ ಹೆಗಲಿಗೆ ಆಯ್ಕೆಯ ಹೊಣೆ ಹೊರಿಸಿ ನಿರಾಳರಾದರು. ಈ ಸರ್ಕಾರದ ನಡೆಯಲ್ಲಿ ಅವರೂ ಭಾಗಿಗಳಾಗುವಂತೆ ಮಾಡಿದರು. ಬಹುತೇಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ಶರಣಾಗಿ ಶಸ್ತ್ರತ್ಯಾಗ ಮಾಡಿದಂತೆ ಅನೇಕರಿಗೆ ಕಂಡಿದ್ದರೆ ಅಚ್ಚರಿಪಡುವಂಥದ್ದೇನೂ ಇಲ್ಲ. ಯಾಕೆಂದರೆ ಅವರು ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ರೀತಿಯೇ ಹಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಿದ್ಧರಾಮಯ್ಯ ಕೂಡಾ ತಮ್ಮನ್ನು ಬದಲಿಸಿಕೊಂಡಿದ್ದಾರೆಯೇ ಹೊರತು ಆಂತರಿಕವಾದ ಮನಸ್ಸನ್ನು ಬಿಟ್ಟುಕೊಟ್ಟಿಲ್ಲ ಬಿಟ್ಟುಕೊಡುವ ಮನಸ್ಥಿತಿಯವರೂ ಅಲ್ಲ ಎನ್ನುವುದು ಇಲ್ಲಿ ಮುಖ್ಯ.

ಸಿದ್ಧರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಅನೇಕ ಮಂದಿ ಹೋಲಿಕೆ ಮಾಡಿದ್ದರು, ಭಾರೀ ಭರವಸೆಯ ಮಾತುಗಳನ್ನು ಆಡಿದ್ದರು. ಅವುಗಳಲ್ಲಿ ಹೆಚ್ಚಿನವು ಅವರನ್ನು ಮೆಚ್ಚಿಸುವುದಕ್ಕೇ ಹೊರತು ಸಿದ್ಧರಾಮಯ್ಯ ಅವರ ನಿಜವಾದ ಕಾಳಜಿಯನ್ನು ಗುರುತಿಸಿದಂಥವಲ್ಲ. Devaraj Arasಸಿದ್ಧರಾಮಯ್ಯ ಯಾರ ಪಡಿಯಚ್ಚೂ ಆಗುವುದಿಲ್ಲ, ಸಿದ್ಧರಾಮಯ್ಯ ಅವರದ್ದೇ ಆದ ಸ್ವಂತಿಕೆಯನ್ನು ಬೆಳೆಸಿಕೊಂಡೇ ರಾಜಕೀಯದಲ್ಲಿ ಬೆಳೆದು ಬಂದಿರುವುದರಿಂದ ಅವರ ಆಡಳಿತವೂ ಸಿದ್ಧರಾಮಯ್ಯ ಅವರ ಆಡಳಿತವೇ ಆಗಿರುತ್ತದೇ ಹೊರತು ಮತ್ತೊಬ್ಬರದ್ದಲ್ಲ.

ಸಿದ್ಧರಾಮಯ್ಯ ಅವರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡು ಆತ್ಮ ತೃಪ್ತಿಪಡುವ ಜಾಯಮಾನದವರಂತೂ ಖಂಡಿತಾ ಅಲ್ಲ. ಅವರೇ ಚಿಂತಿಸಿ ಜಾರಿಗೆ ತರುವಂಥ ಕಾರ್ಯಕ್ರಮಗಳು ಅವರು ನಿರೀಕ್ಷೆಯಿಟ್ಟುಕೊಂಡ ವ್ಯಕ್ತಿಗೆ ತಲುಪುವಂತೆ ಮಾಡುವ, ಅಧಿಕಾರಿಗಳೇ ತಲುಪಿಸಿ ವರದಿ ಒಪ್ಪಿಸುವಂತೆ ಹೊಣೆಗಾರರನ್ನಾಗಿ ಮಾಡುವಂಥ ಸಾಮರ್ಥ್ಯ, ಜಾಣ್ಮೆ ಸಿದ್ಧರಾಮಯ್ಯ ಅವರಿಗಿದೆ. ಎಲ್ಲಿ ಸೋರಿಕೆಯಾಗುತ್ತದೆ ಎನ್ನುವುದನ್ನು ಗುರುತಿಸುವಷ್ಟು ಸ್ವಂತ ಬುದ್ಧಿಬಲವಿದೆ ಅವರಿಗೆ. ಒಂದು ರೂಪಾಯಿಗೆ ಅಕ್ಕಿ ವಿತರಣೆ, ಸಾಲ ಮನ್ನದಂಥ ಯಾರೂ ಅಷ್ಟು ಬೇಗ ನಿರೀಕ್ಷೆ ಮಾಡದಂಥ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ಮಾಡಿದ್ದು ಆತುರವಾಯಿತು ಎನ್ನುವ ಮಾತುಗಳು ಕೇಳಿಬಂದವು. ಆದರೆ ಅವರ ಈ ಘೋಷಣೆಯ ಹಿಂದೆ ಖಚಿತವಾಗಿ ಕೊರತೆಯನ್ನು ತುಂಬಿಸಿಕೊಳ್ಳುವ ಸ್ಪಷ್ಟ ದಾರಿಗಳನ್ನು ಗುರುತಿಸಿಕೊಂಡಿದ್ದಾರೆ. ಅಧಿಕಾರಿಗಳು ಗುರುತಿಸಿರದ ಹೊಸ ಕಾಲು ದಾರಿಗಳನ್ನು ಸಿದ್ಧರಾಮಯ್ಯ ಗುರುತಿಸಿದ್ದಾರೆ. ಬಹಳ ಮುಖ್ಯವಾಗಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಒಂದು ಸರ್ಕಾರದ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಎಷ್ಟಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ಅವರ ಮುಂದಿರುವ ಸವಾಲು ಕೂಡಾ ಅದೇ ಆಗಿದೆ. ತಮ್ಮ ಯೋಚನೆ, ಯೋಜನೆಗಳು ಸಾಕಾರಗೊಳ್ಳಲು ಎಂಥ ಅಧಿಕಾರಿಗಳನ್ನು ಸುತ್ತಲೂ ಇಟ್ಟುಕೊಳ್ಳಬೇಕು, ಯೋಜನೆಗಳನ್ನು ಮಾನಿಟರಿಂಗ್ ಮಾಡಲು ಯಾರು ಸಮರ್ಥರು ಎನ್ನುವುದನ್ನು ಗುರುತಿಸಿ ನಿಯೋಜಿಸಿದರೆ ಎಲ್ಲವೂ ಸುಗಮವಾಗುತ್ತದೆ.

ಜಾತಿ ಪ್ರೇಮ, ಅಧಿಕಾರದ ಆಸೆ, ಧನದಾಹ ಈ ಮೂರನ್ನೂ ಸಿದ್ಧರಾಮಯ್ಯ ನಿರಾಕರಿಸುತ್ತಾರೆ. ಅದಷ್ಟೇ ಸಾಲದು, ಅವರ ಸುತ್ತಲೂ ಅಂಥ ಮನಸ್ಥಿತಿಯ ಅಧಿಕಾರಿಗಳೇ ಇರಬೇಕು. ಸಿದ್ಧರಾಮಯ್ಯ ಅವರ ಬಗ್ಗೆ ಜನರಿಗೆ ಅಪಾರ ನಿರೀಕ್ಷೆ ಇರುವುದಕ್ಕೆ ಬಲವಾದ ಕಾರಣಗಳೂ ಕೂಡಾ ಇವೇ ಆಗಿವೆ.

ಸಿದ್ಧರಾಮಯ್ಯ ಅವರ ಸೈದ್ಧಾಂತಿಕ ನಿಲುವುಗಳನ್ನು ಕೆಣಕುವಂಥ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ. ಇದಕ್ಕೆ ಉದಾಹರಣೆ ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ತರುವ ಬಗೆಗಿನ ಚಿಂತನೆ. ಇದಕ್ಕೆ ಶತಶತಮಾನಗಳಿಂದ ಬೆಳೆದುಬಂದಿರುವ ಇತಿಹಾಸದ ದೊಡ್ಡ ನಡೆಯಿದೆ. ಸಿಕ್ಸರ್ ಬಾರಿಸಿದರೆ ಗೆಲ್ಲುವುದು ಸಾಧ್ಯವಿಲ್ಲ. ಗೆಲ್ಲಲು ಆರು ರನ್ನು ಅನಿವಾರ್ಯವಾದಾಗ ಒಂದೇ ಚೆಂಡು ಇದ್ದಾಗ ಸಿಕ್ಸರ್ ಬಾರಿಸದೇ ಗೆಲ್ಲುವುದು ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರಿಗೆ ಐದು ವರ್ಷಗಳ ಅವಕಾಶವಿದೆ. ಸಾಕಷ್ಟು ಹೋಮ್ ವರ್ಕ್ ಆಗಬೇಕಾಗುತ್ತದೆ, ನಿಧಾನವಾಗಿ ಯೋಚಿಸಿ. ಯಾಕೆಂದರೆ ಇದು ಸರ್ಕಾರದ ಮೊದಲ ಆದ್ಯತೆಯಲ್ಲ. ಅನ್ನ, ನೀರು, ಮನೆ ಎಲ್ಲರಿಗೂ ಸಿಗುವಂತೆ ಮಾಡುವುದು ಮುಖ್ಯ. ಸಾಧ್ಯವಾದರೆ ಈ ರಾಜ್ಯದಲ್ಲಿ ಅದೆಷ್ಟೋ ದೇವಾಲಯಗಳಲ್ಲಿ ದೇವರಿಗೆ ದೀಪ ಹಚ್ಚಲು ಬೇಕಾಗುವಷ್ಟು ಕಾಣಿಕೆ ಉತ್ಪತ್ತಿಯಾಗದ ದೇವಾಲಯಗಳಿವೆ. ಅಂಥ ದೇವಾಲಯಗಳಿಗೆ ದೀಪ ಉರಿಸಲು ಎಣ್ಣೆಗಾದರೂ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿ. ಅಲ್ಲೂ ದೇವರ ಮೂರ್ತಿಗೆ ಬೆಳಕು ಬೀಳಲಿ. ಆ ಬೆಳಕಿನಲ್ಲಿ ಒಂದಷ್ಟು ಹೊಸ ವಿಚಾರಗಳು ಹೊತ್ತಿ ಉರಿಯಲಿ, ನಾಡಿಗೆ ಬೆಳಕಾಗಲಿ.

3 thoughts on “ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

 1. Prasanna Rao

  Why bother about Temples. Keep out all religions and religious thought-force. Siddaramiah himself has told that he is an atheist. Thats a good sign. Work for important issues.

  Reply
 2. Pavan

  Nanaganthu gottilla yake 1 rupayige ondu kg akki kottu janarannu somarigalannu madtha idare anta mattu ee jana adanna doddadage heltha idare anta…

  Reply
 3. ಜೆ.ವಿ.ಕಾರ್ಲೊ, ಹಾಸನ

  ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಮಾತ್ರವೋ, ಗೋಧಿ, ಜೋಳ, ರಾಗಿಯೂ ಸಿಗುತ್ತದೋ ಗೊತ್ತಿಲ್ಲ. ನನಗೆ ಗೊತ್ತಿರುವಂತೆ, ನಾನೊಬ್ಬ ಮನೆ ಕಟ್ಟಿಸುವ ಗುತ್ತಿಗೆದಾರ, ನನ್ನ ಬಳಿ ಕೆಲಸಕ್ಕೆ ಬರುವ ಕೂಲಿಯಾಳುಗಳು (ಹಾಸನ) ಸಾಮಾನ್ಯವಾಗಿ ರಾಗಿಯನ್ನು ಮುಖ್ಯ ಆಹಾರವನ್ನಾಗಿ ಇಷ್ಟಪಡುವವರು. ನಾನು ಇವರು ಏನನ್ನು ತಿನ್ನುತ್ತಿದ್ದಾರೆ ಎಂದು ಕೆಲವೊಮ್ಮೆ ಕುತೂಹಲದಿಂದ ನೋಡುವುದುಂಟು. ಇವರುಗಳ ಬುತ್ತಿಯಲ್ಲಿ ನನಗೆ ಕಾಣುವುದು ಬರೇ ಮೊಸರನ್ನ, ಚಿತ್ರಾನ್ನಾ! ಇವರೆಲ್ಲಾ BPL ಕಾರ್ಡ್ ದಾರರು. ಅಕ್ಕಿಗೆ ಕೇಜಿ ಗೆ ಒಂದು ರುಪಾಯಿ ಎಂದು ಇವರೆಲ್ಲಾ ಅವರ ಆಹಾರ ಅಭ್ಯಾಸಗಳನ್ನು ಬದಲಾಯಿಸಬೇಕಾಗಿದೆ.

  ನನಗೆ APL ಕಾರ್ಡ್ ದಯಪಾಲಿಸಿದ್ದಾರೆ. ನನ್ನ ಕಾರ್ಡಿಗೆ ಏನೂ ಸಿಗುವುದಿಲ್ಲ! ನಿಮ್ಮ ಕಾರ್ಡಿಗೆ ಏನೂ ಸಿಗುವುದಿಲ್ಲವೆಂದು ರೇಶನ್ ಕಾರ್ಡಿನ ಅಂಗಡಿಯವನು ಹೇಳುತ್ತಾನೆ. ಬಾಡಿಗೆ ಮನೆಯಲ್ಲಿದ್ದರೂ ನಿಮಗೆ ಗ್ಯಾಸುಂಟು, ಟ್ಹು ವೀಲರುಂಟು, ಟಿವಿಯುಂಟು! ಕಾರಲ್ಲಿ ಬಂದು ಬಿಪಿಎಲ್ ಪಡಿತರ ಕೊಂಡೊಯ್ಯುವವರನ್ನು ನೋಡಿದಾಗ ಹೊಟ್ಟೆಯುರಿಯುತ್ತದೆ. 2010 ರ ಕೆಳಗೆ ಪಡಿತರ ಚೀಟಿ ಹೊಂದಿದವರದು ಮಾನ್ಯವಲ್ಲವಂತೆ!

  ಇದು ನನಗೆ ಮಾತ್ರವಲ್ಲ, ನನ್ನ ಕೈಕೆಳಗೆ ಕೆಲಸ ಮಾಡುವ ಬಿಪಿಎಲ್ ಕಾರ್ಡುದಾರರ ಕತೆಯೂ ಹೌದು. ಅವರು ಮತ್ತೊಂದು ಭಾರಿ ಬಿಪಿಎಲ್ ಎಂದು ಸಾಬೀತು ಪಡಿಸಬೇಕಿದೆ! ಜೊತೆಗೆ ಅವರು ಬಿಪಿಎಲ್ ಎಂದು ಒಬ್ಬ ಸಾಕ್ಷಿಯನ್ನೂ ಕರೆದೊಯ್ಯಬೇಕಂತೆ!

  ಈ ದೇಶದಲ್ಲಿ ಗುರುತಿನ ಚೀಟಿ ಪಡೆಯುವ ಪ್ರಕ್ರಿಯೆ ನಿರಂತರವೇ? ಇದಕ್ಕೆ ಅಂತ್ಯವಿಲ್ಲವೇ?

  ಮೊಂಟೇಕ್ ಸಿಂಗ್ ಆಹ್ಲುವಾಲಿಯನ ಆಧಾರ್ ಕಾರ್ಡ್ ಕಳೆದು ಹೋಗಿದೆ ಎಂದಾಕ್ಷಣಾ ಎದ್ದು ಬಿದ್ದು ಅರ್ಧ ಘಂಟೆಯಲ್ಲಿ ಮತ್ತೊಂದು ಕಾರ್ಡ್ ದಯಪಾಲಿಸುವ ನಮ್ಮ IAS ಗುಮಾಸ್ತರು, ಮೂರು ತಿಂಗಳೊಳಗೆ ಕಾರ್ಡು ಮನೆ ಬಾಗಿಲಿಗೆ ಬರುವುದೆಂದು ಘೋಷಿಸಿಕೊಂಡರೂ ಆರು ತಿಂಗಳು ಕಳೆದರೂ ಬಾರದಿರುವುದಕ್ಕೆ
  ಏನು ಕಾರಣ ಕೊಡುತ್ತಾರೆ?

  Reply

Leave a Reply to Pavan Cancel reply

Your email address will not be published.