ಘನ ಹುದ್ದೆಗೆ ಘನತೆ ತರಬಲ್ಲ ಛಲಗಾರ ಕಾಗೋಡು

– ಚಿದಂಬರ ಬೈಕಂಪಾಡಿ

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಸಿದ್ಧಾಂತದ ಸಮೃದ್ಧವಾದ ಮಣ್ಣು. ಈ ಮಣ್ಣಿನ ಕಾಗೋಡು ತಿಮ್ಮಪ್ಪ ಈಗ ವಿಧಾನಸಭೆಯ ೧೯ನೇ ಸಭಾಪತಿ. ಅತ್ಯಂತ ಸಜ್ಜನ ಮತ್ತು ನಿಜಕ್ಕೂ ತೂಕದ ವ್ಯಕ್ತಿತ್ವ. ಬಹುಮುಖ್ಯವಾಗಿ ಕಾಗೋಡು ತಿಮ್ಮಪ್ಪ ಯಾಕೆ ಇಷ್ಟವಾಗುತ್ತಾರೆಂದರೆ ತಾವು ನಂಬಿದ ತತ್ವ, Photo Captionಸಿದ್ಧಾಂತವನ್ನು ಅಧಿಕಾರಕ್ಕಾಗಿ ಮಾರಿಕೊಂಡವರಲ್ಲ, ಅಧಿಕಾರ ಬಂದಾಗ ಗಾಳಿಗೆ ತೂರಿದವರಲ್ಲ. ಅಧಿಕಾರವನ್ನು ತ್ಯಾಗಮಾಡಿದ್ದಾರೆ, ಆದರೆ ಮೌಲ್ಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ತಮ್ಮ ನೆಲೆ, ಬೆಲೆಯನ್ನು ಕಳೆದುಕೊಂಡವರಲ್ಲ, ಅಧಿಕಾರಕ್ಕಾಗಿ ಒತ್ತೆಯಿಟ್ಟವರೂ ಅಲ್ಲ.

೧೯೩೨ ರ ಸೆಪ್ಟಂಬರ್ ೧೦ ರಂದು ಕಾಗೋಡು ಎಂಬ ಹಳ್ಳಿಯಲ್ಲಿ ಜನಿಸಿದ ತಿಮ್ಮಪ್ಪ ರಾಜಕೀಯದ ಹಳೆಬೇರು. ಮಾತಿನಲ್ಲಿ ಸೋಗಲಾಡಿತನವಿಲ್ಲ, ಕೃತಕತೆಯೂ ಇಲ್ಲ, ನಡೆನುಡಿಯಲ್ಲಿ ದೇಸೀತನವಿದೆ. ಛಲವಾದಿ ಕಾಗೋಡು ತಿಮ್ಮಪ್ಪ ಎನ್ನುವುದರಲ್ಲಿ ಅನುಮಾನಗಳಿಲ್ಲ. ಬಿ.ಕಾಂ, ಬಿ.ಎಲ್ ಪದವಿ ಪಡೆದು ೧೯೬೦ರಲ್ಲಿ ಸಾಗರದಲ್ಲಿ ವಕೀಲಿ ವೃತ್ತಿಗೆ ಇಳಿದವರು. ಸಮಾಜವಾದಿ ಪಕ್ಷದಿಂದ ೧೯೬೨ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಿದರಾದರೂ ಜಯ ಅವರದಾಗಲಿಲ್ಲ. ಮತ್ತೆ ೧೯೬೭ರಲ್ಲಿ ಸ್ಪರ್ಧೆ ಮಾಡಿದರಾದರೂ ಸೋಲಬೇಕಾಯಿತು. ಛಲಬಿಡದ ಈ ತ್ರಿವಿಕ್ರಮ ೧೯೭೨ರಲ್ಲಿ ಮತ್ತೆ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. ಸುಮಾರು ಒಂದು ದಶಕ ಕಾಲ ವಿಧಾನಸಭೆ ಪ್ರವೇಶಕ್ಕೆ ತಿಣುಕಾಡಿದ ಕಾಗೋಡು ತಿಮ್ಮಪ್ಪ ಸೋಲಿನಿಂದ ಕಲಿತ ಪಾಠವನ್ನು ನಂತರದ ದಿನಗಳಲ್ಲಿ ಗೆಲ್ಲುವುದಕ್ಕೆ ಬಳಸಿದರು. ಅಂದು ಸೋಲಿಸಿದ್ದ ಜನರೇ ಮತ್ತೆ ಕೈಹಿಡಿದು ಅವರನ್ನು ಮುನ್ನಡೆಸಿದರು.

ದೇವರಾಜ ಅರಸು ಗರಡಿಯಲ್ಲಿ ಭೂಮಸೂದೆ ಶಾಸನ ರೂಪಿಸುವ ಸಮಿತಿಯ ಸದಸ್ಯರಾಗಿ ತಮ್ಮ ಹಳ್ಳಿಗಾಡಿನ ಜನರ ಬದುಕು-ಬವಣೆಯನ್ನು ಆಧಾರವಾಗಿಟ್ಟುಕೊಂಡು ಉಳುವವನೇ ಹೊಲದೊಡೆಯನನ್ನು ಮಾಡಲು ಕಾಗೋಡು ತಿಮ್ಮಪ್ಪ ಅವರ ಅಪಾರ ಬುದ್ಧಿಮತ್ತೆಯೂ ಇತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಭೂಮಾಲೀಕರ ದಬ್ಬಾಳಿಕೆಯಿಂದ ಜರ್ಝರಿತವಾಗಿದ್ದ ರೈತರ ಬದುಕಿಗೆ ಆಸರೆಯಾದ ಅರಸು ಅವರ ಕಾರ್ಯತತ್ಪರತೆಯಲ್ಲಿ ಕಾಗೋಡು ಅವರ ಬಳುವಳುಯೂ ಇತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಾಜವಾದಿ ಕಾಗೋಡು ತಿಮ್ಮಪ್ಪ ೧೯೮೦ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದರು. ಗುಂಡುರಾಯರ ಸಂಪುಟದಲ್ಲಿ ಆಹಾರ, ಅರಣ್ಯ ಖಾತೆ ನಿಭಾಯಿಸಿದರು. ರಾಜಕೀಯ ಒಂದು ವೃತ್ತಿಯಾಗಿ ಚಿಗುರೊಡೆಯುತ್ತಿದ್ದ ಆ ಕಾಲಘಟ್ಟದಲ್ಲಿ ಗುಂಡುರಾಯರು ಕಾಗೋಡು ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಕೈಚೆಲ್ಲಿದರು ಎನ್ನುವ ವ್ಯಾಖ್ಯೆ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಅವರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಇಲಾಖೆಯಲ್ಲಿನ ಹೆಗ್ಗಣಗಳ ಮೇಲೆ ಹದ್ದಿನಕಣ್ಣಿಟ್ಟು ಕೆಲಸ ಮಾಡಿದವರು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಸಮಾಜವಾದಿಯಾಗಿ ಗೋಪಾಲಗೌಡರು ಮಾಡಿದ ಕೆಲಸ ಇಂದಿನ ತಲೆಮಾರಿನವರಿಗೆ ಮಸುಕು ಮಸುಕಾಗಿ ಅರಿವಾಗಬಹುದು. ಸಮಾಜವಾದಿಯಾಗಿ ಎಸ್.ಬಂಗಾರಪ್ಪ ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಿಕೊಂಡು ರಾಜಕೀಯ ಸ್ಥಾನಮಾನ ಗಳಿಸಿದರಾದರೂ ಕಾಗೋಡು ತಿಮ್ಮಪ್ಪ ಮಾತ್ರ ಅಧಿಕಾರದ ಬೆನ್ನು ಹತ್ತಿ ಹೋಗದೆ ಸಮಾಜವಾದಿಗಳ ಮಧ್ಯೆ ಭಿನ್ನವಾಗಿಯೇ ಈಗಲೂ ಗುರುತಿಸಿಕೊಳ್ಳುತ್ತಾರೆ. ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಮಂಡಳಿಯ ಅಧ್ಯಕ್ಷರಾಗಿ ಬೇರೆ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಅವರ ಘನತೆ, ನ್ಯಾಯಪಾಲನೆ, ಮಾತಿನಲ್ಲಿರುವ ನಿಖರತೆ ಸಹಜವಾಗಿಯೇ ಸಭಾಪತಿ ಹುದ್ದೆಗೆ ಸೂಕ್ತ ಆಯ್ಕೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಬಾಳಿಗ, ಕಂಠಿ, ಡಿ.ಬಿ.ಚಂದ್ರೇಗೌಡ, ಬಣಕಾರ್, ಎಸ್.ಎಂ.ಕೃಷ್ಣ, ರಮೇಶ್ ಕುಮಾರ್, ಹೀಗೆ ಸಭಾಪತಿ ಸ್ಥಾನಕ್ಕೆ ಘನತೆ ತಂದುಕೊಟ್ಟವರು. ಅವರು ಆ ಸ್ಥಾನದಲ್ಲಿ ಕುಳಿತು ನೀಡಿದ ರೂಲಿಂಗ್‌ಗಳು ಈಗಲೂ ಅವರನ್ನು ಸ್ಮರಿಸುವಂತೆ ಮಾಡಿವೆ. ಈ ಕಾರಣಕ್ಕೆ ಈಗ ಕಾಗೋಡು ತಿಮ್ಮಪ್ಪ ಅವರೂ ಕೂಡಾ ತಮಗಿರುವ ಅಪಾರ ಅನುಭವವನ್ನು ಈ ಹುದ್ದೆಯ ಮೂಲಕ ಅಭಿವ್ಯಕ್ತಿಸಲಿದ್ದಾರೆಂದು ನಿರೀಕ್ಷಿಸಬಹುದು. ಕಾಗೋಡು ಅವರಿಗಿರುವ ಸಾಮಾಜಿಕ ಕಾಳಜಿ, ನ್ಯಾಯಪಾಲನೆಯಲ್ಲಿ ಅವರಿಗಿರುವ ಶ್ರದ್ಧೆ-ನಂಬಿಕೆ ಅವರಿಂದ ಬಹಳಷ್ಟು ನಿರೀಕ್ಷೆ ಮಾಡುವಂತೆ ಮಾಡಿದೆ. ಸದಸ್ಯರ ಹಕ್ಕನ್ನು ಕಾಪಾಡುವುದು ಹೇಗೆಂದು ಸದನದ ಹಿರಿಯ ಸದಸ್ಯರಾದ ಕಾಗೋಡು ಅವರಿಗೆ ಬೇರೆ ಯಾರೂ ಪಾಠ ಮಾಡಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಾರೆನ್ನುವುದಕ್ಕೆ ಅವರು ನಡೆದು ಬಂದಿರುವ ಹಾದಿಯೇ ಸಾಕ್ಷಿ.

Leave a Reply

Your email address will not be published.