ಸಾಹಿತ್ಯಕ ರಾಜಕಾರಣ ಮತ್ತು ಸೃಜನಶೀಲ ಬರವಣಿಗೆ

– ಡಾ.ಎಸ್.ಬಿ.ಜೋಗುರ

ಈಚೆಗೆ ಹಿರಿಯರೊಬ್ಬರು ಸಾಹಿತ್ಯ ಕಾರ್ಯಕ್ರಮ ಒಂದರಲ್ಲಿ ಅತ್ಯಂತ ವಿಷಾದದಿಂದ ಮಾತನಾಡುತ್ತಿದ್ದರು. ಸಾಹಿತ್ಯಕ ವಲಯ ಎನ್ನುವುದು ಒಂದು ಸಂದರ್ಭದಲ್ಲಿ ಅತ್ಯಂತ ಮೌಲಿಕವಾಗಿತ್ತು. ಒಬ್ಬನನ್ನು ಹಳಿಯಲಿಕ್ಕಾಗಿಯೇ ಇನ್ನೊಬ್ಬ ಬರವಣಿಗೆಯನ್ನು ಶುರು ಮಾಡುವ ದಿನಮಾನಗಳಿರಲಿಲ್ಲ. ಈಗ ಪರಿಸ್ಥಿತಿ ಸಂಪೂರ್ಣವಾಗಿ ತಲೆಕೆಳಗಾಗಿದೆ. ರಾಜಕಾರಣಿಗಳು ಮುಜುಗರ ಪಡುವ ಹಾಗೆ ವ್ಯವಹರಿಸುವ ಈ ಸಂದರ್ಭದ ಸಾಹಿತ್ಯಕ ಪರಿಸರ ಅವರಲ್ಲಿ ರೇಜಿಗೆಯನ್ನು ಹುಟ್ಟಿಸಿರುವದಿತ್ತು. ಸೃಜನಶೀಲ ಬರವಣಿಗೆಯನ್ನು ಮಾಡುತ್ತಲೇ ಅದಕ್ಕಿಂತಲೂ ಹೆಚ್ಚು ಸೃಜನಶೀಲವಾದ, ನಾಜೂಕಾದ ರಾಜಕಾರಣವನ್ನು ಈ ಹೊತ್ತಿನ ಸಾಹಿತಿಗಳು ಮಾಡುವದನ್ನು ನೆನೆದು ಅವರು ಬೇಸರ ವ್ಯಕ್ತಪಡಿಸಿದರು. ಇದು ಕೇವಲ ಅವರು ಮಾತ್ರವಲ್ಲ, ಅವರ ಹಾಗೆ ಸಾಹಿತ್ಯಕ ಪರಿಸರವನ್ನು ಕಳೆದ ಅನೇಕ ವರ್ಷಗಳಿಂದ ಗಮನಿಸುತ್ತ ಬಂದವರೆಲ್ಲಾ ಬಹುತೇಕವಾಗಿ ಹೀಗೇ ಹೇಳುವದಿದೆ. ಇವತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಗಟ್ಟಿಯಾದ ಬರವಣಿಗೆಯನ್ನು ಮಾಡುತ್ತಾ ಗುರುತಿಸಿಕೊಳ್ಳುವ ಬದಲಾಗಿ ರಾಜಕೀಯದವರನ್ನು ಮೀರುವ ಹಾಗೆ ಚದುರಂಗ ಆಡುವ ಸಾಹಿತಿ ಕಂ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಇದರಲ್ಲಿ ಮಾತ್ರ ಲಿಂಗ ತಾರತಮ್ಯಗಳಿಲ್ಲ. ಗಂಡು-ಹೆಣ್ಣು ಇಬ್ಬರೂ ಆಯಕಟ್ಟಿನ ಜಾಗೆಯಲ್ಲಿ ಕುಳಿತು, ಸಂದರ್ಭಿಕವಾಗಿ ಅಚ್ಚುಕಟ್ಟಾಗಿಯೇ ಸಾಹಿತ್ಯಕ ರಾಜಕಾರಕಾರಣವನ್ನು ಮಾಡುವದಿದೆ. ಒಂದು ಒಳ್ಳೆಯ ಕೃತಿಯನ್ನು ಬರೆದು ಸಣ್ಣ ಪ್ರಮಾಣದ ಪ್ರಶಸ್ತಿಯೊಂದು ಜೋಬಿಗೆ ಬಿದ್ದರೆ ಅಲ್ಲಿಗೆ ಮುಗಿಯಿತು. ಆತ ತನ್ನ ಮೇಲಿರುವ ಸಮಾಜದ ನಿರೀಕ್ಷೆಯನ್ನೇ ಮರೆಯುತ್ತಾನೆ. sahitya-sammelanaಈಗಾಗಲೇ ಆತ ಪಡೆದಿರುವ ಪ್ರಶಸ್ತಿಗಿಂತಲೂ ದೊಡ್ದ ಪ್ರಶಸ್ತಿಯನ್ನು ಪಡೆಯುವದು ಹೇಗೆ ಎನ್ನುವ ಬಗ್ಗೆ ತನ್ನ ಎಲ್ಲ ಸಾಮರ್ಥ್ಯ ಶಕ್ತಿಯನ್ನು ಪಣಕ್ಕೊಡ್ದುತ್ತಾನೆ. ಪ್ರಶಸ್ತಿ, ಪುಸ್ಕಾರಗಳಿಗಾಗಿ ಸದಾ ಲಾಬಿ ಮಾಡುವದರಲ್ಲಿಯೇ ಒಂದು ಬಗೆಯ ಸೃಜನಶೀಲತೆಯನ್ನು ಕಂಡುಕೊಂಡು ಕೆಲ ಸಾಹಿತಿಗಳಿದ್ದಾರೆ. ಇವರಿಗೆ ನೇರವಾದ ಹಾದಿಗಳಿಂತಲೂ ಅಡ್ಡಹಾದಿಗಳು ಚೆನ್ನಾಗಿ ತಿಳಿದಿವೆ.

ಈಗೀಗ ಕೆಲ ಸಾಹಿತಿಗಳು ವೇದಿಕೆಯ ಮೇಲೆ ಮಾತನಾಡುವ ಮತ್ತು ಬರೆಯುವ ನಡುವೆ ಅಜಗಜಾಂತರ ಅಂತರವನ್ನು ಕಾದುಕೊಂಡಿದ್ದಾರೆ. ಈ ಬಗೆಯ ಅಂತರ ರಾಜಕಾರಣಿಗಳಲ್ಲಿ ಸರ್ವೆ ಸಾಮಾನ್ಯ. ಮಾತಿಗೂ ಕೃತಿಗೂ ಸಂಬಂಧವಿರದಂತೆ ಬರವಣಿಗೆ ಮಾಡುವವನಿಂದ ಬರಬಹುದಾದ ಸೃಜನಶೀಲ ಕೃತಿ ಯಾವ ಬಗೆಯ ಪ್ರಭಾವವನ್ನು ಸಹೃದಯಿಗರ ಮೇಲೆ ಬೀರಬಲ್ಲದು..? ಅದೂ ಅಲ್ಲದೇ ಬರೆದಂತೆ ಬದುಕಬೆಕೆಂಬ ಕರಾರು ಎಲ್ಲಿದೆ..? ಎನ್ನುವ ಮರುಪ್ರಶ್ನೆಯನ್ನು ಇವನು ಹಾಕುವಲ್ಲಿಯೂ ಹಿಂದೇಟು ಹಾಕಲಾರ. ಇವರ ಮುಖವಾಡಗಳನ್ನು ಕಳಚುವದು ತುಂಬಾ ಕಷ್ಟ ಒಂದೋ ಎರಡೋ ಇದ್ದರೆ ಆ ಪ್ರಯತ್ನವನ್ನು ಮಾಡಬಹುದು ಒಂದು ಮುಖವಾಡದ ಹಿಂದೆ ಅದಕ್ಕಿಂತಲೂ ಭಯಂಕರವಾದ ಮುಖವಾಡ, ಅದರ ಹಿಂದೆ ಇನ್ನೂ ಭಯಂಕರವಾದ ಮುಖವಾಡ ಇರುವದೇ ಇವರ ಸಾಮರ್ಥ್ಯ. ವೇದಿಕೆಯಲ್ಲಿ ಮಾತನಾಡಿ, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಇವರು ಮರುಗಳಿಗೆಯಲ್ಲಿಯೇ ತಾವು ಮಾತನಾಡಿದ ವಿಚಾರಗಳಿಗೆ ಬದ್ಧರಾಗಿರಲಾರರು. ಅಷ್ಟಕ್ಕೂ ಬದ್ಧತೆ ಎಂದರೆ ಏನು..? ಎನ್ನುವ ಇನ್ನೊಂದು ಪ್ರಶ್ನೆಯೂ ಅವರಿಂದಲೇ ಬರುವ ಸಾಧ್ಯತೆ ಇದೆ. ಇಂಥಾ ನಡೆನುಡಿಯೊಳಗೆ ಒಂದಾಗಿರದವರಿಂದ ಮೂಡಿಬರುವ ಪ್ರತಿಬಿಂಬವೂ ಅದೇ ಆಗಿರುತ್ತದೆ ಎನ್ನುವ ಅರ್ಜೆಂಟೀನಾದ ಲೇಖಕ ಜಾರ್ಜ್ ಬೊರ್ಹೆಸ್ ನ ಮಾತು ನೆನಪಾಗುತ್ತದೆ.

ಅವನು ಬಹಳ ದೊಡ್ದ ಸಾಹಿತಿ. ಅವನ ಮಾತು, ವಿಚಾರ, ಬರವಣಿಗೆಗಳಲ್ಲಿ ವೈಚಾರಿಕ ಪ್ರಕರತೆ ತುಂಬಿ ತುಳುಕುತ್ತಿರುತ್ತದೆ. ಆದರೆ ಸಮಕಾಲಿನ ಸಾಹಿತ್ಯಕ ವಲಯದ ಪ್ರತಿಭೆಗಳನ್ನು ಗುರುತಿಸಿ ಹೆಸರಿಸುವಾಗ ಆತ ಕೇವಲ ತನ್ನ ಜಾತಿಯ ಬರಹಗಾರರನ್ನು ತಿಣುಕಿ..ತಿಣುಕಿ ಹುಡುಕಿ ಪಟ್ಟಿ ಮಾಡುತ್ತಾನೆ. ಹೀಗೆ ಮೈತುಂಬಾ ಜಾತಿ ವಾಸನೆ ಹೊಡೆಯುವವನು ಅದೆಷ್ಟು ವೈಚಾರಿಕತೆಯನ್ನು ಮಾತನಾಡಿದರೂ ಪ್ರಯೋಜನವಿಲ್ಲ. ಅದು ನಾಯಿಯ ಮುಕುಳಿಯಲ್ಲಿ ಮೆತ್ತಿರುವ ಜೇನಿನಂತಾಗುತ್ತದೆ. ಇವರ ಬರವಣಿಗೆಯಲ್ಲಿ ಅಲ್ಲಲ್ಲಿ ಕಾಣಸಿಗುವ ಜಾತ್ಯಾತೀತತೆ ಎನ್ನುವ ಪದ ಈ ಸಾಹಿತಿಯ ಶರೀರರ ತೂತುಗಳಿಂದ ಸದಾ ಹೊರಸೂಸುವ ಗಬ್ಬು ಜಾತಿಯ ವಾಸನೆಯಿಂದ ಮೂಗು ಮುಚ್ಚಿಕೊಂಡು ನಿಲ್ಲುತ್ತದೆ. ಆದರೂ ಇವನಿಗೆ ಮುಜುಗರ, ಅಳುಕು ಇಲ್ಲ. ತಾನು ಮಾತಾಡಿದ್ದು ಅತ್ಯಂತ ಪ್ರಖರವಾದ ವೈಚಾರಿಕ ನುಡಿಗಳು ಎನ್ನುವ ಆತ್ಮರತಿ ಮಾತ್ರ ಇದ್ದೇ ಇದೆ. ಇಂಥಾ ಜಾತಿಹಿಡುಕ ಸಾಹಿತಿಗಳಿಂದಾಗಿ ನೂರಾರು ಸಂಖ್ಯೆಯ ಹೊಸ ತಲೆ ಮಾರಿನ ಬರಹಗಾರರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನೀವು ಇವರನ್ನು ಹೀಗೆ ಜಾತೀಯತೆ ಮಾಡುವದು ಸರಿಯೇ..? ಎನ್ನುವ ಪ್ರಶ್ನೆಯನ್ನು ಕೇಳಿದರೆ ಎಲ್ಲರೂ ಮಾಡುತ್ತಿರುವದೂ ಅದೇ ಅಲ್ಲವೇ..? ಎನ್ನುವ ಮರುಪ್ರಶ್ನೆಯನ್ನು ನಿಮ್ಮ ಎದುರಿಟ್ಟು ಹಲ್ಲು ಗಿಂಜುತ್ತಾನೆ. ಇಂಥವರು ಬರೆಯದಿರುವದೇ ಶ್ರೇಯಸ್ಕರ.

ಇನ್ನೊಬ್ಬ ಆ ಊರಲ್ಲಿ ನಡೆಯುವ ಯಾವುದೇ ಸಭೆ-ಸಮಾರಂಭಗಳಿರಲಿ ತನ್ನನ್ನು ಕರೆಯುವಂತೆ ಸಂಘಟಕರನ್ನು ಪುಸಲಾಯಿಸುತ್ತಾನೆ. ಹೇಗಾದರೂ ಸರಿ ವೇದಿಕೆಗೆ ಬರಬೇಕು ಎನ್ನುವ ಚಪಲದ ನಡುವೆ ಅನೇಕ ಸಮರ್ಥರನ್ನು ಬದಿಗೆ ತಳ್ಳಿ ಈತ ವೇದಿಕೆಗೆ ಬರುತ್ತಾನೆ. ಇವನು ಬರೆದುದದಕ್ಕಿಂತಲೂ ಬೆಳೆದುದು ಹೆಚ್ಚು. ಸಕಲಕಲಾವಲ್ಲಭರಂತಿರುವ ಇವರು ತಮ್ಮ ಇಡೀ ದಿನದ ಕಸರತ್ತನ್ನು ಯಾವುದಾದರೂ ವೇದಿಕೆಗೆ ಬಂದು ಕುಕ್ಕುರಿಸಬೇಕು ಎನ್ನುವದು ಮಾತ್ರವಲ್ಲದೇ ತಾನು ಮಾಡುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಒಮ್ಮೆಯೂ ಯೋಚಿಸಿರುವದಿಲ್ಲ. ಈ ಸಮಾಜ ನಮ್ಮನ್ನು ಪ್ರತಿ ಹೆಜ್ಜೆಗೂ ಗಮನಿಸುತ್ತಿರುತ್ತದೆ. ಆದರೆ ಇವರು ಸಮಾಜಕ್ಕೆ ಕಣ್ಣಿಲ್ಲ ಎನ್ನುವ ತೀರ್ಮಾನ ತಳೆದವರು. ಈಚೆಗೆ ರಾಜ್ಯ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕೆಲ ಗೋಷ್ಟಿಗಳಲ್ಲಿ ತಮ್ಮ ಹೆಸರನ್ನು ಸೇರಿಸುವಂತೆ ಪುಸಲಾಯಿಸಿದ್ದು, ಉತ್ಪೀಡಕರಾಗಿ ಬೆನ್ನಿಗೆ ಬಿದ್ದದ್ದನ್ನು ಕೇಳಿ ನಾನು ಹೌ ಹಾರಿದ್ದೆ. ಇವಾವುಗಳ ಬಗ್ಗೆಯೂ ಅರಿವಿರದೇ ಯತಾರ್ಥವಾಗಿ ಬರವಣಿಗೆ ಮಾಡುವವ ಇವರ ದೃಷ್ಟಿಯಲ್ಲಿ ಸಾಹಿತಿಯೇ ಅಲ್ಲ. ಇಂಥಾ ಉತ್ಪೀಡಕ ಸಾಹಿತಿಗಳಿಗೆ ಪ್ರಶಸ್ತಿಗಳೂ ಬರುವದಿದೆ. ಅದು ಕೂಡಾ ಈ ಕಾಲದ ವಿಚಿತ್ರ ಮತ್ತು ವಿಷಾದ.

ಕೆಲ ಸಾಹಿತಿಗಳು ಒಂದೋ ಎರಡೊ ಕೃತಿಗಳನ್ನು ಬರೆದು ಯಾವುದೋ ಒಂದು ಜಿಲ್ಲೆ ಇಲ್ಲವೇ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದದ್ದೇ ಅವರ ಮುಖದ ನಿರಿಗೆಗಳು ಮತ್ತು ಹಾವ ಭಾವವೇ ಬದಲಾಗುತ್ತವೆ. ಅದರಲ್ಲೂ ವೇದಿಕೆಯಲ್ಲಿ ಕುಳಿತಾಗ ಇವರನ್ನು ನೋಡಲಿಕ್ಕಾಗುವದಿಲ್ಲ. ಸ್ವಾಭಾವಿಕವಾಗಿರುವ ಮುಖಮುದ್ರೆಯಲ್ಲಿ ಹೀಗೆ ಅನಾವಶ್ಯಕವಾದ ಗಾಂಭೀರ್ಯವನ್ನು ತಂದುಕೊಳ್ಳುವದು ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗದೆಯೇನೋ..? ಎಂದು ಜನಸಾಮಾನ್ಯ ಯೋಚಿಸುವಷ್ಟರ ಮಟ್ಟಿಗೆ ಇವರು ಕೃತ್ರಿಮವಾಗಿರುತ್ತಾರೆ. ಈ ನಡುವೆ ಹೊಸಬರ ಬರವಣಿಗೆಗಳನ್ನು ಓದುವ, ಚರ್ಚಿಸುವ ಪರಿಪಾಠಗಳೂ ಸಾಹಿತ್ಯಕ ವಲಯದಲ್ಲಿಲ್ಲ. ಕೇವಲ ಪತ್ರಿಕೆಯಲ್ಲಿ ಬರುವ ವಿಮರ್ಶೆ ಮತ್ತು ಟಾಪ್ ಟೆನ್ ಪಟ್ಟಿಯನ್ನು ನೋಡಿ ಓದುವ ಸಾಹಿತಿಗಳ ನಡುವೆ ಅದೆಷ್ಟೋ ಹೊಸ ತಲೆಮಾರಿನ ಲೇಖಕರ ಬರವಣಿಗೆ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಹೆಸರು, ಜಾತಿ, ಪರಿಚಯಗಳೇ ನಿರ್ಣಾಯಕವಾಗಿರುವ ಸಂದರ್ಭದಲ್ಲಿ ಯಾವ ರೀತಿಯ ಕೃತಿಯನ್ನು ರಚಿಸಬೇಕು ಎನ್ನುವದೇ ಹೊಸ ತಲೆಮಾರಿನವರ ಎದುರಿಗಿನ ಬಹುದೊಡ್ಡ ಬಿಕ್ಕಟ್ಟು.

Leave a Reply

Your email address will not be published.