Monthly Archives: June 2013

ಕನ್ನಡ ಶಾಲೆಗಳ ಅಳಿವು ಉಳಿವಿನ ಪ್ರಶ್ನೆ : ಒಂದು ಸಾಧ್ಯವಿರುವ ಆಲೋಚನೆ

– ನಾಗರಾಜ್ ಹರಪನಹಳ್ಳಿ, ಕಾರವಾರ

ಜೂನ್ 27 ರಂದು ಕಾರವಾರದ ಸಾವಂತವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹೋಗಿದ್ದೆ. ಈ ಶಾಲೆ 1955 ರಲ್ಲಿ ಸ್ಥಾಪಿತವಾದದ್ದು. ಸಾವಾಂತವಾಡದ ನಿವಾಸಿಯೊಬ್ಬರು ಶಿಕ್ಷಣ ಇಲಾಖೆಗೆ 13 ಗುಂಟೆ ಜಾಗವನ್ನು ಶಾಲೆ ಸ್ಥಾಪಿಸಲು 58 ವರ್ಷಗಳ ಹಿಂದೆಯೇ ದಾನ ಮಾಡಿದ್ದರು. ಎಂಥ ಆದರ್ಶದ ಕಾಲ ನೋಡಿ ಅದು. ಇವತ್ತು ಒಂದಿಚು ಜಾಗವಿದ್ದರೆ ಅದನ್ನು ನಾವು ಬಿಡದೇ ಬೇಲಿಹಾಕಿಕೊಂಡು ಬಿಡುತ್ತೇವೆ. ಅದಿರಲಿ. kannada-schoolಈ ಕನ್ನಡ ಶಾಲೆ ನನ್ನನ್ನು ಆಕರ್ಷಿಸಿದ್ದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಈ ಶಾಲೆಯಲ್ಲಿರುವ 17 ಜನ ವಿದ್ಯಾರ್ಥಿಗಳಿಗೆ ಅಲ್ಲಿನ ಮೂರು ಜನ ಶಿಕ್ಷಕರು ತಮ್ಮ ವೇತನದ ಹಣ ಹಾಕಿ ಫಿಕ್ಸ ಡಿಪೋಜಿಟ್ ಮಾಡಿದ್ದರು. ಪ್ರತಿ ಮಗುವಿಗೆ ಪ್ರತಿ ತಿಂಗಳು 100 ರೂಪಾಯಿಯಂತೆ 8 ತಿಂಗಳ ಕಾಲ ಹಣ ಫಿಕ್ಸ ಇಡುವುದು. ಅಂದರೆ ಒಬ್ಬ ವಿದ್ಯಾರ್ಥಿ 1 ನೇ ತರಗತಿಗೆ ಪ್ರವೇಶ ಪಡೆದರೆ ಆತ ಏಳನೇ ತರಗತಿ ಮುಗಿಸಿದಾಗ ಆತನ ಖಾತೆಯಲ್ಲಿ ಬಡ್ಡಿ ಸಹಿತ 11,300 ರೂಪಾಯಿ ಜಮಾ ಆಗಿರುತ್ತದೆ. ಇದು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವ ಸದುದ್ದೇಶವೂ ಇದೆ. ಈ ಯೋಚನೆ ಶಿಕ್ಷಕರಿಗೆ ಯಾಕೆ ಬಂತು ಅಂತಾ ಅವರನ್ನೇ ಕೇಳಿದೆ. ಶಾಲೆಯನ್ನು ಉಳಿಸಿಕೊಳ್ಳಬೇಕು. ತಾವು ಉಳಿಯಬೇಕು ಎಂಬುದು ಶಿಕ್ಷಕರ ಉದ್ದೇಶ.

ಕನ್ನಡ ಶಾಲೆಯೊಂದನ್ನು ಉಳಿಸಬೇಕು. ಶಾಲೆಗೆ ಮಕ್ಕಳನ್ನು ಕರೆತರುವ ಉತ್ತಮ ಉದ್ದೇಶವೂ ಅಲ್ಲಿನ ಮೂರು ಜನ ಶಿಕ್ಷಕರದಾಗಿತ್ತು. ಅಲ್ಲಿನ ಶಿಕ್ಷಕರು ದಾನಿಗಳನ್ನು ಹಿಡಿದು ಅಲ್ಲಿನ ಮಕ್ಕಳಿಗೆ ಈಜು ತರಬೇತಿ, ಸಂಗೀತ ತರಬೇತಿ ಮತ್ತು ಇಂಗ್ಲೀಷ್ ಕೋಚಿಂಗ್ ಕೊಡಿಸಲು ಸಿದ್ಧತೆ ನಡೆಸಿದ್ದರು. 1 ರಿಂದ 7 ನೇ ತರಗತಿ ವರೆಗೆ ಇದ್ದದ್ದು 17 ಜನ ಮಕ್ಕಳು. ಆ ಶಾಲೆಯಲ್ಲಿ ಕಲಿಕಾ ಕೊಠಡಿಗಳಿವೆ. ಬಿಸಿಯೂಟಕ್ಕೆ ಕೋಣೆ ಇದೆ. ಆಟದ ಮೈದಾನವಿದೆ. ಟೀಚಿಂಗ್ ಏಡ್ ಇದೆ. ತಿರುವಿ ಹಾಕಲು ಪುಸ್ತಕಗಳು ಸಹ ಇವೆ. ಆದರೆ ಕೋಣೆ ತುಂಬುವಷ್ಟು ಮಕ್ಕಳಿಲ್ಲ !!

ಸಾವಾಂತವಾಡದಲ್ಲಿ ವಾಸಿಸುವ ಬಹುತೇಕರು ಹಿರಿಯರು. ಅವರ ಮಕ್ಕಳು, ಮೊಮ್ಮಕ್ಕಳು ಹೊರದೇಶ ಇಲ್ಲವೇ ಹೊರ ರಾಜ್ಯ (ಮುಂಬಯಿ, ಗೋವಾ) ದಲ್ಲಿ ನೆಲಸಿದ್ದಾರೆ. ಇರುವ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಕಾರವಾರಕ್ಕೆ ಕೂಲಿ ಮಾಡಲು ಬಂದ ಕಾರ್ಮಿಕರ ಮಕ್ಕಳು ಸಾವಾಂತವಾಡ ಸರಕಾರಿ ಶಾಲೆಯಲ್ಲಿದ್ದಾರೆ. ಅಲ್ಲಿರುವ ಎಲ್ಲಾ ಮಕ್ಕಳು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಮಕ್ಕಳೇ ಆಗಿದ್ದರು. ಕಾರವಾರದ ಸಾವಾಂತವಾಡ ಶಾಲೆ ಬಿಡಿ. ನಗರದ ಕೆಎಚ್‌ಬಿ ಕಾಲೂನಿಯಲ್ಲಿರುವ ಸರ್ಕಾರಿ ಶಾಲೆ, ಬಜಾರ್ ಶಾಲೆ, ಕೋಡಿಬಾಗ ಕನ್ನಡ ಶಾಲೆ, ಸಾಯಿ ಕಟ್ಟಾ ಕನ್ನಡ ಶಾಲೆ, ಸದಾಶಿವಗಡ ಹೊರವಲಯದ ಸರ್ಕಾರಿ ಕನ್ನಡ ಶಾಲೆ ತಿರುಗಾಡಿದೆ. ಅಲ್ಲಿನ ಶಾಲೆಗಳ ಸ್ಥಿತಿ ಸಾವಾಂತವಾಡ ಸರ್ಕಾರಿ ಶಾಲೆಗಿಂತ ಭಿನ್ನವಾಗಿರಲಿಲ್ಲ. ಬಾಜಾರ್ ಶಾಲೆ, ಸೋನಾರವಾಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 70 ರಿಂದ 110 ರಷ್ಟಿತ್ತು. ಕಾರಣ ಈ ಶಾಲೆಗಳು ನಗರದ ಕೇಂದ್ರಭಾಗದಲ್ಲಿರುವುದು. ಇಲ್ಲಿರುವ ಮಕ್ಕಳು ಹೊರ ಜಿಲ್ಲೆಯ ಕೂಲಿ ಕಾರ್ಮಿಕರ ಮಕ್ಕಳೆ. ಕಾರವಾರ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 2 ರಷ್ಟು ಮಾತ್ರ. ಇನ್ನು ಜೊಯಿಡಾ, ಸಿದ್ದಾಪುರ, ಶಿರಸಿ, ಕಾರವಾರ ಕುಗ್ರಾಮಗಳ ಬಡವರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಾಣಸಿಗುತ್ತಿದ್ದಾರೆ. ಈ ಕುಗ್ರಾಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 20 ಮೀರುವುದಿಲ್ಲ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಯೋಚಿಸಿದರೆ, ಇಚ್ಚಾ ಶಕ್ತಿ ಬಳಸಿದರೆ ದಾರಿ ಇದೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಹೇಳಿಕೊಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಿ 6 ನೇ ತರಗತಿಯಿಂದ ಆಂಗ್ಲಮಾಧ್ಯಮದ ಕಲಿಕೆ ಸಹ ಪ್ರಾರಂಭವಾಗಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿಲ್ಲ!! ಪೋಷಕರ ಮನಸ್ಥಿತಿ ಯಾಕೆ ಬದಲಾಗುತ್ತಿಲ್ಲ? ಯಾಕೆಂದರೆ ಮಕ್ಕಳ ಸಂಖ್ಯೆ ಎಷ್ಟೇ ಇರಲಿ. ಹಿರಿಯ ಪ್ರಾಥಮಿಕ ಶಾಲೆಗೆ 7 ಜನ ಶಿಕ್ಷಕರನ್ನು, ವಿಷಯವಾರು ಶಿಕ್ಷಕರನ್ನು ತುಂಬುವ ಕೆಲಸ ಸರ್ಕಾರದ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಆಗಬೇಕು. ಸರ್ಕಾರಿ ಶಾಲೆ ಉಳಿಸುವ ಇಚ್ಚೆ ನಿಜಕ್ಕೂ ಶಿಕ್ಷಣ ಸಚಿವರಿಗೆ ಇದ್ದರೆ ಮಾರ್ಗಗಳು ಇವೆ. ಹೊಸದಾಗಿ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡಬಾರದು. ಇಂಗ್ಲೀಷ್ ಮಾದ್ಯಮ ಇರಲಿ, ಕನ್ನಡ ಮಾದ್ಯಮ ಇರಲಿ ಖಾಸಗಿಯವರಿಗೆ ಇನ್ನು ಮುಂದೆ ಹೊಸದಾಗಿ ಶಾಲೆ ಪ್ರಾರಂಭಿಸಲು ಅನುಮತಿ ಬೇಡ. ಇದಕ್ಕೆ ವಿಧಾನಸಭೆಯಲ್ಲಿ ಶಾಸನ ರೂಪಿಸಲಿ. ಎಲ್ಲೇ ಬೇಕೆಂದರೂ ಸರ್ಕಾರವೇ ಶಾಲೆ ಪ್ರಾರಂಭಿಸಲಿ. ಇರುವ ಖಾಸಗಿ ಶಾಲೆಗಳು ಇರಲಿ. ಅವರ ಮೇಲೆ ಕೆಲ ನಿಯಮ ಹೇರಿ ಕಟ್ಟು ನಿಟ್ಟಾಗಿ ಜಾರಿಗೆ ತರುವಂತಾಗಬೇಕು. ಇದಕ್ಕೆ ಇಡೀ ಸಚಿವ ಸಂಪುಟ ಬದ್ಧವಾಗಿರಲಿ. ಯಾವುದೇ ಲಾಬಿಗೆ ಸರ್ಕಾರ ಮಣಿಯಬಾರದು.

– ಸರ್ಕಾರ ಇನ್ನೂ ಏನು ಮಾಡಬಹುದು………?

ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಕರನ್ನು, ಶಾಲೆಯ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ govt-school-kidsಕೋಣೆಗಳನ್ನು ಒದಗಿಸಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿ. ಡೋನೇಶನ್ ಹಾವಳಿ ಮೇಲೆ ಸರ್ಕಾರ ಕಣ್ಣಿಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದಂತೆ ಸಚಿವರು ನಿಯಂತ್ರಿಸಬಾರದು. ಕಾರವಾರದ ಕೆಲ ಖಾಸಗಿ ಸಂಸ್ಥೆಗಳ ಶಿಕ್ಷಣ ವ್ಯವಸ್ಥೆ ನೋಡಿದರೆ ಅಚ್ಚರಿಯಾಗುತ್ತದೆ. ಪ್ರತಿ ಕ್ಲಾಸ್‌ಗೆ 3 ಡಿವಿಜನ್. ಪ್ರತಿ ಕೋಣೆಯಲ್ಲಿ 60 ರಿಂದ 80 ಮಕ್ಕಳು!! ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ? 6 ರಿಂದ 8 ಸಾವಿರ ರೂಪಾಯಿ ಶುಲ್ಕ ನೀಡಿ, ಮಕ್ಕಳನ್ನು ಇಂಥ ದನದ ಕೊಟ್ಟಿಗೆಗಳಿಗೆ ಮಕ್ಕಳನ್ನು ಕಳುಹಿಸಬೇಕೇ? ಪೋಷಕರು ಎಲ್ಲಿ ತಪ್ಪಿದ್ದಾರೆ. ಶಿಕ್ಷಣ ಇಲಾಖೆ ಏನು ಮಾಡುತ್ತಿದೆ. ಇದನ್ನ ಸಚಿವರು ಗಮನಿಸಬೇಕು. ಸಚಿವರು ದಿನವೂ ಒಂದಿಲ್ಲೊಂದು ಸರ್ಕಾರಿ ಇಲ್ಲವೇ ಖಾಸಗಿ ಶಾಲೆಯಲ್ಲಿರಬೇಕು. ಹೋದಲ್ಲಿ ಬಂದಲ್ಲಿ ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಜನತೆಗೆ ವಿವರಿಸಬೇಕು. ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ಸಚಿವರು ಪ್ರತಿ ಗ್ರಾಮ, ನಗರಕ್ಕೆ ಹೋಗಿ, ಪಾದಯಾತ್ರೆ ಮಾಡಿ ಜನರ ಮನವೊಲಿಸಬೇಕು. ಆಗ ಸ್ವಲ್ಪ ಬದಲಾವಣೆ ಸಾಧ್ಯ.

– ಕ್ರಾಂತಿಕಾರಿ ನಿಯಮ ಅನುಷ್ಠಾನ ಮಾಡಿ ………

ಕನ್ನಡ ಮತ್ತು ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಮನಸ್ಸಿದ್ದರೆ ಸರ್ಕಾರ ಹೀಗೆ ಮಾಡಬೇಕು. ರಾಜ್ಯದಲ್ಲಿನ ಎಲ್ಲಾ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಕನಿಷ್ಠ 5 ಜನ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 8 ಜನ ಶಿಕ್ಷಕರನ್ನ ನೇಮಿಸಿ. ಹೀಗೆ ನೇಮಿಸುವಾಗ ಮಕ್ಕಳ ಸಂಖ್ಯೆಯ ಅನುಪಾತ ನೋಡುವುದು ಬೇಡ. ಸರ್ಕಾರಕ್ಕೆ ಇದೇನು ಅಂತ ಹೊರೆಯಲ್ಲ. ಈ ವಿಷಯದಲ್ಲಿ ಐಎಎಸ್ ಅಧಿಕಾರಿಗಳ ಮಾತು ಕೇಳಬೇಡಿ. ಆರ್ಥಿಕ ಹೊರೆ ಎನಿಸಿದರೆ, ಐಎಎಸ್ ಮತ್ತು ಸೆಕ್ರೆರಿಟರಿಯೇಟ್‌ನಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ನೀಡುವ ಸೌಲಭ್ಯ ಸ್ವಲ್ಪ ಮಟ್ಟಿಗೆ ಕಡಿತ ಮಾಡಿದರೆ ಶಿಕ್ಷಕರಿಗೆ ನೀಡುವ ಸಂಬಳ ನಿಭಾಯಿಸಬಹುದು.

ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳಲ್ಲಿ ಒಂದು ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸುವ ನಿಯಮ ರೂಪಿಸಿ. government_schoolಒಂದೇ ಮಗು ಇದ್ದ ನೌಕರ ಸರ್ಕಾರಿ ಶಾಲೆಗೆ ಮಗುವನ್ನು ಕಳುಹಿಸಲು ಬಯಸದಿದ್ದರೆ, ಆ ನೌಕರನ ಅಥವಾ ನೌಕರಳ ಒಂದು ಇನ್ ಕ್ರಿಮೆಂಟ್ (ವೇತನ ಬಡ್ತಿ) ಕಡಿತ ಮಾಡಿ. ಈ ವಿಷಯದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಯಾವುದೇ ಶಾಲೆಗೆ ಕಳುಹಿಸಲು ಸ್ವತಂತ್ರರು. ಇನ್ನು ಖಾಸಗಿ ಸಂಸ್ಥೆಯವರು ಸಮಾಜ ಸೇವೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಕಾರಣ ಅವರು ಡೋನೇಶನ್ ಸ್ವೀಕರಿಸುವಲ್ಲಿ ಕಡಿವಾಣ ಮತ್ತು ಮಿತಿ ಇರಲಿ. ಶಾಲೆ ಕಟ್ಟಡ ಕಟ್ಟಿದ ನಂತರ ಮತ್ತೆ ಡೋನೇಶನ್ ವಸೂಲಿಯ ಅವಶ್ಯಕತೆಯನ್ನು ಸರ್ಕಾರ ಪ್ರಶ್ನಿಸಲಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಶೋಷಣೆಗೆ ಒಂದು ಉದಾಹರಣೆ ಇಲ್ಲಿ ನೀಡುವುದಾದರೆ;
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋಣೆಯೊಂದರ ಒಂದು ಡಿವಿಜನ್‌ನಿಂದ (60 ಮಕ್ಕಳಿಂದ) ಸಂಗ್ರಹಿಸುವ ದೇಣಿಗೆ ಹಣ 3 ಲಕ್ಷ ರೂಪಾಯಿ ಮೀರುತ್ತಿದೆ. ಎಲ್ಲಾ ತರಗತಿಯ, ಎಲ್ಲಾ ಮಕ್ಕಳಿಂದ (ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7ನೇ ತರಗತಿ) ಸಂಗ್ರಹಿಸುವ ಫೀಜ್ ಮತ್ತು ಡೋನೇಶನ್ 50 ಲಕ್ಷ ರೂಪಾಯಿ ಅಜುಬಾಜು ಆಗಿರುತ್ತದೆ. ಅದೇ ಖಾಸಗಿ ಶಾಲೆಯ ಹಂಗಾಮಿ ಶಿಕ್ಷಕರಿಗೆ ತಿಂಗಳಿಗೆ ನೀಡುವ ಗೌರವಧನ 2 ರಿಂದ 3 ಸಾವಿರ ರೂಪಾಯಿ ಆಗಿರುತ್ತದೆ. ಖಾಸಗಿ ಸಂಸ್ಥೆಗಳ ಶೋಷಣೆ, ಸುಲಿಗೆ ತಡೆಯಬೇಕಾದರೆ ಸರ್ಕಾರ ಕೆಲ ಸಮಯ ಕಠಿಣವಾಗಿ ವರ್ತಿಸಿ, ಶಿಸ್ತು ಕಲಿಸಬೇಕಾಗುತ್ತದೆ. ಜನತೆಯಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಕೆಲ ವಿಶೇಷ ಸವಲತ್ತುಗಳನ್ನು ಘೋಷಿಸಬೇಕಾಗುತ್ತದೆ. ಹಾಗೆ ಶಿಕ್ಷಣ ಸಚಿವರು, ಸರ್ಕಾರ ಮಾಡಬೇಕಾದ ತುರ್ತು ಅಗತ್ಯತೆ ಈಗ ಇದೆ.

ಇಂಥ ಕ್ರಾಂತಿಕಾರಿ ಹೆಜ್ಜೆಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಅನಿವಾರ್ಯವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಬಲಗೊಳಿಸುತ್ತಲೇ ಖಾಸಗಿ ದೌರ್ಜನ್ಯವನ್ನು ಹತ್ತಿಕ್ಕಬೇಕು. ಶಿಕ್ಷಣದ ಪೂರ್ಣ ಸರ್ಕಾರೀಕರಣ ಅಸಾಧ್ಯ. ನಿಧಾನಕ್ಕೆ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ರಾಜಕೀಯ ಇಚ್ಛಾಶಕ್ತಿಯೂ ಬೇಕು. ಕೇವಲ ಶಾಲಾ ಕಟ್ಟಡ, ಬಿಸಿಯೂಟ, ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ನೀಡಿ, ಶಾಲೆಗೆ ಶಿಕ್ಷಕರನ್ನೇ ನೀಡದಿರುವುದು, ಶಿಕ್ಷಕರ ನೇಮಕದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುವುದು ನೋಡಿದರೆ ಖಾಸಗಿಯವರ ಜೊತೆ ಶಿಕ್ಷಣ ಇಲಾಖೆ ಒಳಗೊಳಗೇ ಹೇಗೆ ಶಾಮೀಲಾಗಿದೆ ಎಂಬುದು ಎಂಥವರಿಗೂ ಅರ್ಥವಾಗುವಂತಹದ್ದು.

ಸರ್ಕಾರಕ್ಕೆ ಕನ್ನಡ ಶಾಲೆಗಳನ್ನು ಉಳಿಸುವ ಮನಸ್ಸಿದ್ದರೆ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದು ಅನಿವಾರ್ಯ ಮತ್ತು ಅಗತ್ಯ ಕೂಡಾ. ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಕಳುಹಿಸುವಂತೆ ನಿಯಮ ರೂಪಿಸುವ ಜೊತೆಗೆ ಮಾನವೀಯ ಮುಖವನ್ನು ಸರ್ಕಾರ ಪ್ರದರ್ಶಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಕೆಲ ಸಂದರ್ಭಗಳಲ್ಲಿ ಕಠಿಣವಾಗಿ ಸಹ ವರ್ತಿಸಬೇಕು. ಈ ಧೈರ್ಯ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ?

ಸರ್ವಕಾರಣಗಳ ಹಿಂದೆಯೂ ರಾಜಕಾರಣ

– ಡಾ.ಎಸ್.ಬಿ.ಜೋಗುರ

ರಾಜಕಾರಣ ಎನ್ನುವದು ಎಲ್ಲ ಕಾರಣಗಳು, ಸಂದರ್ಭಗಳೊಂದಿಗೆ ತೂರಿಕೊಳ್ಳಬೇಕಿಲ್ಲ. ಮಾಡಬಾರದ ವಿಷಯಗಳಲ್ಲಿ ರಾಜಕಾರಣ ಮಾಡುವದು ಪ್ರಬುದ್ಧ ರಾಜಕಾರಣಿಯ ಲಕ್ಷಣವೂ ಅಲ್ಲ. ಎಲ್ಲ ಬಗೆಯ ವೃತ್ತಿಗಳಲ್ಲಿಯೂ ಒಂದು ಬಗೆಯ ನೈತಿಕತೆ ಅಡಕವಾಗಿರಬೇಕು. ಗಾಳಿ ಬಿಟ್ಟಾಗ ತೂರಿಕೊಳ್ಳುವ ಸೂತ್ರ ದವಸ ಧಾನ್ಯಗಳಿಗೆ ಅನ್ವಯವಾಗಬೇಕೇ ಹೊರತು ಹಾಳೂರಿನ ಮಣ್ಣು ತೂರುವದಕ್ಕಾಗಿ ಅಲ್ಲ. ಉತ್ತರಾಖಂಡದಲ್ಲಿ ಜನ ಅತ್ಯಂತ ಕ್ಷುದ್ರ ಜೀವಜಂತುಗಳಂತೆ ಸಾಯುತ್ತಿದ್ದಾರೆ. uttarakhand-floodsಸತ್ತವರ ಸಂಖ್ಯೆ 5 ಸಾವಿರ ದಾಟಿದೆ ಎನ್ನುವ ವರದಿಗಳೇ ಇಡೀ ದೇಶವೇ ತತ್ತರಿಸುವಂತೆ ಮಾಡಿದೆ. ರವಿವಾರ ಒಂದೇ ದಿನ ಹತ್ತು ಸಾವಿರದಷ್ಟು ಸಂಕಷ್ಟದಲ್ಲಿ ಸಿಲುಕಿದವರನ್ನು ಪಾರು ಮಾಡಿರುವ ರೀತಿಯನ್ನು ಗಮನಿಸಿದರೆ ಅದರ ಭೀಕರತೆಯ ಅರಿವಾಗುತ್ತದೆ. ಮನುಷ್ಯನಲ್ಲಿಯ ಎಂಪೆಥೆಟಿಕ್ ಸೆನ್ಸ್ ಜಾಗೃತವಾಗುವ ಹೊತ್ತಿನಲ್ಲಿಯೇ ಆತನ ಬೇರುಮಟ್ಟದ ನೀಚತನವೂ ಬಯಲಾಗುವದು ಇಂಥಾ ಸಂದರ್ಭಗಳಲ್ಲಿಯೇ.. ಇಡೀ ವಿಶ್ವಕ್ಕೆ ಸಾಂಸ್ಕೃತಿಕ ಮೌಲ್ಯಗಳ ವಿಷಯವಾಗಿ ನಮ್ಮ ದೇಶ ಗುರುವಿನ ಸ್ಥಾನದಲ್ಲಿದೆ ಎಂದಿರುವ ಕವಿವರ್ಯ ರವಿಂದ್ರನಾಥ ಟಾಗೂರರ ಹೇಳಿಕೆ ಪ್ರಸ್ತುತ ಸಂದರ್ಭದಲ್ಲಿ ಕೇವಲ ಹಳಹಳಿಕೆಯ ಹೇಳಿಕೆಯಾಗಿ ಬಿಂಬಿತವಾಗುತ್ತಿದೆ. ಮನುಷ್ಯನೊಬ್ಬ ರಣಹದ್ದುಗಳಾಗುವ ಸನ್ನಿವೇಶ ಈ ಬಗೆಯ ಪ್ರವಾಹ, ಅಪಘಾತದ ಸಂದರ್ಭದಲ್ಲಿ ಸೃಷ್ಟಿಯಾಗುವ ರೀತಿಯೇ ಅತ್ಯಂತ ಅಸಹ್ಯ ಎನಿಸುವಂಥದ್ದು. ಒಮ್ಮೊಮ್ಮೆ ಹೀಗೂ ಅನಿಸುತ್ತದೆ. ಮನುಷ್ಯನ ಜೀವಾಳದ ಅಸಲೀಯತ್ತೇ ಹೀಗಿರಬಹುದೇ..?

ಇಂಥಾ ನೈಸರ್ಗಿಕ ಅವಘಡಗಳ ಸಂದರ್ಭಗಳಲ್ಲಿ ಎಲ್ಲ ರಾಜ್ಯಗಳು ಅದರಲ್ಲೂ ಈ ಉತ್ತರಾಖಂಡದ ನೆರೆಯ ರಾಜ್ಯಗಳು ಪ್ರಜ್ಞಾತೀತವಾಗಿ ನೆರವು ನೀಡಬೇಕಿದೆ. ಮಾಡಿದೆನೆನ್ನುವದೇ ಈ ಸಂದರ್ಭದಲ್ಲಿ ಮಹಾನ್ ವ್ಯಂಗ್ಯ. ಅದರಲ್ಲೂ ನಾನೇ ಮಾಡಿದ್ದು, ನೆರವು ನೀಡಿದ್ದು ಎನ್ನುವ ಮಾತು ಇನ್ನೂ ಸಣ್ಣತನದ್ದು. ಇಲ್ಲಿ ಮಾಡಿದೆ ಎನ್ನುವದು ಶರಣರು ಹೇಳುವ ಹಾಗೆ ಮನದಲ್ಲೂ ಹೊಳೆಯಬಾರದು. ಹಾಗೆ ನೆರವಿಗೆ ಬರುವ ಜನಪ್ರತಿನಿಧಿಗಳ ಅಗತ್ಯತೆಯಿದೆ. ಮಾಧ್ಯಮಗಳ ಮೂಲಕ ಸದ್ದಾಗುವ, ಸುದ್ದಿಯಾಗುವ ಹಂಬಲದಲ್ಲಿ ಇಂಥಾ ಕಾರ್ಯಗಳನ್ನು ಮಾಡುವಂತಿಲ್ಲ. ಕೆಲವು ರಾಜಕೀಯ ಪಕ್ಷಗಳು ಅದಾಗಲೇ ನಾ ಮುಂದು, ತಾ ಮುಂದು ಎಂದು ಕ್ರೆಡಿಟ್‌ಗಾಗಿ ಪೈಪೋಟಿಗಿಳಿದಂತೆ ಮಾಡುವದನ್ನು ನೋಡಿದರೆ ಸೂತಕದ ಮನೆಯಲ್ಲೂ ರಾಜಕಾರಣ ಬೇಕೆ..? ಎನ್ನುವ ಪ್ರಶ್ನೆ ಕಾಡುತ್ತದೆ.

ಮಾಧ್ಯಮ ಸಲಹೆಗಾರರಾಗಿ ಅಪ್ಪಟ ಪತ್ರಕರ್ತ

– ಮಧುಚಿತ್ತ ಸೋಲಂಕಿ

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ನಂತರ ಫೇಸ್‌ಬುಕ್‌ನಲ್ಲಿ ಪತ್ರಿಕೋದ್ಯಮ ವೃತ್ತಿಯಿಂದ ಹೊರನಡೆದರೂ, ಅದರ ಗುಂಗಿನಿಂದ ಹೊರಬರಲಾಗದ ಸ್ಥಿತಿಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಉತ್ತರಖಾಂಡ್‌ದಲ್ಲಿನ ಸಾವು-ನೋವುಗಳನ್ನು ವರದಿ ಮಾಡಬೇಕೆಂಬ ಹಂಬಲ ಅವರ ಮಾತಿನಲ್ಲಿತ್ತು. ಅಪ್ಪಟ ಪತ್ರಕರ್ತನಿಗೆ ಅವರ ಮಾತು ಅರ್ಥವಾಗುತ್ತೆ. ಎಲ್ಲಿ ಯಾರೇ ಸಂಕಟದಲ್ಲಿರಲಿ, ಅವರ ನೋವಿಗೆ ದನಿಯಾಗುವ ಮೂಲಕ ಅವರ ದು:ಖಕ್ಕೆ ಸ್ಪಂದಿಸಿದ ಸಮಾಧಾನ ಪಡೆಯುವವನು ಪತ್ರಕರ್ತ. ನೋವಿನಲ್ಲಿರುವವರಿಗೆ ಒಂದಿಷ್ಟು ಹಣ, ನೆರವು ನೀಡುವ ಮೂಲಕ ಇತರರಿಗೆ ಸಮಾಧಾನ ಆಗಬಹುದು. ಆದರೆ ಪತ್ರಕರ್ತನಿಗೆ ಹಾಗಲ್ಲ. ಅವರ ನೋವಿನ ಕತೆಯನ್ನು ಇತರರಿಗೂ ತಲುಪಿಸಿದರಷ್ಟೇ ಸಮಾಧಾನ.

ಸುನಾಮಿ ಬಂದು ತಮಿಳುನಾಡಿನಲ್ಲಿ ಸಾವಿರಾರು ಮಂದಿ ಸತ್ತಾಗ, ಊರುಗಳೇ ನೀರಾದಾಗ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ನೂರಾರು ಮಂದಿ ಮನೆ ಕಳೆದುಕೊಂಡಾಗ, ಭೂಕಂಪವಾದಾಗ, ಕೋಮುವಾದಿ ರಾಜಕಾರಣಿಗಳ ಸ್ವಾರ್ಥಕ್ಕಾಗಿ ರೂಪುಗೊಂಡ ಗಲಭೆಗಳಲ್ಲಿ ಅಮಾಯಕರು ಸತ್ತಾಗ.. dinesh-amin-mattuಹೀಗೆ ಏನೇ ಆದರೂ ಅಂತಹ ಸಂದರ್ಭಗಳಲ್ಲಿ ತಾನಿರಬೇಕು ಎಂದು ಬಯಸುವವನು ಅಪ್ಪಟ ಪತ್ರಕರ್ತ. ಅಮಿನ್ ಮಟ್ಟು ಅವರಲ್ಲಿ ಅಪ್ಪಟ ಪತ್ರಕರ್ತನಿರುವ ಕಾರಣದಿಂದಲೇ ಅವರು ಹೀಗೆ ಬರೆಯಲು ಸಾಧ್ಯವಾಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬುದು ಪಕ್ಕಾ ಆದ ಕೆಲವೇ ಗಂಟೆಗಳಲ್ಲಿ ಪತ್ರಿಕಾಲಯಗಳಲ್ಲಿ ಸಣ್ಣದಾಗಿ ಹರಿದಾಡುತ್ತಿದ್ದ ಸುದ್ದಿ – ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ಸೇರ್ತಾರಂತೆ. ಎರಡು ದಿನಗಳಲ್ಲಿ ದಿನೇಶ್ ಅವರು ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ದಾಯಿತು. ಹೊಸ ಜವಾಬ್ದಾರಿ ವಹಿಸಿಕೊಂಡದ್ದೂ ಆಯಿತು. ಅವರ ನಿರ್ಧಾರದ ಬಗ್ಗೆ ಅಲ್ಲಲ್ಲಿ ಚರ್ಚೆಗಳಾದವು.
“ಇವರಿಗೇಕೆ ಬೇಕಿತ್ತು?”
“ಅವರು ಇತ್ತೀಚೆಗೆ ಬರೆಯೋದನ್ನೆಲ್ಲಾ ನೋಡಿದರೆ, ಅವರು ಹೀಗೆ ಸರಕಾರ ಸೇರ್ತಾರೆ ಅಂತ ಯಾರಾದರೂ ಹೇಳಬಹುದಿತ್ತು”.
“ಅವರು ಮೊದಲಿನಿಂದಲೂ ಕಾಂಗ್ರೆಸ್ಸೇ”
“ಅದರಲ್ಲಿ ತಪ್ಪೇನಿದೆ ಬಿಡ್ರಿ. ಅದು ಒಂದು ಅವಕಾಶ. ವ್ಯವಸ್ಥೆಯಲ್ಲಿ ಸಾಧ್ಯವಾದರೆ ಒಂದಿಷ್ಟು ಉತ್ತಮ ಬದಲಾವಣೆ ತರಲಿ..”
ಹೀಗೆ ನಾನಾ ಅಭಿಪ್ರಾಯಗಳು ವ್ಯಕ್ತವಾದವು. ಹೊಸ ಜವಾಬ್ದಾರಿ ವಹಿಸಿಕೊಳ್ಳುವಾಗ ದಿನೇಶ್ ಅವರು ಕೂಡಾ ಹೀಗೆ ಗೊಂದಲವನ್ನು ಅನುಭವಿಸಿದ್ದಾರೆ ಎನ್ನುವುದು ಮಾತ್ರ ಅವರ ಫೇಸ್‌ಬುಕ್‌ ಪೋಸ್ಟ್‌ನಿಂದ ಸ್ಪಷ್ಟವಾಗಿತ್ತು. ಪ್ರಜಾವಾಣಿ ಕಚೇರಿಯನ್ನು ತೊರೆಯುವ ಬಗ್ಗೆ ಅವರಿಗಾದ ಸಂಕಟವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಅವರ ಮಾತುಗಳಲ್ಲಿ ಅವರ ನಿರ್ಧಾರದ ಹಿಂದೆ ಅನುಭವಿಸಿರಬಹುದಾದ ತಾಕಲಾಟ ಕಾಣುತ್ತಿತ್ತು.

ದಿನೇಶ್ ಅವರ ಬರಹಗಳನ್ನು ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಕೆಲವರು ಅವರು ಈ ಕೆಲಸಕ್ಕೆ ಸೂಕ್ತನಾ ಎಂದು ತಮ್ಮ ಕಾಮೆಂಟುಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಕಾರಣಗಳಿದ್ದವು. ಈ ಹಿಂದಿನ ಮುಖ್ಯಮಂತ್ರಿಯೊಬ್ಬರಿಗೆ ಇದ್ದ ಮಾಧ್ಯಮ ಸಲಹೆಗಾರರು ಆ ಹುದ್ದೆಗೆ ಸಾಕಷ್ಟು ಮಸಿಬಳಿದು ಹೋಗಿದ್ದರು. ಮಾಧ್ಯಮ ಸಲಹೆಗಾರರ ಕೆಲಸವೆಂದರೆ ಪತ್ರಕರ್ತರಿಗೆ ಆಗಾಗ ಪಾರ್ಟಿಗಳನ್ನು ಏರ್ಪಡಿಸಿ ’ತೃಪ್ತಿ’ ಪಡಿಸುವುದು, ಪೇಮೆಂಟ್ ಕೆಟಗರಿ ಪತ್ರಕರ್ತರಿಗೆ ನಿಗದಿತವಾಗಿ ಪಾಕೆಟ್ ತಲುಪಿಸುವುದು – ಎನ್ನುವಷ್ಟಕ್ಕೆ ಸೀಮಿತಗೊಳಿಸಿದ್ದರು.

ಮಾಧ್ಯಮ ಸಲಹೆಗಾರರದು ದೊಡ್ಡ ಜವಾಬ್ದಾರಿ. ಅವರು ಒಂದರ್ಥದಲ್ಲಿ ಮುಖ್ಯಮಂತ್ರಿ ಹೆಚ್ಚು ಜನಪರವಾಗಿರಲು ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಕೊಡುವವರು. ಜನಪರ ಎಂದರೆ ಅದು ಅಭಿವೃದ್ಧಿ ಪರ, ಸಾಮಾಜಿಕ ನ್ಯಾಯದ ಪರ, ಸಮಾನತೆ ಪರ, ಜಾತ್ಯತೀತ ನಿಲುವುಗಳ ಪರ. ಹೀಗೆ ಮುಖ್ಯಮಂತ್ರಿಯವರು ಸಮಾಜದ ಪರವಾಗಿ ವರ್ತಿಸುತ್ತಿದ್ದರೆ ಸಮಚಿತ್ತದ ಮಾಧ್ಯಮ ಸಹಜವಾಗಿಯೇ ಮುಖ್ಯಮಂತ್ರಿಯವರ ಒಳ್ಳೆ ಕೆಲಸಗಳಿಗೆ ಬೆಂಬಲ ಕೊಡುತ್ತದೆ. ಒಂದು ಸರಕಾರ ಹೀಗೆ ಜನರ ಮಧ್ಯೆ ಸದಾಭಿಪ್ರಾಯಕ್ಕೆ ಯೋಗ್ಯವಾಗುವಂತೆ ಮಾಡುವ ಕೆಲಸದಲ್ಲಿ ಮಾಧ್ಯಮ ಸಲಹೆಗಾರರ ಪಾತ್ರವಿದೆ. ಪತ್ರಕರ್ತರಿಗೆ ಪಾರ್ಟಿ ಏರ್ಪಡಿಸುತ್ತ ’ಮಿಡಿಯಾ ಮ್ಯಾನೇಜ್’ ಮಾಡುವುದಾದರೆ ಆಡಳಿತದ ಬಗ್ಗೆ ಜನರಲ್ಲಿ ಸದಾಭಿಪ್ರಾಯ ಇದೆ ಎಂಬ ಭ್ರಮೆಯನ್ನು ಸೃಷ್ಟಿಸಬಹುದಷ್ಟೆ.

ಈ ಹಿಂದೆ ಹಿರಿಯ ಪತ್ರಕರ್ತ ಹರೀಶ್ ಖರೆ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು. dinesh-amin-mattu-2ನಂತರ ಸಂಜಯ್ ಬಾರು ಅದೇ ಸ್ಥಾನ ವಹಿಸಿದರು. ಆ ಸ್ಥಾನವನ್ನು ತೊರೆದು ಬಂತ ನಂತರವೂ ಅವರು ತಮ್ಮ ಕ್ಷೇತ್ರಗಳಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಬೋಧನೆ) ತೊಡಗಿಸಿಕೊಂಡಿದ್ದಾರೆ. ಇವರ್‍ಯಾರೂ ಅಧಿಕಾರದ ಸ್ಥಾನಗಳ ಹತ್ತಿರ ಇದ್ದರೂ ಹೆಸರು ಕೆಡಿಸಿಕೊಳ್ಳಲಿಲ್ಲ. ಕನ್ನಡದವರೇ ಆದ ಶಾರದಾ ಪ್ರಸಾದ್ ದೆಹಲಿಯಲ್ಲಿ ಬಹಳ ಕಾಲ ಇಂದಿರಾ ಗಾಂಧಿಯವರಿಗೆ ಮಾಧ್ಯಮ ಕಾರ್ಯದರ್ಶಿಯಾಗಿದ್ದವರು. ಹೀಗೆ ಒಂದು ಪರಂಪರೆಯೇ ಇದೆ. ದಿನೇಶ್ ಅಮಿನ್ ಮಟ್ಟು ಆ ಪರಂಪರೆಯನ್ನು ಮುಂದುವರಿಸಿ ಆ ಸ್ಥಾನಕ್ಕೆ ಉನ್ನತ ಗೌರವ ತಂದುಕೊಡಬಲ್ಲರು. ಏಕೆಂದರೆ, ಅವರು ತಮ್ಮ ಒಂದು ಅಂಕಣದಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಟೀಕಿಸುತ್ತಾ.. “ಪದೇ ಪದೇ ಬಸವಣ್ಣನನ್ನು ತಮ್ಮ ಮಾತುಗಳಲ್ಲಿ ಉಲ್ಲೇಖಿಸುವ ಯಡಿಯೂರಪ್ಪ ಕಾಯಕ ಸಿದ್ಧಾಂತವನ್ನೇ ಮರೆತುಬಿಟ್ಟರು. ತನ್ನ ಸ್ವಂತ ಪರಿಶ್ರಮದ ಹೊರತಾಗಿ ಬರುವ ಎಲ್ಲಾ ಫಲವು ಅಮೇಧ್ಯ ಎಂದು ಹೇಳುವುದೇ ಕಾಯಕ ತತ್ವ” (ನೆನಪಿನಿಂದ ಬರೆದಿದ್ದು. ವಾಕ್ಯ ರಚನೆ ಬೇರೆ ಇರಬಹುದು. ಆದರೆ ಅರ್ಥ ಅದೇ) ಎಂದು ಬರೆದಿದ್ದರು. ಕಾಯಕ ತತ್ವದಲ್ಲಿ ನಂಬಿಕೆ ಇರುವವರು ಅಮಿನ್ ಮಟ್ಟು. ಅವರು ಅದನ್ನು ಮರೆಯಲಾರರು. ಅಂತೆಯೇ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರಾದರೂ ಕಾಯಕ ತತ್ವ ಪಾಲಿಸಿದರೆ, ಅವರ ಸರಕಾರ ಜನಪರವಾಗಿರುತ್ತೆ. ಇಲ್ಲವಾದರೆ ಜನ ಪಾಠ ಕಲಿಸುತ್ತಾರೆ.

ರ೦ಗಭೂಮಿಗೆ ಅರ್ಥಶಾಸ್ತ್ರದ ಪರಿಕಲ್ಪನೆ ಬೇಕು

– ಅಶೋಕ್ ನಿಟ್ಟೂರ್

ರ೦ಗಭೂಮಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ರ೦ಗಾಸಕ್ತರ ಕೊರತೆ, ಅರ್ಥಿಕ ಸವಾಲು, ದೃಶ್ಯ ಮಾದ್ಯಮಗಳೊ೦ದಿಗಿನ ಪೈಪೋಟಿ, ರ೦ಗಭೂಮಿ ಮತ್ತು ಇತರ ಕಲಾಪ್ರಕಾರಗಳ ನಡುವಿನ ಅ೦ತರ, ಹೀಗೆ ಹತ್ತು ಹಲವು. ಹಾಗೆ ನೋಡಿದರೆ ಪ್ರ್ರತಿ ಸಮಯವು ಪೈಪೋಟಿಯ ಸಮಯವೆ, ಸವಾಲಿನ ಸಮಯ. ಅದನ್ನ ಮೀರಿ ಯಾವುದೆ ಒ೦ದು ತ೦ಡ ಅಥವ ಸ೦ಸ್ಥೆ ನಿಲ್ಲಬೇಕಾಗುತ್ತದೆ. ಅದು ಸಿನೆಮ ಇರಬಹುದು, ವ್ಯಾಪಾರ ಇರಬಹುದು, ಬ್ಯಾ೦ಕಿ೦ಗ್ ಇರಬಹುದು, theatrespotlightನಾಟಕ ಇರಬಹುದು. ಅ೦ತ ಒ೦ದು ಸವಾಲಿನ ಪ್ರಯತ್ನ ರ೦ಗಭೂಮಿಯಲ್ಲಿ ಆಗ ಬೇಕಾದ್ದು ತೀರ ಅಗತ್ಯ. ಇ೦ದಿನ ಸಾಮಾಜಿಕ ಸ್ಥಿತಿ, ಆರ್ಥಿಕ ಬದಲಾವಣೆ, ಜಾಗತಿಕರಣ ಇವೆಲ್ಲವು ಒಟ್ಟು ಮನುಷ್ಯನ ಯೋಚನೆ, ನೋಡುವ ದೃಷ್ಟಿಕೊನ ಎಲ್ಲವನ್ನು ಬದಲಾಗಿಸಿದೆ, ನಾಟಕ ರಚನೆಯಲ್ಲಿ, ಬಳಸುವ ಭಾಷೆಯಲ್ಲಿ, ನಾಟಕದ ನಿರೂಪಣೆಯಲ್ಲಿ, ತಾ೦ತ್ರಿಕತೆಯಲ್ಲಿ ಒಟ್ಟಾರೆ ಇಡಿ ರ೦ಗಭೂಮಿ ಅಪ್‌ಡೇಟ್ ಆಗುವುದು ಮುಖ್ಯ.

ನಾಟಕಗಳು ಶ್ರಿಮ೦ತವಾಗಬೇಕು. ನೂರು ನಾಟಕ ಮಾಡುವುದರಿ೦ದ ರ೦ಗಭೂಮಿ ಉಳಿದ೦ತಾಗುವುದಿಲ್ಲ, ಇಲಾಖೆಗಳು ಅಕಾಡೆಮಿಗಳಿ೦ದ ಮಾತ್ರ ರ೦ಗಭೂಮಿ ಉಳಿಯುವುದಿಲ್ಲ. ಪ್ರೇಕ್ಷಕ ರ೦ಗಮ೦ದಿರವನ್ನು ಹುಡುಕಿಕೊ೦ಡು ಬರುವ೦ತಾಗಬೇಕು. ಆಗ ರ೦ಗಭೂಮಿ ಶ್ರಿಮ೦ತವಾಗುತ್ತದೆ, ಉಳಿಯುತ್ತದೆ. ಅ೦ತ ನಾಟಕಗಳು ಬರಬೇಕು. ಹೊಸ ನಾಟಕಗಳು, ಹೊಸ ಶೈಲಿಯ ನಿರೂಪಣೆ ಇರುವ, ಜನಕ್ಕೆ ಹತ್ತಿರವಾಗುವ, ನಾಟಕಗಳು ರ೦ಗಕ್ಕೆ ಬರಬೇಕು.  ಜನ ರ೦ಗಭೂಮಿಯನ್ನು ನ೦ಬುವ೦ತಹ  ಪ್ರಯತ್ನ ನಡೆಯಬೇಕು.

ಇತ್ತೀಚೆಗ೦ತು ನಾಟಕ ಪ್ರದರ್ಶನ ಎಷ್ಟು ಮಿತಿಗೆ ಒಳಪಟ್ಟಿದೆ ಎ೦ದರೆ ಸೆಟ್ ಇಲ್ಲ, ಕಾಸ್ಟುಮ್ ಇಲ್ಲ, ಸ೦ಗಿತಕ್ಕೆ ಸಿ ಡಿ,, ಕಡಿಮೆ ನಟ ನಟಿಯರು. ಅರ್ಥವಾಗದ ಪಾ೦ಡಿತ್ಯ ಪ್ರದರ್ಶನ, ಕೆಲವೆ ಕೆಲವು ವ್ಯಕ್ತಿಗಳನ್ನು ಮಾತ್ರ ಮೆಚ್ಚಿಸುವ ರ೦ಗಭೂಮಿ ಸಾಮಾನ್ಯ ಜನರಿ೦ದ ದೂರ ಉಳಿದು ಬಿಡುತ್ತದೆ. ಅತಿ ಆಧುನಿಕ ಪ್ರಜ್ಞೆಯಲ್ಲಿ, ಹಾದರ, ಕಾಮದ ವಸ್ತು ನಾಟಕದ ನೋಡುಗನನ್ನು ಮುಜುಗರಕ್ಕೆ ಒಳಪಡಿಸಬಾರದು. ನೈಜತೆ ಹೆಸರಿನಲ್ಲಿ ಕೆಳ ಮಟ್ಟದ ಭಾಷೆ, ಸ೦ಭಾಷಣೆ ಹೆಸರಿನ ಶೈಲಿಯಲ್ಲಿ ವಾಕ್ಯಮಾಲೆ, ಅದನ್ನು ಇನ್ನಷ್ಟು ಕಠಿಣವಾಗಿಸುವ ನಿರ್ದೇಶಕ, ಅರ್ಥ ಇಲ್ಲದಿರುವುದಕ್ಕೆಲ್ಲ ಹೊಸ ಅರ್ಥ ಹುಡುಕಿ ಅದಕ್ಕೊ೦ದು ವ್ಯಾಖ್ಯಾನ ಕೊಟ್ಟು ಅದಕ್ಕೊ೦ದು ಸಿದ್ದಾ೦ತದ ಸವಕಲು ತೇಪೆ ಹಾಕಿ, ಇಲ್ಲದ ಕಣ್ಣಿನಿ೦ದ ನೋಡುವ ಪ್ರಯತ್ನ ಆಗಬಾರದು.

ನಮ್ಮ ನಾಟಕ ನೊಡುವ ಪ್ರೇಕ್ಷಕ ನಿಜಕ್ಕೂ ದಣಿದಿದ್ದಾನೆ. ನಾಟಕ ನೊಡುವ ಅಸಕ್ತಿ ಇದ್ದರು ಈ ಹೇರಿಕೆ ಸಹಿಸಿಕೊಳ್ಳುವುದಕ್ಕಿ೦ತ ಯಾವುದೊ ಕಳಪೆ ಸಿನೆಮಾನೊ, ಧಾರವಾಹಿನೊ ನೋಡೋದು ವಾಸಿ ಅನ್ನಿಸಿ, ಪ್ರೇಕ್ಷಕ ಪ್ರಭು ಅಲ್ಲಿ ಸೆಟ್ಲ್ ಆಗಿ ಬಿಡುತ್ತಾನೆ. ಹಾಗ೦ತ ಒಳ್ಳೆ ನಾಟಕಗಳು ಪ್ರೆದರ್ಶನ ಕಾಣುತ್ತಿರುವುದು ನಿಜವಾದರು ಪ್ರೇಕ್ಷಕನನ್ನು ಸೆಳೆಯುವ ಆಯಾಮ ಪಡೆಯುತ್ತಿಲ್ಲ.

ಜನ ರ೦ಗಭೂಮಿಯಿ೦ದ ದೂರ ಆಗಿಲ್ಲ, ಆದರೆ ರ೦ಗಭೂಮಿ ಜನರನ್ನು ಸರಿಯಾಗಿ ತಲುಪುತ್ತಿಲ್ಲ. ನಮ್ಮ ರ೦ಗಭೂಮಿ ಸಜ್ಜನರು, ಪ್ರೇಕ್ಷಕರನ್ನು ಹೆಚ್ಚಿಸುತ್ತಿಲ್ಲ. ನಾಟಕ ಎಷ್ಟು ಮಾಡಿದಿವಿ ಎನ್ನೊ ಸ೦ಖ್ಯಾಶಾಸ್ತ್ರದಲ್ಲಿ ಅವಾರ್ಡು ಸನ್ಮಾಗಳತ್ತ ಮುಖ ಮಾಡತೊಡಗಬಾರದು. ಪ್ರೇಕ್ಷಕನಿಗೆ ಒಳ್ಳೆ ನಾಟಕ ನೋಡಬೇಕೆನ್ನುವ ಕೊರಗು ಹಾಗೆ ಉಳಿದು ಬಿಡುತ್ತದೆ. ದುರ೦ತವೆ೦ದರೆ, ಪ್ರೇಕ್ಷಕನನ್ನು ತಲುಪಬೇಕೆ೦ದು ಮಾಡಿಕೊ೦ಡ ಎಲ್ಲ ವ್ಯವಸ್ಥೆಗಳು ಸೋಲುತ್ತಲೆ ಇವೆ.

ನಮ್ಮಲ್ಲಿ ವ್ಯವಸ್ಥಿತ ರ೦ಗಮ೦ದಿರಗಳಿಲ್ಲ. ರಾಜಕಿಯ ಭಾಷಣಗಳಿಗೆ ಲಾಯಕ್ಕಾದ ರ೦ಗಮ೦ದಿರದಲ್ಲಿ, ನಾಟಕ ಪ್ರೇಕ್ಷಕನನ್ನು ಹೇಗೆ ಸೆಳೆಯುತ್ತದೆ? raveendra-kalaakshetraಅಲ್ಲೊ೦ದು ಇಲ್ಲೊ೦ದು ಕೆ.ಹೆಚ್.ಕಲಾಸೌಧ, ರವಿ೦ದ್ರ ಕಲಾಕ್ಷೇತ್ರ, ಚೌಡಯ್ಯ ಹಾಲ್, ಹೀಗೆ ಕೆಲವೆ ರ೦ಗಮ೦ದಿರಗಳು ನಾಟಕಕ್ಕೆ ಯೋಗ್ಯವಾಗಿವೆ.

ನಾಟಕ ಅಕಾಡೆಮಿ, ಕನ್ನಡ ಸ೦ಸ್ಕೃತಿ ಇಲಾಖೆಗಳ ಮಟ್ಟದಲ್ಲಿ ರ೦ಗಮ೦ದಿರಗಳ ಅಗತ್ಯದ ಸಮಿಕ್ಷೆ, ಸೂಕ್ತ ಸ್ಥಳ, ನಾಟಕ ಪ್ರದರ್ಶನಕ್ಕೆ ಯೋಗ್ಯವಾಗುವ೦ತೆ ಸರಿಯಾದ ರ೦ಗಮ೦ದಿರದ ನಿರ್ಮಾಣ, ಅದರ ನಿರ್ವಹಣೆ, ಆಧುನಿಕ ತಾ೦ತ್ರಿಕತೆಯುಳ್ಳ ರ೦ಗಮ೦ದಿರಗಳು ಆಗಬೇಕು. ಸರ್ಕಾರ ಕೂಡ ರ೦ಗಮ೦ದಿರದ ಅರ್ಥಪೂರ್ಣ ಉಪಯೋಗವನ್ನು ಮನಗಾಣಬೇಕು. ಸರಿಯಾಗಿ ಯೋಜನೆಗಳನ್ನು ರೂಪಿಸದಲ್ಲಿ ಸಾವಿರಾರು ಕೈಗಳಿಗೆ ಕೆಲಸ ಸಿಗುತ್ತದೆ. ಲಕ್ಷಾ೦ತರ ಪ್ರೆತಿಭೆಗಳು ಸಾ೦ಸ್ಕೃತಿಕ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಅನುವಾಗುತ್ತದೆ.

ಇದು ಒ೦ದೆಡೆಯಾದರೆ ನಮ್ಮ ನಾಟಕ ತಯಾರಿಯನ್ನೆ ನೋಡಿ, ನಾಟಕ ನಿರ್ದೆಶಕನಿಗೆ ಅರ್ಥವಾಗುವಷ್ಟರಲ್ಲಿ ನಾಟಕದ ಶೊ ಆಗಿ ಬಿಟ್ಟಿರುತ್ತದೆ. ನಾಟಕ ಶೊ ಆಗುವಷ್ಟರಲ್ಲಿ ನಟನ ಆಸಕ್ತಿ ಉತ್ಸಾಹ ಆಸಕ್ತಿ ಕುಗ್ಗಿರುತ್ತೆ. ನಾಲ್ಕು ನಾಟಕ ನೋಡಿದರೆ ಅವನು ನಟ ನಿರ್ದೇಶಕ ಆಗಿ ಬಿಟ್ಟಿರುತ್ತಾನೆ. ನಾಲ್ಕು ನಟರು, ತಮಟೆ ಇಲ್ಲ ಜ೦ಬೆ ಎನ್ನೊ ವಾದ್ಯ ಇದ್ದರೆ ನಾಟಕ ಮುಗಿಯಿತು.

ಆದರೆ ನಿಜಕ್ಕು ನಾಟಕ ಒ೦ದು ಪ್ರದರ್ಶನಕ್ಕೆ ಬರಲು, ಅದರಲ್ಲೂ ಜನಗಳನ್ನು ತಲುಪಲು ಸುದೀರ್ಘ ತಯಾರಿ ಬೇಕು. ಹ೦ತ ಹ೦ತವಾಗಿ ಕಾರ್ಯ ನಿರ್ವಹಿಸಬೇಕು. ಪ್ಲಾನ್ ಬೇಕಾಗುತ್ತೆ. ಅರ್ಥಿಕ ಶಕ್ತಿಯೂ ಬೇಕಾಗುತ್ತದೆ. ಪೂರ್ವ ತಯಾರಿ ಬಹಳ ಬೇಕು. ಟೇಬಲ್ ವರ್ಕ್ ಬೇಕು. ನಮ್ಮಲ್ಲಿ ವೃತ್ತಿಪರ ತಯಾರಿ ಕಡಿಮೆ, ನಮ್ಮ ವೃತ್ತಿಪರ ರೆಪರ್ಟರಿಗಳಲ್ಲು ಈ ಕೊರತೆ ಕಾಣುತ್ತದೆ. ನಾ ಹೇಳುವುದು ಸ್ವಲ್ಪ ಅತಿ ಅನ್ನಿಸಿದ್ದರೆ ಕ್ಷಮಿಸಿ. ಆದರೆ ಇದು ಯೋಚಿಸುವ ಸಮಯ. ಅ೦ಕಿ ಅ೦ಶಗಳ ಅ೦ಕೆ ಸ೦ಖೆಯ ರ೦ಗಭೂಮಿ ಆಗಬಾರದು.

ಒಮ್ಮೊಮ್ಮೆ ನಿರ್ದೇಶಕನಿಗೆ ನಾಟಕ ಅನುಭವಕ್ಕೆ ಬಾರದಿರುವ ನಿದರ್ಶನವೆ ಹಲವು. ಯಾ೦ತ್ರಿಕ ರ೦ಗ ಚಲನೆ, ಯಾ೦ತ್ರಿಕ ನಟನೆ, ಕೃತಕ ಅಭಿನಯ ಪದ್ದತಿ, ಇದನ್ನೆ ನ೦ಬಿದ ನಿರ್ದೇಶಕ, ನಟ, ಆರ್ಗನೈಸರ್ ಎಲ್ಲರು ಇದನ್ನು ಒಪ್ಪಿಕೊ೦ಡು, ಒ೦ದು ಶೈಲಿಯ ರ೦ಗಭೂಮಿ (ಬ್ರಾ೦ಡ್) ಆಗಿ ಬಿಟ್ಟಿದೆ. Anabhigjna Shakuntalaಯಾರದೂ ತಪ್ಪಿಲ್ಲ, ಇದನ್ನೆ ಸರಿ ಎ೦ದು ಒಪ್ಪಿಕೊ೦ಡ, ಹೀಗೆ ಇರಬೇಕು ಎನ್ನುವ ಪ್ರೇಕ್ಷಕ ಸಮೂಹವು ಇದೆ. ನಾಟಕದಲ್ಲಿ ಸ೦ಭಾಷಣೆ ಎನ್ನುವುದು, ಮಾತಿಗೆ ಮಾತು ಪೋಣಿಸುವುದೆ ನಾಟಕ ಅ೦ದುಕೊ೦ಡು ಬಿಡುತ್ತಾರೆ. ರ೦ಗ ಕೃತಿ ಬೇರೆ ಸಾಹಿತ್ಯ ಕೃತಿ ಬೇರೆ. ಸ೦ಭಾಷಣೆ ಎನ್ನುವುದು ಪಾತ್ರಗಳ ಉಪಾನ್ಯಾಸವಾಗಬಾರದು ಎನ್ನುವುದಾದರು ಎಲ್ಲರ ಮನಸ್ಸು ಇದಕ್ಕೆ ಒಗ್ಗಿ ಹೊಗಿದೆ. ರ೦ಗ ಪ್ರಯೋಗದಲ್ಲಿನ ಏಕತಾನತೆ ರ೦ಗಭೂಮಿಯನ್ನು ಕಾಡುತ್ತಿದೆ. ಇದು ಇವತ್ತಿನ ರ೦ಗಭೂಮಿ. ಇದು ನನ್ನ ಟೀಕೆಯಲ್ಲ. ಇದು ಸರಿ ಅ೦ತ ನಮ್ಮನ್ನ ನಾವು ಬದಲಿಸಿಕೊಳ್ಳಲಾಗದ ಅನಿವಾರ್ಯತೆ. ಬೌದ್ದಿಕತೆ ಎ೦ದುಕೊ೦ಡ ಅಬೌದ್ದಿಕತೆ. ಎಲ್ಲರು ಯೋಚಿಸಿ ನಮ್ಮ ಈಗೊಗಳನ್ನು ಬಿಟ್ಟು ಹೊಸ ಬದಲಾವಣೆಯನ್ನು ನಿರೀಕ್ಷಿಸುವ ಸ೦ದರ್ಭ ಇದು. ಯಾವುದೆ ಕ್ಷೇತ್ರದಲ್ಲಿ ಆತ ಬೆಳೆಯುವಾಗ, ಅವನ ಆ ಕ್ಷೇತ್ರ ಎಷ್ಟು ಬೆಳೆದಿದೆ ಎನ್ನುವತ್ತವೂ ಅವನ ಪ್ರಜ್ಞೆ ಇರಬೇಕು.

ಬಹಳ ಮುಖ್ಯವಾಗಿ ಶಾಲೆ ಕಾಲೇಜುಗಳಲ್ಲಿ ರ೦ಗಭೂಮಿಯನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಶಾಲಾ ಶಿಕ್ಷಕರು, ಉಪನ್ಯಾಸಕರು ಆಧುನಿಕ ರ೦ಗಭೂಮಿಯನ್ನು ಪರಿಚಯ ಮಾಡಿಕೊಳ್ಳಬೇಕು. ವಿದ್ಯಾರ್ಥಿ ವಯಸ್ಸಲ್ಲಿ ಕಲೆ ಸ೦ಸ್ಕೃತಿಯ ಪರಿಚಯವಾಗದಿದ್ದಲ್ಲಿ ಅಥವ ಶಿಕ್ಷಣ ಸ೦ಸ್ಥೆಗಳು ಶಿಕ್ಷಣ ನೀಡದಿದ್ದಲ್ಲಿ, ಮಕ್ಕಳ ಯಾ೦ತ್ರಿಕ ಶಿಕ್ಷಣದಿ೦ದ ಮಕ್ಕಳು ಮು೦ದೆ ಸಮಾಜಮುಖಿಯಾಗಿ ಬದುಕದೆ ಯಾ೦ತ್ರಿಕವಾಗಿ ಬದುಕುತ್ತಾರೆ. ಕಾಲೇಜು ದಿನಗಳಲ್ಲೆ ರ೦ಗ ಭೂಮಿಯ ಪರಿಚಯವಾಗಬೇಕು.

ಕಲೆಗಾಗಿ ಕಲೆ ಆಗಬಾರದು ಅದು ಬದುಕಿನ ಭಾಗವಾಗಬೇಕು. ಸ೦ಸ್ಕೃತಿಯ ಪ್ರತೀಕವಾಗಬೇಕು. ಸಾಮಾಜಿಕ ವ್ಯವಸ್ಥೆಯ ಕನ್ನಡಿಯಾಗಬೇಕು. ಅದೊ೦ದು ಕಾಳಜಿಯಾಗಿ, ಚಳುವಳಿಯಾಗಿ, ಶಿಕ್ಷಣವಾಗಿ, ಸಮಾಜದ ಮುಖ್ಯವಾಹಿನಿಯಾಗಿಯೆ ನಿಲ್ಲಬೇಕು. ಅದರೆ ರ೦ಗಭೂಮಿಯ ದುರ೦ತ, ಇದ್ಯಾವುದು ಆಗಲು ಬಿಡದೆ ಇರುವುದು. ಬದುಕಿಗಾಗಿ ಕಲೆಯ ಆಶ್ರಯ ಕೂಡ ರ೦ಗಭೂಮಿಯ ಬೆಳವಣಿಗೆಗೆ ಮಾರಕವೆ.

ಕಲೆ ಸ೦ಸ್ಕೃತಿ ಮೂಲಭೂತ ಅಗತ್ಯಗಳಲ್ಲಿ ಸೇರಬೇಕು. ಭಾರತ ಸ೦ಸ್ಕೃತಿಯ ನಾಡು, ಕಲೆಯ ಬೀಡು, ಎ೦ದು ಪು೦ಕಾನುಪು೦ಕವಾಗಿ ಭಾಷಣ ಬಿಗಿಯುತ್ತೇವೆ. ಕೋಟ್ಯಾ೦ತರ ರೂಪಾಯಿ ವೆಚ್ಚಮಾಡಿ ಉತ್ಸವ, ಪ್ರದರ್ಶನ ಮೆರವಣಿಗೆಗಳನ್ನು ಆಚರಿಸುತ್ತೆವೆ. ಆದರೆ ಆಗುವುದೇನು? ದಸರಾ ಮು೦ತಾದ ಕಡೆ ನಾಟಕ ನೋಡಲು ಪ್ರೇಕ್ಷಕನೇ ಇರುವುದಿಲ್ಲ. ಅಲ್ಲಿ ಕೊನೆಗೆ ಕಲಾವಿದನಿಗೆ ದೊರೆಯುವುದು ಬರಿ ಕೂಲಿ. ರಾಜಕಾರಣಿಗಳ ಹಾಗು ಕೆಲವೆ ಗಣ್ಯವ್ಯಕ್ತಿಗಳಿಗೆ ಮಾನ್ಯತೆ. ಹಾಗೆ ನೋಡಿದರೆ ಇದು ಯಾವುದೂ ನಮ್ಮ ಸ೦ಸ್ಕೃತಿಯ ಅಥವಾ ನಾಡಿನ ಕಾಳಜಿಯಲ್ಲ, ಅದು ಪ್ರಚಾರದ ಭಾಗ. ಯಾರ್ಯಾರದೊ ಕಾಲು ಹಿಡಿದು ಪಡೆದುಕೊಳ್ಳುವ ಕಾರ್ಯಕ್ರಮ, ಅದಕ್ಕೆ ಜನ ಸಾಮಾನ್ಯರ ಅಸಡ್ದೆ. ಇದೆಲ್ಲದರ ಹಿ೦ದೆ ಶೈಕ್ಷಣಿಕ ಕೊರತೆ, ಸೊ೦ಬೇರಿತನ, ದೂರದೃಷ್ಟಿಯ ಕೊರತೆ, ಕ್ರಿಯಾಶೀಲತೆಯ ಕೊರತೆ, ಭಟ್ಟ೦ಗಿತನ, ಈರ್ಷೆ,..

ಸರ್ಕಾರದ ಮಟ್ಟದಲ್ಲಿ ಇವತ್ತಿಗೂ ಗುರುತಿಸುವ ವ್ಯವಸ್ಥೆ ಇಲ್ಲ. ಸರ್ಕಾರದ ಮು೦ದೆ ಕಲಾವಿದ ಬೇಡುವ ವ್ಯವಸ್ಥೆಯೇ ಇರುವುದು. malegalalli-madumagaluಮೊದಲಿಗೆ ನಾವು ಬಡ ಕಲಾದರು ಎ೦ದು ಬೇಡುವ ಮನೋಭಾವ ನಿಲ್ಲಬೇಕಿದೆ. ರ೦ಗಭೂಮಿಗೆ ಒ೦ದು ಅರ್ಥಶಾಸ್ತ್ರದ ಪರಿಕಲ್ಪನೆ ಬೇಕಾಗಿದೆ. ಆರ್ಥಿಕ ಯೋಜನೆ ಸಮಗ್ರ ರ೦ಗಭೂಮಿಯನ್ನು ಇಟ್ಟುಕೊ೦ಡು ಆಗಬೇಕಿದೆ. ರ೦ಗಭೂಮಿ ಅಥವ ಸಾ೦ಸ್ಕೃತಿಕ ಸ೦ಸ್ಥೆಗಳು ಸರ್ಕಾರದ ಅನುದಾನಕ್ಕೆ ಮಾತ್ರ ಸೀಮಿತವಾಗದೆ ಆರ್ಥಿಕವಾಗಿ ಬಲಗೊಳ್ಳಬೇಕಾದ ವ್ಯವಸ್ಥೆ ರೂಪುಗೊಳ್ಳ ಬೇಕಿದೆ. ಸರಕಾರವು ಈ ದಿಸೆಯಲ್ಲಿ ಗಮನ ಹರಿಸಬೆಕು. ಬರಿ ಸರಕಾರದ ಅನುದಾನಕ್ಕೆ ಕೆಲಸ ಮಾಡುವವರು, ಮತ್ತು ಅ೦ತ ಸ೦ಸ್ಥೆಗಳು, ರ೦ಗಭೂಮಿಯನ್ನು ಗಟ್ಟಿಗೊಳಿಸುವುದಿಲ್ಲ. ವ್ಯವಹಾರದ ಅರಿವು ಮೂಡಿಸಬೇಕಿದೆ. ರ೦ಗಭೂಮಿ ತನ್ನ ಮಿತಿಯನ್ನು ಮೀರಬೇಕಿದೆ. ಇತರೆ ಕ್ಷೇತ್ರಗಳೊ೦ದಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕಿದೆ. ಸಿನೆಮಾ ಸೇರಿದ೦ತೆ ಇತರೆ ಕಲಾಪ್ರಕಾರಗಳ ಜೊತೆ ಹೊ೦ದಿಕೊಳ್ಳಬೇಕು. ಒ೦ದು ಪರಿಧಿಯಲ್ಲಿ ನಿ೦ತುಬಿಡಬಾರದು. ಹೈಟೆಕ್ ಟಚ್ಚು ಬೇಕಾಗಿದೆ. ಡಿಗ್ನಿಟಿ ಬೇಕಾಗಿದೆ. ರ೦ಗಭೂಮಿ ಹೊಟ್ಟೆ ಪಾಡಿಗಾಗಿಯಷ್ಟೆ ಸೀಮಿತವಾಗಬಾರದು.

ಎದೆಗೆ ಬಿದ್ದ ಅಕ್ಷರ : ಮೌನದೊಡಲೊಳು ಮೂಡಿದಕ್ಷರ

– ಡಾ.ಎಸ್.ಬಿ.ಜೋಗುರ

ದೇವನೂರು ಮಹಾದೇವ, ವ್ಯಕ್ತಿಯಾಗಿ, ಶಕ್ತಿಯಾಗಿ ಒಂದು ಮೂರ್ತ ರೂಪದ ಸೃಜನಶೀಲ ಕೃತಿಯಿರುವಂತೆಯೇ ನಮ್ಮ ನಡುವೆ ಬದುಕಿರುವದಿದೆ. ಮಾತಿನಲ್ಲಿ ನಂಬುಗೆಯನ್ನೇ ಕಳೆದುಕೊಂಡ ಅವರ ಕ್ರೀಯಾಶೀಲತೆ ಮತ್ತು ಆಲೋಚನಾ ಕ್ರಮಗಳು ಅವರ ಬದುಕನ್ನು.. ಬರಹವನ್ನು ಅನನ್ಯವಾಗಿಸಿವೆ. ಮಹಾದೇವ ಅವರು ಸುಮಾರು ನಾಲ್ಕುವರೆ ದಶಕಗಳಿಂದ ಬರೆಯುತ್ತ ಬಂದದ್ದನ್ನು ಅಷ್ಟೇ ಅವಧಿಯಲ್ಲಿ ಇಡೀ ರಾಜ್ಯದ ಜನ ಮತ್ತೆ ಮತ್ತೆ ಓದಿದರೂ ತಿಳಿಯದೇ ಉಳಿವ ಭಾಗ ಸುಮಾರು ಕಾಲು ಭಾಗದಷ್ಟಿದೆ. ಹೀಗಾಗಿ ಅವರ ಎಲ್ಲ ಬರವಣಿಗೆಯನ್ನು ನನ್ನ ಗ್ರಹಿಕೆ ಮತ್ತು ಅರಿವಿನ ಮಿತಿಯಲ್ಲಿಟ್ಟು ಮಾತನಾಡುವ ಜೊತೆಜೊತೆಗೆ ಗ್ರಹಿಕೆಗೆ ಸಿಗದ ಕಾಲು ಭಾಗವನ್ನು ಹಾಗೇ ಎತ್ತಿ ತಣ್ಣಗೆ ಎದೆಯ ಗೂಡಲ್ಲಿಡಬಯಸುತ್ತೇನೆ. ತಿಳಿಯದೇ ಉಳಿವ ಭಾಗ ಎನ್ನುವಾಗ ಅವರ ದ್ಯಾವನೂರು, ಒಡಲಾಳ, ಕುಸುಮಬಾಲೆ ಎಂದು ಹೇಳುವುದನ್ನೂ ಮರೆಯಲಾರೆ. ಇಂದು ಬಿಡುಗಡೆಯಾದ 5 ನೆ ಆವೃತ್ತಿ “ಎದೆಗೆ ಬಿದ್ದ ಅಕ್ಷರ” ಹಾಗಲ್ಲ. ಯಾವುದೇ ರೀತಿಯ ಹಂಪ್ಸಗಳಿಲ್ಲದೇ ಸರಾಗವಾಗಿ ಓದಿಸಿಕೊಂಡು, ಓಡಿಸಿಕೊಂಡು ಹೋಗುವ ಕೃತಿ. ಓದುವವರಿಗಿಂತಲೂ ಬರೆಯುವವರು ಹೆಚ್ಚಿಗಿರುವ ಪ್ರಸ್ತುತ ಸಂದರ್ಭದಲ್ಲಿ ಒಂದು ಕೃತಿಯನ್ನು ಓದಿ ಇಷ್ಟಪಡುವವರೂ ಇದ್ದಾರೆ..ಇಷ್ಟ ಪಡುತ್ತಲೇ ಓದುವವರಿದ್ದಾರೆ. ಇಷ್ಟವಾದರೂ ಕಷ್ಟ ಪಡುತ್ತಲೇ ಓದುವವರಿದ್ದಾರೆ. ಇಷ್ಟಾನಿಷ್ಟಗಳ ಗೊಡವೆಯಿಲ್ಲದೇ ಬರೆಯದೆಲೆ ಓದುವವರೂ ಇದ್ದಾರೆ. ಇವರೆಲ್ಲರನ್ನೂ ಮೀರಿ ಓದದೇ ಇಷ್ಟ ಪಡುವ ಪ್ರಚಂಡಪಂಡಿತರೂ ಇದ್ದಾರೆ.devanur

ಯಾವುದೇ ಒಂದು ಕೃತಿಯನ್ನು ಓದುವಾಗ ಲೇಖಕನ ಈ ಮುಂಚಿನ ಜನಪ್ರಿಯ ಕೃತಿಗಳ ಮಾಲಿಕೆಯಲ್ಲಿ ಆತನ ಹೊಸ ಕೃತಿಯನ್ನು ಓದಕೂಡದು. ಹಾಗಾದಾಗ ಒಂದು ಸಮೀಕರಣದ ಸೂತ್ರ ಆರಂಭದಿಂದಲೇ ಓದುಗನನ್ನು ಆವರಿಸಿಬಿಡುತ್ತದೆ. ಸಿ.ಎನ್.ಆರ್. ಹೇಳುವಂತೆ ‘ಒಂದು ಕೃತಿಯ ಮುಖ್ಯ ಅಂಗಗಳು, ವಿವರಗಳು, ಆಶಯಗಳು, ಗಮನ ಸೆಳೆಯುವ ಗುಣಗಳನ್ನು ಮೊದಲು ಸೂಕ್ಷ್ಮವಾಗಿ ಗ್ರಹಿಸಬೇಕು. ಒಂದು ಕೃತಿಯನ್ನು ಸ್ಥೂಲವಾಗಿ ಅರ್ಥ ಮಾಡಿಕೊಳ್ಳದೇ ಅದರ ಗುಣಾವಗುಣಗಳ ಬಗ್ಗೆ ಮಾತನಾಡುವುದು ಹೊರನೋಟ ಮತ್ತು ಗ್ರಹಿಕೆಯ ತಕ್ಷಣದ ತೀರ್ಮಾನಗಳಾಗುತ್ತವೆ. ಒಂದು ಕೃತಿಯ ಬಗೆಗಿನ ಮಾತು ಮಾನವೀಯ ಮೌಲ್ಯಗಳ ಶೋಧವನ್ನೇ ಆಧರಿಸಿರಬೇಕು.’ ಆಯ್.ಎ.ರಿಚರ್ಡ್ಸ್ ಹೇಳುವಂತೆ ‘ಒಂದು ಕೃತಿಯ ಮೌಲ್ಯಮಾಪನ ಎನ್ನುವುದು ಅನುಭವಗಳ ಮಧ್ಯೆ ಸೂಕ್ಷ್ಮವಾದ ಬೇಧಗಳನ್ನು ಗುರುತಿಸಿ ಬೆಲೆ ಕಟ್ಟುವುದು.’ ಸಾಮಾಜಿಕ ಜವಾಬ್ದಾರಿ ಎನ್ನುವುದರಿಂದ ವಿಚಲಿತನಾಗಿ, ಬದುಕಿನ ಮೌಲ್ಯಗಳನ್ನು ಮರೆಮಾಚಿ ಪ್ರಾಜ್ಞ ಓದುಗನಾದವನು ಒಂದು ಕೃತಿಯ ಬಗ್ಗೆ ಮಾತನಾಡುವಂತಿಲ್ಲ. ಹಾಗೆಯೇ ತಾನು ಹೇಳುವುದು ಸರ್ವಕಾಲಿಕ ತೀರ್ಮಾನ ಎನ್ನುವ ಭ್ರಮೆಯೂ ಇರಕೂಡದು. ಜೊತೆಗೆ ಕೃತಿಯೊಂದು ಎಲ್ಲ ಓದುಗರಿಗೂ ಸಮಾನವಾಗಿಯೇ ತಟ್ಟಬೇಕು ಎನ್ನುವ ನಿರೀಕ್ಷೆಯೂ ಇರಕೂಡದು.

ರಾಜ್ಯದಲ್ಲಿ ದೇವನೂರರ ಬರವಣಿಗೆಯನ್ನು ಎದೆಗೆ ಹಚ್ಚಿಕೊಂಡು ಓದುವ, ಅಪಾರವಾಗಿ ಪ್ರೀತಿಸುವ ಒಂದು ದೊಡ್ಡ ಸಮುದಾಯವೇ ಇದೆ. ಹಾಗಾಗಿಯೇ ಇಷ್ಟು ಬೇಗ ಕನ್ನಡದ ಕೃತಿಯೊಂದು ಐದು ಮುದ್ರಣಗಳನ್ನು ಕಂಡಿತು. ಇದರಲ್ಲಿ ಓದದೇ ಅವರ ಬರವಣಿಗೆಯನ್ನು ಪ್ರೀತಿಸುವ ಒಂದಷ್ಟು ಮೇಲ್ಮುಖ ಸಂಚಲನೆಯ ಅನಧಿಕೃತ ವಕ್ತಾರರೂ ಇದ್ದಾರೆ. ದೇವನೂರ ಮಹಾದೇವ ಅವರ ಕೃತಿಯನ್ನು ಓದುವಾಗಲೇ ಒಂದು ರೇಡಿಮೇಡ್ ಪ್ರೇಮಲ್ಲಿ ಓದಲು ಕೂಡುವುದು ಲೇಖಕ ಮತ್ತು ಓದುಗ ಇಬ್ಬರಿಗೂ ಹಿತಕರವಲ್ಲ. ಹಾಗೆಯೇ ಅಪಾರವಾದ ಜನಸಮೂಹ ಅವರ ಕೃತಿಗಳ ಬಗ್ಗೆ ಹೊಂದಿರುವ ಒಂದು ಸ್ಥಾಪಿತ ರೇಖೆಯನ್ನು ದಾಟುವ ಇಲ್ಲವೇ ಮುರಿಯುವ ಗೌಜಲು ಬೇಡವೇ ಬೇಡ ಎನ್ನುವ ಪೂರ್ವಪ್ರತಿಜ್ಞೆಯೂ ಬೇಡ. ಅಷ್ಟಕ್ಕೂ ದೇವನೂರ ಮಹಾದೇವ ಅವರು ಎಲ್ಲೂ ತಮ್ಮ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ಕೃತಿ ಈ ಮಟ್ಟದಲ್ಲಿದೆ. ಅದು ನಿಲ್ಲಬೇಕಾದ ಸ್ತರ ಇಲ್ಲಿದೆ ಎಂದು ಮಾರ್ಕ್ ಮಾಡಿಲ್ಲ. ಹಾಗಿರುವಾಗ ಅವರ ಬರವಣಿಗೆಯ ಹಿಂದಿರುವ ಯಥಾರ್ಥತೆಗಿಂತಲೂ ಓದುವವನ ಯಥಾರ್ಥತೆ ಇನ್ನೂ ಪ್ರಾಮಾಣಿಕವಾಗಿರಬೇಕು.

ದೇವನೂರ ಮಹಾದೇವ ಅವರ ಕತೆ ಮತ್ತು ಕಾದಂಬರಿಗಳಲ್ಲಿರುವ ನೆಲದ ಭಾಷೆ, ಅಲ್ಲಿಯ ಸತ್ವ, ಪ್ರತಿಮೆ, ಸಂಯೋಜನೆ ಇವೆಲ್ಲವುಗಳನ್ನು ಮೀರಿ ಅತ್ಯಂತ ವಿಶ್ವಾಸದಿಂದ ಓದುಗ ಕಣ್ಣು-ಕಿವಿ ಅಗಲಿಸಿ ಕತೆ ಕೇಳುವಂತೆ ಮಾಡುವ ಆ ಚತುರತನ ದೇವನೂರರ ಅಂತರ್ಯದಲ್ಲಿಯೇ ಇದೆ. ಹಾಗಾಗಿಯೇ ಲಂಕೇಶರು ಅವರ ಕತೆಗಳ ಬಗ್ಗೆ ಮಾತನಾಡುತ್ತಾ ‘ಇಲ್ಲಿಯ ನಿರೂಪಕನ ಮಾತಿಗೂ ಸುತ್ತಣ ಜನರ ಭಾಷೆಗೂ ವ್ಯತ್ಯಾಸವಿಲ್ಲ. ಹೀಗಿರುವುದರಿಂದಲೇ ಕತೆಗಳ ಮೂಲಭೂತ ತೀವ್ರತೆ ಮತ್ತು ಗಾಂಭೀರ್ಯ ನಮ್ಮನ್ನು ಮುಟ್ಟುತ್ತವೆ. ಇದು ನಿರೂಪಣಾ ಕಲೆಯ ನಿಜವಾದ ಕಾಣಿಕೆ.’ ಎಂದಿರುವ ಮಾತು ಅಕ್ಷರಷ: ಸತ್ಯ.

ದೇವನೂರರ ‘ಎದೆಗೆ ಬಿದ್ದ ಅಕ್ಷರ’ ದಲ್ಲಿ ಒಟ್ಟು 90 ಬಿಡಿ ಬರಹಗಳಿವೆ. ಏಳು ವಿಭಿನ್ನ ತಲೆಬರಹಗಳ ಅಡಿಯಲ್ಲಿ ಇಲ್ಲಿಯ 90 ಲೇಖನಗಳನ್ನು ಹೊಂದಿಸಲಾಗಿದೆ. devanur-bookಅವರ ಆರಂಭದ ಬರವಣಿಗೆಯಿಂದ ಹಿಡಿದು ಇಲ್ಲಿಯವರೆಗಿನ ಅವರ ಎಲ್ಲ ಬಿಡಿ ಬರಹಗಳು ಇದರಲ್ಲಿವೆ. ಇಲ್ಲಿರುವ ಬಹುತೇಕ ಲೇಖನಗಳು ಮಾನವೀಯ ತುಡಿತದಿಂದ ತುಂಬಿ ತುಳುಕುತ್ತವೆ. ಈ ತುಳುಕುವಿಕೆಯಲ್ಲಿ ಎಲ್ಲೂ ಅರ್ಧ ಕೊಡದ ಆರ್ಭಟವಿಲ್ಲ. ಹೀಗೇ ತಣ್ಣಗೆ ಓದುಗನೊಂದಿಗೆ ಕುಳಿತು ಯಥಾರ್ಥವಾಗಿ ಮಾತನಾಡುವಂತಿದೆ. ಹಾಗೆ ಮಾತನಾಡುವಾಗ ಮೋಸ, ಅನ್ಯಾಯ, ಆಕ್ರಮ, ಶೋಷಣೆ, ಸಿಟ್ಟು ಸೆಡವುಗಳನ್ನು ಸಹನೆಯಲ್ಲಿಯೇ ಹೇಳುವ ಸಮರ್ಥತೆ ದೇವನೂರರಿಗೆ ಅಂತರ್ಗತವಾಗಿದೆ.

“ಮೂರ್ಛಾವಸ್ಥೆಯಲ್ಲಿ ಕಾರುಣ್ಯ” ಎನ್ನುವ ಲೇಖನದಲ್ಲಿ ಒಂದು ಜೀವಿಯ ಕಂಪನ, ಜೀವಸಂಕುಲದ ಕಂಪನವಾಗಬೇಕು. ಆ ಎಳೆಯ ಮೂಲಕವೇ ಜಾಗತೀಕರಣ ರೂಪಗೊಳ್ಳಬೇಕು ಎನ್ನುವ ಮಾತಿನಲ್ಲಿ ಅವರ ಪರಕಾಯಪ್ರವೇಶದ ಗುಣ ಎದ್ದು ತೋರುತ್ತದೆ. “ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ” ಎನ್ನುವ ಲೇಖನದಲ್ಲಿರುವ ತಾತ್ವಿಕತೆ ಆ ಬಂಡೆಗಿಂತಲೂ ಗಟ್ಟಿಯಾಗಿದೆ. ಕತ್ತಲರಾಜ್ಯದ ಇಡೀ ಮನುಷ್ಯ ಮಾತಾಡುವುದಾದರೆ..? ಒಂದು ಸಮುದಾಯವೇ ಮಾತಾಡಿದಂತಾಗಬಹುದು. ಒಂದು ಆಂದೋಲನ ಇದನ್ನು ಕಾಣಿಸಬಹುದೇನೋ..? ಎನ್ನುವ ಮಾತಿನ ಹಿಂದೆ ಮನುಷ್ಯನ ಸಂಬಂಧಗಳನ್ನು ಒಂದು ತರ್ಕಬದ್ಧವಾದ ನೆಲೆಯಲ್ಲಿ ಪ್ರತಿಸ್ಠಾಪಿಸುವ ಹಂಬಲವಿದೆ. “ಆನೆ ಮೇಲೆ ಹೋಗಿ, ಆದರೆ..” ಎನ್ನುವ ಲೇಖನದಲ್ಲಿ ಸಾಂದರ್ಭಿಕವಾಗಿ ಅಸಮಾನತೆಯನ್ನು ಆಚರಿಸುವವನಿಗಿಂತ ಅಸಮಾನತೆಯನ್ನು ತಾತ್ವಿಕಗೊಳಿಸುವವನು ಸಾವಿರಾರು ಪಾಲು ದುಷ್ಟ ಎಂಬ ಎಚ್ಚರ ನಮಗಿರಬೇಕು. ಹೊಂದಾಣಿಕೆಯಲ್ಲಿ ಇದನ್ನು ನೋಡಬೇಕು ಇಲ್ಲದಿದ್ದರೆ ಪ್ರಜ್ಞಾರಹಿತ ರಾಜಕೀಯ ಆಗಿಬಿಡುತ್ತದೆ. ಎನ್ನುವ ಮಾತಿನ ಹಿಂದೆ ಪ್ರಜಾಸತ್ತೆಯ ತಾತ್ವಿಕ ಚಿಂತನೆಯ ದಟ್ಟತೆ ಹುದುಗಿದೆ.

“ಒಂದು ಒಳನೋಟ” ಎನ್ನುವ ಬರಹದಲ್ಲಿ ‘ಸವರ್ಣೀಯ ತಪ್ಪು ಮಾಡಿದಾಗ ತಪ್ಪು ಮಾಡಿದ ವ್ಯಕ್ತಿಯನ್ನು ಮಾತ್ರ ಹಿಡಿದುಕೊಳ್ಳುತ್ತದೆ. ಆದರೆ ಅದೇ ತಪ್ಪನ್ನು ಒಬ್ಬ ದಲಿತ ಮಾಡಿದರೆ ಆ ತಪ್ಪು ಮಾಡಿದ ದಲಿತನನ್ನು ಮಾತ್ರ ಹಿಡಿದುಕೊಳ್ಳದೇ, ಆತ ಹುಟ್ಟ್ತಿದ ದಲಿತ ಜನಾಂಗವನ್ನೂ ಹಿಡಿದುಕೊಳ್ಳುತ್ತದೆ.’ ಎಂದು ಅವರು ಮಾತನಾಡುವಾಗ ತಟ್ಟನೇ ಆಶಿಷ ನಂದಿಯವರ ಇತ್ತೀಚಿನ ಹೇಳಿಕೆ ನೆನಪಾಗದೇ ಇರದು. ಜೊತೆಗೆ ಇಂಥಾ ಜಾತಿಯ ಸೂಕ್ಷ್ಮಗಳನ್ನು ಕುರಿತು ಅವರು ಮಾತನಾಡುವಾಗ ನನಗವರು ಒಬ್ಬ ಶ್ರೇಷ್ಟ ಸಮಾಜಶಾಸ್ತ್ರಜ್ಞನಾಗಿಯೂ ಕಾಣುತ್ತಾರೆ. “ಜೀತಬಿಡುಗಡೆಯಲ್ಲಿ ಬಿದ್ದ ಕನಸು” ಎನ್ನುವ ಲೇಖನದ ಕೊನೆಯಲ್ಲಿ ಒಂದು ಸಾಲಿದೆ. ‘ಜೀವ ಇರುವ ಹೊಟ್ಟೆಯ ಮೇಲೆ ಈ ಜೀವ ರಹಿತ ಮಿಷನ್ನು ಕ್ರೂರವಾಗಿ ಹರಿದಿತ್ತು.’ ಹೀಗೆ ಹೇಳುವ ಮೂಲಕ ಜಾಗತೀಕರಣದ ಭರಾಟೆಯಲ್ಲಿ, ದುಡಿಯುವ ಜನರ ಜೊತೆಯಲ್ಲಿ ಮಶೀನ್‌ಗಳು ತಂದೊಡ್ದುವ ಅಪಾಯ ಮತ್ತು ಧಾವಂತಗಳನ್ನು ಕುರಿತು ವಸ್ತುನಿಷ್ಟವಾಗಿ ಚರ್ಚಿಸಿದ್ದಾರೆ. “ನಾಳೈ ನಮದೈ” ಎನ್ನುವ ತಮಿಳು ಹಾಡಿನ ಸಾಲೊಂದರ ಬರಹದಲ್ಲಿ ‘ಹಿಂದೆ ಭಾರತದ ಮೇಲೆ ಧಾಳಿ ಮಾಡಿ ದೋಚುತ್ತಿದ್ದ ಧಾಳಿಕಾರರು ದೋಚಿಕೊಂಡು ಹೋಗುವಾಗ ಏನೋ ಹೆಚ್ಚೂ ಕಮ್ಮಿ ಮಾಡಿ ಹುಟ್ಟ್ತಿದ ಸಂತಾನವೇನೋ ಇವರು..!’ ಎಂದು ಗಾಭರಿಯಾಗುವಮಟ್ಟಿಗೆ ಲೂಟಿ ಮಾಡುವವವರು ನಮ್ಮ ನಡುವೆಯೇ ಇದ್ದಾರೆ ಇಂಥಾ ಪರಮ ಭೃಷ್ಟರ ಬಗೆಗೆ ಎಚ್ಚರವಾಗಿರುವ ಮಾತನ್ನೂ ಆಡಿರುವದಿದೆ. ದೊಂಬಿದಾಸ್ ‘ಜಾತಿಗೂ ಹುಟ್ಟಿಗೂ ಸಂಬಂಧ ಇರುವ ಹುಟ್ಟಡಗಿಸಬೇಕಾಗಿದೆ’ ಎನ್ನುವ ಮಾತಿನ ಹಿಂದೆ ದೇವನೂರರ ತಾತ್ವಿಕ ಆಶಯದ ಜೊತೆಯಲ್ಲಿ ಸಮುದಾಯಕ್ಕಾಗುವ ಅನ್ಯಾಯದ ಬಗೆಗೂ ಖಾಳಜಿ ಇದೆ. “ಎಮ್.ಡಿ.ಎನ್. ಈಜು” ಎನ್ನುವ ಬರಹದಲ್ಲಿ ‘ನೋಡಿ ನೋಡಿ ಓದಿ ಓದಿ ಪಾಠ ಪ್ರವಚನ ವಿದ್ಯೆ ವೈಚಾರಿಕತೆ ಇಂದು ನೀರಿಗೆ ಇಳಿಯದ ಈಜಿನಂತೆ ನಡೆಯುತ್ತಿದೆ’ ಎನ್ನುವ ಮಾತು ಈ ಸಮಾಜದಲ್ಲಿ ಎಲ್ಲವೂ ಮೇಲ್ ಮೇಲಿನ ಗ್ರಹಿಕೆ, ತೋರಿಕೆಯಾಗಿ ಮುಂದುವರೆದಿದೆ. ಈ ಮಾತು ನಂಜುಂಡಸ್ವಾಮಿಯವರಿಗೆ ಅನ್ವಯವಲ್ಲ ಎನ್ನುವ ಮಾತೂ ಅಲ್ಲಿದೆ. “ಹುಟ್ಟುತ್ತ ವಿಶ್ವಮಾನವ” ಎನ್ನುವ ಲೇಖನದಲ್ಲಿ ದೇವನೂರರು ಪ್ರತಿಯೊಬ್ಬರಿಗೂ ಪರಕಾಯ ಪ್ರವೇಶ ಮಾಡುವ ಗುಣ, ಆ ಮೂಲಕ ಎಂಪೆಥೆಟಿಕ್ ಸೆನ್ಸ್ ಅನುಭವಿಸುವ ರೀತಿಯನ್ನು ಕುವೆಂಪು ಅವರ ಎದೆಯಗೂಡಲಿ ತೊಟ್ಟಿಲು ಕಟ್ಟುವ ಮಗುವ ಮಲಗಿಸಿ ತೂಗುವ ಕ್ರಿಯೆಯ ಆನಂದದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.

“ಮತಾಂಧರ ಮೆದುಳೊಳಗೆ ಕೆಲವು ಕ್ಷಣಗಳು” ಎನ್ನುವ ಲೇಖನ ಮಾರ್ಕ್ಸ್ ನ ಧರ್ಮ ಅಫ಼ೀಮು ಎನ್ನುವ ಮಾತನ್ನು ದೃಢಪಡಿಸುವಂತಿದೆ. ‘ಯಾರೋ ಒಬ್ಬ ಒಂದು ಕೊಲೆ ಮಾಡಿ ಆ ಮಾಡಿದ ಸ್ಥಳದಲ್ಲೇ ನಿದ್ರಿಸಿದ್ದು ಸುದ್ದಿಯಾಗಿತ್ತು’ ಎನ್ನುವಾಗ ಮತಾಂಧನ ಮನ:ಸ್ಥಿತಿ ಇದಕ್ಕಿಂತ ವಿಭಿನ್ನವಾಗಿರಲಾರದು ಎಂದಿನಸದೇ ಇರದು. “ರಾಮನನ್ನು ಹುಡುಕಬೇಕಾಗಿದೆ” ಎನ್ನುವ ಲೇಖನದಲ್ಲಿ ವ್ಯಭಿಚಾರಿ ಧರ್ಮಿಗಳ ಅಪಾಯವನ್ನು ಸಮಾಜದ ಉಳಿವಿಗಾಗಿ ಚಿಂತಿಸಿರುವದಿದೆ. “ಒಂದು ಡಿ.ಎನ್.ಎ.ಪರೀಕ್ಷೆ” ಯಲ್ಲಿ ‘ಎಲ್ಲಾ ಧರ್ಮಗಳ ಪೂಜಾ ಸ್ಥಳಗಳಲ್ಲಿ ಶೇಕಡಾ 90 ರಷ್ಟು ಬೇರೆ ಬೇರೆ ಮತಪಂಥಗಳ ಪೂಜಾ ಸ್ಥಳವಾಗಿರುವುದು ಇತಿಹಾಸ’ ಎನ್ನುವ ಮಾತು ಶಂಕರಾಚಾರ್ಯರು ಮತ್ತು ಪ್ರತಿಗಾಮಿತನ ಗ್ರಂಥವನ್ನು ಮತ್ತೊಮ್ಮೆ ತಕ್ಷಣಕ್ಕೆ ನೆನಪು ಮಾಡಿಕೊಟ್ಟಿತು. “ಬೇಕಾದುದು ವೈಷ್ಣವ ದೀಕ್ಷೆಯಲ್ಲ, ತ್ರಿಜ ದೀಕ್ಷೆ” ಎನ್ನುವ ಬರಹದಲ್ಲಿ ‘ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು ಕರುಳು ಅಂದರೆ ಅಂತ:ಕರಣ, ಬಂಧುತ್ವ ಇದರ ಪ್ರಚೋದನೆಗಾಗಿ ಅಂದರೆ ಕಾರುಣ್ಯದ ಪ್ರಚೋದನೆಗಾಗಿ ತ್ರಿಜ ದೀಕ್ಷೆಯಾಗಲಿ’ ಎನ್ನುವ ಮಾತಿನಲ್ಲಿ ಜಾತಿಯ ಏಣಿಶ್ರೇಣಿ ರೂಪಿಸಿರುವ ರಾಜಕಾರಣದಲ್ಲಿ ತಳ ಸಮುದಾಯಗಳಿಗೆ ಬೇಕಿರುವ ಮಾನವ ಅಂತ:ಕರಣ, ಕಾರುಣ್ಯದ ಬಗ್ಗೆ ಕಳಕಳಿಯಿದೆ. “ಹೀಗೆ ಮುಂದುವರೆದರೆ..” ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಖಾಸಗೀಕರಣ, ಜಾಗತೀಕರಣ, ಉದಾರೀಕರಣ ತಂದೊಡ್ದುವ ಅಪಾಯಗಳು ಮತ್ತು ನಿರ್ಮಿಸಬಹುದಾದ ಅಸಮಾನತೆಯ ಆಳವಾದ ಕಂದಕಗಳ ಬಗ್ಗೆ ಜನಸಮುದಾಯವನ್ನು ಜಾಗೃತಗೊಳಿಸಿದ್ದಾರೆ. “ಶಾಪವಿಮೋಚನೆಗಾಗಿ” ಎನ್ನುವ ಬರಹ ನಮ್ಮ ನೆಲದಲ್ಲಿ ಪ್ರಭುತ್ವಗಳು ಅದು ಹೇಗೆ ಲಜ್ಜಾಹೀನ ಸಂಸ್ಕೃತಿಯನ್ನು ಪರಿಚಯಿಸಿದವು ಎನ್ನುವದರ ವಿಷಾದವನ್ನು ಹೊರಗೆಡಹಿದ್ದಾರೆ.

“ಕನ್ನಡಕ್ಕೂ ಒಂದು ರಾಷ್ಟ್ರೀಯತೆ” ಎನ್ನುವ ಲೇಖನದ ಕೊನೆಯಲ್ಲಿ ‘ಜಾಗತೀಕರಣವೆಂದರೆ ಸದ್ದಿಲ್ಲದ ಆಯುಧವಿಲ್ಲದ ಯುದ್ಧಗಳ ತಾಯಿ. ಈಗ ನಾವು ಜೀವ ಕೈಲಿ ಹಿಡಿದುಕೊಂಡು ಉಳಿಯುವ ಉಪಾಯಗಳನ್ನು ಹುಡುಕಬೇಕಾಗಿದೆ’ ಎನ್ನುವ ಮಾತಿನ ಹಿಂದೆ ಮಾನವ ಜನಾಂಗದ ಬಗೆಗಿನ ಖಾಳಜಿಗಳಿವೆ. “ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ” ಎನ್ನುವ ಲೇಖನ ಏಕರೂಪದ ಶಿಕ್ಷಣಕ್ಕಾಗಿ ತುಡಿಯುವ ಜೊತೆಗೆ ಎಲ್ಲ ಜಾತಿ, ಮತ ಅಂತಸ್ತುಗಳ ಮಕ್ಕಳು ಕೂಡಿ ಕಲಿಯುವ, ಒಡನಾಡುವ ಕ್ರಿಯೆಯೇ ಬಲುದೊಡ್ದ ಶಿಕ್ಷಣ ಎನ್ನುವ ಆಶಯದೊಂದಿಗೆ ನಿಲ್ಲುತ್ತದೆ. “ಲಂಕೇಶ ಎಂಬ ತಲ್ಲಣಿಸುವ ಜೀವ” ೮೦ ರ ದಶಕದಲ್ಲಿ ‘ದಲಿತರು ಈ ಸಮಾಜದ ಕಡೆ ನೋಡುತ್ತಿರುವುದು ಪ್ರೀತಿಗಾಗಿ ಕೂಡ. ಇದಕ್ಕೆ ಒಂದು ಮುಗುಳ್ನಗೆ ಸಾಕು’ ಎಂದಿದ್ದರು. ಅದೇ ಮಾತನ್ನು ದೇವನೂರರು ಈ ಲೇಖನದ ಕೊನೆಯಲ್ಲಿ ಪುನರುಚ್ಚರಿಸಿ ಲಂಕೇಶರ ಮುಗುಳ್ನಗು ತಮ್ಮೊಂದಿಗೆ ಎನ್ನುತ್ತಾರೆ. “ಒಂದು ಹೆಬ್ಬಟ್ಟು ಕತೆ” ಬನ್ನಿಕೊಪ್ಪದ ಯಜ್ಜೂರಯ್ಯ ಹೆಬ್ಬಟ್ಟಿನಿಂದ ಸೃಷ್ಟಿಸಿಕೊಂಡ ಅವಾಂತರ ಮತ್ತು ಕೂನೆಗೂ ಯಜ್ಜೂರಯ್ಯ ತಮ್ಮ ದಾರಿದ್ರ್ಯ ನಿವಾರಣೆಗೆ ಭೂಮಿಯೇ ಬೇಕು ಎಂದು ಹಂಬಲಿಸುವಲ್ಲಿ ಒಂದು ಸಹಜವಾದ ನೆಲದ ಪ್ರೀತಿ, ತುಡಿತ ಅಲ್ಲಿದೆ. ಹೊಳೆನರಸೀಪುರದ ಕುರುಡ ಜಾತಿಯ ಕುಣಿತ, ವ್ಯಾಸ, ವಾಲ್ಮಿಕಿ, ಕಾಳಿದಾಸರು ಹುಟ್ಟುವದು ನಿಂತು ಭಾರತ ಮಾತೆ ಬಂಜೆಯಾದದ್ದು, ಅಸಮಾನತೆ ಇರುವಲ್ಲಿ ನಿಜವಾದ ಸ್ವಾತಂತ್ರ್ಯ ಸಾಧ್ಯವಿಲ್ಲ, ಸದ್ಯ ಪ್ರಗತಿಶೀಲ ಸಾಹಿತ್ಯಕ್ಕೆ ಬೇಕಿರುವುದು ತಲೆಯಲ್ಲ ಪಾದ, ಇಂದು ಬುದ್ದಿಗೆ ಅಂತ:ಕರಣ ಮಾನವೀಯತೆ ಕೂಡಿಸಬೇಕಿದೆ, ದಲಿತ ನೌಕರ ತಾನು ತನ್ನ ಕುಟುಂಬ ಎಂದಾಗಿಬಿಟ್ಟ, ತನ್ನ ಸಮುದಾಯ ಎಂದಾಗಲಿಲ್ಲ. ತಮಟೆಯನ್ನು ಮುಟ್ಟದವರೂ ಇಂದು ತಮಟೆ ಬಡಿಯುತ್ತಿದ್ದಾರೆ. ಂಸ್ಕೃತ ಶ್ಲೋಕಗಳನ್ನೇ ಉಚ್ಚರಿಸುವವರು ಮತ್ತೆ ಮತ್ತೆ ‘ಸಂಬಂಜ ದೊಡ್ದದು ಕನಾ’ ಅಂದಂತೆ. ಭಾರತದ ಅಂತ:ಸಾಕ್ಷಿಯಾದ ಪ್ರಜ್ಞಾವಂತರು, ಲೇಖಕರು, ಕಲಾವಿದರು, ಪತ್ರಕರ್ತರು, ನ್ಯಾಯವಂತರು ಅಸ್ಪೃಶ್ಯತೆ ದಲಿತರ ಸಮಸ್ಯೆ ಎಂದು ಸುಮ್ಮನುಳಿದಿರುವ ಖೇದವನ್ನು ವ್ಯಕ್ತ ಪಡಿಸುವ ಮಹಾದೇವರು ಸರ್ವಜ್ಞನ ಹಾಗೆ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾದ ಹಾಗೆ ‘ತಿಳಿದವರ ಒಡನಾಟದಿಂದ ಒಂದಷ್ಟು ತಿಳಿದಿದೆ’ ಎಂದು ನಮ್ರವಾಗಿ ಹೇಳುವ ಮೂಲಕವೇ ಈ ಅಕ್ಷರಗಳು ಎದೆಗೆ ಬಿದ್ದ ಬಗೆಯನ್ನು ಅತ್ಯಂತ ಮಾನವೀಯ ನೆಲೆಯಲ್ಲಿ ಕೇವಲ ಪ್ರೀತಿಬಯಸುವ ಕಂಗಳು ಮತ್ತು ಮನಸನ್ನು ಚಾಚಿ ಮಾಡಿದ ಬರವಣಿಗೆಗಳ ಒಂದು ಸುಂದರ ಗುಚ್ಚವಿದು. ಇಲ್ಲಿ ದೇವನೂರು ಒಬ್ಬ ಮಾನವಶಾಸ್ತ್ರಜ್ಞನಾಗಿ, ಸಮಾಜಶಾಸ್ತ್ರಜ್ಞನಾಗಿ, ರಾಜಕೀಯ ಚಿಂತಕರಾಗಿ ಸಾಮಾಜಿಕ ಜೀವನವನ್ನು ಗ್ರಹಿಸಿದ್ದಾರೆ. ಇದು ಮನುಷ್ಯ, ಮನುಷ್ಯರಿಗಾಗಿ ಮನವೀಯತೆಯ ಸಾಕಾರಕ್ಕಾಗಿ, ಸಮಾನತೆಯ ಹಂಬಲಕ್ಕಾಗಿ ಮೂಡಿ ಬಂದ ಅಕ್ಷರ. ಇವು ನನ್ನ ,ನಿಮ್ಮ , ನಮ್ಮಂಥ ಸಹಸ್ರ ಸಹಸ್ರ ಅಪ್ಪಟ ಮನುಷ್ಯ ಖಾಳಜಿಯುಳ್ಳವರ ಎದೆಗಿಳಿಯಲಿ. ಎಂದು ಆಶಿಸುತ್ತಾ ನನ್ನ ನುಡಿಗಳಿಗೆ ಪೂರ್ಣ ವಿರಾಮವನ್ನಿಡುವೆ.

[ದಿನಾಂಕ 16-02-2013 ರಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ದೇವನೂರು ಮಹಾದೇವರ ಕೃತಿಗಳ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ “ಎದೆಗೆ ಬಿದ್ದ ಅಕ್ಷರ” ಕುರಿತು ಮಾತು.]