Daily Archives: June 1, 2013

ಹೊಸ ಸರಕಾರ ಏಕ ರೂಪ ಶಿಕ್ಷಣ ನೀತಿ ಜಾರಿಗೊಳಿಸುತ್ತದೆಯೇ?

– ಕೋಡಿಬೆಟ್ಟು ರಾಜಲಕ್ಷ್ಮಿ

ಮತ್ತೆ ಶಾಲೆಗಳು ಆರಂಭವಾಗಿವೆ. ಪುಟಾಣಿ ಮಕ್ಕಳು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗಳಿಗೆ ಸೇರುವ, ಹೊಸ ಪುಸ್ತಕ ಖರೀದಿಸುವ, ಹೊಸ ಶಾಲೆಯಲ್ಲಿ ಕಲಿಯುವ ಗುಂಗಿನಲ್ಲಿ ಮುಳುಗಿದ್ದಾರೆ. ಅತ್ತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ ಮತ್ತಿತರ ಫಲಿತಾಂಶಗಳು ಬಂದಿದ್ದು ವಿದ್ಯಾರ್ಥಿಗಳು ತಮ್ಮ ಬದುಕಿನ ಮಹತ್ವದ ತಿರುವಿನಲ್ಲಿ ನಿಂತಿದ್ದಾರೆ. ಕಾಲೇಜುಗಳ ಆಯ್ಕೆ, ಬದುಕಿನ ದಾರಿಯ ಆಯ್ಕೆಗಳಲ್ಲಿ ವ್ಯಸ್ತರಾಗಿದ್ದಾರೆ. ಒಟ್ಟಿನಲ್ಲಿ ಜೂನ್ ಬಂತೆಂದರೆ ಶಿಕ್ಷಣ ಕ್ಷೇತ್ರದಲ್ಲಿಯೇ ತುಂಬ ಚಟುವಟಿಕೆಗಳು ಗೋಚರಿಸುತ್ತದೆ. ಆದರೆ ಈ ಬಾರಿಯ ಜೂನ್ 1 ಕೆಲವು ಪ್ರಮುಖ ವಿಚಾರಗಳನ್ನು ನೆನಪಿಗೆ ತರುತ್ತದೆ. ಅದಕ್ಕೆ ಕಾರಣ ಪ್ರಸ್ತುತ ಭರ್ಜರಿ ಜನ ಬೆಂಬಲದೊಂದಿಗೆ, ನಿರೀಕ್ಷೆಗಳ ಮಹಾಪೂರದೊಂದಿಗೇ ರೂಪುಗೊಂಡಿರುವ ಹೊಸ ಸರಕಾರ.

ಸಾಹಿತ್ಯ ಲೋಕದ ದಿಗ್ಗಜರು ಕಾಂಗ್ರೆಸ್ ಸರಕಾರ ಬರಬೇಕು ಎಂಬ ಆಗ್ರಹವನ್ನು ಒಕ್ಕೊರಲಿನಿಂದ ಪ್ರತಿಪಾದಿಸಿದ್ದ ಹಿನ್ನೆಲೆಯಲ್ಲಿ kannada-schoolಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಿಸಿಕೊಂಡ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಏಕರೂಪದ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಸರಕಾರವನ್ನು ನಿಷ್ಠುರವಾಗಿ ಆಗ್ರಹಿಸುತ್ತಾರೆಯೇ ಎನ್ನುವುದು ಸಹಜವಾಗಿ ಮೂಡಿರುವ ನಿರೀಕ್ಷೆ. ಅಪೇಕ್ಷಿಸಿದ ಸರಕಾರ ಬಂದಾಗ ನುಡಿ ರಕ್ಷಣೆಯ, ಅಥವಾ ನಾಡಿನ ಭವಿಷ್ಯದ ಜನಾಂಗವನ್ನು ರೂಪಿಸುವ ಜವಾಬ್ದಾರಿಯ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆ ಸರಕಾರವನ್ನು ಒತ್ತಾಯಿಸುವುದು ಕೂಡ ಜವಾಬ್ದಾರಿ. ಚುನಾವಣೆಗೆ ಮುನ್ನ ನಡೆದ ಅಭಿಯಾನದ ಪರಿಣಾಮ, ಇದೀಗ ಏಕರೂಪ ಶಿಕ್ಷಣ ನೀತಿಯನ್ನು ಕಡಕ್ ಆಗಿ ಜಾರಿ ಮಾಡಲು ಸಾಹಿತ್ಯವಲಯ ನಿಷ್ಠುರವಾಗಿ ಆಗ್ರಹಿಸುವುದು ಅನಿವಾರ್ಯ. ಹಾಗೆ ನೋಡಿದರೆ ಕನ್ನಡ ನಾಡು ನುಡಿಯ ರಕ್ಷಣೆಯ ಉದ್ದೇಶದಿಂದ ಏಕ ರೂಪದ ಶಿಕ್ಷಣ ಬಹಳ ಹಿಂದೆಯೇ ಜಾರಿಯಾಗಬೇಕಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಖಾಸಗಿ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಐದನೆ ತರಗತಿವರೆಗೆ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದು, ಅಂದರೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಒಂದು ಆಯ್ಕೆ. ಇದಕ್ಕೆ ಸರಕಾರ ಗಟ್ಟಿ ಮನಸ್ಸು ಮಾಡಬೇಕು. ಆಡಳಿತ ಶಾಹಿಯಲ್ಲಿಯೇ ಇರುವ ಶಿಕ್ಷಣದ ಬೃಹತ್ ಲಾಬಿಯನ್ನು ಎದುರು ಹಾಕಿಕೊಳ್ಳಬೇಕು.

ಎರಡನೆಯ ಆಯ್ಕೆ ಎಂದರೆ ಸರಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮವನ್ನು ಕಲಿಸುವ ಅಥವಾ ಒಂದನೇ ತರಗತಿಯಿಂದಲೇgovernment_schoolಆಂಗ್ಲ ಭಾಷೆಯನ್ನು ಕಲಿಸುವ ದೃಢ ನಿರ್ಧಾರ ಸರಕಾರ ತೆಗೆದುಕೊಳ್ಳಬೇಕು. ಏಕೆಂದರೆ ಪ್ರಸ್ತುತ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರು. ಅದರಲ್ಲಿಯೂ ಹಿಂದುಳಿದವರ, ವಲಸೆ ಕಾರ್ಮಿಕರ, ಸಮಾಜದ ಅಂಚಿನಲ್ಲಿರುವವರ ಮಕ್ಕಳ ಸಂಖ್ಯೆಯೇ ಹೆಚ್ಚು. ನಮ್ಮ ಸರಕಾರಿ ಶಾಲೆಗಳು ಇನ್ನೂ ಇಂಗ್ಲೀಷ್ ಮಾಧ್ಯಮದ ದಾಳಿಗೆ ಒಳಗಾಗಿಲ್ಲ ಎಂದು ಹೇಳಿಕೊಳ್ಳುವುದಾದರೆ ಅದಕ್ಕೆ ಬೆಲೆ ತೆರುತ್ತಿರುವವರು ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯ ಇಲ್ಲದ, ಸಮಾಜದ ಅಂಚಿನಲ್ಲಿರುವ ಪುಟಾಣಿ ಕಂದಮ್ಮಗಳು ಆಂಗ್ಲ ಮಾಧ್ಯಮದ ಸುಪ್ಪತ್ತಿಗೆಯಲ್ಲಿ ಓದಿದ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ. ಒಂದಲ್ಲ ಒಂದು ದಿನ ಅವರು ಸ್ಪರ್ಧಿಸಲೇಬೇಕು.

ಪಿಯುಸಿ, ಸಿಇಟಿ ಫಲಿತಾಂಶಗಳನ್ನು ಒಮ್ಮೆ ಗಮನಿಸಿದಲ್ಲಿ, ಅಲ್ಲಿ ಮೇಲ್ವರ್ಗದ, ಅಥವಾ ಆರ್ಥಿಕವಾಗಿ ಸ್ಥಿತಿವಂತ ಕುಟುಂಬದಿಂದ ಬಂದ ಮಕ್ಕಳ ಸಂಖ್ಯೆಯೇ ದೊಡ್ಡದು. ಅಂದರೆ ಸಮಾಜದ ಅಂಚಿನಲ್ಲಿರುವ ಕುಟುಂಬದ ಮಕ್ಕಳು ದಡ್ಡರೇ ? ಖಂಡಿತಾ ಅಲ್ಲ. ಅವರು ಆಂಗ್ಲ ಮಾಧ್ಯಮದ ಪ್ರವಾಹಕ್ಕೆ ಎದುರಾಗಿ ಈಜುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ. ಆರಂಭಿಕ ಆತ್ಮವಿಶ್ವಾಸವನ್ನು ಗಳಿಸುವುದರಲ್ಲೇ ಅವರ ಹೆಚ್ಚಿನ ಶಕ್ತಿ ಕುಂದಿಬಿಡುತ್ತದೆ. ಉಳಿದ ಸ್ಪರ್ಧೆಗಳಿಗೆ ಅಣಿಯಾಗುವಷ್ಟರಲ್ಲಿ ದಣಿವಾಗಿಬಿಡುತ್ತದೆ. ಆದ್ದರಿಂದ ಹೀಗೆ ಹಿಂದುಳಿದ ವರ್ಗಗಳ ಮಕ್ಕಳಿಗೂ ಸರಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಲಭಿಸಬೇಕು, ಅಥವಾ ಸ್ಥಿತಿವಂತರ ಮಕ್ಕಳೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಲಿಯಬೇಕು. ಇದು ಸಮಾಜದ ಒಟ್ಟು ಆರೋಗ್ಯದ ಹಿತ ದೃಷ್ಟಿಯಿಂದ ಒಳ್ಳೆದು.

ಹಿಂದೆಲ್ಲ ಅಂದರೆ ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಜಮೀನುದಾರರ ಮಕ್ಕಳೂ, ಅದೇ ಜಮೀನುದಾರನ ಜಮೀನಿನಲ್ಲಿ private-schoolಕೆಲಸ ಮಾಡುತ್ತಿರುವವರ ಮಕ್ಕಳೂ ಒಂದೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದು ಹಾಗಲ್ಲ. ಆರ್ಥಿಕವಾಗಿ ಸಬಲವಾಗಿರುವ ವರ್ಗದ ಮಕ್ಕಳು, ಆರ್ಥಿಕವಾಗಿ ಹಿಂದುಳಿದವ ವರ್ಗದ ಮಕ್ಕಳೊಂದಿಗೆ ಸಮಾನವಾಗಿ ಬೆರೆಯಲಾರರು. ಎರಡೂ ವರ್ಗದ ಮಕ್ಕಳು ಬಹಳ ಹೊತ್ತು ಮಾತುಕತೆ ನಡೆಸಲಾರರು. ಅವರು ಕಲಿಯುವ ಮಗ್ಗಿಯಾಗಲೀ, ಹಾಡುಗಳಾಗಲೀ, ಶಾಲೆಯ ವಾರ್ಷಿಕೋತ್ಸವದ ಶೈಲಿಯಾಗಲೀ ತುಂಬಾ ಬೇರೆ ಬೇರೆಯಾಗಿರುತ್ತದೆ. ಈ ಅಂತರ ಹೆಚ್ಚಾದಷ್ಟೂ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆಪತ್ತೂ ಹೆಚ್ಚು.

ಪ್ರತಿವರ್ಷ ಜೂನ್‌ನಲ್ಲಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು ಎಂಬ ಆಗ್ರಹಗಳೊಂದಿಗೆ ಭಾಷಣಗಳು ಬರಹಗಳು ಮೂಡಿಬರುತ್ತವೆ. ಆದರೆ ವಾಸ್ತವವಾಗಿ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ. ಕಳೆದ ಎರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ, ಅವು ಮುಚ್ಚಲಾರಂಭಿಸಿದಾಗ ಚರ್ಚೆಗಳಿಗೆ ಮತ್ತಷ್ಟು ಕಾವು ದೊರೆಯಿತು. ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವುದು ಒಂದು ಕಾರಣವಾದರೂ, ಇತ್ತೀಚಿನ ದಶಕಗಳಲ್ಲಿ ಪಾಲಕರು, govt-school-kidsತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ಕಲಿಯಲಿ ಎಂದು ಬಯಸುತ್ತಿರುವುದು ಶಾಲೆ ಮುಚ್ಚುತ್ತಿರುವುದರ ಹಿಂದಿರುವ ಪ್ರಧಾನ ಕಾರಣ. ಜಾಗತೀಕರಣದ ಪ್ರಭಾವದಿಂದ ಚಿಕ್ಕಪುಟ್ಟ ಉದ್ಯೋಗ ಅವಕಾಶಗಳಿಗೂ “ಇಂಗ್ಲಿಷ್ ಬರುತ್ತದೆಯೇ” ಎಂಬ ಪ್ರಶ್ನೆ ಮಾಮೂಲಾಗಿದೆ. ಅಂದ ಮೇಲೆ ಮಕ್ಕಳು ಇಂಗ್ಲಿಷ್ ಕಲಿಯದೇ ಇದ್ದರೆ ಕೆಲಸವೇ ಸಿಗುವುದಿಲ್ಲ ಎಂಬ ಭಯ ಪಾಲಕರಲ್ಲಿ ಮೂಡಿದೆ. ಇಂಗ್ಲಿಷ್ ಶಾಲೆಗಳತ್ತ ಅವರ ವಾಲುವುದಕ್ಕೆ ಇರುವ ಮುಖ್ಯ ಕಾರಣವು ಇದು ಹೌದು.

ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳು ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂದು ಸರಕಾರ ಎಷ್ಟೇ ಹೇಳಿದರೂ ಪ್ರತಿವರ್ಷ ಕನ್ನಡ ಮಾಧ್ಯಮದ ಅನುಮತಿಯೊಂದಿಗೆ ಆರಂಭವಾಗುವ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠಗಳು ನಡೆಯುತ್ತವೆ.

ಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಆರಂಭದಿಂದ ಕಲಿಸುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಡಿದ್ದರು. 90 ರ ದಶಕದಿಂದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಿದ್ದರೂ ಕೂಡ ಸುಳ್ಳು ಬೋರ್ಡುಗಳೊಂದಿಗೆ ಶಾಲೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸಿಬಿಎಸ್‌ಇ ಎಂಬ ಬೋರ್ಡಿನಡಿಯಲ್ಲಿ “ನಮ್ಮದೇನಿದ್ದರೂ ಕೇಂದ್ರೀಯ ಪಠ್ಯ ಮಾದರಿಗೆ ಸಂಬಂಧಿಸಿದ ಸಂಸ್ಥೆ, ರಾಜ್ಯ ಸರಕಾರದ ನಿಯಮಗಳು ಲಗಾವ್ ಆಗುವುದಿಲ್ಲ” ಎಂಬ ಉಡಾಫೆಯೊಂದಿಗೆ ಐಶಾರಾಮಿ ಶಾಲೆಗಳು ಆರಂಭವಾಗುತ್ತಿವೆ. ನಮ್ಮ ದುಡ್ಡು, ನಮ್ಮ ಮಕ್ಕಳು, ಬೇಕಾದ್ದು ಕಲಿಸುತ್ತೇವೆ ಎಂಬ ಸ್ಥಿತಿವಂತ ಪಾಲಕರ ಉಡಾಫೆಯೂ ಸೇರಿ ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಾರೆ ಎನ್ನುವುದೇ ಮುಖ್ಯವಾಗುತ್ತಿಲ್ಲ.

ಖಾಸಗಿ- ಸರಕಾರಿ, ಕನ್ನಡ ಮಾಧ್ಯಮ- ಇಂಗ್ಲೀಷು ಮಾಧ್ಯಮ ಎನ್ನುವ ಭೇದದೊಂದಿಗೆ ಇಡೀ ಸಮಾಜ ಇಬ್ಬಾಗವಾಗುತ್ತಿರುವುದು ಸುಳ್ಳಲ್ಲ. ಹಿಂದಿನ ಸರಕಾರದ ಶಿಕ್ಷಣ ಸಚಿವರ ಮಕ್ಕಳೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ, ಏಕ ರೂಪ ಶಿಕ್ಷಣ ನೀತಿ ಜಾರಿ ಎನ್ನುವುದು ಅವರಿಂದ ಸಾಧ್ಯವಾಗಲಿಲ್ಲ. ಅಲ್ಲೊಂದು ಇಲ್ಲೊಂದು ನಡೆದ ಪ್ರಯತ್ನಗಳನ್ನೆಲ್ಲ ಖಾಸಗಿ ವಲಯದ ಲಾಬಿ ಮಣ್ಣು ಮುಕ್ಕಿಸಿವೆ. siddaramaiah-cmಆದರೆ ಲಾಬಿಯನ್ನು ಎದುರು ಹಾಕಿಕೊಂಡು, ದೃಢನಿರ್ಧಾರ ತೆಗೆದುಕೊಳ್ಳುವ ಧೈರ್ಯ ಪ್ರದರ್ಶಿಸುವುದಷ್ಟೇ ಪ್ರಸ್ತುತ ಸರಕಾರದ ಮುಂದಿನ ಸವಾಲು. ಆ ಸವಾಲನ್ನು ಸರಕಾರ ಗೆಲ್ಲಬೇಕಾಗಿದೆ. ತಪ್ಪಿದಲ್ಲಿ ಸರಕಾರವನ್ನು ಎಚ್ಚರಿಸುವ ಜವಾಬ್ದಾರಿ ಸಾಹಿತ್ಯ ವಲಯದ್ದಾಗಿದೆ.

ಮುಂದಿನ ತಲೆಮಾರನ್ನು ಸೃಷ್ಟಿಸುವ ಶಿಕ್ಷಣ ಬದುಕಿನ ಅತ್ಯಮೂಲ್ಯ ಅಂಗ. ಆ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರದಲ್ಲಿಡುವ, ಅದಕ್ಕಾಗಿ ಮಾಡು ಇಲ್ಲವೆ ಮಡಿ ಎಂಬ ಒಗ್ಗಟ್ಟಿನ ಹೋರಾಟವನ್ನಾದರೂ ಆರಂಭಿಸಲು ಹಿಂದುಮುಂದು ನೋಡುವುದು ಸಲ್ಲ. ಅಲ್ಲಿ ಮತ್ತೆ ಪರಸ್ಪರ ಕಾಲೆಳೆಯುವ ಸಣ್ಣತನಕ್ಕೂ ಎಡೆಯಿರಬಾರದು.