Daily Archives: June 6, 2013

ಕೆ.ಎಸ್.ಪುಟ್ಟಣ್ಣಯ್ಯನವರ ಮೇಲಿರುವ ಅಗಾಧ, ಆದರೆ ನಿಭಾಯಿಸಬಹುದಾದ ಹೊರೆ

– ರವಿ ಕೃಷ್ಣಾರೆಡ್ಡಿ

ಕಳೆದ ವಾರ ವಿಧಾನಸಭೆಯಲ್ಲಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನ (29/5/2013) ಬೆಂಗಳೂರಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷ ತನ್ನ ಮಿತ್ರ ಪಕ್ಷಗಳ ಸಹಯೋಗದೊಂದಿಗೆ ಸದಾಶಯ ಸಮಾವೇಶ ಹಮ್ಮಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ದೇವನೂರು ಮಹಾದೇವರ ನೇತೃತ್ವದ ಸರ್ವೊದಯ ಪಕ್ಷವು ಸಿಪಿಐ, ಸಿಪಿಐಎಮ್, ಫಾರ್ವರ್ಡ್ ಬ್ಲಾಕ್, ಮತ್ತು ನಾನು ಪ್ರತಿನಿಧಿಸುವ ಲೋಕಸತ್ತಾ ಪಕ್ಷದ ಜೊತೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಂಡಿತ್ತು. sadashaya-samavesh-flierಪರಸ್ಪರರ ವಿರುದ್ಧ ಅಭ್ಯರ್ಥಿಗಳನ್ನು ಹಾಕದೇ ಇರುವುದು ಮತ್ತು ಪರಸ್ಪರರನ್ನು ತಾವು ಸ್ಪರ್ಧಿಸದೇ ಇರುವ ಕ್ಷೇತ್ರಗಳಲ್ಲಿ ಬೆಂಬಲಿಸುವ ಹೊಂದಾಣಿಕೆ ಅದು, ಈ ಐದು ಪಕ್ಷಗಳಿಂದ ಗೆದ್ದ ಏಕೈಕ ಅಭ್ಯರ್ಥಿ ನಮ್ಮ ರೈತಸಂಘದ ಕೆ.ಎಸ್.ಪುಟ್ಟಣ್ಣಯ್ಯನವರು. ಅವರು ವಿಧಾನಸಭೆಗೆ ಹೋಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮೊದಲು ಅವರನ್ನು ಎಲ್ಲರೂ ಸಂಯುಕ್ತವಾಗಿ ಅಭಿನಂದಿಸುವ ಕಾರ್ಯಕ್ರಮವೇ ಸದಾಶಯ ಸಮಾವೇಶ.

ಅಂದು ನಾನು ಗಮನಿಸಿದ ಒಂದೆರಡು ವಿಚಾರಗಳನ್ನು ಹಂಚಿಕೊಳ್ಳಬೇಕು. ಸರ್ವೋದಯ ಕರ್ನಾಟಕ ಪಕ್ಷದ (ರೈತಸಂಘ) ಸುಮಾರು ಎರಡು-ಮೂರು ಸಾವಿರ ಜನ ಅಂದು ರಾಜ್ಯದ ಅನೇಕ ಕಡೆಗಳಿಂದ ಬಂದಿದ್ದರು. ಉತ್ತರ ಕರ್ನಾಟಕದಿಂದ ಬಂದಿದ್ದ ರೈತರೂ ಬಹುಸಂಖ್ಯೆಯಲ್ಲಿದ್ದರು. ಬಹುಶಃ ಎಲ್ಲರೂ ತಮ್ಮದೇ ಖರ್ಚುಗಳನ್ನು ಹೊಂದಿಸಿಕೊಂಡು ಬಂದಿದ್ದರು. ಕೆಲವು ರೈತರು ಸಂಸಾರಸಮೇತ ಬಂದಿದ್ದರು. ಬಾಡಿಗೆ ಜನರಿಲ್ಲದ ರಾಜಕೀಯ ಸಮಾವೇಶವನ್ನು ನೋಡುವುದೇ ಒಂದು ಆಶಾವಾದ ಮತ್ತು ಜೀವನಪ್ರೀತಿಯನ್ನು ಹೆಚ್ಚಿಸುವ ವಿಷಯ.

ಸುಮಾರು ಹದಿನೈದು ಜನ ನಾಯಕರು ಅಂದಿನ ಒಂದೂವರೆ ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ಕೈದು ಜನರನ್ನು ಬಿಟ್ಟರೆ ಎಲ್ಲರೂ ಮೂರ್ನಾಲ್ಕು ನಿಮಿಷಗಳ ಒಳಗೆ ಹೇಳಬೇಕಾದದ್ದನ್ನು ಹೇಳಿದರು. ಎಲ್ಲರೂ ಬಹಳ ಆಶಾದಾಯಕವಾಗಿ ಮಾತನಾಡಿದರು. ಕೇವಲ ಒಬ್ಬ ಶಾಸಕರ ಮೇಲೆ ಇಷ್ಟೊಂದು ಅಭಿಮಾನ ಮತ್ತು ನಿರೀಕ್ಷೆಗಳನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪ್ರಗತಿಪರರ ಗುಂಪು ಮತ್ತು ರೈತರು ಯಾರ ಮೇಲೂ ಇಟ್ಟುಕೊಂಡಿರಲಿಲ್ಲ ಎಂದರೆ ಕೆ.ಎಸ್.ಪುಟ್ಟಣ್ಣಯ್ಯನವರ ಮೇಲೆ ಎಷ್ಟೊಂದು ನಿರೀಕ್ಷೆಗಳಿವೆ ಎನ್ನುವುದು ಗೊತ್ತಾಗುತ್ತದೆ ಎಂದು ಭಾವಿಸುತ್ತೇನೆ.

ಅಲ್ಲಿ ನನಗೆ ವಿಲಕ್ಷಣವಾಗಿ ಎದ್ದುಕಾಣಿಸಿದ ವಿಷಯವೊಂದನ್ನು ಹೇಳಬೇಕು: ಬಹುತೇಕ ಎಲ್ಲರೂ ಹಸಿರು ಶಾಲು ಹೊದ್ದ ರೈತರೇ ಇದ್ದ ಆ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಬಹಳ ಜನ ಪ್ರಸ್ತಾಪಿಸಲಿಲ್ಲ. ಆದರೆ ಎಲ್ಲರೂ ಸಾಮೂಹಿಕವಾಗಿ ಎಂಬಂತೆ ಪ್ರಸ್ತಾಪಿಸಿದ ವಿಷಯ “ಭ್ರಷ್ಟಾಚಾರ”. ಇದು ಇವತ್ತಿನ ಸಮಾಜದಲ್ಲಿ ಭ್ರಷ್ಟಾಚಾರ ಹೇಗೆ ಸಾರ್ವತ್ರಿಕ ಸಮಸ್ಯೆಯಾಗಿದೆ ಎನ್ನುವುದನ್ನು ತೋರಿಸುತ್ತದೆ,

ನನಗೆ ಮಾತನಾಡುವ ಅವಕಾಶ ಸಿಕ್ಕಾಗ ನಾನು ಪ್ರಮುಖವಾಗಿ ಒಂದೆರಡು ವಿಷಯ ಪ್ರಸ್ತಾಪಿಸಿದೆ: ’ಪುಟ್ಟಣ್ಣಯ್ಯನವರ ಮೆಲೆ ಅನೇಕ ನಿರೀಕ್ಷೆಗಳಿವೆ, ಅವರೊಬ್ಬರೇ ನಿಭಾಯಿಸಲಾಗದಷ್ಟು ಹೊರೆಯಿದೆ. ಈಗ ಅವರು ಶಾಸಕರೂ ಆಗಿದ್ದಾರೆ. ಹಾಗಾಗಿ ಪುಟ್ಟಣ್ಣಯ್ಯನವರ ಮೇಲಿರುವ ಪಕ್ಷ ಸಂಘಟನೆ ಮತ್ತಿತರ ಹೊರೆಯನ್ನು ಪಕ್ಷದ ಇತರರು ಹೊತ್ತುಕೊಂಡು ಪುಟ್ಟಣ್ಣಯ್ಯನವರು ಸದನದಲ್ಲಿ ಮತ್ತು ಕಾನೂನು ರಚನೆಯಲ್ಲಿ ಹೆಚ್ಚು ತೊಡಗುವಂತೆ ಅನುವು ಮಾಡಿಕೊಡಬೇಕು. ಇಂದು ಸರ್ಕಾರ ಒಳ್ಳೆಯ ಕಾನೂನುಗಳನ್ನು ತರುತ್ತಿಲ್ಲ. ಹಾಗಾಗಿ ಪುಟ್ಟಣ್ಣಯ್ಯನವರು ಖಾಸಗಿ ಮಸೂದೆಗಳನ್ನು ಮಂಡಿಸಲು ಮುಂದಾಗಬೇಕು. ಉದಾಹರಣೆಗೆ, ಕೆಐಎಡಿಬಿ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಲಾಭಕ್ಕೆ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಅದನ್ನು ತಡೆಗಟ್ಟುವ ಕಾನೂನು ತಿದ್ದುಪಡಿಗಳನ್ನು ಮಂಡಿಸಬೇಕು. ಇವರು ಮಂಡಿಸುವ ಖಾಸಗಿ ಮಸೂದೆಗಳು ಹೇಗಿರಬೇಕು ಎಂದರೆ ಅವನ್ನು ವಿರೋಧಿಸುವ ಶಾಸಕರು ಅಪ್ಪಟ ಜನವಿರೋಧಿಗಳು ಎನ್ನುವ ಹಾಗೆ ಇರಬೇಕು. ಅದಕ್ಕೆ ಅವರು ಮಿತ್ರಪಕ್ಷಗಳ ಮತ್ತು ಅವರದೇ ಪಕ್ಷದಲ್ಲಿಯ ಚಿಂತಕರ ಸಹಾಯ ಪಡೆದು ಸಶಕ್ತವಾದ ಮಸೂದೆಗಳನ್ನು ಬರೆಯಬೇಕು. ಇನ್ನು ಬಯಲುಸೀಮೆಯ, ನದಿ-ನೀರಾವರಿ ಇಲ್ಲದ ರೈತ ಇಂದು ಬಸವಳಿದಿದ್ದಾನೆ. ಕೆಲವೊಮ್ಮೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬೋರ್ ಹಾಕಿಸಿ, sadashaya-samaveshaಮೂರ್ನಾಲ್ಕು ವರ್ಷ ಕಷ್ಟಪಟ್ಟು ಸಾಕಿದಂತಹ ಅಡಿಕೆ-ತೆಂಗಿನಂತಹ ಇನ್ನೂ ಫಸಲು ಬರದ ತೋಟಗಳಿಗೆ ಈಗ ನೀರಿಲ್ಲ. ವಿದ್ಯುತ್‌ನದೊಂದೇ ಸಮಸ್ಯೆಯಲ್ಲ. ಅವನ ಜಮೀನಿನಲ್ಲಿ ಎಲ್ಲಿ ಬೋರ್ ಹಾಕಿಸಿದರೂ ನೀರಿಲ್ಲ. ಹೀಗೆ ಕೆಟ್ಟಿರುವ ರೈತರು ಊರಿಗೆ ಹತ್ತಾರು ಜನ ಸಿಗುತ್ತಾರೆ. ಇದೆಲ್ಲ ಅವರ ಸ್ವಯಂಕೃತಾಪರಾಧ ಎಂದು ಪರಿಗಣಿತವಾಗುತ್ತದೆಯೆ ಹೊರತು ಈ ಅಸಂಘಟಿತ ಜನರಿಗೆ ಯಾವುದೇ ನೆರವು ಸಿಗುತ್ತಿಲ್ಲ.  ಇಂತಹ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬೇಕು.’ ಇದು ನಾನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ವಿಚಾರಗಳು.

ನಮ್ಮ ಬಹುತೇಕ ಶಾಸಕರಿಗೆ ಗೊತ್ತಿಲ್ಲದ ಅಥವ ಅರ್ಹತೆ ಇಲ್ಲದ ವಿಷಯ ಏನೆಂದರೆ, ಸರ್ಕಾರ ಮಾತ್ರ ಶಾಸನಗಳನ್ನು ಮಂಡಿಸಬೇಕಿಲ್ಲ. ಸದನದ ಯಾವುದೇ ಸದಸ್ಯ ಸ್ವತಃ ಕಾನೂನುಗಳನ್ನು ಬರೆದು ಸದನದಲ್ಲಿ ಮಂಡಿಸಬಹುದು. ಅದನ್ನು ಸದನ ಅನುಮೋದಿಸಿದರೆ ಅದೂ ಶಾಸನವಾಗುತ್ತದೆ. ಆದರೆ ನಮ್ಮಲ್ಲಿ ಸರ್ಕಾರಕ್ಕೆ ಕಾಯದೆ ರಾಜ್ಯಕ್ಕೆ ಅಥವ ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಬರೆಯುವ ಮತ್ತು ಮಂಡಿಸುವ ಪ್ರತಿಭೆಗಳು ಕಡಿಮೆ ಇವೆ. ಶಾಸಕಾಂಗದ ಪ್ರಾಥಮಿಕ ಜ್ಞಾನವಿಲ್ಲದವರನ್ನು ನಾವು ಶಾಸಕರನ್ನಾಗಿ ಆರಿಸಿಕೊಂಡು ದೇಶ ಬದಲಾಗಿಬಿಡಲಿ ಎಂದರೆ ಆಗಿಬಿಡುತ್ತದೆಯೆ? ಹಿಂದಿನ ವಿಧಾನಸಭೆಯ ಅವಧಿ ಮುಗಿಯುತ್ತ ಬಂದ ಸಂದರ್ಭದಲ್ಲಿ ಒಬ್ಬ ಪಕ್ಷೇತರ ಶಾಸಕ ಅಪರೂಪಕ್ಕೆ ಎಂಬಂತೆ ಖಾಸಗಿ ಮಸೂದೆ ಮಂಡಿಸಿದ್ದ. ಅದು ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ಕಾಯ್ದೆ. ಯಾವುದೇ ಶಾಸಕನ ಕೆಲಸ ಮತ್ತು ಅನುದಾನದ ಹಣದ ವಿಲೇವಾರಿಯ ಬಗ್ಗೆ ಮಾಹಿತಿ ಕೇಳುವುದಕ್ಕೆ ಮೊದಲು ಅದಕ್ಕೆ ಸ್ಪೀಕರ್‌ರಿಂದ ಅನುಮತಿ ಪಡೆಯತಕ್ಕದ್ದು ಎಂದು ಆ ತಿದ್ದುಪಡಿಯ ಸಾರಾಂಶ. ಬಹುಶಃ ಎಲ್ಲಾ ಶಾಸಕರಿಗೂ ಆ ಮಸೂದೆ ಪ್ರಿಯವೇ ಆಗಿದ್ದರೂ ಅದು ಮಂಡನೆಯಾದ ಮಾರನೆಯ ದಿನವೇ ಮಾಧ್ಯಮಗಳಲ್ಲಿ ಬಂದ ಜನಾಭಿಪ್ರಾಯಕ್ಕೆ ಹೆದರಿ ಆ ಬೆತ್ತಲೆ ಶಾಸಕ ಆ ಖಾಸಗಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಆಗಿತ್ತು.

ಇಂತಹ ಸಂದರ್ಭದಲ್ಲಿ ಕೆ.ಎಸ್.ಪುಟ್ಟಣ್ಣಯ್ಯನವರು ಸದನದಲ್ಲಿಯಂತೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಬಂದಿದೆ. ನಿಜಕ್ಕೂ ಅವರು ಒಂದೆರಡು ಖಾಸಗಿ ಮಸೂದೆಗಳನ್ನು ಮಂಡಿಸಿಬಿಟ್ಟರೆ–ಅವು ಅನುಮೋದನೆ ಆಗಲಿ ಬಿಡಲಿ–ಅದರ ದೀರ್ಘಕಾಲೀನ ಪರಿಣಾಮಗಳೇ ಬೇರೆ ಇರುತ್ತವೆ. ನಾನು ಸದಾಶಯ ಸಮಾವೇಶದಲ್ಲಿ ಹೇಳಲು ಮರೆತ ವಿಚಾರಗಳಲ್ಲಿ ಒಂದು ಲೋಕಾಯುಕ್ತಕ್ಕೆ ಸ್ವಾಯತ್ತತೆ ಕಲ್ಪಿಸುವುದು. ಸ್ವತಃ ಸರ್ವೋದಯ ಪಕ್ಷ ಈ ವಿಚಾರದಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿತ್ತು. ಸರ್ಕಾರವನ್ನು ಮತ್ತು ಸಿದ್ಧರಾಮಯ್ಯನವರನ್ನು ಈ ವಿಚಾರದಲ್ಲಿ ಒತ್ತಾಯಿಸುವುದಕ್ಕಿಂತ ಸರ್ಕಾರ ಏನು ಮಾಡಬೇಕಿದೆ ಅದನ್ನು ಕೆ.ಎಸ್.ಪುಟ್ಟಣ್ಣಯ್ಯನವರು ಒಂದು ಕಾಯ್ದೆಯಾಗಿ ಮಂಡಿಸಿ ಅದರ ಅನುಮೋದನೆಗೆ ಪ್ರಯತ್ನಪಟ್ಟರೆ ಮತ್ತು ಜನಾಭಿಪ್ರಾಯವನ್ನು ರೂಪಿಸಲು ರಾಜ್ಯಾದಾದ್ಯಂತ ಓಡಾಡಿದರೆ ಅದಕ್ಕಿಂತ ಹೆಚ್ಚಿನ political activism ಇನ್ನೊಂದಿಲ್ಲ. ಅವರಿಗೆ ಇಲ್ಲಿ ಅತ್ಯುತ್ತಮ ರಾಜಕೀಯ ಅವಕಾಶವೂ ಇದೆ. ಅಮೆರಿಕದಲ್ಲಿ ಒಬಾಮ ಸರ್ಕಾರ ಕಾನೂನು ರಚನೆ ಮತ್ತು ತಿದ್ದುಪಡಿಗಳ ವಿಚಾರಕ್ಕೆ ಹೀಗೆಯೇ ಮಾಡುತ್ತದೆ. ತನ್ನ ಪಕ್ಷದವರಿಂದ ತನಗೆ ಸೂಕ್ತ ಅನ್ನಿಸಿದ ರೀತಿ ಮಸೂದೆಗಳನ್ನು ರಚಿಸಿ ಅವನ್ನು ಅಲ್ಲಿಯ ಕಾಂಗ್ರೆಸ್‌ನಲ್ಲಿ ಮಂಡನೆ ಮಾಡಿ, ಅದಕ್ಕೆ ತಮ್ಮ ಪಕ್ಷದಲ್ಲಿಯ ಭಿನ್ನಮತೀಯರು ಮತ್ತು ವಿರೋಧ ಪಕ್ಷಗಳ ಸದಸ್ಯರು ಬೆಂಬಲಿಸುವಂತೆ ಮಾಡಲು ಒಮ್ಮೊಮ್ಮೆ ಒಬಾಮ ದೇಶವ್ಯಾಪಿ ಪ್ರವಾಸ ಕೈಗೊಂಡು ಜನ ತಮ್ಮ ಜನಪ್ರತಿನಿಧಿಗಳ ಮೇಲೆ ಆ ಮಸೂದೆಯ ಪರವಾಗಿ ಮತ ಹಾಕುವಂತೆ ಒತ್ತಡ ತರಬೇಕೆಂದು ಪ್ರಚಾರ ಮಾಡುತ್ತಾನೆ. ಲೋಕಾಯುಕ್ತವನ್ನು ಬಲಪಡಿಸುವ ಮತ್ತು ಸ್ವಾಯತ್ತಗೊಳಿಸುವ ಕಾಯಿದೆಯ ಪರವಾಗಿ ಪುಟ್ಟಣ್ಣಯ್ಯನವರು ಒಂದಿಡೀ ವರ್ಷ ಇಂತಹುದೇ ರೀತಿಯಲ್ಲಿ ಕೆಲಸ ಮಾಡಿದರೆ ಖಂಡಿತ ಅದು ಫಲ ಕೊಡುತ್ತದೆ. ಇವರೇ ಮಂಡಿಸುವ ಮಸೂದೆ ಅನುಮೋದನೆ ಆಗುತ್ತದೆಯೋ ಇಲ್ಲವೋ, ಅಂತಹ ಸಕ್ರಿಯತೆ ಮತ್ತು ಹೋರಾಟದಿಂದ ಗುಣಾತ್ಮಕ ದೂರಗಾಮಿ ಪರಿಣಾಮಗಳಂತೂ ಆಗುತ್ತದೆ. ಶಾಸನಸಭೆಯಲ್ಲಿ ಆಕ್ಟಿವಿಸಂ ಎಂದರೆ ಹೀಗಿರುತ್ತದೆ.

ಸದಾಶಯ ಸಮಾವೇಶದಲ್ಲಿ ಎಲ್ಲರಿಗಿಂತ ಹೆಚ್ಚು ಮಾತನಾಡಿದವರು ಮತ್ತು ಚಪ್ಪಾಳೆ ಗಿಟ್ಟಿಸಿದವರು ಎಂದರೆ ರೈತಸಂಘದ ನಾಯಕರಾದ ಸೋಮಗುದ್ದು ರಂಗಸ್ವಾಮಿಯವರು. ಆಗಾಗ ಮಾತುಗಳನ್ನೇ ಪದ್ಯವನ್ನಾಗಿ ಹೊಸೆದು ಗಮಕಶೈಲಿಯಲ್ಲಿ ಹಾಡುತ್ತ ಭಾಷಣ ಮಾಡುವ ಇವರಿಗೆ ರೈತಸಂಘದ ಸಭೆಯಲ್ಲಿ ಭಾಷಣ ಮಾಡಲು ಬಹಳ ಬೇಡಿಕೆ ಇದ್ದಂತಿದೆ. ಇವರಂತೂ ಭ್ರಷ್ಟಾಚಾರದ ವಿಷಯದಲ್ಲಿ ಬಹಳ ಸಿಟ್ಟಿನಿಂದ ಮಾತನಾಡುತ್ತಾರೆ. ಪುಟ್ಟಣ್ಣಯ್ಯನವರು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎನ್ನುತ್ತ ಅವರು ಕೊನೆಯಲ್ಲಿ ಹೇಳಿದ “ಪುಟ್ಟಣ್ಣಯ್ಯನವರು ಸದನದಲ್ಲಿರುವ ಇತರ 223 ಹೇಂಟೆಗಳಿಗೆ (ಹೆಣ್ಣು ಕೋಳಿಗಳಿಗೆ) ಹುಂಜವಾಗಲಿ” ಎಂಬ ಮಾತು ಇಡೀ ಸಭೆಯನ್ನು ನಗೆಗಡಲಿನಲ್ಲಿ ಮುಳುಗಿಸಿತು. ನನಗೆ ಈಗ ಅನ್ನಿಸುವುದು, ಪುಟ್ಟಣ್ಣಯ್ಯನವರು ಒಂದಾದರೂ ಖಾಸಗಿ ಮಸೂದೆಯನ್ನು ಮಂಡಿಸಿ ಅದು ಅನುಮೋದನೆಯೂ ಆಗಿಬಿಟ್ಟರೆ ಸೋಮಗುದ್ದು ರಂಗಸ್ವಾಮಿಯವರ ಮಾತು ಉಪಮಾತ್ಮಕವಾಗಿ ನಿಜವಾದಂತೆಯೇ. ಹಾಗೇನಾದರೂ ಆದರೆ, ಮುಂದಿನ ವಿಧಾನಸಭಾ ಚುನಾವಣೆಯ ನಂತರ ಪುಟ್ಟಣ್ಣಯ್ಯನವರಿಗೆ ಸದನದಲ್ಲಿ ಸಾಥ್ ಕೊಡಲು ದೊಡ್ಡ ಗುಂಪೇ ಇರುತ್ತದೆ ಮತ್ತು ಕರ್ನಾಟಕದ ಹಿಂದಿನ ಭ್ರಷ್ಟ ದಿನಗಳಿಗೆ ಪ್ರಾಯಶ್ಚಿತ್ತ ದೊರಕಿದಂತಾಗುತ್ತದೆ. ನಮ್ಮ ಜನರಿಗೆ ಜನಪ್ರತಿನಿಧಿಗಳು ಎಂತಹವರಿರಬೇಕು ಮತ್ತು ಅವರ ಯೊಗ್ಯತೆಗಳು ಏನಿರಬೇಕು  ಎಂದು ತೋರಿಸುವುದಕ್ಕೆ ಒಂದಷ್ಟು ಉದಾಹರಣೆಗಳಾದರೂ ಬೇಕು.