Daily Archives: June 7, 2013

ತನ್ನದಲ್ಲದ ತಪ್ಪಿಗಾಗಿ ಅಪರಾಧಿಯಾಗುವ ಹೆಣ್ಣು ಜೀವ

– ರೂಪ ಹಾಸನ

ಈ ಸಮಾಜಕ್ಕೆ ನಿಜವಾಗಿಯೂ ಕರುಳಿದೆಯೇ? ಅಥವಾ ಅದು ಮಿದುಳಿನಿಂದ ಮಾತ್ರ ವ್ಯವಹರಿಸುತ್ತದೆಯೇ? ಎಂದು ಪ್ರಶ್ನಿಸಿಕೊಂಡರೆ ಕರುಳು ಇಲ್ಲ ಎಂಬ ಉತ್ತರ ಮಾತ್ರ ಬರಲು ಸಾಧ್ಯ. ನಮ್ಮ ಸುತ್ತಲ ಸಮಾಜ ಮತ್ತು ವ್ಯವಸ್ಥೆ ತನಗೆ ಬೇಕೆಂದಂತೆ ಹೆಣ್ಣನ್ನು ರೂಪಿಸುತ್ತ, ಬಳಸಿಕೊಳ್ಳುತ್ತ, ಕೊನೆಗೆ ತಪ್ಪುಗಳನ್ನೆಲ್ಲಾ ಅವಳ ಮೇಲೇ ಹೇರಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಲೇ ಇರುವಾಗ, ಕೊನೆಗೆ ಕಾನೂನುರೀತ್ಯವೂ ಅನಿವಾರ್ಯವಾಗಿ ಹೆಣ್ಣೇ ಶಿಕ್ಷೆಗೂ ಒಳಗಾಗುತ್ತಿರುವುದನ್ನು ಕಾಣುವಾಗ ಈ ಸಮಾಜಕ್ಕೆ ಕರುಳಿದೆ ಎಂದು ನಂಬುವುದಾದರೂ ಹೇಗೆ?

ನಮ್ಮ ಕಣ್ಣ ಮುಂದೆ ಇದಕ್ಕೆ ಉದಾಹರಣೆಯಾಗಿ ಹಲವು ಹೃದಯವಿದ್ರಾವಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಮೊನ್ನೆಯಷ್ಟೇ, ಹಾಸನದಲ್ಲಿ ಕೆಲ ಗಂಟೆಗಳ ಹಿಂದಷ್ಟೇ ಜನಿಸಿದ್ದ ಹಸುಗೂಸೊಂದನ್ನು ಹೆಣ್ಣುಮಗಳೊಬ್ಬಳು ಆಸ್ಪತ್ರೆಯಿಂದ ಕದ್ದೊಯ್ದಿದ್ದಳು. ಮಾರನೇ ದಿನವೇ ಸಿಕ್ಕಿಬಿದ್ದು, ಪೊಲೀಸ್‌ನವರ ವಶವಾಗಿದ್ದು ಅವರು ಸ್ವಂತ ತಾಯಿಗೆ ಮಗುವನ್ನು ಹಿಂದಿರುಗಿಸಿದ ಸುದ್ದಿಯೂ ಬಂತು. ಆದರೆ ಆಗಷ್ಟೇ ಹುಟ್ಟಿದ ಮಗುವನ್ನು ಕದ್ದೊಯ್ಯುವಂಥಾ ಅನಿವಾರ್ಯತೆ ಆ ಹೆಣ್ಣುಮಗಳಿಗೇನಿತ್ತು? newborn-babyಎಂಬ ವಿವರಗಳನ್ನು ಹುಡುಕಿದಾಗ ಎರಡು ಬಾರಿ ಗರ್ಭಪಾತವಾಗಿ ಮೂರನೆ ಬಾರಿ ಬಸಿರಾದಾಗ ಅದನ್ನಾದರೂ ಉಳಿಸಿಕೊಳ್ಳಬೇಕೆಂಬ ಆಶಯ ಈಡೇರದೇ ಅದೂ ಬಸಿದು ಹೋದಾಗ, ಮಗುವಿಗಾಗಿ ಅತ್ತೆ-ಮಾವ, ಸಮಾಜ ನೀಡುತ್ತಿದ್ದ ಮಾನಸಿಕ ಹಿಂಸೆ, ಒತ್ತಡ, ಪೀಡನೆಗಳಿಂದ ಖಿನ್ನತೆಗೊಳಗಾಗಿದ್ದ ಆ ಹೆಣ್ಣುಮಗಳು ಇಂಥಹ ಕೃತ್ಯಕ್ಕೆ ಕೈ ಹಾಕಿದ್ದು ಬೆಳಕಿಗೆ ಬಂತು. ಇಲ್ಲಿ ತಪ್ಪು ಯಾರದ್ದು? ಆ ಹೆಣ್ಣುಮಗಳದ್ದೇ ಅಥವಾ ಅವಳಿಂದ ಇಂಥಹ ಕೆಲಸ ಮಾಡುವಂತೆ ಪ್ರಚೋದನಾತ್ಮಕ ಒತ್ತಡ ತಂದ ಸಮಾಜದ್ದೇ? ಈಗ ಶಿಕ್ಷೆ ಮಾತ್ರ ಆ ಹೆಣ್ಣುಮಗಳಿಗೆ! ಬಂಜೆ ಎಂಬ ಅಪವಾದದಿಂದ ತಪ್ಪಿಸಿಕೊಂಡು ತಾಯಿ ಎನಿಸಿಕೊಳ್ಳಬೇಕೆಂಬ ಹಂಬಲಕ್ಕೆ ಬಿದ್ದು ಒಮ್ಮೆ ಮಾತ್ರ ಮಾಡಿದ ತಪ್ಪಿಗೆ ಸಮಾಜದಿಂದ “ಮಕ್ಕಳ ಕಳ್ಳಿ” ಎಂಬ ಶಾಶ್ವತ ಬಿರುದು. ಕುಟುಂಬದವರಿಂದಲೂ ನಿರ್ಲಕ್ಷ್ಯದವಮಾನ!

ಮತ್ತೊಂದು ಘಟನೆಯಲ್ಲಿ ಮಾನಸಿಕ ಅಸ್ವಸ್ಥ ಅವಿವಾಹಿತ ಅಕ್ಕನಿಗೆ ಹುಟ್ಟಿದ ಮಗುವನ್ನು ತಂಗಿಯೊಬ್ಬಳು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಮನೆಯಲ್ಲಿ ವೃದ್ಧ ತಾಯಿ, ಅಂಧ ತಮ್ಮ, ಮತ್ತು ಈ ಬುದ್ಧಿಮಾಂದ್ಯ ಅಕ್ಕನನ್ನು ಸಾಕುವ ಜವಾಬ್ದಾರಿಯಿಂದ ಮೊದಲೇ ಜರ್ಝರಿತಳಾಗಿರುವ ಆ ಹುಡುಗಿಗೆ ಈ ಮಗುವನ್ನೂ ಅನಿವಾರ್ಯವಾಗಿ ಸಾಕಬೇಕಾದಂತಾ ಹೊಣೆಗಾರಿಕೆ. ಅದು ಸಾಧ್ಯವಿಲ್ಲವೆನಿಸಿ ಮಾರಾಟ ಮಾಡಲೆತ್ನಿಸಿದ್ದಕ್ಕೆ ಈಗವಳು ಅಪರಾಧಿ! ಹಸುಗೂಸನ್ನೂ ಮಾರಾಟ ಮಾಡಲು ಹೊರಟ ಕ್ರೂರಿ ಎಂದು ಸಮಾಜದ ಭರ್ಜಿಯ ಇರಿತ. ಬದುಕು ಸಾಗಿಸಲು ಸಾಧ್ಯವಾಗದೇ ಅನೈತಿಕ ಮಾರ್ಗಕ್ಕೋ ಆತ್ಮಹತ್ಯೆಗೋ ಇಳಿದರೆ ಅದೂ ಅಪರಾಧವೇ! ಇನ್ನು ಇಂತಹವರಿಗೆ ಬದುಕಲು ಸಭ್ಯ ಮಾರ್ಗ ಎಲ್ಲಿದೆ?

ಕೆಲ ತಿಂಗಳ ಹಿಂದಷ್ಟೇ ಐದು ವರ್ಷದ ಕಂದಮ್ಮನ ಮೇಲೆ ಇಲ್ಲಿ ಅತ್ಯಾಚಾರ ನಡೆದಿದೆ. ಅತ್ಯಾಚಾರಿ ಕ್ಷೇಮವಾಗಿ ಸೆರೆಮನೆಯಲ್ಲಿದ್ದಾನೆ! ಶಿಕ್ಷೆಯಿಂದ ತಪ್ಪಿಸಿಕೊಳ್ಳಲೂ ಬೇಕಾದಷ್ಟು ಅವಕಾಶಗಳಿವೆ. ಆದರೆ ಮಾನಸಿಕ ಹಿಂಸೆಗೆ ಗುರಿಯಾಗಿರುವುದು ಮಾತ್ರ ಆ ಮಗು ಮತ್ತವರ ಕುಟುಂಬ. ತಮ್ಮದಲ್ಲದ ತಪ್ಪಿಗೆ ಸಮಾಜದ ಕುತೂಹಲ, ಕೊಂಕು ಮಾತು-ನೋಟವನ್ನು ಎದುರಿಸುವ ಅನಿವಾರ್ಯ ಶಿಕ್ಷೆ. ಅದಕ್ಕೆಂದೇ ಮನೆ ಬದಲಿಸಿ, ಮಗುವಿನ ಶಾಲೆ ಬದಲಿಸಿ…… ಏನೆಲ್ಲ ಬದಲಿಸಿದರೂ ಹೇಗೋ ಸುದ್ದಿ ಹಬ್ಬಿ ಮಾನಸಿಕ ಸಂಕಟ ನೀಡುವ ಸಮಾಜ. ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವ, ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾಗಿ ಅದು ಬಹಿರಂಗವಾಗುವ ಎಲ್ಲ ಪ್ರಸಂಗಗಳಲ್ಲೂ ಹೆಣ್ಣನ್ನೇ ಅನುಮಾನಿಸುವ, ಅವಮಾನಿಸುವ ಇಂತಹ ಹೃದಯಹೀನ ಸಮಾಜದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಇಂತಹ ಮುಗ್ಧರಿಗೆ ನ್ಯಾಯ ಕೊಡುವವರ್‍ಯಾರು? ಸಭ್ಯತೆಯ ಸೋಗಿನಲ್ಲಿ ಇಂತಹ ಹೀನ ಕೃತ್ಯಗಳನ್ನು ಮಾಡಿಯೂ ತೆರೆಮರೆಯಲ್ಲೇ ಉಳಿಯುವ ಕಾಮುಕರಿಗೆ ಶಿಕ್ಷೆ ಎಲ್ಲಿದೆ?

ಇತ್ತೀಚೆಗಿನ ಕೆಲ ವರ್ಷಗಳಿಂದ ಆಗಷ್ಟೇ ಹುಟ್ಟಿದ ಹಸುಗೂಸುಗಳನ್ನು ಪೊದೆಗಳಲ್ಲಿ ಬೀದಿಯಲ್ಲಿ ಬಿಸುಟು ಹೋಗುವುದೂ ಆಗಿಂದಾಗ್ಗೆ ನಡೆಯುತ್ತಿದೆ. baby-abandoned-in-bushಇದರ ಹೊಣೆಯೂ ನೇರವಾಗಿ ಹೆಣ್ಣಿನ ಮೇಲೆಯೇ! ಆಧುನಿಕ ಕುಂತಿಯರು, ನಿರ್ದಯಿ ತಾಯಂದಿರು, ಕೆಟ್ಟ ತಾಯಿ ಇರಲಾರಳೆಂಬುದಕ್ಕೆ ಅಪವಾದಗಳು………. ಹೀಗೆ ಹೆಣ್ಣನ್ನಷ್ಟೇ ಕೇಂದ್ರೀಕರಿಸಿ ದೂಷಿಸುವ ಸಮಾಜ ಇನ್ನೊಂದು ಬದಿಯಿಂದಲೂ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಹೆಣ್ಣನ್ನು ಈ ಸ್ಥಿತಿಗೆ ತಂದು ಅವಳು ಅನಿವಾರ್ಯವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ ಪುರುಷೋತ್ತಮ ಯಾವ ನಾಚಿಕೆಯೂ ಇಲ್ಲದೇ ಹೀಗೇ ಇನ್ನೊಂದು ಹೆಣ್ಣನ್ನು ಬಲೆಗೆ ಬೀಳಿಸಲು ಹೊಂಚು ಹಾಕುತ್ತಿರುತ್ತಾನೆ! ಅವನಿಗೆ ಶಿಕ್ಷೆ ನೀಡುವವರ್‍ಯಾರು?

ತನ್ನ ತಪ್ಪಿಲ್ಲದೆಯೂ ಸಮಾಜ ಅಥವಾ ವ್ಯವಸ್ಥೆಯ ಕ್ರೌರ್ಯಕ್ಕೆ ಸಿಕ್ಕು ತಲ್ಲಣಿಸುವ ಇಂತಹ ಹೆಣ್ಣು ಮಕ್ಕಳಿಗೆ ನ್ಯಾಯ ಎಲ್ಲಿದೆ? ಕೆಲವು ಮಾಧ್ಯಮಗಳೂ ಪೂರ್ವಪರ ಯೋಚಿಸದೇ ಹೆಣ್ಣುಮಕ್ಕಳ ಕುರಿತು ವಿಪರೀತದ ತಪ್ಪುಕಲ್ಪನೆ ಬರುವಂತೆ ಚಿತ್ರಿಸಿದರೆ ಅವಳು ಇನ್ನೆಲ್ಲಿಗೆ ಹೋಗಬೇಕು? ನಿಧಾನಕ್ಕೆ ವಿವೇಚಿಸಿದಾಗ ಇಂತಹ ಘಟನೆ ಅಥವಾ ತಪ್ಪುಗಳ ಹಿಂದೆ ಸಮಾಜ ಅಥವಾ ವ್ಯವಸ್ಥೆಯ ಬಿಗಿಯಾದ ಕಪಿಮುಷ್ಠಿ ಇರುವುದು ಗೋಚರಿಸುತ್ತದೆ. ಆ ಕ್ಷಣದ ಒತ್ತಡ, ಅನಿವಾರ್ಯತೆ ಅಥವಾ ದಿಕ್ಕುತೋಚದ ಸ್ಥಿತಿಯಲ್ಲಿ ಇಂತಹ ಅಸಹಾಯಕ ಹೆಣ್ಣುಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮತೆಯಿಂದಲೂ ಅನುಕಂಪದಿಂದಲೂ ನೋಡಿದಾಗ ಮಾತ್ರ ಅವರಿಗೆ ಒಂದಿಷ್ಟಾದರೂ ಮಾನವೀಯ ಅಂತಃಕರಣದ ನ್ಯಾಯವನ್ನು ನೀಡಲು ನಮ್ಮ ಮಾಧ್ಯಮಗಳಿಗೆ ಸಾಧ್ಯವಾದೀತೇನೋ? ತನ್ಮೂಲಕ ಸಮಾಜವನ್ನೂ ಸರಿಯಾದ ದಿಕ್ಕಿನಲ್ಲಿ ಯೋಚನೆಗೂ ಹಚ್ಚಬಹುದು ಅಲ್ಲವೇ? ಅಂತಹ ಅಂತಃಕರಣದ ಕಣ್ಣು ಎಲ್ಲರಿಗೂ ದಕ್ಕಲಿ ಎಂದು ಹಾರೈಸೋಣ.