ತಿರುಗುತ್ತಿರುವ ಹಿಂಸೆ, ಪ್ರತಿಹಿಂಸೆಯ ಚಕ್ರ

– ಬಿ.ಶ್ರೀಪಾದ ಭಟ್

ಕಳೆದ 45 ವರ್ಷಗಳಲ್ಲಿ ಪ್ರಭುತ್ವದ ಹಿಂಸೆ ಮತ್ತು ಮಾವೋವಾದಿಗಳ ಪ್ರತಿ ಹಿಂಸೆಯನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದವರು, ಹತ್ತಿರದಿಂದ ಅನುಭವಿಸಿದವರು, ದೂರದಿಂದ ಕಂಡವರು ಮೊನ್ನೆ ಛತ್ತೀಸ್‌ಘಡದಲ್ಲಿ ನಡೆದ ಹಿಂಸಾಚಾರದ ಕ್ರೌರ್ಯವನ್ನು ಕಂಡು ತತ್ತರಿಸಿದ್ದಾರೆ. ಆದರೆ ಇಲ್ಲಿ ಪ್ರಭುತ್ವದ ಹಿಂಸೆಯೊಂದಿಗೆ ಖಾಸಗೀ ಪಡೆಯಾದ ಜಮೀನ್ದಾರರ ಹಿಂಸೆಯು, ಖಾಸಗಿ ಉದ್ದಿಮೆದಾರರ ವ್ಯಾಪಾರೀಕರಣದ ರಾಕ್ಷಸ ಪ್ರಭಾವಳಿಗಳು ಒಂದಕ್ಕೊಂದು ತಳುಕು ಹಾಕಿಕೊಂಡು ಅಮಾಯಕ ಆದಿವಾಸಿ, ದಲಿತರ ಮೇಲೆ ನಿರಂತರವಾಗಿ ನಡೆಸಿದ ಶೋಷಣೆ ಮತ್ತು ಅತ್ಯಾಚಾರಗಳು ಮತ್ತು ಇದಕ್ಕೆ ಪ್ರತಿಕಾರವಾಗಿ ಮಾವೋವಾದಿಗಳ ಪ್ರತಿಹಿಂಸೆಯ ಸರಣಿ ಕ್ರೌರ್ಯಕ್ಕೆ ಕೊನೆ ಹಾಡುವ ಆಶಾವಾದವೇ ಇಂದು ಭಗ್ನಗೊಂಡಿದೆ.

ಇಂದು ಭಾರತದಲ್ಲಿ ಅಧಿಕೃತವಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗೆ ವಿರೋಧವಾಗಿ ಪ್ರಜಾ ವಿಮೋಚನೆಯ ಹೆಸರಿನಲ್ಲಿ ನಡೆಯುವ ಎಲ್ಲ ಬಗೆಯ ಭೂಗತ ಹೋರಾಟಗಳು ನಡೆಸುವ ಹಿಂಸೆಯ ಕುರಿತು ಅರಿವಿದ್ದವರೂ ಸಹ ಮೇ 25ರಂದು ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯ ಜೀರಂ ಘಾಟ್‌ನ ಬಳಿ ನಡೆದ ಕಾಂಗ್ರೆಸ್ ನಾಯಕರನ್ನೊಳಗೊಂಡ 27 ನಾಗರಿಕರ ಹತ್ಯೆಯ ಈ ಬರ್ಬರತೆಯ ಪರಿಮಾಣವನ್ನು ಊಹಿಸಿರಲಿಲ್ಲ. ಅಲ್ಲಿನ ಸಾಮಾಜಿಕ, ರಾಜಕೀಯವನ್ನು ಹತ್ತಿರದಿಂದ ಕಂಡವರೆಲ್ಲ ಹತ್ಯೆಗೊಳಗಾದ ಈ ಕಾಂಗ್ರೆಸ್ ನಾಯಕರಲ್ಲೊಬ್ಬರಾದ, ಮಾವೋವಾದಿಗಳ ಹಿಂಸೆಗೆ ಉತ್ತರವಾದ M_Id_52179_Salwa_Judumಸಾಲ್ವಜುಡಂನ ನೇತಾರ ಮಹೇಂದ್ರ ಕರ್ಮರ ಸಾವನ್ನು ಅನೇಕ ವರ್ಷಗಳ ಹಿಂದೆಯೇ ನಿರೀಕ್ಷಿಸಿದ್ದರು. ಏಕೆಂದರೆ ಅನಿರೀಕ್ಷ್ಷಿತವಾಗಿ ದೊರೆತ ರಾಜಕೀಯ ಅಧಿಕಾರವನ್ನು ಅದರ ಎಲ್ಲ ಸಾಧ್ಯತೆಗಳೊಂದಿಗೆ ಒಂದಿಂಚನ್ನೂ ಬಿಡದೆ ಬಳಸಿಕೊಂಡು ಯಾವುದೇ ಪ್ರಜ್ಞಾವಂತಿಕೆ, ನೈತಿಕತೆ, ವಿವೇಚನೆ, ನ್ಯಾಯಯತ ಪರ್ಯಾಯ ಮಾರ್ಗವಿಲ್ಲದೆ ಮಾವೋವಾದಿಗಳ ಹಿಂಸೆಯನ್ನು ಪ್ರತಿಹಿಂಸೆಯ ಮೂಲಕವೇ ಹತ್ತಿಕ್ಕಬೇಕೆಂಬ ಶಿಲಾಯುಗದ ಶಾಸನವನ್ನು ಆಧರಿಸಿ ಪವಿತ್ರೀಕರಣದ ಬೇಟೆಯೆಂದು ಕರೆಯಲ್ಪಡುವ ಸಾಲ್ವಜುಡುಂ ಎನ್ನುವ ಆರ್ಮಿಯನ್ನು ಸ್ಥಾಪಿಸಿದವರು ಈ ಮಹೇಂದ್ರ ಕರ್ಮ. ನಂತರ ನಡೆದದ್ದಲ್ಲೆವೂ ರಕ್ತಸಿಕ್ತ ಇತಿಹಾಸ.

ಸಾಲ್ವೋಜುಡಂ ಎನ್ನುವ ಅಧಿಕೃತವಾಗಿಯೇ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ನೀಡಿ ಮಾವೋವಾದಿಗಳ ನಿರ್ಮೂಲನೆಯ ಮೂಲಮಂತ್ರವನ್ನು ಆ ಸಂಘಟನೆಯ ಯುವ ಆದಿವಾಸಿಗಳ ತಲೆಯಲ್ಲಿ ತುಂಬಿ ಅವರ ಮೂಲಕ ತಮ್ಮ ಸಹೋದರ ಆದಿವಾಸಿಗಳನ್ನೇ ಹತ್ಯೆಗೈಯುವಂತಹ ಬಲು ದೊಡ್ಡ ಕಾರ್ಯಾಚರಣೆಯೇ ಕಳೆದ ವರ್ಷಗಳಲ್ಲಿ ಛತ್ತೀಸ್‌ಘಡ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ನಡೆದುಹೋಯ್ತು. ಇದಕ್ಕೆ ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ ಮತ್ತು ಈ ಎರಡೂ ರಾಜ್ಯಗಳ ಬಿಜೆಡಿ ಮತ್ತು ಬಿಜೆಪಿ ಸರ್ಕಾರಗಳು. ಇವರೆಲ್ಲರೂ ಜಪಿಸುತ್ತಿದ್ದ ಮಂತ್ರವೊಂದೇ ಈ ಸಾಲ್ವೋಜುಡಂನ ಮೂಲಕ ಮಾವೋವಾದಿಗಳೇ ನಾಮಾವಶೇಷವಾಗುತ್ತಾರೆ. ನಂತರ ಎಲ್ಲವೂ ಸುಖಾಂತ್ಯವೆಂದು. ಆದರೆ ಈ ಹುಂಬ ಹಾಗೂ ಭ್ರಷ್ಟ ಮಹೇಂದ್ರ ಕರ್ಮನಿಗಾಗಲೀ, ಕಾಂಗ್ರೆಸ್, ಬಿಜೆಡಿ, ಬಿಜೆಪಿ ಪಕ್ಷಗಳಿಗಾಗಲೀ 70ರ, 80ರ ದಶಕದ ಫ್ಯೂಡಲ್ ವಿರೋಧಿ ನಕ್ಸಲ್ ಚಳುವಳಿಗೂ ೯೦ರ ದಶಕದ ಜಾಗತೀಕರಣಗೊಂಡ ಇಂಡಿಯಾದ ನಂತರದ 15 ವರ್ಷಗಳ ಮಾವೋವಾದಿಗಳ ಭೂಗತ ಚಳುವಳಿಗಳಿಗೂ ಇರುವ ಅಪಾರ ಭಿನ್ನತೆ ಮತ್ತು ಅಜಗಜಾಂತರ ವ್ಯತ್ಯಾಸಗಳೇ ಗೊತ್ತಿರಲಿಲ್ಲ ಹಾಗೂ ಇವರಿಗೆಲ್ಲ ಅದು ಬೇಕಿರಲಿಲ್ಲ. ಇಂದಿನ ನವ ಕಲೋನಿಯಲ್‌ನ ದಿನಗಳಲ್ಲಿ ಈ ಭೂಗತ ಚಳುವಳಿ ದಕ್ಷಿಣದ ಆಂದ್ರಪ್ರದೇಶದಿಂದ ಕ್ರಮೇಣ ಪೂರ್ವ ರಾಜ್ಯಗಳಿಗೆ ಕೇಂದ್ರಿತಗೊಂಡಿರುವುದರ ಹಿಂದಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನವೂ ಮೇಲಿನ ಪಕ್ಷಗಳ ಯಾವುದೇ ರಾಜಕಾರಣಿಗಳಿಗಿರಲಿಲ್ಲ.

ಮುಖ್ಯವಾಗಿ ಇಂದು ಒರಿಸ್ಸ ಹಾಗೂ ಛತ್ತೀಸಗಡ್ ರಾಜ್ಯಗಳಲ್ಲಿ ಮಾವೋವಾದಿಗಳಲ್ಲಿ ಹೆಚ್ಚಿನವರು ಆದಿವಾಸಿಗಳು. mail_today5_070611101748ಇಲ್ಲಿನ ಖನಿಜ ಸಂಪತ್ತು ತಂದುಕೊಡುವ ಕೋಟ್ಯಾಂಟತರ ರೂಪಾಯಿಗಳ ಆದಾಯವು ಜಾಗತೀಕರಣದ ನೆಪದಲ್ಲಿ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಸರ್ಕಾರದ ತತ್ವದಡಿಯಲ್ಲಿ ಸಾರ್ವಜನಿಕತೆ ಸಂಪೂರ್ಣವಾಗಿ ಗೌಣಗೊಂಡು ಹೆಚ್ಚೂ ಕಡಿಮೆ ಖಾಸಗಿ ಉದ್ಯಮಿಗಳ ಕೈಗೆ ಜಾರಿಕೊಂಡಿದ್ದು ಹಾಗೂ ಈ ಪ್ರಕ್ರಿಯೆಯಲ್ಲಿ ಆದಿವಾಸಿಗಳ ಹಾಗೂ ಹಿಂದುಳಿದ ಜನತೆಯ ಜನಜೀವನವೇ ಹದಗೆಟ್ಟು ಸಂಪೂರ್ಣವಾಗಿ ಅತಂತ್ರಗೊಂಡಿದ್ದು ಮತ್ತು ಅವರು ತಮ್ಮ ನೆಲದಿಂದಲೇ ಸ್ಥಳಾಂತರಗೊಳ್ಳುವ ನಿರಂತರ ಪ್ರಕ್ರಿಯೆಗೆ ಮತ್ತು ಅವರ ಭವಿಷ್ಯವೇ ಹೆಚ್ಚೂ ಕಡಿಮೆ ಮುಗಿದ ಕಥೆಯಂತಾಗಿದ್ದು ಪ್ರಮುಖ ಅಂಶಗಳಾದರೆ, ಇವಕ್ಕೆಲ್ಲ ಮೂಲಭೂತ ಕಾರಣ ತಮ್ಮ ಈ ಸರ್ಕಾರಗಳ ಅತ್ಮಹ್ಯತ್ಯಾತ್ಮಕ ಹಾಗೂ ಭ್ರಷ್ಟಾಚಾರದ ಆಡಳಿತ ನೀತಿಗಳು ಎಂದು ಈ ಭ್ರಷ್ಟ ರಾಜಕಾರಣಿಗಳಿಗೆ ಗೊತ್ತಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಇಂದಿನ ದುರಂತ ಸ್ಥಿತಿಗೆ ಮತ್ತೊಂದು ಕಾರಣ. ಮುಖ್ಯವಾಗಿ ಸರ್ಕಾರಿ ಉದ್ದಿಮೆಗಳಾಗಿದ್ದಾಗ ಬಂಡವಾಶಾಹೀ ಮಾದರಿಗಳು ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಷ್ಟೋ ಇಷ್ಟೋ ಪಾಲಿಸುತ್ತಿರುವಂತೆ ಕಂಡುಬಂದರೂ ಒಮ್ಮೆ ಆ ಉದ್ದಿಮೆಗಳು ಖಾಸಗೀಕರಣಗೊಂಡಾಗ ಈ ಎಲ್ಲಾ ನೆಲದ ಹಕ್ಕಿನ ಮಾದರಿಗಳಿಗೂ, ಮಾನವೀಯ ನೆಲೆಗಳಿಗೂ, ಆದಿವಾಸಿಗಳ ಮೂಲಭೂತ ಹಕ್ಕುಗಳಿಗೂ, ಸಾಮಾಜಿಕ ನ್ಯಾಯಕ್ಕೂ ಸಂಪೂರ್ಣ ತಿಲಾಂಜಲಿ ದೊರೆಯತ್ತದೆ.

ಈ ಖಾಸಗೀ ಪಡೆಗಳಿಗೆ ಪ್ರಜಾತಾಂತಿಕ ಮೌಲ್ಯಗಳು ಕೇವಲ ಪುಸ್ತಕದ ಬದನೇಕಾಯಿ ಮಾತ್ರ. ಇಲ್ಲಿ ಐಡಿಯಾಲಜಿಗಳು ನಗೆಪಾಟಲಿಗೀಡಾಗುತ್ತವೆ. ಇದು ಸಹ ಸರ್ಕಾರದ ಅಧಿಪತಿಗಳಿಗೆ ಗೊತ್ತಿಲ್ಲವೆಂದೆಲ್ಲ. ಗೊತ್ತಿದೆ. ಆದರೆ ಈ ಪಕ್ಷಗಳು ಮತ್ತು ರಾಜಕಾರಣಿಗಳು ಈ ನವ ಕಲೋನಿಯಲ್‌ನ ಆರ್ಥಿಕ ಲಾಭ ತಂದುಕೊಡುವ, ತಲೆಮಾರುಗಳಿಗಾಗುವಷ್ಟು ಅಪಾರ ಸಂಪತ್ತನ್ನು ಪೂರೈಸುವ ಈ ನವ ಫ್ಯೂಡಲ್‌ನ ರೋಮಾಂಚಕತೆಯನ್ನು ಬಿಟ್ಟುಬಿಡುವಷ್ಟು ದಡ್ಡರೇ ?? ಅಲ್ಲವೇ ಅಲ್ಲ !! ಈ ಕಾರಣದಿಂದಲೇ ಭೃಹತ್ ಯೋಜನೆಗಳು ತಲೆಯತ್ತತೊಡಗಿದವು. ಅಧಿಕಾರಸ್ಥ ರಾಜಕಾರಣಿಗಳು ಮತ್ತು ಖಾಸಗೀ ಉದ್ದಿಮೆದಾರರ ಈ ಅನೈತಿಕ ಒಡಂಬಡಿಕೆ ಮತ್ತು ಕೋಟಿಗಟ್ಟಲೆಯ ಸಂಪತ್ತಿನ ವಹಿವಾಟು ಕಂಡವರ, ಹೊರಗಿನವರ ಪಾಲಾಗುವ, ನೆಲದ ಮಣ್ಣಿನ ಮಕ್ಕಳನ್ನು ಬಾವಿಗೆ ತಳ್ಳುವ ಒಟ್ಟಾರೆ ಈ ನೈತಿಕ ಶೂನ್ಯತೆಯ ವ್ಯಾಪಾರವನ್ನು ಪ್ರತಿರೋಧಿಸುವ ನೆಲೆಯಲ್ಲಿಯೇ ಮಾವೋವಾದಿಗಳ ಈ ಹಿಂಸಾತ್ಮಕ ಭೂಗತ ಮಾದರಿಗಳ ಪರ್ಯಾಯ ಆಯಾಮವೇ ಹುಟ್ಟಿಕೊಳ್ಳುತ್ತದೆ. ಇಂತಹ ಅತ್ಯಂತ ಎದೆನಡುಗಿಸುವ ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ವ್ಯವಸ್ಥೆಯನ್ನು ಈ ಮಹೇಂದ್ರ ಕರ್ಮನಂತಹ ಅವಾಂತಕಾರಿಯ ಕೈಗೊಪ್ಪಿಸುವ, ಸಾಲ್ವಾಜುಡಂನಂತಹ ಹಿಂಸಾತ್ಮಕ ಸಂಘಟನೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಹುಂಬ ಮತ್ತು ಮತಿಗೆಟ್ಟ ನಿರ್ಧಾರಗಳಿಗೆ ಒಂದು ಇಡೀ ಸಂಸ್ಕೃತಿ ಮತ್ತು ಸಮುದಾಯಗಳು ಹೆಚ್ಚೂ ಕಡಿಮೆ ಮಂಕಾಗಿ ನಾಶವಾಗುತ್ತಿವೆ.

ಇದಕ್ಕೆ ಜ್ವಲಂತ ಉದಾಹರಣೆ ಕಳೆದ ಮೇ ೧೭ರಂದು ಇದೇ ಛತ್ತೀಸ್‌ಘಡ ಜಿಲ್ಲೆಯ, ಬಿಜಾಪುರ ತಾಲೂಕಿನ ಎಡೆಸಮೇಟ್ಟ ಗ್ರಾಮದ ಗ್ರಾಮಸ್ಥರು ತಮ್ಮ ವಾರ್ಷಿಕ ಸಾಂಸ್ಕೃತಿಕ ಹಬ್ಬವಾದ ಬೀಜ ನೆಡುವ ಬೀಜ ಪಾಂಡಂನ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಹತ್ಯೆಗಳು. ಈ ಬೀಜ ಪಾಂಡಂ ಇಲ್ಲಿನ ಗ್ರಾಮಸ್ಥರಿಗೆ, ಆದಿವಾಸಿಗಳಿಗೆ ಅತ್ಯಂತ ಪ್ರಮುಖವಾದ ಈ ನೆಲದ ಸಾಂಸ್ಕೃತಿಕ ಹಬ್ಬ. ಈ ಹಬ್ಬದ ವಿಶೇಷತೆಯೇನಂದರೆ ಈ ಬೀಜ ಪಾಂಡಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹೊರಗಿನವರು ಇದೇ ಗ್ರಾಮವನ್ನು ಪ್ರವೇಶಿಸಿದರೆ ಅವರನ್ನು ಬೀಜವನ್ನು ಕದ್ದೊಯ್ಯಲು ಬಂದವರೆಂದು ಪರಿಗಣಿಸಿ ಅವರಿಗೆ ಜುಲ್ಮಾನೆಯನ್ನು ವಿಧಿಸುತ್ತಾರೆ. ಈ ಸಾಂಸ್ಕೃತಿಕ ಹಿನ್ನೆಲೆಯನ್ನರಿಯದ ಅಲ್ಲಿನ ಸರ್ಕಾರದ ಪೋಲೀಸ್ ಪಡೆಗಳು ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗುಂಪುಗೂಡಿದ chhattisgarh-naxalattackಆದಿವಾಸಿ ಗ್ರಾಮಸ್ಥರನ್ನು ಶಂಕಿತ ಮಾವೋವಾದಿಗಳೆಂದು ಅನುಮಾನಿಸಿ ಎಂಟು ಮಂದಿ ಗ್ರಾಮಸ್ಥರು ಮತ್ತು ನಾಲ್ಕು ಮಕ್ಕಳನ್ನು ಕೊಲ್ಲುತ್ತಾರೆ. ಆದರೆ ಈ ಅಮಾಯಕರ ಅನಾಗರಿಕ ಹತ್ಯೆ ರಾಜ್ಯದ,ರಾಷ್ಟ್ರದ ಜನತೆಯ, ಪ್ರಭುತ್ವದ, ಮಾಧ್ಯಮಗಳ ಗಮನ ಸೆಳೆಯುವುದೇ ಇಲ್ಲ!! ಅಂದರೆ ಆದಿವಾಸಿಗಳನ್ನು ಈ ಪ್ರಭುತ್ವ ಮತ್ತು ವ್ಯವಸ್ಥೆ ತಮ್ಮ ಪ್ರೀತಿಯ ಬಳಗದವರೆಂದು ಪರಿಭಾವಿಸಿಯೇ ಇಲ್ಲ ! ಇದೇ ರಾಜ್ಯದಲ್ಲಿ 2011ರಲ್ಲಿ 300 ಮನೆಗಳನ್ನು ಸುಟ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು, ಜೂನ್ 2012ರಂದು ಸರ್ಕೇಗುಡದ ಗ್ರಾಮದ ಹದಿನೇಳು ಗ್ರಾಮಸ್ಥರನ್ನು ಇದೇ ಬೀಜ ಪಾಡಂ ಆಚರಣೆಯ ಸಂದರ್ಭದಲ್ಲಿ ಕೊಲ್ಲಲಾಯಿತು.

ಇಂತಹ ನೂರಾರು ಉದಾಹರಣೆಗಳು ಕಳೆದ ಹದಿನೈದು ವರ್ಷಗಳಲ್ಲಿ ನಡೆದಿವೆ. ಈ ಕಾಲಘಟ್ಟದಲ್ಲಿ ಸಾಲ್ವಾಜುಡಂನ ಕಾರ್ಯಾಚರಣೆಯಲ್ಲಿ ಸಾವಿರಾರು ಆದಿವಾಸಿಗಳು ಸರ್ಕಾರದ ಅಧಿಕೃತ ಗುಂಡೇಟಿಗೆ ಬಲಿಯಾಗಿ ಅನಾಮಿಕವಾಗಿ ಸಾವನ್ನಪ್ಪಿದರು. ಯಾವುದೇ ಬೆಂಬಲವಿಲ್ಲದಂತಹ ಈ ಅರಾಜಕತೆಯ, ಅಸಹಾಯಕತೆಯ ಸಂದರ್ಭದಲ್ಲಿ ಆ ರಾಜ್ಯಗಳ ಆದಿವಾಸಿಗಳ ಸಮೂಹವೇ ಮಾವೋವಾದಿಗಳ ತೆಕ್ಕೆಗೆ ಜಾರಿಕೊಂಡಿದ್ದು ಇಂದು ಇತಿಹಾಸ ಮತ್ತು ವರ್ತಮಾನ.

ಇದು ಮೇಲ್ನೋಟಕ್ಕೆ ತೀರಾ ಸರಳ ವಿಶ್ಲೇಷಣೆಯಂತೆ ಕಂಡುಬಂದರೂ ಅದರ ಕ್ಲೀಷೆಗಳು ತೀರ ಜಟಿಲವೇನಲ್ಲ. ಈ ಜಟಿಲವಲ್ಲದ ಕ್ಲಿಷ್ಟ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕೆಂದರೆ ಸರ್ಕಾರವೂ ಈ ಕೂಡಲೆ ನಕ್ಸಲ್‌ಪೀಡಿತ ಈ ಹಿಂದುಳಿದ ರಾಜ್ಯಗಳಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಿ ಅಲ್ಲಿ ಸ್ವರ್ಗವನ್ನು ಸ್ಥಾಪಿಸಿದರೆ ಮಾವೋವಾದಿಗಳು ಇನ್ನಿಲ್ಲದಂತೆ ಮಾಯವಾಗುತ್ತಾರೆ ಎನ್ನುವ ಸರಳೀಕೃತ ಗ್ರಹಿಕೆಯೂ ಸಹ ನಗೆಪಾಟಲಿಗೀಡಾಗುತ್ತದೆ. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಯಾವುದೂ ಸರಳವಲ್ಲ. ಏಕೆಂದರೆ ಸರ್ಕಾರದ ಅಭಿವೃದ್ಧಿ ಚಿಂತನೆಗಳು ಶೇಕಡಾ ನೂರಷ್ಟು ಪಶ್ಚಿಮದಿಂದ ಪ್ರೇರಿತಗೊಂಡಿದ್ದು. ಅಲ್ಲಿನ ಮಾದರಿಗಳನ್ನೇ ಇಲ್ಲಿ ಅಳವಡಿಸಿದ ಸರ್ಕಾರ ಹೆಚ್ಚೂ ಕಡಿಮೆ ಇಡೀ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅರಾಜಕತೆಗೆ ತಳ್ಳಿದ್ದು ಇಂದಿಗೂ ನಮ್ಮ ಕಣ್ಣ ಮುಂದಿದೆ. ಈ ವೈರುದ್ಧ್ಯಗಳನ್ನು ಅರಿಯಲು, ಗ್ರಹಿಸಲು ವಿಫಲಗೊಂಡ ಸರ್ಕಾರ ತನ್ನ ಈ ಹುಸಿ ಅಭಿವೃದ್ದಿ ಮಾದರಿಗಳೇ ಸಂಪೂರ್ಣವಾಗಿ ಪರಾಮಾರ್ಶೆಗೊಳಗಾಗಬೇಕದಂತಹ ಸಂದರ್ಭದಲ್ಲಿ, ಯಾವುದೇ ಜನಪರ ಹಿನ್ನೆಲೆ, ಯೋಜನೆಗಳಿಲ್ಲದೆ ಕೇವಲ ತಂತ್ರಜ್ಞಾನವನ್ನೇ ವೈಭವೀಕರಿಸಿ, ದೈಹಿಕ ಶ್ರಮದ ಪರಿಕಲ್ಪನೆಯನ್ನು ಶೂನ್ಯಗೊಳಿಸಿದ್ದು ಇಲ್ಲಿನ ಅಂತಸ್ಸತ್ವವನ್ನು ನಾಶಮಾಡಿತು. ಶ್ರಮಿಕರಾದ ರೈತರು ಮತ್ತು ಆದಿವಾಸಿಗಳು ಅತಂತ್ರರಾದರು. ಗ್ರಾಮೀಣ ಬಡತನ ಮತ್ತು ನಗರಗಳ ಬಡತನದ ಮಟ್ಟ, ಅಸಮಾನತೆ ಹೆಚ್ಚತೊಡಗಿದ್ದೇ ಕಳೆದ ಹದಿನೈದು ವರ್ಷಗಳ ಸಾಧನೆ. ಎಲ್ಲಾ ಬಗೆಯ ಅಹಿಂಸಾತ್ಮಕ ಚಳುವಳಿಗಳು ನಿಷ್ಕ್ರಿಯೆಗೊಂಡ ಇಂದಿನ ಸಂದರ್ಭದಲ್ಲಿ ಹಿಂಸಾತ್ಮಕ ಮಾವೋವಾದಿಗಳ ಸಂಘಟನೆ ಮೇಲುಗೈ ಸಾಧಿಸುವುದು ಅತ್ಯಂತ ಆತಂಕಕಾರಿಯಾದರೂ ಅದು ಸಹಜವೇ. ಆದರೆ ಇದು ಅಷ್ಟು ಸರಳವೂ ಅಲ್ಲ. ಆದರೆ ಇದಾವುದನ್ನು ಅಮೂಲಾಗ್ರವಾಗಿ, ಸೂಕ್ಷ್ಮವಾಗಿ, ಮಾನವೀಯ ನೆಲೆಯಲ್ಲಿ ವಿಮರ್ಶಿಸದ ಸರ್ಕಾರ ಹೆಚ್ಚೂ ಕಡಿಮೆ ನಿಯಂತ್ರಣವನ್ನು ಕಳೆದುಕೊಂಡು ಹಿಂಸೆಗೆ ಪ್ರತಿ ಹಿಂಸೆಯಾಗಿ ಮಾವೋವಾದಿಗಳ ಬೇಟೆಗೆ ತೊಡಗುತ್ತಾರೆ. ಮತ್ತೆ ಹಿಂಸೆಯ ಚಕ್ರ ತಿರುಗತೊಡಗುತ್ತದೆ.

ಈ ಹಿಂಸೆ ಹಾಗೂ ಪ್ರತಿಹಿಂಸೆಯ ಕರ್ಮಕಾಂಡಗಳನ್ನು ಕೇವಲ ಅಧ್ಯಯನಗಳ ಮೂಲಕ, ಮಾಧ್ಯಮಗಳ ಮೂಲಕ ಅರಿತುಕೊಳ್ಳುವ Chhattisgarh_Naxal_attack_siteನಾವು ಸಹ ಗೊಂದಲದಲ್ಲಿದ್ದೇವೆ. ಈ ಹಿಂಸೆ ಹಾಗೂ ಪ್ರತಿಹಿಂಸೆಯನ್ನು ನೇರವಾಗಿ ಮುಖಾಮುಖಿಯಾಗದ ಅದರ ಕಾರಣಕರ್ತರುಗಳನ್ನು ಹತ್ತಿರದಿಂದ ಕಂಡು ಚರ್ಚಿಸದ ಇಲ್ಲಿನ ಪ್ರಜ್ಞಾವಂತರು ಮತ್ತು ಪ್ರಗತಿಪರ ಗಂಪುಗಳು ಬಹಳ ಸರಳವಾಗಿ ಮಾವೋವಾದಿಗಳ ಪರ ಅಥವಾ ವಿರೋಧದ ನೆಲೆಗೆ ಬಂದು ತಲಪುತ್ತಾರೆ. ಕಾನೂನನ್ನು ಉಲ್ಲಂಘಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿ ಹಿಂಸಾತ್ಮಕ ಮಾರ್ಗದಲ್ಲಿರುವ ಮಾವೋವಾದಿಗಳನ್ನು ಮೇಲಿನ ಕಾರಣಗಳಿಗೋಸ್ಕರ ಟೀಕಿಸುವವರೆಗೂ ಸಮಂಜಸವಾಗಿಯೇ ಕಾಣುವ ವಾದಗಳು, ನಮ್ಮ ಬುದ್ಧಿಜೀವಿಗಳು ಕಳೆದ ಐವತ್ತು ವರ್ಷಗಳ ಅಭಿವೃದ್ಧಿಯನ್ನು ಉದಾಹರಿಸುತ್ತಾ , ಭೂ ಸುಧಾರಣೆಗಳನ್ನು, ಬ್ಯಾಂಕ್‌ಗಳ ರಾಷ್ಟ್ರೀಕರಣಗಳನ್ನು, ಮೀಸಲಾತಿಯ ಸೌಲಭ್ಯಗಳನ್ನು ಉದಾಹರಿಸುತ್ತಾ ನೋಡಿ ಇವೆಲ್ಲ ಅಹಿಂಸಾತ್ಮಕ ಹೋರಾಟಗಳಿಂದ ಪಡೆದಿದ್ದಲ್ಲವೇ ಎಂದು ಪ್ರಶ್ನಿಸುತ್ತಾ ಈ ವ್ಯವಸ್ಥೆಯಲ್ಲಿಯೇ ಇದ್ದು ಹೋರಾಟ ಮಾಡಿ ಪಡೆಯಿರಿ ಎಂದು ಮುಗ್ಧವಾಗಿ ಮಾವೋವಾದಿಗಳನ್ನು ಟೀಕಿಸುತ್ತಾರೆ, ಆದರೆ ಈ ಬುದ್ಧಿಜೀವಿಗಳು ಪರಿಭಾವಿಸುವ ವ್ಯವಸ್ಥೆಯು ಎಂದು, ಎಷ್ಟು ವರ್ಷಗಳ ಕಾಲ ಚಲನಶೀಲವಾಗಿರುತ್ತದೆ, ಎಂದು,ಎಷ್ಟು ವರ್ಷಗಳ ಕಾಲ ಜಡಗೊಳ್ಳುತ್ತದೆ ಎಂದೇನು ಘೋಷಿಸಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಅಹಿಂಸಾತ್ಮಕ ಚಳುವಳಿಗಳನ್ನು ಕಟ್ಟುವಾಗ ಅದು ಬಹುಪಾಲು ಆ ಕ್ಷಣದ ಅಗತ್ಯಕ್ಕೆ ತಕ್ಕಷ್ಟೇ ರೂಪುಗೊಂಡಿರುತ್ತದಷ್ಟೇ. ಸಾಮರಸ್ಯದ, ಹೊಂದಾಣಿಕೆಯ ಹಿನ್ನೆಲೆಯಲ್ಲಿ ಪ್ರತಿಯೊಂದನ್ನು ನಿರ್ಧರಿಸಲಾಗುತ್ತದೆ. ಇದನ್ನು ಕ್ರಾಂತಿಕಾರಿಗಳು ಒಪ್ಪುವುದೇ ಇಲ್ಲ.

ಎಲ್ಲ ಸಮಸ್ಯೆಗಳನ್ನೂ ಒಂದೇ ಏಟಿನ ಮೂಲಕ ನಿವಾರಿಸಿಕೊಳ್ಳಬಯಸುವ ಈ ಕ್ರಾಂತಿಕಾರಿ ಚಳುವಳಿಗಳು ಸಂವಿಧಾನದ ಪರಿಕಲ್ಪನೆಯನ್ನು ತಿರಸ್ಕರಿಸುವುದು ಸಹ ಈ ಹಿನ್ನೆಲೆಯಲ್ಲಿ. ಆದರೆ ಈ ಹಿಂಸಾತ್ಮಕ ಚಳುವಳಿಗಳನ್ನು ಕೊನೆಗಾಣಿಸಬೇಕೆಂದರೆ ಅದು ಸಾಂಸ್ಕೃತಿಕ ಯಜಮಾನಿಕೆಯ ಮೂಲಕ ಮಾತ್ರ ಸಾಧ್ಯ. ಇಂದಿನ ಜಾಗತೀಕರಣದ ನವ ಆರ್ಥಿಕತೆಯನ್ನು ಬಳಸಿಕೊಂಡೇ ಹೊಸ ಬಗೆಯ ಆಕ್ಟಿವಿಸಂ ಅನ್ನು ಕಟ್ಟಿದಾಗ ಮಾತ್ರವೇ ಹಿಂಸೆಗೆ ತಕ್ಕ ಉತ್ತರ ನೀಡಲು ಸಾಧ್ಯ. ನಮ್ಮ ಬುದ್ಧಿಜೀವಿಗಳು ತಮ್ಮ ಯೂನಿವರ್ಸಿಟಿಗಳ, ಅಕಡೆಮಿಕ್ ವಲಯಗಳಿಂದ ಹೊರಬಂದು ಗ್ರಾಮ್ಷಿ ಹೇಳಿದಂತೆ ಜನಸಾಮಾನ್ಯರೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸಿತೊಡಗಿದಾಗ ಮಾತ್ರ ಈ ಹಿಂಸೆಗೆ ಪ್ರತ್ಯುತ್ತರ ಕೊಡಬಹುದೇನೊ. ನಾವು ಮರಳಿ ಈ ನವ ಕಲೋನಿಯಲ್‌ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಂಧೀಜಿಯವರ ಹಿಂದ್ ಸ್ವರಾಜ್ ಚಿಂತನೆಯ ಮಾದರಿಗಳನ್ನು, ಕನಸುಗಳನ್ನು ಇಂದಿನ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಂಡು ಮುಖಾಮುಖಿಯಾದಾಗಲೇ ಹೊಸ ಹೆಜ್ಜೆಗಳು ಶುರುವಾಯಿತೆಂದರ್ಥ.

Leave a Reply

Your email address will not be published. Required fields are marked *