ಬಿಜೆಪಿಗೆ ಮೋದಿ ಅನಿವಾರ್ಯ ಸಾರಥಿ

– ಚಿದಂಬರ ಬೈಕಂಪಾಡಿ

ಬಿಜೆಪಿಯಲ್ಲೀಗ ಸಂಚಲನ. ನರೇಂದ್ರ ಮೋದಿ ಹೆಗಲಿಗೆ 2014ರ ಲೋಕಸಭಾ ಚುನಾವಣೆಯ ಭಾರ ಹೊರಿಸಿರುವುದರಿಂದ ಸಹಜವಾಗಿಯೇ ಮೋದಿ ಬೆಂಬಲಿಗರಿಗೆ ಅಮಿತೋತ್ಸಾಹ. ಮೋದಿಗೆ ಇಂಥ ಜವಾಬ್ದಾರಿ ನೀಡಿರುವುದಕ್ಕೆ ಬಿಜೆಪಿಯ ಉಕ್ಕಿನ ಮನುಷ್ಯ ಎಲ್.ಕೆ.ಅಡ್ವಾಣಿ ಪಾಳೆಯದಲ್ಲಿ ಮುಜುಗರ. ಈ ಎರಡೂ ರೀತಿಯ ಸಂಚಲನಗಳನ್ನು ಸಮಚಿತ್ತದಿಂದ ಬಿಜೆಪಿ ಅಭಿಮಾನಿಗಳು ಅನುಭವಿಸಬೇಕಾಗಿದೆ. ವ್ಯಕ್ತಿ ಮುಖ್ಯವಲ್ಲ ಎನ್ನುವುದು ಬಿಜೆಪಿಯ ತತ್ವ. ಆದರೆ ವ್ಯಕ್ತಿಯೂ ಮುಖ್ಯ ಎನ್ನುವುದು ಇತ್ತೀಚಿನ ಚುನಾವಣೆಗಳಲ್ಲಿ ಜನ ನೀಡಿರುವ ತೀರ್ಪಿನಲ್ಲಿ ಸ್ಪಷ್ಟ.

ಯಾರೇ ಕೂಗಾಡಿದರೂ ಬಿಜೆಪಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎನ್ನುವ ಕಠಿಣ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಬಂದ ಹಿನ್ನೆಲೆಯಲ್ಲೇ ಗೋವಾದಲ್ಲಿ ಸಮಾಪನಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 750px-BJP-flag.svg[1]ಎಲ್.ಕೆ.ಅಡ್ವಾಣಿಯವರ ಗೈರು ಹಾಜರಿಯಲ್ಲಿ ಮೋದಿಗೆ ಪಟ್ಟ ಕಟ್ಟಲಾಗಿದೆ. ಪಕ್ಷದ ಆಂತರಿಕ ವಲಯದಲ್ಲಿ ಮೋದಿಗೆ ಕೊಟ್ಟಿರುವ ಈ ಜವಾಬ್ದಾರಿ ಬಗ್ಗೆ ದ್ವಂದ್ವ ನಿಲುವುಗಳಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಂದು ಬಿಜೆಪಿಗೆ ಮೋದಿಯನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಸಧ್ಯ ಬಿಜೆಪಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ ಮೋದಿ ಮಾತ್ರ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ.

ನರೇಂದ್ರ ಮೋದಿಯನ್ನು ಎರಡು ರೀತಿಯಲ್ಲಿ ನೋಡಬೇಕಾಗಿದೆ. ಮೋದಿ ಅವರ ನಿಲುವು ಪಕ್ಷದ ಹಿನ್ನೆಲೆಯಲ್ಲಿ ಮತ್ತು ಮೋದಿ ಅವರ ಕಾರ್ಯವೈಖರಿ ಸಾರ್ವಜನಿಕವಾಗಿ. ಈ ಎರಡನ್ನೂ ಸಮೀಕರಿಸುವಂತಿಲ್ಲ. ಎರಡೂ ಭಿನ್ನವಾದವು.

ಗೋಧ್ರಾ ಘಟನೆಯನ್ನು ಅವಲೋಕಿಸಿದಾಗ ನರೇಂದ್ರ ಮೋದಿ ಹೆಚ್ಚು ಜನರ ದ್ವೇಷಕ್ಕೆ ಗುರಿಯಾಗುತ್ತಾರೆ. ಅಲ್ಲಿ ಅವರ ಪಾತ್ರವನ್ನು ಜನ ಒಪ್ಪುವುದಿಲ್ಲ. ನರಮೇಧಕ್ಕೆ ಮೋದಿಯೇ ಕಾರಣ, ಅವರ ನಿಲುವುಗಳೇ ಕಾರಣವೆಂದು ಹೇಳುವ ಕಾರಣಕ್ಕೆ ಓರ್ವ ವಿಲನ್ ರೀತಿಯಲ್ಲಿ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಿಂದಾಗಿಯೇ ಎನ್‌ಡಿಎ ಮೈತ್ರಿಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಒಪ್ಪುವುದಕ್ಕೆ ಅಲ್ಲಿರುವ ಮಿತ್ರ ಪಕ್ಷಗಳ ಮನಸ್ಸುಗಳು ಸಿದ್ಧವಿಲ್ಲ. ಇದು ನರೇಂದ್ರ ಮೋದಿಗೆ ರಾಷ್ಟ್ರಮಟ್ಟದಲ್ಲಿ ಬಲುದೊಡ್ಡ ಹಿನ್ನಡೆ. ಗೋಧ್ರಾ ಘಟನೆಯಲ್ಲದಿದ್ದರೆ ಎನ್ನುವುದು ಬೇರೆಯೇ ಮಾತು.

ಗುಜರಾತ್ ಅಭಿವೃದ್ಧಿ ಮತ್ತು ಮೋದಿಯ ನಡೆಗಳನ್ನು ಅವಲೋಕಿಸಿದಾಗ ಜನಕಲ್ಯಾಣವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಗುಜರಾತ್ ಭೂಕಂಪದಿಂದ ನಲುಗಿದ ಮೇಲೆ ನಿರಂತರವಾಗಿ ಮೋದಿಯ ಹೆಜ್ಜೆಗುರುತುಗಳು ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಆ ಕಾರಣಕ್ಕಾಗಿ ಮೋದಿಯನ್ನು ಮೆಚ್ಚುತ್ತಾರೆ. ಒಂದು ರಾಜ್ಯದ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಒಂದು ದೇಶದ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು, ಆದರೆ ಅದು ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ ಬರುತ್ತದೆಂದು ಹೇಳಲಾಗದು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡೇ ಮುನ್ನಡಿಯಿಡಬೇಕಾಗಿರುವುದರಿಂದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಸಮಸ್ಯೆಗಳನ್ನು ಒಳಗೊಂಡಿರುವುದರಿಂದ ಗುಜರಾತ್ ಮಾದರಿಯನ್ನು ಅಳವಡಿಸುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿ ಮೋದಿ ಅಭಿವೃದ್ಧಿ ಎನ್ನುವುದು ಸಮಗ್ರ ರಾಷ್ಟ್ರದ ಚಿಂತನೆ ಹೊರತು ಅದು ಅನುಷ್ಠಾನದ ಮಾದರಿಯಾಗುವುದಿಲ್ಲ. ಹೀಗೆ ಹೇಳಿದರೆ ಮೋದಿ ಬೆಂಬಲಿಗರು ಮೆಚ್ಚುವುದಿಲ್ಲ, ಆದರಿಂದ ಬಹಳ ಮಂದಿ ಮೋದಿಯನ್ನು ವಿಮರ್ಶಾತ್ಮಕವಾಗಿ ನೋಡದೆ ಭಾವನಾತ್ಮಕವಾಗಿ ಮೆಚ್ಚುತ್ತಾರೆ. ಇದು ಮೋದಿ ಅಭಿವೃದ್ಧಿ ಚಿಂತನೆಗೆ ಅದರಲ್ಲೂ ಅಖಂಡ ಭಾರತವನ್ನು ಗಮನದಲ್ಲಿಟ್ಟುಕೊಂಡು ನೋಡುವ ಬದಲು ಗುಜರಾತ್ ರಾಜ್ಯಕ್ಕೆ ಸೀಮಿತವಾಗುವಂತೆ ಮಾಡಲಾಗುತ್ತಿದೆ.

ನರೇಂದ್ರ ಮೋದಿಯನ್ನು ಬಿಜೆಪಿಯೇತರ ಪಕ್ಷಗಳು ವಿರೋಧಿಸುವುದಕ್ಕೆ ಹಲವು ಕಾರಣಗಳಿರುತ್ತವೆ. Narendra_Modiಆದರೆ ಬಿಜೆಪಿಯಲ್ಲೇ ಅವರನ್ನು ವಿರೋಧಿಸುವುದಕ್ಕೆ ಇರುವ ಕಾರಣಗಳು ಅತ್ಯಂತ ಅಪಾಯಕಾರಿ. ಬಿಜೆಪಿಯಲ್ಲಿ ಸಾಮೂಹಿಕವಾಗಿ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆಂದರೆ ಅದು ಆತ್ಮವಂಚನೆಯಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲೂ ಎಲ್ಲರೂ ಒಪ್ಪುವ ನಾಯಕರು ಖಂಡಿತಕ್ಕೂ ಇಲ್ಲ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಎಲ್.ಕೆ.ಅಡ್ವಾಣಿ ಅವರ ಹಿರಿತನಕ್ಕೆ, ಅವರ ಮುತ್ಸದ್ದಿತನಕ್ಕೆ ಗೌರವ ಸಿಗುತ್ತದೆ. ಆದರೆ ಅಲ್ಲೂ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಇದೇ ಸ್ಥಿತಿ ನರೇಂದ್ರ ಮೋದಿ ಅವರಿಗೂ.

2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ತನ್ನ ಸಾರಥಿಯೆಂದು ನರೇಂದ್ರ ಮೋದಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಮೋದಿಯನ್ನು ಬಿಟ್ಟರೆ ಆ ಪಕ್ಷದೊಳಗೇ ಮೋದಿಯನ್ನು ಮೀರಿಸುವಷ್ಟು ಮತ್ತು ದೇಶದ ಮುಂದೆ ತಂದು ನಿಲ್ಲಿಸುವಷ್ಟರಮಟ್ಟಿಗೆ ವರ್ಚಸ್ಸಿರುವವರಿಲ್ಲ. ಇದು ಬಿಜೆಪಿಯ ಮುಂದಿರುವ ಬಹುದೊಡ್ಡ ಸವಾಲು. ಎಲ್.ಕೆ.ಅಡ್ವಾಣಿ ಅವರನ್ನು ಮತ್ತೊಂದು ಅವಧಿಗೆ ಮುಂಚೂಣಿಗೆ ತಂದು ಪ್ರಯೋಗ ಮಾಡುವುದಕ್ಕೆ ಆ ಪಕ್ಷದಲ್ಲಿರುವವರೇ ಸಿದ್ಧರಿಲ್ಲ. ಆದರೆ ಬಿಜೆಪಿ ಆತ್ಮಪೂರ್ವಕವಾಗಿ ಮತ್ತೊಂದು ಅವಕಾಶವನ್ನು ಅಡ್ವಾಣಿಗೆ ಕೊಡುವಷ್ಟು ಔದಾರ್ಯ ತೋರಿಸಿದ್ದರೆ ಅಡ್ವಾಣಿಯವರೂ ನಿರಾಕರಿಸುವಂಥ ಸನ್ಯಾಸಿ ಮನಸ್ಥಿತಿಯವರಲ್ಲ.

ಈಗ ಬಿಜೆಪಿ ಮಟ್ಟಿಗೆ ಯಾರು ಸಾರಥಿ ಎನ್ನುವುದು ಮುಗಿದ ಅಧ್ಯಾಯವಾದರೂ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಆ ಪಕ್ಷದ ಮುಂದಿರುವ ದೊಡ್ಡ ಸವಾಲು, ಇದು ಕಾಂಗ್ರೆಸ್‌ಗೆ ಸಿಕ್ಕಿರುವ ಪ್ರಬಲ ಅಸ್ತ್ರವೂ ಹೌದು.

One thought on “ಬಿಜೆಪಿಗೆ ಮೋದಿ ಅನಿವಾರ್ಯ ಸಾರಥಿ

Leave a Reply

Your email address will not be published. Required fields are marked *