ಮೊರಾರ್ಜಿದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನೇಮಕಾತಿಯಲ್ಲಿ ಅಕ್ರಮ

[ಈ ಮೇಲ್ಕಂಡ ವಿಷಯವಾಗಿ ಬಡವರು ಮತ್ತು ಹಿಂದುಳಿದವರಿಗಾಗಿ ಸ್ಥಾಪಿಸಲ್ಪಟ್ಟಿರುವ ಈ ಶಾಲೆಗಳು ಯಶಸ್ವಿಯಾಗಬೇಕೆಂದು ಬಯಸುವ ಜನ ಈ ವಸತಿ ಶಾಲೆಗಳ ನೇಮಕಾತಿಯಲ್ಲಿಯ ಅಕ್ರಮ ಮತ್ತು ಭ್ರಷ್ಟಾಚಾರವನ್ನು ರಾಜ್ಯದ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ, ಸಮಾಜ ಕಲ್ಯಾಣ ಸಚಿವ, ಮತ್ತಿತರ ಪ್ರಮುಖರಿಗೆ ಪತ್ರ ಬರೆದಿದ್ದಾರೆ. ಇಲ್ಲಿ ಪ್ರಾಮಾಣಿಕರಿಗೆ ಶಿಕ್ಷೆ ಮತ್ತು ಅನ್ಯಾಯವಾಗುತ್ತಿದೆಯಷ್ಟೇ ಅಲ್ಲ, ಬಹುಕೋಟಿಗಳ ಅಕ್ರಮ ಮತ್ತು ಹಗರಣ ಇದು. ಆ ಪತ್ರದ ಸಾರಾಂಶ ಇಲ್ಲಿದೆ. ಈ ವಿಷಯವನ್ನು ಇತರೆ ಮಾಧ್ಯಮ ಮಿತ್ರರು ಕೈಗೆತ್ತಿಕೊಳ್ಳಬೇಕೆಂದು ವರ್ತಮಾನ.ಕಾಮ್ ವತಿಯಿಂದ ಕೋರುತ್ತೇವೆ.]

ವಿಷಯ: ಮೊರಾರ್ಜಿದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಮಾಡಿದ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳನ್ನು ತಮ್ಮ ಗಮನಕ್ಕೆ ತರುತ್ತಾ ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರ ಅನುಮಾನಾಸ್ಪದ ನಡವಳಿಕೆಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೋರಿಕೆ

ಮಾನ್ಯರೆ,

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ೨೦೧೧ ರಲ್ಲಿ ಖಾಯಂ ಶಿಕ್ಷಕರನ್ನು ನೇಮಿಸುವಾಗ ಅಲ್ಲಿಯವರೆಗೆ ಕಾರ್ಯನಿರ್ವಹಿಸಿದ ಜಿಲ್ಲಾ ಪಂಚಾಯತ್ ಮಟ್ಟದ ಗುತ್ತಿಗೆ ಆಧಾರದ ಶಿಕ್ಷಕರಿಗೆ ಕೃಪಾಂಕವನ್ನು ನೀಡಿರಲಿಲ್ಲ. ಈ ವಿಚಾರವನ್ನು ಗುತ್ತಿಗೆ ಶಿಕ್ಷಕರು ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆನಂತರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರ ಈ ಕೆಳಗಿನ ನಡವಳಿಕೆಗಳು ಅಕ್ರಮ ಮತ್ತು ಅನುಮಾನಾಸ್ಪದವಾಗಿ ಕಂಡು ಬರುತ್ತಿವೆ.

  1. ಉಚ್ಛನ್ಯಾಯಾಲಯವು ನೀಡಿದ ಮಧ್ಯಂತರ ಆದೇಶದಲ್ಲಿ ಜಿಲ್ಲಾ ಪಂಚಾಯತ್ಗಳ ಮೂಲಕ ಈ ಮೊದಲೇ ನೇಮಕ ಮಾಡಿದ ಹೊರಗುತ್ತಿಗೆ ಶಿಕ್ಷಕರ ಪರವಾಗಿ ಮಧ್ಯಂತರ ಆದೇಶನೀಡಿ, ನೇಮಕಾತಿಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರತಕ್ಕದ್ದೆಂದು ತಿಳಿಸಿದ್ದರೂ ಸಹ ನ್ಯಾಯಾಲಯದ ತೀರ್ಪು ಬರುವ ಮೊದಲೇ ಹೊಸಶಿಕ್ಷಕರ ನೇಮಕಾತಿ ನಡೆಸಿರುವುದು.
  2. ನ್ಯಾಯಾಲಯವು ಸೇವಾ ಮುಂದುವರಿಕೆಯನ್ನು ನೀಡಿದ ಶಿಕ್ಷಕರ ಸ್ಥಾನವನ್ನು ಖಾಲಿ ಬಿಡದೇ ಅದೇ ಜಾಗಕ್ಕೆ ಎರಡನೇ ಅಭ್ಯರ್ಥಿಯಾಗಿ ಖಾಯಂ ಶಿಕ್ಷಕರನ್ನು ನೇಮಿಸಿರುವುದು.
  3. ಒಂದೇ ಹುದ್ದೆಯಲ್ಲಿ ಇಬ್ಬರು ಕೆಲಸ ಮಾಡುವುದರಿಂದ ಅವರ ವೇತನ ಇತ್ಯಾದಿ ಬಾಬ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗುತ್ತದೆಂದು ತಿಳಿದೂ ಸಹ ಸುಮಾರು ಏಳುನೂರು ಜನ ಶಿಕ್ಷಕರನ್ನು ಒಂದೇ ಹುದ್ದೆಯಲ್ಲಿ ಇಬ್ಬಿಬ್ಬರು ಕೆಲಸ ಮಾಡುವಂತೆ ನೇಮಿಸಿರುವುದು.
  4. ಹೊಸ ನೇಮಕಾತಿಯ ಕೌನ್ಸೆಲಿಂಗ್‌ಗೆ ಕಾಲಾವಕಾಶ ಕೊಡದೆ, ಮೊಬೈಲ್ ಮೂಲಕ ಸಂದೇಶ ನೀಡಿ ಅವಸರದಲ್ಲಿ ಕರೆಸಿಕೊಂಡು ರಾತ್ರಿ ಹೊತ್ತಿನಲ್ಲೂ ಕೌನ್ಸೆಲಿಂಗ್ ನಡೆಸಿ ನೇಮಕಾತಿ ನೀಡಿರುವುದು.
  5. ಹೊಸನೇಮಕಾತಿಯ, ನೇಮಕಾತಿ ಆದೇಶದಲ್ಲೇ – ನೇಮಕಾತಿಯು ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರತಕ್ಕದ್ದೆಂದು ತಿಳಿಸಿದ್ದರೂ ಸಹ ನ್ಯಾಯಾಲಯದ ತೀರ್ಪು ಬಂದಾಗ ಅದನ್ನು ಪಾಲಿಸದೇ ಇದ್ದು, ವಿಭಾಗೀಯ ಪೀಠಕ್ಕೆ ಸ್ವಇಚ್ಛೆಯಿಂದ, ಸ್ವಯಂಪ್ರೇರಿತರಾಗಿ ಮೇಲ್ಮನವಿ ಸಲ್ಲಿಸಿರುವುದು. ನ್ಯಾಯಾಲಯದ ಆದೇಶದಿಂದ ತೊಂದರೆಗೊಳಗಾಬಹುದಾದ ಹೊಸ ಶಿಕ್ಷಕರು ಯಾವುದೇ ಬಹಿರಂಗಬೇಡಿಕೆಯನ್ನೂ ಮಂಡಿಸದೇ, ಯಾವುದೇ ರೀತಿಯ ಒತ್ತಡವನ್ನೂ ತಾರದೇ ಇದ್ದಾಗಲೂ, ಕಾರ್ಯನಿರ್ವಾಹಕ ನಿರ್ದೇಶಕರು ಈರೀತಿ ಸ್ವಯಂಪ್ರೇರಿತರಾಗಿ ಮೇಲ್ಮನವಿ ಸಲ್ಲಿಸಿರುವುದು ಅವರ ಈ ಕೃತ್ಯದ ಹಿಂದೆ ನಡೆದಿರಬಹುದಾದ ಅವ್ಯವಹಾರಗಳನ್ನು ಸೂಚಿಸುತ್ತದೆ.
  6. ನ್ಯಾಯಾಲಯದ ತೀರ್ಪು ಹೊರಗುತ್ತಿಗೆ ಶಿಕ್ಷಕೇತರ ಸಿಬ್ಬಂದಿ ವಿರುದ್ಧ ಬಂದಿದ್ದಾಗ ಅವರಿಗೆ ಮೇಲ್ಮನವಿ ಯನ್ನು ಸಲ್ಲಿಸಲೂ ಸಹ ಅವಕಾಶ ಕೊಡದೆ, ಕೇವಲ ಎರಡೇ ದಿನಗಳಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು, ಆದರೆ ವಿಭಾಗೀಯ ಪೀಠವು ಹೊರಗುತ್ತಿಗೆ ಶಿಕ್ಷಕರ ಪರವಾಗಿ ತೀರ್ಪು ನೀಡಿದಾಗ ಇಂದು ಕಾರ್ಯನಿರ್ವಹಿಸುತ್ತಿರುವ- ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸದೆ, ನ್ಯಾಯಾಲದ ಆದೇಶವನ್ನೇ ಬದಿಗಿಟ್ಟು ಅದರಿಂದ ತಪ್ಪಿಸಿಕೊಳ್ಳಲು ನೆಪಗಳನ್ನು ಹೇಳುತ್ತಿರುವುದು. ಮತ್ತು ಈ ಮೂಲಕ ಅವರು ಆಡಳಿತಾಧಿಕಾರಿಯಾಗಿ ನ್ಯಾಯ ಒದಗಿಸುವ ಬದಲಾಗಿ ಹೊಸದಾಗಿ ನೇಮಕಗೊಂಡ ಶಿಕ್ಷಕರ ಪರವಾಗಿ ವರ್ತಿಸುತ್ತಿರುವುದು, ಇದರ ಹಿಂದೆ ದೊಡ್ಡ ಪ್ರಮಾಣದ ಅಕ್ರಮ-ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದೆ.
  7. ನ್ಯಾಯಾಲಯದಿಂದ ಸೇವಾಮುಂದುವರಿಕೆಯನ್ನು ಪಡೆದ ಹೊರಗುತ್ತಿಗೆ ಶಿಕ್ಷಕರಿಗೆ ಕಾಲಕಾಲಕ್ಕೆ ವೇತನ ನೀಡದೇ ಅವರು ಕಾನೂನು ಹೋರಾಟ ನಡೆಸದಂತೆ ಅವರ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸಿರುವುದು. ಹೊಸದಾಗಿ ನೇಮಕಗೊಂಡವರಿಗೆ ನ್ಯಾಯಾಲಯದ ತೀರ್ಪುಬರುವ ಮೊದಲೇ ವೇತನ ಪಾವತಿ ಮಾಡಿ ಅವರ ಸೇವಾ ದಾಖಲಾತಿಯನ್ನು ತೆರೆದಿರುವುದು.
  8. ಹೊಸನೇಮಕಾತಿಯಲ್ಲಿ, ಕೆಲವು ನೇಮಕಾತಿಗಳಿಗೆ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶವನ್ನು ನೀಡದೇ ಕಛೇರಿಯಲ್ಲಿರುವ ಇತರರು ಆದೇಶ ನೀಡಿ, ಯಾರು ಬೇಕಾದರೂ ಆದೇಶ ನೀಡಬಹುದು ಎಂಬಂತೆ ವರ್ತಿಸಿರುವುದು.
  9. ದಿನಾಂಕ ೨೨/೨/೨೦೧೩ ರಂದು ಹೊಸದಾಗಿ ನೇಮಕಗೊಂಡ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಕಾರ್ಯನಿರ್ವಾಹಕ ನಿರ್ದೇಶಕರು ತರಬೇತಿಯ ಹೆಸರಿನಲ್ಲಿ ಕರೆಸಿಕೊಂಡು, ಅವರ ಪ್ರೊಬೇಷನರಿ ಅವಧಿ ಮುಗಿಯುವ ಮೊದಲೇ ಸಂಘ ರಚಿಸಿಕೊಂಡು, ಈಗಾಗಲೇ ಇರುವ ಗುತ್ತಿಗೆ ಶಿಕ್ಷಕರ ವಿರುದ್ಧ ಹೋರಾಡಲು ಚಿತಾವಣೆ ನೀಡಿರುವುದು. ಈ ಶಿಕ್ಷಕರು ಸಂಘವನ್ನು ರಚಿಸಿಕೊಂಡು ಹೇಗೆ ಹೋರಾಡಬೇಕೆಂದು ಸಲಹೆನೀಡಲು, ಕಾರ್ಯನಿರ್ವಾಹಕ ನಿರ್ದೇಶಕರು ತಮ್ಮ ವಕೀಲರಾದ ಮಧುಸೂಧನ್ ಮತ್ತು ತಮ್ಮ ಅಧೀನ ಸಿಬ್ಬಂದಿಯಾದ ಶ್ರೀ ಗಂಗಪ್ಪಗೌಡ ಅವರನ್ನು ಸಭೆಗೆ ಕಳುಹಿಸಿಕೊಟ್ಟಿರುವುದು. ಹೀಗೆ ರಚಿಸಲ್ಪಟ್ಟ ಸಂಘದ ಎಲ್ಲ ಮಾಹಿತಿಗಳೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟವಾಗಿರುವುದು, ಈ ಎಲ್ಲಾ ಕಾರಣಗಳಿಂದ, ಈ ಶಿಕ್ಷಕರ ಸಂಘವನ್ನು ಕಾರ್ಯನಿರ್ವಾಹಕ ನಿರ್ದೇಶಕರೇ ಹುಟ್ಟುಹಾಕಿರುವ ಅನುಮಾನವಿದೆ.
  10. ಹೊಸ ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕ ಅಸಹಜವೆನ್ನಿಸುವಷ್ಟು ಅತಿಯಾಗಿದೆ. ಇದು ತಲಾ ಒಂದು ಸಾವಿರ ರೂಪಾಯಿಗಳಾಗಿದ್ದು ಸುಮಾರು ೪೦೦೦ ಶಿಕ್ಷರಿಂದ ನಲುವತ್ತು ಲಕ್ಷರೂಪಾಯಿಗಳಷ್ಟು ಹಣ ಸಂಗ್ರಹವಾಗಿದ್ದು ಇದರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಪಾತ್ರವೇನೆಂದು ತನಿಖೆ ಮೂಲಕವೇ ಅರಿಯಬೇಕಾಗಿದೆ. ಮತ್ತು ಈ ಕಾರ್ಯನಿರ್ವಾಹಕ ನಿರ್ದೇಶಕರು ಸದಾ ಕಾಲ ನ್ಯಾಯಾಲಯದಿಂದ ತಮ್ಮ ಪರವಾಗಿ ಆದೇಶ ಪಡೆದಿರುವ ಶಿಕ್ಷಕರ ವಿರೋಧಿಯಾಗಿಯೂ ಮತ್ತು ಹೊಸ ಶಿಕ್ಷಕರ ಪರಮಾಪ್ತನಾಗಿಯೂ ನಡೆದುಕೊಳ್ಳುತ್ತಿರುವ ನಡೆವಳಿಕೆಯೊಂದಿಗೆ ತಾಳೆ ನೋಡಿ ತನಿಖೆ ನಡೆಸಬೇಕಾಗಿದೆ.
  11. ದಿನಾಂಕ ೩/೬/೨೦೧೩ ರ ವಿಜಯವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡುವಾಗ ಹೊರಗುತ್ತಿಗೆ ಶಿಕ್ಷಕರ ಸಂಖ್ಯೆ ಕಡಿಮೆ ಇತ್ತು. ಅದೀಗ ಜಾಸ್ತಿಯಾಗಿರುವುದರಿಂದ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳು ಹೆಚ್ಚುವರಿಯಾಗಿ ಬೇಕಾಗುತ್ತವೆಂಬ ಅರ್ಥದಲ್ಲಿ ಹೇಳಿಕೆ ನೀಡಿರುತ್ತಾರೆ. ಆದರೆ ನ್ಯಾಯಾಲಯದ ವಿಭಾಗೀಯ ಪೀಠವು ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಶಿಕ್ಷಕರನ್ನು ಭರ್ತಿಮಾಡಿ ಎಂದು ಹೇಳಿಲ್ಲ, ಬದಲಾಗಿ ಹುದ್ದೆಗಳು ಭರ್ತಿಯಾಗಿಯೇ ಇದ್ದರೂ ಹೊರಗುತ್ತಿಗೆ ಶಿಕ್ಷಕರಿಗೆ ಕೃಪಾಂಕಗಳನ್ನು ನೀಡಿದಾಗ ಯಾರ್‍ಯಾರು ಹೆಚ್ಚು ಅಂಕಗಳನ್ನು ಪಡೆಯುತ್ತಾರೋ ಅಂತವರನ್ನು ಭರ್ತಿಮಾಡಿಕೊಳ್ಳತಕ್ಕದ್ದೆಂದು ಹೇಳಿದೆ. ಒಂದೇ ಒಂದು ಹುದ್ದೆಗೆ ನೂರಾರು ಜನ ಅಭ್ಯರ್ಥಿಗಳಿದ್ದರೂ ಕೃಪಾಂಕವನ್ನು ಸೇರಿಸಿದಾಗ ಯಾರು ಹೆಚ್ಚಿನ ಅಂಕ ಪಡೆಯತ್ತಾರೋ ಅವರನ್ನೇ ನೇಮಕ ಮಾಡಿಕೊಳ್ಳತಕ್ಕದ್ದೆಂದು ನ್ಯಾಯಾಲಯದ ಆಶಯವಾಗಿದೆ. ನ್ಯಾಯಾಲಯದ ಆದೇಶವನ್ನೇ ತಿರುಚಿ ವ್ಯಾಖ್ಯಾನಿಸಲು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪ್ರಚೋದನೆ ನೀಡಿದ ಶಕ್ತಿ ಯಾವುದು ?
  12. ಹೊರ ಗುತ್ತಿಗೆ ಶಿಕ್ಷಕರನ್ನು ಸರ್ಕಾರದ ನಿರ್ದೇಶನದ ಅನುಸಾರ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ/ಜಿಲ್ಲಾಧಿಕಾರಿಗಳು ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ ಸಮಿತಿಗಳು ಕೆಲಸ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯದ ಶಿಕ್ಷಕರು ಇದ್ದಾರೆ. ನೇಮಕಾತಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಅವರಿಗೆ ಯಾವುದೇ ರೀತಿಯ ಅನುಕೂಲ ಮಾಡಿಕೊಟ್ಟಿಲ್ಲ. ಆದರೆ ನ್ಯಾಯಾಲಯವು ದಲಿತರಿಗೆ ಅನುಕೂಲ ಮಾಡಿಕೊಟ್ಟಾಗಲೂ ಸಹ ಕಾರ್ಯನಿರ್ವಾಹಕ ನಿರ್ದೇಶಕರು ದಲಿತರಿಗೆ ಸಿಕ್ಕಿರುವ ಅವಕಾಶವನ್ನು ನಿರಾಕರಿಸುವುದಕ್ಕೆ ಆದ್ಯತೆ ನೀಡಲು ಕಾರಣವಾಗಿರುವ ಅಂಶಗಳೇನು ?

ಈ ಮೇಲಿನ ಎಲ್ಲಾ ಅನುಮಾನಗಳಿಗೆ ಸಂಬಂಧಿಸಿ ನಮ್ಮಲ್ಲಿರುವ ದಾಖಲೆಗಳನ್ನು ಈಗಲೇ ನೀಡಿದರೆ ದಾಖಲೆಗಳನ್ನೇ ತಿದ್ದುವ ಇಲ್ಲವೇ ಮುಂದೆ ಅವು ಲಭ್ಯವಾಗದಂತೆ ಮಾಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈಗ ನಾವು ಅದನ್ನು ತಮಗೆ ಸಲ್ಲಿಸುತ್ತಿಲ್ಲ. ಆದರೆ ತನಿಖೆಯನ್ನು ನ್ಯಾಯಾಲಯದ ಮೂಲಕವೇ ಮಾಡಿಸಬೇಕಾದ ಅನಿವಾರ್ಯತೆ ಬಂದರೆ ಆ ಸಂದರ್ಭದಲ್ಲಿ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವವರಿದ್ದೇವೆ. ಅದಕ್ಕೂ ಮೊದಲು ತಾವು ಆದ್ಯತೆ ಮೇರೆಗೆ, ಇಲ್ಲಿ ನಡೆದಿರುವ ಭಾರಿ ಪ್ರಮಾಣದ ಅಕ್ರಮ- ಅವ್ಯವಹಾರಗಳ ಕುರಿತು ಸೂಕ್ತ ತನಿಖೆಗೆ ಆದೇಶ ನೀಡಬೇಕಾಗಿ ಕೋರುತ್ತೇವೆ.

ಇತಿ ತಮ್ಮ ವಿಶ್ವಾಸಿಗಳು,
(ಹಲವರ ಸಹಿ ಇದೆ.)

Leave a Reply

Your email address will not be published. Required fields are marked *