ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿದ ದಂಡನಾಯಕ

– ಚಿದಂಬರ ಬೈಕಂಪಾಡಿ

ಬಿಜೆಪಿಯ ಎಲ್ಲಾ ಹುದ್ದೆಗಳಿಗೆ ಎಲ್.ಕೆ.ಅಡ್ವಾಣಿ ಅವರ ರಾಜೀನಾಮೆ ಸೋಮವಾರದ ದೊಡ್ಡ ಸುದ್ದಿ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆರು ದಶಕಗಳ ಅಡ್ವಾಣಿ ಅವರ ರಾಜಕೀಯವನ್ನು , ರಾಜಕಾರಣಿಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತಿರುವ ಮಾಧ್ಯಮ ಮಂದಿಯ ಪೈಕಿ ಬಹಳ ಮಂದಿ ಈಗ ಸಕ್ರಿಯರಲ್ಲ. ಅಷ್ಟೊಂದು ಸುದೀರ್ಘ ಅವಧಿಯ ರಾಜಕೀಯ ಒಳನೋಟ ಹೊಂದಿರುವ ಅಡ್ವಾಣಿ ಏಕಾಏಕಿ ರಾಜೀನಾಮೆ ಕೊಟ್ಟಿರುವುದು Advaniಮಾಧ್ಯಗಳಿಗೆ ಬ್ರೇಕಿಂಗ್ ನ್ಯೂಸ್ ಹೊರತು ಅವರ ಪಕ್ಷದಲ್ಲಿ ಅವರನ್ನು ಹತ್ತಿರದಿಂದ ನೋಡುತ್ತಿದ್ದವರಿಗೆ ಅಂಥದ್ದೇನೂ ಶಾಕಿಂಗ್ ನ್ಯೂಸ್ ಅಲ್ಲ. ಆ ಕೆಲಸವನ್ನು ಅಡ್ವಾಣಿ ಬಹಳ ಹಿಂದೆಯೇ ಮಾಡಬೇಕಾಗಿತ್ತು ಎನ್ನುವವರೇ ಹೆಚ್ಚು. ಎಂಟು ವರ್ಷಗಳ ಅವಧಿಯಲ್ಲಿ ಅಡ್ವಾಣಿಯವರು ಮೂರು ಸಲ ರಾಜೀನಾಮೆ ಕೊಟ್ಟಿರುವುದರಿಂದ ಮನವೊಲಿಕೆಗೆ ಅವಕಾಶವಿದೆ ಎನ್ನುವ ವಿಶ್ವಾಸವೂ ಇದೆ.

ಅಡ್ವಾಣಿ ಅವರ ರಾಜೀನಾಮೆ ನಿರ್ಧಾರ ಅವರ ಸ್ವಂತದ್ದು ಅಂದುಕೊಂಡರೂ, ಅದು ಸರಿಯೆಂದು ಹೇಳಬಹುದಾದರೂ ಅವರಂಥ ಹಿರಿಯರು ರಾಜೀನಾಮೆ ಕೊಡಲು ಆಯ್ಕೆ ಮಾಡಿಕೊಂಡ ಸಂದರ್ಭ ಸೂಕ್ತವಲ್ಲ ಎನ್ನುವುದು. ಅವರು ಎತ್ತಿರುವ ಮೂಲಭೂತ ಪ್ರಶ್ನೆಯೂ ಕೂಡಾ ಹಳೆತಲೆಮಾರಿನವರಿಗೆ ಸರಿಯೆಂದು ಕಂಡು ಬಂದರೂ ಈಗಿನ ಪೀಳಿಗೆಗೆ ರುಚಿಸುವುದಿಲ್ಲ.

ನರೇಂದ್ರ ಮೋದಿ ಅವರನ್ನು ತಮ್ಮ ಆಕ್ಷೇಪಣೆಯ ಹೊರತಾಗಿಯೂ ಸರ್ವಸಮ್ಮತವಾಗಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಡ್ವಾಣಿ ಅವರ ಈ ನಿರ್ಧಾರಕ್ಕೆ ಕಾರಣವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಹಾಗೆಂದು ಮೋದಿ ಅವರಿಗೆ ಯಾವುದೇ ಹುದ್ದೆಯನ್ನೇ ಕೊಡಬಾರದೆಂದು ಅವರು ವಾದಿಸಿರಲಿಲ್ಲ.
ರಾಜಕೀಯದಲ್ಲಿ ಪಕ್ಷ ವ್ಯಕ್ತಿಕೇಂದ್ರೀಕೃತವಾಗುವುದು ಅಪಾಯಕಾರಿ. ಯಾವುದೇ ಸಂದರ್ಭದಲ್ಲೂ ಹೀಗಾಗಬಾರದು. ಈ ಮಾತು ಸ್ವತ: ಅಡ್ವಾಣಿಯವರಿಗೂ ಅನ್ವಯಿಸುತ್ತದೆ. ಅಲ್ಲವೆಂದಾದರೆ ಅಡ್ವಾಣಿ ತಾವು ವಹಿಸಿಕೊಂಡಿದ್ದ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ ಕೂಡಲೇ ಬಿಜೆಪಿ ನಾಯಕರು ಇಷ್ಟೊಂದು ಘಾಸಿಗೊಳ್ಳುವ ಅಗತ್ಯವೇನಿತ್ತು?. ಅಡ್ವಾಣಿ ನಿರ್ಗಮಿಸಿದರೆ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬಹುದು ಎನ್ನುವ ಹಲವು ಆಯ್ಕೆಗಳು ಬಿಜೆಪಿಯಲ್ಲಿರಬೇಕಿತ್ತು, ಆದರೆ ಅಲ್ಲಿ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರನ್ನು ಹೊರತು ಪಡಿಸಿದರೆ ಬಹುದೊಡ್ಡ ನಿರ್ವಾತ ಬಿಜೆಪಿಯಲ್ಲಿದೆ. ಯಾವ ಕಾರಣಕ್ಕೆ ಇಂಥ ನಿರ್ವಾತ ಉಂಟಾಗಿದೆ ಅಂದರೆ ಬಿಜೆಪಿ ಕೆಲವೇ ಕೆಲವು ವ್ಯಕ್ತಿಕೇಂದ್ರೀಕೃತವಾಗಿ ಬೆಳೆಯಿತು ಎನ್ನಬಹುದು ಅಥವಾ ನಿರ್ಧಾರಗಳು ಕೆಲವೇ ವ್ಯಕ್ತಿಗಳ ಮೂಲಕ ಆದವು, ಅವುಗಳೇ ಮುಂದೆ ಪಕ್ಷದ ನಿರ್ಧಾರಗಳೆನಿಸಿದವು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಇಂಥ ನಿರ್ವಾತವನ್ನು ಅಡ್ವಾಣಿಯವರು ಗುರುತಿಸಿದ್ದಾರೆ. ಅದನ್ನು ತುಂಬಬಲ್ಲವರು ಎನ್ನುವ ಕಾರಣಕ್ಕಾಗಿಯೇ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಉಮಾಭಾರತಿ ಹೀಗೆ ಕನಿಷ್ಠ ೨೫ ಮಂದಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ್ದಾರೆ. ಇವರು ಎಂದೂ ಅಡ್ವಾಣಿಯವರ ಮಾತನ್ನು ಮೀರಿದವರಲ್ಲ. ಗೋಧ್ರಾ ಘಟನೆ ನಡೆದ ಮೇಲೆ ಮೋದಿ ಅಧಿಕಾರಕ್ಕೆ ಕುತ್ತು ಬರುವಂಥ ಸಂದರ್ಭದಲ್ಲೂ ಇದೇ ಉಕ್ಕಿನಮನುಷ್ಯ ಬೆಂಬಲಕ್ಕೆ ನಿಂತು ಅಧಿಕಾರದಲ್ಲಿ ಉಳಿಸಿದ್ದವರು ಎನ್ನುವುದನ್ನು ಮರೆಯುವುದಾದರೂ ಹೇಗೆ?. ಆದರೆ ಶಿಷ್ಯನೇ ಬಿಜೆಪಿಯ ನಿರ್ವಾತ ತುಂಬುವಂಥ ಸಂದರ್ಭದಲ್ಲಿ ಅಡ್ವಾಣಿಗೆ ಬೇಸರ ಯಾಕೆ ? ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಅಡ್ವಾಣಿ ಅನೇಕ ಸಂದರ್ಭಗಳಲ್ಲಿ ಎಡವಿದ್ದಾರೆ. ಹಾಗೆ ಎಡವಿದ್ದೆಲ್ಲವೂ ತಮ್ಮ ಶಿಷ್ಯರ ಕಾರಣಕ್ಕೆ. ಉಮಾಭಾರತಿ, ವಸುಂದರರಾಜೇ, ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ನಿತಿನ್ ಗಡ್ಕರಿ ನಿಯೋಜನೆ ಹೀಗೆ ಹಲವು ಘಟನೆಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. Narendra_Modiಸ್ವತ: ಗುಜರಾತ್‌ನಲ್ಲೂ ಅಡ್ವಾಣಿ ಬಿಜೆಪಿಯ ಹಿರಿಯ ನಾಯಕರೆಂಬ ಗೌರವ ಇದೆಯಾದರೂ ತಮ್ಮ ನಾಯಕ ನರೇಂದ್ರ ಮೋದಿ ಎಂದು ಅಲ್ಲಿನ ಬಿಜೆಪಿ ಮಂದಿ ಭಾವಿಸಿರುವುದಕ್ಕೆ ಹೊಣೆ ಯಾರು?. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ನಿರೀಕ್ಷೆಯಿಟ್ಟುಕೊಳ್ಳದೆ ಮೋದಿ ಜಯಭೇರಿ ಭಾರಿಸಿರುವುದನ್ನು ಹೇಗೆ ವ್ಯಾಖ್ಯಾನಿಸಬೇಕು?. ಒಂದೇ ಮಾತಲ್ಲಿ ಹೇಳುವುದಿದ್ದರೆ ನರೇಂದ್ರ ಮೋದಿ ತಮ್ಮದೇ ಇಮೇಜ್ ಬೆಳೆಸಿಕೊಂಡು ಬಿಜೆಪಿಗೆ ಬಲ ಕೊಡುತ್ತಿದ್ದಾರೆ. ಇಲ್ಲೂ ನರೇಂದ್ರ ಮೋದಿ ವ್ಯಕ್ತಿ ಕೇಂದ್ರೀಕೃತವಾಗಿ ಬೆಳೆದುನಿಂತಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರಗಳು ಗುಜರಾತ್‌ಗೆ ಅನ್ವಯಿಸಲಾರವು. ಮೋದಿ ಹೇಳುವುದೇ ಅಲ್ಲಿ ಅಂತಿಮ ಹೊರತು ಹೈಕಮಾಂಡ್ ನಿರ್ಧಾರ ಬೇಕಾಗಿಲ್ಲ, ಮೋದಿಗೆ ಮೋದಿಯೇ ಹೈಕಮಾಂಡ್. ಇದು ಅಡ್ವಾಣಿಯವರನ್ನು ಘಾಸಿಗೊಳಿಸಿದೆ. ಇದಕ್ಕೇ ಅಡ್ವಾಣಿ ಸಾಮೂಹಿಕ ನಾಯಕತ್ವ ಬೇಕೆಂದು ಪ್ರತಿಪಾದಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ.

ಅಡ್ವಾಣಿ ತಮ್ಮ ಅನುಭವ, ರಾಜಕೀಯ ಚಾಲಾಕಿತನವನ್ನು ಶಿಷ್ಯರಿಗೆ ಕಲಿಸಿ ಸೂತ್ರಧಾರನಂತೆ ಕಾರ್ಯನಿರ್ವಹಿಸಬಾರದಿತ್ತೇ ? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಆದರೆ ಇದಕ್ಕೆ ಕಾಲಪಕ್ವ ಆಗಿಲ್ಲ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಡ್ವಾಣಿಯವರು ಬಿಜೆಪಿಯ ಎಲ್ಲಾ ಮಹತ್ವದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರೂ ಎನ್‌ಡಿಎ ಕಾರ್ಯಾಧ್ಯಕ್ಷ ಹುದ್ದೆಯನ್ನು ತ್ಯಜಿಸಿಲ್ಲ ಎನ್ನುವುದನ್ನು ಗಮನಿಸಬೇಕು. ಎನ್‌ಡಿಎ ಮಿತ್ರಪಕ್ಷಗಳು ಅಡ್ವಾಣಿಯವರನ್ನು ಬೆಂಬಲಿಸುವಷ್ಟು ಸುಲಭವಾಗಿ ಬಿಜೆಪಿಯ ಬೇರೆ ಯಾವ ನಾಯಕರನ್ನು ಬೆಂಬಲಿಸುವುದಿಲ್ಲ. ಇದಕ್ಕೆ ಶರದ್ ಯಾದವ್ ನೀಡಿರುವ ಪ್ರತಿಕ್ರಿಯೆಯನ್ನು ಉದಾಹರಿಸಬಹುದು.

ಅಡ್ವಾಣಿಯವರು ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ನೋವಿದೆ, ಹತಾಶೆಯಿದೆ, ಅಪಾರವಾದ ಸಿಟ್ಟಿದೆ, ವೈರಾಗ್ಯವಿದೆ. ಬಿಜೆಪಿಯಲ್ಲಿ ವ್ಯಕ್ತಿಗಳಷ್ಟೇ ಬೆಳೆಯುತ್ತಿದ್ದಾರೆ ಪಕ್ಷ ಬೆಳೆಸುತ್ತಿಲ್ಲ ಎನ್ನುವ ನೋವಿನ ಎಳೆಗಳನ್ನು ಅಡ್ವಾಣಿಯವರ ಪತ್ರದಲ್ಲಿ ಗುರುತಿಸಬಹುದು. ವ್ಯಕ್ತಿಯ ಇಮೇಜ್ ಪಕ್ಷಕ್ಕೆ ಮತಗಳನ್ನು ತಂದುಕೊಡುವುದಿಲ್ಲ, ಪಕ್ಷದ ಇಮೇಜ್ ಮತಪೆಟ್ಟಿಗೆ ತುಂಬುತ್ತದೆ. ಅಡ್ವಾಣಿಯವರ ಈ ಮಾತುಗಳನ್ನು ಎಲ್ಲಾ ರಾಜಕೀಯ ಪಕ್ಷಗಲಿಗೂ ಅನ್ವಯಿಸುತ್ತದೆ. 750px-BJP-flag.svg[1]ಆದರೆ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮರುಕ್ಷಣದಲ್ಲಿ ಅಡ್ವಾಣಿಯವರು ವೈರಾಗ್ಯ ಆವಾಹಿಸಿಕೊಂಡದ್ದು ಮಾತ್ರ ಸರಿಯಾದ ನಡೆಯಲ್ಲ.

ಮೋದಿ ಇಮೇಜ್ ಬೆಳೆಸಿಕೊಂಡು ಬಿಜೆಪಿಯ ನಾಯಕತ್ವವನ್ನು ನೇಪತ್ಯಕ್ಕೆ ಸರಿಯುವಂತೆ ಮಾಡುತ್ತಿದ್ದಾರೆ ಎನ್ನುವ ಆತಂಕ ಅಡ್ವಾಣಿಯವರನ್ನು ಕಾಡಿರುವುದು ಸಹಜ. ಆದರೆ ಇದಕ್ಕೆ ಅಡ್ವಾಣಿಯೂ ಹೊಣೆಗಾರರು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪಕ್ಷ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎನ್ನುವ ಅಂಶವನ್ನು ಪ್ರತಿಪಾದಿಸುತ್ತಲೇ ಬಂದವರಿಗೆ ವ್ಯಕ್ತಿಗೆ ಅಂಕುಶ ಹಾಕಬೇಕೆನ್ನುವುದು ಮರೆತದ್ದಾದರೂ ಹೇಗೆ?

ಈಗ ಬಿಜೆಪಿ ಕವಲು ದಾರಿಯಲ್ಲಿದೆ. ಎರಡು ಬಳಗಳ ನಡುವೆ ಕಮಲದ ದಳಗಳು ಅರಳಬೇಕಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆಯ ಬಾಗಿಲಲ್ಲಿ ನಿಂತಿರುವ ಈ ಕಾಲಘಟ್ಟದಲ್ಲಿ ಅಡ್ವಾಣಿ ಶಸ್ತ್ರತ್ಯಾಗ ಮಾಡಿರುವ ದಂಡನಾಯಕ. ಯುದ್ಧ ಭೂಮಿಯಲ್ಲಿ ದಂಡನಾಯಕ ಹಿಂದೆ ಸರಿಯುತ್ತಿರುವುದರಿಂದ ಸಹಜವಾಗಿಯೇ ಆತಂಕ ಸೈನಿಕರಲ್ಲಿ. ಆತಂಕವನ್ನು ಮೆಟ್ಟಿನಿಂತು ಸೈನಿಕರು ಮುನ್ನುಗ್ಗುತ್ತಾರೆಂದು ಭಾವಿಸಬಹುದು, ಆದರೆ ಹಾಗೆ ಆಗುವುದಿಲ್ಲ ಮತ್ತು ದಂಡನಾಯಕನಿಲ್ಲದೆ ಸೈನಿಕರು ಮುಂದುವರಿದರೆ ಏನಾಗಬಹುದೆನ್ನುವ ಅರಿವಿದೆ. ಇದಕ್ಕೆ ತನ್ನ ಗುರುವನ್ನು ಅರಿತಿರುವ ಶಿಷ್ಯನೇ ತಾನು ಮಾಡಿದ ತಪ್ಪುಗಳೇನೆಂದು ಕೇಳಬೇಕಾಗಿದೆ. ಅಂಥ ಕೇಳುವ ಮನಸ್ಸು ಮೋದಿಗೆ ಬರಬೇಕಾಗಿದೆ, ಕೇಳಿಸಿಕೊಳ್ಳುವಂಥ ತಾಳ್ಮೆ ಅಡ್ವಾಣಿಗೂ ಬೇಕಾಗಿದೆ. ಇದು ಸಾಧ್ಯವೇ?, ಎಷ್ಟೇ ಆದರೂ ರಾಜಕೀಯವಾದ್ದರಿಂದ ಅಸಾಧ್ಯ ಯಾವುದೂ ಅಲ್ಲ ಎನ್ನುವುದು ಇತಿಹಾಸ ಹೇಳಿರುವ ಪಾಠ.

One thought on “ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿದ ದಂಡನಾಯಕ

  1. Prasanna Rao

    Whatever Advani did was an excellent move. Modi must know, he can’t sideline Advani that easily. i’m happy that BJP has run into problems, strengthening third front. I am also happy that with all these happening BJP can not dream of coming to power in 2014. 🙂

    Reply

Leave a Reply

Your email address will not be published. Required fields are marked *