ದುರ್ಬಲ “ಬೇರು”ಗಳ ಸಸಿ ನೆಟ್ಟು ಭರಪೂರ ಫಲ ಬೇಕೆಂದರೆ…

– ರಾಮಸ್ವಾಮಿ 

ಲೇಖಕಿ ಬಾನು ಮುಷ್ತಾಕ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿಯವರು ಭಾನುವಾರ ಹಾಸನಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಅವರು ಉತ್ತಮ ಚಿತ್ರಗಳಿಗೆ ಹಾಗೂ ಉತ್ತಮ ಕೃತಿಗಳಿಗೆ ಪ್ರೇಕ್ಷಕ/ಓದುಗ ವರ್ಗದ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮ ಚಿತ್ರಗಳನ್ನು ನೋಡುವವರು ಹಾಗೂ ಉತ್ತಮ ಪುಸ್ತಕಗಳನ್ನು ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚಿತ್ರನಟಿ ರಮ್ಯ ಬಂದರೆ ಸೇರುವಷ್ಟು ಜನ, ತಾವು ಬಂದರೆ ಸೇರುವುದಿಲ್ಲ, ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನೋಡುವಷ್ಟು ಮಂದಿ ತಮ್ಮ ಚಿತ್ರಗಳನ್ನು ನೋಡುವುದಿಲ್ಲ, ಬಾನು ಮುಷ್ತಾಕ್ ರಂತಹ ಉತ್ತಮ ಲೇಖಕರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೂ ಸಾಕಷ್ಟು ಜನ ಸೇರುವುದಿಲ್ಲ.. ಹೀಗೆಲ್ಲಾ ಬೇಸರ ಹೊರಹಾಕಿದರು.

ಅವರು ಹಾಸನಕ್ಕೆಭೇಟಿ ನೀಡುವ ಒಂದು ದಿನದ ಹಿಂದಷ್ಟೆಸಹಮತ ವೇದಿಕೆ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶೇಷಾದ್ರಿಯವರ ಬಹುಚರ್ಚಿತ, ಪ್ರಶಸ್ತಿ ವಿಜೇತ ಚಿತ್ರ ’ಬೇರು’ ಪ್ರದರ್ಶನ ಏರ್ಪಡಿಸಿತ್ತು. ಮೂವತ್ತರಿಂದ ನಲ್ವತ್ತು ಜನ ಸಿನಿಮಾ ನೋಡಿ, ನಂತರದ ಸಂವಾದದಲ್ಲೂ ಆಸಕ್ತಿಯಿಂದ ಪಾಲ್ಗೊಂಡಿದ್ದರು.

’ಬೇರು’ ಭ್ರಷ್ಟ ವ್ಯವಸ್ಥೆಯ ಆಳವನ್ನು ತೋರಿಸುವ ನಿಟ್ಟಿನಲ್ಲಿ ಸಿದ್ಧಗೊಂಡ ಚಿತ್ರ ಎಂಬ ಮಾತಿದೆ. ಅದು ತಕ್ಕಮಟ್ಟಿಗೆ ನಿಜ. ಸರಕಾರಿ ನೌಕರಿಯಲ್ಲಿರುವವರು ಎಂತೆತಹ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಭ್ರಷ್ಟರಾಗಬೇಕಾಯಿತು ಎಂಬುದನ್ನು ಬಿಂಬಿಸಿದ್ದಾರೆ. ತಾವು ಪ್ರೇಕ್ಷಕರಿಗೆ ತಲುಪಿಸಬೇಕೆನಿಸಿದ್ದನ್ನು ಹೇಳಲು ನಿರ್ದೇಶಕರು – ಮನೆಯನ್ನು ಬೀಳಿಸಲು ಹೊರಟ ಬೇರು, ಗೋಡೆ ಕೊರೆಯುವ ಹೆಗ್ಗಣ, ಅಸಹಾಯಕ ಬಡವ, ಹಿರಿಯ ಅಧಿಕಾರಿ, ಸ್ಟಿರಿಯೋಟಿಪಿಕಲ್ ಹೆಂಡತಿ, ಮೂರು ಹೆಣ್ಣುಮಕ್ಕಳ ತಂದೆಯಾಗಿರುವ ಸರಕಾರಿ ನೌಕರ, ತನ್ನ ಭ್ರಷ್ಟಾಚಾರ ಬಯಲಾದದ್ದಕ್ಕೆ ಹೆದರಿ ಬಾವಿಗೆ ಬಿದ್ದ ನಿವೃತ್ತ ನೌಕರ, ಆತನ ಪತ್ನಿ, ಮಗಳು-ಅಳಿಯರ ಸಂತೋಷಕ್ಕಾಗಿ ತನ್ನ ಪ್ರಭಾವ ಬಳಸುವ ಲೇಖಕ.. ಹೀಗೆ ಕೆಲ ಪಾತ್ರಗಳನ್ನು ಸಾಧನಗಳಾಗಿ ಬಳಸಿದ್ದಾರೆ. ಒಂದೆಡೆ ಗೊರವಯ್ಯ ತನ್ನ ಮನೆ ಉಳಿಸಿಕೊಳ್ಳಲು ಮರ ಕಡಿಯಲು ಅನುಮತಿ ಪಡೆಯಲಾಗದೆ, ಜೋರು ಮಳೆಗೆ ಮನೆ ಮುರಿದುಬಿದ್ದು ಸಾಯುತ್ತಾನೆ. ಅತ್ತ ಪ್ರಾಮಾಣಿಕ ಅಧಿಕಾರಿ ಇಲ್ಲದ ಪ್ರವಾಸಿ ಮಂದಿರ ಹುಡುಕುತ್ತಲೇ ಭ್ರಷ್ಟ ವ್ಯವಸ್ಥೆಯ ಪಾಲುದಾರನಾಗಿ ನೈತಿಕವಾಗಿ ಅಧಃಪತನಗೊಳ್ಳುತ್ತಾನೆ.

ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ತೀವ್ರ ಸ್ವರೂಪಗಳು ಅಚ್ಚರಿ ಮೂಡಿಸುತ್ತವೆ ಎನ್ನುವುದೇನೋ ನಿಜ. ಆದರೆ, ಪ್ರಮುಖ ಇಲಾಖೆಯೊಂದು ಪ್ರವಾಸಿ ಮಂದಿರವನ್ನು ಕಟ್ಟದೇ, ಕಟ್ಟಲಾಗಿದೆ ಎಂದು ದಾಖಲೆ ಸೃಷ್ಟಿಸಿ, ಆಗಾಗ ಅದರ ನವೀಕರಣಕ್ಕೆ ಹಣ ವ್ಯಯಮಾಡಿ, ಅದರ ಉಸ್ತುವಾರಿಗೆ ಮೇಟಿಯನ್ನೂ ನೇಮಿಸಿ ಅವನಿಗೂ ಸಂಬಳ ಕೊಟ್ಟು…- ಹೀಗೆ ವರ್ಷಗಟ್ಟಲೆ ನಡೆಯುತ್ತದೆ ಎನ್ನುವುದೇ ವಾಸ್ತವಕ್ಕೆ ದೂರ. ಭ್ರಷ್ಟಾಚಾರದ ಕರಾಳ ಸುಳಿಗಳನ್ನು ಬಿಚ್ಚಿಡಲು ಹೀಗೊಂದು ಕಟ್ಟುಕತೆ ಅಗತ್ಯವಿರಲಿಲ್ಲ.

ಈ ಚಿತ್ರ ಭ್ರಷ್ಟಾಚಾರವನ್ನು ಟೀಕಿಸುವುದಿಲ್ಲ. ಮೇಟಿಯ ಸಂಬಳವನ್ನೂ ತಾನೇ ಬಳಸಿಕೊಳ್ಳುವ ವೆಂಕಟೇಶಯ್ಯ copy-beruಮೂರು ಹೆಣ್ಣುಮಕ್ಕಳ ತಂದೆ. ಆತನಿಗೆ ಮನೆ ನಡೆಸಲು, ಮದುವೆ ಮಾಡಲು ಅನಿವಾರ್ಯವಿತ್ತು ಎನ್ನುತ್ತದೆ ಚಿತ್ರಕತೆ. ಪ್ರಾಮಾಣಿಕ ಅಧಿಕಾರಿ ರಘುನಂದನ್ ತಾನು ಭ್ರಷ್ಟನಲ್ಲದಿದ್ದರೂ, ಬಡ ವೆಂಕಟೇಶಯ್ಯನನ್ನು ಬಚಾವು ಮಾಡುವ ಒಳ್ಳೆಯ ಉದ್ದೇಶದಿಂದ ಭ್ರಷ್ಟನಾಗಬೇಕಾಗುತ್ತದೆ. ಪಾಪ ಅವನದೇನೂ ತಪ್ಪಿಲ್ಲ. ಮೇಲಧಿಕಾರಿ ತನ್ನ ಮೇಷ್ಟ್ರ ಮೇಲಿನ ಗೌರವಕ್ಕೆ ಕಟ್ಟುಬಿದ್ದು ಅವರ ಅಳಿಯನನ್ನು ಉಳಿಸಲು ತಾನೂ ಇಲ್ಲದ ಪ್ರವಾಸಿ ಮಂದಿರ ಇದೇ ಎಂದೇ ಒಪ್ಪಿಕೊಳ್ಳಲು ಸಿದ್ಧರಾಗುತ್ತಾರೆ. ಈ ಚಿತ್ರದಲ್ಲಿ ಭ್ರಷ್ಟ ಪಾತ್ರಗಳು ತಮ್ಮ ಆಸೆ ಅಥವಾ ದುರಾಸೆಗೆ ಭ್ರಷ್ಟರಾದವರಲ್ಲ, ಬದಲಿಗೆ ಪರಿಸ್ಥಿತಿಗಳು ಅವರನ್ನು ಆ ಕೂಪಕ್ಕೆ ನೂಕಿವೆ ಅಷ್ಟೆ. ಆ ಕಾರಣಕ್ಕೆ ಇದು ಭ್ರಷ್ಟಾಚಾರದ ವಿರೋಧಿ ಚಿತ್ರವಲ್ಲ, ಬದಲಿಗೆ ಭ್ರಷ್ಟರ ಪರ ಅನುಕಂಪ ಮೂಡಿಸುವ ಒಂದು ಪ್ರಯತ್ನ.

ಅಂತ್ಯದಲ್ಲಿ ಬಡ ಗೊರವಯ್ಯನ ಸಾಕು ಮೊಮ್ಮಗಳು ಅಧಿಕಾರಿ ವರ್ಗದತ್ತ ಥೂ ಎಂದು ಉಗಿದು ಮುಂದೆ ಸಾಗುತ್ತಾಳೆ. ಅವಳ ಆಕ್ರೋಶವೇ ಚಿತ್ರದ ಮುಖ್ಯ ಸಂದೇಶವೆಂದು ಸಿನಿಮಾ ನೋಡಿದ ಅನೇಕರು ಅಭಿಪ್ರಾಯಪಟ್ಟರು. ಆ ಹುಡುಗಿಯ ಆಕ್ರೋಷ ಇದ್ದದ್ದು ತನ್ನ ಅಜ್ಜನಿಗೆ ಮರ ಕಡಿಯಲು ಅನುಮತಿ ಕೊಡದೆ, ಕೊನೆಗೆ ಆತ ಸಾಯಲು ಕಾರಣರಾದ ಅಧಿಕಾರಿಗಳ ಬಗ್ಗೆಯೇ ಹೊರತು, ಇಲ್ಲದ ಪ್ರವಾಸಿ ಮಂದಿರವನ್ನು ದಾಖಲೆಯಲ್ಲಿ ಸೃಷ್ಟಿ ಮಾಡಿ ದುಡ್ಡುಹೊಡೆಯುವ ವ್ಯವಸ್ಥೆಗೆ ಅಲ್ಲ. ಚಿತ್ರದ ಯಾವ ದೃಶ್ಯದಲ್ಲೂ ಆ ಬಾಲಕಿ ಈ ಅವ್ಯವಸ್ಥೆಗೆ ಮುಖಾಮುಖಿಯಾಗುವುದೇ ಇಲ್ಲ.

ಅಧಿಕಾರಿಯ ಹೆಂಡತಿಯ ಪಾತ್ರ ತೀರಾ ಸ್ಟಿರಿಯೋಟಿಪಿಕಲ್. ತಾನು ಅಧಿಕಾರಿಯನ್ನು ಮದುವೆಯಾಗಿ ಯಾವುದೋ ಕೊಂಪೆಗೆ ಬಂದು ನೆಲೆಸಬೇಕಾಯಿತು ಅವಳು ಕೊರಗುತ್ತಾಳೆ. ತಾನು ಹಳ್ಳಿಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪದೇ ಪದೇ ವ್ಯಕ್ತಪಡಿಸುತ್ತಾಳೆ. ಆದರೆ ಅಧಿಕಾರಿ ಮಾತ್ರ ಹಳ್ಳಿಯ ಜೀವನವೇ ಸುಂದರ.. ಹೀಗೆ ಆದರ್ಶವಾಗಿ ಮಾತನಾಡುತ್ತಾನೆ. ಭಿನ್ನ ಚಿತ್ರಗಳನ್ನು ಮಾಡುತ್ತೇವೆ ಎನ್ನುವವರು ಈಗಾಗಲೆ ಸವಕಲಾಗಿರುವ ಚೌಕಟ್ಟುಗಳನ್ನು ದಾಟುವುದೇ ಇಲ್ಲ ಎನ್ನುವುದಾದರೆ, ಅವರು ಹೇಗೆ ಭಿನ್ನ? ಪ್ರತಿಮೆ, ರೂಪಕಗಳ ಆಯ್ಕೆಯಲ್ಲೂ ಹೊಸತೇನಿಲ್ಲ.

ಚಿತ್ರದ ನಿರ್ಮಾಣ ಕೂಡ ಸಾಧಾರಣ. ಕಚೇರಿಯ ಸಿಬ್ಬಂದಿಗೆ ನಟನೆಯೇ ಗೊತ್ತಿಲ್ಲ. ಎಲ್ಲಾ ಸಂಭಾಷಣೆಯಲ್ಲೂ ಅವರದು ಅಸಹಜ ನಟನೆ. ಈಗ ತಾನೆ ನಟನೆ ಕಲಿಯುತ್ತಿರುವವರನ್ನು ಇಟ್ಟುಕೊಂಡು ಒಂದು ನಾಟಕದ ರಿಹರ್ಸಲ್ ಮಾಡಿದ ಹಾಗಿದೆ. ಚಿತ್ರ ನಿರ್ದೇಶಕರು ಅದು ಯಾವ ಕಚೇರಿ, ಆತ ಯಾವ ಇಲಾಖೆಯ ಅಧಿಕಾರಿ ಎನ್ನುವುದನ್ನು ಎಲ್ಲಿಯೂ ಸ್ಪಷ್ಟಪಡಿಸುವುದಿಲ್ಲ. ಸಿನಿಮಾ ವೀಕ್ಷಣೆಯ ನಂತರ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಒಂದು ಪಾಳು ಗುಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಪ್ರವಾಸಿ ಮಂದಿರದ ಮೇಟಿ ಹೊರಬಂದಾಗಲೂ ಅವನ ಬಟ್ಟೆಗಳು ಈಗಷ್ಟೇ ಇಸ್ತ್ರಿ ಮಾಡಿ ಧರಿಸಿರುವಷ್ಟು ಶುಭ್ರ. ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರು ಇಂತಹ ಅನೇಕ ಲೋಪಗಳನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಬಹುದು. ಸೂಕ್ಷ್ಮ ಮನಸ್ಸಿನ ನಿರ್ದೇಶಕರಿಗೆ ಇಂತಹ ಸೂಕ್ಷ್ಮಗಳ ಕಡೆ ಗಮನಹರಿಸಬೇಕು ಎನಿಸಲಿಲ್ಲವೇ?

ಶೇಷಾದ್ರಿಯವರು ತಮ್ಮ ಭಾಷಣದಲ್ಲಿ ತಮ್ಮ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೂ ಪ್ರೇಕ್ಷಕರು ಬರಲಿಲ್ಲ ಎಂದು ಅವಲತ್ತುಕೊಂಡರು. ಪ್ರಶಸ್ತಿ ಬಂದಾಕ್ಷಣ ಪ್ರೇಕ್ಷಕರು ಸಿನಿಮಾ ನೋಡೋಕೆ ಬರಬೇಕೆ?

Leave a Reply

Your email address will not be published. Required fields are marked *