Daily Archives: June 13, 2013

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

– ಬಿ.ಶ್ರೀಪಾದ ಭಟ್

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನಾತ್ಮಕ ಬದಲಾವಣೆಗಳಿಗಾಗಿ ಸದಾ ತುಡಿಯುವ, ಹಂಬಲಿಸುವ ಚಿಂತನೆಗಳು ಮತ್ತು ಅದನ್ನು ಕಾರ್ಯಗತಗೊಳಿಸುವ ಕ್ರಿಯಾತ್ಮಕ ರೂಪರೇಷೆಗಳು, indiaಮತ್ತು ತಾನು ರೂಪಿಸುವ ನಿಯಮಾವಳಿಗಳಿಗೆ ಉತ್ತರದಾಯಿತ್ವ ಇವೆಲ್ಲವನ್ನು ಕಳೆದುಕೊಂಡು ಅತ್ಯಂತ ಕ್ಷುಲ್ಲಕ ಮತ್ತು ಹೇಸಿಗೆ ಹುಟ್ಟಿಸುವ, ಲಜ್ಜೆಗೆಟ್ಟ ಸ್ಥಿತಿಗೆ ಬಂದು ತಲುಪಿದ್ದರೆ ನಮ್ಮ ಮಾಧ್ಯಮಗಳು ಸದಾ ಧಗಧಗಿಸುವ ತಮ್ಮೊಡಲೊಳಗಿನ ನೈತಿಕತೆ, ಅಂತರ್ಗತವಾಗಿ ಪ್ರವಹಿಸುವ ನ್ಯಾಯವಂತಿಕೆ, ಸಾಮಾಜಿಕ ಮೌಲ್ಯಗಳು ಮತ್ತು ಮುಖ್ಯವಾಗಿ ಮಾನವೀಯತೆಯ, ಸಾಮಾಜಿಕ ನ್ಯಾಯದ ತತ್ವಜ್ಞಾನ ಇವೆಲ್ಲವನ್ನೂ ಮರೆತು, ಅವಕ್ಕೆಲ್ಲಾ ತಿಲಾಂಜಲಿ ನೀಡಿ, ಬದಲಾಗಿ ಅಳುವ ವ್ಯವಸ್ಥೆಯನ್ನು, ಪ್ರಭುತ್ವವನ್ನು ತಮಗೆ ಬೇಕೆಂದಹಾಗೆ ಅಲ್ಲಾಡಿಸುತ್ತೇವೆ, ಬೇಕಿದ್ದರೆ ಬೀಳಿಸುತ್ತೇವೆ ಸಹ ಎಂಬಂತಹ ಮಿತಿಮೀರಿದ ಭಂಡತನದಿಂದಾಗಿ ಇಂದು ತಲುಪಿರುವ ಕೆಳಮಟ್ಟದ ಅನೈತಿಕತೆ ಮತ್ತು ತಮ್ಮೊಂದಿಗೆ ಇಡೀ ವ್ಯವಸ್ಥೆಯ ಶುದ್ಧಾಂಗ ಲವಲವಿಕೆಯನ್ನೇ ಒಂದು ಮಟ್ಟದಲ್ಲಿ ನಿರ್ಜೀವಗೊಳಿಸಿರುವುದು, ಇವೆರೆಡೂ ಒಂದಕ್ಕೊಂದು ತಳಕು ಹಾಕಿಕೊಂಡು ಇಂದು ಇಡೀ ದೇಶವನ್ನೇ ನಗೆಪಾಟಲಿಗೀಡಾಗಿಸಿವೆ. ಇಂಡಿಯಾಗೆ ಈ ರಾಜಕೀಯ ಪಕ್ಷಗಳು ಮತ್ತು ಬಹುಪಾಲು ಮಾಧ್ಯಮಗಳು ಅಂಟಿಸಿರುವ ಕಳಂಕಗಳು ವಿವಿಧ ಸ್ವರೂಪಗಳಲ್ಲಿವೆ. ಒಂದನ್ನು ಬಿಡಿಸಹೊರಟರೆ ಮತ್ತೊಂದಕ್ಕೆ ತಗಲಿಕೊಳ್ಳುತ್ತೇವೆ ಮತ್ತು ಈ ನಿರಂತರ ಅರಾಜಕತೆಗೆ ಭಾಗಿಗಳಾಗುತ್ತಲೇ ಸಾಕ್ಷಿಗಳಾಗುತ್ತೇವೆ. ಸ್ವತಂತ್ರ ಭಾರತದಲ್ಲಿ ಭಾರತೀಯರು ಈ ಮಟ್ಟದಲ್ಲಿ ಮಾನಸಿಕ ದಾಸ್ಯಕ್ಕೆ ಬಲಿಯಾಗಿದ್ದು ಇದೇ ಮೊದಲೇನೊ.

ಬಿಜೆಪಿ ತನ್ನ ವಾರ್ಷಿಕ ಕಾರ್ಯಕಾರಣಿ ಸಭೆಯನ್ನು ನಡೆಸುತ್ತದೆ. ಇದರಲ್ಲಿ ವಿಶೇಷವೇನಿದೆ? ಆದರೆ ಬಹುಪಾಲು ಮಾಧ್ಯಮಗಳಿಗೆ Advaniಅದು ಮೊದಲ ಪುಟದ ಸುದ್ದಿ. ಬ್ರೇಕಿಂಗ್ ನ್ಯೂಸ್. ಮ್ಯಾಜಿಕ್ ಮೊಮೆಂಟ್. ಇದನ್ನು ಮತ್ತು ಈ ತರಹದ ಅನೇಕ ಕ್ಷುಲ್ಲಕ ವಿದ್ಯಾಮಾನಗಳನ್ನು ಒಂದು ಬಗೆಯ ರಿಯಲ್ ಎಸ್ಟೇಟ್ ಧಂಧೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದು ನಮ್ಮ ಬಹುಪಾಲು ಕಳಂಕಿತ ಮಾಧ್ಯಮಗಳು. ಈ ರಿಯಲ್ ಎಸ್ಟೇಟ್ ಧಂಧೆಯಲ್ಲಿ ಬಹುಪಾಲು ಕಳಂಕಿತ ಮಾಧ್ಯಮಗಳು ಉತ್ಸಾಹಿ ಬ್ರೋಕರ್‌ನ ಪಾತ್ರ ನಿರ್ವಹಿಸಿದ್ದರೆ ಆ ಬದಿಯಲ್ಲಿ ರಾಜಕೀಯ ಪಕ್ಷಗಳು ಭ್ರಷ್ಟ ಭೂಮಾಲೀಕನ ಪಾತ್ರ ನಿರ್ವಹಿಸಿದ್ದರೆ ಇಲ್ಲಿನ ಜನತೆ ಎಂದಿನಂತೆ ಮೋಸಹೋದ ಖರೀದುದಾರರು. ಇಂದಿನ ಸಂದರ್ಭದಲ್ಲಿ ಮತ್ತು ಹಿಂದೆ ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳ ಈ ಗತಿಗೆಟ್ಟ ಹಪಾಹಪಿತನವನ್ನು ತನ್ನ ಅನುಕೂಲಕ್ಕೆ, ತನ್ನ ಮೇಲ್ಮುಖ ಚಲನೆಗೆ ಅದ್ಭುತವಾಗಿ ಬಳಸಿಕೊಂಡಿದ್ದು ಫ್ಯಾಸಿಸ್ಟ್ ರಾಜಕಾರಣಿ ನರೇಂದ್ರ ಮೋದಿ. ಪರಸ್ಪರ ದೈವತ್ವತ್ತಕ್ಕೇರಿಸಿಕೊಳ್ಳುವ ಇವರಿಬ್ಬರ ಕಣ್ಣಾಮುಚ್ಚಾಲೆಯಾಟದ ವಿಷಚಕ್ರದ ಸುಳಿಯಲ್ಲಿ ಸಿಲುಕಿಕೊಂಡ ಇಂಡಿಯಾದ ನಾಗರಿಕರು ತಾವಿದನ್ನು ಆನಂದಿಸುತ್ತಿದ್ದೇವೆಯೋ ಅಥವಾ ತಿರಸ್ಕರಿಸುತ್ತಿದ್ದೇವೆಯೋ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಮಾನಸಿಕ ದಾಸ್ಯಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದರಲ್ಲಿಯೂ ವಿದ್ಯಾವಂತ ಮಧ್ಯಮ, ಮೇಲ್ಮಧ್ಯಮ ವರ್ಗ ಈ ಮಟ್ಟದಲ್ಲಿ ಆತ್ಮವಂಚನೆಗೆ ಗುರಿಯಾಗಿದ್ದು ಇವರ ಕುರಿತಾದ ಪ್ರೀತಿ, ಗೌರವಗಳು ಕುಂಠಿತಗೊಳ್ಳುತ್ತಿವೆ.

ಎಂಬತ್ತು ವರ್ಷಗಳ ಹಿಂದೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ಯಾಸಿಸ್ಟರು ನೇರವಾಗಿಯೇ ತಮ್ಮ ಫ್ಯಾಸಿಸ್ಟ್ ಧೋರಣೆಗಳನ್ನು, ಸರ್ವಾಧಿಕಾರ ನೀತಿಯನ್ನು ಬಳಸಿಕೊಂಡು ಅಧಿಕಾರವನ್ನು ವಹಿಸಿಕೊಂಡಿದ್ದೂ ಆಯ್ತು. ಅಲ್ಪಕಾಲಾವಧಿಯ ಸರ್ವಾಧಿಕಾರದ ಆಡಳಿತದ ನಂತರ ತಿರಸ್ಕಾರಕ್ಕೆ ಗುರಿಯಾಗಿ ಅಷ್ಟೇ ಕ್ಷ್ರಿಪ ಗತಿಯಲ್ಲಿ ನಾಶವಾಗಿ, ಕಣ್ಮೆಯಾಗಿದ್ದೂ ಆಯ್ತು. ಆದರೆ ಇಂಡಿಯಾದ ಸಂದರ್ಭದಲ್ಲಿ ತಾನು ಚಾಲ್ತಿಗೆ ಬಂದು ಎಂಬತ್ತು ವರ್ಷಗಳಾದರೂ ಇಲ್ಲಿನ ಫ್ಯಾಸಿಸ್ಟ್ ಪಕ್ಷ ಆರೆಸಸ್‌ಗೆ ತಮ್ಮ ಮತೀಯವಾದಿ ಸಿದ್ಧಾಂತಗಳನ್ನು ಆಧರಿಸಿ ನೇರವಾಗಿ ಅಧಿಕಾರವನ್ನು ಕಬಳಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೇವಲ ಆರೆಸಸ್ ಮಾತ್ರವಲ್ಲ ಇತರೇ ಧರ್ಮಗಳ ಎಲ್ಲಾ ಬಗೆಯ ಮೂಲಭೂತವಾದಿ ಫ್ಯಾಸಿಸ್ಟರ ವಿಷಯದಲ್ಲಿಯೂ ಸಹ ಈ ಮಾತು ಸತ್ಯ. ಎಲ್ಲಾ ಧರ್ಮಗಳ ಫ್ಯಾಸಿಸ್ಟರು ನೇರವಾಗಿ ಅಧಿಕಾರ ವಹಿಸಿಕೊಳ್ಳುವ ಎಲ್ಲಾ ದಾರಿಗಳನ್ನೂ ನಿರಾಕರಿಸಿದ್ದಾನೆ ಇಂಡಿಯಾದ ಪ್ರಜೆ. ಇಂದಿಗೂ ಫ್ಯಾಸಿಸ್ಟರ ಕೈಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಗೊಳಿಸಿಲ್ಲ ಇಲ್ಲಿನ ಪ್ರಜ್ಞಾವಂತ ನಾಗರಿಕ. ಇದನ್ನು ಸೋಷಿಯಲಾಜಿ ಮತ್ತು ಅಂಥ್ರೋಪಾಲಜಿ ನೆಲೆಯಲ್ಲಿ ವಿಶ್ಲೇಷಿಸಬೇಕಾದಂತಹ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಮತ್ತು ಬಹುಪಾಲು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಭಜನೆ !!! ಮೋದಿ ಭಜನೆ!!! ಲಜ್ಜಗೆಟ್ಟ ಈ ಜನಗಳು ಫ್ಯಾಸಿಸ್ಟರ ವಿವಿಧ ಆಯಾಮಗಳನ್ನು, ಅವುಗಳು ರೂಪುಗೊಳಿಸುತ್ತಿರುವ ಏಕರೂಪಿ ವಿನ್ಯಾಸಗಳನ್ನು, ಅವುಗಳ ದಮನೀಯತೆಯ ನಡೆಗಳನ್ನು ಪದರುಪದರಾಗಿ ಬಿಡಿಸಿಡುವುದರ ಬದಲಾಗಿ ಈ ಗುಂಪು ಹಸಿಹಸಿಯಾಗಿ ಸತ್ಯದರ್ಶನದ ಹೆಸರಿನಲ್ಲಿ ಇಲ್ಲಿನ ಜನತೆಯ ಮೇಲೆ ಬೌದ್ಧಿಕ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನೇ ಋಣಾತ್ಮಕತೆಯ ದಿಕ್ಕಿಗೆ ದಾರಿ ತಪ್ಪಿಸಿದ ಅಪಕೀರ್ತಿ ಈ ಜನಗಳಿಗೇ ಸಲ್ಲಬೇಕು.

ಸಧ್ಯಕ್ಕೆ ಸುದ್ದಿಯಲ್ಲಿರುವ ಸಂಘಪರಿವಾರವು ಮತ್ತೇನಲ್ಲದೆ ಒಂದು ಮತೀಯವಾದಿ ಲುಂಪೆನ್ ಗುಂಪು. ಧಾರ್ಮಿಕ ಫೆನಟಿಸಂ ಅನ್ನು ತನ್ನ ಏಕಮಾತ್ರ ಅಜೆಂಡಾವನ್ನಾಗಿರಿಸಿಕೊಂಡಿರುವ, ಏಕ್ ಧಕ್ಕ ಔರ್ ದೋ ನುಡಿಗಟ್ಟನ್ನು ತನ್ನ ಸ್ಲೋಗನ್ನಾಗಿಸಿಕೊಂಡ ಈ ಮತೀಯವಾದಿ ಗುಂಪು 1990 ರಿಂದ ಪ್ರತ್ಯಕ್ಷವಾಗಿಯೇ ಮತ್ತು ನೇರವಾಗಿಯೇ ಧರ್ಮದ, ಜಾತಿಯ ಆಧಾರದ ಮೇಲೆ ಇಂಡಿಯಾವನ್ನು ಇಬ್ಭಾಗಿಸಿತು. ಆಗ ಇದರ ನೇತೃತ್ವ ವಹಿಸಿದ್ದು ಎಲ್.ಕೆ,ಅಡ್ವಾನಿ. ತಮ್ಮ ಕೋಮುವಾದಿ ರಥಯಾತ್ರೆಯ ಮೂಲಕ ದೇಶದ ಮೂಲಸೆಲೆಯಾಗಿದ್ದ, ಸ್ವತಂತ್ರ ಭಾರತದಲ್ಲಿ ನೆಹರೂ, ಅಂಬೇಡ್ಕರ್ ಅವರು ಅಪಾರ ನಿಷ್ಟೆ ಮತ್ತು ಬದ್ಧತೆಯಿಂದ ಕಟ್ಟಿದ್ದ ಸಹೋದರತ್ವದ, ಸಂಕೀರ್ಣವಾದ, ಮಾನವೀಯ ಹಿನ್ನೆಲೆಯ ಸಾಂಸ್ಕೃತಿಕ ಎಳೆಗಳ, ಸೆಕ್ಯುಲರ್, Narendra_Modiಜಾತ್ಯಾತೀತ ಸಂವಿಧಾನದ ಧ್ವಂಸ ಕಾರ್ಯವನ್ನು ಶುರಮಾಡಿದ ಅಡ್ವಾನಿ ಮತ್ತವರ ಸಹಚರರಿಗೆ ಸಾರಥಿಯಾಗಿದ್ದು ಆ ಕಾಲದ ಆರೆಸಸ್ ಸ್ವಯಂಸೇವಕ ನರೇಂದ್ರ ಮೋದಿ. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಇವರ ಕಾರ್ಯಕ್ಕೆ ಸಂಪೂರ್ಣವಾಗಿ ಬೆಂಬಲಿಸಿದ್ದು ಆರೆಸಸ್. ಇದೆಲ್ಲವೂ ಇಂದು ಇತಿಹಾಸದಲ್ಲಿ ದಾಖಲಾಗಿದೆ. ದೇಶವನ್ನು ಒಡೆಯುವ ಈ ದುಷ್ಕೃತ್ಯ ತಾರಕಕ್ಕೇರಿದ್ದು ಬಾಬರಿ ಮಸೀದಿಯ ಧ್ವಂಸದ ಮೂಲಕ. ನಂತರ ತನ್ನ ರಕ್ತಸಿಕ್ತ ಪ್ರಯಾಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದು 2002ರ ಗುಜರಾತ್ ನರಮೇಧದ ಮೂಲಕ.

ಇಡೀ ಕಾಲಘಟ್ಟದಲ್ಲಿ ಅಡ್ವಾನಿಯವರು ಅನೇಕ ಬಾರಿ ನೇರವಾಗಿ ಪಾಲುದಾರrAಗಿದ್ದರೆ ಕೆಲವು ಬಾರಿ ಪ್ರೇಕ್ಷಕರಾಗಿಯೂ ತಮ್ಮ ಆರೆಸಸ್ ಸ್ವಯಂಸೇವಕನ ಜವಾಬ್ದಾರಿ ನಿಭಾಯಿಸಿದ್ದಾರೆ. ಇಂದಿಗೂ ಬಾಬರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಇವರ ಮೇಲಿನ ಆಪಾದನೆ ನಿವಾರಣೆಯಾಗಿಲ್ಲ. ಇಂದು ವೃದ್ಧನಾರಿ ಪತಿವ್ರತೆಯ ಮಾದರಿಯಲ್ಲಿ ತಮ್ಮನ್ನು ತಾವು ಹುತಾತ್ಮರಾಗಿಸಕೊಳ್ಳಬಯಸುವ ಅಡ್ವಾನಿಯವರಿಗೆ ಮೃದುವಾದಿಯ ಮುಖವಾಡವನ್ನು ಅದೂ ವಾಜಪೇಯಿಯವರ ವೇಷವನ್ನು ತೊಡಿಸಲು ಬೌದ್ಧಿಕವಾಗಿ ದಿವಾಳಿಯೆದ್ದಿರುವ ಮಾಧ್ಯಮಗಳು ವೇದಿಕೆಯನ್ನೊದಗಿಸುತ್ತಿರುವುದು ಒಂದು ದುರಂತ ಪ್ರಹಸನವಲ್ಲದೆ ಮತ್ತಿನ್ನೇನು ?? ಎಂಬತ್ತಾರರ ಇಳಿ ವಯಸ್ಸಿನಲ್ಲಿಯೂ ನಾವೆಲ್ಲ ಅಸೂಯೆ ಪಡುವಷ್ಟು ಅತ್ಯಂತ ಲವಲವಿಕೆಯಿಂದಿರುವ ಅಡ್ವಾನಿಯವರಿಗೆ ಇಂದು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಗತಕಾಲದ ತಪ್ಪುಗಳ ಕುರಿತಾಗಿ ಪ್ರಾಯಶ್ಚಿತ್ತವಿದ್ದಂತಿಲ್ಲ. ಇಂದು ಮಾಡಿದ್ದುಣ್ಣೋ ಮಾರಾಯನೆಂಬ ಸ್ಥಿತಿಗೆ ಬಂದು ತಲುಪಿರುವ ಅಡ್ವಾನಿಯವರ ಅರವತ್ತು ವರ್ಷಗಳ ದೀರ್ಘವಾದ ರಾಜಕೀಯ ಬದುಕು ಪ್ರತಿಯೊಬ್ಬ ಮತೀಯವಾದಿ ರಾಜಕಾರಣಿಗೆ ತಕ್ಕ ಪಾಠವಾಗಬಲ್ಲದೆಂದು ವಾಸ್ತವ ಸತ್ಯಗಳನ್ನು ಹೇಳಲು ನಿರಾಕರಿಸುತ್ತಿರುವ ನಮ್ಮ ಮಾಧ್ಯಮಗಳಿಗೆ ಸದಾ ಕಾಲ ಅಮ್ನೀಸಿಯ !!

ದೇಶಪ್ರೇಮಕ್ಕೂ ಮತ್ತು ಅದನ್ನು ನೆಪವನ್ನಾಗಿರಿಸಿಕೊಂಡು ದಬ್ಬಾಳಿಕೆ ನಡೆಸುವ ಫ್ಯಾಸಿಸಂನ ಮುಖಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ ಮತ್ತು ಅಪಾರ ಭಿನ್ನತೆ ಅರವತ್ತು ವರ್ಷಗಳಷ್ಟು ಕಾಲ ಅತ್ಯಂತ ಪ್ರಾಮಾಣಿಕವಾಗಿ ಪಕ್ಷನಿಷ್ಟ ರಾಜಕಾರಣವನ್ನು ಮಾಡಿಕೊಂಡು ಬಂದ ಅಡ್ವಾನಿಯವರಲ್ಲಿನ ಮುಗ್ಧತೆಯ ವ್ಯಕ್ತಿತ್ವ ಅರಿಯದೇ ಹೋಗಿದ್ದು ಕೂಡ ಭಾರತದ ರಾಜಕಾರಣದ ದುರಂತ ಅಧ್ಯಾಯ. ಈ ಕಾಮನ್‌ಸೆನ್ಸ್ ಅನ್ನು ಒಳಗೊಂಡತಂಹ, ಆಳವಾದ ಸಾಮಾಜಿಕ ಒಳನೋಟಗಳನ್ನು ತನ್ನೊಳಗೆ ಬಸಿದುಕೊಳ್ಳುವ ಗುಣವಿಲ್ಲದಿದ್ದಕ್ಕಾಗಿಯೇ ವೈಯುಕ್ತಿಕವಾಗಿ ಮುಸ್ಲಿಂರನ್ನು ತಮ್ಮ ಸ್ನೇಹಿತನಂತೆ ನಡೆಸಿಕೊಳ್ಳುವ, ಮಾನವತಾವಾದಿ, ಸ್ನೇಹಶೀಲ, ಅಪಾರ ಪ್ರೀತಿಯ ಸ್ನೇಹಿತನಂತೆ, ತಂದೆಯಂತೆ ವರ್ತಿಸುವ ಅಡ್ವಾನಿ ಸಾರ್ವಜನಿಕವಾಗಿ ಮತೀಯವಾದಿಯಾಗಿ, ಅನ್ಯಧರ್ಮದ್ವೇಷಿಯಾಗಿ ಬದಲಾಗುತ್ತಿದ್ದದು. ಸಂಘಪರಿವಾರದ ಫೆನಟಿಕ್, ಲುಂಪೆನ್ ಗುಂಪಿನ ನೇತಾರರಾಗಿದ್ದು.ಈ ಸಂದರ್ಭದಲ್ಲಿಯೇ ನರೇಂದ್ರ ಮೋದಿಯೆಂಬ ವರ್ಕೋಹಾಲಿಕ್, ಪ್ರಾಮಾಣಿಕ ಸ್ವಯಂಸೇವಕ ಫ್ಯಾಸಿಸ್ಟ್ ಆಗಿ ರೂಪುಗೊಳ್ಳತೊಡಗಿದ್ದು. ಮೋದಿಯು ಈ ಫ್ಯಾಸಿಸಂನ ಎಲ್ಲ ಪಟ್ಟುಗಳನ್ನು ನಿಭಾಯಿಸುವ ಗುಣಗಳನ್ನೂ ಕಲಿತದ್ದು ಈ ಕಾಲಘಟ್ಟದಲ್ಲಿಯೇ.

ಈ ವರ್ಷಗಳಲ್ಲಿ ಫೆನಟಿಸಂನ ರಾಜಕಾರಣವನ್ನು ಹತ್ತಿರದಿಂದ ನೋಡಿ ಈ ಗುಣಗಳನ್ನು ತನ್ನ ವ್ಯಕ್ತತ್ವದ ಅವಿಭಾಜ್ಯ gujarat-povertyಅಂಗವಾಗಿ ರೂಪಿಸಿಕೊಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಈ ನರೇಂದ್ರ ಮೋದಿ. ಮುಸಲೋನಿಯ ಮಾದರಿಯಲ್ಲಿಯೇ ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ ಮಾನವೀಯತೆಯ, ಸೆಕ್ಯುಲರ್‌ನ ಎಲ್ಲಾ ಬಗೆಯ ಮಾದರಿಗಳನ್ನು ಮತ್ತು ಬದುಕನ್ನು ,ಪ್ರಜ್ಞಾವಂತರ ಚಿಂತನೆಗಳನ್ನು ತನ್ನ ಸರ್ವಾಧಿಕಾರದ ಮೂಲಕ ಹೆಚ್ಚೂ ಕಡಿಮೆ ಸಾಯಿಸಿರುವ ಈ ಮೋದಿ ಭಸ್ಮಾಸುರನ ರೀತಿಯಲ್ಲಿ ತನ್ನ ಮುಂದಿನ ಆಹುತಿಗಳಿಗಾಗಿ ದೆಹಲಿಯ ಗುದ್ದುಗೆಗಾಗಿ ತಡಕಾಡುತ್ತಿದ್ದಾನೆ. ಅಪಾರ ಮಹಾತ್ವಾಕಾಂಕ್ಷಿಯಾದ ಈ ಅದ್ಭುತ ಭಾಷಣಕಾರ ನರೇಂದ್ರ ಮೋದಿಯ ಸರ್ವಾಧಿಕಾರಕ್ಕೆ ಮುಂದಿನ ಪ್ರಯೋಗಶಾಲೆ ಕೇಂದ್ರದಲ್ಲಿನ ಅಧಿಕಾರ. ಆದರೆ ಫ್ಯಾಸಿಸ್ಟರಿಗೆ ಎಂದೂ ಮಣೆ ಹಾಕದ ಭಾರತದ ಆರೋಗ್ಯವಂತ ಮನಸ್ಸು ಸರ್ವಾಧಿಕಾರಿ ಮೋದಿಗೂ ಸರಿಯಾಗಿಯೇ ಕಪಾಳಮೋಕ್ಷ ಮಾಡಲಿದೆ. ಹಿಂದೂ ಧರ್ಮದ ಏಕರೂಪಿ ಸಂಸ್ಕೃತಿಯ ಪ್ರತಿಪಾದಕನಾದ ಈ ಮೋದಿ ಸರ್ವಾಧಿಕಾರವನ್ನು ಬಳಸಿಕೊಂಡು ಎಲ್ಲವನ್ನೂ ಸಾಧಿಸಬಹುದೆಂಬ ಹುಸಿ ನಂಬುಗೆಯಲ್ಲಿದ್ದಾನೆ. ಅನೇಕ ಸುಳ್ಳುಗಳನ್ನೊಳಗೊಂಡ ಈತನ ಅಭಿವೃದ್ಧಿ ಮಂತ್ರಗಳ ನಿಜಬಣ್ಣ ಇಂದು ಬಯಲಾಗುತ್ತಿದೆ. ಸರ್ವಾಧಿಕಾರದ ಉಕ್ಕಿನ ಹಿಡಿತದ ಆಡಳಿತದ ಶೈಲಿಯನ್ನು ಸಶಕ್ತ ಆಡಳಿತಗಾರನ ಶೈಲಿಯೆಂದು ಸ್ವತಃ ಮೋದಿ ಮತ್ತು ದಿವಾಳಿಯೆದ್ದ ಬಹುಪಾಲು ಮಾಧ್ಯಮಗಳು ಬೂಸಿ ಬಿಟ್ಟಿದ್ದು, ವರ್ಷಗಳ ಕಾಲ ಹಾದಿ ತಪ್ಪಿಸಿದ್ದು ಇಂದು ಇವೆಲ್ಲವೂ ಬತ್ತಲಾಗಿ ಬಯಲಾಗಿದ್ದೂ ಪ್ರಜ್ಞಾವಂತ ಭಾರತೀಯ ಮರೆತಿಲ್ಲ. ಈತನ ಹತ್ತು ವರ್ಷಗಳ ಕಾಲದ ಆಡಳಿತದಲ್ಲಿ ಗುಜರಾತ್‌ನ ಸೌರಾಷ್ಟ್ರ ಭಾಗವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವುದು ಇಂದು ಭಾರತದ ಕಣ್ಣ ಮುಂದಿದೆ.

ಗುಜರಾತ್‌ನ ಹುಸಿ ಅಭಿವೃದ್ಧಿಯ ಕಾಲಘಟ್ಟದಲ್ಲಿಯೇ ಆ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಸೂಚ್ಯಾಂಕ ಕೆಳಮಟ್ಟದಲ್ಲಿದೆ. Modiಖಾಸಗಿ ಮಾಲೀಕರು ಮತ್ತು ಖಾಸಗಿ ಉದ್ದಿಮೆದಾರರ ಅಭಿವೃದ್ಧಿಯನ್ನು ರಾಜ್ಯದ ಏಳ್ಗೆಯೆಂಬಂತೆ ಜಂಬ ಕೊಚ್ಚಿಕೊಂಡಿದ್ದು, ಮೇಲ್ಪದರದ, ನಗರಕೇಂದ್ರಿತ ಸುಧಾರಣೆಗಳನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ ದಾರಿ ತಪ್ಪಿಸಿದ್ದು ಇಂದು ಭಾರತೀಯ ಮನಸ್ಸಿಗೆ ನಿಧಾನವಾಗಿಯಾದರೂ ನಿಖರವಾಗಿ ಗೋಚರಿಸುತ್ತಿದೆ. ಸಣ್ಣ ಮಟ್ಟದ ಬಂಡವಾಳ ಹೂಡಿಕೆಯನ್ನು ಕೃತಕವಾಗಿ, ಕಾಲ್ಪನಿಕವಾಗಿ ದ್ವಿಗುಣಗೊಳಿಸಿ ಮೋಸದ ಅಂಕಿಅಂಶಗಳನ್ನು ತೇಲಿಬಿಟ್ಟರೂ ಅದು ಬಹಳ ಕಾಲ ನಿಲ್ಲದೇ ಮೋದಿ ನಗೆಪಾಟಲಿಗೀಡಾಗಬೇಕಾಯ್ತು. ಶಿಲಾಯುಗದ, ಮನುವಾದದ ಗುಂಪಿನ ಸ್ವಯಂಸೇವಕನೊಬ್ಬ ಇಂದು ತಾನೊಬ್ಬ ಆಧುನಿಕ ಮುಖ್ಯಮಂತ್ರಿಯೆಂದು ಅತ್ಯಂತ ಯಶಸ್ವಿಯಾಗಿ ಮಾರ್ಕೆಟಿಂಗ್ ಮಾಡಿದ್ದು ಮೋದಿಯ ಬಲು ದೊಡ್ಡ ಸಾಧನೆ. ಹಾಗೆಯೇ 2002 ರಲ್ಲಿ ಮುಸ್ಲಿಂರ ಹತ್ಯಾಕಾಂಡವೂ ಸಹ. ಇದರ ಕಲೆಯನ್ನು ಯಾವುದೇ ಬಗೆಯ ಸುಗಂಧ ದ್ರವ್ಯಗಳಿಂದಲೂ ತೊಳೆಯಲಾಗದೆ ಸೋತುಹೋಗಿರುವ ಮೋದಿ ಇಂದು ತಿರಸ್ಕೃತಗೊಂಡ ಜನಪ್ರಿಯ ರಾಜಕಾರಣಿ. ಸ್ವತಂತ್ರ ಭಾರತದಲ್ಲಿ ಇಷ್ಟರ ಮಟ್ಟಿಗೆ ಏಕಾಂಗಿಯಾದ ಜನಪ್ರಿಯ ರಾಜಕಾರಣಿಯ ಉದಾಹರಣೆ ಮತ್ತೆಲ್ಲೂ ಸಿಗಲಾರದು. ಏಕೆಂದರೆ ಶಿವ ವಿಶ್ವನಾಥನ್ ಹೇಳಿದಂತೆ ,”ಮೋದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಏಕೆಂದರೆ ಸಂವಿಧಾನವನ್ನು ಗೌರವಿಸುವ, ಒಳಗೊಳ್ಳುವಿಕೆಯ ಯಾವುದೇ ಗುಣಲಕ್ಷಣಗಳು ಈತನಲ್ಲಿಲ್ಲ.”