Daily Archives: June 20, 2013

ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

– ಪ್ರದೀಪ್ ಮಾಲ್ಗುಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ವಿದ್ವಾಂಸರು, ರಂಗಕರ್ಮಿಗಳು, ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, ಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಮುಂದಿನ ರಂಗಾಯಣದ ನಿರ್ದೇಶಕರು ಯಾರು?

ಕಳೆದ ನಾಲ್ಕು ಬಾರಿಯಿಂದ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಜನಾರ್ಧನ್ ಹೆಸರು ಮೊದಲ ಆದ್ಯತೆಯಲ್ಲಿರುತ್ತದೆ. ಆದರೆ ಮತ್ತಾರದ್ದೋ ನೇಮಕ ಆಗುತ್ತದೆ. ಅವರು ನಿರ್ದೇಶಕರಾಗದಿರುವುದಕ್ಕೆ ಕಾರಣಗಳೇನಿರಬಹುದು? ಕೇಳಿದರೆ ಆಯ್ಕೆಯ ಪ್ರಕ್ರಿಯೆಯಲ್ಲಿದ್ದವರೆಲ್ಲ ಇಬ್ಬಂದಿತನ ಮಾಡಿದರೆನಿಸುತ್ತದೆ. ಅವರೆ ಆಯ್ಕೆ ಆಗುತ್ತಾರೆಂದು ಹೇಳುತ್ತಲೆ ಆಗದಂತೆ ನೋಡಿಕೊಂಡಿದ್ದಾರೆ. ಪಿಳ್ಳೆ ನೆವಗಳನ್ನು ಹೇಳುತ್ತ ಬಂದಿದ್ದಾರೆ. ಬಿ.ವಿ.ಕಾರಂತರ ಶಿಷ್ಯರಲ್ಲೊಬ್ಬರಾದ ಜನ್ನಿ ದೇಶದ ಪ್ರಸಿದ್ಧ ರಂಗಕರ್ಮಿಗಳಲ್ಲೊಬ್ಬರು. ಒಬ್ಬ ಗಾಯಕನಾಗಿ ದಲಿತ-ಬಂಡಾಯ ಕಾವ್ಯ ಹಾಗೂ ತತ್ವಪದ ಪರಂಪರೆಗೆ ಹೊಸಜೀವ ನೀಡಿದವರು. ಸಿ.ಅಶ್ವಥ್‌ರಂತ ಸಂಗೀತ ನಿರ್ದೇಶಕರು ಜನ್ನಿಯ ಸಹಚರ್ಯದಿಂದ ತಮ್ಮ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಕಂಡವರು. ರಂಗಸಂಗೀತಕ್ಕೆ ಹೊಸತನವನ್ನು ತಂದವರಲ್ಲಿ ಜನ್ನಿ ಪ್ರಮುಖರು. ಕುಸುಮಬಾಲೆ ಕಾದಂಬರಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು. ದಲಿತ ಸಂಘರ್ಷ ಸಮಿತಿಗೆ ಮುಖವಾಣಿಯಂತ ಗಾಯಕರು. ಕನ್ನಡದ ಅಲಕ್ಷಿತ ಕಾವ್ಯಕ್ಕೆ ಸಂಗೀತ ಸಂಯೋಜಿಸಿದವರು. ಪ್ರಸಿದ್ಧ ರಂಗನಿರ್ದೇಶಕರು. ಬಸವಲಿಂಗಯ್ಯನವರ ನಂತರ ಮತ್ತೊಂದು ದಲಿತ ಪ್ರತಿಭೆ ರಂಗಾಯಣಕ್ಕೆ ಬೇಕಿಲ್ಲವೇ?

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಜನ್ನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಭೂಮಿ ಮತ್ತು ರಂಗಸಂಗೀತದಲ್ಲಿ ಪ್ರಸಿದ್ಧರಾದವರು. ಇಂಥವರಿಗೆ ಮೈಸೂರಿನಲ್ಲೆ ಇರುವ ರಂಗಾಯಣದ ನಿರ್ದೇಶಕರಾಗುವ ಅರ್ಹತೆಯಿಲ್ಲವೇ? ದಲಿತ, ಬುಡಕಟ್ಟು, ಅಲೆಮಾರಿ ಹಾಗೂ ಬೀದಿರಂಗಭೂಮಿಯಲ್ಲಿ ಪರಿಣಿತರಾದ ಜನ್ನಿ ಅಭಿಜಾತ ರಂಗಭೂಮಿಯಲ್ಲೂ ಪಳಗಿದವರು. ಅವರ ನಾಲ್ಕು ದಶಕಗಳ ರಂಗಾನುಭವ ರಂಗಾಯಣಕ್ಕೆ ಹೊಸ ಸತ್ವವನ್ನು ನೀಡಬಲ್ಲದು. ಪ್ರತಿಭಾವಂತನೊಬ್ಬನನ್ನು ಮತ್ತೆ ಮತ್ತೆ ರಂಗಾಯಣದಿಂದ ದೂರವಿಡುತ್ತಿರುವುದು ಜಾತಿಯ ಕಾರಣದಿಂದಲೋ ಅಥವಾ ಹೊಸ ವಿಚಾರಗಳು ರಂಗಾಯಣದಲ್ಲಿ ಸೃಜನಗೊಳ್ಳದಿರುವ ರಾಜಕಾರಣದಿಂದಲೋ ತಿಳಿಯುತ್ತಿಲ್ಲ.

ರಂಗಾಯಣದ ವಿಕೇಂದ್ರೀಕರಣ ಹಾಗೂ ವರ್ಗಾವಣೆ:

ರಂಗಾಯಣದ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ ಹಾಗೂ ಧಾರವಾಡ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿರುವ, ಅಭಿನಯಿಸಿರುವ ಈ ನಟ ನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಈ ನಟನಟಿಯರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. Kalamandira_Mysoreಈಗಿರುವ ಈ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಂತರ ರಂಗಾಯಣ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ನಂತರ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರನ್ನು ನೇಮಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ನಿಲಯದ ಕಲಾವಿದರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರುಗಳೊಡನೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಬಂದು-ಹೋಗುವ ನಿರ್ದೇಶಕರುಗಳ ಜೊತೆ ಅಲ್ಲಿಯೇ ಖಾಯಂ ಆಗಿರುವ ಕಲಾವಿದರು ತಗಾದೆ ತೆಗೆದದ್ದೂ ಉಂಟು. ಕಲಾವಿದರ ಅನುಭವ ರಂಗಾಯಣದ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಅನುಭವೀ ಕಲಾವಿದರು ಹಾಗೂ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿದೆ. ಏಕೆಂದರೆ, ರಂಗಾಯಣದ ’ಗೋರಾ’ ರಂಗ ಪ್ರಯೋಗದಲ್ಲಿ 16,17,18 ವಯೋಮಾನದ ಪಾತ್ರಗಳನ್ನು 35-45 ರ ಆಸುಪಾಸಿನ ಪ್ರಾಯದ ಪಾತ್ರಧಾರಿಗಳು ಅಭಿನಯಿಸುತ್ತಿದ್ದರು. ಇದು ಪ್ರೇಕ್ಷಕರಿಗಿರಲಿ, ಕಲಾವಿದರಿಗೇ ಮುಜುಗರ ತರುತ್ತಿತ್ತು.

ಸ್ವತಃ ರಂಗಭೂಮಿಯ ನಟಿ ಉಮಾಶ್ರೀ ತಮ್ಮ ರಂಗ ಗುರುಗಳಾದ ಸಿ.ಜಿ.ಕೆ.ಯ ನೆನಪಿಗಾದರೂ ತಮಗಿಂತ ಹಿರಿಯ ಸಿ.ಜಿ.ಕೆ. ರಂಗಶಿಷ್ಯ ಜನಾರ್ಧನ್ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುತ್ತಾರೆಂದು ಅಪೇಕ್ಷಿಸಬಹುದೇ?

ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಅನಿರೀಕ್ಷಿತವಲ್ಲ

– ಡಾ.ಎಸ್.ಬಿ.ಜೋಗುರ

ಮುಖ್ಯಮಂತ್ರಿಗಳು ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆಯನ್ನು ಕೇಳಿದ್ದೇ ಕೆಲವು ಸಾಹಿತಿಗಳು ತುಂಬಾ ಬೇಸರ ವ್ಯಕ್ತಪಡಿಸಿ ಕನಿಷ್ಟ ಮೂರು ವರ್ಷದ ಮಟ್ಟಿಗಾದರೂ ಇರಬೇಡವೇ..? ಎನ್ನುವ ಮಾತನಾಡಿರುವದನ್ನು ನೋಡಿದರೆ ಪ್ರಭುತ್ವಕ್ಕಂಟಿದ ಅಧಿಕಾರದ ಮೋಹವನ್ನು ಸಾಹಿತಿಗಳಿಗೂ ಮೀರಲಾಗುವದಿಲ್ಲ ಎಂಬಂತಾಯಿತು. ಸದ್ಯದ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದಲ್ಲಿಯೂ ಅನೇಕ ಬಗೆಯ ವಿಪ್ಲವಗಳಿವೆ. ಅಲ್ಲಿಯ ಮೌಲ್ಯಗಳ ಬಗೆಗಿನ ಮಾತೇ ಒಂದು ಬಗೆಯ ಕ್ಲೀಷೆಯಾಗುತ್ತದೆ. ಅಷ್ಟಕ್ಕೂ ಸಾಹಿತ್ಯಕ್ಕೂ ರಾಜಕಾರಣಕ್ಕೂ ತುಂಬಾ ವ್ಯತ್ಯಾಸಗಳು ಈಗ ಉಳಿದಿಲ್ಲ. ಕೆಲ ಸಾಹಿತಿಗಳು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇಂದು ಸಾಹಿತ್ಯಕ ವಲಯದಲ್ಲಿ ಜಾತಿ, ಧರ್ಮ, ಲಾಬಿ, ಪ್ರಭಾವಗಳ ಹಾವಳಿಯೇ ಹೆಚ್ಚಾಗಿ ಎದ್ದು ತೋರುತ್ತದೆ. ಕೆಲ ದೊಡ್ಡ ಸಾಹಿತಿಗಳ ಸಣ್ಣತನ ಅನೇಕ ಬಾರಿ ಬಯಲಾಗಿರುವದಿದೆ. ಇಂಥವರು ಸಾಹಿತಿ ಕಂ ರಾಜಕಾರಣಗಳೇ ಸರಿ. ನಡೆ-ನುಡಿಯೊಳಗೆ ಸಾರೂಪ್ಯತೆಯಿರುವ ಸಾಹಿತಿಗಳನ್ನು ಈಗ ಕೇಳುವವರೇ ಇಲ್ಲ. ಹಿಂದಿನ ಪ್ರಭುತ್ವ ತನ್ನ ಆಡಳಿತಕ್ಕೆ ಸರಿ ಹೊಂದುವವರನ್ನು ಆ ಹುದ್ದೆಗಳಲ್ಲಿ ಕೂಡಿಸಿದ್ದರೆ, ಈಗಿನ ಪ್ರಭುತ್ವ ತನಗೆ ಬೇಕಿರುವವರನ್ನು ಆ ಸ್ಥಾನದಲ್ಲಿ ಕುಳ್ಳರಿಸುತ್ತದೆ. ಅದು ನಿರೀಕ್ಷಿತವೂ ಹೌದು. ಇಲ್ಲಿ ಸಾಮರ್ಥ್ಯ, ಪ್ರತಿಭೆ, ಅರ್ಹತೆ ಎನ್ನುವ ಮಾತುಗಳೆಲ್ಲಾ ಬರೀ ಸಂಸ್ಕೃತಾನುಕರಣದ ಮೇಲ್ಪದರಿನ ಸಂಭಾಷಣೆ ಮಾತ್ರ. ಕೊನೆಗೆ ಮತ್ತೆ ಗೆಲ್ಲುವ ಸೂತ್ರಗಳೆಂದರೆ ಜಾತಿ, ಧರ್ಮ, ಲಾಬಿ, ಹಣ ಮತ್ತು ಪ್ರಭಾವಗಳೇ.. ಇವುಗಳನ್ನು ಮೀರಿ ದಕ್ಷ ಮತ್ತು ಸಮರ್ಥರಾದವರನ್ನು ಅಕಾಡೆಮಿಗಳಿಗೆ ನೇಮಿಸುವಂತಾದರೆ ಸಾಕು.

ಈಗಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮೌಲ್ಯ ಎನ್ನುವ ಪದವನ್ನು ಬಳಸುವದೇ ಮಹಾ ಪ್ರಮಾದವಾಗಿ ತೋರುತ್ತದೆ. ಧರ್ಮವನ್ನೂ ರಾಜಕಾರಣ ವ್ಯಾಪಿಸಿರುವ ಸಂದರ್ಭದಲ್ಲಿ ಜಾತಿಯನ್ನೇ ಸಾಮರ್ಥ್ಯದ ಜಾಗೆಯಲ್ಲಿ ಪ್ರಬಲ ಮಾನದಂಡವಾಗಿಸಿಕೊಂಡ ಈ ಹೊತ್ತಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ವಲಯದ ಶ್ರೇಷ್ಟತೆಯ ಬಗ್ಗೆ ಮಾತನಾಡುವವರ ಬಗ್ಗೆ ಮರುಕವೆನಿಸುತ್ತದೆ. ಅಸ್ಥಿತ್ವದಲ್ಲಿರುವ ಸರಕಾರವೊಂದು ತಾನು ಕೊಡಮಾಡುವ ಹಣಕಾಸಿನ ನೆರವಿನ ಹಿನ್ನೆಲೆಯಲ್ಲಿ ಪ್ರಭುತ್ವದ ಮೂಲಕ ಅಲ್ಲಿಯ ಆಯಕಟ್ಟಿನ ಹುದ್ದೆಗಳನ್ನು ಬದಲಿಸುವ ಸ್ವಾತಂತ್ರ್ಯ ಹೊಂದುವದು ಸರಿಯಲ್ಲ ಎನ್ನುವ ಕೂಗೇ ಒಂದು ಬಗೆಯ ರಾಜಕೀಯ ಹಿತಾಸಕ್ತಿಯಂತಿದೆ.
kannada-writers-politicsಅಕಾಡೆಮಿಗಳಲ್ಲಿ ಅಲಂಕರಿಸುವವರಿಗೆ ರಾಜೀನಾಮೆ ಕೇಳುವ ಮುನ್ನವೇ ತಾವೇ ಮುಂದಾಗಿ ಅದನ್ನು ನೀಡುವದರಲ್ಲಿ ಆ ಹುದ್ದೆಯ ಬಗೆಗೆ ಮೋಹವಿಲ್ಲ ಎನ್ನುವದನ್ನು ತೋರಿಸಿಕೊಡುವ ಮೂಲಕ ತಮಗೂ ರಾಜಕಾರಣಿಗಳಿಗೂ ಸ್ವಲ್ಪವಾದರೂ ಭಿನ್ನತೆಯಿದೆ ಎಂದು ಸಾಬೀತು ಮಾಡಬೇಕು, ಅದನ್ನು ಬಿಟ್ಟು ಹೀಗೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಆ ಹುದ್ದೆಯಿಂದ ನನ್ನನ್ನು ಕೆಳಗಿಳಿಸಿದರು ಎನ್ನುವದನ್ನೇ ಮತ್ತೆ ಮತ್ತೆ ಹಲಬುವ ಮೂಲಕ ತಾವೂ ಅಧಿಕಾರ ದಾಹಿಗಳೇ ಎನ್ನುವದನ್ನು ಸಾಬೀತು ಮಾಡಬಾರದು. ಕೆಲ ಸಾಹಿತಿಗಳು ಪ್ರಶಸ್ತಿಗಾಗಿ ಲಾಬಿ ಮಾಡುವದನ್ನು ನೋಡಿ ಜನಸಾಮಾನ್ಯನೇ ರೋಸಿ ಹೋಗಿರುವನು. ಅಷ್ಟಕ್ಕೂ ಸದ್ಯದ ಸಾಹಿತ್ಯಕ ಸಂದರ್ಭ ಯಾವ ರಾಜಕೀಯ ಪರಿಸರಕ್ಕಿಂತಲೂ ವಿಭಿನ್ನವಾಗಿಲ್ಲ. ಇಂದು ಅಮೂರ್ತವಾದ ಜಾತಿಯೇ ಬಹುತೇಕವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಿರ್ವಹಿಸುವ, ನಿರ್ದೇಶಿಸುವ ದಿನಮಾನಗಳಲ್ಲಿ ಅದ್ಯಾವ ಸಾಂಸ್ಕೃತಿಕ ಮೌಲ್ಯಗಳಿರುವ ಕ್ಷೇತ್ರದ ಬಗ್ಗೆ ಮಾತನಾಡುತ್ತಿರುವಿರಿ ಸ್ವಾಮಿ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕಾಡೆಮಿಗಳಲ್ಲಿರುವ ಅಧ್ಯಕ್ಷರುಗಳು ರಾಜೀನಾಮೆ ನೀಡಬೇಕು ಎಂದು ಕೇಳಿರುವದರಲ್ಲಿ ಒಂದು ಬಗೆಯ ತಾತ್ವಿಕತೆಯಿದೆಯಾದರೂ ರಾಜೀನಾಮೆಯ ನಂತರ ನಡೆಯಬಹುದಾದ ಆಯ್ಕೆಯ ಪಾರದರ್ಶಕತೆಯ ಬಗ್ಗೆಯೂ ಸ್ವಲ್ಪ ಯೋಚಿಸಬೇಕಾಗುತ್ತದೆ. ಹೊಸದಾಗಿ ಅಕಾಡೆಮಿಗಳಿಗೆ ನೇಮಕ ನಡೆಯಲಿದೆ ಎನ್ನುವ ಸುದ್ದಿ ಬಯಲಾದದ್ದೇ ತಡ ಮೊದಲು ಜಾತಿಯ ಲಾಬಿ ಶುರುವಾಗುತ್ತದೆ. ಅಸಹ್ಯ ಮತ್ತು ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ಈ ಜಾತಿ ಲಾಭಿ ನಡೆಯುತ್ತದೆ. ಎಲ್ಲರೂ ಅಗಾಧ ಪಂಡಿತರೇ ಆದರೂ ಎಲ್ಲರ ಸಾಮರ್ಥ್ಯದ ಮಾನದಂಡ ಜಾತಿ. ಹಿಂದೆಂದಿಗಿಂತಲೂ ಇಂದು ಹೆಜ್ಜೆ ಹೆಜ್ಜೆಗೂ ನಮ್ಮನ್ನು ಆಳುವ, ನಮ್ಮ ಎಲ್ಲ ವ್ಯವಹಾರಗಳನ್ನು ನಿರ್ಧರಿಸುವ ಒಂದು ಪ್ರಬಲ ಸಂಸ್ಥೆಯಾಗಿ ಜಾತಿ ಕೆಲಸ ಮಾಡುತ್ತಿದೆ. ಸಾಹಿತ್ಯಕ ವಲಯದಲ್ಲಂತೂ ಇದರ ಹಾವಳಿ ಮತ್ತೂ ಹೆಚ್ಚಿಗಿದೆ. ಲೇಖಕನೊಬ್ಬನ ಕೃತಿಯನ್ನು ಜಾತಿಯ ವಾಸನೆಯ ಮೂಲಕವೇ ಓದುವ, ವಿಮರ್ಶಿಸುವ ಸೂಕ್ಷ್ಮ ನಾಸಿಕವಾಹಿಗಳ ಸಂಖ್ಯೆ ಈಗ ಅಪಾರವಾಗಿದೆ. ಹೀಗಾಗಿ ಒಬ್ಬ ಹೊಸ ಬರಹಗಾರ ಈ ಸಾಂಸ್ಕೃತಿಕ ಹೊಲಸುತನದ ನಡುವೆ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೂ ಅದನ್ನು ಸರಿಯಾಗಿ ಗುರುತಿಸದ ಸಂದರ್ಭ ಸಾಹಿತ್ಯಕ ವಲಯದಲ್ಲಿದೆ. ಮಹಾನ್ ದೊಡ್ಡ ದೊಡ್ಡ ಸಾಹಿತಿಗಳೆನಿಸಿಕೊಂಡವರು ಪರೋಕ್ಷವಾಗಿ ಸ್ವಜಾತಿಯನ್ನು ಪ್ರೀತಿಸುತ್ತ, ಪೊರೆಯುತ್ತ ಬಂದಿರುವದರ ಪರಿಣಾಮವಾಗಿಯೇ ಇಂದು ಸಾಹಿತ್ಯಕ ವಲಯ ಹೇಸಿಗೆ ಹುಟ್ಟಿಸುವಂತಾಗಿದೆ. ರಾಜಕಾರಣಿಯೊಬ್ಬ ರಾಜಕೀಯ ಮಾಡುತ್ತಾನೆ ಎನ್ನುವದಾದರೆ ಅದು ಅವನ ವೃತ್ತಿ ಮತ್ತು ಪ್ರವೃತ್ತಿ. ಅಲ್ಲೊಂದು ಬಗೆಯ ತಾದಾತ್ಮ್ಯತೆ ಇದೆ. ಇನ್ನು ನಾವು ಅವನನ್ನು ಶಪಿಸಬೇಕಿರುವದು ಆತನ ಭ್ರಷ್ಟ ಗುಣ ಮತ್ತು ಸುಳ್ಳು ಭರವಸೆಗಳಿಗಾಗಿ. ಸಾಹಿತಿಯಾದವನು ಹಾಗಲ್ಲ. ನುಡಿದಂತೆ ನಡೆವವನು ಎನ್ನುವ ಹಾಗೆ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡುವವನು. ನಿಜಜೀವನಕ್ಕಿಳಿದರೆ ನಡೆ-ನುಡಿಯಲ್ಲಿ ಒಂದಾಗಿರುವ ಸಂದರ್ಭಗಳು ಅಪರೂಪ. ರಾಜಕಾರಣ ಇವನ ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ. ಆದ್ರೆ ರಾಜಕಾರಣಿಗಳು ಕೂಡಾ ನಾಚುವ ಹಾಗೆ ರಾಜಕೀಯ ಮಾಡುವ ನಾಜೂಕಯ್ಯ. ಹೀಗಾಗಿಯೇ ಇಂದು ಸಾಹಿತ್ಯಕ ವಲಯದಲ್ಲಿ ನಿಂತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮಾತನಾಡುವವರು ತುಂಬಾ ಸಿಂಪಥಿ ಗಿಟ್ಟಿಸುವವರ ಹಾಗೆ ಕಾಣುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ಸರಿಯಾದುದು. ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ತನ್ನ ಹಿಂಬಾಲಕರನ್ನು ಓಲೈಸುವದು ಮಾಮೂಲು. ಮೊದಲಿನ ರಾಜಕೀಯ ಪಕ್ಷದ ಅವಧಿಯಲ್ಲಿ ನೇಮಕಗೊಂಡವರ ಬದಲಾಗಿ ಹೊಸ ಆಯ್ಕೆ ಬಯಸುವದು ಸಹಜ. ಆದರೆ ಮೊದಲಿನ ಆಯ್ಕೆಗೂ ಮತ್ತು ಈಗಿನ ಆಯ್ಕೆಯ ನಡುವೆ ಯಾವ ವ್ಯತ್ಯಾಸಗಳೂ ಉಳಿಯಲಿಲ್ಲ ಎನ್ನುವ ಹಾಗೆ ಸಾಂಸ್ಕೃತಿಕ ವಲಯದ ಜನತೆ ಆಡಿಕೊಳ್ಳದ ಹಾಗೆ ಆಯ್ಕೆ ಮಾಡಿದರೆ ಸಾಕು ಎನ್ನುವದು ನನ್ನಂಥವರ ಆಸೆ.