ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

– ಪ್ರದೀಪ್ ಮಾಲ್ಗುಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ವಿದ್ವಾಂಸರು, ರಂಗಕರ್ಮಿಗಳು, ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, ಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಮುಂದಿನ ರಂಗಾಯಣದ ನಿರ್ದೇಶಕರು ಯಾರು?

ಕಳೆದ ನಾಲ್ಕು ಬಾರಿಯಿಂದ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಜನಾರ್ಧನ್ ಹೆಸರು ಮೊದಲ ಆದ್ಯತೆಯಲ್ಲಿರುತ್ತದೆ. ಆದರೆ ಮತ್ತಾರದ್ದೋ ನೇಮಕ ಆಗುತ್ತದೆ. ಅವರು ನಿರ್ದೇಶಕರಾಗದಿರುವುದಕ್ಕೆ ಕಾರಣಗಳೇನಿರಬಹುದು? ಕೇಳಿದರೆ ಆಯ್ಕೆಯ ಪ್ರಕ್ರಿಯೆಯಲ್ಲಿದ್ದವರೆಲ್ಲ ಇಬ್ಬಂದಿತನ ಮಾಡಿದರೆನಿಸುತ್ತದೆ. ಅವರೆ ಆಯ್ಕೆ ಆಗುತ್ತಾರೆಂದು ಹೇಳುತ್ತಲೆ ಆಗದಂತೆ ನೋಡಿಕೊಂಡಿದ್ದಾರೆ. ಪಿಳ್ಳೆ ನೆವಗಳನ್ನು ಹೇಳುತ್ತ ಬಂದಿದ್ದಾರೆ. ಬಿ.ವಿ.ಕಾರಂತರ ಶಿಷ್ಯರಲ್ಲೊಬ್ಬರಾದ ಜನ್ನಿ ದೇಶದ ಪ್ರಸಿದ್ಧ ರಂಗಕರ್ಮಿಗಳಲ್ಲೊಬ್ಬರು. ಒಬ್ಬ ಗಾಯಕನಾಗಿ ದಲಿತ-ಬಂಡಾಯ ಕಾವ್ಯ ಹಾಗೂ ತತ್ವಪದ ಪರಂಪರೆಗೆ ಹೊಸಜೀವ ನೀಡಿದವರು. ಸಿ.ಅಶ್ವಥ್‌ರಂತ ಸಂಗೀತ ನಿರ್ದೇಶಕರು ಜನ್ನಿಯ ಸಹಚರ್ಯದಿಂದ ತಮ್ಮ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಕಂಡವರು. ರಂಗಸಂಗೀತಕ್ಕೆ ಹೊಸತನವನ್ನು ತಂದವರಲ್ಲಿ ಜನ್ನಿ ಪ್ರಮುಖರು. ಕುಸುಮಬಾಲೆ ಕಾದಂಬರಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು. ದಲಿತ ಸಂಘರ್ಷ ಸಮಿತಿಗೆ ಮುಖವಾಣಿಯಂತ ಗಾಯಕರು. ಕನ್ನಡದ ಅಲಕ್ಷಿತ ಕಾವ್ಯಕ್ಕೆ ಸಂಗೀತ ಸಂಯೋಜಿಸಿದವರು. ಪ್ರಸಿದ್ಧ ರಂಗನಿರ್ದೇಶಕರು. ಬಸವಲಿಂಗಯ್ಯನವರ ನಂತರ ಮತ್ತೊಂದು ದಲಿತ ಪ್ರತಿಭೆ ರಂಗಾಯಣಕ್ಕೆ ಬೇಕಿಲ್ಲವೇ?

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಜನ್ನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಭೂಮಿ ಮತ್ತು ರಂಗಸಂಗೀತದಲ್ಲಿ ಪ್ರಸಿದ್ಧರಾದವರು. ಇಂಥವರಿಗೆ ಮೈಸೂರಿನಲ್ಲೆ ಇರುವ ರಂಗಾಯಣದ ನಿರ್ದೇಶಕರಾಗುವ ಅರ್ಹತೆಯಿಲ್ಲವೇ? ದಲಿತ, ಬುಡಕಟ್ಟು, ಅಲೆಮಾರಿ ಹಾಗೂ ಬೀದಿರಂಗಭೂಮಿಯಲ್ಲಿ ಪರಿಣಿತರಾದ ಜನ್ನಿ ಅಭಿಜಾತ ರಂಗಭೂಮಿಯಲ್ಲೂ ಪಳಗಿದವರು. ಅವರ ನಾಲ್ಕು ದಶಕಗಳ ರಂಗಾನುಭವ ರಂಗಾಯಣಕ್ಕೆ ಹೊಸ ಸತ್ವವನ್ನು ನೀಡಬಲ್ಲದು. ಪ್ರತಿಭಾವಂತನೊಬ್ಬನನ್ನು ಮತ್ತೆ ಮತ್ತೆ ರಂಗಾಯಣದಿಂದ ದೂರವಿಡುತ್ತಿರುವುದು ಜಾತಿಯ ಕಾರಣದಿಂದಲೋ ಅಥವಾ ಹೊಸ ವಿಚಾರಗಳು ರಂಗಾಯಣದಲ್ಲಿ ಸೃಜನಗೊಳ್ಳದಿರುವ ರಾಜಕಾರಣದಿಂದಲೋ ತಿಳಿಯುತ್ತಿಲ್ಲ.

ರಂಗಾಯಣದ ವಿಕೇಂದ್ರೀಕರಣ ಹಾಗೂ ವರ್ಗಾವಣೆ:

ರಂಗಾಯಣದ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ ಹಾಗೂ ಧಾರವಾಡ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿರುವ, ಅಭಿನಯಿಸಿರುವ ಈ ನಟ ನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಈ ನಟನಟಿಯರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. Kalamandira_Mysoreಈಗಿರುವ ಈ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಂತರ ರಂಗಾಯಣ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ನಂತರ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರನ್ನು ನೇಮಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ನಿಲಯದ ಕಲಾವಿದರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರುಗಳೊಡನೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಬಂದು-ಹೋಗುವ ನಿರ್ದೇಶಕರುಗಳ ಜೊತೆ ಅಲ್ಲಿಯೇ ಖಾಯಂ ಆಗಿರುವ ಕಲಾವಿದರು ತಗಾದೆ ತೆಗೆದದ್ದೂ ಉಂಟು. ಕಲಾವಿದರ ಅನುಭವ ರಂಗಾಯಣದ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಅನುಭವೀ ಕಲಾವಿದರು ಹಾಗೂ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿದೆ. ಏಕೆಂದರೆ, ರಂಗಾಯಣದ ’ಗೋರಾ’ ರಂಗ ಪ್ರಯೋಗದಲ್ಲಿ 16,17,18 ವಯೋಮಾನದ ಪಾತ್ರಗಳನ್ನು 35-45 ರ ಆಸುಪಾಸಿನ ಪ್ರಾಯದ ಪಾತ್ರಧಾರಿಗಳು ಅಭಿನಯಿಸುತ್ತಿದ್ದರು. ಇದು ಪ್ರೇಕ್ಷಕರಿಗಿರಲಿ, ಕಲಾವಿದರಿಗೇ ಮುಜುಗರ ತರುತ್ತಿತ್ತು.

ಸ್ವತಃ ರಂಗಭೂಮಿಯ ನಟಿ ಉಮಾಶ್ರೀ ತಮ್ಮ ರಂಗ ಗುರುಗಳಾದ ಸಿ.ಜಿ.ಕೆ.ಯ ನೆನಪಿಗಾದರೂ ತಮಗಿಂತ ಹಿರಿಯ ಸಿ.ಜಿ.ಕೆ. ರಂಗಶಿಷ್ಯ ಜನಾರ್ಧನ್ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುತ್ತಾರೆಂದು ಅಪೇಕ್ಷಿಸಬಹುದೇ?

4 thoughts on “ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

  1. nagraj.harapanahalli

    ನಿಜ. ರಂಗಾಯಣಕ್ಕೆ ಕಲಾವಿದ ಜನಾರ್ಧನ್ (ಜನ್ನಿ) ಅವರ ಅವಶ್ಯಕತೆ ಇದೆ. ಹೊಸ ಜೀವ ರಂಗಾಯಣಕ್ಕೆ ಬರಬೇಕಾದರೆ ಜನ್ನಿ ರಂಗಾಯಣದ ನಿರ್ದೇಶಕರಗಬೇಕು .ಸರ್ಕಾರ ಈ ಜವಾಬ್ದಾರಿ ನಿಭಾಯಿಸಬೇಕು .

    Reply
  2. prasad raxidi

    ರಂಗಾಯಣ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಮುನ್ನಡೆಸುವ ಸಾಮರ್ಥ್ಯ ಜನ್ನಿಗೆ ಖಂಡಿತ ಇದೆ. ಬಹುಷಃ ಅವರೇ ಸೂಕ್ತ ಆಯ್ಕೆ, ಆದರೆ ಇಂದಿನ ‘ರಂಗಸಮಾಜ’ವನ್ನು ಬದಲಾಯಿಸದೆ ಇದು ಸಾದ್ಯವಾದೀತೆ..?

    Reply
  3. ಮಹಾದೇವ ಹಡಪದ

    ಜನ್ನಿ ನಿರ್ದೇಶಕರಾಗಬೇಕೆಂಬ ಬಹುದಿನದ ಕನಸು ನನಸಾಗಬೇಕಾಗಿದೆ. ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಲು ಕ್ಯೂನಲ್ಲಿ ಬಹಳಷ್ಟು ಜನರಿದ್ದಾರೆ. ಆದರೆ ಆ ಹುದ್ದೆಗೂ ಒಂದಷ್ಟು ನಿಯಮಗಳನ್ನು ಮಾಡಬೇಕಿದೆ. ಯಾವದೋ ಕಾಲದಲ್ಲಿ ಜೈಸಿದ ನಾಯಕ ನಾಟಕ ನಿರ್ದೇಶನ ಮಾಡಿದ ಒಬ್ಬ ವ್ಯಕ್ತಿ ಇಂದು ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದಾರೆ. ಅವರು ಪಕ್ಕ ಬಿ.ಜೆ.ಪಿ ಸರ್ಕಾರ ನಿಯೋಜಿಸಿದ ವ್ಯಕ್ತಿ ಆದರೂ ರಾಜಿನಾಮೆ ಕೊಡುವುದಿಲ್ಲವಂತೆ. ಇನ್ನೂ ಶಿವಮೊಗ್ಗದಲ್ಲಿ ಈಶ್ವರಪ್ಪನವರ ಕೃಪಾಕಟಾಕ್ಷದಿಂದ ಇನ್ನೊಬ್ಬರು ಮಕ್ಕಳ ನಾಟಕ ಬರೆದುಕೊಂಡವರು ನಿರ್ದೇಶಕರಾಗಿದ್ದಾರೆ,.. ಈಗ ಇವರನ್ನು ಬದಲಿಸಲೇಬೇಕಿದೆ. ಈಗಿನ್ನೂ ಶೈಶಾವಸ್ಥೆಯಲ್ಲಿರುವ ಈ ಎರಡು ಸ್ವಾಯತ್ತ ಘಟಕಗಳಿಗೆ ಒಂದು ಅಸ್ತಿತ್ವ ತಂದುಕೊಡಬಲ್ಲ ನಿರ್ದೇಶಕರನ್ನು ನೇಮಿಸಬೇಕು. ಇಲ್ಲವಾದಲ್ಲಿ ಇವು ಹತ್ತರಲ್ಲಿ ಹನ್ನೊಂದಾಗಿ ಉಳಿದುಬಿಡುತ್ತವೆ. ರಂಗಾಯಣದ ಕೆಲಸ ಯಾರೋ ಮಾಡಿದ, ಯಾವದೋ ಕಾರ್ಯಕ್ರಮಗಳನ್ನು ಆಯೋಜಿಸುವುದಷ್ಟೆ ಎಂಬಂತಾಗಿದೆ. ನಿಮ್ಮಂಥ ಬಲ್ಲವರು ಈ ರಂಗಾಯಣಗಳ ದುಃಸ್ಥಿತಿ ಬಗ್ಗೆಯೂ ಚಿಂತಿಸಬೇಕು. ಕಂಪನಿ ನಾಟಕಗಳ ಮ್ಯೂಸಿಯಮ್ಮ ಆಗಬೇಕಿದೆ. ಸ್ಥಳೀಯ ಜಾನಪದ ರಂಗಭೂಮಿಗಳ ಅಧ್ಯಯನದ ಮೂಲಕ ಮೂಲಸ್ವರೂಪದ ಅಭಿನಯಪದ್ಧತಿಯನ್ನು ಹುಡುಕಾಟ ಮಾಡಬೇಕಿದೆ. ಮನಸ್ಸನ್ನು ಸ್ವಾಸ್ತ್ಯದಲ್ಲಿಡಲು ಉತ್ತಮೋತ್ತಮರ ಕತೆಗಳನ್ನು ರಂಗಕ್ಕಳವಡಿಸಬೇಕಿದೆ. ತಪ್ಪುಗ್ರಹಿಕೆಗಳನ್ನು ತಿದ್ದಿ ಮನುಷ್ಯತ್ವವನ್ನು ರೂಪಿಸಬೇಕಿದೆ. ಕ್ರಾಂತಿ ಮಾಡುವುದಕಿಂತ (ಮನಸ್ಸಿನ) ಶಾಂತಿ ಸ್ಥಾಪಿಸಬೇಕಿದೆ. ಆ ನಿಟ್ಟಿನಲ್ಲಿ ರಂಗಭೂಮಿ, ಸಂಗೀತ ಕ್ಷೇತ್ರದ ಸಾದಕರು ಸಾಮುದಾಯಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಒಟ್ಟು ಕರ್ನಾಟಕದ ರಂಗಭೂಮಿಯಲ್ಲಿ ನೇರವಾಗಿ ಜನರನ್ನು ತಲುಪುವ ಹಲವು ರೆಪರ್ಟರಿಗಳು ಬೇಕು.

    Reply

Leave a Reply to prasad raxidi Cancel reply

Your email address will not be published. Required fields are marked *