ಕನ್ನಡದಲ್ಲಿ ಮಕ್ಕಳ ಪತ್ರಿಕೆಗಳು

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರು ಎಂದರೆ ಮಕ್ಕಳು. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ, ಸಂಘಟನೆ ಹಾಗೂ ದನಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಸಮಾಜದ ಕೆಳವರ್ಗ, ತಳಸಮುದಾಯ, ರೈತ, ಕಾರ್ಮಿಕ, ಮಹಿಳೆ ಹಾಗೂ ಅಸಹಾಯಕ ವರ್ಗಕ್ಕೆ ಇವತ್ತು ತಮ್ಮ ಹಕ್ಕುಗಳ ಬಗ್ಗೆ ಒಂದಿಷ್ಟಾದರೂ ತಿಳಿವಳಿಕೆ, ಜಾಗೃತಿ ಮೂಡಿರುವುದರಿಂದ ಅವರು ಅದಕ್ಕಾಗಿ ದನಿಯೆತ್ತಿ ಕೇಳುವಂತಾ, ಸಂಘಟಿತರಾಗುವಂತಾ, ಹೋರಾಟ ಮಾಡುವಂತಾ ಹಂತವನ್ನು ತಲುಪಿದ್ದಾರೆ. ಆದರೆ ಮಕ್ಕಳು ಮುಗ್ಧರು ಮತ್ತು ಅಸಹಾಯಕರು ಆಗಿರುವುದರಿಂದ ಅವರು ಸಮಾಜದಲ್ಲಿ ಇನ್ನೂ ನಿರ್ಲಕ್ಷಿತರಾಗೇ ಉಳಿದಿದ್ದಾರೆ. ಮಕ್ಕಳ ಕುರಿತಾಗಿ ಈ ಎಲ್ಲ ಮಾತುಗಳನ್ನ ಯಾಕೆ ಹೇಳುತ್ತಿದ್ದೇನೆ ಎಂದರೆ ಮಕ್ಕಳು ನಿರ್ಲಕ್ಷಿತರಾಗಿರುವುದರಿಂದ ಮಕ್ಕಳ ಸಾಹಿತ್ಯವೂ ನಿರ್ಲಕ್ಷಿತವಾಗಿದೆ. ಹಾಗೇ ಮಕ್ಕಳ ಪತ್ರಿಕೆಗಳ ಬಗೆಗೆ, ಪತ್ರಿಕೆಗಳಲ್ಲಿ ಮಕ್ಕಳ ಬಗೆಗೆ ನಮ್ಮ ಗಮನ ಕೂಡ ಕಡಿಮೆ ಇದೆ. ನಮ್ಮಲ್ಲಿ ಮಕ್ಕಳ ಪತ್ರಿಕೋದ್ಯಮ ಎನ್ನುವಂತಾ ವಿಚಾರವೇ ಇನ್ನೂ ಜಾಗೃತಗೊಂಡಿಲ್ಲ ಎಂದರೆ ತಪ್ಪಾಗಲಾರದು.

ಇವತ್ತಿಗೂ ನಮ್ಮಲ್ಲಿ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ನಮಗೆ ಅನುಮಾನ ಇದೆ. ನಮ್ಮಲ್ಲಿ ಬಾಲ್ಯ ಎಂದರೆ ಒಟ್ಟು ಬದುಕಿನ ತಯಾರಿ ಎಂದೇ ನೋಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿಯೇ, ನೈತಿಕತೆಯ ಹಿನ್ನೆಲೆಯಲ್ಲಿಯೇ ಮಕ್ಕಳನ್ನ ಬೆಳೆಸುವ ಪರಿಪಾಠವಿದೆ. ಹಿರಿಯರೇ ಮಕ್ಕಳ ಎಲ್ಲವನ್ನೂ ನಿರ್ಧರಿಸುವಂತಾ, ಅವರ ಭವಿಷ್ಯದ ಬಗ್ಗೆ ಗೊತ್ತುಪಡಿಸುವಂತದ್ದನ್ನ ನಾವು ಕಾಣುತ್ತೇವೆ. ಹಾಗಾಗೇ ನೀತಿಕಥೆಗಳು, ಪುರಾಣದ ಕಥೆಗಳು, ಆದರ್ಶ ಪುರುಷರ, ಸಾಧಕರ ಕಥೆಗಳು, ಧಾರ್ಮಿಕ ನಡವಳಿಕೆ, ವಿಧೇಯತೆಯ ಪಾಠಗಳಿಗೆ ಬಾಲ್ಯದಲ್ಲಿ ಆದ್ಯತೆ ನೀಡಲಾಗುತ್ತದೆ. ಹಾಗೆ ನೋಡಿದರೆ ನಮ್ಮ ಜಾನಪದ ಸಾಮಗ್ರಿ ಅದ್ಭುತವಾದುದ್ದು. ಅದು ಕಲ್ಪನೆಯ ಮಾನವ ಸಹಜ ತುಡಿತವನ್ನ ಹೊತ್ತುಕೊಂಡಿದೆ. ಇದನ್ನ ಬಳಸಿಕೊಂಡೇ ನಮ್ಮ ಕಾಮಿಕ್‌ಗಳು ರೂಪುಗೊಂಡಿರುವುದು.

ಮಕ್ಕಳ ಕಲ್ಪನಾಶಕ್ತಿಯನ್ನು, ಜ್ಞಾನ, ಅನುಭವಗಳನ್ನು ವಿಸ್ತರಿಸುವ, ಅವರ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ, ರಂಜನೆ, ಮಾಹಿತಿ, ಶಿಕ್ಷಣ, ಸಮಸ್ಯೆಗಳ ಅರಿವಿನ ವಿಸ್ತರಣೆ ಮತ್ತು ಸಂತೋಷದ ಸಮಯ ಕಂಡುಕೊಳ್ಳುವಲ್ಲಿ ಪತ್ರಿಕೆ ಅತ್ಯಂತ ಅನಿವಾರ್ಯವಾದದ್ದು. ದೊಡ್ಡವರ ಪತ್ರಿಕೆ ರೂಪುಗೊಂಡ ಅನೇಕ ದಶಕಗಳ ನಂತರ ಮಕ್ಕಳ ಮಾಧ್ಯಮ ಸಾಧ್ಯತೆಯ ಬಗ್ಗೆ ಹಿರಿಯರು ಯೋಚಿಸಿದರು. ಬ್ರಿಟೀಷರ ಪ್ರಭಾವದಿಂದ, ಕ್ರಿಶ್ಚಿಯನ್ ಮಿಷಿನರಿಗಳ ಆಗಮನದಿಂದ 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಪ್ರಾರಂಭದಲ್ಲಿ ದೇಶದ ಅನೇಕ ಭಾಗಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಮಕ್ಕಳ ಪತ್ರಿಕೆಗಳು ಪ್ರಾರಂಭವಾಗಿದ್ದಕ್ಕೆ ನಮಗೆ ದಾಖಲೆಗಳು ಸಿಗುತ್ತವೆ.

ಮೊದಲ ಹಂತದಲ್ಲಿ ಮಕ್ಕಳ ಪತ್ರಿಕೆಗಳು, ಮಕ್ಕಳಿಗೆ ಅಗತ್ಯವಾದುದನ್ನು ಹಿರಿಯರೇ ಗುರುತಿಸಿ, ತಮ್ಮ ಕಲ್ಪನೆಯಲ್ಲಿ ರೂಪಿಸಿದಂತಹುದೇ ಆಗಿತ್ತು. ಅದರಲ್ಲಿ ಮಕ್ಕಳಿಗೆ ತೋರಿಸಬೇಕಾದ ಅಕ್ಕರೆ, ಆಸಕ್ತಿ, ಅವರ ಬಾಲ್ಯದ ತುಂಟಾಟ, ಆರೋಗ್ಯ, ಅವರ ಭವಿಷ್ಯವನ್ನು ಸರಿಯಾಗಿ ರೂಪಿಸಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕುರಿತು ಹಿರಿಯರಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮಾಹಿತಿಗಳೇ ಹೆಚ್ಚಾಗಿ ಇರುತ್ತಿದ್ದವು. ಹಾಗೂ ಮುಖ್ಯವಾಗಿ ಬೇರೆ ಬೇರೆ ಭಾಷೆಯ ಹಿರಿಯ ಸಾಹಿತಿಗಳೇ ಮಕ್ಕಳಿಗಾಗಿ ಪತ್ರಿಕೆಯನ್ನು ಮೊದಲು ಪ್ರಾರಂಭಿಸಿದರು ಎಂಬುದು ಗಮನಾರ್ಹವಾದುದು.

1928 ರಲ್ಲಿ ಬೆಂಗಳೂರಿನಲ್ಲಿ ನೆಲೆ ನಿಂತವರಾದ ಆಂಧ್ರಪ್ರದೇಶ ಮೂಲದ ಸಿ. ಅಶ್ವಥ್ ನಾರಾಯಣರಾವ್ ಎಂಬುವವರ ಪ್ರಕಾಶನದಡಿಯಲ್ಲಿ, ದೇವುಡು ಅವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ “ಮಕ್ಕಳ ಪುಸ್ತಕ” ಎಂಬ ಮಕ್ಕಳ ಪತ್ರಿಕೆ ಪ್ರಾರಂಭಗೊಂಡು ಎರಡು ವರ್ಷಗಳ ಕಾಲ ನಡೆಯಿತು. ಇದೇ ಕನ್ನಡದ ಮೊದಲ ಮಕ್ಕಳ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ 1935ರ ಸುಮಾರಿಗೆ ದೇವುಡು ಅವರು ಸ್ವತಂತ್ರವಾಗಿ ಪ್ರಾರಂಭಿಸಿ 25 ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ “ನಮ್ಮ ಪುಸ್ತಕ” ಎಂಬ ಪತ್ರಿಕೆ ಕನ್ನಡದಲ್ಲಿ ಅತಿ ದೀರ್ಘಕಾಲ ಹಾಗೂ ನಿರಂತರವಾಗಿ ನಡೆದ ಮೊದಲ ಮಕ್ಕಳ ಪತ್ರಿಕೆ ಎಂಬ ವಿಶೇಷಕ್ಕೆ ಪಾತ್ರವಾಗಿದೆ. ಮೊದಲು ನಾಲ್ಕಾಣೆಯಿಂದ ಪ್ರಾರಂಭವಾಗಿ ಆ ಕಾಲದಲ್ಲಿಯೇ 3 ರೂಪಾಯಿವರೆಗೆ ನಿಗದಿ ಪಡಿಸಿದ ಮಾಸಿಕವಾಗಿ ಅವರು ಮಕ್ಕಳನ್ನು ರಂಜಿಸಲು, ಅವರ ಜ್ಞಾನವೃದ್ಧಿಗಾಗಿ, ಸನ್ನಡತೆಗೆ ಪ್ರೇರೇಪಿಸಲು ವಿಶೇಷ ಕಾಳಜಿಯಿಂದ ಪತ್ರಿಕೆಯನ್ನು ರೂಪಿಸಿದ್ದು ಗೋಚರಿಸುತ್ತದೆ. ಚಿತ್ರಕಥೆ, ಚಿತ್ರಲಿಪಿ, ಚುಕ್ಕಿಚಿತ್ರ, ವಿಜ್ಞಾನದ ವಿಷಯಗಳು, ವ್ಯಕ್ತಿ ಪರಿಚಯ, ಪೋಷಕರಿಗೆ, ಶಿಕ್ಷಕರಿಗೆ ಸಲಹೆಗಳು ಹೀಗೆ ಪತ್ರಿಕೆ ಆ ಕಾಲಕ್ಕೆ ಸಮೃದ್ಧವಾಗಿಯೇ ಹೊರಬರುತ್ತಿತ್ತು ಎನ್ನಬಹುದು. ಪತ್ರಿಕೆಯಲ್ಲಿ ಫೋಟೋಗಳನ್ನು, ಚಿತ್ರಗಳನ್ನು ಮುದ್ರಿಸಲು ಪ್ರಾರಂಭಿಸಿದ್ದೂ ವಿಶೇಷ. ಅವರು ಪತ್ರಿಕೆಯನ್ನು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಬೇರೆ ಬೇರೆ ಜಿಲ್ಲೆಗೂ ವಿಸ್ತರಿಸಿದ್ದರು.

ಆರ್. ಕಲ್ಯಾಣಮ್ಮನವರು ಪ್ರಕಟಿಸುತ್ತಿದ್ದ “ಸರಸ್ವತಿ” ಎಂಬ ಪ್ರಥಮ ಮಹಿಳಾ ಪ್ರತಿಕೆಯಲ್ಲಿ ಮಕ್ಕಳಿಗಾಗಿಯೇ ಕೆಲ ಪುಟಗಳನ್ನು ಮೀಸಲಾಗಿಟ್ಟಿದ್ದರು. ನಂತರ ಅವರು ಮಕ್ಕಳ ಕೂಟದ ರೂವಾರಿಯಾಗಿ “ಮಕ್ಕಳ ಬಾವುಟ” ಪತ್ರಿಕೆ ಪ್ರಾರಂಭಿಸಿದರು. ಅನೇಕ ಹಿರಿಯ ಸಾಹಿತಿಗಳು ಇದರಲ್ಲಿ ಮಕ್ಕಳಿಗಾಗಿ ಸೃಜನಶೀಲ ಬರಹಗಳನ್ನು ಬರೆದರು. ಹಾಗೇ ಸಿಸು ಸಂಗಮೇಶರ “ಬಾಲ ಭಾರತಿ” ಉತ್ತರ ಕರ್ನಾಟಕದಲ್ಲಿ ಮಕ್ಕಳ ಪರವಾದ ಒಂದಿಷ್ಟು ಒಳ್ಳೆಯ ವಾತಾವರಣ ನಿರ್ಮಿಸಿತು. ಇದು ನಾಲ್ಕು ವರ್ಷಗಳ ಕಾಲ ನಡೆಯಿತು. ಧಾರವಾಡದ ಮಕ್ಕಳ ಮನೆಯ ಈಶ್ವರ ಕಮ್ಮಾರ ಅವರು “ಮಕ್ಕಳ ಮಂದಿರ” ಪತ್ರಿಕೆಯನ್ನು ಸುಮಾರು 3 ವರ್ಷಗಳ ಕಾಲ ಆಸಕ್ತಿಯಿಂದ ನಡೆಸಿದರು. ರಾಮದುರ್ಗದಿಂದ ನಾಗಕಲಾಲ್ ಅವರು “ಚಿಣ್ಣರ ಲೋಕ” ಎಂಬ ಪತ್ರಿಕೆಯನ್ನು 2 ವರ್ಷಗಳ ಕಾಲ ನಡೆಸಿದರು, ಬೆಂಗಳೂರಿನಿಂದ “ಚಿಗುರು” ಪತ್ರಿಕೆ ಅಂದವಾಗಿ ಮುದ್ರಣಗೊಂಡು ಒಳ್ಳೆಯ ಮುಖಪುಟದೊಂದಿಗೆ ಕೆಲ ಸಮಯ ಬಂತು. ಒಳ ಪುಟಗಳೂ ಒಳ್ಳೆಯ ಆಸಕ್ತರಿಂದ ಸೊಗಸಾಗಿ ಸಂಯೋಜನೆಗೊಂಡು ಬರುತ್ತಿತ್ತು. ಹೀಗೇ ಪುಟಾಣಿ, ಪಾಪಚ್ಚಿ, ಅಂಗಳ ಎನ್ನುವ ಮಕ್ಕಳ ಪತ್ರಿಕೆಗಳು ಭರವಸೆ ಹುಟ್ಟಿಸಿ ಅಲ್ಪ ಕಾಲಕ್ಕೆ ಕಣ್ಮರೆಯಾದವು. “ಅಂಗಳ” ಬಲು ದೊಡ್ಡ ಆಕಾರದಲ್ಲಿ ಅಂದವಾಗಿ ಹಲವಾರು ಹೊಸತುಗಳಿಗೆ ಹೊಸಗಾಲದ ಅಗತ್ಯಗಳಿಗೆ ತುಡಿಯುವ ಎಲ್ಲ ಸಾಧ್ಯತೆಗಳನ್ನು ತೋರಿಸಿದ್ದ ಪತ್ರಿಕೆ. ಕುಮಾರ ಪಟ್ಟಣದಿಂದ ಪ್ರಕಾಶ್ ರಾವ್ ಅವರು “ಅಮೃತವರ್ಷಿಣಿ” ಎನ್ನುವ ಪತ್ರಿಕೆಯನ್ನು ಕಳೆದ 7-8 ವರ್ಷದಿಂದ ತರುತ್ತಿದ್ದಾರೆ. ಇದು ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಶೈಕ್ಷಣಿಕ ಹಿನ್ನಲೆಯಲ್ಲಿ ಹೊರಬರುತ್ತಿದೆ. ಹಾಗೇ ಭಾರತ ಸಂಸ್ಕೃತಿ ವಿದ್ಯಾಲಯದವರು “ವಿವೇಕ” ಎಂಬ ಪತ್ರಿಕೆಯನ್ನು ತರುತ್ತಿದ್ದಾರೆ. ಚಳ್ಳಕೆರೆಯ ಯರ್ರಿಸ್ವಾಮಿಯವರು ಕಳೆದ 15 ವರ್ಷಗಳಿಂದ ವಿಜ್ಞಾನಕ್ಕೆ ಸಂಬಂದಿಸಿದ ವಿಷಯಗಳನ್ನು ಮಕ್ಕಳಿಗೆ ತಲುಪಿಸಲಿಕ್ಕಾಗಿಯೇ “ಪುಟಾಣಿ ವಿಜ್ಞಾನ” ಎಂಬ ಪತ್ರಿಕೆ ತರುತ್ತಿದ್ದಾರೆ.

ಹೀಗೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಇನ್ನೂ ಅಲ್ಲಲ್ಲಿ ನಡೆದಿರಬಹುದು. ಶಿವಮೊಗ್ಗದಲ್ಲಿ “ಮಕ್ಕಳ ಮಂಟಪ” ಎನ್ನುವ ಪತ್ರಿಕೆ ಬರುತ್ತಿದೆ. ಹಾಗೇ ದಕ್ಷಿಣ ಕನ್ನಡದ ಬಿ.ಸಿ ರೋಡ್‌ನಿಂದ ವಾಣಿಯೆನ್ನುವವರು “ಸಿಂಫನಿ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆ. ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಶಿಕ್ಷಣ ಸಂಸ್ಥೆಯಿಂದ ಬರುತ್ತಿರುವ “ಸಂಜೀವಿನಿ” ಎನ್ನುವ ಪತ್ರಿಕೆ ದಶಕಗಳನ್ನು ದಾಟಿ ಮುಂದುವರೆದಿದ್ದು ಆ ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ. ರಾಣೀಬೆನ್ನೂರಿನಿಂದ ಬರುತ್ತಿರುವ “ಯಶಸ್ವಿನಿ” ಆದಷ್ಟೂ ಶೈಕ್ಷಣಿಕವಾಗಿ ಕಾಣಿಸಿಕೊಂಡಿದ್ದರೂ ನಿರಂತರವಾಗಿ ಬರುತ್ತಿದೆ.

ಈ ನಿಟ್ಟಿನಲ್ಲಿ ಧಾರವಾಡದ ಶಂಕರ ಹಲಗತ್ತಿಯವರು ತರುತ್ತಿರುವ “ಗುಬ್ಬಚ್ಚಿಗೂಡು” ಈಗ ಬಹುಶಃ ಕನ್ನಡದಲ್ಲಿ, ಕನ್ನಡದವರ ಪ್ರಯತ್ನವಾಗಿ ಎದ್ದು ಕಾಣುವಂತಿದೆ. ಈಗಾಗಲೇ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನೆಡೆದಿದೆ. ಆದಷ್ಟೂ ಶೈಕ್ಷಣಿಕವಾಗಿಯೇ ಕಾಣಿಸಿಕೊಳ್ಳುತ್ತಿರುವ ಪತ್ರಿಕೆ ಶಾಲಾ ಸಂಸ್ಥೆಗಳನ್ನೇ ನೆಚ್ಚಿಕೊಂಡರೆ ಅದೇ ಮಾರ್ಗದಲ್ಲಿ ಹೆಜ್ಜೆ ಇಡಬೇಕಾಗಬಹುದು. ಇದರೊಂದಿಗೇ ಪತ್ರಿಕೆ ಸೃಜನಶೀಲವಾದ ಹಲವಾರು ಪ್ರಯತ್ನಗಳನ್ನು ಹೊಸಕಾಲದ ಮಕ್ಕಳಿಗಾಗಿ ಮಾಡುತ್ತಿರುವುದು ಗಮನಾರ್ಹ. ಹಿರಿಯ ಮಕ್ಕಳ ಸಾಹಿತಿಗಳ ಬರಹಗಳ ಜೊತೆಗೆ ಮಕ್ಕಳ ಕಲ್ಪನೆ, ಸೃಜನಶೀಲತೆಗೂ ಹೆಚ್ಚಿನ ಒತ್ತು ನೀಡಿದೆ. ಗುಣಮಟ್ಟದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ, ವ್ಯಾವಹಾರಿಕವಾಗಿ ಪೈಪೋಟಿಯನ್ನು ಎದುರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ಯೋಚಿಸಿಲ್ಲ. ಮಕ್ಕಳ ಕುರಿತು ನೈಜ್ಯ ಕಾಳಜಿಯಿರುವುದು ಪತ್ರಿಕೆಯಲ್ಲಿ ಗೋಚರಿಸುವುದರಿಂದ ಆಶಾಭಾವನೆ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ. [ಮಕ್ಕಳ ಪತ್ರಿಕೆಗಳ ಕುರಿತ ಈ ಎಲ್ಲ ಮಾಹಿತಿಗಳನ್ನು ಖ್ಯಾತ ಮಕ್ಕಳ ಸಾಹಿತಿಗಳಾದ ಡಾ.ಆನಂದ ಪಾಟೀಲರು ವಿಸ್ತೃತವಾಗಿ ಅಧ್ಯಯನ ನಡೆಸಿ ದಾಖಲಿಸಿದ್ದಾರೆ.]

ಹಾಗೇ ಮಕ್ಕಳೇ ನಡೆಸುವ ಪತ್ರಿಕೆಗಳು ಈಗ ನಮ್ಮ ನಡುವೆ ಕೆಲವಿವೆ. ತೀರ್ಥಹಳ್ಳಿಯ ಮುದ್ದು ನಡೆಸುವ “ಮಂದಾನಿಲ” ಅಲ್ಪ ಕಾಲದಲ್ಲಿಯೇ ಗಮನಿಸುವಂತಾ ಸಾಧನೆ ಮಾಡಿದೆ. ಹಾಗೇ ಹಾಸನದಲ್ಲಿ ಪ್ರೇರಣಾ ವಿಕಾಸ ವೇದಿಕೆಯ ಕೆಲವು ಮಕ್ಕಳು ಸೇರಿ “ಪ್ರೇರಣಾ” ಎನ್ನುವ ಪತ್ರಿಕೆ ನಡೆಸುತ್ತಿದಾರೆ. ಇದರ ಸಂಪಾದಕಿ ಅನಘ. ಸಮಾಜಮುಖಿ ಒಲವುಗಳುಳ್ಳ ದಿಟ್ಟ ಪತ್ರಿಕೆಯಾಗಿ ಇದು ರೂಪುಗೊಂಡಿದೆ. ಮಕ್ಕಳಿಗಾಗಿ ಹಿರಿಯರು ಬರೆಯುವುದಕ್ಕೂ ಮಕ್ಕಳೇ ನೇರವಾಗಿ ತಮ್ಮ ಪತ್ರಿಕೆಯನ್ನು ತರುವುದಕ್ಕೂ ಇರುವ ವ್ಯತ್ಯಾಸವನ್ನು ಇದರಿಂದ ಗುರುತಿಸಬಹುದಾಗಿದೆ.

ಈ ಬಗೆಯ ಎಲ್ಲಾ ಪ್ರಯತ್ನಗಳನ್ನು ಗಮನಿಸಿದಾಗ ಸಾಹಿತ್ಯಾಸಕ್ತರೇ ಇಂಥ ಪತ್ರಿಕೆಯ ಹಿಂದೆ ಇರುವುದು ಗೋಚರಿಸುತ್ತದೆ. ಆದರೆ ಅವರ ಮುಖ್ಯವಾದ ಸಮಸ್ಯೆ ಎಂದರೆ ಆರ್ಥಿಕ ಸಬಲತೆ ಇಲ್ಲದಿರುವುದು. ಕೇವಲ ಉತ್ಸಾಹ, ಆಸಕ್ತಿಯೇ ಇಲ್ಲಿನ ಬಂಡವಾಳ. ಕೇವಲ ಚಂದಾ ಹಣದ ಮೇಲೆ ಅವಲಂಬಿಸುವ ಇವು ಪತ್ರಿಕೆಯ ಮಾರಾಟ ಜಾಲವನ್ನು ವ್ಯವಸ್ಥಿತವಾಗಿ ತೂಗಿಸಲಾಗದೇ ಅಲ್ಪ ಕಾಲದಲ್ಲೇ ಕೊನೆಯುಸಿರೆಳೆಯುತ್ತವೆ. ಅಥವಾ ನಷ್ಟದಲ್ಲಾದರೂ ಸರಿ ಪ್ರಯತ್ನವನ್ನು ಕೈ ಬಿಡಬಾರದೆಂದು ಆಸಕ್ತರು ತಾವೇ ಹಣ ಹಾಕಿ ಆಗುವವರೆಗೂ ಮುಂದುವರೆಸುತ್ತಾರೆ. ಕನ್ನಡದಲ್ಲಿ ಇದುವರೆಗೆ ನಡೆದ ಪ್ರಯತ್ನಗಳೆಲ್ಲಾ ಈ ಬಗೆಯವೇ ಆಗಿವೆ. ಹಾಗೇ ಇವಾವುವೂ ಉದ್ಯಮವಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಮುನ್ನೆಡೆದಿಲ್ಲ ಎಂಬುದು ಗಮನಾರ್ಹ. ಈ ಎಲ್ಲ ಪತ್ರಿಕೆಗಳಿಗೆ ಹಿನ್ನೆಲೆಯಾಗಿ ಉದ್ಯಮಿಗಳ ಬೆಂಬಲವಿಲ್ಲದಿರುವುದೂ ಕನ್ನಡ ಮಕ್ಕಳ ಪತ್ರಿಕೆಗಳು ಸೋಲನುಭವಿಸುತ್ತಿರುವುದಕ್ಕೆ ಮುಖ್ಯ ಕಾರಣವಾಗಿವೆ. ನಮ್ಮ ಯಾವ ಪ್ರತಿಷ್ಟಿತ ಪತ್ರಿಕಾ ಸಂಸ್ಥೆಯವರು ಮಕ್ಕಳ ಪತ್ರಿಕೆಯನ್ನು ಮಾಡುವ ಸಾಹಸಕ್ಕೆ ಹೋಗಲಿಲ್ಲ. ಎಲ್ಲರಿಗೂ ಆಗುವ ಮಾಸಿಕ, ಪಾಕ್ಷಿಕ, ವಾರಪತ್ರಿಕೆಗಳು ಮಕ್ಕಳಿಗಾಗಿ ಒಂದಿಷ್ಟು ಪುಟಗಳನ್ನು ಮೀಸಲಿರಿಸಿ ತೃಪ್ತಿಕಂಡಿವೆ. ಅಲ್ಲೇ ಕೆಲವರು ಹೊಸತಿಗೆ ತುಡಿದುದು, ಉತ್ಸಾಹ ತೋರಿದುದು ಕಾಣುತ್ತದೆ. ಹಾಗೆ ಇನ್ನಷ್ಟು ಆಸಕ್ತಿಯಿಂದ ಗಂಭೀರ ಪ್ರಯತ್ನ ಮಾಡಿ “ಪುಟಾಣಿ ವಿಜಯ” ದ ಹೆಸರಲ್ಲಿ 2 ವರ್ಷಗಳ ಕಾಲ ಮೊದಲಿಗೆ ಮಕ್ಕಳ ಪುರವಣಿ ತಂದವರೆಂದರೆ ವಿಜಯ ಕರ್ನಾಟಕದವರು. ಹಾಗೇ ಸಂಯುಕ್ತ ಕರ್ನಾಟಕದವರು ಮಕ್ಕಳಿಗಾಗಿ ತರುತ್ತಿರುವ “ಕಿಂದರ ಜೋಗಿ” ಪುರವಣಿ ಗಮನಿಸುವಂತಾ ಪ್ರಯತ್ನ ಮಾಡುತ್ತಿದೆ. ಇದನ್ನು ಮೀರಿ ಹೊಸ ಪ್ರಯತ್ನಗಳೇನೂ ಪತ್ರಿಕಾ ಮಾಧ್ಯಮದಲ್ಲಿ ಆಗಿಲ್ಲ.

ಇದಕ್ಕೆ ಅಪವಾದವೆನ್ನುವಂತೆ ಕೇವಲ ಉದಯವಾಣಿ ಪತ್ರಿಕಾ ಸಮೂಹದವರು ತರುತ್ತಿರುವ “ತುಂತುರು” ಒಂದು ಕನ್ನಡದ ಎಣಿಸಬಹುದಾದ ಗಟ್ಟಿಯಾದ ಪ್ರಯತ್ನ. ಇದರ ಸಂಪಾದಕರು ಸಂಧ್ಯಾ ಪೈ ಅವರು. ಪತ್ರಿಕಾರಂಗದ ಅನುಭವ ಸಾಕಷ್ಟಿರುವ, ಆರ್ಥಿಕ ಬೆಂಬಲ ಗಟ್ಟಿಯಾಗಿರುವ ಈ ಸಂಸ್ಥೆಯ ಪ್ರಯತ್ನ, ಸಮರ್ಥ ವಿತರಣಾ ಜಾಲದಿಂದಾಗಿ 10 ವರ್ಷಗಳನ್ನು ದಾಟಿ ಮುನ್ನೆಡೆದಿದೆ. “ತುಂತುರು” ಬಣ್ಣ ಬಣ್ಣವಾಗಿ ಅಂದವಾಗಿ ಬರುತ್ತಿದ್ದು ಕರ್ನಾಟಕದಲ್ಲಿ ಈ ರೀತಿಯ ಬೇರೆ ಮಕ್ಕಳ ಪತ್ರಿಕೆಯ ಸ್ಪರ್ಧೆಯ ಭಯ ಅನುಭವಿಸಿಲ್ಲ. ಈಗ ಮಕ್ಕಳ ಲೋಕದಲ್ಲಿರುವ ಎಲ್ಲಾ ಗಿಮಿಕ್‌ಗಳನ್ನೂ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಾಕ್ಷಿಕವಾಗಿ 10-12 ರ ವಯಸ್ಸಿನ ಮಕ್ಕಳಿಗಾಗಿ ಅತ್ಯಂತ ಸುಂದರವಾಗಿ ಬರುತ್ತಿರುವುದು ಶ್ಲಾಘನೀಯ ಪ್ರಯತ್ನವಾಗಿದೆ.

ಹಾಗೇ ಕನ್ನಡದ ಮಕ್ಕಳಿಗಾಗಿ ಹೊರ ರಾಜ್ಯದಿಂದ ಬರುತ್ತಿರುವ ಪತ್ರಿಕೆಗಳು ಅನೇಕವಿವೆ. ಭಾರತದಲ್ಲಿ ಬಹುಶಃ ಚಂದಮಾಮದಷ್ಟು ಜನಪ್ರಿಯವಾದ ಮಕ್ಕಳ ಪತ್ರಿಕೆ ಇನ್ನೊಂದಿರಲಿಕ್ಕಿಲ್ಲ. 1947ರಲ್ಲಿ ಪ್ರಾರಂಭಗೊಂಡ ಇದು ನಿರಂತರವಾಗಿ 60 ವರ್ಷಗಳನ್ನು ಯಶಸ್ವಿಯಾಗಿ ದಾಟಿ ನಡೆದುಬರುತ್ತಿದೆ. 2008 ರಿಂದ ಈ ಪತ್ರಿಕೆಗೆ ಹೊಸ ಆಯಾಮ ನೀಡಲಾಗಿದೆ. ಭಾಷೆ, ಪ್ರಸ್ತುತಿ, ಚಿತ್ರ, ದೃಶ್ಯ, ಸಂವಹನ, ವಸ್ತು ಎಲ್ಲ ರೀತಿಯಲ್ಲೂ ಹೊಸತನ ಸಾಧಿಸಿದೆ. ಸಮಕಾಲೀನ ಸ್ಪಂದನೆಯ ಕತೆ, ಸಾಹಸ ಸರಣಿ, ಕ್ರೀಡಾ ಸಮಾಚಾರ, ತಾಂತ್ರಿಕ ರಂಗದ ಸುದ್ದಿಗಳು, ವಿಜ್ಞಾನ ಹೀಗೆ ಇವತ್ತಿನ ಮಕ್ಕಳ ನಿರೀಕ್ಷೆಯನ್ನು ಅಚ್ಚರಿಪಡುವಷ್ಟು ಸಮರ್ಥವಾಗಿ ತುಂಬಿಕೊಡುತ್ತಿದೆ. ಸಂವೇದನಾಶೀಲ ಸಾಮಗ್ರಿ ಹಾಗೂ ಶೈಕ್ಷಣಿಕ ಸಾಮಗ್ರಿ ಎಲ್ಲವನ್ನೂ ನೀಡಲು ಈಗ ಪತ್ರಿಕೆ ಸಜ್ಜಾಗಿದೆ. ಈಗ ಸ್ವಲ್ಪ ದೊಡ್ಡ ಮಕ್ಕಳಿಗಾಗಿಯೇ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸಲಾಗುತ್ತಿದೆ. ಈಗ ಇಂಗ್ಲೀಷಲ್ಲದೇ, ಕನ್ನಡವನ್ನೂ ಒಳಗೊಂಡಂತೆ ಭಾರತದ ಇತರ ೧೨ ಭಾಷೆಗಳಲ್ಲಿ ಚಂದಮಾಮ ಬರುತ್ತಿದೆ.

ಹಾಗೇ ಹೊರರಾಜ್ಯದಿಂದ ಕನ್ನಡದ ಮಕ್ಕಳಿಗಾಗಿ ಬರುತ್ತಿದ್ದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ನಿಯತಕಾಲಿಕಗಳು champaka2ಈಗ ಉಸಿರು ಕಳೆದುಕೊಂಡಿವೆ. ಆದರೆ ಮೂಲ ಕೇರಳದ ಮಂಗಳಂ ಪಬ್ಲಿಕೇಷನ್ಸ್ ಕನ್ನಡದಲ್ಲಿ “ಬಾಲಮಂಗಳ” ಮತ್ತು “ಬಾಲಮಂಗಳ ಚಿತ್ರಕಥಾ” ಎಂಬ ಎರಡು ಪಾಕ್ಷಿಕವನ್ನು ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಇತ್ತೀಚೆಗಿನ ಕೆಲ ವರ್ಷಗಳಿಂದ ಪುಟಾಣಿ ಮಕ್ಕಳಿಗಾಗಿ “ಗಿಳಿವಿಂಡು” ಎಂಬ ಮಾಸಿಕವನ್ನು ತರುತ್ತಿದ್ದಾರೆ. ಇದು ವ್ಯಾಪಾರಿ ಉದ್ದೇಶವನ್ನೂ ಮೀರಿದ ಒಂದು ಒಳ್ಳೆಯ ಪ್ರಯತ್ನ. ಹಾಗೇ “ಚಂಪಕ” ಕೂಡ ಮಕ್ಕಳಿಗೆ ಇಷ್ಟವಾಗುವ ಒಳ್ಳೆಯ ಪತ್ರಿಕೆ.

ಈ ಎಲ್ಲಾ ಪತ್ರಿಕೆಗಳನ್ನು ಹಾಗೇ ಗಮನಿಸಿದರೆ ಇವುಗಳಲ್ಲಿನ ಸಾಮಾನ್ಯವಾದ ಸೂತ್ರವನ್ನು ಕಂಡುಕೊಳ್ಳಬಹುದು. ಇವು ಮಕ್ಕಳ ಭಾವನಾತ್ಮಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡು ಸಾಮಾನ್ಯವಾದ ಒಂದಿಷ್ಟು ಫಾರ್ಮುಲಾಗಳನ್ನು ಅನುಸರಿಸುತ್ತಿವೆ. ಕಾಮಿಕ್ಸ್ ಎಲ್ಲ ಮಕ್ಕಳ ಪತ್ರಿಕೆಗಳ ಮುಖ್ಯ ಆಕರ್ಷಣೆ. ಹಾಗೇ ರಂಜನೆ, ಮಾಹಿತಿ, ಶಿಕ್ಷಣವೇ ಇವುಗಳ ಮುಖ್ಯ ಗುರಿ. ಸಾಮಾನ್ಯವಾಗಿ ಮಕ್ಕಳು ಎಂದರೆ ನಿರ್ದಿಷ್ಟ ವಯೋವರ್ಗವನ್ನು ಗುರುತಿಸಲಾಗದಿದ್ದರೂ 7 ವರ್ಷದಿಂದ 10-12 ವರ್ಷದವರೆಗಿನ ಮಕ್ಕಳನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆದರೆ ಹೈಸ್ಕೂಲ್ ಮಕ್ಕಳಿಗೆ ಇಷ್ಟವಾಗುವ, ಅವರ ಸಮಸ್ಯೆಗಳನ್ನು ಕುರಿತು ಚರ್ಚಿಸುವಂತಾ ವಾಸ್ತವ ಲೋಕದ ಗಂಭೀರ ಸಾಮಗ್ರಿ ಇಲ್ಲಿ ಅಷ್ಟಾಗಿ ಕಾಣುವುದಿಲ್ಲ. ಸುಮಾರಾಗಿ ಹೈಸ್ಕೂಲಿಗೆ ಬಂದ ಮಕ್ಕಳ ಗ್ರಹಿಕೆ ಹಿಗ್ಗುತ್ತಿರುತ್ತದೆ. ಸುತ್ತಲಿನ ಅನೇಕ ಸಂಗತಿಗಳು ಅವರನ್ನು ದಿಗಿಲುಗೊಳಿಸುತ್ತವೆ. ಮನೆ, ಶಾಲೆ, ಗೆಳೆಯರ ನಡುವೆ, ಸಮಾಜದಲ್ಲಿ ಕಾಣುವ ಅನಪೇಕ್ಷಿತ ಎಂದುಕೊಳ್ಳುವ ಎಷ್ಟೋ ಸಂಗತಿಗಳಾಗಬಹುದು. ಎಲ್ಲವನ್ನೂ ಮಕ್ಕಳು ನೋಡುತ್ತಾರೆ, ಅನುಭವಿಸುತ್ತಾರೆ. ತಮ್ಮೊಳಗೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿಕೊಳ್ಳುತ್ತಾರೆ. ಇಂಥದ್ದಕ್ಕೆಲ್ಲಾ ಸ್ಪಂದಿಸುವ ಸಂವೇದನಾಶೀಲ ಬರವಣಿಗೆ ನಮ್ಮ ಈ ಮಕ್ಕಳ ಪತ್ರಿಕೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಮಕ್ಕಳು ಎಂದರೆ ನಿರ್ದಿಷ್ಟವಾಗಿ 5 ರಿಂದ 8, 8 ರಿಂದ 12, 12 ರಿಂದ 16 ವರ್ಷದವರನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿಯೇ ಮಕ್ಕಳ ಪತ್ರಿಕೆಗಳು ರೂಪುಗೊಂಡರೆ ಅದರ ಉದ್ದೇಶ ಸಫಲವಾಗುತ್ತದೆ. ರಂಜನೆಯ ಹಾಗೆಯೇ ಮಕ್ಕಳಿಗೆ ಬೌದ್ಧಿಕ ಕಸರತ್ತು ಮುಟ್ಟಿಸುವ ಆಟದ ಹೊಸ ಬಗೆಗಳ ಪ್ರಯತ್ನವೂ ಇತ್ತೀಚೆಗೆ ಆಗಿಲ್ಲ. ಅವರ ಬೇರೆ ಬೇರೆ ತಲ್ಲಣ, ಕಳವಳ, ಸಮಸ್ಯೆಗಳ ಕುರಿತು ವಿಶ್ಲೇಷಿಸುವ ಪ್ರಯತ್ನಗಳೂ ಆಗಿಲ್ಲ. ಪತ್ರಿಕೆಯನ್ನು ಆಸಕ್ತಿಯುತವಾಗಿ, ಆಕರ್ಷಕವಾಗಿ ರೂಪಿಸುವುದಷ್ಟೇ ಅಲ್ಲ ಅದನ್ನು ಮಕ್ಕಳಿಗೆ ಯಶಸ್ವಿಯಾಗಿ ಮುಟ್ಟಿಸುವ ಪ್ರಯತ್ನವೂ ಆಗಬೇಕು. ಜಾಹಿರಾತಿನ ಹೊಸ ಹೊಸ ಸಾಧ್ಯತೆಗಳನ್ನು ಬಳಸಿಕೊಂಡರೂ ತಪ್ಪಿಲ್ಲ. ಪತ್ರಿಕೆ ಮಕ್ಕಳಿಗೆ ತಲುಪಿ ಅವರದನ್ನು ಆಸ್ವಾದಿಸುವಂತಾಗಬೇಕು. ಅವರ ಕಲ್ಪನಾಶಕ್ತಿ, ವಿವೇಕ, ಜ್ಞಾನ, ಅನುಭವ ಇದರಿಂದ ವಿಸ್ತರಿಸಲು ಮತ್ತು ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಮಾನಸಿಕವಾಗಿ ಸಬಲರಾಗಲು ಅನುಕೂಲ ಆಗಬೇಕು.

ಮಕ್ಕಳಿಗೆ ಮಾಹಿತಿಯಾಧಾರಿತವಾಗಿ ಇತಿಹಾಸ, ವಿಜ್ಞಾನ, ಪ್ರಾದೇಶಿಕ ವಿಶೇಷತೆ, ಪ್ರಾಣಿ-ಪಕ್ಷಿ ವೈಶಿಷ್ಟ್ಯ, ರೋಚಕ ಸಂಗತಿಗಳು ಹೀಗೆ ನಾನಾ ಬಗೆಯಲ್ಲಿ ಮಾಹಿತಿಯನ್ನೂ ರಂಜನೀಯವಾಗಿ ಕೊಡುವ ಪ್ರಯತ್ನಗಳು ಮತ್ತಷ್ಟು ಹೆಚ್ಚಾಗಬೇಕಿದೆ. ಯಾವ ಮಕ್ಕಳ ಪತ್ರಿಕೆಯೂ ನಮ್ಮ ಸುದ್ದಿ ಮಾಧ್ಯಮಗಳು ದೊಡ್ಡವರಿಗಾಗಿ ನೀಡುವಂತದ್ದನ್ನು ಸೂಕ್ಷ್ಮವಾಗಿಯಾದರೂ ಮಕ್ಕಳಿಗೆ ನೀಡಲು ಪ್ರಯತ್ನಿಸಿಲ್ಲ. ಇವು ನಿಯತಕಾಲಿಕಗಳು ಎಂಬ ಒಂದು ಮಿತಿಯಿದ್ದರೂ ಪ್ರಚಲಿತ ಸುದ್ದಿಯನ್ನು ಮಕ್ಕಳ ಮಟ್ಟಕ್ಕೆ ಇಳಿದು ಅಗತ್ಯವಾದುದನ್ನು ನೀಡುವ ಪ್ರಯತ್ನ ಮಾಡಬಹುದು. ಹಾಗೇ ಇವತ್ತಿನ ಮಕ್ಕಳ ಜ್ವಲಂತ ಸಮಸ್ಯೆಗಳನ್ನು ಮುಖ್ಯವಾಹಿನಿಯಲ್ಲಿ ಚರ್ಚಿಸುವಂತಾ ಕೆಲಸಗಳೂ ಆಗುತ್ತಿಲ್ಲ ಎಂಬುದೂ ಒಂದು ಪ್ರಮುಖ ಆರೋಪವೇ.

ಮಕ್ಕಳೇ ಬರೆದ ಕಥೆ, ಕವಿತೆ, ಚಿತ್ರಕ್ಕೆ ಪತ್ರಿಕೆಗಳಲ್ಲಿ ಜಾಗವಿರುತ್ತದೆ. ಆದರೆ ವಿಶಿಷ್ಟ ಸಾಧನೆ ಮಾಡಿದ ಮಕ್ಕಳ ವ್ಯಕ್ತಿಚಿತ್ರ, ಮಕ್ಕಳ ಪರ ಸಂಘ ಸಂಸ್ಥೆಗಳ ಪರಿಚಯ, ಅಂಗವಿಕಲ ಶಾಲಾಸಂಸ್ಥೆಯ ಪರಿಚಯ, ಅಂತಹ ಮಕ್ಕಳ ವಿಶೇಷ ಸಂದರ್ಶನಗಳು ಕಾಣಸಿಗುವುದಿಲ್ಲ. ಇಂದಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ತಜ್ಞರಿಂದ ಉತ್ತರ, ಮಕ್ಕಳ ಸ್ವಾರಸ್ಯದ ಅನುಭವಗಳಿಗೆ ಜಾಗ, ಒಂದು ವಿಷಯ ನೀಡಿ ಮಕ್ಕಳ ಅಭಿಪ್ರಾಯ ಆಹ್ವಾನಿಸುವುದು ಇಂಥವನ್ನು ಮಾಡಿದಾಗ ಮಕ್ಕಳಿಗೆ ತಾವೇ ತಮ್ಮದೊಂದು ಅನನ್ಯತೆಯನ್ನು, ಅಭಿಪ್ರಾಯವನ್ನು ರೂಪಿಸಿಕೊಳ್ಳಲು ತನ್ಮೂಲಕ ಪ್ರತ್ಯೇಕ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.

ಮಕ್ಕಳ ಪತ್ರಿಕೆಯ ಆಕಾರ, ಅದರ ದೃಶ್ಯ, ಪ್ರಸ್ತುತಿ, ಅದು ಒಳಗೊಳ್ಳಬಹುದಾದ ವಿಷಯ, ಸಾಮಗ್ರಿ ಎಲ್ಲ ವಿಶೇಷವೂ, champakaವಿಶಿಷ್ಟವೂ ಆಗಿದ್ದು ಪತ್ರಿಕಾರಂಗ ಇದಕ್ಕೆ ಪ್ರತ್ಯೇಕವಾಗಿಯೇ ತೊಡಗಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಹಿರಿಯರ ದಿನಪತ್ರಿಕೆಗೆ ನೀಡುವಷ್ಟು ಮಹತ್ವವನ್ನು ಇಂಥಹ ಮಕ್ಕಳ ನಿಯತಕಾಲಿಕಗಳಿಗೆ ನೀಡುವುದಿಲ್ಲ. ಪತ್ರಿಕೋದ್ಯಮದ ಪಠ್ಯದಲ್ಲೂ ಮಕ್ಕಳ ಪತ್ರಿಕೆಯ ಕುರಿತು ವಿಶೇಷ ಅಧ್ಯಾಯಗಳು ಕಾಣುವುದಿಲ್ಲ. ಇದೆಲ್ಲ ಆಗಬೇಕಾದ ಕೆಲಸ. ಮಕ್ಕಳ ಪತ್ರಿಕಾರಂಗದಲ್ಲಿ ತೊಡಗಿಕೊಳ್ಳುವವರು ಪ್ರತ್ಯೇಕವಾದ ವರ್ಗ. ಅವರಿಗೆ ಮಕ್ಕಳ ಮನಃಶಾಸ್ತ್ರ ಕಡ್ಡಾಯವಾಗಿ ಗೊತ್ತಿರಬೇಕು. ಮಕ್ಕಳ ಪತ್ರಿಕೆ ಅಥವಾ ಪತ್ರಿಕೆಯಲ್ಲಿ ಮಕ್ಕಳ ಪುಟಗಳನ್ನು ನೋಡಿಕೊಳ್ಳುವುದು ‘ಹೇಗೋ ಒಂದು’ ಎಂಬ ಕಾಟಾಚಾರದ ವಿಷಯವಾಗಬಾರದು. ಹಾಗೆ ಪತ್ರಕರ್ತರಿಗೆ ತರಬೇತಿ, ಮಾರ್ಗದರ್ಶನ ಸಿಗಬೇಕು. ಮಕ್ಕಳ ಪತ್ರಿಕೆಯ ಬಗೆಗೆ ಮುಖ್ಯವಾಗಿ ಮಕ್ಕಳನ್ನು ಸಂದರ್ಶಿಸಿ, ಸಮೀಕ್ಷಿಸಿ ಅವರಿಗೆ ಬೇಕಾದಂತೆಯೇ ಪತ್ರಿಕೆಯನ್ನು ರೂಪಿಸಬೇಕು. ಹಿರಿಯರು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಮಕ್ಕಳು ಪ್ರತಿ ಕ್ಷಣ ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಅಪ್ ಡೇಟ್ ಆಗುತ್ತಿರುತ್ತಾರೆ. ಅವರ ಹೊಸತನದ ಮುಂದೆ ಹಿರಿಯರು ಸದಾ ಔಟ್ ಡೇಟೆಡ್! ಹೀಗಾಗಿ ಮಕ್ಕಳ ಪತ್ರಿಕೆಯನ್ನು ರೂಪಿಸುವವರು ಹಿರಿಯರಾದರೂ ಅದು ಮಕ್ಕಳ ಮನಸ್ಸನ್ನು ಹೊಂದಿರಬೇಕು. ಅಂದರೆ ಮಕ್ಕಳಿಗೆ ಎಲ್ಲ ರೀತಿಯಲ್ಲೂ ಇಷ್ಟ ಆಗಬೇಕು. ಅವರಿಗೆ ಅದು ನೇರವಾಗಿ ಸಂಬಂಧಿಸಿದ್ದಾಗಬೇಕು.

ಮಕ್ಕಳನ್ನು ಹೇಗೆಲ್ಲಾ ಆಕರ್ಷಕವಾಗಿ ತಲುಪಬೇಕು? ಮಕ್ಕಳಿಗೆ ಇಂದು ಏನೆಲ್ಲಾ ಅಗತ್ಯವಿದೆ? ಮಕ್ಕಳಿಗೆ ವಿಭಿನ್ನವೂ, ವಿಶೇಷವೂ ಆದ ಹೊಸತೇನನ್ನು ಕೊಡಬಹುದು? ಅವಗಣನೆಗೊಳಗಾದ ಮಕ್ಕಳ ಸಮಸ್ಯೆಗಳು ಯಾವುವು? ಎಂದು ಪ್ರತಿಕ್ಷಣ ತುಡಿಯುವ, ಮಕ್ಕಳ ಲೋಕದ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅವಲೋಕಿಸುವ, ಅನುಭವಿಸುವ, ಮಕ್ಕಳ ಮನಸ್ಸನ್ನು ಪರಕಾಯ ಪ್ರವೇಶ ಮಾಡಿ ಅರಿತುಕೊಳ್ಳಬಲ್ಲ ವಿಶಿಷ್ಟ ಮನೋಧರ್ಮದವರೇ ಮಕ್ಕಳ ಪತ್ರಿಕೆಗಳನ್ನು ಮಾಡಬೇಕು. ಹಾಗೇ ಒಟ್ಟು ಪತ್ರಿಕಾ ಕ್ಷೇತ್ರದಲ್ಲಿ ಮಕ್ಕಳ ಪತ್ರಿಕಾರಂಗ ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಮೂಲಕ ವಿಭಿನ್ನವೂ, ಅನನ್ಯವೂ ಆದುದನ್ನು ಸಾಧಿಸಬೇಕಿದೆ. ಸಮಾಜ ಮಕ್ಕಳ ಜಗತ್ತಿನೆಡೆಗೆ ಒಂದಿಷ್ಟು ಗಮನ ಕೇಂದ್ರೀಕರಿಸಿದರೆ ಮಕ್ಕಳ ಪತ್ರಿಕಾ ಕ್ಷೇತ್ರದಲ್ಲಿ ಹೊಸಬೆಳಕು ಮೂಡಲು ಸಾಧ್ಯವಿದೆ.

[ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿವತಿಯಿಂದ ಧಾರವಾಡದಲ್ಲಿ ಅಕ್ಟೋಬರ್ 28 ಮತ್ತು 29, 2010 ರಂದು ಪತ್ರಕರ್ತರಿಗಾಗಿ ನಡೆದ ಮಕ್ಕಳು ಮತ್ತು ಮಾಧ್ಯಮಗಳು ಎಂಬ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ್ದು.]

One thought on “ಕನ್ನಡದಲ್ಲಿ ಮಕ್ಕಳ ಪತ್ರಿಕೆಗಳು

Leave a Reply

Your email address will not be published. Required fields are marked *