ಕುವೆಂಪು ಹೆಸರಿನಲ್ಲಿ ದುಂದು ವೆಚ್ಚ ಬೇಕೆ?

– ಪ್ರದೀಪ್ ಮಾಲ್ಗುಡಿ

ಮೈಸೂರಿನ ರಂಗಾಯಣದ ಮಲೆಗಳಲ್ಲಿ ಮದುಮಗಳು

ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಡಾ.ಕೆ.ವೈ.ನಾರಾಯಣ ಸ್ವಾಮಿಯವರು ನೀಡಿದ ರಂಗರೂಪವು ಸಿ.ಬಸವಲಿಂಗಯ್ಯನವರ ನಿರ್ದೇಶನದಲ್ಲಿ 2010ರಲ್ಲಿ ಮೈಸೂರಿನ ರಂಗಾಯಣದಲ್ಲಿ ಪ್ರಯೋಗಗೊಂಡಿತ್ತು. ಕುವೆಂಪು ಅವರ ಹೆಸರು ಹಾಗೂ ಕಾದಂಬರಿಯ ಕಾರಣಕ್ಕೆ ಹಾಗೂ ಕನ್ನಡದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗದಿಂದಾಗಿ ಇದು ಹೆಸರಾಯಿತು. ಅಂತೆಯೇ ರಂಗಾಯಣದ ಕಲಾವಿದರಿಂದ ಆ ಪ್ರಯೋಗವು ಅದ್ಭುತವಾಗಿ ಮೂಡಿಬಂದಿತ್ತು. ನಿರ್ದೇಶಕರ ವಿನ್ಯಾಸ, ಅದ್ದೂರಿ ಸೆಟ್ ಇತ್ಯಾದಿಗಳೂ ಇಲ್ಲಿ ಜೊತೆಗೂಡಿದ್ದವು.

ಆಗಲೇ ಈ ಪ್ರಯೋಗದ ಖರ್ಚಿನ ಬಗೆಗೆ ಭಿನ್ನಾಭಿಪ್ರಾಯಗಳು ಎದುರಾಗಿದ್ದವು. ಆದರೆ ಆಗ ನಾಡಿನ ಚಿಂತಕರು, ರಂಗಕರ್ಮಿಗಳು ಹಾಗೂ ಸಾಹಿತ್ಯಾಸಕ್ತರು ಪ್ರಯೋಗದ ಪರವಾಗಿ ವಾದಿಸಿದ್ದರು. ಬೆಂಗಳೂರಿನಲ್ಲಿ ಸಂಸ ಪತ್ರಿಕೆಯ ಸಂಪಾದಕರಾದ ಸುರೇಶ್ ಅವರು ಆಯೋಜಿಸಿದ್ದ ಸಂವಾದದಲ್ಲಿ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಕಿ.ರಂ.ನಾಗರಾಜ, ಡಾ.ಕೆ.ವೈ.ನಾರಾಯಣಸ್ವಾಮಿ, ಜಿ.ಕೆ.ಗೋವಿಂದರಾವ್, ಬೋಳುವಾರು ಮಹಮದ್ ಕುಂಞ, ಗುಡಿಹಳ್ಳಿ ನಾಗರಾಜ ಕ.ವೆಂ.ರಾಜಗೋಪಾಲ್, ಡಾ.ಬಿ.ವಿ.ರಾಜಾರಾಂ, ಎನ್.ಮಂಗಳ ಮೊದಲಾದ ರಂಗಾಸಕ್ತರು ಈ ಪ್ರದರ್ಶನದ ಕುರಿತು ಸಂವಾದ ನಡೆಸಿದ್ದರು. ಆಗ ಪ್ರೊ.ಕಿ.ರಂ.ನಾಗರಾಜ ಕುವೆಂಪು ಅವರ ಕವಿತೆಗಳನ್ನು ಪ್ರಯೋಗದಲ್ಲಿ ಬಳಸಿಕೊಳ್ಳದಿರುವ ಹಾಗೂ ಅವರ ಜಾತಿಯನ್ನು ಕುರಿತ ಚರ್ಚೆಗಳನ್ನು ಭಿನ್ನವಾಗಿ ಮುಖಾಮುಖಿಯಾಗಿದ್ದರು. ಆದರೆ ಆಗ ಕಿ.ರಂ.ರವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಬೆಂಗಳೂರಿನ ಪ್ರಯೋಗದಲ್ಲೂ ಯಾವುದೇ ಬೆಲೆ ಇಲ್ಲ ಎಂಬುದು ಪ್ರಯೋಗದ ನಂತರ ನನ್ನ ಅರಿವಿಗೆ ಬಂತು.

ಬೆಂಗಳೂರಿನ ಮಲೆಗಳಲ್ಲಿ ಮದುಮಗಳು

ಬೆಂಗಳೂರಿನಲ್ಲಿ ನಡೆದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನದ ಬಗೆಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವಿವಿಧ ಗಣ್ಯರು ಹಾಗೂ ಸಹೃದಯರು ಅನೇಕ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗದ ಬಗೆಗಿನ ಸಕಾರಾತ್ಮಾಕ ಅಂಶಗಳೆಲ್ಲವನ್ನು ಒಪ್ಪಿಕೊಂಡು ನನ್ನ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಬೆಂಗಳೂರಿನ ಪ್ರದರ್ಶನವನ್ನು ಮೊಟ್ಟಮೊದಲ ಬಾರಿಗೆ ನೋಡಿದವರಿಗೆ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು malegalalli-1ಓದದವರಿಗೆ ಇದು ಅದ್ಭುತವಾದ ಪ್ರದರ್ಶನ ಎನ್ನಿಸಬಹುದೇನೋ? ಆದರೆ ಮೈಸೂರಿನ ಪ್ರಯೋಗವನ್ನು ನೋಡಿದವರಿಗೆ ಹಾಗೂ ಕಾದಂಬರಿಯನ್ನು ಓದಿದವರಿಗೆ ಇಲ್ಲಿನ ಪ್ರದರ್ಶನವು ನೀರಸವೆಸನಿಸುತ್ತದೆ. ಏಕೆಂದರೆ ನಿರಂತರವಾದ 9 ಗಂಟೆಗಳ ಪ್ರಯೋಗವೊಂದು ಯಶಸ್ವಿಯಾಗಬೇಕಾದರೆ ಅನುಭವೀ ನಟನಟಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗುತ್ತದೆ. ಆಗ ಮಾತ್ರ ಇಂತಹ ಪ್ರಯೋಗಗಳ ಯಶಸ್ಸು ಸಾಧ್ಯವಾಗುತ್ತದೆ.

ಅಲ್ಲದೇ ಅನುಭವೀ ನಟರು ಸಿಕ್ಕರಷ್ಟೇ ಸಿ.ಬಸವಲಿಂಗಯ್ಯನವರ ಪ್ರದರ್ಶನವು ಯಶಸ್ಸಾಗುತ್ತದೆ. ಇಲ್ಲವಾದಲ್ಲಿ ಸಿ.ಬಸವಲಿಂಗಯ್ಯನವರು ಸಂಗೀತ, ರಂಗಪರಿಕರ, ವೇಷಭೂಷಣಗಳ ಮೇಲೆ ಹೆಚ್ಚು ಕೆಲಸ ಮಾಡುತ್ತಾರೆ. ಆ ಮೂಲಕ ಉಳಿದ ಕೊರತೆಗಳನ್ನು ನೀಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಇಲ್ಲಿ ಅವರು ಯಶಸ್ಸನ್ನೂ ಸಾಧಿಸುತ್ತಾರೆ. ಈ ಮಾತುಗಳನ್ನು ತಾವರೆ ಕೆರೇಲಿ ತಾಳಿ ಕಟ್ಟೋಕೆ ಕೂಲೀನೇ ಹಾಗೂ ಕಾತಚಿ ಕಥಾರಂಗ ಪ್ರಯೋಗಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದೇನೆ.

30.04.2013 ರಂದು ಬೆಂಗಳೂರಿನಲ್ಲಿ ಪ್ರಯೋಗವಾದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನ ತೀವ್ರವಾದ ನಿರಾಸೆಯನ್ನು ಮೂಡಿಸಿತು. ಪ್ರಸ್ತುತ ರಂಗಪ್ರಯೋಗದಲ್ಲಿ ಅನೇಕ ಅವಘಡಗಳು ಸಂಭವಿಸಿದವು. ಮೊಟ್ಟಮೊದಲು ನನಗೆ ಈ ಪ್ರಯೋಗದಲ್ಲಿ ಕುವೆಂಪುರವರ ಕಾದಂಬರಿಯ ಭಾಷೆಯೆ ಇಲ್ಲವೆನಿಸಿತು. ಪ್ರಯೋಗದಲ್ಲಿನ ನಟರ ಭಾಷಾ ಬಳಕೆ ಕಾದಂಬರಿಯ ಭಾಷೆಯ ಸಮೀಪವೂ ಸುಳಿಯಲಾಗಲಿಲ್ಲ. ಇಡೀ ಪ್ರಯೋಗದಲ್ಲಿ ಮಲೆನಾಡಿನ ಭಾಷೆಯ ಗೈರುಹಾಜರಿ ಎದ್ದು ಕಾಣುತ್ತಿತ್ತು. ಬೆಂಗಳೂರು, ಮೈಸೂರು, ಮಂಡ್ಯಗಳ ಸುತ್ತಮುತ್ತಲ ಭಾಷೆಯ ನಡುವೆ ಆಗೊಮ್ಮೆ, ಈಗೊಮ್ಮೆ ಮಲೆನಾಡಿನ ಭಾಷೆಯನ್ನು ಕೇಳಬಹುದಾಗಿತ್ತು. ಮಲೆನಾಡಿನ ಪರಿಸರದಲ್ಲಿ ಮಲೆನಾಡಿನ ಭಾಷೆಯನ್ನು ತರುವಲ್ಲಿ ಈ ಪ್ರಯೋಗ ಸೋತಿತು. ಅದು ರಂಗತಾಲೀಮಿನ ಕೊರತೆಯನ್ನು ಪ್ರಯೋಗದುದ್ದಕ್ಕೂ ಎತ್ತಿ ತೋರಿಸುತ್ತಿತ್ತು.

ಮೈಸೂರಿನಲ್ಲಿ ಅಭಿನಯಿಸಿದ ಪಾತ್ರಧಾರಿಗಳು ಹಾಗೂ ಬೀದಿ ರಂಗಭೂಮಿಯಲ್ಲಿ ಪಳಗಿದ ಕೆಲವು ನಟನಟಿಯರನ್ನು ಹೊರತು ಪಡಿಸಿದರೆ ಉಳಿದವರ ಅಭಿನಯ ಅತೃಪ್ತಿಕರವಾಗಿತ್ತು. ಸಂಭಾಷಣೆಯನ್ನು ಉರು ಹೊಡೆದು, ಅದನ್ನು ಪ್ರೇಕ್ಷಕರೆದುರು ಕಷ್ಟಪಟ್ಟು ಹೇಳಿದ ಮಾತ್ರಕ್ಕೆ ನಾಟಕವಾಗುವುದಿಲ್ಲ. ಹಾಗೆ ಉರು ಹೊಡೆದ ಸಂಭಾಷಣೆಗಳನ್ನು ಹೇಳಲು ಕೂಡ ನಟನಟಿಯರು ಸಜ್ಜಾಗಿರಬೇಕಾಗುತ್ತದೆ. ಇಲ್ಲಿನ ನಟನಟಿಯರಲ್ಲಿ ಬಹುತೇಕರು ಉರು ಹೊಡೆದ malegalalli-3ಸಂಭಾಷಣೆಯನ್ನು ಹೇಳಿಬಿಟ್ಟರೆ ಸಾಕಪ್ಪ ಎಂಬ ಭಾವನೆಯಲ್ಲೆ ನಟಿಸಿದರು. ಇನ್ನು ಕೆಲವರು ಸಂಭಾಷಣೆಯನ್ನು ಮರೆತು ಸುಮ್ಮನಾಗಿ, ಮುಂದಿನ ಸಂಭಾಷಣೆಯನ್ನು ಎದುರಿನ ಪಾತ್ರಧಾರಿಯೂ ಎತ್ತಿಕೊಳ್ಳದೆ ಆಭಾಸವಾಗುತ್ತಿತ್ತು. ಆದರೆ ಹೆಚ್ಚುಹೆಚ್ಚು ರಂಗತಾಲೀಮುಗಳು ನಡೆದಾಗ ಈ ಬಗೆಯ ಆಭಾಸಗಳು ಇಲ್ಲವಾಗುತ್ತವೆ. ನಿರಂತರವಾದ ರಂಗತಾಲೀಮಿನಿಂದ ಈ ಬಗೆಯ ತಪ್ಪುಗಳು ಪ್ರಯೋಗದಲ್ಲಿ ನುಸುಳದಂತೆ ನೋಡಿಕೊಳ್ಳಬಹುದು. ನುರಿತ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರಿಂದಲೂ ಇದು ಸಾಧ್ಯವಾಗುತ್ತದೆ. ಆದರೆ ಈ ಪ್ರಯೋಗ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿತ್ತು.

ಇನ್ನು ಸೂತ್ರಧಾರರಂತೂ ಇಡೀ ಪ್ರಯೋಗದಲ್ಲಿ ಎಲ್ಲೂ ತಮ್ಮ ಚಾಕಚಕ್ಯತೆಯನ್ನು ತೋರಿಸಲಿಲ್ಲ. ಇದುವರೆಗಿನ ಸೂತ್ರಧಾರರ ಪಾತ್ರಗಳನ್ನು ನೋಡಿರುವವರಿಗೆ ತಿಳಿದಿರುವಂತೆ, ಇವರು ಚುರುಕಾಗಿ ಇರಲಿಲ್ಲ. ಕಥನವು ವೇಗ ಪಡೆದುಕೊಳ್ಳಬೇಕಾದ ಸಂದರ್ಭದಲ್ಲೆಲ್ಲ ಇವರು ಪ್ರವೇಶಿಸಿ ಪ್ರಯೋಗದ ಟೆಂಪೋವನ್ನು ಹಾಳುಗೆಡವುತ್ತಿದ್ದರು. ದೇಯಿಯ ಸಾವಿನ ಸನ್ನಿವೇಶದಲ್ಲಿ ದೇಯಿಯ ಶವ! ವೇದಿಕೆಯಲ್ಲಿರದೇ, ದೃಶ್ಯ ಆರಂಭವಾಯಿತು. ನಂತರ ಲೈಟ್ಸ್‌ಗಳನ್ನು ಆಫ್ ಮಾಡಿ ದೇಯಿಯ ಶವವನ್ನು ಕರೆಸಲಾಯಿತು!

ಮುಸ್ಲಿಂ ಪಾತ್ರಧಾರಿಗಳಂತೂ ಇಲ್ಲಿನ ಪ್ರಯೋಗದಲ್ಲಿ ಮನುಷ್ಯರಂತೆ ಚಿತ್ರಿತವಾಗಿರಲೇ ಇಲ್ಲ. ಕ್ರೈಸ್ತ ಪಾದ್ರಿಗಳಂತೂ ಜೋಕರ್‌ಗಳಾಗಿ ಬದಲಾಗಿದ್ದರು. ಕಾದಂಬರಿಯಲ್ಲಿಲ್ಲದ ದೃಶ್ಯೀಕರಣ ಹಾಗೂ ಡಬಲ್ ಮೀನಿಂಗ್‌ಗಳಂತೂ ಪ್ರೇಕ್ಷಕರಿಂದ ಅಪಾರವಾದ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡವು. ಈ ರೀತಿಯ ಚಪ್ಪಾಳೆಗಳನ್ನು ಮೈಸೂರಿನಲ್ಲಿ ಕಾಣಲಾಗಿರಲಿಲ್ಲ. ಅಲ್ಲಿನ ನಟನಟಿಯರು ಯಾವ ಸಂದರ್ಭದಲ್ಲಿ ಏನನ್ನು, ಹೇಗೆ, ಎಷ್ಟನ್ನು ಅಭಿವ್ಯಕ್ತಿಸಬೇಕೆಂದು ಅರಿತವರಾಗಿದ್ದರು. ಅವರ ಪ್ರಬುದ್ಧತೆಯನ್ನು ನಿರ್ದೇಶಕರು ಇಲ್ಲಿನ ಪಾತ್ರಧಾರಿಗಳಿಗೆ ಕಲಿಸಬೇಕಿತ್ತು. ನಿದೇಶಕರ ಸಾಮರ್ಥ್ಯವಿರುವುದೇ ಹೊಸ ನಟರನ್ನು ಸೃಷ್ಟಿಸುವುದರಲ್ಲಿ. ಸಿ.ಬಸವಲಿಂಗಯ್ಯನವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ನಾಟಕ ನೋಡಲು ಹೋದ ನಮ್ಮಂತಹ ಅವರ ಅಭಿಮಾನಿಗಳಿಗೆ ಅದ್ಧೂರಿ ಸೆಟ್ ಹಾಗೂ ಸಿ.ಡಿ.ಸಂಗೀತ ನಿರಾಶೆ ಮೂಡಿಸಿತು. ರಂಗಸಂಗೀತದ ಸೊಗಡಿಲ್ಲದ ಗೇಯಗೀತೆಗಳು ಪ್ರಯೋಗಕ್ಕೆ ಪೂರಕವಾಗಿದ್ದರೂ ರಂಗಸಂಗೀತದ ಕೊರತೆ ಕಿವಿಗೆ ಕೇಳಿಸುತ್ತಿತ್ತು.

ಇನ್ನು ನಟನಟಿಯರ ಸಮಸ್ಯೆಯನ್ನು ಹೇಳುವಂತಿಲ್ಲ. ಪ್ರೇಕ್ಷಕರು ತಮ್ಮ ಸೀಟ್‌ಗಾಗಿ ಓಡುತ್ತಿದ್ದರೆ, ಪಾತ್ರಧಾರಿಗಳೂ ನಟಿಸಲು ಓಡುತ್ತಿದ್ದರು. ಕುವೆಂಪು ಅವರ ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ ಎಂಬ ಮಾತು ನೆನಪಾಗುತ್ತಿತ್ತು.

ಬಸವಲಿಂಗಯ್ಯನವರ ನಾಟಕಗಳ ಆಯ್ಕೆಯೇ ಇದುವರೆಗೆ ಕನ್ನಡ ರಂಗಭೂಮಿಯಲ್ಲಿ ಒಂದು ಮಹತ್ತರ ಸಂಚಲನವನ್ನು ಉಂಟು ಮಾಡುತ್ತಿದ್ದವು. ಅವರ ಅಪ್ರತಿಮ ಕ್ರಿಯಾಶೀಲತೆಗೆ ಕುಸುಮಬಾಲೆ, ಕುಲಂ, ಅಗ್ನಿ ಮತ್ತು ಮಳೆ, ಮನುಷ್ಯ ಜಾತಿ ತಾನೊಂದೆವಲಂ ಮೊದಲಾದವುಗಳನ್ನು ಉದಾಹರಿಸಬಹುದು. ಇಂತಹ ಆಯ್ಕೆಯ ಹಿಂದಿನ ಸೂಕ್ಷ್ಮತೆಗಳು ರಂಗಭೂಮಿಯ ಜೀವಂತಿಕೆ ಹಾಗೂ ಚಲನೆಗೆ ಅವಶ್ಯಕವಾದುದು. ಕುಸುಮ ಬಾಲೆಯಿಂದ, ಮಲೆಗಳಲ್ಲಿ ಮದುಮಗಳುವರೆಗಿನ ಬಸವಲಿಂಗಯ್ಯನವರ ಆಯ್ಕೆಗಳೆ ರಂಗಕರ್ಮಿಯೋರ್ವನ ಪ್ರಗತಿಪರತೆಯನ್ನು ಸೂಚಿಸುವಂತೆ, ರಂಗದಲ್ಲಿ ಅವರ ತೊಡಗುವಿಕೆಯನ್ನೂ ಮಂಡಿಸುತ್ತದೆ. ಆದರೆ ಮೈಸೂರಿನ ಮಲೆಗಳಲ್ಲಿ ಮದುಮಗಳು ಬೆಂಗಳೂರಿನಲ್ಲಿ ನೀರಸವಾದಳು. ಅದಕ್ಕೆ ಅನೇಕ ಕಾರಣಗಳಿವೆ. ಮೈಸೂರಿನ ರಂಗಾಯಣ ಕಲಾವಿದರ ಕೊರತೆ ಇಲ್ಲಿನ ಪ್ರಯೋಗದಲ್ಲಿ ಎದ್ದು ಕಾಣುತ್ತಿತ್ತು. ಹಾಗೆಯೇ ಕಾದಂಬರಿಯಲ್ಲಿ ಇಲ್ಲದ ಡಬ್ಬಲ್ ಮೀನಿಂಗ್ ಅನ್ನು ಪ್ರೇಕ್ಷಕರು ಕಲ್ಪಿಸಿಕೊಳ್ಳುವಂತೆ ಇಲ್ಲಿನ ನಟರ ಅಭಿವ್ಯಕ್ತಿ ಇತ್ತು. ಅನೇಕ ಕಡೆಗಳಲ್ಲಿ ಇದು ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನ ವಿಕೃತ ರೂಪವೆನಿಸುತ್ತಿತ್ತು. ನಾಟಕದ ಅಪಾರ್ಥಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಆದರೆ ಈ ಬಗೆಯ ಡಬಲ್ ಮೀನಿಂಗ್‌ಗಳಿಂದ ಚಪ್ಪಾಳೆ ಗಿಟ್ಟಿಸಿದ ಮಾತ್ರಕ್ಕೆ ಈ ಪ್ರಯೋಗವು ಯಶಸ್ವಿಯಾದಂತೆಯೇ? ಎಂಬ ಪ್ರಶ್ನೆಯನ್ನು ನನಗೆ ಈ ಪ್ರಯೋಗವು ಮೂಡಿಸಿತು.

ಕುವೆಂಪು ವಿಚಾರಧಾರೆಗೆ ಅಪಚಾರವಾಗಿಲ್ಲವೇ?

ಕುವೆಂಪು ಅವರು ಅಂದಿನ ಕಾಲದಲ್ಲೇ ಮದುವೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ದುಂದು ವೆಚ್ಚ ಹಾಗೂ ಪುರೋಹಿತಶಾಹಿ ಶೋಷಣೆಗಳನ್ನು ವಿರೋಧಿಸಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ಮಂತ್ರ ಮಾಂಗಲ್ಯವನ್ನು ಜಾರಿಗೆ ತರಬೇಕೆಂದು ಮನವಿ ಮಾಡಿಕೊಂಡರು. ಆದರೆ ಅವರ ಕಾದಂಬರಿಯ ರಂಗರೂಪಕ್ಕೆ ಬೆಂಗಳೂರಿನಲ್ಲಿ 2013ರ ಏಪ್ರಿಲ್ 18 ರಿಂದ ಜೂನ್ 3 ರವರೆಗೆ ನಡೆದ ಪ್ರಯೋಗಕ್ಕಾಗಿ 70 ಲಕ್ಷ ರೂಗಳನ್ನು ಖರ್ಚು ಮಾಡುತ್ತಿರುವುದು ಕುವೆಂಪು ಅವರ ವಿಚಾರಧಾರೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿಲ್ಲವೇ? ಇನ್ನಾದರೂ ಪಜ್ಞಾವಂತಿಕೆಯಿಂದ ನಾವೆಲ್ಲರೂ ವರ್ತಿಸಬೇಕಿದೆಯಲ್ಲವೇ?

ಈ ಪ್ರಯೋಗ ಬೆಂಗಳೂರಿನಲ್ಲಿ ಆರಂಭವಾದಾಗ ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧೆಡೆ ನೀರಿಗಾಗಿ ಹಾಹಾಕಾರವೆದ್ದಿತ್ತು. ಇಂತಹ ಸಂದರ್ಭದಲ್ಲಿ ನಾಳೆಯ ನೀರಿನ ಸಮಸ್ಯೆಯನ್ನು ಬಿಟ್ಟು, ಕುವೆಂಪುರವರ ಹೆಸರಿನಲ್ಲಿ ಬೊಕ್ಕಸದ 70 ಲಕ್ಷಗಳನ್ನು ಈಗಾಗಲೇ ಆಗಿರುವ ಪ್ರಯೋಗಕ್ಕಾಗಿ ಸುರಿದಿರುವುದು ಸರಿಯೇ? ಹಾಗೊಂದು ವೇಳೆ ಈ ನಾಟಕವನ್ನು ಮಾಡಿಯೆ ತೀರಬೇಕೆಂದಾದರೆ ಮೈಸೂರಿನಲ್ಲಿ ಈಗಾಗಲೇ 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಾಡಿದ ಸೆಟ್‌ಗಳನ್ನು ಹಾಗೆಯೇ ಉಳಿಸಿಕೊಂಡು ಅಲ್ಲಿಯೇ ಸಾಂದರ್ಭಿಕವಾಗಿ ಈ ಪ್ರಯೋಗವನ್ನು ಮಾಡಬಹುದಾಗಿತ್ತಲ್ಲವೇ?

ಅರ್ಥವಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ್ವಂದ್ವ ನಿಲುವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡುವ ರಂಗಪ್ರಯೋಗಗಳಿಗೆ ಪ್ರವೇಶ ಶುಲ್ಕವನ್ನು ಇಡುವಂತಿಲ್ಲ ಎಂಬ malegalalli-2ನಿಯಮವನ್ನು ಎಲ್ಲ ರಂಗತಂಡಗಳಿಗೆ ವಿಧಿಸಲಾಗಿದೆ. ಆದರೆ ಈ ನಿಯಮವನ್ನು ಈ ಪ್ರಯೋಗದಲ್ಲಿ ಮೀರಲಾಗಿದೆ. ಅಲ್ಲದೆ ಪ್ರವೇಶಕ್ಕೆ ನೂರು ರೂಪಾಯಿ ನಿಗದಿ ಮಾಡಿ, ಮಲೆಗಳಲ್ಲಿ ಮದುಮಗಳು ಪ್ರಯೋಗದ ಹಾಡುಗಳ ಸಿ.ಡಿ.ಯನ್ನು ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಅನೇಕರಿಗೆ ಈ ಸಿ.ಡಿ.ಯನ್ನೂ ಕೂಡ ನೀಡಿಲ್ಲ. ಕೇಳಿದರೆ ಆಗ ಬಾ, ಈಗ ಬಾ, ನಾಳೆ ಬಾ ಅಥವಾ ಕಲಾಕ್ಷೇತ್ರಕ್ಕೆ ಹೋಗಿ ಎಂಬ ಉತ್ತರವನ್ನು ನೀಡಲಾಗಿದೆ.

ಯುವಕರು ಹಾಗೂ ಹೊಸ ತಂಡಗಳು ಸಂಸ್ಕೃತಿ ಇಲಾಖೆಯ ಮೆಟ್ಟಿಲು ಹಾಗೂ ಕಲ್ಲುಹಾಸುಗಳನ್ನು ಸವೆಸಿದರೂ ದೊರೆಯದ ೨೦ ಸಾವಿರ ರೂಪಾಯಿಗಳ ಅನುದಾನ ಕೋಟಿ ಹಾಗೂ ಲಕ್ಷಗಳ ಲೆಕ್ಕದಲ್ಲಿ ಮತ್ತೆ ಮತ್ತೆ ಸಿ.ಬಸವಲಿಂಗಯ್ಯನವರಿಗೇ ಸಿಗುತ್ತಿರುವುದೇಕೆ? ಇರುವ ಎಲ್ಲ ಅವಕಾಶಗಳನ್ನೂ ಒಬ್ಬರಿಗೆ ನೀಡಿದರೆ ಸಾಮಾಜಿಕ ನ್ಯಾಯದ ತಕ್ಕಡಿ ವ್ಯತಿರಿಕ್ತವಾಗುವುದಿಲ್ಲವೇ? ಇದೇ 70 ಲಕ್ಷ ರೂಪಾಯಿಗಳನ್ನು ತಲಾ 20 ಸಾವಿರದಂತೆ ಹೊಸ ತಂಡ ಹಾಗೂ ನಿರ್ದೇಶಕರಿಗೆ ನೀಡಿದ್ದರೆ 350 ನಾಟಕಗಳು ಹಾಗೂ 350 ತಂಡಗಳಿಗೆ ಅವಕಾಶ ನೀಡಬಹುದಾಗಿತ್ತಲ್ಲವೇ? ಆ ಮೂಲಕ ಕರ್ನಾಟಕದಲ್ಲಿ ಹೊಸ ರಂಗಕ್ರಾಂತಿಯನ್ನೇ ಮಾಡಬಹುದಾಗಿತ್ತಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಇಬ್ಬಂದಿತನವನ್ನು ಪ್ರಶ್ನಿಸುವವರಾರು ಇಲ್ಲವೇ?

5 thoughts on “ಕುವೆಂಪು ಹೆಸರಿನಲ್ಲಿ ದುಂದು ವೆಚ್ಚ ಬೇಕೆ?

 1. kiran

  sir nimma aalochane sariyaagi ide… aadare avarellarannu keluvavaryaaru?.. yaarigu dam illaaa… yeella corrept aagiddaare… allu kuda raajakeeya…

  Reply
 2. E.Basavaraju

  We cannot always think in the lines of expenditure. We have to concentrate on the quality of the program. Malegalalli madhumagalu is an excellent production. I have seen this in Mysore and could not watch in Bangalore. The state is facing many problems and there are many was in which the funds has been spent. We have to ask funds for the programs which we got convinced.

  Reply
 3. mahadev hadapad

  ಹೆಚ್.ಆರ್.ಡಿ ಮಿನಿಸ್ಟ್ರಿ ಡಿಪಾರ್ಟಮೆಂಟನಿಂದ ಕರ್ನಾಟಕದಲ್ಲಿ ಎಷ್ಟು ತಂಡಗಳು ನಾಟಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರೆಪರ್ಟರಿಯ ಉದ್ಧೇಶಕ್ಕಾಗಿ ಕಲಾವಿದರ ಸ್ಯಾಲರಿ ಗ್ರ್ಯಾಂಟ್ ಎಷ್ಟೆಷ್ಟು ಪಡೆಯುತ್ತಿದ್ದಾರೆನ್ನುವುದು ನೋಡಿದರೆ ತಲೆಕೆಟ್ಟುಹೋಗುತ್ತದೆ. ನಾಟಕ ಕ್ಷೇತ್ರದಲ್ಲಿ|| ಹೇಳಬಾರದು ಅಂಥಂಥ ಕ್ರಿಯಾಶೀಲರು ಸ್ಯಾಲರಿ ಗ್ರ್ಯಾಂಟ್ ಪಡೆಯುತ್ತಿದ್ದಾರೆ. ಸಾಣೇಹಳ್ಳಿ, ನೀನಾಸಮ್ ಮತ್ತು ಕಿನ್ನರಮೇಳದ ಹೊರತಾಗಿ ಬೇರೊಂದು ರೆಪರ್ಟರಿಗಳನ್ನು ನಾ ಕಂಡಿಲ್ಲ. ಉಳಿದೆಲ್ಲವೂ ನುಂಗಪಪ್ಪಗಳ ಗುಳುಂ ರೆಪರ್ಟರಿಗಳೇ ಹೆಚ್ಚಾಗಿವೆ. ಅಂಥ ನುಂಗಪ್ಪಗಳು ಪ್ರಶ್ನೆ ಮಾಡುವರೇ…

  Reply
  1. Anonymous

   ಆ ಪಟ್ಟಿಯಲ್ಲಿ ನೀನಾಸಂ ನಿಂದ ಬಂದಿರುವ ಆನೇಕರ ಹೆಸರೂ ಸಹ ಇದೆ….

   Reply
 4. Anonymous

  dear, pradeep M,
  GUNAMUKHA nsd blr center students naataka nodi june 25,26 kalagrama dalli staging. deshada aarogyakkagi e nataka!

  Reply

Leave a Reply

Your email address will not be published.