ಮಾಧ್ಯಮ ಸಲಹೆಗಾರರಾಗಿ ಅಪ್ಪಟ ಪತ್ರಕರ್ತ

– ಮಧುಚಿತ್ತ ಸೋಲಂಕಿ

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ನಂತರ ಫೇಸ್‌ಬುಕ್‌ನಲ್ಲಿ ಪತ್ರಿಕೋದ್ಯಮ ವೃತ್ತಿಯಿಂದ ಹೊರನಡೆದರೂ, ಅದರ ಗುಂಗಿನಿಂದ ಹೊರಬರಲಾಗದ ಸ್ಥಿತಿಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಉತ್ತರಖಾಂಡ್‌ದಲ್ಲಿನ ಸಾವು-ನೋವುಗಳನ್ನು ವರದಿ ಮಾಡಬೇಕೆಂಬ ಹಂಬಲ ಅವರ ಮಾತಿನಲ್ಲಿತ್ತು. ಅಪ್ಪಟ ಪತ್ರಕರ್ತನಿಗೆ ಅವರ ಮಾತು ಅರ್ಥವಾಗುತ್ತೆ. ಎಲ್ಲಿ ಯಾರೇ ಸಂಕಟದಲ್ಲಿರಲಿ, ಅವರ ನೋವಿಗೆ ದನಿಯಾಗುವ ಮೂಲಕ ಅವರ ದು:ಖಕ್ಕೆ ಸ್ಪಂದಿಸಿದ ಸಮಾಧಾನ ಪಡೆಯುವವನು ಪತ್ರಕರ್ತ. ನೋವಿನಲ್ಲಿರುವವರಿಗೆ ಒಂದಿಷ್ಟು ಹಣ, ನೆರವು ನೀಡುವ ಮೂಲಕ ಇತರರಿಗೆ ಸಮಾಧಾನ ಆಗಬಹುದು. ಆದರೆ ಪತ್ರಕರ್ತನಿಗೆ ಹಾಗಲ್ಲ. ಅವರ ನೋವಿನ ಕತೆಯನ್ನು ಇತರರಿಗೂ ತಲುಪಿಸಿದರಷ್ಟೇ ಸಮಾಧಾನ.

ಸುನಾಮಿ ಬಂದು ತಮಿಳುನಾಡಿನಲ್ಲಿ ಸಾವಿರಾರು ಮಂದಿ ಸತ್ತಾಗ, ಊರುಗಳೇ ನೀರಾದಾಗ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ನೂರಾರು ಮಂದಿ ಮನೆ ಕಳೆದುಕೊಂಡಾಗ, ಭೂಕಂಪವಾದಾಗ, ಕೋಮುವಾದಿ ರಾಜಕಾರಣಿಗಳ ಸ್ವಾರ್ಥಕ್ಕಾಗಿ ರೂಪುಗೊಂಡ ಗಲಭೆಗಳಲ್ಲಿ ಅಮಾಯಕರು ಸತ್ತಾಗ.. dinesh-amin-mattuಹೀಗೆ ಏನೇ ಆದರೂ ಅಂತಹ ಸಂದರ್ಭಗಳಲ್ಲಿ ತಾನಿರಬೇಕು ಎಂದು ಬಯಸುವವನು ಅಪ್ಪಟ ಪತ್ರಕರ್ತ. ಅಮಿನ್ ಮಟ್ಟು ಅವರಲ್ಲಿ ಅಪ್ಪಟ ಪತ್ರಕರ್ತನಿರುವ ಕಾರಣದಿಂದಲೇ ಅವರು ಹೀಗೆ ಬರೆಯಲು ಸಾಧ್ಯವಾಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬುದು ಪಕ್ಕಾ ಆದ ಕೆಲವೇ ಗಂಟೆಗಳಲ್ಲಿ ಪತ್ರಿಕಾಲಯಗಳಲ್ಲಿ ಸಣ್ಣದಾಗಿ ಹರಿದಾಡುತ್ತಿದ್ದ ಸುದ್ದಿ – ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ಸೇರ್ತಾರಂತೆ. ಎರಡು ದಿನಗಳಲ್ಲಿ ದಿನೇಶ್ ಅವರು ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ದಾಯಿತು. ಹೊಸ ಜವಾಬ್ದಾರಿ ವಹಿಸಿಕೊಂಡದ್ದೂ ಆಯಿತು. ಅವರ ನಿರ್ಧಾರದ ಬಗ್ಗೆ ಅಲ್ಲಲ್ಲಿ ಚರ್ಚೆಗಳಾದವು.
“ಇವರಿಗೇಕೆ ಬೇಕಿತ್ತು?”
“ಅವರು ಇತ್ತೀಚೆಗೆ ಬರೆಯೋದನ್ನೆಲ್ಲಾ ನೋಡಿದರೆ, ಅವರು ಹೀಗೆ ಸರಕಾರ ಸೇರ್ತಾರೆ ಅಂತ ಯಾರಾದರೂ ಹೇಳಬಹುದಿತ್ತು”.
“ಅವರು ಮೊದಲಿನಿಂದಲೂ ಕಾಂಗ್ರೆಸ್ಸೇ”
“ಅದರಲ್ಲಿ ತಪ್ಪೇನಿದೆ ಬಿಡ್ರಿ. ಅದು ಒಂದು ಅವಕಾಶ. ವ್ಯವಸ್ಥೆಯಲ್ಲಿ ಸಾಧ್ಯವಾದರೆ ಒಂದಿಷ್ಟು ಉತ್ತಮ ಬದಲಾವಣೆ ತರಲಿ..”
ಹೀಗೆ ನಾನಾ ಅಭಿಪ್ರಾಯಗಳು ವ್ಯಕ್ತವಾದವು. ಹೊಸ ಜವಾಬ್ದಾರಿ ವಹಿಸಿಕೊಳ್ಳುವಾಗ ದಿನೇಶ್ ಅವರು ಕೂಡಾ ಹೀಗೆ ಗೊಂದಲವನ್ನು ಅನುಭವಿಸಿದ್ದಾರೆ ಎನ್ನುವುದು ಮಾತ್ರ ಅವರ ಫೇಸ್‌ಬುಕ್‌ ಪೋಸ್ಟ್‌ನಿಂದ ಸ್ಪಷ್ಟವಾಗಿತ್ತು. ಪ್ರಜಾವಾಣಿ ಕಚೇರಿಯನ್ನು ತೊರೆಯುವ ಬಗ್ಗೆ ಅವರಿಗಾದ ಸಂಕಟವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಅವರ ಮಾತುಗಳಲ್ಲಿ ಅವರ ನಿರ್ಧಾರದ ಹಿಂದೆ ಅನುಭವಿಸಿರಬಹುದಾದ ತಾಕಲಾಟ ಕಾಣುತ್ತಿತ್ತು.

ದಿನೇಶ್ ಅವರ ಬರಹಗಳನ್ನು ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಕೆಲವರು ಅವರು ಈ ಕೆಲಸಕ್ಕೆ ಸೂಕ್ತನಾ ಎಂದು ತಮ್ಮ ಕಾಮೆಂಟುಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಕಾರಣಗಳಿದ್ದವು. ಈ ಹಿಂದಿನ ಮುಖ್ಯಮಂತ್ರಿಯೊಬ್ಬರಿಗೆ ಇದ್ದ ಮಾಧ್ಯಮ ಸಲಹೆಗಾರರು ಆ ಹುದ್ದೆಗೆ ಸಾಕಷ್ಟು ಮಸಿಬಳಿದು ಹೋಗಿದ್ದರು. ಮಾಧ್ಯಮ ಸಲಹೆಗಾರರ ಕೆಲಸವೆಂದರೆ ಪತ್ರಕರ್ತರಿಗೆ ಆಗಾಗ ಪಾರ್ಟಿಗಳನ್ನು ಏರ್ಪಡಿಸಿ ’ತೃಪ್ತಿ’ ಪಡಿಸುವುದು, ಪೇಮೆಂಟ್ ಕೆಟಗರಿ ಪತ್ರಕರ್ತರಿಗೆ ನಿಗದಿತವಾಗಿ ಪಾಕೆಟ್ ತಲುಪಿಸುವುದು – ಎನ್ನುವಷ್ಟಕ್ಕೆ ಸೀಮಿತಗೊಳಿಸಿದ್ದರು.

ಮಾಧ್ಯಮ ಸಲಹೆಗಾರರದು ದೊಡ್ಡ ಜವಾಬ್ದಾರಿ. ಅವರು ಒಂದರ್ಥದಲ್ಲಿ ಮುಖ್ಯಮಂತ್ರಿ ಹೆಚ್ಚು ಜನಪರವಾಗಿರಲು ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಕೊಡುವವರು. ಜನಪರ ಎಂದರೆ ಅದು ಅಭಿವೃದ್ಧಿ ಪರ, ಸಾಮಾಜಿಕ ನ್ಯಾಯದ ಪರ, ಸಮಾನತೆ ಪರ, ಜಾತ್ಯತೀತ ನಿಲುವುಗಳ ಪರ. ಹೀಗೆ ಮುಖ್ಯಮಂತ್ರಿಯವರು ಸಮಾಜದ ಪರವಾಗಿ ವರ್ತಿಸುತ್ತಿದ್ದರೆ ಸಮಚಿತ್ತದ ಮಾಧ್ಯಮ ಸಹಜವಾಗಿಯೇ ಮುಖ್ಯಮಂತ್ರಿಯವರ ಒಳ್ಳೆ ಕೆಲಸಗಳಿಗೆ ಬೆಂಬಲ ಕೊಡುತ್ತದೆ. ಒಂದು ಸರಕಾರ ಹೀಗೆ ಜನರ ಮಧ್ಯೆ ಸದಾಭಿಪ್ರಾಯಕ್ಕೆ ಯೋಗ್ಯವಾಗುವಂತೆ ಮಾಡುವ ಕೆಲಸದಲ್ಲಿ ಮಾಧ್ಯಮ ಸಲಹೆಗಾರರ ಪಾತ್ರವಿದೆ. ಪತ್ರಕರ್ತರಿಗೆ ಪಾರ್ಟಿ ಏರ್ಪಡಿಸುತ್ತ ’ಮಿಡಿಯಾ ಮ್ಯಾನೇಜ್’ ಮಾಡುವುದಾದರೆ ಆಡಳಿತದ ಬಗ್ಗೆ ಜನರಲ್ಲಿ ಸದಾಭಿಪ್ರಾಯ ಇದೆ ಎಂಬ ಭ್ರಮೆಯನ್ನು ಸೃಷ್ಟಿಸಬಹುದಷ್ಟೆ.

ಈ ಹಿಂದೆ ಹಿರಿಯ ಪತ್ರಕರ್ತ ಹರೀಶ್ ಖರೆ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು. dinesh-amin-mattu-2ನಂತರ ಸಂಜಯ್ ಬಾರು ಅದೇ ಸ್ಥಾನ ವಹಿಸಿದರು. ಆ ಸ್ಥಾನವನ್ನು ತೊರೆದು ಬಂತ ನಂತರವೂ ಅವರು ತಮ್ಮ ಕ್ಷೇತ್ರಗಳಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಬೋಧನೆ) ತೊಡಗಿಸಿಕೊಂಡಿದ್ದಾರೆ. ಇವರ್‍ಯಾರೂ ಅಧಿಕಾರದ ಸ್ಥಾನಗಳ ಹತ್ತಿರ ಇದ್ದರೂ ಹೆಸರು ಕೆಡಿಸಿಕೊಳ್ಳಲಿಲ್ಲ. ಕನ್ನಡದವರೇ ಆದ ಶಾರದಾ ಪ್ರಸಾದ್ ದೆಹಲಿಯಲ್ಲಿ ಬಹಳ ಕಾಲ ಇಂದಿರಾ ಗಾಂಧಿಯವರಿಗೆ ಮಾಧ್ಯಮ ಕಾರ್ಯದರ್ಶಿಯಾಗಿದ್ದವರು. ಹೀಗೆ ಒಂದು ಪರಂಪರೆಯೇ ಇದೆ. ದಿನೇಶ್ ಅಮಿನ್ ಮಟ್ಟು ಆ ಪರಂಪರೆಯನ್ನು ಮುಂದುವರಿಸಿ ಆ ಸ್ಥಾನಕ್ಕೆ ಉನ್ನತ ಗೌರವ ತಂದುಕೊಡಬಲ್ಲರು. ಏಕೆಂದರೆ, ಅವರು ತಮ್ಮ ಒಂದು ಅಂಕಣದಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಟೀಕಿಸುತ್ತಾ.. “ಪದೇ ಪದೇ ಬಸವಣ್ಣನನ್ನು ತಮ್ಮ ಮಾತುಗಳಲ್ಲಿ ಉಲ್ಲೇಖಿಸುವ ಯಡಿಯೂರಪ್ಪ ಕಾಯಕ ಸಿದ್ಧಾಂತವನ್ನೇ ಮರೆತುಬಿಟ್ಟರು. ತನ್ನ ಸ್ವಂತ ಪರಿಶ್ರಮದ ಹೊರತಾಗಿ ಬರುವ ಎಲ್ಲಾ ಫಲವು ಅಮೇಧ್ಯ ಎಂದು ಹೇಳುವುದೇ ಕಾಯಕ ತತ್ವ” (ನೆನಪಿನಿಂದ ಬರೆದಿದ್ದು. ವಾಕ್ಯ ರಚನೆ ಬೇರೆ ಇರಬಹುದು. ಆದರೆ ಅರ್ಥ ಅದೇ) ಎಂದು ಬರೆದಿದ್ದರು. ಕಾಯಕ ತತ್ವದಲ್ಲಿ ನಂಬಿಕೆ ಇರುವವರು ಅಮಿನ್ ಮಟ್ಟು. ಅವರು ಅದನ್ನು ಮರೆಯಲಾರರು. ಅಂತೆಯೇ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರಾದರೂ ಕಾಯಕ ತತ್ವ ಪಾಲಿಸಿದರೆ, ಅವರ ಸರಕಾರ ಜನಪರವಾಗಿರುತ್ತೆ. ಇಲ್ಲವಾದರೆ ಜನ ಪಾಠ ಕಲಿಸುತ್ತಾರೆ.

7 thoughts on “ಮಾಧ್ಯಮ ಸಲಹೆಗಾರರಾಗಿ ಅಪ್ಪಟ ಪತ್ರಕರ್ತ

  1. Nanjunda Raju

    ಮಾನ್ಯರೇ, ಶ್ರೀ ದಿನೇಶ್ ಅಮಿನ್ ಮಟ್ಟು ರವರ ಲೇಖನಗಳನ್ನು ಮತ್ತು ಫೇಸ್ ಬುಕ್ ನಲ್ಲಿ ನೋಡುತ್ತಿದ್ದೆವು.ಆದರಲ್ಲಿ ಅವರ ಪತ್ರಿಕಾ ಧರ್ಮ, ಸಮಾಜಿಕ ಕಳಕಳಿ ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ಈ ಅವಕಾಶ ಎಲ್ಲಾ ಪತ್ರಕರ್ತರಿಗೂ ಸಿಗುವುದಿಲ್ಲ. ಆ ಅವಕಾಶ ಅದೃಷ್ಟವಶಾತ್ ಇವರಿಗೆ ಸಿಕ್ಕಿದೆ ಅದನ್ನು ಸದ್ಭಳಕ್ಕೆ ಮಾಡಿಕೊಂಡು ಅವರ ಕರ್ತವ್ಯಕ್ಕೆ ಕಿಂಚಿತ್ತು ಚ್ಯುತಿ ಬಾರದಂತೆ, ಪತ್ರಿಕಾ ಧರ್ಮಕ್ಕೆ ಸೂಕ್ತ ನ್ಯಾಯ ಸಿಗುವಂತೆ, ಮಾನ್ಯ ಮುಖ್ಯ ಮಂತ್ರಿಗಳ ಉತ್ತಮ ಆಡಳಿತಕ್ಕೆ ಸೂಕ್ತ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುವರೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಮತ್ತು ಆಸೆ ಕಣ್ಗಳಿಂದ ನೋಡುತ್ತಿದ್ದೇವೆ. ವಂದನೆಗಳೊಡನೆ.

    Reply
  2. Ananda Prasad

    ಮುಖ್ಯ ಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ದಿನೇಶ್ ಅಮೀನ್ ಮಟ್ಟು ಅವರ ಆಯ್ಕೆ ಉತ್ತಮ ಆಯ್ಕೆ . ಮಟ್ಟು ಅವರು ಕಾಂಗ್ರೆಸ್ಸಿನ ಹೊಗಳುಭಟ್ಟರಾಗಿ ಗುರುತಿಸಿಕೊಂಡವರಲ್ಲ. ಇವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಲ್ಲಿ ಹಿಂದೇಟು ಹಾಕಿದವರಲ್ಲ. ಪ್ರಗತಿಪರ ನಿಲುವನ್ನು ಸದಾ ಎತ್ತಿ ಹಿಡಿದ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಪತ್ರಿಕೆಯ ಗರಡಿಯಲ್ಲಿ ಪಳಗಿದ ಮಟ್ಟು ಅವರು ಸದಾ ಪ್ರಗತಿಶೀಲ ಮನೋಭಾವವನ್ನು ಎತ್ತಿ ಹಿಡಿಯುತ್ತಾ ಬಂದವರು. ಯಾವುದೇ ಆಮಿಷಗಳಿಗೆ ಬಲಿಯಾಗಿ ಪ್ರಗತಿಶೀಲ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡವರಲ್ಲ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎಂಬ ನಿಲುವಿನ ಜನ ಪತ್ರಿಕೋದ್ಯಮದಲ್ಲಿ ತೂರಿಕೊಂಡಿರುವಾಗ ಇವರು ತಮ್ಮ ನಿಲುವನ್ನು ಬಿಟ್ಟುಕೊಟ್ಟವರಲ್ಲ. ಸರಕಾರವು ಪ್ರಗತಿಶೀಲ, ಜನಪರ, ವೈಚಾರಿಕ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳಲು ಇವರು ಮುಖ್ಯ ಪಾತ್ರ ವಹಿಸಬೇಕಾಗಿದೆ ಅರ್ಥಾತ್ ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಿರಬೇಕಾಗಿದೆ. ಸರ್ಕಾರವು ಇವರ ಸಲಹೆ ಸೂಚನೆಗಳನ್ನು ಗಮನಿಸುತ್ತಾ, ಅವುಗಳನ್ನು ಪಾಲಿಸುತ್ತಾ ಇದ್ದಲ್ಲಿ ಹೆಚ್ಚಿನ ತಪ್ಪುಗಳನ್ನು ಮಾಡುವುದರಿಂದ ಪಾರಾಗಬಹುದು.

    Reply
  3. Vasanth Raju N

    Good article. In Mysore, Star of Mysore unnecessarily targeting him for his views on Swamy Vivekananda. This elite newspaper is far from the downtrodden so they never understand Dinesh Amin Mattu.

    Reply
  4. suhas, b'lore

    ನೀವು ಹೇಳಿದ್ದೆಲ್ಲವೂ ಸತ್ಯ. ಆದರೆ, ಮೊನ್ನೆ ಅದೇಕೋ ಮೈಸೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕ ಎಂದು ಮಟ್ಟು ಸರ್ಟಿಫಿಕೇಟ್ ನೀಡಿದರಂತೆ. ನಾನು ಪ್ರಾಮಾಣಿಕ ಅಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳುವಾಗ, ಮಟ್ಟು ಏಕೆ ಇಂಥಾ ಹೇಳಿಕೆ ನೀಡಬೇಕು ? ಅದು ವಿಚಾರ ಸಂಕಿರಣದಲ್ಲಿ ! ಮಟ್ಟು ಅವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೇವೆ.
    -ಸುಹಾಸ್

    Reply
  5. ಪ.ರಾಮಚಂದ್ರ, ದುಬೈ -ಸಂಯುಕ್ತ ಅರಬ್ ಸಂಸ್ಥಾನ

    ನೋವಿಗೆ ದನಿಯಾಗುವ ಮೂಲಕ ದು:ಖಕ್ಕೆ ಸ್ಪಂದಿಸಿ ಸಮಾಧಾನ ಪಡೆಯುವ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಪತ್ರಕರ್ತ.

    Reply
  6. Donald Pereira

    ದಿನೇಶ್ ಅಮೀನ್ ಮಟ್ಟು ಅವರು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಲು ಎಲ್ಲಾ ಅರ್ಹತೆಯುಳ್ಳವರು. ಸಿದ್ಧರಾಮಯ್ಯನವರು ಇಂತಹ ಉತ್ತಮ ಆಯ್ಕೆ ಮಾಡಿದುದಕ್ಕೆ ಅಭಿನಂದನಾರ್ಹರು. ದಿನೇಶ್ ಅಮೀನ್ ಮಟ್ಟುರವರ ಸೂಕ್ಷ್ಮ ಮನಸ್ಸಿಗೆ ಕನ್ನಡಿಯಂತಿತ್ತು ಅವರ Facebook ಮಾತುಗಳು. ಇದು ಮುಂದುವರಿಯಲಿ ಹಾಗೂ ಅವರ ಚಿಂತನೆಗಳು ಸರಕಾರ ಜನಪರವಾಗಿರಲು ಮಾರ್ಗದರ್ಶನ ನೀಡಲಿ ಎಂಬ ಹಾರೈಕೆ ನನ್ನದು. ಅವರನ್ನು ಟೀಕಿಸುವವರ ವಾದಕ್ಕೆ ಆಧಾರವೂ ಇಲ್ಲ, ನೈತಿಕತೆಯೂ ಇಲ್ಲ. ಕೆಲವು ಅಪ್ರಾಮಾಣಿಕ, ಸ್ವಾರ್ಥಿ ಮತ್ತು Prejudiced ಮನಸ್ಸಿನ ವ್ಯಕ್ತಿಗಳ ಟೀಕೆಗಳಿಂದಾಗಿ ದಿನೇಶ್ ಅಮೀನ್ ಮಟ್ಟುರವರ ಯೋಗ್ಯತೆ ಕಡಿಮೆಯಾಗುವುದಿಲ್ಲ. ಪ್ರಜಾಪ್ರಭುತ್ವ ವಾಕ್ ಸ್ವಾತಂತ್ರ್ಯ ಕೊಟ್ಟಿದೆ ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವ, ಬರೆಯುವ ಕೊಳಕು ಮನಸ್ಸಿನ ಪಂಡಿತರಿಗೆ ದಿನೇಶ್ ಅಮೀನ್ ಅವರ ಮಟ್ಟಕ್ಕೆ ಏರಲು ಖಂಡಿತಾ ಸಾಧ್ಯವಾಗದು. ಮಟ್ಟು ಅವರೇ, ನಾಡು ಕಂಡ ಉತ್ತಮ ಪತ್ರಕರ್ತರಾದ ನೀವು ನಿಮ್ಮ ಹೊಸ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿ, ನಾಡಿನ ಶ್ರೇಯಸ್ಸಿಗೆ ಶ್ರಮಿಸಿ.

    Reply

Leave a Reply to Nanjunda Raju Cancel reply

Your email address will not be published. Required fields are marked *