Daily Archives: June 29, 2013

ಕನ್ನಡ ಶಾಲೆಗಳ ಅಳಿವು ಉಳಿವಿನ ಪ್ರಶ್ನೆ : ಒಂದು ಸಾಧ್ಯವಿರುವ ಆಲೋಚನೆ

– ನಾಗರಾಜ್ ಹರಪನಹಳ್ಳಿ, ಕಾರವಾರ

ಜೂನ್ 27 ರಂದು ಕಾರವಾರದ ಸಾವಂತವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹೋಗಿದ್ದೆ. ಈ ಶಾಲೆ 1955 ರಲ್ಲಿ ಸ್ಥಾಪಿತವಾದದ್ದು. ಸಾವಾಂತವಾಡದ ನಿವಾಸಿಯೊಬ್ಬರು ಶಿಕ್ಷಣ ಇಲಾಖೆಗೆ 13 ಗುಂಟೆ ಜಾಗವನ್ನು ಶಾಲೆ ಸ್ಥಾಪಿಸಲು 58 ವರ್ಷಗಳ ಹಿಂದೆಯೇ ದಾನ ಮಾಡಿದ್ದರು. ಎಂಥ ಆದರ್ಶದ ಕಾಲ ನೋಡಿ ಅದು. ಇವತ್ತು ಒಂದಿಚು ಜಾಗವಿದ್ದರೆ ಅದನ್ನು ನಾವು ಬಿಡದೇ ಬೇಲಿಹಾಕಿಕೊಂಡು ಬಿಡುತ್ತೇವೆ. ಅದಿರಲಿ. kannada-schoolಈ ಕನ್ನಡ ಶಾಲೆ ನನ್ನನ್ನು ಆಕರ್ಷಿಸಿದ್ದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಈ ಶಾಲೆಯಲ್ಲಿರುವ 17 ಜನ ವಿದ್ಯಾರ್ಥಿಗಳಿಗೆ ಅಲ್ಲಿನ ಮೂರು ಜನ ಶಿಕ್ಷಕರು ತಮ್ಮ ವೇತನದ ಹಣ ಹಾಕಿ ಫಿಕ್ಸ ಡಿಪೋಜಿಟ್ ಮಾಡಿದ್ದರು. ಪ್ರತಿ ಮಗುವಿಗೆ ಪ್ರತಿ ತಿಂಗಳು 100 ರೂಪಾಯಿಯಂತೆ 8 ತಿಂಗಳ ಕಾಲ ಹಣ ಫಿಕ್ಸ ಇಡುವುದು. ಅಂದರೆ ಒಬ್ಬ ವಿದ್ಯಾರ್ಥಿ 1 ನೇ ತರಗತಿಗೆ ಪ್ರವೇಶ ಪಡೆದರೆ ಆತ ಏಳನೇ ತರಗತಿ ಮುಗಿಸಿದಾಗ ಆತನ ಖಾತೆಯಲ್ಲಿ ಬಡ್ಡಿ ಸಹಿತ 11,300 ರೂಪಾಯಿ ಜಮಾ ಆಗಿರುತ್ತದೆ. ಇದು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವ ಸದುದ್ದೇಶವೂ ಇದೆ. ಈ ಯೋಚನೆ ಶಿಕ್ಷಕರಿಗೆ ಯಾಕೆ ಬಂತು ಅಂತಾ ಅವರನ್ನೇ ಕೇಳಿದೆ. ಶಾಲೆಯನ್ನು ಉಳಿಸಿಕೊಳ್ಳಬೇಕು. ತಾವು ಉಳಿಯಬೇಕು ಎಂಬುದು ಶಿಕ್ಷಕರ ಉದ್ದೇಶ.

ಕನ್ನಡ ಶಾಲೆಯೊಂದನ್ನು ಉಳಿಸಬೇಕು. ಶಾಲೆಗೆ ಮಕ್ಕಳನ್ನು ಕರೆತರುವ ಉತ್ತಮ ಉದ್ದೇಶವೂ ಅಲ್ಲಿನ ಮೂರು ಜನ ಶಿಕ್ಷಕರದಾಗಿತ್ತು. ಅಲ್ಲಿನ ಶಿಕ್ಷಕರು ದಾನಿಗಳನ್ನು ಹಿಡಿದು ಅಲ್ಲಿನ ಮಕ್ಕಳಿಗೆ ಈಜು ತರಬೇತಿ, ಸಂಗೀತ ತರಬೇತಿ ಮತ್ತು ಇಂಗ್ಲೀಷ್ ಕೋಚಿಂಗ್ ಕೊಡಿಸಲು ಸಿದ್ಧತೆ ನಡೆಸಿದ್ದರು. 1 ರಿಂದ 7 ನೇ ತರಗತಿ ವರೆಗೆ ಇದ್ದದ್ದು 17 ಜನ ಮಕ್ಕಳು. ಆ ಶಾಲೆಯಲ್ಲಿ ಕಲಿಕಾ ಕೊಠಡಿಗಳಿವೆ. ಬಿಸಿಯೂಟಕ್ಕೆ ಕೋಣೆ ಇದೆ. ಆಟದ ಮೈದಾನವಿದೆ. ಟೀಚಿಂಗ್ ಏಡ್ ಇದೆ. ತಿರುವಿ ಹಾಕಲು ಪುಸ್ತಕಗಳು ಸಹ ಇವೆ. ಆದರೆ ಕೋಣೆ ತುಂಬುವಷ್ಟು ಮಕ್ಕಳಿಲ್ಲ !!

ಸಾವಾಂತವಾಡದಲ್ಲಿ ವಾಸಿಸುವ ಬಹುತೇಕರು ಹಿರಿಯರು. ಅವರ ಮಕ್ಕಳು, ಮೊಮ್ಮಕ್ಕಳು ಹೊರದೇಶ ಇಲ್ಲವೇ ಹೊರ ರಾಜ್ಯ (ಮುಂಬಯಿ, ಗೋವಾ) ದಲ್ಲಿ ನೆಲಸಿದ್ದಾರೆ. ಇರುವ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಕಾರವಾರಕ್ಕೆ ಕೂಲಿ ಮಾಡಲು ಬಂದ ಕಾರ್ಮಿಕರ ಮಕ್ಕಳು ಸಾವಾಂತವಾಡ ಸರಕಾರಿ ಶಾಲೆಯಲ್ಲಿದ್ದಾರೆ. ಅಲ್ಲಿರುವ ಎಲ್ಲಾ ಮಕ್ಕಳು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಮಕ್ಕಳೇ ಆಗಿದ್ದರು. ಕಾರವಾರದ ಸಾವಾಂತವಾಡ ಶಾಲೆ ಬಿಡಿ. ನಗರದ ಕೆಎಚ್‌ಬಿ ಕಾಲೂನಿಯಲ್ಲಿರುವ ಸರ್ಕಾರಿ ಶಾಲೆ, ಬಜಾರ್ ಶಾಲೆ, ಕೋಡಿಬಾಗ ಕನ್ನಡ ಶಾಲೆ, ಸಾಯಿ ಕಟ್ಟಾ ಕನ್ನಡ ಶಾಲೆ, ಸದಾಶಿವಗಡ ಹೊರವಲಯದ ಸರ್ಕಾರಿ ಕನ್ನಡ ಶಾಲೆ ತಿರುಗಾಡಿದೆ. ಅಲ್ಲಿನ ಶಾಲೆಗಳ ಸ್ಥಿತಿ ಸಾವಾಂತವಾಡ ಸರ್ಕಾರಿ ಶಾಲೆಗಿಂತ ಭಿನ್ನವಾಗಿರಲಿಲ್ಲ. ಬಾಜಾರ್ ಶಾಲೆ, ಸೋನಾರವಾಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 70 ರಿಂದ 110 ರಷ್ಟಿತ್ತು. ಕಾರಣ ಈ ಶಾಲೆಗಳು ನಗರದ ಕೇಂದ್ರಭಾಗದಲ್ಲಿರುವುದು. ಇಲ್ಲಿರುವ ಮಕ್ಕಳು ಹೊರ ಜಿಲ್ಲೆಯ ಕೂಲಿ ಕಾರ್ಮಿಕರ ಮಕ್ಕಳೆ. ಕಾರವಾರ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 2 ರಷ್ಟು ಮಾತ್ರ. ಇನ್ನು ಜೊಯಿಡಾ, ಸಿದ್ದಾಪುರ, ಶಿರಸಿ, ಕಾರವಾರ ಕುಗ್ರಾಮಗಳ ಬಡವರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಾಣಸಿಗುತ್ತಿದ್ದಾರೆ. ಈ ಕುಗ್ರಾಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 20 ಮೀರುವುದಿಲ್ಲ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಯೋಚಿಸಿದರೆ, ಇಚ್ಚಾ ಶಕ್ತಿ ಬಳಸಿದರೆ ದಾರಿ ಇದೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಹೇಳಿಕೊಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಿ 6 ನೇ ತರಗತಿಯಿಂದ ಆಂಗ್ಲಮಾಧ್ಯಮದ ಕಲಿಕೆ ಸಹ ಪ್ರಾರಂಭವಾಗಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿಲ್ಲ!! ಪೋಷಕರ ಮನಸ್ಥಿತಿ ಯಾಕೆ ಬದಲಾಗುತ್ತಿಲ್ಲ? ಯಾಕೆಂದರೆ ಮಕ್ಕಳ ಸಂಖ್ಯೆ ಎಷ್ಟೇ ಇರಲಿ. ಹಿರಿಯ ಪ್ರಾಥಮಿಕ ಶಾಲೆಗೆ 7 ಜನ ಶಿಕ್ಷಕರನ್ನು, ವಿಷಯವಾರು ಶಿಕ್ಷಕರನ್ನು ತುಂಬುವ ಕೆಲಸ ಸರ್ಕಾರದ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಆಗಬೇಕು. ಸರ್ಕಾರಿ ಶಾಲೆ ಉಳಿಸುವ ಇಚ್ಚೆ ನಿಜಕ್ಕೂ ಶಿಕ್ಷಣ ಸಚಿವರಿಗೆ ಇದ್ದರೆ ಮಾರ್ಗಗಳು ಇವೆ. ಹೊಸದಾಗಿ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡಬಾರದು. ಇಂಗ್ಲೀಷ್ ಮಾದ್ಯಮ ಇರಲಿ, ಕನ್ನಡ ಮಾದ್ಯಮ ಇರಲಿ ಖಾಸಗಿಯವರಿಗೆ ಇನ್ನು ಮುಂದೆ ಹೊಸದಾಗಿ ಶಾಲೆ ಪ್ರಾರಂಭಿಸಲು ಅನುಮತಿ ಬೇಡ. ಇದಕ್ಕೆ ವಿಧಾನಸಭೆಯಲ್ಲಿ ಶಾಸನ ರೂಪಿಸಲಿ. ಎಲ್ಲೇ ಬೇಕೆಂದರೂ ಸರ್ಕಾರವೇ ಶಾಲೆ ಪ್ರಾರಂಭಿಸಲಿ. ಇರುವ ಖಾಸಗಿ ಶಾಲೆಗಳು ಇರಲಿ. ಅವರ ಮೇಲೆ ಕೆಲ ನಿಯಮ ಹೇರಿ ಕಟ್ಟು ನಿಟ್ಟಾಗಿ ಜಾರಿಗೆ ತರುವಂತಾಗಬೇಕು. ಇದಕ್ಕೆ ಇಡೀ ಸಚಿವ ಸಂಪುಟ ಬದ್ಧವಾಗಿರಲಿ. ಯಾವುದೇ ಲಾಬಿಗೆ ಸರ್ಕಾರ ಮಣಿಯಬಾರದು.

– ಸರ್ಕಾರ ಇನ್ನೂ ಏನು ಮಾಡಬಹುದು………?

ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಕರನ್ನು, ಶಾಲೆಯ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ govt-school-kidsಕೋಣೆಗಳನ್ನು ಒದಗಿಸಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿ. ಡೋನೇಶನ್ ಹಾವಳಿ ಮೇಲೆ ಸರ್ಕಾರ ಕಣ್ಣಿಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದಂತೆ ಸಚಿವರು ನಿಯಂತ್ರಿಸಬಾರದು. ಕಾರವಾರದ ಕೆಲ ಖಾಸಗಿ ಸಂಸ್ಥೆಗಳ ಶಿಕ್ಷಣ ವ್ಯವಸ್ಥೆ ನೋಡಿದರೆ ಅಚ್ಚರಿಯಾಗುತ್ತದೆ. ಪ್ರತಿ ಕ್ಲಾಸ್‌ಗೆ 3 ಡಿವಿಜನ್. ಪ್ರತಿ ಕೋಣೆಯಲ್ಲಿ 60 ರಿಂದ 80 ಮಕ್ಕಳು!! ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ? 6 ರಿಂದ 8 ಸಾವಿರ ರೂಪಾಯಿ ಶುಲ್ಕ ನೀಡಿ, ಮಕ್ಕಳನ್ನು ಇಂಥ ದನದ ಕೊಟ್ಟಿಗೆಗಳಿಗೆ ಮಕ್ಕಳನ್ನು ಕಳುಹಿಸಬೇಕೇ? ಪೋಷಕರು ಎಲ್ಲಿ ತಪ್ಪಿದ್ದಾರೆ. ಶಿಕ್ಷಣ ಇಲಾಖೆ ಏನು ಮಾಡುತ್ತಿದೆ. ಇದನ್ನ ಸಚಿವರು ಗಮನಿಸಬೇಕು. ಸಚಿವರು ದಿನವೂ ಒಂದಿಲ್ಲೊಂದು ಸರ್ಕಾರಿ ಇಲ್ಲವೇ ಖಾಸಗಿ ಶಾಲೆಯಲ್ಲಿರಬೇಕು. ಹೋದಲ್ಲಿ ಬಂದಲ್ಲಿ ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಜನತೆಗೆ ವಿವರಿಸಬೇಕು. ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ಸಚಿವರು ಪ್ರತಿ ಗ್ರಾಮ, ನಗರಕ್ಕೆ ಹೋಗಿ, ಪಾದಯಾತ್ರೆ ಮಾಡಿ ಜನರ ಮನವೊಲಿಸಬೇಕು. ಆಗ ಸ್ವಲ್ಪ ಬದಲಾವಣೆ ಸಾಧ್ಯ.

– ಕ್ರಾಂತಿಕಾರಿ ನಿಯಮ ಅನುಷ್ಠಾನ ಮಾಡಿ ………

ಕನ್ನಡ ಮತ್ತು ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಮನಸ್ಸಿದ್ದರೆ ಸರ್ಕಾರ ಹೀಗೆ ಮಾಡಬೇಕು. ರಾಜ್ಯದಲ್ಲಿನ ಎಲ್ಲಾ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಕನಿಷ್ಠ 5 ಜನ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 8 ಜನ ಶಿಕ್ಷಕರನ್ನ ನೇಮಿಸಿ. ಹೀಗೆ ನೇಮಿಸುವಾಗ ಮಕ್ಕಳ ಸಂಖ್ಯೆಯ ಅನುಪಾತ ನೋಡುವುದು ಬೇಡ. ಸರ್ಕಾರಕ್ಕೆ ಇದೇನು ಅಂತ ಹೊರೆಯಲ್ಲ. ಈ ವಿಷಯದಲ್ಲಿ ಐಎಎಸ್ ಅಧಿಕಾರಿಗಳ ಮಾತು ಕೇಳಬೇಡಿ. ಆರ್ಥಿಕ ಹೊರೆ ಎನಿಸಿದರೆ, ಐಎಎಸ್ ಮತ್ತು ಸೆಕ್ರೆರಿಟರಿಯೇಟ್‌ನಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ನೀಡುವ ಸೌಲಭ್ಯ ಸ್ವಲ್ಪ ಮಟ್ಟಿಗೆ ಕಡಿತ ಮಾಡಿದರೆ ಶಿಕ್ಷಕರಿಗೆ ನೀಡುವ ಸಂಬಳ ನಿಭಾಯಿಸಬಹುದು.

ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳಲ್ಲಿ ಒಂದು ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸುವ ನಿಯಮ ರೂಪಿಸಿ. government_schoolಒಂದೇ ಮಗು ಇದ್ದ ನೌಕರ ಸರ್ಕಾರಿ ಶಾಲೆಗೆ ಮಗುವನ್ನು ಕಳುಹಿಸಲು ಬಯಸದಿದ್ದರೆ, ಆ ನೌಕರನ ಅಥವಾ ನೌಕರಳ ಒಂದು ಇನ್ ಕ್ರಿಮೆಂಟ್ (ವೇತನ ಬಡ್ತಿ) ಕಡಿತ ಮಾಡಿ. ಈ ವಿಷಯದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಯಾವುದೇ ಶಾಲೆಗೆ ಕಳುಹಿಸಲು ಸ್ವತಂತ್ರರು. ಇನ್ನು ಖಾಸಗಿ ಸಂಸ್ಥೆಯವರು ಸಮಾಜ ಸೇವೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಕಾರಣ ಅವರು ಡೋನೇಶನ್ ಸ್ವೀಕರಿಸುವಲ್ಲಿ ಕಡಿವಾಣ ಮತ್ತು ಮಿತಿ ಇರಲಿ. ಶಾಲೆ ಕಟ್ಟಡ ಕಟ್ಟಿದ ನಂತರ ಮತ್ತೆ ಡೋನೇಶನ್ ವಸೂಲಿಯ ಅವಶ್ಯಕತೆಯನ್ನು ಸರ್ಕಾರ ಪ್ರಶ್ನಿಸಲಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಶೋಷಣೆಗೆ ಒಂದು ಉದಾಹರಣೆ ಇಲ್ಲಿ ನೀಡುವುದಾದರೆ;
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋಣೆಯೊಂದರ ಒಂದು ಡಿವಿಜನ್‌ನಿಂದ (60 ಮಕ್ಕಳಿಂದ) ಸಂಗ್ರಹಿಸುವ ದೇಣಿಗೆ ಹಣ 3 ಲಕ್ಷ ರೂಪಾಯಿ ಮೀರುತ್ತಿದೆ. ಎಲ್ಲಾ ತರಗತಿಯ, ಎಲ್ಲಾ ಮಕ್ಕಳಿಂದ (ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7ನೇ ತರಗತಿ) ಸಂಗ್ರಹಿಸುವ ಫೀಜ್ ಮತ್ತು ಡೋನೇಶನ್ 50 ಲಕ್ಷ ರೂಪಾಯಿ ಅಜುಬಾಜು ಆಗಿರುತ್ತದೆ. ಅದೇ ಖಾಸಗಿ ಶಾಲೆಯ ಹಂಗಾಮಿ ಶಿಕ್ಷಕರಿಗೆ ತಿಂಗಳಿಗೆ ನೀಡುವ ಗೌರವಧನ 2 ರಿಂದ 3 ಸಾವಿರ ರೂಪಾಯಿ ಆಗಿರುತ್ತದೆ. ಖಾಸಗಿ ಸಂಸ್ಥೆಗಳ ಶೋಷಣೆ, ಸುಲಿಗೆ ತಡೆಯಬೇಕಾದರೆ ಸರ್ಕಾರ ಕೆಲ ಸಮಯ ಕಠಿಣವಾಗಿ ವರ್ತಿಸಿ, ಶಿಸ್ತು ಕಲಿಸಬೇಕಾಗುತ್ತದೆ. ಜನತೆಯಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಕೆಲ ವಿಶೇಷ ಸವಲತ್ತುಗಳನ್ನು ಘೋಷಿಸಬೇಕಾಗುತ್ತದೆ. ಹಾಗೆ ಶಿಕ್ಷಣ ಸಚಿವರು, ಸರ್ಕಾರ ಮಾಡಬೇಕಾದ ತುರ್ತು ಅಗತ್ಯತೆ ಈಗ ಇದೆ.

ಇಂಥ ಕ್ರಾಂತಿಕಾರಿ ಹೆಜ್ಜೆಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಅನಿವಾರ್ಯವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಬಲಗೊಳಿಸುತ್ತಲೇ ಖಾಸಗಿ ದೌರ್ಜನ್ಯವನ್ನು ಹತ್ತಿಕ್ಕಬೇಕು. ಶಿಕ್ಷಣದ ಪೂರ್ಣ ಸರ್ಕಾರೀಕರಣ ಅಸಾಧ್ಯ. ನಿಧಾನಕ್ಕೆ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ರಾಜಕೀಯ ಇಚ್ಛಾಶಕ್ತಿಯೂ ಬೇಕು. ಕೇವಲ ಶಾಲಾ ಕಟ್ಟಡ, ಬಿಸಿಯೂಟ, ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ನೀಡಿ, ಶಾಲೆಗೆ ಶಿಕ್ಷಕರನ್ನೇ ನೀಡದಿರುವುದು, ಶಿಕ್ಷಕರ ನೇಮಕದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುವುದು ನೋಡಿದರೆ ಖಾಸಗಿಯವರ ಜೊತೆ ಶಿಕ್ಷಣ ಇಲಾಖೆ ಒಳಗೊಳಗೇ ಹೇಗೆ ಶಾಮೀಲಾಗಿದೆ ಎಂಬುದು ಎಂಥವರಿಗೂ ಅರ್ಥವಾಗುವಂತಹದ್ದು.

ಸರ್ಕಾರಕ್ಕೆ ಕನ್ನಡ ಶಾಲೆಗಳನ್ನು ಉಳಿಸುವ ಮನಸ್ಸಿದ್ದರೆ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದು ಅನಿವಾರ್ಯ ಮತ್ತು ಅಗತ್ಯ ಕೂಡಾ. ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಕಳುಹಿಸುವಂತೆ ನಿಯಮ ರೂಪಿಸುವ ಜೊತೆಗೆ ಮಾನವೀಯ ಮುಖವನ್ನು ಸರ್ಕಾರ ಪ್ರದರ್ಶಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಕೆಲ ಸಂದರ್ಭಗಳಲ್ಲಿ ಕಠಿಣವಾಗಿ ಸಹ ವರ್ತಿಸಬೇಕು. ಈ ಧೈರ್ಯ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ?