Monthly Archives: July 2013

ನಾನು ಬಡವ, ನೀನು ಬಡವಿ, ನಮ್ಮ ಘನತೆ ನುಚ್ಚುನೂರು

– ಬಿ.ಶ್ರೀಪಾದ ಭಟ್

“ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬಡತನದ ಪ್ರಮಾಣವು 2004-05 ರಲ್ಲಿ ಶೇಕಡಾ 37.2 ರಿಂದ 2009-10 ರಲ್ಲಿ ಶೇಕಡಾ 29.8 ಕ್ಕೆ ಕುಸಿದಿದೆ. 2011-12 ರಲ್ಲಿ ಭಾರತದಲ್ಲಿ ದಾರಿದ್ರ್ಯವು ಶೇಕಡ 22 ಕ್ಕೆ ಇಳಿದಿದೆ. ಇಂದು ಭಾರತದಲ್ಲಿ 27 ಕೋಟಿ ಬಡವರಿದ್ದಾರೆ. ಇವರಲ್ಲಿ 21.6 ಕೋಟಿ ಬಡವರು ಗ್ರಾಮೀಣ ಭಾರತದಲ್ಲಿದ್ದಾರೆ.”

ಮೇಲಿನ ಹೇಳಿಕೆ ಮತ್ತು ಸಂಬಂಧಪಟ್ಟ ವಿವರಗಳನ್ನು 22 ನೇ ಜುಲೈ 2013 ರಂದು ಯೋಜನಾ ಆಯೋಗವು ಪತ್ರಿಕೆಗಳ ಮೂಲಕ ಸಕಲ ಸಮಸ್ತ ಭಾರತೀಯರಿಗೆ ತಲುಪಿಸಿತು. 21 ನೇ ಶತಮಾನದ ಈ ಎರಡನೇ ದಶಕದಲ್ಲಿ ಮೂಳೆ ಮಾಂಸದ ತಡಿಕೆಯಾದ ನಗರವಾಸಿಯ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 33 ರೂಪಾಯಿ ಸಾಕಾಗುತ್ತದೆಂದೂ, ಗ್ರಾಮೀಣವಾಸಿ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 27 ರೂಪಾಯಿ ಸಾಕಾಗುತ್ತದೆಂದೂ ಈ ಯೋಜನಾ ಆಯೋಗದ ಉಪಾಧ್ಯಕ್ಷ ಮಂಟೆಕ್‌ಸಿಂಗ್ ಅಹುಲುವಾಲಿಯಾ ಅಧಿಕೃತವಾಗಿ ಘೋಷಿಸಿದ್ದಾರೆ. Poverty_4C_--621x414ಇದನ್ನು ಅವರ ಹಿರಿಯ ಗೆಣೆಕಾರ ‘ದ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ’ ಮನಮೋಹನ್ ಸಿಂಗ್ ಕೂಡ ಅನುಮೋದಿಸಿದ್ದಾರೆ. ಇನ್ನು 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ ,ಆಮ್ ಆದ್ಮಿಯ ಆಶಾದೀಪ ಸೋನಿಯಾಗಾಂಧಿ ತಮ್ಮ ಎರಡು ದಶಕಗಳ ಸುಧೀರ್ಘ ಮೌನವನ್ನು ಇಂದಿಗೂ ಸಹ ಮುರಿಯದೆ ನಿಗೂಢವಾಗಿ ವರ್ತಿಸುತ್ತ ಎಂದಿನಂತೆ ತಮ್ಮ ವೈಯುಕ್ತಿಕ ವರ್ಚಸ್ಸನ್ನು ಜತನದಿಂದ ಕಾಪಾಡಿಕೊಳ್ಳುತ್ತಿರಲಾಗಿ, ಇತ್ತ ಸುಧೀರ್ಘ ಮೌನದಲ್ಲಿರಬೇಕಾದಂತಹ ಸದರಿ ಕಾಂಗ್ರೆಸ್ ಪಕ್ಷದ ಜೋಕರ್‌ಗಳು ಕ್ಷಣಕ್ಕೊಂದು ದುರ್ನಾತ ಬೀರುವ ಹೇಳಿಕೆಗಳನ್ನು ಕೊಡುತ್ತ, ತಾವೂ ನಗೆಪಾಟಲಿಗೀಡಾಗಿ ತಮ್ಮ ಪಕ್ಷವನ್ನು ನಗೆಪಾಟಲಿಗೀಡಾಗಿಸುತ್ತಿರಲು, ಅತ್ತ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಘನತೆಯಿಂದ ಕಾರ್ಯ ನಿರ್ವಹಿಸಬೇಕಾಗಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಬದಲಾಗಿ ತನ್ನ ದಮನಕಾರಿ ಪ್ಯಾಸಿಸಂ ಅನ್ನು ಮರಳಿ ಚಾಲ್ತಿಗೆ ತರಲು ನೂರಾರು ಕಳ್ಳ ಮಾರ್ಗಗಳ ಹುಡುಕಾಟದಲ್ಲಿರಲಾಗಿ, ಇವರೆಲ್ಲರ ಕೇಂದ್ರಬಿಂದು ಇಂಡಿಯಾದ ಬಿಪಿಎಲ್ ಕಾರ್ಡುದಾರ ಮಾತ್ರ ಎಂದಿನಂತೆ ಹೊಸ ಬೆಳಕಿಗೆ ಕಾಯುತ್ತಾ ತಾನು ಗಳಿಸುತ್ತಿರುವುದೆಷ್ಟು, ಅದರಲ್ಲಿ ತನಗೆ ದಕ್ಕಿದ್ದೆಷ್ಟು, ಉಳಿಸಿದ್ದೆಷ್ಟು ಯಾವುದೂ ಗೊತ್ತಾಗದೆ, ಕ್ಷಣ ಕ್ಷಣಕ್ಕೂ ಬದುಕಬೇಕಾದ ತನ್ನ ಆತಂಕದ, ಅತಂತ್ರ ಬದುಕಿನ ಮುಕ್ತಿಗಾಗಿ ಹಂಬಲಿಸಿ ಕಾಯುತ್ತಿದ್ದಾನೆ.

“ಬದುಕಿನಲ್ಲಿ ನನ್ನ ಎಲ್ಲ ಆಸೆಗಳನ್ನು, ಬಯಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವುದು ಸಂತೋಷದಾಯಕ ಪ್ರವೃತ್ತಿಯಲ್ಲ, ಬದಲಾಗಿ ನನ್ನ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕುವುದು ಮಾತ್ರ ಸಂತೋಷದಾಯಕವಾದದ್ದು,” ಎಂದು ಪಶ್ಚಿಮದ ಆರ್ಥಿಕ ತಜ್ಞ ಜೆ.ಎಸ್.ಮಿಲ್ ಹೇಳುತ್ತಾನೆ. ಈತನ ಈ ಹೇಳಿಕೆಯನ್ನೇ ಅತ್ಯಂತ ಸೀರಿಯಸ್ ಆಗಿ ತೆಗೆದುಕೊಂಡಿರುವ ಇಂಡಿಯಾದ ಯೋಜನಾ ಆಯೋಗದ ಮಂದಿ ಇದನ್ನು ಏಕಪಕ್ಷೀಯವಾಗಿ ಅತ್ಯಂತ ಅಮಾನವೀಯತೆಯಿಂದ ಇಲ್ಲಿನ ಬಡವರ ಮೇಲೆ ಉಪಯೋಗಿಸಿಕೊಂಡಿದ್ದಾರೆ. ಆದರೆ ಭಾರತದ ಮಧ್ಯಮ ವರ್ಗ, ಮೇಲ್ವರ್ಗಗಳಿಗೆ ಮಾತ್ರ ಈ ಯೋಜನಾ ಆಯೋಗದ ಈ ಮಾನಗೇಡಿ ಹೇಳಿಕೆ ಅನ್ವಯಿಸುವುದಿಲ್ಲ. ಅಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಜಾಗತೀರಣದ ನೇರ ಫಲಾನುಭವಿಗಳಾದ ಭಾರತದ ಮಧ್ಯಮ ಹಾಗು ಮೇಲ್ವರ್ಗಗಳು ಈ ನವ ಕಲೋನಿಯಲ್ ಸಂಸ್ಕೃತಿ ಕೊಡಮಾಡಿದ ಕೊಳ್ಳುಬಾಕ ಸಂಸ್ಕೃತಿಯಿಂದ ತಿಂದುHindustan_petroleum, ತೇಗಿ ಅಜೀರ್ಣದಿಂದ ಏದುಸಿರು ಬಿಡುತ್ತಿದ್ದರೆ, ಈ ಗುಂಪಿಗೆ ನಿಮ್ಮ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕಿ ಮತ್ತು ಸಂತೋಷದಿಂದಿರಿ ಎಂದು ಹೇಳುವುದರ ಬದಲಾಗಿ ಜಾಗತೀರಣದ ಕಳೆದ ಇಪ್ಪತ್ತು ವರ್ಷಗಳಲ್ಲಿ ಸರ್ಕಾರಗಳ ಎಲ್ಲಾ ಬಗೆಯ ಪಾಲಿಸಿಗಳು, ಅಭಿವೃದ್ಧಿ ಮಂತ್ರಗಳು ಜಾರಿಗೊಳಿಸಿದ್ದು ಮಧ್ಯಮ ಮತ್ತು ಮೇಲ್ವರ್ಗಗಳ ದುರಾಸೆಗಳನ್ನು ನಿರಂತರವಾಗಿ ಪೂರೈಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಾತ್ರ. ಆದರೆ ದಾರಿದ್ರ್ಯದಲ್ಲಿರುವ ಬಹುಸಂಖ್ಯಾತ ಬಡವರ ವಿಷಯದಲ್ಲಿ ಮಾತ್ರ ಈ ಸರ್ಕಾರಗಳು ಮತ್ತು ಯೋಜನಾ ಆಯೋಗವು ಬಡವನೊಬ್ಬ ತನ್ನ ಆಸೆಗಳನ್ನು ಸೀಮಿತಗೊಳಿಸಿಕೊಂಡು ಕನಿಷ್ಟ ಮಟ್ಟದಲ್ಲಿ ಬದುಕಲು ಏನು ಬೇಕು ಎಂಬುದನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ದೇಶದ ಬಡತನ ರೇಖೆ, ದಾರಿದ್ರ್ಯವನ್ನು ಅಳೆಯುತ್ತಾರೆ. ಇದಕ್ಕಾಗಿ ಅನೇಕ ಅವೈಜ್ಞಾನಿಕ ಮಾನದಂಡಗಳನ್ನು ಬಳಸುತ್ತಾರೆ. ಈ ಅಧಿಕಾರಿಶಾಹಿಗಳು ಮತ್ತು ಸರ್ಕಾರಗಳ ಈ ದಿಕ್ಕುದೆಸೆಯಿಲ್ಲದ ನಡೆಗಳಿಂದಾಗಿಯೇ ಇಂದು ಬಡವರು ಮತ್ತು ಶ್ರೀಮಂತರ ನಡುವಿನ ಕಂದಕದ ಪ್ರಮಾಣ ದಿನದಿನಕ್ಕೂ ಅಗಾಧವಾಗುತ್ತಿರುವುದು.

ಖ್ಯಾತ ಅರ್ಥಿಕ ತಜ್ಞ ಮೋಹನ್ ಗುರುಸ್ವಾಮಿಯವರು “ಬಡತನವೆನ್ನವುದು ಒಂದು ಆರ್ಥಿಕ ಸ್ಥಿತಿ. ಹಸಿವು ದೈಹಿಕ ಸ್ಥಿತಿ. ದೈಹಿಕ ಸ್ಥಿತಿಯಾದ ಹಸಿವಿಗೆ ಕಾರಣ ಬಡತನವೆನ್ನುವ ಆರ್ಥಿಕ ಸ್ಥಿತಿ. ಇಲ್ಲಿ ಹಸಿವೆನ್ನುವುದು ಸ್ಥಿರವಾದದ್ದು. ಆದರೆ ಬಡತನದ ವಾಖ್ಯಾನ ಮತ್ತು ಸ್ಥಿತಿ ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ,” ಎಂದು ಹೇಳುತ್ತಾರೆ. food-wasteಅಂದರೆ ಅವನು ಶ್ರೀಮಂತ ಅವನ ಊಟಕ್ಕೆ 500 ರೂಪಾಯಿ ಖರ್ಚಾಗುತ್ತದೆ. ಅದು ಸಹಜ. ನೀನು ಬಡವ. ನಿನ್ನ ಊಟಕ್ಕೆ 12 ರೂಪಾಯಿ ಸಾಕು. ನೀನೇನಾದರೂ ಆ 500 ರೂಪಾಯಿಯ ಊಟಕ್ಕೆ ಪ್ರಯತ್ನಿಸೀಯ ಜೋಕೆ! ಇದೂ ಸಹಜ. ಎರಡೂ ವಾಸ್ತವವಾಗಿದ್ದರಿಂದ ಸಹಜವಾಗಿಯೇ ಇಂದು ಭಾರತದ ಬಡತನ ರೇಖೆಯ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆ!! ಅಂದರೆ ಭಾರತ ಪ್ರಕಾಶಿಸುತ್ತಿದೆ!! ಇದು ಸರ್ವಾಧಿಕಾರಿ ನರೇಂದ್ರ ಮೋದಿಯ ಅಪ್ಪಟ ಗುಜರಾತ್ ಮಾದರಿ. ನಾಮೋ ಶೈಲಿ. ಅದನ್ನೇ ಅತ್ಯಂತ ಕುರುಡಾಗಿ ಬುದ್ಧಿಗೇಡಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಇದೇ ಮಾದರಿಯನ್ನು ದಿವಾಳಿಯಾದ ಕಾಂಗ್ರೆಸ್ ನೇತೃತ್ವದ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಭಿವೃದ್ಧಿ ಮಾನದಂಡವಾಗಿ ಬಳಸಿಕೊಳ್ಳುತ್ತಿದೆ. ಜೈ ಹೋ!!

ಕೇಂದ್ರ ಯೋಜನಾ ಆಯೋಗವು 1957 ರಲ್ಲಿ ಪ್ರತಿ ವ್ಯಕ್ತಿಗೆ, ಪ್ರತಿ ತಿಂಗಳಿಗೆ 20 ರೂಪಾಯಿಯ ಆಧಾರದ ಮೇಲೆ ಬಡತನ ರೇಖೆಯನ್ನು ನಿಗದಿಪಡಿಸಿತು. ಇದನ್ನು ಪ್ರತಿಯೊಬ್ಬ ವ್ಯಕ್ತಿ ಖರ್ಚು ಮಾಡುವ ಶಕ್ತಿಗೆ ಅನುಗುಣವಾಗಿ ನಿರ್ಧರಿಸಲಾಯಿತು. ಅಂದರೆ ಅವನಿಗೆ/ಅವಳಿಗೆ ಪ್ರತಿ ತಿಂಗಳಿಗೆ 21 ರೂಪಾಯಿ ಖರ್ಚು ಮಾಡಲು ಸಾಧ್ಯವಾದರೆ ಆತ/ಆಕೆ ಬಡತನ ರೇಖೆಯಿಂದ ಮೇಲೇರುತ್ತಾರೆ. 1979 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 57 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 47 ರೂಪಾಯಿಯನ್ನು ನಿಗದಿಪಡಿಸಿತು. 2000 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 454 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 357 ರೂಪಾಯಿಯನ್ನು ನಿಗದಿಪಡಿಸಿತು. 2005 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 559 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 368 ರೂಪಾಯಿಯನ್ನು ನಿಗದಿಪಡಿಸಿತು. 2012 ರಂದು ಈ ಮೊಂಟೆಕ್ ಎನ್ನುವ ಪಂಡಿತ ನಗರವಾಸಿಗೆ ಪ್ರತಿ ತಿಂಗಳಿಗೆ 990 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 810 ರೂಪಾಯಿಯನ್ನು ನಿಗದಿಪಡಿಸಿದ್ದಾನೆ. ಅದೇ ರೀತಿ ಯೋಜನಾ ಆಯೋಗದ ಶೋಧನೆಯ ಪ್ರಕಾರ 1974 ರಲ್ಲಿ ಶೇಕಡಾ 59 ರಷ್ಟಿದ್ದ ಬಡತನ ರೇಖೆಯ ಪ್ರಮಾಣ 1984 ರಲ್ಲಿ ಶೇಕಡಾ 43 ರಷ್ಟಿತ್ತೆಂದೂ, 2012 ರ ವೇಳೆಗೆ ಶೇಕಡಾ 22 ಕ್ಕೆ ಕುಸಿದಿದೆಯೆಂದು ಅಧಿಕೃತವಾಗಿ ತಿಳಿಸಿದೆ.

ಆದರೆ ಈ ಯೋಜನಾ ಆಯೋಗದ ಇಡೀ ಅಂಕಿ ಅಂಶಗಳನ್ನು ಸಧ್ಯದ ತರ್ಕಕ್ಕಾಗಿ ಗಣನೆಗೆ ತೆಗೆದುಕೊಂಡಾಗ Dantewada Killings1984 ರಲ್ಲಿ ಬಡತನದ ರೇಖೆಯು ಶೇಕಡಾ 43 ರಷ್ಟಿದ್ದ ಸಂದರ್ಭದಲ್ಲಿ ಬಡವನೊಬ್ಬ/ನೊಬ್ಬಳು ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 38 ಗ್ರಾಂ ನಷ್ಟಿದ್ದರೆ, ಈಗ, ಅಂದರೆ 2012 ರಲ್ಲಿ ಬಡತನದ ರೇಖೆಯು ಶೇಕಡಾ 22ಕ್ಕೆ ಕುಸಿದಂತಹ ಸಂದರ್ಭದಲ್ಲಿ, ಬಡವನೊಬ್ಬ/ನೊಬ್ಬಳ ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 24 ಗ್ರಾಂಗೆ ಕುಸಿದಿದೆ!! ಅಂದರೆ ವ್ಯಕ್ತಿಯೊಬ್ಬ/ಯೊಬ್ಬಳು ಸೇವಿಸುವ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಮೇಲೆ ಬಡತನದ ರೇಖೆಯನ್ನು ನಿರ್ಧರಿಸುವುದಿಲ್ಲ, ಬದಲಾಗಿ ವ್ಯಕ್ತಿಯೊಬ್ಬ/ಯೊಬ್ಬಳು ಬಳಸುವ ಮೊಬೈಲ್, ವಾಸಿಸುವ ಸೂರು ಇತ್ಯಾದಿಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ!! ಹರ್ಷ ಮಂದರ್ ಅವರು ಹೇಳಿದ ಹಾಗೆ ಮಸಲ ಬಡತನ ರೇಖೆಯ ಕೆಳಗಿರುವ ವ್ಯಕ್ತಿಯೇನಾದರು ಶೌಚಾಲಯವನ್ನು ನಿರ್ಮಿಸಿಕೊಂಡಾಕ್ಷಣ, ವಾರಕ್ಕೆ, ತಿಂಗಳಿಗೆ ಮೊಟ್ಟೆಯನ್ನು ತಿಂದಾಕ್ಷಣ ಆತ ಬಡತನ ರೇಖೆಯಿಂದ ಮೇಲೇರಲ್ಪಡುತ್ತಾನೆ!! ಬಿಪಿಎಲ್ ಕಾರ್ಡುದಾರನಿಂದ ಎಪಿಎಲ್ ಕಾರ್ಡುದಾರನಾಗಿ ಪ್ರಮೋಶನ್! ನಾಗರಿಕರಾದ ನಾವೆಲ್ಲ ಹೇಗೆ ಬಡವನೊಬ್ಬ/ನೊಬ್ಬಳ ಬದುಕನ್ನು ಅವಮಾನಿಸುತ್ತಿದ್ದೇವೆ ನೋಡಿ!! ಅವರಿಗೆ ಘನತೆಯನ್ನೇ ನಿರಾಕರಿಸಿದ್ದೇವೆ.

ಅಲ್ಲದೆ ಬಡತನದ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆಯೆಂದು ಪಂಡಿತ ಅಹುಲುವಾಲಿಯಾ ಬೂಸಿ ಬಿಡುತ್ತಿರುವ ಈ ಸಂದರ್ಭದಲ್ಲಿ ಅವರ ಹಿರಿಯ ಗೆಣೆಕಾರ ಮನಮೋಹನ ಸಿಂಗರ ಯುಪಿಎ ಸರ್ಕಾರವು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವ, ಸೋನಿಯಾ ಮೇಡಂರ ಪ್ರತಿಷ್ಠೆಯ ಮಸೂದೆಯಾದ ಆಹಾರ ಭದ್ರತೆ ಮಸೂದೆಯ ಮೂಲ ಆಶಯವೇ ಶೇಕಡಾ 67 ರಷ್ಟಿರುವ ಭಾರತೀಯರಿಗೆ ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಧಾನ್ಯವನ್ನು ಹಂಚುವುದು. ಅಂದರೆ ಯೋಜನಾ ಆಯೋಗದ ಪ್ರಕಾರ ಬಡತನ ರೇಖೆ ಶೇಕಡಾ 22 ರಷ್ಟಿದ್ದರೆ ಕೇಂದ್ರ ಸರ್ಕಾರದ ಪ್ರಕಾರ ಶೇಕಡ 67ರಷ್ಟಿದೆ!!

ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ ಇಂಡಿಯಾ ದೇಶದಲ್ಲಿನ ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಶೇಕಡಾ 46 ರಷ್ಟಿದೆ. Manmohan Singhಇದನ್ನು ಉದಾಹರಿಸಿಯೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಇದು ಭಾರತದ ಅವಮಾನ ಎಂದು ಉದ್ಗರಿಸಿದ್ದರು. ಆದರೆ ಮಕ್ಕಳ ಅಪೌಷ್ಟಿಕತೆ ಶೇಕಡಾ 46 ರಷ್ಟಿರುವ ದೇಶದಲ್ಲಿ ಬಡತನ ರೇಖೆ ಶೇಕಡ 22 ರಷ್ಟಿರುವುದು ಬಹುಶಃ ಇಡೀ ಜಗತ್ತಿನಲ್ಲಿ ಇಂಡಿಯಾದಲ್ಲಿ ಮಾತ್ರವೇನೋ! ಇದನ್ನು ಸಾಧ್ಯವಾಗಿಸಿದ ಪಂಡಿತ ಮೊಂಟೆಕ್‌ಸಿಂಗ್‌ಗೆ ನಮೋನಮಹಃ!

ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಈ ನರೇಗ ಯೋಜನೆಯಡಿ ಪ್ರತಿಯೊಬ್ಬ ಗ್ರಾಮೀಣ ವ್ಯಕ್ತಿಗೆ ದಿನವೊಂದಕ್ಕೆ 120 ರೂಪಾಯಿಯ ಆಧಾರದ ಮೇಲೆ ಕೆಲಸ ದೊರಕುತ್ತದೆ. ಆತ ತಿಂಗಳಪೂರ್ತಿ, ಒಂದು ದಿನವೂ ಬಿಡದೆ ಕೆಲಸ ಮಾಡಿದಾಗಲೂ ಆತನ ಗಳಿಕೆ ತಿಂಗಳಿಗೆ 3720 ರೂಪಾಯಿ. ಐದು ಸದಸ್ಯರಿರುವ ಸಂಸಾರವೊಂದರಲ್ಲಿ ಈ ಆದಾಯದ ಪ್ರಕಾರ ಪ್ರತಿ ವ್ಯಕ್ತಿಗೆ 744 ರೂಪಾಯಿ ದೊರಕುತ್ತದೆ. ಇದು ಯೋಜನಾ ಆಯೋಗವು ಬಡತನ ರೇಖೆಯ ಪ್ರಮಾಣದ ಅನುಸಾರ ಗ್ರಾಮೀಣ ಮಟ್ಟಕ್ಕೆ ನಿಗದಿಪಡಿಸಿದ ಅವೈಜ್ಞಾನಿಕ ಮೊತ್ತ ರೂಪಾಯಿ 850 ಕ್ಕಿಂತಲೂ ಶೇಕಡಾ 14 ರಷ್ಟು ಕಡಿಮೆ!! ಅಲ್ಲದೆ ಈ ನರೇಗಾ ಯೋಜನೆಯ ಅನುಕೂಲ ವರ್ಷಕ್ಕೆ ಕೇವಲ 100 ದಿನಗಳು ಮಾತ್ರ. ಅಂದರೆ ಸರಾಸರಿ ವರ್ಷಕ್ಕೆ ಮೂರು ತಿಂಗಳು!! ಉಳಿದ 265 ದಿಗಳ ಕುರಿತು ಯೋಜನಾ ಆಯೋಗದ ಬಳಿ ಯಾವುದೇ ಉತ್ತರವಿಲ್ಲ.

2020 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಎಲೈಟ್ ಗುಂಪಿಗೆ ಸೇರುವ ಧ್ಯೇಯವನ್ನು ಹೊಂದಿರುವ ಇಂಡಿಯಾದ ಸರ್ಕಾರವು ಮೊದಲು ಮಾಡಬೇಕಾದ ಕೆಲಸವೇ ಸಮಾಜವಾದಿ ಸಿದ್ಧಾಂತವನ್ನು ಅತ್ಯಂತ ಸರಳ ರೂಪದಲ್ಲಿ ಗ್ರಹಿಸಿ ಅನುಷ್ಠಾನಕ್ಕೆ ತರುವುದು. ಸರಳವಾಗಿ ಹೇಳಬೇಕೆಂದರೆ ಶ್ರೀಮಂತರ, ಮಧ್ಯಮವರ್ಗಗಗಳ ಮೇರೆ ಮೀರಿದ ಅಸಹಜ ಮಟ್ಟದ ವರಮಾನ ಗಳಿಕೆಗೆ ಕಡಿವಾಣ ಹಾಕಿ ಒಂದು ಮಿತಿಯನ್ನು ನಿಗದಿಪಡಿಸುವುದು. gujarat-povertyಬಡವರಿಗೆ ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸುವುದು. ಮುಖ್ಯವಾಗಿ ಅವರ ಬದುಕಿಗೆ ಘನತೆಯನ್ನು ಮರಳಿ ತಂದುಕೊಡಬೇಕು.

ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯೊಬ್ಬ ಸೇವಿಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 1500 ಕಿಲೋ ಕ್ಯಾಲೋರಿಯಾಗಿದ್ದರೆ ಬಡತನ ರೇಖೆಗಿಂತ ಮೇಲಿರುವ ವ್ಯಕ್ತಿ ಬಳಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 2400 ಕಿಲೋ ಕ್ಯಾಲರಿಯಷ್ಟಿರುತ್ತದೆ (Nutrition intake in India – NSS Report 1999 – 2000). 1000 ಕಿಲೋ ಕ್ಯಾಲೋರಿಯಷ್ಟು ವ್ಯತ್ಯಾಸದ ಈ ಅಸಮಾನತೆಯನ್ನು ಹೋಗಲಾಡಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು. ಅಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಜನರು ಅಪಾರ ದೈಹಿಕ ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರಿಗೆ ಪೋಷಕಾಂಶಗಳ ಪ್ರಮಾಣ ಬೇರೆಲ್ಲರಿಗಿಂತಲೂ ಅಧಿಕವಿರಬೇಕು. ಇದೆಲ್ಲವೂ ಅಪಾರ ಬುದ್ಧಿವಂತಿಕೆಯ ಈ ಮೊಂಟೆಕ್ ಗ್ಯಾಂಗ್‌ಗೆ ಅರ್ಥವಾಗುವುದಿಲ್ಲವೇ?? ನಿಜಕ್ಕೂ ಇವರು ಜೀವವಿರೋಧಿಗಳು.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವ ಜನಸಂಖ್ಯೆಯನ್ನು ಆರ್ಥಿಕವಾಗಿ ಮತ್ತು ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸಲು ವರ್ಷಕ್ಕೆ ಸುಮಾರು 60000 ಕೋಟಿ ರೂಪಾಯಿ ಬೇಕಾಗುತ್ತದೆ. ಇದರ ಖರ್ಚು ದೇಶದ ಇಡೀ ಅಧಿಕಾರಶಾಹಿಯನ್ನು ಸಾಕಲು ಸರ್ಕಾರ ವ್ಯಯಿಸುವ ಖರ್ಚಾದ 2,27,000 ಕೋಟಿಗೆ ಹೋಲಿಸಿದರೆ ಶೇಕಡ 25 ರಷ್ಟು ಮಾತ್ರ. ಅಥವಾ ಜಿಡಿಪಿಯ 8,47,000 ಕೋಟಿಗೆ ಹೋಲಿಸಿದರೆ ಶೇಕಡಾ 2 ರಷ್ಟು ಮಾತ್ರ.

ಎಲ್ಲಿಯವರೆಗೂ ಶೇಕಡ 5 ರಿಂದ ಶೇಕಡ 10 ರಷ್ಟಿರುವ ಸಮಾಜದ ಮೇಲ್ಪದರ ಜನರ ಆದಾಯ, ಸುಖಲೋಲುಪ್ತ ಜೀವನ ಮತ್ತು ಅವರ ನಿರಂತರ ಮೇಲ್ಮುಖ ಚಲನೆಯೇ ದೇಶವೊಂದರ ಅಭಿವೃದ್ಧಿಯ ಮಾರ್ಗಸೂಚಿಯಾಗುತ್ತದೆಯೋ, ಎಲ್ಲಿಯವರೆಗೂ ಸರ್ಕಾರವೂ ಸಹ ನಿರ್ಲಜ್ಯವಾಗಿ ಇದನ್ನೇ ತನ್ನ ಅಭಿವೃದ್ಧಿಯೆಂದು ಕೂಗುತ್ತಿರುತ್ತದೆಯೂ, ಅಲ್ಲಿ ಆ ದೇಶದ ಆತ್ಮಸಾಕ್ಷಿ ಸತ್ತಿದೆಯೆಂದರ್ಥ. ಆ ದೇಶ ಮತ್ತೇನಲ್ಲದೆ ಒಂದು ಕೊಳೆತ ಗೊಬ್ಬರದ ಗುಂಡಿಯಷ್ಟೇ. ನಮ್ಮ ಭಾರತ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಜ್ವಲಂತ ಸಾಕ್ಷಿಯಾಗಿದೆ.

ಸರ್ವೇಗಳು, ಜನಾಭಿಪ್ರಾಯ, ಸ್ಥಾನಗಳು, ಆಮ್ ಆದ್ಮಿ ಪಾರ್ಟಿ…


– ರವಿ ಕೃಷ್ಣಾರೆಡ್ದಿ


 

ಕಳೆದ ನಾಲ್ಕೈದು ದಿನದಿಂದ CNN-IBN ಮತ್ತು ಹಿಂದು ಪತ್ರಿಕೆಯವರು ದೇಶದಲ್ಲಿ ಇಂದು ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗಳಿಸುತ್ತದೆ ಎನ್ನುವಂತಹ ಸರ್ವೆ ನಡೆಸಿ, ಅದನ್ನು CNN-IBN ಚಾನೆಲ್‌ನಲ್ಲಿ ಮತ್ತು ಹಿಂದು ಪತ್ರಿಕೆಯಲ್ಲಿ ವಿವರಣೆ ಮತ್ತು ಚರ್ಚೆಗೆ ಒಳಪಡಿಸಿದ್ದವು. ನೆನ್ನೆ ರಾತ್ರಿ CNN-IBN ನಲ್ಲಿ ರಾಜ್‌ದೀಪ್ ಸರ್ದೇಸಾಯಿ ನಡೆಸಿಕೊಟ್ಟ ಕೊನೆಯ ಸುತ್ತಿನ ಚರ್ಚೆ ಚೆನ್ನಾಗಿತ್ತು. ಸಂದೀಪ್ ಶಾಸ್ತ್ರಿ, ರಾಮಚಂದ್ರ ಗುಹ, ಯೋಗೇಂದ್ರ ಯಾದವ್, ಸ್ವಪನ್ ದಾಸ್‌ಗುಪ್ತ, ಸುರ್ಜಿತ್ ಭಲ್ಲ ಪಾಲ್ಗೊಂಡಿದ್ದ ಈ ಚರ್ಚೆ ಅಧಿಕಾರವಿರೋಧಿ ಅಲೆ, ಭ್ರಷ್ಟಾಚಾರ, ಮೋದಿ, ರಾಹುಲ್, ಒಕ್ಕೂಟ ವ್ಯವಸ್ಥೆ, 2009 ರ ಚುನಾವಣಾ ಫಲಿತಾಂಶ, ಈಗಿನ ಪ್ರೊಜೆಕ್ಷನ್, ಮುಂತಾದುವುಗಳ ಬಗ್ಗೆ ಇತ್ತು. ಈ ಸರ್ವೆ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಗುಂಪಿಗೂ ಬಹುಮತದ ಹತ್ತಿರ ಬರುವುದಿರಲಿ, 200 ಸ್ಥಾನಗಳ ಹತ್ತಿರಕ್ಕೂ ಹೋಗಲಾಗುವುದಿಲ್ಲ. ಇದು, ಇಂದಿನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಸರ್ವೆಯ ವಿವರ:
AllIndiaPicture-2014Likeabilitypicture_2013

ಇಲ್ಲಿ ಸಂಸದ ಸ್ಥಾನಗಳ ವಿಚಾರಕ್ಕೆ ಬಂದಾಗ ಅದನ್ನು ಆಯಾಯ ಪಕ್ಷ ತೆಗೆದುಕೊಳ್ಳಬಹುದಾದ ಶೇಕಡಾವಾರು ಮತಪ್ರಮಾಣದ ಮೇಲಷ್ಟೇ ಆಧರಿಸದೆ ಇತರೆ ಸಂಗತಿಗಳ ಮೇಲೆಯೂ ಆಧರಿಸಿ ನಿರ್ಧರಿಸಿದ್ದಾರೆ ಎನ್ನಿಸುತ್ತದೆ. ಅಷ್ಟಾದರೂ ಸರ್ವೆಗಳು ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ಹೇಳುವುದು ನೈಜ ಫಲಿತಾಂಶಕ್ಕೆ ಹತ್ತಿರವೂ ಬರುತ್ತಿಲ್ಲ. ಸರ್ವೇಗಳು ಒಂದು ಪಕ್ಷ ಪಡೆಯಬಹುದಾದ ಶೇಕಡಾವಾರು ಮತಪ್ರಮಾಣವನ್ನು ಹೆಚ್ಚುಕಮ್ಮಿ ಮತದಾನದ ನಂತರ ಸಿಗುವ ಅಂಕಿಅಂಶಗಳಿಗೆ ಹತ್ತಿರಹತ್ತಿರ ಇರುವಂತೆ ಕೊಡಬಹುದೆ ಹೊರತು, ಪಕ್ಷಗಳು ಪಡೆಯುವ ಸ್ಥಾನಗಳನ್ನಲ್ಲ.

ಸರ್ವೆಯಲ್ಲಿಯ ಕೆಲವೊಂದು ವಿವರಗಳ ಬಗ್ಗೆ ಮಾತನಾಡುವುದಾದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇಕಡಾವಾರು ಮತಪ್ರಮಾಣ ಹೆಚ್ಚಿಸಿಕೊಳ್ಳಬಹುದಾದರೂ, ಈ ಸರ್ವೆ ಹೇಳುವಂತೆ ಆ ರಾಜ್ಯದಲ್ಲಿ ಸುಮಾರು 30-40 ಸ್ಥಾನಗಳನ್ನು ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಬಿಎಸ್‌ಪಿ ಜೊತೆಗಿದ್ದ ಬ್ರಾಹ್ಮಣರು ಬಿಜೆಪಿಯತ್ತ ವಾಲುತ್ತಿರುವಂತೆ ಕಾಣಿಸಿದರೂ, ಅಲ್ಲಿಯ ವಿಧಾನಸಭೆಯಲ್ಲಿ ಎರಡು ದೊಡ್ಡ ಪಕ್ಷಗಳಾಗಿರುವ SJP ಮತ್ತು BSPಗಿಂತ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎನ್ನುವುದರ ಬಗ್ಗೆ ಸಂಶಯಪಡಬೇಕಿದೆ. ಆದರೆ, ಹೀಗೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎನ್ನುವ ವಿಚಾರವನ್ನು ಪಕ್ಕಕ್ಕಿಟ್ಟರೆ ಈ ಸರ್ವೆ ಸಮಾಜ ಯಾವ ರೀತಿ ಚಿಂತಿಸುತ್ತಿದೆ ಎನ್ನುವ ಬಗ್ಗೆ ಸ್ಪಷ್ಟ ಸಂಕೇತಗಳನ್ನು ಕೊಡುತ್ತಿದೆ. ದೇಶದಾದ್ಯಂತ UPA-2 ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ವಿಶ್ವಾಸವಿಲ್ಲ. ಆದರೆ ಯಾವ ಗುಂಪಿನ ಬಗ್ಗೆಯೂ ಬಹುಸಂಕ್ಯಾತ ಮತದಾರರಿಗೆ ವಿಶ್ವಾಸವಿಲ್ಲ. ಕಾಂಗ್ರೆಸ್ ಮತ್ತು ಯುಪಿಎಯ ವೈಫಲ್ಯದ ಕಾರಣಕ್ಕೆ ಮತ್ತು ಭ್ರಷ್ಟಾಚಾರದ ಕಾರಣಕ್ಕೆ ಇತರೆ ಪಕ್ಷಗಳು, ಅದರಲ್ಲೂ ಬಿಜೆಪಿಗೆ ಅನುಕೂಲವಾಗುತ್ತಿದೆ ಎನ್ನುವುದೂ ಉತ್ತರ ಪ್ರದೇಶದ ಹಿನ್ನೆಲೆಯಲ್ಲಿ ನೋಡಿದಾಗ ಮೇಲ್ನೋಟಕ್ಕೆ ಕಾಣಿಸುತ್ತದೆ.

ಮತ್ತು, ಮೋದಿಯಿಂದಾಗಿ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿದೆ ಎನ್ನುವುದಕ್ಕೂ ಈ ಸರ್ವೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕೊಡುತ್ತಿಲ್ಲ. ಗುಜರಾತ್ ಮತ್ತು ಉತ್ತರ ಪ್ರದೇಶ ಬಿಟ್ಟರೆ ಮಿಕ್ಕ ರಾಜ್ಯಗಳಲ್ಲಿ ಬಿಜೆಪಿಗೆ ಆಯಾಯ ರಾಜ್ಯಗಳ ನಾಯಕತ್ವ ಮತ್ತು ಕಾರ್ಯಕರ್ತರಿಂದ ಸ್ಥಾನ ಭದ್ರವಾಗಿದೆಯೇ ಹೊರತು ಮೋದಿ ಕಾರಣಕ್ಕಲ್ಲ. ಬಹುಶಃ ಅದ್ವಾನಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರೂ ಬಿಜೆಪಿಯ ಸ್ಥಿತಿ ಈಗಿರುವುದಕ್ಕಿಂತ ಕಡಿಮೆಯೇನೂ ಆಗುತ್ತಿರಲಿಲ್ಲ. ದಕ್ಷಿಣ ಭಾರತದ ಜನ ಮೋದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದೂ ಸರ್ವೆಯಲ್ಲಿ ವ್ಯಕ್ತವಾಗಿದೆ.

ನೆನ್ನೆ ರಾತ್ರಿ ನಡೆದ ಚರ್ಚೆಯಲ್ಲಿ ಒಬ್ಬರು ಬಹಳ ಮುಖ್ಯವಾದ ವಿಷಯವನ್ನು ಎತ್ತಿ ತೋರಿಸಿದರು. ಲೋಕಸಭಾ ಚುನಾವಣೆ ಕೇಂದ್ರ ಸರ್ಕಾರ ರಚನೆಗಾಗಿ ನಡೆಸುವ ರಾಷ್ಟ್ರೀಯ ಚುನಾವಣೆಯೇ ಆದರೂ, ಆಯಾಯ ರಾಜ್ಯದ ವಿಷಯ ಮತ್ತು ಪೈಪೋಟಿಯ ಮೇಲೆ ಯಾರು ಗೆಲ್ಲುತ್ತಾರೆ ಎನ್ನುವುದು ನಿರ್ಧಾರವಾಗುತ್ತದೆಯೆ ಹೊರತು ಯಾವುದೇ ರಾಷ್ಟ್ರೀಯ ನಾಯಕತ್ವವಾಗಲಿ ಅಥವ ರಾಷ್ಟ್ರೀಯ ವಿಷಯದ ಆಧಾರದ ಮೇಲಾಗಲಿ ಅಲ್ಲ. ಕಳೆದ ಎರಡು-ಮೂರು ಚುನಾವಣೆಗಳಲ್ಲಿಯೂ ಹೀಗೆ ಆಗಿದೆ. 2009 ರ ಚುನಾವಣೆ ಆದನಂತರ ನಾನು ಬರೆದಿದ್ದ ಲೇಖನವೊಂದರಲ್ಲಿ ಈ ವಿಷಯದ ಬಗ್ಗೆ ಹಲವು ರಾಜ್ಯಗಳ ಉದಾಹರಣೆ ತೆಗೆದುಕೊಂಡು ವಿಶ್ಲೇಷಿಸಿದ್ದೆ. (ಆ ಲೇಖನವನ್ನು ಕೆಳಗಡೆ ಕೊಡಲಾಗಿದೆ.)

ಬಹುತೇಕ ಸ್ಥಾನಗಳಲ್ಲಿ ಅಭ್ಯರ್ಥಿಗಳು ಹೇಗೆ ಗೆಲ್ಲುತ್ತಾರೆ ಮತ್ತು ಪಕ್ಷ ಎನ್ನುವುದು ಹೇಗೆ ಗೌಣವಾಗುತ್ತದೆ ಎನ್ನುವುದಕ್ಕೆ ಕೆಲವು ಗೊತ್ತಿರುವ ವಿಚಾರಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ಎರಡು ತಿಂಗಳ ಹಿಂದೆ ನಡೆದ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಎಂಬಂತೆ ನಾಯಕಿಯೊಬ್ಬರು ಸೋತುಹೋದರು. ಅದಕ್ಕೆ ಆ ನಾಯಕಿಯ ಪಕ್ಷಕ್ಕೆ ಸೇರಿದ ಒಬ್ಬರು ನನಗೆ ಹೇಳಿದ ವಿಷಯ ಏನೆಂದರೆ ಆ ನಾಯಕಿಗೆ ಕಡೆಯ ಎರಡು-ಮೂರು ದಿನಗಳಲ್ಲಿ ಹಣವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಕಾರಣ ಏನೆಂದರೆ ಆ ಕ್ಷೇತ್ರಕ್ಕೆಂದು ಬಂದಿದ್ದ ಹಣವನ್ನು ಈಚೆಗೆ ತೆಗೆಯಲಾಗದ ಸ್ಥಿತಿ. ಯಾವ ವಾಹನದಲ್ಲಿ ಹಣ ಬಂದಿತ್ತೊ ಆ ವಾಹನ ತನ್ನ ಜಾಗ ಬಿಟ್ಟು ಹೊರಗೆ ಬಂದಿದ್ದರೆ ಐದಾರು ಕೋಟಿ ರೂಪಾಯಿಗಳ ಹಣ ಸೀಜ್ ಆಗುವ ಪರಿಸ್ಥಿತಿ. ಆದರೆ ಈ ಸಮಸ್ಯೆ ಸೈಕಲ್‌ನಲ್ಲಿ ಹಣ ಸಾಗಿಸುವವರಿಗೆ ಇಲ್ಲದೆ ಆ ನಾಯಕಿ ಸೋಲಬೇಕಾಯಿತು. ಕಡೆಯ ದಿನ ಹಣದ ಮುಖ ನೋಡಿ ಓಟು ಹಾಕುವ ನಾಲ್ಕೈದು ಸಾವಿರ ಜನ ಉಲ್ಟಾ ಹೊಡೆದಿದ್ದರೂ ಇವರು ಗೆದ್ದುಬಿಡುತ್ತಿದ್ದರು. ಹೀಗೆ, ಇಂದಿನ ಬಹುತೇಕ ಚುನಾವಣೆಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ದುರದೃಷ್ಟವಶಾತ್ ಆಯಾಯ ಕ್ಷೇತ್ರ, ಅಲ್ಲಿಯ ಅಭ್ಯರ್ಥಿಗಳು, ಸಂಪನ್ಮೂಲ ಸಂಗ್ರಹಣೆ ಮತ್ತು ನಿರ್ವಹಣೆ, ಜಾತಿ, ಇತ್ಯಾದಿಯಂತಹ ಸ್ಥಳೀಯ ವಿಷಯಗಳ ಮೇಲೆ ನಿರ್ಧರಿಸಲ್ಪಡುತ್ತಿದೆಯೇ ಹೊರತು ಒಂದು ಪಕ್ಷದ ನೀತಿ-ನಿಲುವು-ಸಿದ್ಧಾಂತಗಳ ಮೇಲಲ್ಲ. ಇದಕ್ಕೆ ಅಪವಾದಗಳು ಇಲ್ಲ ಎಂದಲ್ಲ. ಕಡಿಮೆ ಅಷ್ಟೇ. ಹಾಗಾಗಿಯೇ ಮಾಧ್ಯಮಗಳು ನಡೆಸುವ ಸರ್ವೇಗಳಲ್ಲಿ ಸ್ಥಾನಗಳ ಸಂಖ್ಯೆ ಏರುಪೇರಾಗುವುದು.

ಇನ್ನು, ಇಂದು ಕರ್ನಾಟಕದಲ್ಲಿ ಹೊಸದೊಂದು ರಾಜಕೀಯ ಪಕ್ಷದ ಔಪಚಾರಿಕ ಉದ್ಘಾಟನೆ ಆಗುತ್ತಿದೆ. aravind-kejriwalಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ಇಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ತಮ್ಮ ಸರಳತೆ, ಸ್ಪಷ್ಟತೆ, ಹೋರಾಟ, ಪ್ರಾಮಾಣಿಕತೆಯಿಂದಾಗಿ ದೇಶದಲ್ಲಿ ಒಂದು ಮಟ್ಟಕ್ಕೆ ಗುರುತಾಗಿರುವಂತಹವರು. ದೆಹಲಿಯಲ್ಲಿ ಅವರ ಪಕ್ಷ ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಲ್ಲಿ ಅದು ಬಡವರ ಮತ್ತು ಕೆಳಮಧ್ಯಮವರ್ಗದವರಿಗೆ ತೊಂದರೆ ಕೊಡುವ ದೈನಂದಿನ ವಿಷಯಗಳನ್ನೂ ಇಟ್ಟುಕೊಂಡು ಸಂಘಟನೆ ಮಾಡುತ್ತಿದೆ. ಈ ಸಾರಿಯ ದೆಹಲಿ ವಿಧಾನಸಭಾ ಚುನಾವಣೆ ಆಮ್ ಆದ್ಮಿ ಪಾರ್ಟಿಯ ಪಾಲ್ಗೊಳ್ಳುವಿಕೆಯ ಕಾರಣವಾಗಿ ಬಹಳ ಮುಖ್ಯವಾದ ಚುನಾವಣೆ ಎನ್ನುವುದು ನನ್ನ ಅಭಿಪ್ರಾಯ. ಬಹುಶಃ ದೇಶದ ಚುನಾವಣಾ ರಾಜಕೀಯ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ದಿಶೆಯನ್ನು ಅದು ತೋರಿಸಲಿದೆ. ಕೇಜ್ರಿವಾಲರ ಪಕ್ಷಕ್ಕೆ ದೆಹಲಿ ಬಿಟ್ಟರೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ ಇದೆ. ಆ ಪಕ್ಷದ ಪ್ರಕಟಣೆ ತಿಳಿಸಿರುವಂತೆ ನಮ್ಮ ರಾಜ್ಯದಿಂದ ಕೇವಲ ಅಂತರ್ಜಾಲದ ಮೂಲಕ ಆ ಪಕ್ಷಕ್ಕೆ ನೀಡಿರುವ ದೇಣಿಗೆಯೇ 42 ಲಕ್ಷ ರೂಪಾಯಿಯನ್ನು ದಾಟಿದೆಯಂತೆ (online donations). ಉತ್ತಮ ರಾಜಕೀಯ ವ್ಯವಸ್ಥೆಯನ್ನು ಬಯಸುವವರಿಗೆ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಆಯ್ಕೆ ಸೃಷ್ಟಿಯಾಗುತ್ತಿರುವುದು ಸಂತಸದ ವಿಚಾರ. ಈ ಪಕ್ಷದ ಕರ್ನಾಟಕದ ನಾಯಕತ್ವದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಅದು ಆಮ್ ಆದ್ಮಿ ಪಾರ್ಟಿಯ ಕೇಂದ್ರ ನಾಯಕತ್ವ ಇಟ್ಟುಕೊಂಡಿರುವ ಬದ್ದತೆ ಮತ್ತು ಸಾಮಾಜಿಕ ಕಾಳಜಿಯ ಚೌಕಟ್ಟಿನೊಳಗೇ ಕೆಲಸ ಮಾಡುತ್ತದೆ ಎನ್ನುವ ಭರವಸೆ ಅರವಿಂದ್ ಕೇಜ್ರಿವಾಲ್ ಮತ್ತವರ ತಂಡದ ಕಾರಣಕ್ಕಾಗಿ ಇಟ್ಟುಕೊಳ್ಳಬಹುದಾಗಿದೆ. ಒಳ್ಳೆಯ ಜನ ರಾಜಕೀಯಕ್ಕೆ ಬಂದು ಕೆಲಸ ಮಾಡಲು ಇದು ಸೂಕ್ತ ಸಮಯ. ಕರ್ನಾಟಕದಲ್ಲಿ ಲೋಕ್‍ಸತ್ತಾ, ಎಡಪಕ್ಷಗಳು, ಆಮ್ ಆದ್ಮಿ ಪಾರ್ಟಿ, ಹೀಗೆ ಹಲವು ಪರ್ಯಾಯಗಳು ಜನರ ಮುಂದಿವೆ. ಜವಾಬ್ದಾರಿಯುತ ಜನ ಕೆಲಸ ಮಾಡಲು ಮತ್ತು ನಾಯಕತ್ವ ಕೊಡಲು ಮುಂದಾಗಬೇಕಿದೆ.


ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ… ಕ್ಷಮಿಸಿ…
[ಮೇ 18, 2009]

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ ‘ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.’ ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ ಕಂಡ ನಿಸ್ವಾರ್ಥಿ ಮತ್ತು ಅತ್ಯುತ್ತಮ ಪ್ರಧಾನಿ. ಅನೇಕ ಕಾಂಗ್ರೆಸ್ ನಾಯಕರು ಅಧಿದೇವರುಗಳ ಮುಂದೆ ಮಂಡಿಯೂರುವ, ಸಾಷ್ಟಾಂಗ ಪ್ರಣಾಮ ಹಾಕುವ ಪರಿಸರದಲ್ಲೂ ತಮ್ಮ ಮತ್ತು ದೇಶದ Diginity ಉಳಿಸಿಕೊಂಡ ವ್ಯಕ್ತಿ. ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಘನತೆಯಿಂದ ಕೂಡಿದ ನಡವಳಿಕೆ. ಯಾವುದೇ ಸಂದರ್ಭದಲ್ಲೂ ಪ್ರಧಾನಿಯ ಸ್ಥಾನಕ್ಕೆ ಅಗೌರವ ಬರುವಂತಹ ನಡವಳಿಕೆಯನ್ನು, ಧಾರ್ಷ್ಟ್ಯವನ್ನು ಅವರು ತೋರಿಸಿಲ್ಲ. ಕೊನೆಗೆ ಅವರ ಯುವ ಮಕ್ಕಳೂ ಅದನ್ನು ಮಾಡಲಿಲ್ಲ. ಅಹಂಕಾರ ಮತ್ತು ಠೇಂಕಾರವೆ ಅಧಿಕಾರ ಇರುವುದರ ಕುರುಹು ಎಂಬಂತೆ ಆಗಿಹೋಗಿರುವ ಭಾರತದ ಸಂದರ್ಭದಲ್ಲಿ (ಅದರಲ್ಲೂ ವಿಶೇಷವಾಗಿ “ರಾಜಕುಮಾರ’ರ ಪ್ರಜಾಪ್ರಭುತ್ವದಲ್ಲಿ) ಈ ಎಲ್ಲಾ ವಿಷಯಗಳು ನಮ್ಮ ಗಮನ ಸೆಳೆಯಬೇಕು.

2009 ರ ಚುನಾವಣೆಯ ಫಲಿತಾಂಶ ಬಂದಿದೆ. ಜಾತ್ಯಾತೀತ ಸರ್ಕಾರ ಬರಬೇಕು ಮತ್ತು ನಿಸ್ವಾರ್ಥಿ, ಅರ್ಹ, ಯೋಗ್ಯರಾದ, ಭಾರತ ಮುಂದೆಯೂ ಹೆಮ್ಮೆಪಟ್ಟುಕೊಳ್ಳಬಹುದಾದ ಡಾ. ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನನ್ನಂತಹವರ ಆಶಾವಾದ ಒಂದು ರೀತಿಯಲ್ಲಿ ನೇರವೇರಿದೆ. ಇದು ಖಂಡಿತವಾಗಿಯೂ ಭಾರತದ ಜನ UPA ಅನ್ನು ಮತ್ತು ಡಾ. ಸಿಂಗ್‌ರನ್ನು ಪುರಸ್ಕರಿಸಿರುವ ರೀತಿ ಎಂದು ಭಾವಿಸಲು ನಾನು ಬಹುವಾಗಿಯೇ ಇಷ್ಟಪಡುತ್ತೇನೆ. I really like to believe that. ಆದರೆ ವಾಸ್ತವ ಹಾಗೆ ಆಗಿಲ್ಲ ಎಂದು ನನ್ನ ಸೀಮಿತ ಅವಲೋಕನದಲ್ಲಿ ನನಗೆ ಗಾಢವಾಗಿ ಅನ್ನಿಸುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಜನ ಮತಚಲಾಯಿಸಿರುವ ರೀತಿಯನ್ನು ನೋಡಿದರೆ, ಬಹುಪಾಲು ಕಡೆ ಚುನಾವಣೆ ಆಗಿರುವುದು ಸ್ಥಳೀಯ ವಿಷಯಗಳ ಮೇಲೆ ಮತ್ತು ಅಲ್ಲಿಯ ಪಕ್ಷಗಳ ಸಂಘಟನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ತಾಕತ್ತಿನ ಮೇಲೆ.

ಹಾಗಿದ್ದರೆ UPA ಗೆಲ್ಲಲು ಹೇಗೆ ಸಾಧ್ಯ? ಇವತ್ತಿಗೂ ಭಾರತದ ಬಹುಪಾಲು ಭಾಗದಲ್ಲಿ ಬೇರಿರುವ ಪಕ್ಷ ಎಂದರೆ ಕಾಂಗ್ರೆಸ್, ಮತ್ತು ಈ ಸಲ ಸ್ಥಳೀಯ Factors ಕಾಂಗ್ರೆಸ್‌ಗೆ ಪೂರಕವಾಗಿದ್ದವು. ಹಾಗಾಗಿ ಜನ ಸಹಜವಾಗಿಯೆ ಆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಕಳೆದ 2004 ರ ಚುನಾವಣೆಯಲ್ಲಿ ಆಗಿದ್ದೂ ಇದೆ. ಇದು ಒಂದು ರಾಷ್ಟ್ರೀಯ ಚುನಾವಣೆ ನಡೆಯುವ ರೀತಿ ಅಲ್ಲ ಮತ್ತು ಅದು ಒಟ್ಟು ದೇಶದ ಹಿತಕ್ಕೆ ಒಳ್ಳೆಯದಲ್ಲ. ಜನ ಯಾವ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕಿದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಟ್ಟುಕೊಳ್ಳದೆ, ಬಹುಪಾಲು ಸ್ಥಳೀಯ ವಿಷಯ/ಚಿತಾವಣೆ/ಪ್ರಲೋಭನೆ/ಪ್ರಭಾವಗಳ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ. ಹಾಗೆ ಮಾಡದೆ, ಈ ಬಾರಿ ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರ್ಧರಿಸಿದ್ದೇ ಆಗಿದ್ದರೆ, UPA ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕಿತ್ತು; ಹಲವಾರು ಜನ ಸುಲಭವಾಗಿ ಆರಿಸಿಬರಬೇಕಿತ್ತು; ಸೋತ ಹಲವರು ಗೆಲ್ಲಬೇಕಿತ್ತು; ಮತ್ತೊಂದಷ್ಟು ಗೆದ್ದವರು ಸೋಲಬೇಕಿತ್ತು.

ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಇಡೀ ದೇಶದ ಬಹುಪಾಲು ಜನ UPA ಎಂದರೆ ಇಲ್ಲಿ ಬಿಜೆಪಿ ಎಂದಿದ್ದಾರೆ. ಹಾಗೆ ಆಗಲು ಕಾರಣ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸಂಪನ್ಮೂಲಗಳು ಮತ್ತು ಸಂಘಟನೆ ಕಾರಣವೆ ಹೊರತು, ಜನರಿಗೆ ಇಲ್ಲಿ UPA ಯನ್ನು ಬೆಂಬಲಿಸಬಾರದು ಎಂಬ ಕಾರಣ ಅಲ್ಲವೆ ಅಲ್ಲ. ಚುನಾವಣೆಗಳಂತೂ ಈಗ ಒಂದು ವ್ಯವಸ್ಥಿತ ಆಟ. ಮೊದಲ ದಿನದಿಂದಲೆ ಹಣ ಹರಿಸಬೇಕು. ಚುನಾವನೆಯ ಹಿಂದಿನ ದಿನ ಪ್ರತಿ ಮತದಾರನ ಮನೆಗೆ ಆತನ ಕ್ರಮಸಂಖ್ಯೆಯ ಚೀಟಿ ಮುಟ್ಟಿಸಬೇಕು; ಪ್ರತಿ ಬೂತ್‌ನಲ್ಲೂ ಪೋಲಿಂಗ್ ಏಜೆಂಟ್‌ನ ವ್ಯವಸ್ಥೆ ಮಾಡಬೇಕು. ಬೂತಿನ ಹೊರಗಡೆ ಪಕ್ಷದ ವತಿಯಿಂದ ನಾಲ್ಕಾರು ಟೇಬಲ್ ಹಾಕಿಕೊಂಡು ಕೂತು ಮತ ಹಾಕಲು ಬರುವ ಮಂದಿಗೆ ಮತ್ತೊಮ್ಮೆ ಅವರ ಕ್ರಮಸಂಖ್ಯೆ ತೆಗೆದುಕೊಡಬೇಕು. ಮತ್ತೊಮ್ಮೆ ಪುಸಲಾಯಿಸಬೇಕು. ಕೆಲವೊಮ್ಮೆ ಮತದಾರರನ್ನು ಮನೆಗೇ ಹೋಗಿ ಕರೆದುಕೊಂಡು ಬರಬೇಕು. ಸಾಧ್ಯವಾದರೆ ಗುಂಪಿನ ನಾಯಕರಿಗೆ ಲಕ್ಷಾಂತರ ದುಡ್ಡು ಕೊಟ್ಟು ಮೊದಲೆ ಬುಕ್ ಮಾಡಿಕೊಳ್ಳಬೇಕು. ಒಂದೆರಡು ವಾರ ಒಂದಷ್ಟು ಜನರನ್ನು ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು. ಕಾರ್ಯಕರ್ತರನ್ನೊಳಗೊಂಡ ಪ್ರಚಾರದ ಇಡೀ Machinery ಯನ್ನು ಪ್ರಚಾರದ ಅಷ್ಟೂ ದಿನ ಹಣಕಾಸಿಗೆ ತೊಂದರೆ ಆಗದಂತೆ ನೊಡಿಕೊಳ್ಳಬೇಕು. ಮತ್ತೆ ಇದೆಲ್ಲದರಿಂದ ಹೊರತಾದದ್ದು ಜಾತಿ ಲೆಕ್ಕಾಚಾರಗಳು ಮತ್ತು ಹಣ/ಸಾರಾಯಿ/ವಸ್ತು ಹಂಚಿಕೆಗಳು. ಅಮೆರಿಕದ ಪುಟ್‌ಬಾಲ್ ಟೀಮಿನ ಕೋಚ್‌ಗಳು ಮಾಡುವ ಪ್ಲಾನಿಂಗ್‌ನಂತೆ ನಮ್ಮ ಚುನಾವಣೆಗಳನ್ನು ಎದುರಿಸುವವರೂ ಎಲ್ಲವನ್ನೂ ಪಕಡ್‌‍ಬಂಧಿಯಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಈ ಎಲ್ಲವನ್ನೂ ಬೇರೆ ಮಿಕ್ಕ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಮಾಡುವ ಮಟ್ಟ ಮುಟ್ಟಿಕೊಂಡಿದೆ. ಹಾಗಾಗಿ ಸುಲಭವಾಗಿ ಗೆದ್ದಿದೆ. ಇದು ರಾಜ್ಯ ಬಿಜೆಪಿ ಪರ ಎಂದಾಗಲಿ, ಗೆದ್ದವರು ಸೋತವರಿಗಿಂತ ಅರ್ಹರು ಎಂದಾಗಲಿ, ಕರ್ನಾಟಕದ ಜನತೆಗೆ (ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಧ್ಯಮವರ್ಗಕ್ಕೆ) UPA ಅಪಥ್ಯವಾಗಲಿ ಎಂತಲ್ಲ.

ಇದೇ ಪರಿಸ್ಥಿತಿ ದೂರದ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಿದೆ. ಅಲ್ಲಿ ಇತ್ತೀಚೆಗೆ ತಾನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ಅಲ್ಲಿ ಇಲ್ಲಿಯ ಬಿಜೆಪಿ ತೊರಿಸಿರುವ ಸಾಧನೆಯನ್ನೆ ಅಲ್ಲಿಯ ಕಾಂಗ್ರೆಸ್ ಪಕ್ಷ ತೊರಿಸಿದೆ. ದೆಹಲಿಯೂ. ಇಲ್ಲೆಲ್ಲ ಅದು UPA ಗೆ ಪೂರಕವಾಗಿದೆ.

ಇನ್ನು ನೆರೆಯ ಆಂಧ್ರ, ತಮಿಳುನಾಡು, ಕೇರಳವನ್ನೆ ತೆಗೆದುಕೊಳ್ಳಿ. ಈ ಸಲ ಆಂಧ್ರದಲ್ಲಿ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧವಾಗಿ ಆಡಳಿತಾರೂಢ ವಿರೋಧಿ ಅಲೆ ಇರಲಿಲ್ಲ. ಇದ್ದದ್ದೆಲ್ಲ ಚಿರಂಜೀವಿಯ ಪಕ್ಷ ಕಾಂಗ್ರೆಸ್ ಓಟುಗಳನ್ನು ಒಡೆಯುತ್ತದೆಯೆ ಎನ್ನುವ ಸಂಶಯ. ಆದರೆ ಪ್ರಜಾರಾಜ್ಯಂ ಪಕ್ಷಕ್ಕೆ ಈಗಿನ ಚುನಾವಣೆಗಳನ್ನು ಎದುರಿಸಲು ಬೇಕಾದ (ಮೇಲೆ ಹೇಳಿದಂತಹ) ಸಂಘಟನೆ ಮತ್ತು ಕಾರ್ಯಕರ್ತರು ಇಲ್ಲದೆ ಅದು ಹಾಗೆ ಆಗಿಲ್ಲ. ಇನ್ನು ಅಲ್ಲಿಯ ಆಡಳಿತಾರೂಢ ಕಾಂಗ್ರೆಸ್‌ಗೆ ಇರುವ ಹಣದ ಸಂಪನ್ಮೂಲಗಳನ್ನು ಮಿಕ್ಕವರಿಗೆ ಸರಿಗಟ್ಟಲು ಆಗಿಲ್ಲ. (ಕಳೆದ ಸಾರಿಯ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹರಿದ ರಿಯಲ್ ಎಸ್ಟೇಟ್/ಗಣಿ ದುಡ್ಡು ನೆನಪಿಸಿಕೊಳ್ಳಿ. ಈ ಸಲ ಆಂಧ್ರದಲ್ಲಿ ಆಗಿರುವುದೂ ಅದೇ ರೀತಿ.) ಹಣ ಇದ್ದವರು, ಪಕ್ಷ ಸಂಘಟನೆ ಇದ್ದವರು, ಹಣ-ಅಧಿಕಾರ ಪ್ರಯೋಗಿಸಬಲ್ಲವರು ಗೆದ್ದಿದ್ದಾರೆ. ಹಾಗೆಯೆ ಗ್ರಾಮೀಣ ಮಟ್ಟದಲ್ಲಿ ಅಲ್ಲಿಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯವೂ ಕೆಲಸ ಮಾಡಿದೆ. ಹೀಗಾಗಿ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಗೆದ್ದಿದೆ. ಸಹಜವಾಗಿ ಕೇಂದ್ರದ UPA ಸಹ.

ತಮಿಳುನಾಡಿನಲ್ಲೂ ಸ್ಥಳೀಯ ವಿಷಯ, ಸಂಪನ್ಮೂಲಗಳೆ ಮುಖ್ಯವಾಗಿವೆ. ಅಲ್ಲಿಯೂ ಆಡಳಿತ ವಿರೋಧಿ ಅಲೆ ಇರಲಿಲ್ಲ. ಗುಜರಾತ್-ಚತ್ತೀಸ್‍ಗಡ್-ಜಾರ್ಖಂಡ್ ನಲ್ಲೂ ಹೀಗೆ ಆಗಿದೆ. ಬಿಹಾರದಲ್ಲಿ ಈ ವಿಷಯಗಳ ಜೊತೆಗೆ ನಿತೀಶ್ ಕುಮಾರರ ಆಡಳಿತವೂ ಅವರ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತಂದುಕೊಟ್ಟಿದೆ. ಒರಿಸ್ಸಾದಲ್ಲಂತೂ ಪಟ್ನಾಯಿಕರ ಬಿಜೆಡಿ ವಿಧಾನಸಭೆಗೆ ಮೂರನೆ ಎರಡರ ಬಹುಮತ ಪಡೆದುಕೊಂಡಿದ್ದಷ್ಟೆ ಅಲ್ಲದೆ ಲೋಕಸಭೆಗೂ ತನ್ನವರನ್ನೆ ಹೆಚ್ಚಿಗೆ ಕಳುಹಿಸಿದೆ. ಇನ್ನು ನೆರೆಯ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಹಣ-ಹೆಂಡ ಹೆಚ್ಚಾಗಿ ಹರಿಯದ ದೂರದ ಪಶ್ಚಿಮ ಬಂಗಾಳದಲ್ಲೂ ಇದೇ ವಿಷಯ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ಪಕ್ಷಗಳು ಹೆಚ್ಚುಕಮ್ಮಿ ಹಂಚಿಕೊಂಡಿವೆ.

ಹೀಗೆ ಯಾವ ರೀತಿ ನೋಡಿದರೂ ಸ್ಥಳೀಯ ವಿಷಯ/ಸಂಪನ್ಮೂಲ/ಸಂಘಟನೆ/ಬಲ ಮುಖ್ಯವಾಗಿದೆಯೆ ಹೊರತು ಇಡೀ ದೇಶ “ಇದು ಕೇಂದ್ರ ಸರ್ಕಾರವನ್ನು ಆರಿಸುವ ಚುನಾವಣೆ. ನಾವು ಅದೇ ರೀತಿ ಅದನ್ನು ನೋಡಬೇಕು,” ಎಂದು ಭಾವಿಸಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಇಂತಹ ಮನೋಭಾವ ಜಾಸ್ತಿ ಆಗುತ್ತಿದೆ. ಅಕ್ಷರಸ್ಥರು ಹೆಚ್ಚಿಗೆ ಆಗುತ್ತಿರುವಾಗಲೂ, ಯುವಜನತೆ ನಿರ್ಣಾಯಕವಾಗುತ್ತಿರುವಾಗಲೂ, ಈಗಲೂ ಮುಂದುವರೆಯುತ್ತಿರುವ ಈ ವಿದ್ಯಾಮಾನ ಭಾರತದ ಪ್ರಜಾಪ್ರಭುತ್ವದ Maturity ಯನ್ನು ತೋರಿಸುತ್ತಿಲ್ಲ.

ಹೀಗೆ ಆಗದೆ, ದೇಶದ ಜನ ಡಾ. ಸಿಂಗ್‌ರನ್ನು ಅವರ ಕೆಲಸಕ್ಕಾಗಿ ಪುರಸ್ಕರಿಸಿದ್ದರೆ ಅದರ ಕತೆಯೆ ಬೇರೆ ಇರಬೇಕಿತ್ತು. ಉತ್ತಮವಾಗಬೇಕಿತ್ತು. ಸದ್ಯದಲ್ಲಿ ಇದು ಒಂದು ಒಳ್ಳೆಯ ಸಿದ್ಧಾಂತ ಮತ್ತು ವ್ಯಕ್ತಿಯನ್ನು ಬೆಂಬಲಿಸಿದಂತೆ ಕಾಣುತ್ತಿದ್ದರೂ ದೂರಗಾಮಿಯಾಗಿ ಯೋಚಿಸಿದಾಗ ಭಾರತ ಪ್ರತಿಸಲವೂ ಇದೇ ರೀತಿ Lucky ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮಾತ್ರ ಇಲ್ಲಿ ವಿವೇಕವನ್ನು ಕಾಪಾಡಬಲ್ಲದು.

ಆಡುವ ವಯಸಲಿ ದುಡಿಯುವ ಕೈಗಳು


– ಡಾ.ಎಸ್.ಬಿ. ಜೋಗುರ


 

ಇವರು ಬೆಳೆಯುವ, ಬಲಿಯುವ ಮುನ್ನವೇ ಮೈ ಬಗ್ಗಿಸಿ ದುಡಿಯುವ ಪುಟ್ಟ ಜೀವಗಳು. ಜೀವನದ ಮರ್ಮ ತಿಳಿಯುವ ಮುನ್ನವೇ ರೇಜಿಗೆ ಹುಟ್ಟಿಸುವ ಬದುಕಿಗೆ ಬೆಂಡಾದವರು. ಆಡಿ, ಓದಿ ನಲಿಯಬೇಕಾದ ವಯಸಿನಲ್ಲಿ ಎಲ್ಲವೂ ಮುಗಿದು ಹೋದಂತೆ ಬದುಕುವ ಎಳೆಯರು. ಉಪವಾಸ ವನವಾಸಗಳ ಸಹವಾಸದಲ್ಲಿಯೇ ಬೆಳೆಯಬೇಕಾದ ಅನಿವಾರ್ಯದ ನಡುವೆ, ಪಾಪಿ ಹೊಟ್ಟೆಗೆ ಉತ್ತರವಾಗಿ ತನ್ನನ್ನೇ ತಾನು ಮಾರಿಕೊಂಡು ದಣಿಯುವ ಜೀವ. ನಗುವದನ್ನೇ ಮರೆತ ದುಡಿವದಷ್ಟನ್ನೇ ಅರಿತ ಪುಟ್ಟ ಪೋರ ಕುಟುಂಬದ ಬಡತನದ ಬವಣೆಯಲ್ಲಿ ಪಾಲುದಾರ ಇಂಥಾ ಬಾಲ್ಯ ಯಾರಿಗೂ ಬೇಡ ಎನ್ನುವಂತಿರುವ ಹೀನಾಯ ಸ್ಥಿತಿ. ಚಿನಕುರಳಿಯಂತೆ ಆಡಿ ನಲಿಯಬೇಕಿರುವ ಮಗು ಯಾವುದೋ ದಾಬಾದಲ್ಲಿ ತಟ್ಟೆ ಎತ್ತುವ, ಜಮಖಾನೆ ನೇಯುವ, child-labourಊದುಬತ್ತಿ ಹೊಸೆಯುವ, ಕಡ್ದಿ ಪೆಟ್ಟಿಗೆ ತಯಾರಿಸುವ, ಪಟಾಕಿ ಮಾಡುವ, ಗಾಜಿನ ಬಳೆ ತಯಾರಿಸುವ, ಬೀಡಿ ಕಟ್ಟುವ ತನ್ನ ವಯಸ್ಸನ್ನು ಮೀರಿಯೂ ದುಡಿಯುವ ಈ ಬಾಲರನ್ನೇ ಬಾಲಕಾರ್ಮಿಕರೆಂದು ಕರೆಯಲಾಗುವದು. ಜಗತ್ತಿನ ಶ್ರೀಮಂತರಲ್ಲಿ ನಮ್ಮದೂ ಪಾಲಿದೆ. ಹಾಗೆಯೇ ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ನಮಗೂ ಒಂದು ಹೆಸರಿದೆ. ನಮ್ಮಲ್ಲೂ ಹಗಲು ಹೊತ್ತಿನಲ್ಲೂ ಲೈಟ್ ಉರಿಯುವ ಸಾಕಷ್ಟು ಪಂಚತಾರಾ ಹೊಟೆಲುಗಳಿವೆ, ನಮ್ಮಲ್ಲೂ ತಿಂಗಳಿಗೆ ಲಕ್ಷ., ಕೋಟಿ ದುಡಿಯುವವರು ಬೇಕಾದಷ್ಟಿದ್ದಾರೆ. ಗಗನ ಚುಂಬಿ ಕಟ್ಟಡಗಳು ನಿತ್ಯವೂ ಏಳುತ್ತವೆ. ಇಂಥಾ ಎಲ್ಲ ವೈಭೋಗಗಳ ನಡುವೆಯೇ ಸುಮಾರು ೨೦ ಮಿಲಿಯನ್ ೧೫ ವರ್ಷ ವಯೋಮಿತಿಯೊಳಗಿನ ಮಕ್ಕಳು, ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ಪುಟ್ಟ ದೇಹವನ್ನು ಪಣಕ್ಕಿಟ್ಟು ದುಡಿಯುತ್ತಾರೆ. ಎಷ್ಟೋ ಮಕ್ಕಳು ತಮ್ಮ ವಯಸ್ಸನ್ನು ಇದ್ದಕ್ಕಿದ್ದಂತೆ ಹೇಳಿದರೆ ಕೆಲಸಕ್ಕಿಟ್ಟುಕೊಳ್ಳುವದಿಲ್ಲ ಎಂದು ಸುಳ್ಳು ಹೇಳಿ ಕೆಲಸ ಮಾಡುವ ಉದಾಹರಣೆಗಳೂ ಸಾಕಷ್ಟಿವೆ.

ಬಾಲ ಕಾರ್ಮಿಕರು ಎಂದರೆ ಯಾರು..?
ಸಾಮಾನ್ಯವಾದ ಪರಿಭಾಷೆಯಲ್ಲಿ 5-14 ವರ್ಷ ವಯೋಮಿತಿಯೊಳಗಿನ ಯಾವುದಾದರೂ ಮಗು ವೇತನಕ್ಕಾಗಿ ಇಲ್ಲವೇ ವೇತನರಹಿತವಾಗಿ ದುಡಿಯುವದನ್ನು ಬಾಲಕಾರ್ಮಿಕರು ಎನ್ನಲಾಗುತ್ತದೆ. ಕಾರ್ಮಿಕ ಸಚಿವಾಲಯದ ಇಲಾಖೆಯ ಪ್ರಕಾರ ಯಾವುದೇ ಮಗು 5-15 ವರ್ಷ ವಯೋಮಿತಿಯ ಒಳಗಿನವನಾಗಿದ್ದು, ಮನೆಯ ಒಳಗೆ ಇಲ್ಲವೇ ಹೊರಗೆ ಕೂಲಿಗಾಗಿ ಇಲ್ಲವೇ ಹಾಗೆ ಸುಮ್ಮನೇ ದುಡಿಯುವದು ಕೂಡಾ ಬಾಲ ಕಾರ್ಮಿಕ ಎಂದು ಕರೆದಿರುವದಿದೆ. ಭಾರತ ಸರ್ಕಾರವು ಯಾವುದೇ ಬಾಲಕ ಆರ್ಥಿಕ ಉತ್ಪಾದನಾ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿರುವದೇ ಬಾಲಕಾರ್ಮಿಕ ಎಂದಿದೆ. ಈ ಬಾಲಕರ ದುಡಿಮೆಯ ಬಗೆಗೆ ಸರ್ವಸಮ್ಮತವಾದ ವ್ಯಾಖ್ಯೆಗಳಿಲ್ಲ. ಒಂದಂತೂ ಸತ್ಯ ಯಾವ ಬಾಲಕ ದುಡಿಮೆಯಲ್ಲಿ ತೊಡಗಿರುವನೋ ಅವನೇ ಬಾಲ ಕಾರ್ಮಿಕ. ಬಾಲಕಾರ್ಮಿಕರಿಗೆ ಅತಿ ಹೆಚ್ಚೆಂದರೆ 500-1000 ರೂಪಾಯಿ ಸಂಬಳ. ದುಡಿಮೆಯ ಅವಧಿ ಮಾತ್ರ ದೊಡ್ದವರಷ್ಟೇ. ಕೆಲ ಬಾರಿ ಅವರಿಗಿಂತಲೂ ಹೆಚ್ಚು. ತೀರಾ ಕಡಿಮೆ ಸಂಬಳಕ್ಕಾಗಿ ಹೀಗೆ ತಮ್ಮನ್ನೇ ತಾವು ಆಟಪಾಠಗಳನ್ನು ಬಲಿಕೊಟ್ಟು ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಳ್ಳುವ ಅವಶ್ಯಕತೆಯಾದರೂ ಏನು..?

ಬಾಲಕರ ದುಡಿಮೆಗೆ ಕಾರಣವೇನು..?
ಈ ಎಳೆಯ ಬಾಲಕರು ಯಾಕೆ ದುಡಿಯಬೇಕು ಎನ್ನುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಆ ಅಧ್ಯಯನಗಳು ಬಹುತೇಕವಾಗಿ ಬಡತನವನ್ನು ಈ ಬಾಲಕಾರ್ಮಿಕರ ಸಮಸ್ಯೆಯ ಪ್ರಧಾನ ಕಾರಣವನ್ನಾಗಿ ಗುರುತಿಸಿದರೂ ಅದರ ಜೊತೆಗೆ ಇತರೆ ಕಾರಣಗಳನ್ನು ಹೀಗೆ ಹೇಳಬಹುದಾಗಿದೆ:

 • ಅನಕ್ಷರತೆ
 • ಹೆಚ್ಚು ಸಂತಾನ
 • ನಿರುದ್ಯೋಗ
 • ಉತ್ಪಾದನಾ ಸಾಧನಗಳ ಕೊರತೆ
 • ಮೂಲ ಸೌಲಭ್ಯಗಳ ಕೊರತೆ
 • ಉದ್ದಿಮೆದಾರನ ಶೋಷಣೆ
 • ಜಾತಿ ಮತ್ತು ಸಾಂಸ್ಕೃತಿಕ ಪರಂಪರೆ
 • ನಗರೀಕರಣ
 • ವಲಸೆ ಮತ್ತು ಜೀವನ ಸುಭದ್ರತೆಯ ಕೊರತೆ
 • ಕುಲಕಸುಬುಗಳು
 • ಪಾಲಕರ ಹೊಣಗೇಡಿತನ
 • ಕೊಳಚೆ ಪ್ರದೇಶ
 • ಶಾಲೆ ತಪ್ಪಿಸುವದು

ಇಂಥಾ ಹತ್ತಾರು ಕಾರಣಗಳನ್ನು ಹೇಳಬಹುದಾದರೂ ಬಡತನ ಮತ್ತು ಹೆಚ್ಚಿನ ಸಂತಾನ ಹಾಗೂ ಯಾವುದೇ ಮೂಲಗಳಿಂದ ಸರಿಯಾದ ಆದಾಯವಿಲ್ಲದಿದ್ದಾಗ ಕುಟುಂಬದ ನಿರ್ಗತಿಕ ಸ್ಥಿತಿಯಿಂದಾಗಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ಬಂದೊದಗುತ್ತದೆ.

ಬಾಲಕಾರ್ಮಿಕರ ಪ್ರಮಾಣ
ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು 2 ಕೋಟಿ ಮಕ್ಕಳು ನಮ್ಮಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನುವದಾದರೆ ಕೆಲ ಎನ್.ಜಿ.ಒ. ಗಳ ಪ್ರಕಾರ ಆ ಸಂಖ್ಯ್ಯೆ ಸುಮಾರು 6 ಕೋಟಿಯಷ್ಟಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳುವಂತೆ ಇಡೀ ವಿಶ್ವದಲ್ಲಿ ಸುಮಾರು 21.8 ಕೋಟಿ ಬಾಲಕಾರ್ಮಿಕರಿದ್ದಾರೆ. ಭಾರತದಲ್ಲಿ 5-14 ವರ್ಷ ವಯೋಮಿತಿಯೊಳಗಿನ ಬಾಲಕಾರ್ಮಿಕರ ಪ್ರಮಾಣ 14 ಪ್ರತಿಶತದಷ್ಟಿದೆ.

ಅಪಾಯಕಾರಿ ಪರಿಸರದ ನಡುವೆ ಬಾಲಕಾರ್ಮಿಕರು
ಅನೇಕ ಮಕ್ಕಳಿಗೆ ವೇತನವನ್ನು ಕೊಡದೇ ಬರೀ ಊಟ ಕೊಟ್ಟು ದುಡಿಸಿಕೊಳ್ಳುವ ಉದ್ಯಮಗಳು ಬೇಕಾದಷ್ಟಿವೆ. ಉತ್ತರ ಪ್ರದೇಶದ ಮಿರ್ಜಾಪುರದ ಜಮಖಾನೆ ತಯಾರಿಕಾ ಉದ್ಯಮದಲ್ಲಿ ಅತ್ಯಂತ ಅಹಿತಕರವಾದ ಪರಿಸರದ ನಡುವೆ ಮಕ್ಕಳು ದುಡಿಯುತ್ತವೆ. ಸೂರತ್ ನ ವಜ್ರ ಸಂಸ್ಕರಣ ಘಟಕಗಳಲ್ಲಿ 12-15 ಘಂಟೆ ದುಡಿಯುತ್ತವೆ. ಶಿವಕಾಶಿಯ ಪಟಾಕಿ ಹಾಗೂ ಕಡ್ದಿಪೆಟ್ಟಿಗೆ ತಯಾರಿಸುವ ಉದ್ಯಮವಂತೂ ಸುಮಾರು 50 ಸಾವಿರದಷ್ಟು ಬಾಲಕಾರ್ಮಿಕರನ್ನು ತೊಡಗಿಸಿಕೊಂಡು ಅವರನ್ನು ರೋಗಗ್ರಸ್ಥ ಸ್ಥಿತಿಗೆ ನೂಕುತ್ತಿವೆ. ಫಿರೋಜಾಬಾದ್‌ನ ಗಾಜು ತಯಾರಿಕೆಯ ಘಟಕಗಳಲ್ಲಿಯೂ ಬಾಲಕಾರ್ಮಿಕರನ್ನು ತೊಡಗಿಸಲಾಗಿದೆ. ಹಾಗೆಯೇ ದೇಶದ ಇನ್ನೂ ಅನೇಕ ಭಾಗಗಳಲ್ಲಿ ಬಾಲಕರನ್ನು ದುಡಿಸಿಕೊಳ್ಳಲಾಗುತ್ತದೆ. ಒಂದು ಸಮೀಕ್ಷೆಯಂತೆ:

 • ಮೂವರು ಬಾಲಕಾರ್ಮಿಕರಲ್ಲಿ ಇಬ್ಬರ ಮೇಲೆ ದೌರ್ಜನ್ಯಗಳು ಜರುಗುತ್ತವೆ
 • 50 ಪ್ರತಿಶತದಷ್ಟು ಬಾಲಕಾರ್ಮಿಕರು ದೈಹಿಕ ಹಿಂಸೆಯನ್ನು ಅನುಭವಿಸಿರುತ್ತಾರೆ
 • 50.2 ಪ್ರತಿಶತದಷ್ಟು ಮಕ್ಕಳು ವಾರದ ಏಳೂ ದಿನ ದುಡಿಯುತ್ತಾರೆ.
 • 53 ಪ್ರತಿಶತದಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವದಿದೆ.
 • ಪ್ರತಿ ಇಬ್ಬರಲ್ಲಿ ಒಬ್ಬ ಬಾಲಕ ಮಾನಸಿಕ ಕಿರಕಿರಿ ಅನುಭವಿಸುವದಿದೆ.

ಪರಿಹಾರವಿಲ್ಲವೇ..?
ಖಂಡಿತ ಇದೆ. ಮೊದಲು ಅವರನ್ನು ದುಡಿಸಿಕೊಳ್ಳುವವರು ಮಾನಸಿಕವಾಗಿ ಬದಲಾಗಬೇಕು. ಯಾವುದೇ ಕಾರಣದಿಂದಲೂ childlaboursಸಣ್ಣ ಮಕ್ಕಳನ್ನು ದುಡಿಸಿಕೊಳ್ಳುವದು ಮಹಾ ಪಾಪ ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಮನ:ಪರಿವರ್ತನೆಯಾದರೆ ಎಲ್ಲವೂ ಸಾಧ್ಯ. ಅವನನ್ನು ಶಾಲೆಗೆ ಸೇರಿಸುವಂತೆ ಒತ್ತಡ ತರಬೇಕು, ಸಾಧ್ಯವಿದ್ದರೆ ನೆರವಾಗಬೇಕು. 1986 ರಲ್ಲಿಯೇ ಭಾರತ ಸರಕಾರ ಬಾಲಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತಂದು ಬಾಲಕರ ದುಡಿಮೆಯನ್ನು ನಿಷೇಧಿಸಿದೆ. ಆದಾಗ್ಯೂ ಬಾಲಕರ ದುಡಿಮೆ ನಿಂತಿಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ಬಾಲಕಾರ್ಮಿಕರ ದುಡಿಮೆಯನ್ನು ತಪ್ಪಿಸುವದಾಗಬೇಕು. ಇದರ ನಿವಾರಣೆಯಲ್ಲಿ ಎಲ್ಲರೂ ಕೈ ಜೋಡಿಸಬೇಕು. ಭವಿಷ್ಯದ ನಾಗರಿಕರನ್ನು ಬಾಲ್ಯದಲ್ಲಿಯೇ ದುಡಿಮೆಗೆ ಅಣಿಗೊಳಿಸದೇ ಅವರಿಗೆ ಶಿಕ್ಷಣ ಕೊಡುವಲ್ಲಿ ನಾವೆಲ್ಲರೂ ಸಾಧ್ಯವಾದಷ್ಟು ನೆರವಾಗೋಣ.

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆ: ಮನ:ಪರಿವರ್ತನೆಯೇ ಪರಿಹಾರ.


– ಡಾ.ಎಸ್.ಬಿ. ಜೋಗುರ


 

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧದ ಮಾತು ವ್ಯಾಪಕವಾಗಿ ಕೇಳಿಬರುತ್ತಿರುವ ಬೆನ್ನ ಹಿಂದೆಯೇ ಅದಕ್ಕಿಂತಲೂ ಸರ್ವವ್ಯಾಪಕವಾಗಿ ಅವಳ ಮೇಲೆ ಜರಗುತ್ತಿರುವ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಅನೇಕ ಬಗೆಯ ಪ್ರತಿಭಟನೆಗಳನ್ನು ಮೀರಿಯೂ ಹೀಗೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಅತಿ ಮುಖ್ಯವಾಗಿ ಎರಡು ಸ್ತರಗಳು ತೊಡಗಿಕೊಂಡಿರುವದನ್ನು ಗಮನಿಸಬಹುದಾಗಿದೆ. ಒಂದು ಎಲ್ಲ ಬಗೆಯ ಅಧಿಕಾರವನ್ನು ಅನುಭವಿಸುತ್ತಾ ಅದರ ಅಮಲಿನಲ್ಲಿರುವವರು. ಇನ್ನೊಂದು ಎಲ್ಲ ಬಗೆಯ ಅಧಿಕಾರದಿಂದ ವಂಚಿತರಾಗಿ ಅಧಿಕಾರದ ಅಮಲಿಗಾಗಿ ಹಾತೊರೆಯುವವರು. ಮಹಿಳಾ ದೌರ್ಜನ್ಯದ ವಿಷಯದಲ್ಲಿ ಹೆಚ್ಚಾನು ಹೆಚ್ಚು ಸಿಕ್ಕು ಸುದ್ದಿಯಾಗುವವರು ಎರಡನೆಯ ಸ್ತರದವರು. ಮೊದಲನೆಯ ಸ್ತರದವರಿಗೆ ಬಚಾವಾಗುವ ಎಲ್ಲ ಸಾಧ್ಯತೆಗಳಿರುವದರಿಂದ ಅನೇಕ ಬಾರಿ ಅವರು ಎಸಗಿರುವ ಪ್ರಮಾದಗಳು ದಾಖಲಾಗುವದೇ ಇಲ್ಲ.

ಇತ್ತೀಚೆಗೆ ರಾಷ್ಟ್ರೀಯ ಅಪರಾಧಿ ದಾಖಲೆಗಳ ಸಂಸ್ಥೆ [ಎನ್.ಸಿ.ಆರ್.ಬಿ.] 2012 ರಲ್ಲಿ ನಮ್ಮ ದೇಶದಲ್ಲಿ ಮಹಿಳೆಯ ಮೇಲೆ ಜರುಗಿದ ದೌರ್ಜನ್ಯಗಳ ಬಗ್ಗೆ ಅಂಕಿ ಅಂಶಗಳನ್ನು ಹೊರಹಾಕಿತು. ನಾವು ನಿಜವಾಗಿಯೂ ನಾಗರಿಕ ಸಮಾಜದಲ್ಲಿಯೇ ಬದುಕಿರುವೆವಾ..? rape-illustrationಎಂದು ಪ್ರಶ್ನೆ ಮಾಡುವ ಮಟ್ಟಿಗೆ ಆ ಅಂಕಿ- ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. 2012 ರಲ್ಲಿ ಮಹಿಳೆಯ ಮೇಲೆ ಜರುಗಿದ ಒಟ್ಟು ದೌರ್ಜನ್ಯಗಳ ಪ್ರಮಾಣ 2,44,270 ರಷ್ಟಿದೆ. ಆದರೆ 2011 ರ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಸುಮಾರು 15620 ಪ್ರಕರಣಗಳು ಹೆಚ್ಚಾಗಿವೆ. ಇನ್ನು ಈ ಬಗೆಯ ದೌರ್ಜನ್ಯಗಳಲ್ಲಿ ಮೊಟ್ಟ ಮೊದಲ ಸ್ಥಾನ ಪಶ್ಚಿಮ ಬಂಗಾಲದ್ದಾಗಿದ್ದರೆ [30942] ಎರಡು ಹಾಗೂ ಮೂರನೇಯ ಸ್ಥಾನದಲ್ಲಿ ಆಂದ್ರಪ್ರದೇಶ ಮತ್ತು ಉತ್ತರ ಪ್ರದೇಶಗಳಿವೆ. ಇನ್ನು 53 ಪ್ರಮುಖ ನಗರಗಳನ್ನಿಟ್ಟುಕೊಂಡು ಮಾತನಾಡುವದಾದರೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೆಯ ಸ್ಥಾನದಲ್ಲಿದೆ. ದೆಹಲಿಯಲ್ಲಿ ಕಳೆದ ವರ್ಷ 5194 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದರೆ ಬೆಂಗಳೂರಲ್ಲಿ 2263 ರಷ್ಟು ಪ್ರಕರಣಗಳು ಬಯಲಾಗಿವೆ. ಬಲತ್ಕಾರದ ಪ್ರಕರಣಗಳಂತೂ ಬೆಚ್ಚಿ ಬೀಳಿಸುವಂತೆ ಎಲ್ಲ ವಯೋಮಾನದ ಮಹಿಳಾ ಸಮೂಹವನ್ನು ಬಾಧಿಸುತ್ತಿದೆ. ಕಳೆದ ವರ್ಷ ಸುಮಾರು 24923 ರಷ್ಟು ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಇದರ ಎರಡು ಮೂರು ಪಟ್ಟು ದಾಖಲೆಯಾಗದೇ ಉಳಿದ ಪ್ರಕರಣಗಳಿರುತ್ತವೆ. ಇನ್ನೊಂದು ಅಚ್ಚರಿಯ ಮತ್ತು ವಿಷಾದದ ಸಂಗತಿಯೆಂದರೆ ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿ ಬಹುತೇಕವಾಗಿ ಪರಿಚಿತನೇ ಆಗಿರುವ ಸಾಧ್ಯತೆಗಳು ಹೆಚ್ಚು. ಸುಮಾರು 98 ಪ್ರತಿಶತ ಆರೋಪಿಗಳು ಅತ್ಯಾಚಾರದ ಪ್ರಕರಣದಲ್ಲಿ ಆ ಹುಡುಗಿಗೆ ಪರಿಚಯದವರೇ ಆಗಿರುತ್ತಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

2012 ರ ನಂತರ ನಮ್ಮ ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಅನೇಕ ಸುಧಾರಣಾವಾದಿಗಳ, ಸ್ತ್ರೀವಾದಿಗಳ, ಮಹಿಳಾ ವಿಮೋಚನಾಕಾರರ ಗಮನ ಸೆಳೆದಿರುವದಿದೆ. ಇಲ್ಲಿಯವರೆಗೆ ಸುದ್ದಿಯೇ ಆಗದ ರೀತಿಯಲ್ಲಿ ಘಟಿಸಿ ಹೋಗುವ ಅತ್ಯಾಚಾರದ ಪ್ರಕರಣಗಳು ಈಗೀಗ ದಾಖಲಾಗುತ್ತಿವೆ, ಕಾನೂನಿನ ಕಣ್ಣಿಗೆ ಬೀಳುತ್ತಿವೆ. ಹೀಗಿರುವಾಗಲೂ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಿಲ್ಲ. ಕಳೆದ ವರ್ಷ ನಮ್ಮ ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ನಡೆದ ರಾಜ್ಯಗಳು ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶ; sowjanya-rape-murderಅನುಕ್ರಮವಾಗಿ 3425, 2049, 2046 ಮತ್ತು 1963. ಕೇವಲ ಅತ್ಯಾಚಾರ ಮಾತ್ರವಲ್ಲದೇ 1961 ರ ಸಂದರ್ಭದಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದರೂ ವರದಕ್ಷಿಣೆಯ ಸಾವು, ಹಿಂಸೆಯ ಪ್ರಮಾಣಗಳೇನೂ ಕಡಿಮೆಯಾಗಿಲ್ಲ.2012ರಲ್ಲಿ ಸುಮಾರು 106500 ವರದಕ್ಷಿಣೆಯ ಹಿಂಸೆ ಮತ್ತು ಸಾವಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಇಂಥಾ ಸಾವು ನೋವುಗಳು ಸಂಭವಿಸಿರುವದಿದೆ. ದೆಹಲಿ ಹಾಗೂ ಬೆಂಗಳೂರು ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಸುಮಾರು 100 ವರದಕ್ಷಿಣೆಯ ಸಾವುಗಳು ಘಟಿಸಿದ್ದರೆ, ಬೆಂಗಳೂರಲ್ಲಿ ಅದರ ಅರ್ಧದಷ್ಟು ವರದಕ್ಷಿಣೆಯ ಸಾವುಗಳು ವರದಿಯಾಗಿವೆ.

ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಕರಣಗಳು ಜಾಸ್ತಿಯಾಗುತ್ತಿವೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಉದಾರವಾದಿ ಸ್ತ್ರೀವಾದಿಗಳ ಪ್ರಕಾರ ಮಹಿಳೆಯ ದೌರ್ಜನ್ಯಗಳ ನಿವಾರಣೆಯಲ್ಲಿ ಕ್ರಾಂತಿ, ಚಳುವಳಿಗಿಂತಲೂ ಮುಖ್ಯವಾಗಿ ಸುಧಾರಣಾವಾದಿ ನಿಲುವು ಮತ್ತು ಮನ:ಪರಿವರ್ತನೆ ಮುಖ್ಯ ಎನ್ನುವದಿದೆ. ಅದು ನಿಜ. ಪುರುಷನನ್ನು ಹೊರಗಿಟ್ಟು ಈ ಬಗೆಯ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸಾಧ್ಯವಿಲ್ಲ. ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಜೊತೆಗೆ ಅವರ ಮನ:ಪರಿವರ್ತನೆಯೂ ಅಷ್ಟೇ ಮುಖ್ಯ.

ಜಾತಿ ಮೇಲಾಟ – ಈ ಸಂಘರ್ಷಗಳಿಗೆ ಕೊನೆ ಎಂದು..?

– ಮಹಾದೇವ ಹಡಪದ

ಸಾಮಾಜಿಕ ಬದಲಾವಣೆ ಅನ್ನುವುದು ಬರೀ ಭಾವನಾತ್ಮಕ ಗೇಯವಾಗಿ, ಸಂದರ್ಭನುಸಾರ ಆದರ್ಶದ ಮಾತಾಗಿ, ಗೆಳೆತನದಲ್ಲಿ ಜಾತಿ ನಿರ್ಲಕ್ಷಿಸುವ ಜಾಣಕುರುಡಾಗಿ ಮಾತ್ರ ಕಾಣುತ್ತದೆ. ಇರುವುದೆಲ್ಲವೂ ಹೇಗಿತ್ತೋ ಹಾಗೆ ಇರಬೇಕೆಂದು ಬಯಸುವವರ ಗುಂಪುಗಳು ಸಂಶೋಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಜಾತಿಯ ಕುರುಹುಗಳು ಪತ್ರಿಕೆಗಳ ಒಳಪುಟದಲ್ಲಿ ಮಾತ್ರ ಪ್ರಕಟಗೊಂಡು ಘಟನೆಗಳು ತಣ್ಣಗಾಗುತ್ತಿವೆ. devdasiಆದರೆ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ದಲಿತ ಮಹಿಳೆಯರು ನಿಜಕ್ಕೂ ಸುರಕ್ಷಿತವಾಗಿಲ್ಲ. ಅದು ಗ್ರಾಮಭಾರತದಲ್ಲಿ ದಲಿತ ಮಹಿಳೆಯರ ಬದುಕು ಇಂದಿಗೂ ಸುಧಾರಣೆ ಕಂಡಿಲ್ಲ. ಸೇವೆಯ ಹೆಸರಿನಲ್ಲಿ ದೇವದಾಸಿ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದವರು ಈಗ ದಲಿತ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಮೌನದ ನಾಗರೀಕ ಲಕ್ಷಣವಾಗಿದೆ. ಆಕೆ ಮದುವೆಯಾಗಿ ಮಕ್ಕಳನ್ನು ಹೊಂದಿದ್ದೂ ಯಾವನೋ ಮಲಗಲು ಕರೆದಾಗ ಹೋಗಲು ನಿರಾಕರಿಸಿದರೆ ಅತ್ಯಾಚಾರವಾಗುತ್ತದೆ. ಹೇಳಿಕೊಂಡರೆ ಗಂಡನಿಂದ ಸೋಡಚೀಟಿ ಪಡೆಯಬೇಕು. ಸಮಾಜದ ಕೊಂಕು ಮಾತುಗಳಿಗೆ ತುತ್ತಾಗಬೇಕು, ಗಂಡನ ಮನೆಯವರ ತಿರಸ್ಕಾರ ಅನುಭವಿಸಬೇಕು ಇಲ್ಲವೇ ಅತ್ಯಾಚಾರವನ್ನು ಗುಲ್ಲು ಮಾಡದೆ ಸಹಿಸಿಕೊಂಡು ಹೊಗಬೇಕು. ಇದೆಲ್ಲದರ ಹಿಂದೆ ಸಾಮಾಜಿಕ ಸ್ಥಾನಮಾನಗಳು, ಗೌರವ-ಮರ್ಯಾದೆಗಳು, ಭಯ-ಭಕ್ತಿ ಅಂಜಿಕೆಯ ಭಾವಗಳು ಸಂಚರಿಸುತ್ತಿರುತ್ತವೆ. ಆ ಮೌನದ ನೊಂದ ಜೀವಗಳು ತಮ್ಮ ಒಡುಲುರಿಯ ಸ್ಫೋಟಕ್ಕೆ ಸಿದ್ಧಗೊಳ್ಳುತ್ತಿರುವ ಈ ಹಂತದಲ್ಲಿ ದೌರ್ಜನ್ಯದ ನಾನಾಮುಖಗಳೂ ಗೋಚರಿಸುತ್ತಿವೆ. ಆ ಘಟಣೆಗಳಿಗೆ ಯಾವ ಸಂಶೋಧನೆಯ ಬಣ್ಣಹಚ್ಚಿದರೂ ಜಾತಿ ಕಾರಣ ಎಂಬುದು ಸ್ಪಷ್ಟವಾಗಿದೆ.

ರಾಯಚೂರು, ಬೀದರ, ಗುಲ್ಬರ್ಗಾ, ಕೊಪ್ಪಳ, ಬಳ್ಳಾರಿ, ಬಿಜಾಪೂರ ಜಿಲ್ಲೆಗಳಲ್ಲಿನ ದಲಿತ ಹೆಣ್ಣುಮಕ್ಕಳ ಆತಂಕಕ್ಕೆ ಕೊನೆಯಿಲ್ಲ. ಆದಿಶಕ್ತಿಯ ಹೆಸರನ್ನು ಮುಂದೆ ಮಾಡಿಕೊಂಡು ಬಸವಿ ಬಿಡುವ ಆಚರಣೆ ಕಳ್ಳತನದಲ್ಲಿ ನಡೆಯುತ್ತಿರುವುದು ಇಂದಿಗೂ ನಿಂತಿಲ್ಲ. ಗೆಳೆಯ ಪಂಪಾರಡ್ಡಿ ಮೊನ್ನೆಯಷ್ಟೆ ದೇವದಾಸಿ ಬಿಡುತ್ತಿದ್ದ ಹುಡುಗಿಗೆ ಮದುವೆ ಮಾಡಿಸಿದರು. ಮರಿಯಮ್ಮನಹಳ್ಳಿಯ ಆರನೇ ವಾರ್ಡಿನಲ್ಲಿ ಆಡುವ ಎಷ್ಟೋ ಮಕ್ಕಳಿಗೆ ತಂದೆ ಯಾರೆಂಬುದು ಗೊತ್ತಿಲ್ಲ. ವಿಸ್ತಾರದಲ್ಲಿ ಬೆಳೆಯುತ್ತಿರುವ ಅಸಂಖ್ಯ ಮಕ್ಕಳ ಕತೆಗಳು ಅಪೌಷ್ಟಿಕವಾಗಿರುವ ಬದುಕಿನ ಚಿತ್ರಣವನ್ನು ನೀಡುತ್ತವೆ. ಹೀಗಿರುವಾಗ ಈ ದೇಶದ ಚರಿತ್ರೆಯಲ್ಲಿನ ಅಸ್ಪೃಶ್ಯತೆಯ ರೂಪಗಳು ಜಾತಿಯಿಂದ ಜಾತಿಯ ಕಾರಣಕ್ಕಾಗಿ ಸೃಷ್ಟಿಯಾದುದಲ್ಲ ಎಂದು ಹೇಗೆ ನಿರ್ಧರಿಸಲಾಗುತ್ತದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಮೊನ್ನೆಯಷ್ಟೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಯಿತು. ಅದು ಜಾತಿಯ ಕಾರಣಕ್ಕಾಗಿಯೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಶಂಕ್ರಮ್ಮ ಎಂಬ ದಲಿತ ಹೆಣ್ಣುಮಗಳನ್ನು ಲೈಂಗಿಕ ತೃಷೆಗಾಗಿ ಕಾಡಿಸುತ್ತಿದ್ದ ದಲಿತೇತರ ಜನಾಂಗದ ವ್ಯಕ್ತಿಯೊಬ್ಬ ಕುಂಟಲಗಿತ್ತಿ ಮೂಲಕ ಆಕೆಗೆ ಎರಡು ಸಾವಿರ ರೂಪಾಯಿ ದುಡ್ಡಿನ ಆಸೆ ತೋರಿಸಿ ಮಲಗಲು ಕರೆದಿದ್ದಾನೆ. ಆ ಹೆಣ್ಣುಮಗಳು ಈ ವಿಷಯವನ್ನು ಗಂಡ ಬಸವರಾಜನಿಗೆ ಹೇಳಿದಾಗ ಆತ ಬಳಗಾನೂರು ಠಾಣೆಯಲ್ಲಿ ಆ ವ್ಯಕ್ತಿಯ ಮೇಲೆ ಕೇಸು ದಾಖಲಿಸಿದ್ದಾನೆ. ಅದು ಊರಿನಲ್ಲಿರುವ ಕುಲಬಾಂಧವರ ಗೌರವವನ್ನು ಮಣ್ಣುಗೂಡಿಸಿತೆಂದು ಮತ್ತೊಬ್ಬ ತನ್ನ ಸಮಾಜದ ದೊಣ್ಣೆನಾಯಕ ಬಸವರಾಜ ರೂಡಲಬಂಡ ಎಂಬಾತ ತನ್ನ ಜಾತಿಯ ಹುಡುಗರನ್ನೆಲ್ಲ ಸೇರಿಸಿಕೊಂಡು ಕೇಸು ದಾಖಲಿಸಿದ ತಪ್ಪಿಗಾಗಿ ಆ ಊರಿನಲ್ಲಿರುವ ಎಲ್ಲ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸ್ವಕೋಮಿನ ವ್ಯಕ್ತಿಯದು ತಪ್ಪಿದೆ ಎಂಬುದು ಅರಿವಿದ್ದರೂ “ದಲಿತರದ್ದು ಭಾರಿ ಸೊಕ್ಕಾಗಿದೆ” ಎಂಬ ಕಾರಣ ನೀಡಿ ಜಾತಿ ಕಾರಣಕ್ಕಾಗಿಯೇ ಈ ಹಲ್ಲೆಯನ್ನು ಮಾಡಲಾಗಿದೆ. caste-riot-policeನೂರಿಪ್ಪತ್ತು ಮನೆಗಳಿರುವವರು ಕೇವಲ ಎಂಟು ದಲಿತರ ಕುಟುಂಬಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆ ದಿವಸ ಪೋಲಿಸರು ಬರುವುದು ಹತ್ತು ನಿಮಿಷ ತಡವಾಗಿದ್ದರೆ ನಮ್ಮೆಲ್ಲರ ಹೆಣಗಳು ಬೀಳುತ್ತಿದ್ದವು ಎಂದು ಹೇಳುವ ಹನಮಂತಪ್ಪನ ದ್ವನಿಯಲ್ಲಿ ಆ ರೋಷದ ಕಾವು ಕೇಳುತ್ತದೆ. ಹತಾಶರಾದ ಎಂಟು ಕುಟುಂಬದ ಸದಸ್ಯರು ಆ ಊರೊಳಗೆ ಉಳಿಯುವುದಿಲ್ಲವೆನ್ನುತ್ತಿದ್ದಾರೆ. ದ್ವೇಷವನ್ನು ಉಡಿಯಲ್ಲಿ ಕಟ್ಟಿಕೊಂಡು ಈ ಲಜ್ಜೆಗೆಟ್ಟವರ ಜಾತಿ ಅಹಂಕಾರದ ಜೊತೆ ಸಹಬಾಳ್ವೆ ಮಾಡುವುದಾದರೂ ಹೇಗೆ..? ಸಹನೆಯಿಂದ ಬದುಕಿದರೂ ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಾರೆಂದು ನಂಬುವುದು ಹೇಗೆ..? ಈ ಎಲ್ಲ ಪ್ರಶ್ನೆಗಳ ನಡುವೆ ರಾಜಿಮಾಡಿಕೊಂಡು ಬದುಕಲಾದೀತೆ.

ಈಗ ಹಳ್ಳಿಗಳಲ್ಲಿರುವ ಜಾತಿಯಾಧಾರಿತ ಓಣಿಗಳು ಒಂದಾಗುವುದು ಯಾವಾಗ..? ಈಗ ಮೊದಲಿನ ಹಾಗೇನೂ ಇಲ್ಲ ಎನ್ನುವ ಮನಸ್ಸನ್ನು ಚಿವುಟಿದರೆ ನೋವಾಗುತ್ತದೆ. ಕೆಲವು ಗುಂಪಿನ ಕೆಲವು ಕೋಮಿನ ವಿಷವರ್ತುಲಗಳು ಜಾಗೃತಗೊಂಡು ಸಂಪ್ರದಾಯಗಳನ್ನು ಜತನದಿಂದ ಕಾಯ್ದುಕೊಳ್ಳಲು ಹವಣಿಸುತ್ತವೆ. ಮದುವೆಯ ದಿನ ಆರುಂಧತಿ ವಸಿಷ್ಠರ ನಕ್ಷತ್ರ ತೋರಿಸುವಾಗ ‘ಆರುಂಧತಿಯ ಹಾಗೆ ಬಾಳು’ ಎಂದು ಪುರೋಹಿತ ಪಾಮರರು ಆಶೀರ್ವದಿಸುತ್ತಾರೆ. ಆದರೆ ವಾಸ್ತವದಲ್ಲಿ ಅದೆ ಪುರೋಹಿತಶಾಹಿಗಳು ತಮ್ಮ ಮನೆಗೆ ಅರುಂಧತಿ ಜಾತಿಗೆ ಸೇರಿದ ಹೆಣ್ಣುಮಗಳನ್ನು ಸೊಸೆಯಾಗಿ ತಂದುಕೊಳ್ಳಲಾರರು. ಆದರ್ಶಕ್ಕಷ್ಟೆ ಪುರಾಣಗಳನ್ನು ಕೇಳುವ ಈ ಅಸಮಾನತೆಯ ಸಂಪ್ರದಾಯಕ್ಕೆ ಕೊನೆಯೆಂಬುದಿಲ್ಲವಾಗಿದೆ. ಈವರೆಗೂ ದಲಿತ-ಬ್ರಾಹ್ಮಣರ ಅಥವ ದಲಿತ-ಮೇಲ್ಜಾತಿಗಳ ಹೆಣ್ಣು ಗಂಡಿನ ಸಂಬಂಧಗಳಲ್ಲಿ ಬರೀ ಬ್ರಾಹ್ಮಣರ/ಮೇಲ್ಜಾತಿಯ ಹೆಣ್ಣುಮಕ್ಕಳು ದಲಿತ ಗಂಡಸರನ್ನು ಮದುವೆ ಮಾಡಿಕೊಂಡಿದ್ದಾರೆ ಹೊರತು ಎಷ್ಟು ದಲಿತರ ಹೆಣ್ಣುಮಗಳು ಬ್ರಾಹ್ಮಣರ/ಮೇಲ್ಜಾತಿಯವರ ಸೊಸೆಯಾಗಿ ಹೋದದ್ದಿದೆ? caste-clashesಇಂಥ ಕೊಡುಕೊಳ್ಳುವಿಕೆಯನ್ನು ನಿರಾಕರಿಸುವ ಸಮಾಜದಲ್ಲಿ ದಲಿತ ಹೆಣ್ಣುಮಕ್ಕಳು ಇಂದು ಸುರಕ್ಷಿತವಾಗಿದ್ದಾರೆಂದು ಹೇಗೆ ಹೇಳುವುದು..? ಹರಿದ ಕುಪ್ಪಸ ಸೀರೆಯತ್ತ ಕಳ್ಳ ಕಣ್ಣಿಡುವುದು ಕೂಡ ಗ್ರಾಮಭಾರತದಲ್ಲಿ ಬಡತನ, ವಿಧವೆ, ಅನಾಥೆ ಅಥವಾ ಜಾತಿಕಾರಣದಿಂದಲೆ ಅಲ್ಲವೇ..? ಇಂಥ ಮನಃಸ್ಥಿತಿ ಹೆಪ್ಪುಗಟ್ಟಿರುವ ಸಮಾಜದಲ್ಲಿ ಸಮಸಮಾನತೆಯ ಕನಸು ಕಾಣುವವರು ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯ ಆದರ್ಶದಲ್ಲಿ, ಅಕ್ಷರದ ಅಹಂಕಾರದಲ್ಲಿ ಬದುಕುವುದನ್ನು ವಿಮರ್ಶಿಸಿಕೊಳ್ಳಬೆಕಾಗಿದೆ.