ಕಾವೇರಿ ನದೀ ಕಣಿವೆಯ ಸಾಕ್ಷ್ಯಚಿತ್ರ

ಸ್ನೇಹಿತರೇ,

ನಿಮಗೆ ಕೇಸರಿ ಹರವೂರವರು ಗೊತ್ತೇ ಇರುತ್ತಾರೆ. ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ “ಭೂಮಿಗೀತ” ಕ್ಕೆ 1998ರಲ್ಲಿ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ತದನಂತರದಲ್ಲಿ ಅವರು ಉತ್ತರ ಕನ್ನಡದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಅಲ್ಲಿಯ ಪರಿಸರಕ್ಕೆ ಹೇಗೆ ಮಾರಕ kesari-haravooಮತ್ತು ಆಘನಾಶಿನಿ ನದಿ ಸಮುದ್ರಕ್ಕೆ ಸೇರುವ ಕೊಲ್ಲಿ ಪ್ರದೇಶದ ಜನಜೀವನ ಹೇಗೆ ದುರ್ಗತಿ ಕಾಣುತ್ತದೆ ಎನ್ನುವುದರ ಕುರಿತು “ಅಘನಾಶಿನಿ ಮತ್ತದರ ಮಕ್ಕಳು” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅದೇ ರೀತಿ ಸಕಲೇಶಪುರದ ಬಳಿಯ ಶಿರಾಡಿ ಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಗುಂಡ್ಯ ಜಲವಿದ್ಯುತ್ ಸ್ಥಾವರದ ನಿರ್ಮಾಣದಿಂದ ಅಲ್ಲಿಯ ಪರಿಸರಕ್ಕೆ ಮತ್ತು ಜೈವಿಕ ವೈವಿಧ್ಯತೆಗೆ ಹೇಗೆ ಮಾರಕವಾಗುತ್ತದೆ ಎನ್ನುವುದರ ಕುರಿತು “ನಗರ ಮತ್ತು ನದೀಕಣಿವೆ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೇಸರಿಯವರು ಕೇವಲ ಸಿನೆಮಾ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರಲ್ಲ. ಬಾಗೂರು-ನವಿಲೆ ಕಾಲುವೆ ನಿರ್ಮಾಣ ಉಂಟುಮಾಡಿದ್ದ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ವಿನಾಶದ ಬಗ್ಗೆ ಅಲ್ಲಿಯ ರೈತರೊಡನೆ ಜೊತೆಗೂಡಿ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರೂ ಹೌದು.

ಈಗ ಇವರು ಕಾವೇರಿ ಕಣಿವೆ ಮತ್ತು ನದಿ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಿರ್ಮಾಣಕ್ಕೆ ಸಮಾನಮನಸ್ಕರ ಮತ್ತು ಸಮುದಾಯದ ಬೆಂಬಲ ಬೇಕಿದೆ. ಇಂತಹ ಚಟುವಟಿಕೆಗಳು ಆಗಬೇಕಿರುವುದೇ ಹಾಗೆ. ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಸಮಾಜದಲ್ಲಿ ಇಂತಹ ಯೋಜನೆಗಳಿಗೆ ಬೆಂಬಲ ಹರಿದುಬರಬೇಕು. ಕಾಳಜಿಯುಳ್ಳ ಮತ್ತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ನಮ್ಮೆಲ್ಲರ ಪಾಲೂ ಇರಬೇಕು. ಕೇಸರಿ ಹರವೂರವರು ಈ ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಕಾರ್ಯಯೋಜನೆಯಲ್ಲಿ ಅಂತಹ ಅವಕಾಶ ಕಲ್ಪಿಸುತ್ತಿದ್ದಾರೆ. ಅದನ್ನು ಬೆಂಬಲಿಸುವವರಲ್ಲಿ ನಾವೂ ಒಬ್ಬರಾಗಬೇಕು.

ದಯವಿಟ್ಟು ಅವರು ಬರೆದಿರುವ ಕೆಳಗಿನ ಈ ಪುಟ್ಟ ಟಿಪ್ಪಣಿಯನ್ನು ಓದಿ, ಅವರ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ನಿಮ್ಮ ಕೈಲಾದಷ್ಟು ದೇಣಿಗೆ ಅಥವ ಪ್ರಾಯೋಜಕತ್ವ ನೀಡಿ. ನಾನು ವೈಯಕ್ತಿಕವಾಗಿ “Supporter : Rs. 5000+ / $100” ದೇಣಿಗೆ ನೀಡಿ ಬೆಂಬಲಿಸಿದ್ದೇನೆ. ನಮ್ಮ ವರ್ತಮಾನದ ಓದುಗ ಬಳಗ ಕನ್ನಡದಲ್ಲಿ ನಡೆಯುತ್ತಿರುವ ಇಂತಹ ಮೊದಲ ಸಮುದಾಯ ಬೆಂಬಲಿತ ಸಾಕ್ಷ್ಯಚಿತ್ರ ಮತ್ತು ಜಾಗೃತಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತದೆ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಆತ್ಮೀಯರೇ,

ಕಾವೇರಿ ಕಣಿವೆ ಮತ್ತು ನದೀ ವ್ಯವಸ್ಥೆಯ ಸಾಮಾಜಿಕತೆ, ಆರ್ಥಿಕತೆ ಹಾಗೂ ಪರಿಸರದ ಪ್ರಸ್ತುತ ವಸ್ತುಸ್ಥಿತಿ ಮತ್ತು ಈ ನದೀ ವ್ಯವಸ್ಥೆಯು ದಿನೇ ದಿನೇ ಹೇಗೆ ಕ್ಷೀಣಿಸುತ್ತಿದೆ ಎನ್ನುವ ವಿಷಯಗಳನ್ನೊಳಗೊಂಡ ಪೂರ್ಣಪ್ರಮಾಣದ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವ ಸಲುವಾಗಿ ನಾನು ಈ ಎರಡು-ಮೂರು ವರ್ಷಗಳಿಂದ ತುಸು ಅಧ್ಯಯನ ನಿರತನಾಗಿರುವುದು ತಮಗೆ ತಿಳಿದೇ ಇದೆ. ಇದಕ್ಕಾಗಿ ಒಂದೆರಡು ರಿಸರ್ಚ್ ಸಂಸ್ಥೆಗಳು ಹಾಗೂ ಹಲವು ಅಧ್ಯಯನ ನಿರತರು ನನ್ನ ಬೆನ್ನ ಹಿಂದಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಕಾವೇರೀ ಕಣಿವೆಯ ಉದ್ದಕ್ಕೂ, ಅಲ್ಲದೇ ಕಣಿವೆಯನ್ನು ಅವಲಂಬಿಸಿರುವ ಇತರ ಪ್ರದೇಶಗಳಿಗೂ ಕೊಂಡೊಯ್ದು ಕಡೇಪಕ್ಷ ಐದುನೂರು ಪ್ರದರ್ಶನಗಳನ್ನಾದರೂ ಉಚಿತವಾಗಿ ನಡೆಸಿ, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆನ್ನುವ ಹಂಬಲ, ಯೋಜನೆ ನಮ್ಮದು.

ಈ ಕೆಲಸವು ಸಾಮಾಜಿಕ ದೇಣಿಗೆಯ ಮೂಲಕವೇ ಆಗಬೇಕೆನ್ನುವುದು ನಮ್ಮ ಆಶಯ. ದಕ್ಷಿಣ ಭಾರತದ ಜನ ಈ ಕಾರ್ಯದಲ್ಲಿ ತಮ್ಮ ಪಾಲು, ಜವಾಬ್ದಾರಿಯೂ ಇದೆ ಎಂದು ಮನಗಂಡು ದೇಣಿಗೆ ನೀಡುತ್ತಾರೆಂದು ನಾನು ನಂಬಿರುತ್ತೇನೆ. ಚಿತ್ರ ನಿರ್ಮಾಣ, ಚಿತ್ರದ ವಸ್ತುವಿಸ್ತಾರ, ಸಂಗ್ರಹವಾದ ದೇಣಿಗೆಯ ಹಣ ಮತ್ತು ಅದರ ಸಮರ್ಪಕ ಆಯವ್ಯಯ – ಈ ಮುಂತಾದ ವಿಷಯಗಳನ್ನು ಪರಾಮರ್ಶಿಸುವ ಸಲುವಾಗಿ ಸಾಮಾಜಿಕ ಘನತೆಯುಳ್ಳ ಪ್ರಾಮಾಣಿಕ, ಧೀಮಂತ ವ್ಯಕ್ತಿಗಳ ಒಂದು ಸಮಿತಿಯನ್ನು ರಚಿಸಲಾಗುತ್ತಿದೆ.

ಈ ಯೋಜನೆಗೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ಈ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ. ನೀವು ದಯವಿಟ್ಟು www.kesariharvoo.com ಗೆ ಭೇಟಿ ನೀಡಿ, ಪ್ರೋತ್ಸಾಹಿಸಿ.

ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ,
ಕೇಸರಿ ಹರವೂ

Leave a Reply

Your email address will not be published. Required fields are marked *