ಅದ್ಧೂರಿ ಮದುವೆಗೂ ಮುನ್ನ ಚಿಂತಿಸಿ

– ಬಿ.ಜಿ. ಗೋಪಾಲ ಕೃಷ್ಣ

ಒಂದು ಕ್ಷಣ ಏಕಾಂತದಲ್ಲಿ ಕುಳಿತು ಕಣ್ಣು ಮುಚ್ಚಿ ಯೋಚಿಸಿ ನೋಡಿ, ಮಾಸಿದ ಹರಕಲು ಬಟ್ಟೆ, ಕೆದರಿದ ಕೂದಲು, ಸ್ನಾನ ಕಂಡು ಅದೆಷ್ಟೋ ದಿನಗಳಾದ ದೇಹ, ಪಿಳಿಪಿಳಿ ಕಣ್ಣುಗಳು, ಮುಗ್ಧ ಮನಸ್ಸಿನ ಪುಟ್ಟ ಪುಟ್ಟ ಕೈ ಚಿಂದಿಯನ್ನು ಅರಸುತ್ತಾ ನಗರಸಭೆಯ ತೊಟ್ಟಿ ಸ್ಥಳಕ್ಕೆ ಬಂದಾಗ, ಅಲ್ಲಿ ನಾವು ಬಿಸಾಡಿದ ಅನ್ನ ಸಿಕ್ಕಾಗ, ಆ ಮುಗ್ಧ ಮನಸ್ಸಿನ ಸಂತೋಷಕ್ಕೆ ಆಕಾಶವೇ ಮೂರು ಗೇಣು! ಇಂತಹ ಸಮಾಜದಲ್ಲಿ ನಮಗೆ ಅದ್ಧೂರಿ ಮದುವೆ ಬೇಕೆ !?

ಅತಿವೃಷ್ಠಿ, ಅನಾವೃಷ್ಠಿಯಿಂದ ಬಳಲಿ ಬೆಂಡಾದ ರೈತಾಪಿವರ್ಗ, ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕ ಬಂಧುಗಳು, ಓದು ಬರಹ ಕಲಿತು ಸ್ವಉದ್ಯೋಗಕ್ಕಾಗಿ ಬಂಡವಾಳವಿಲ್ಲದೆ ಆಕಾಶ ನೋಡುತ್ತ ಕುಳಿತ ಯುವಕರು, ಬೆಳೆದು ನಿಂತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಬಡ ತಂದೆ ತಾಯಂದಿರು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಭಾರತ ಮಾತೆಯ ಮಡಿಲಲ್ಲಿ, ನಿಮಗೆ ಅದ್ಧೂರಿ ಮದುವೆ ಬೇಕೆಂದೆನಿಸಿದರೆ, ಇದು ನಿಮ್ಮ ತಪ್ಪಲ್ಲ. ನಿಮ್ಮ ಅಂತಸ್ತಿನದು.

ಸಾಲದಲ್ಲಿ ಅದ್ಧೂರಿ ಮದುವೆಯಾಗಿ, ನಂತರ ಸಾಲ ತೀರಿಸಲು ಮಾನಸಿಕ, ಭೌತಿಕವಾಗಿ ಪಡಬಾರದ ಕಷ್ಟಪಡುತ್ತಾ ದಾಂಪತ್ಯದ ಮಧುರ ಕ್ಷಣಗಳನ್ನು ಕಳೆದು ಕೋಂಡವರು ನಮ್ಮೊಂದಿಗಿದ್ದಾರೆ. ಅಕ್ಕ ಅಥವಾ ತಂಗಿಯ ಮದುವೆಯ ಸಾಲ ತೀರಿಸಲು ತಮ್ಮ ಅಥವಾ ಅಣ್ಣನ ವಿದ್ಯಾಭ್ಯಾಸ ಮೊಟಕುಗೊಳಿಸಿರುವವರನ್ನು ನಾವು ನೋಡಿದ್ದೇವೆ.

ಒಂದು ಅಂದಾಜಿನ ಪ್ರಕಾರ ಮಧ್ಯಮ ವರ್ಗದವರ ಮದುವೆಗೆ 5 ರಿಂದ 15 ಲಕ್ಷ ರೂ ಬೇಕಾಗುತ್ತದೆ. expensive-wedding-banquetsಮಧ್ಯಮ ವರ್ಗದಿಂದ ಕೆಳಗಿರುವವರ ಮದುವೆ ಖರ್ಚು 1 ರಿಂದ 3 ಲಕ್ಷ ರೂ. ಅತಿ ಶ್ರೀಮಂತರ ಮದುವೆಯಲ್ಲಿ ಊಹೆಗೂ ನಿಲುಕದ ಆಡಂಬರದ ಅದ್ಧೂರಿತನ. ಕೋಟಿ ಕೋಟಿ ಹಣದ ಮಾರಣ ಹೋಮ. ಭಾರತ ಮೂಲದ ಉಕ್ಕಿನ ಉದ್ಯಮಿ ಮಿತ್ತಲ್ ತನ್ನ ಮಗಳ ಮದುವೆಗೆ ಮಾಡಿದ ಖರ್ಚು 600 ಲಕ್ಷ ಡಾಲರ್‌ಗಳು (ಆಗ ಸುಮಾರು 240 ಕೋಟಿ ರೂಪಾಯಿಗಳು). ಅದೂ ಕೇವಲ 1000 ( ಒಂದು ಸಾವಿರ) ಆಮಂತ್ರಿತರಿದ್ದ ವಿವಾಹ, 6 ದಿನಗಳ ಮದುವೆ. ಆಮಂತ್ರಣ ಪತ್ರಿಕೆ ಇದ್ದದು ಬೆಳ್ಳಿಯ ಡಬ್ಬಿಯಲ್ಲಿ. ಜೊತೆಯಲ್ಲಿ ವಿಮಾನದ ಟಿಕೇಟ್, ಸ್ಟಾರ್ ಹೋಟಲ್ ಒಂದರಲ್ಲಿ ವಾಸ್ತವ್ಯದ ಮುಂಗಡ ಟಿಕೇಟ್.

ನಮ್ಮ ದೇಶದ 15% ತರಕಾರಿ, ದವಸ ಧಾನ್ಯಗಳು ಮದುವೆ ಮುಂಜಿಗಳಿಗಾಗಿ ವಿನಿಯೋಗವಾಗುತ್ತಿದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಕೋಟಿ ಯುವಕ ಯುವತಿಯರ ಮದುವೆಗಳು ನೆಡೆಯುತ್ತವೆ. ಆ ಮದುವೆಗೆ ಖರ್ಚಾಗುವ ಮೊತ್ತ 2 ಲಕ್ಷ ಕೋಟಿ ರೂ ನಿಂದ 6 ಲಕ್ಷ ಕೋಟಿ ರೂಪಾಯಿಗಳು.

ವಿವಾಹಗಳಿಂದ ಬದುಕು ನೆಡೆಸುತ್ತಿರುವ ಕಂಪನಿಗಳು, ಕೇಟರರ್‌ಗಳು ಹೀಗೆ ಹಲವಾರು ಕುಟುಂಬಗಳು ಇದ್ದಾರೆ ನಿಜ. ಆದರೆ ಒಂದು ವರ್ಗದ ಸಮಾಜ ಮಾತ್ರ ಇದರಿಂದ ಬದುಕು ನಡೆಸಲು ಸಾಧ್ಯ. ಬಡವರ, ಹಸಿದವರ, ಜಮೀನಿದ್ದೂ ವ್ಯವಸಾಯ ಮಾಡಲಾಗದ ರೈತಾಪಿ ವರ್ಗದವರ ಕಣ್ಣೀರು ನಮಗ್ಯಾರಿಗೂ ಕಾಣಿಸುತ್ತಿಲ್ಲ.

ಹಸಿದ ಜನರಿರುವ 118 ರಾಷ್ಟ್ರ್ಟಗಳ ಸಾಲಿನಲ್ಲಿ 94 ನೇ ಸ್ಥಾನ ದಲ್ಲಿ ನಾವಿದ್ದೇವೆ. ಮದುವೆ, ಮುಂಜಿ, ಸಮಾರಂಭಗಳಲ್ಲಿ ಆಹಾರವನ್ನು ಅಪವ್ಯಯ ಮಾಡುವುದು ಶಿಕ್ಷಾರ್ಹ ಅಪರಾದ ಎಂದು ಆಹಾರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದು ಸಮಂಜಸವಾಗೇ ಇದೆ.

‘ನನ್ನಲ್ಲಿ ಸಾಕಷ್ಟು ಹಣವಿದೆ, ಮದುವೆಯಾಗುವುದು ಒಂದೇ ಸಲ. ಆದುದರಿಂದ ಆಡಂಬರದ ಅದ್ಧೂರಿ ಮದುವೆಯಾಗಲು ಬಯಸುತ್ತೇನೆ’ ಎನ್ನುವುದಾದರೆ ಮತ್ತೊಮ್ಮೆ ಯೋಚಿಸಿ. ಮನಸ್ಸು ಬದಲಾಯಿಸಿ ಸರಳ ವಿವಾಹವಾಗಿ. ಉಳಿದ ಹಣವನ್ನು ನಿಮ್ಮದೇ ಉತ್ತಮ ಭವಿಷ್ಯಕ್ಕಾಗಿ ಕೂಡಿಡಿ ಅಥವಾ ನಿಮ್ಮದೇ ಹೆಸರಿನಲ್ಲಿ ಸಮಾಜದ ಸೇವೆಗಾಗಿ ಸದ್ವಿನಿಯೋಗ ಮಾಡಿ. ಬಡವರ, ದೀನ ದಲಿತರ ಕಣ್ಣೀರನ್ನು ಒರೆಸಲು ಸಹಾಯ ಮಾಡಿ. ಸರಳ ವಿವಾಹ ಮಾಡಲು ಇಷ್ಟವಿದ್ದರೂ, ಸಮಾಜಕ್ಕೆ ಅಂಜಿ ಸಾಧಿಸಲಾಗದವರಿಗೆ ನೀವು ಪ್ರೇರಕರಾಗಿ.

ಮದುವೆಯಾಗುವುದು ವಧು ಮತ್ತು ವರನ ಒಪ್ಪಿಗೆಯ ಮೇರೆಗಾದರೂ ಮದುವೆ ಎಲ್ಲಿ, ಯಾವಾಗ, ಹೇಗೆ ನೆಡೆಯಬೇಕು ಎಂಬುವುದು ಹಿರಿಯರು ನಿರ್ಧರಿಸುತ್ತಾರೆ. ಸಮಾಜ ಬದಲಾಗಿದೆ, ವಸ್ತುಸ್ಥಿತಿ ಬದಲಾಗಿದೆ. ಸಂದರ್ಭಕ್ಕನುಸಾರವಾಗಿ ನಿರ್ಧರಿಸುವ ಸಾಮರ್ಥ್ಯ ಮಕ್ಕಳನ್ನು ಹೆತ್ತವರಿಗಿರುವುದಿಲ್ಲವೆ? ಸ್ವಲ್ಪ ನಮ್ಮ ಕುರುಡು ಸಮಾಜದ ಅಂತಸ್ತನ್ನು ಕಡೆಗಣಿಸಿ ಯೋಚಿಸಿದರಾಯಿತು.

Leave a Reply

Your email address will not be published. Required fields are marked *