Daily Archives: July 4, 2013

ಲೈಂಗಿಕ ಶಿಕ್ಷಣ ಮತ್ತು ಸೂಕ್ತ ಪಠ್ಯಕ್ರಮ


– ಡಾ.ಎಸ್.ಬಿ. ಜೋಗುರ


 

ಈಗೀಗ ಪ್ರೌಢ ಶಿಕ್ಷಣದ ಹಂತದಲ್ಲಿ ಲೈಂಗಿಕ ಜ್ಞಾನದ ವಿಷವನ್ನಾಧರಿಸಿ ಶಿಕ್ಷಣ ನೀಡುವ ಪಠ್ಯಕ್ರಮ ರೂಪಗೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬರ್ಟಂಡ್ ರಸಲ್ ರಂಥಾ ಚಿಂತಕರು ‘ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯದಿದ್ದರೆ ಅಸಂಬದ್ದವಾದ ಮಾಹಿತಿಯನ್ನೇ ಸರಿಯಾದುದು ಎಂದು ತಿಳಿಯುತ್ತಾರೆ’ ಎಂದಿರುವದನ್ನು ನೋಡಿದರೆ, ಲೈಂಗಿಕ ಶಿಕ್ಷಣದ ಮಹತ್ವದ ಅರಿವಾಗುತ್ತದೆ. ಸಿಗ್ಮಂಡ್ ಫ಼್ರಾಯಿಡ್ ಎನ್ನುವ ಮನೋವಿಜ್ಞಾನಿ ‘ಲೈಂಗಿಕತೆ ಎನ್ನುವದು ಸಣ್ಣ ಮಗುವಿನಲ್ಲಿಯೂ ಸ್ವಾಭಾವಿಕವಾಗಿ ಅಂತರಜನ್ಯವಾಗಿರುತ್ತದೆ.’ ಎನ್ನುವಾಗ ಅದನ್ನೊಂದು ಸಹಜಪ್ರವೃತ್ತಿಯ ನೆಲೆಯಲ್ಲಿ ಗುರುತಿಸಿರುವದು ಕಂಡು ಬರುತ್ತದೆ. ಇಂಥಾ ಸಹಜಪ್ರವೃತ್ತಿಯ ಈಡೇರಿಕೆ ಪ್ರತಿಯೊಂದು ಸಮಾಜದಲ್ಲಿಯ ಕಟ್ಟಳೆಗಳನ್ನು ಅವಲಂಬಿಸಿದೆ. ಆ ದಿಶೆಯಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕು. sex-edಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಮಕ್ಕಳು ಮನೆಯಲ್ಲಿ ಏನಾದರೂ ಪ್ರಶ್ನೆಗಳನ್ನು ಎತ್ತಿದರೆ ಪಾಲಕರು ಆ ಬಗೆಯ ಪ್ರಶ್ನೆಗಳನ್ನು ಮರೆಮಾಚಲು ನೋಡುವದೇ ಹೆಚ್ಚು. ಆ ಪ್ರಶ್ನೆಯ ಬದಲಾಗಿ ಅದೆಲ್ಲಾ ಈಗೇಕೆ..? ಎನ್ನುವ ಮರುಪ್ರಶ್ನೆಯನ್ನು ಮಕ್ಕಳೆದುರು ಇವರೇ ಇಡುವ ಮೂಲಕ, ಆ ವಿಷಯದಲ್ಲಿ ತನಗೂ ವೈಜ್ಞಾನಿಕವಾಗಿ ಏನೂ ತಿಳಿದಿಲ್ಲ ಎಂದು ಪರೋಕಷವಾಗಿ ಒಪ್ಪಿಕೊಳುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದಲೂ ಮಕ್ಕಳ ಆ ಕುತೂಹಲದ ಪ್ರಶ್ನೆಗೆ ಉತ್ತರಗಳಿಲ್ಲ. ನಂತರ ಆ ಮಗು ತನ್ನ ಸಹಪಾಠಿಗಳಿಂದ ತನ್ನ ಕೌತುಕಕ್ಕೆ ಉತ್ತರವನ್ನು ಕಂಡು ಕೊಳ್ಳುತ್ತದೆ. ಆದರೆ ಆ ಉತ್ತರ ಅತ್ಯಂತ ಅವೈಜ್ಞಾನಿಕವಾಗಿರುತ್ತದೆ. ಆ ಅಸಂಬದ್ಧ ತಿಳುವಳಿಕೆ ಬದುಕಿನುದ್ದಕ್ಕೂ ಹಾಗೇ ಉಳಿಯುವ ಸಾಧ್ಯತೆಯೂ ಇದೆ.

ಕೆಲ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಅದು ತುಸು ಬೇಗ ಆದಂತಾಯಿತು. ಹಾಗೆಯೇ ಕಾಲೇಜು ಹಂತದಲ್ಲಿ ಅದನ್ನು ಅಳವಡಿಸುವದು ಸ್ವಲ್ಪ ತಡ ಆದಂತಾಗುವದು. ಇವರೆಡರ ಮಧ್ಯೆ ಇರುವ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಇದನ್ನು ಪರಿಚಯಿಸಬೇಕು. ಇಲ್ಲಿಯೇ ಮಕ್ಕಳ ಜೈವಿಕ ಸಂಗತಿಗಳಲ್ಲಿ ವೈಪರೀತ್ಯಗಳು ಉಂಟಾಗಿ, ಶಾರೀರಿಕ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳತೊಡಗುತ್ತವೆ. ತನ್ನದೇ ಶರೀರದಲ್ಲಿ ಉಂಟಾಗುವ ಬದಲಾವಣೆಯ ಕಾರಣಗಳು.. ಹಿನ್ನೆಲೆಗಳು ಆ ಮಗುವಿಗೆ ತಿಳಿದಿರುವದಿಲ್ಲ. ತಿಳಿದುಕೊಳ್ಳುವ ಯತ್ನದಲ್ಲಿ ತಪ್ಪು ಮಾಹಿತಿಗಳೇ ಹೇರಳವಾಗಿ ದಕ್ಕಿರುತ್ತವೆ. ಆ ಕಾರಣದಿಂದಾಗಿ ಆ ಮಗುವಿನಲ್ಲಿ ಲೈಂಗಿಕ ವಿಷಯಗಳ ಬಗೆಗೆ ಒಂದು ಅಜ್ಞಾನದ ಭಾಗ ಮೆದುಳಲ್ಲಿ ಹಾಗೇ ಉಳಿದು ಬಿಡುತ್ತದೆ.

ಶರೀರ ರಚನೆ, ಸಂಭೋಗ ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು ಮುಂತಾದವುಗಳ ಬಗ್ಗೆ ಅವಶ್ಯಕವಿರುವ ಕ್ರಮದಲ್ಲಿ ಶಿಕ್ಷಣವನ್ನು ನೀಡುವದನ್ನು ಲೈಂಗಿಕ ಶಿಕ್ಷಣ ಎಂದು ಕರೆಯಲಾಗುತ್ತದೆ. ಇಂದು ಇಡೀ ವಿಶ್ವದಲ್ಲಿ ಲೈಂಗಿಕ ಶಿಕ್ಷಣ ಬೇಕೋ..ಬೇಡೊ.. ಎನ್ನುವ ವಾಗ್ವಾದಗಳ ಮಧ್ಯೆಯೇ ಅದರ ಕೊರತೆ ಎಂಥಾ ಅನಾಹುತಗಳನ್ನು ಸೃಷ್ಟಿಸಬಲ್ಲದು ಎನ್ನುವದರ ಬಗ್ಗೆ ಮನವರಿಕೆಗಳಾಗುತ್ತಿವೆ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲಿಯೇ ಹುಡುಗಿಯರು ಗರ್ಭಿಣಿಯರಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಭಾರತದಂತಹ ಸಾಂಪ್ರದಾಯಿಕ ಹಿನ್ನೆಲೆಯಿರುವ ರಾಷ್ಟಗಳಲ್ಲಿ ಈ ಬಗೆಯ ವಿಷಯವನ್ನಾಧರಿಸಿ ಸೆಮಿನಾರಗಳು ನಡೆದಿರುವದೂ ತೀರಾ ಕಡಿಮೆಯೇ. ಇನ್ನು ಅಳವಡಿಕೆಯ ಮಾತು ದೂರವೇ ಉಳಿಯಿತು. 2003 ರ ಸಂದರ್ಭದಲ್ಲಿ ದೆಹಲಿಯ ವಿದ್ಯಾಸಾಗರ ಸಂಸ್ಥೆಯವರು ಸಮೀಕ್ಷೆ ಮಾಡಿದಾಗ ಅನೇಕ ಶಾಲೆಗಳು ಈ ವಿಷಯವನ್ನು ಬಾಗಿಲು ತೆರೆದು ಸ್ವಾಗತ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ವರದಿಯನ್ನು ಅದು ಹೊರಹಾಕಿತ್ತು. ನಂತರ ಆರೇಳು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾವಣೆಯಾಗಿದೆ ಎಂದರ್ಥವಲ್ಲ.

ಎಲ್ಲ ರಾಷ್ಟ್ರಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಒಂದೇ ತೆರನಾಗಿಲ್ಲ. ಭಾರತದಂತಹ ರಾಷ್ಟ್ರಗಳು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣದ ಅಳವಡಿಕೆಯ ವಿಷಯವಾಗಿ ಇನ್ನೂ ಹಿಂದೇಟು ಹಾಕುತ್ತಿವೆ. ಅದಕ್ಕೆ ಈ ಕೆಳಗಿನ ಕೆಲವು ಪ್ರಮುಖ ಕಾರಣಗಳನ್ನು ನಾವು ಕೊಡಬಹುದು

  • ಈ ಬಗೆಯ ಶಿಕ್ಷಣದಿಂದಾಗಿ ತಮ್ಮ ಮಕ್ಕಳು ಇನ್ನಷ್ಟು ಹೆಚ್ಚೆಚ್ಚು ಲೈಂಗಿಕ ವಿಷಯವಾಗಿ ಅಪವರ್ತಿಗಳಾಗುವ ಅಪಾಯಗಳಿವೆ ಎನ್ನುವದು ಪಾಲಕರ ಹೆದರಿಕೆ.
  • ಆಡಳಿತ ಮಂಡಳಿಗೆ ಇದರಿಂದಾಗಿ ಕೆಲವು ರಾಜಕೀಯ ಅಡ್ಡಪರಿಣಾಮಗಳು, ಕಿರಕಿರಿಗಳು ಉಂಟಾಗಬಹುದು ಎನ್ನುವ ಹೆದರಿಕೆ.
  • ಸ್ಕೂಲ್ ಕ್ಯಾಂಪಸ್ ಗಳಲ್ಲಿ ಅಶ್ಲೀಲ ಎನ್ನಬಹುದಾದ ಸಂಗತಿಗಳು ಘಟಿಸುವ ಅಪಾಯವನ್ನು ನೆನೆದು ಅದರ ಅಳವಡಿಕೆಯಲ್ಲಿ ಶಾಲಾ ಕಮೀಟಿಗಳು ಹಿಂದೇಟು ಹಾಕುತ್ತವೆ.
  • ಅದನ್ನು ಯಾರು ಕಲಿಸಬೇಕು..? ಕಲಿಸುವವರು ಮುಕ್ತವಾಗಿ ಅದನ್ನು ಕಲಿಸಬಲ್ಲರೇ..? ಎನ್ನುವದೂ ಒಂದು ತೊಡಕು.

ಈ ವಿಷಯವಾಗಿ ಹದಿ ಹರೆಯದ ಹುಡುಗ- ಹುಡುಗಿಯರಲ್ಲಿ ಅನೇಕ ಬಗೆಯ ಮನೋತುಮುಲಗಳಿರುತ್ತವೆ. ಒಬ್ಬರನ್ನೊಬ್ಬರು ಕೆಕ್ಕರಿಸಿ ತಿನ್ನುವಂತೆ ನೋಡುವ ನೋಟ, ಅಧ್ಯಯನದಲ್ಲಿ ಏಕಾಗ್ರತೆ ಹಾಳಾಗುವದು, ಹಿಂದಿಂದೆ ಅಲೆಯುವದು, ಅವೈಜ್ಞಾನಿಕವಾಗಿ ಬರೆದ ಅಸ್ಲೀಲ ಸಾಹಿತ್ಯ ಓದಿ ಹಾಳಾಗುವದು ಇಂಥಾ ಇನ್ನೂ ಅನೇಕ ಸಂಗತಿಗಳಿಗೆ ಕಡಿವಾಣ ಬೀಳುತ್ತದೆ. sex-education-bill-clintonಅಮೇರಿಕೆಯಂಥಾ ರಾಷ್ಟ್ರಗಳಲ್ಲಿ ಆಗಾಗ್ಗೆ ಲೈಂಗಿಕ ತಿಳುವಳಿಕಾ ಶಿಬಿರಗಳನ್ನು ಸಂಘಟಿಸಿ ಅದರಿಂದ ಉಂಟಾದ ಪ್ರಯೋಜನಗಳನ್ನು ಅಧ್ಯಯನ ಮಾಡಲಾಗಿದೆ. ಲೈಂಗಿಕ ಸಂಯಮ, ಜನನ ನಿಯಂತ್ರಣ ವಿಧಾನಗಳ ಬಳಕೆ, ಏಡ್ಸ್ ರೋಗದ ಬಗೆಗೆ ತಿಳುವಳಿಕೆ ಮುಂತಾದ ಅಂಶಗಳ ಬಗ್ಗೆ ಆ ಬಗೆಯ ಶಿಬಿರಗಳಲ್ಲಿ ಪಾಲ್ಗೊಂಡ ಯುವಕರಿಗೆ ಮನದಟ್ಟಾಗಿತ್ತು. ಅಮೇರಿಕಾ ಹಾಗೂ ಭಾರತದ ಸಾಮಾಜಿಕ ಪರಿಸರದ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಇಲ್ಲಿಯ ಸಂಸ್ಕೃತಿಗೆ ತಕ್ಕುದಾದ ರೀತಿಯಲ್ಲಿಯೇ ಅದರ ಪಠ್ಯಕ್ರಮವನ್ನು ರೂಪಿಸಬೇಕು.

ಮಾಧ್ಯಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಲೈಂಗಿಕ ವಿಷಯವಾಗಿ ಪಾಲಕರಿಂದ ಸಿಕ್ಕ ಮೇಲ್ ಮೆಲಿನ ವಿವರಣೆಗಳಿಗೆ ಸಮಾಧಾನವಾಗದ ಮಕ್ಕಳು ಶಿಕ್ಷಕರನ್ನು ಆ ವಿಷಯವಾಗಿ ಪ್ರಶ್ನಿಸುವ ಸಾಧ್ಯತೆಯಿದೆ. ಆಗ ಶಿಕ್ಷಕರು ಪ್ರಾಂಜಲವಾಗಿ, ಸಮರ್ಪಕವಾಗಿ ಉತ್ತರಿಸುವವರಾಗಿರಬೇಕು. ವೀರ್ಯ ಸ್ಖಲನ, ಮುಷ್ಟಿ ಮೈಥುನದಂತಹ ಅನೇಕ ವಿಷಯಗಳ ಬಗೆಗೆ ಸಾಮಾನ್ಯವಾಗಿ ಮಕ್ಕಳಲ್ಲಿ ತಪ್ಪು ಗ್ರಹಿಕೆಗಳಿರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಈ ಬಗೆಯ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಹದಿ ಹರೆಯ ಅತ್ಯಂತ ಸೂಕ್ತ ಕಾಲ. ಸಾಧ್ಯವಾದರೆ ಆರಮ್ಭದ ಹಂತದಲ್ಲಿ ಹುಡುಗರಿಗೆ ಪುರುಷ ಶಿಕ್ಷಕರು, ಹುಡುಗಿಯರಿಗೆ ಮಹಿಳಾ ಶಿಕ್ಷಕಿಯರಿಂದ ಈ ವಿಷಯವಾಗಿ ತಿಳುವಳಿಕೆ ನೀಡಬೇಕು:

  • ಲೈಂಗಿಕತೆಯ ಬಗೆಗಿನ ವಸ್ತುನಿಷ್ಟ ದೃಷ್ಟಿಕೋನ ಅವರಲ್ಲಿ ಬೆಳೆಸಲು ನೆರವಾಗಬೇಕು
  • ಲೈಂಗಿಕತೆ ಮತ್ತು ಮಾದಕ ದ್ರವ್ಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯಬಾರದು.
  • ಆ ವಿಷಯದ ಬಗ್ಗೆ ಮಾತನಾಡುವಾಗ ಬೋಧಿಸುವವರು ಸಾಕಷ್ಟು ಮನೋನಿಗ್ರಹವನ್ನು ಹೊಂದಿರಬೇಕು. ತಪ್ಪಿಯೂ ಅಸಂಬದ್ಧವಾಗಿ, ವಿಚಲಿತರಾಗಿ ಬೋಧಿಸಕೂಡದು. 
  • ಮಕ್ಕಳು ತಮ್ಮ ಪಾಲಕರಿಗಿಂತಲೂ ಶಿಕ್ಷಕರನ್ನು ಅತಿಯಾಗಿ ನಂಬುತ್ತಾರೆ ಹಾಗಾಗಿ ನೀವು ನೀಡುವ ಮಾಹಿತಿ ವಸ್ತುನಿಷ್ಟವಾಗಿರಲಿ.

ಕೆಲ ಕರ್ಮಠರು ಲೈಂಗಿಕ ಶಿಕ್ಷಣ ಎನ್ನುವ ಪದ ಕಿವಿಗೆ ಬಿದ್ದದ್ದೇ ಅದರ ಪೂರ್ವಾಪರಗಳ ಪರಿವೆಯೇ ಇಲ್ಲದೇ ಅದು ಬೇಡವೇ ಬೇಡ ಎಂದು ಜಿದ್ದು ಹಿಡಿಯುತ್ತಾರೆ. ಇಂದಿಗೂ ನಮ್ಮಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆಯಾಗದಿರಲು ಈ ಬಗೆಯ ಪೂರ್ವಾಗ್ರಹ ಪೀಡಿತರ ಮನೋಭಾವವೇ ಕಾರಣ ಇವರು ಲೈಂಗಿಕ ಶಿಕ್ಷಣವನ್ನು ವಿರೋಧಿಸುವಲ್ಲಿ ಇರುವ ಕೆಲ ಕಾರಣಗಳು:

  • ಮತ್ತಷ್ಟು ಲೈಂಗಿಕ ಅವಘಡಗಳು ಹೆಚ್ಚಾಗುತ್ತವೆ.
  • ಎಲ್ಲ ಬಗೆಯ ತಿಳುವಳಿಕೆಯನ್ನು ನೀಡಿದರೆ ಅವರು ಇನ್ನಷ್ಟು ಆ ವಿಷಯವಾಗಿ ಸ್ವೇಚ್ಛೆಯಾಗಿ ವರ್ತಿಸುತ್ತಾರೆ
  • ಅದು ಪರಿಣಾಮಕಾರಿಯಾಗಲಾರದು
  • ಟೀನೇಜ್ ಹೆರಿಗೆಗಳು ಇನ್ನಷ್ಟು ಹೆಚ್ಚಾಗುತ್ತವೆ.
  • ಮೌಲ್ಯಗಳು ಕುಸಿಯುತ್ತವೆ.
  • ಮುಕ್ತ ಲೈಂಗಿಕ ವಾತಾವರಣ ಆರಂಭವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ

ಲೈಂಗಿಕ ಶಿಕ್ಷಣವನ್ನು ಮಾಧ್ಯಮಿಕ ಶಾಲಾ ಹಂತದಲ್ಲಿ ಅಳವಡಿಸಬೇಕು. ಅದರ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ಹೆಚ್ಚಿಗಿದೆ. sex-educationಯಾವದೋ ರಾಷ್ಟ್ರದ ಪಠ್ಯಕ್ರಮವನ್ನು ಆಧರಿಸಿ ಅದು ನಿರ್ಧಾರವಾಗುವಂತಿಲ್ಲ. ಇಲ್ಲಿಯ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅದು ರೂಪಗೊಳ್ಳಬೇಕು. ರಾಜ್ಯ, ರಾಷ್ಟ್ರ, ಸಮಾಜ ಹಿತಕರ ಎನ್ನುವಷ್ಟನ್ನು ಮಾತ್ರ ಅಳವಡಿಸಬೇಕು. ಅದು ಬೇಡವೇ ಬೇಡ ಎನ್ನುವ ವಿತಂಡವಾದಕ್ಕಿಂತಲೂ ಇದು ಒಳ್ಳೆಯದು.