ಫಲಭರಿತ ಮರವ ಕಡಿದವರು ಯಾರು..: ಒಂದು ಪ್ರತಿಕ್ರಿಯೆ


– ರವಿ ಕೃಷ್ಣಾರೆಡ್ದಿ


 

ಎರಡು ದಿನದ ಹಿಂದೆ ಪ್ರಜಾವಾಣಿ ಓದುವಾಗ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ವಸು ಮಳಲಿಯವರ “ಕಡೆಗೋಲು” ಅಂಕಣ ಓದುವುದು ಮಿಸ್ ಆಗಿತ್ತು. ಆದರೆ ಅದೇ ದಿನ ಇಬ್ಬರು ಗೆಳೆಯರು (ಪ್ರಗತಿಪರ ಹೋರಾಟದ ಹಿನ್ನೆಲೆ ಇರುವವರು) ಡಾ. ವಸುರವರ ಲೇಖನದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ ವಿಮರ್ಶಿಸಿದಾಗ, ತಪ್ಪಿ ಹೋಗಿದ್ದನ್ನು ಹುಡುಕಿ ಓದಿದೆ.

ಫಲಭರಿತ ಮರವ ಕಡಿದವರು ಯಾರು…” ಎಂಬ ತಮ್ಮ ಲೇಖನದಲ್ಲಿ ಡಾ. ವಸುರವರು ಎಚ್‌ಎಂ‌ಟಿ ಕಾರ್ಖಾನೆಯ ಕುರಿತು ಬರೆಯುತ್ತ ಅದರ ಅವಸಾನಕ್ಕೆ ಜಾಗತೀಕರಣ ಮತ್ತು ಖಾಸಗೀಕರಣವೇ ಕಾರಣ ಎಂದು ಹೇಳುತ್ತಾರೆ. ಖಾಸಗೀಕರಣವನ್ನು ವಿರೋಧಿಸುವ ಭರದಲ್ಲಿ vasu-maLaliಲೇಖಕಿ ಹಲವಾರು ವಿಷಯಗಳನ್ನು ಪರಿಗಣಿಸದೆ, ಎಚ್‌ಎಂ‌ಟಿ ಕಾರ್ಖಾನೆ ಮತ್ತು ಅಂತಹ ಸಾರ್ವಜನಿಕ ಉದ್ದಿಮೆಗಳನ್ನು ಆದರ್ಶದ ಪರಮಾವಧಿ ಎಂಬ ರೀತಿಯಲ್ಲಿ ಕಟ್ಟಿಕೊಡುತ್ತಾರೆ. ಆದರೆ, ಇದು ನಿಜವೇ?

ಎಚ್‌ಎಂಟಿಯೊಂದೇ ಅಲ್ಲ, ದೇಶದ ಅನೇಕ ಪ್ರಮುಖ ಸಾರ್ವಜನಿಕ ಉದ್ದಿಮೆಗಳು, ಅದರಲ್ಲೂ ವಿಶೇಷವಾಗಿ ಕಾರ್ಖಾನೆಗಳು ಮುಚ್ಚಿಹೋಗಲು ಕಾರಣವಾಗಿದ್ದು ಅವುಗಳು ವರ್ಷದಿಂದ ವರ್ಷಕ್ಕೆ ನಷ್ಟಕ್ಕೀಡಾಗುತ್ತ ಹೋಗಿದ್ದೇ ಪ್ರಮುಖ ಕಾರಣ. ಲಾಭದಲ್ಲಿ ನಡೆಯುತ್ತಿದ್ದ ಹಲವು ಕಾರ್ಖಾನೆಗಳು ಈಗಲೂ ಬದುಕಿವೆ. ಆದರೆ ಎಚ್‌ಎಂ‌ಟಿಯಂತಹ ಕಾರ್ಖಾನೆಗಳು ಬಾಗಿಲು ಹಾಕುವಂತೆ ಆಗಿದ್ದು ಹೇಗೆ?

ಎಚ್‌ಎಂ‌ಟಿ, ಬೆಮೆಲ್, ಬಿಇಎಲ್, ಬಿಎಚ್‌ಇಎಲ್, ಮುಂತಾದ ಹಲವಾರು ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಸ್ಪಾಪಿಸಿದಾಗ ನಮ್ಮ ದೇಶದ ಆರ್ಥಿಕ ನೀತಿಗಳಲ್ಲಿ ಕಟ್ಟುಪಾಡುಗಳಿದ್ದವು. ಖಾಸಗಿಯವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರವೇಶಿಸುವುದಕ್ಕೆ ಕಷ್ಟವಿತ್ತು. ಮತ್ತು ಅಷ್ಟೇ ಮುಖ್ಯವಾಗಿ ಖಾಸಗಿಯವರಿಗೆ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಬೃಹತ್ ಮೊತ್ತದ ಹಣ ಮತ್ತು ಅದನ್ನು ಷೇರು ಮಾರುಕಟ್ಟೆಯಿಂದ ಸಂಗ್ರಹಿಸಬಹುದಾದ ಸಾಧ್ಯತೆಗಳೂ ಕಡಿಮೆ ಇದ್ದವು. watches-hmtಆದರೆ ದೇಶ ಕಟ್ಟುವುದಕ್ಕೆ ಈ ಬೃಹತ್ ಕಾರ್ಖಾನೆಗಳು ಬೇಕು ಎಂದಾದಾಗ ಸ್ವತಃ ಸರ್ಕಾರ ಇವುಗಳನ್ನು ಸ್ಥಾಪಿಸಲು ಮುಂದಾಯಿತು.

ಸರ್ಕಾರದ ನೇರ ಉಸ್ತುವಾರಿಯಲ್ಲಿ ಸ್ಥಾಪನೆಗೊಂಡ ಹಲವಾರು ಕಾರ್ಖಾನೆಗಳು ಆರಂಭದಲ್ಲಿ ಲಾಭವನ್ನೇ ಮಾಡಿದವು. ಹೂಡಿದ ಬಂಡವಾಳವನ್ನು ವಾಪಸು ಗಳಿಸಬೇಕೆಂಬ ಉಮೇದಿರಲಿಲ್ಲ. ಆಪರೇಷನಲ್ ಖರ್ಚುವೆಚ್ಚಗಳು ತೂಗಿ ಒಂದಿಷ್ಟು ಲಾಭ ಬಂದರೆ ಸಾಕಾಗಿತ್ತು. ಅದಕ್ಕೆ ಪೂರಕವಾದ ವಾತಾವರಣವೂ ಇತ್ತು. ಈ ಉದ್ದಿಮೆಗಳಿಗೆ ಸ್ಪರ್ಧಿಗಳೇ ಇರಲಿಲ್ಲ. ಇವರು ಎಂತಹ ಕಳಪೆ ಸಾಮಾನು ತಯಾರಿಸಿದರೂ ಅದಕ್ಕೆ ಮಾರುಕಟ್ಟೆ ಇತ್ತು. ಸಾಮಾನು ಕೊಂಡುಕೊಂಡ ನಂತರ ಎಂತಹ ಕಳಪೆ ಗ್ರಾಹಕ ಸೇವೆ ಕೊಟ್ಟರೂ ನಡೆಯುತ್ತಿತ್ತು. ಒಟ್ಟಿನಲ್ಲಿ ಮೊನಾಪಲಿ ಇತ್ತು. ಇದೇ ಕಾರಣಕ್ಕಾಗಿ ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆ ಬೆಳೆಯಿತು. ಹೊಸ ಉತ್ಪನ್ನಗಳ ಅನ್ವೇಷಣೆ ತೃಪ್ತಿಕರವಾಗಿರಲಿಲ್ಲ. ದಕ್ಷತೆ ಕಮ್ಮಿಯಾಯಿತು. ಆಧುನಿಕರಣಗೊಳ್ಳಲಿಲ್ಲ. ಖರ್ಚುಗಳು ಹೆಚ್ಚಾದವು. ಭ್ರಷ್ಟಾಚಾರವೂ ಬೆಳೆಯಿತು. ಯಾರೂ ಯಾವುದೇ ಭ್ರಷ್ಟಾಚಾರ, ನಿರ್ಲಕ್ಷ್ಯ, ಮತ್ತು ಅದಕ್ಷತೆಯ ಕಾರಣಕ್ಕಾಗಿ ಶಿಕ್ಷೆಗೊಳಗಾಗ ಅನಾರೋಗ್ಯಕರ ರಕ್ಷಣಾ ನೀತಿಗಳೂ ರೂಪುಗೊಂಡವು.

ಆದರೆ, ಇದೇ ಸಮಯದಲ್ಲಿ ದೇಶದ ಆರ್ಥಿಕತೆ ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿತ್ತು. ಉದಾರಿಕರಣ ಮತ್ತು ಖಾಸಗೀಕರಣದ ಕಾರಣದಿಂದಾಗಿ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಿಗೆ ಮೊದಲ ಬಾರಿಗೆ ಪೈಪೋಟಿ ಎದುರಾಯಿತು. ಖಾಸಗಿಯವರು ಎಚ್‍ಎಂಟಿ, ಬೆಮೆಲ್, ಬಿಎಚ್‍ಇಲ್, ಎನ್‌ಜಿಇಎಫ್‌ಗಳಿಗಿಂತ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅವರಿಗಿಂತ ಕಡಿಮೆ ದರಕ್ಕೆ ಮಾರಲು ಆರಂಭಿಸಿದವು. ಮಾರುಕಟ್ಟೆಯಲ್ಲಿ ಉಳಿಯಬೇಕು bhel-meterಎನ್ನುವ ಉಮೇದಿನಲ್ಲಿ ಅವರ ಗ್ರಾಹಕ ಸೇವೆಯೂ ಚೆನ್ನಾಗಿತ್ತು. ಮೊನಾಪಲಿ ಕಳೆದುಕೊಂಡ ಸಾರ್ವಜನಿಕ ಉದ್ದಿಮೆಗಳು ಮೊದಲ ಬಾರಿಗೆ ನಷ್ಟ ಅನುಭವಿಸಲು ಆರಂಭಿಸಿದವು. ಅವುಗಳ ಭಾರದ ಮೇಲೆ ಅವೇ ಕುಸಿಯಲು ಆರಂಭಿಸಿದವು. ಹೆಚ್ಚು ಜನ ಕಮ್ಮಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದ ಕಾರಣಕ್ಕೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಗಳು ಘೋಷಣೆಯಾದವು. ಆದರೂ ಕೆಲವು ಬಿಳಿಯಾನೆಗಳನ್ನು ಸಂಪೂರ್ಣವಾಗಿ ಮುಚ್ಚದೆ ಸರ್ಕಾರಕ್ಕೆ ವಿಧಿಯಿರಲಿಲ್ಲ. ಅನಗತ್ಯವಾಗಿ ಪೋಲಾಗುತ್ತಿದ್ದ ದೇಶವಾಸಿಗಳ ಸಂಪತ್ತನ್ನು ಸರ್ಕಾರ ಅಷ್ಟು ಮಾತ್ರಕ್ಕೆ ತಡೆಹಿಡಿಯಿತು. (ಆದರೆ ಇದೇ ಸಮಯದಲ್ಲಿ ಕೆಲವು ಕಾರ್ಖಾನೆಗಳನ್ನು ಮುಚ್ಚಲು ಕೆಲವು ಖಾಸಗಿ ಕಂಪನಿಗಳು ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ದುರ್ಬಳಕೆ ಮಾಡಿಕೊಂಡಿರಬಹುದಾದ, ಆ ಪ್ರಕ್ರಿಯೆಯನ್ನು ವೇಗವಾಗಿಸಿರಬಹುದಾದ ಸಾಧ್ಯತೆಗಳಿರಬಹುದು. ಆದರೆ ಅದು ಬಹುಪಾಲು ನಷ್ಟ ಅನುಭವಿಸುತ್ತಿದ್ದ ಕಂಪನಿಗಳಿಗೇ ಅನ್ವಯಿಸುತ್ತದೆ. ಲಾಭದಲ್ಲಿದ್ದ ಕಂಪನಿಗಳು-ಅವುಗಳಲ್ಲಿ ಸರ್ಕಾರದ ಪಾಲು ಕಮ್ಮಿ ಆಗಿದ್ದರೂ-ಈಗಲೂ ನಡೆಯುತ್ತಿವೆ.)

ಈಗ ಒಂದೆರಡು ಖಾಸಗಿ ಕಂಪನಿಗಳ ವಿಚಾರಕ್ಕೆ ಬರೋಣ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ದೇಶದ ಜನರ ಕೈಯ್ಯಲ್ಲಿ ಓಡಾಡುತ್ತಿದ್ದ ಹೈಟೆಕ್ ಸಾಧನ ಎಂದರೆ motorola-pagerಅದು ಪೇಜರ್. ಅದನ್ನು ತಯಾರಿಸುತ್ತಿದ್ದ ಒಂದೇ ಕಂಪನಿ ಮೊಟೊರೊಲ, ಅಮೇರಿಕದ್ದು. ಅದಾದ ನಂತರ ನಿಧಾನಕ್ಕೆ ಸೆಲ್‌ಪೋನ್‌ಗಳು ಬಂದವು. ಆವಾಗಲೂ ಮುಂಚೂಣಿಯಲ್ಲಿದ್ದದ್ದು ಮೊಟೊರೊಲವೆ. ಇಡೀ ವಿಶ್ವದಲ್ಲಿ ಎಲ್ಲಿಂದ ಬೇಕಾದರೂ ಸೆಟಲೈಟ್ ಫೋನಿನಲ್ಲಿ ಮಾತನಾಡಬಹುದಾದಂತಹ ಒಂದು ಸಂಪರ್ಕ ವ್ಯವಸ್ಥೆಯನ್ನು (ಸುಮಾರು ಆರು ಬಿಲಿಯನ್ ಡಾಲರ್ ವೆಚ್ಚದಲ್ಲಿ) ಅದು ಅನುಷ್ಟಾನಗೊಳಿಸುತ್ತಿತ್ತು. ಆ ಸಂದರ್ಭದಲ್ಲಿ ಮೊಟೊರೊಲಕ್ಕಿಂತ ಚೆನ್ನಾಗಿ ಮೊಬೈಲ್ ಫೋನ್‌ ವ್ಯವಸ್ಥೆಯನ್ನು ಮತ್ತು ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡ ಯೂರೋಪಿನ ನೋಕಿಯಾ ಕಂಪನಿ ಮೊಟೊರೋಲಕ್ಕಿಂತ ಉತ್ತಮ ಮತ್ತು ಅಗ್ಗದ ಮೊಬೈಲ್‌ಗಳನ್ನು ತಯಾರಿಸಲು ಆರಂಭಿಸಿತು. ಮೊಟೊರೊಲ ಎರಡನೇ ಸ್ಥಾನಕ್ಕೆ ಹೋಯಿತು. ಕಾಲಕ್ರಮೇಣ ಮೂರಕ್ಕೆ, ನಾಲಕ್ಕೆ ಇಳಿಯುತ್ತಾ, ತೀವ್ರ ನಷ್ಟಕ್ಕೆ ಈಡಾಗುತ್ತ ಹೋಯಿತು. ಆ ಕಂಪನಿಗಳ ಹಲವು ವಿಭಾಗಗಳನ್ನು ಒಡೆದು ಪ್ರತ್ಯೇಕ ಕಂಪನಿಗಳನ್ನಾಗಿ ಮಾಡಿ ಹೂಡಿಕೆದಾರರ ಹಿತರಕ್ಷಣೆ ಮಾಡಿದರು, ಒಂದೆರಡು ವರ್ಷದ ಹಿಂದೆ ಮೊಟೊರೊಲದ ಮೊಬೈಲ್ ಘಟಕವನ್ನು ಸಾಫ್ಟ್‌ವೇರ ಕಂಪನಿಯಾದ ಗೂಗಲ್ ಕೊಂಡುಕೊಂಡಿತು. ಮೊಬೈಲ್ ಫೋನ್ ಉದ್ದಿಮೆಯಲ್ಲಿ ಇಲ್ಲದೇ ಇದ್ದ ಆಪಲ್ ಆ ರಂಗಕ್ಕೆ ಐಫೋನ್ ಎಂಬ ಸ್ಮಾರ್ಟ್‌ಫೋನ್ ಮೂಲಕ ಇಳಿದ ನಂತರ ಆ ವಲಯದಲ್ಲಿ ಕ್ರಾಂತಿಯಾಗಿ ಮೊದಲ ಸ್ಥಾನದಲ್ಲಿದ್ದ ನೋಕಿಯಾ ಅದಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಲಾಗದ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ತೀವ್ರ ನಷ್ಟದಲ್ಲಿ ನಡೆಯುತ್ತಿದೆ. ಆ ಕಂಪನಿಯ ಭವಿಷ್ಯವೂ ಬಹಳ ದಿನ ಇದ್ದಂತಿಲ್ಲ. ಇಂದು ಕೇವಲ ದಿನವೊಂದಕ್ಕೆ ಹತ್ತು-ಹದಿನೈದು ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿದೆ ನೋಕಿಯಾ ಕಂಪನಿ. ಒಂದು ಕಾಲದಲ್ಲಿ ತಂತ್ರಜ್ಞಾನ ವಲಯದಲ್ಲಿ ದೈತ್ಯ ಕಂಪನಿಗಳಾಗಿದ್ದ ಐಬಿಎಮ್, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳ ಲಾಭಾಂಶ ಇಂದು ಕಡಿಮೆಯಾಗಿ ಷೇರು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಕಳೆದ ದಶಕದಿಂದೀಚೆಗೆ ಯಾವುದೇ ರೀತಿಯಲ್ಲಿ ಉತ್ತಮಗೊಂಡಿಲ್ಲ. ಪರ್ಸನಲ್ ಕಂಪ್ಯೂಟರ್‌ಗಳನ್ನು ಉತ್ಪಾದಿಸುತ್ತಿದ್ದ ಡೆಲ್, ಎಚ್‌ಪಿ, ಲೆನೊವೊ ಅಂತವುಗಳೆಲ್ಲ ಇಂದು iPhone_5_Samsung_Galaxy_S3ಸ್ಮಾರ್ಟ್‌ಪೋನ್ ಮತ್ತು ಟ್ಯಾಬ್ಲೆಟ್ ಉತ್ಪಾದನೆಯಿಂದೇನಾದರೂ ತಾವು ಬದುಕಿಕೊಳ್ಳುತ್ತೇವೆಯೇ ಎನ್ನುವ ಹಂತಕ್ಕೆ ಬಂದು ತಲುಪಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದವರು ಹಿಂದಕ್ಕೆ ಸರಿದೇ ಸರಿಯುತ್ತಾರೆ; ಎಲ್ಲಾ ವಲಯಗಳಲ್ಲೂ.

ನಮ್ಮ ಸಾರ್ವಜನಿಕ ಉದ್ದಿಮೆಗಳ ರೀತಿಯಲ್ಲಿಯೇ ಸ್ಪರ್ಧೆ ಮತ್ತು ಅನ್ವೇಷಣೆ ವಿಚಾರದಲ್ಲಿ ಮೈಮರೆತ ಅಮೆರಿಕದ ಮೂರು ಆಟೊಮೊಬೈಲ್ ದೈತ್ಯ ಕಂಪನಿಗಳು ನಾಲ್ಕು ವರ್ಷದ ಹಿಂದೆ ಇನ್ನೇನು ಬಾಗಿಲು ಮುಚ್ಚುವ ದಿವಾಳಿ ಹಂತ ತಲುಪಿದ್ದವು. ಜಪಾನಿನ ಟೊಯೊಟ ಮತ್ತು ಹೊಂಡ ಕಂಪನಿಗಳ ಉತ್ತಮ ಮತ್ತು ಕಡಿಮೆ ದರದ ಕಾರುಗಳಿಂದಾಗಿ ಜಿಎಮ್, ಫೋರ್ಡ್, ಮತ್ತು ಡೈಮ್ಲರ್-ಕ್ರೈಸ್ಲರ್ ಕಂಪನಿಗಳು ಅಮೆರಿಕ ಸರ್ಕಾರದ ಬೇಲ್‌ಔಟ್ ಮತ್ತು ಇತರೆ ಕೆಲವು ಸಂರಕ್ಷಣೆಯ ಪಾಲಿಸಿಗಳಿಲ್ಲದಿದ್ದಿದ್ದರೆ ಇಷ್ಟೊತ್ತಿಗೆ ಅವುಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡು, ಅದರ ಪರಿಣಾಮಗಳು ಆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲಾಗುತ್ತಿತ್ತು. ಆದರೆ, ಕೇವಲ ಅಮೆರಿಕ ಸರ್ಕಾರ ಆ ಕಂಪನಿಗಳಿಗೆ ಬೇಲ್‌ಔಟ್ ರೂಪದಲ್ಲಿ ಸಾಲ ಕೊಟ್ಟಿದ್ದರಿಂದೇನೂ ಆ ಕಂಪನಿಗಳು ಮತ್ತೆ ಸರಿ ದಾರಿಗೆ ಬರಲಿಲ್ಲ. ಆ ಕಂಪನಿಗಳ ಬದಲಾದ ಮ್ಯಾನೇಜ್‌ಮೆಂಟ್‌ನಿಂದಾಗಿ ಮತ್ತು ಅವರು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಇಂದು ಅವೂ ಬದುಕಿದವು, ಲಕ್ಷಾಂತರ ಜನ ನೌಕರಿ ಉಖಿಸಿಕೊಂಡರು, ಮತ್ತು ಅವುಗಳಲ್ಲಿ ಹಣ ಹೂಡಿದ್ದ ಲಕ್ಷಾಂತರ ಜನರ ಹಿತವೂ ರಕ್ಷಣೆಯಾಯಿತು. ಭಾರತದ ಅನೇಕ ಸಾರ್ವಜನಿಕ ಉದ್ದಿಮೆಗಳಿಗೆ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣದ ಅನುಭವ ಇಲ್ಲದ ಅನೇಕರನ್ನು, ಆ ಹುದ್ದೆಗಳಿಗೆ ಅರ್ಹವಲ್ಲದ, ಉದ್ಯಮ-ಸ್ಪರ್ಧಾತ್ಮಕತೆಯ ಪರಿಚಯ ಇಲ್ಲದ ಐಎಎಸ್ ಅಧಿಕಾರಿ ವರ್ಗದವರನ್ನೇ ಹೆಚ್ಚಿಗೆ ನೇಮಿಸಿ ನಮ್ಮ ಸರ್ಕಾರವೇ ಅವುಗಳ ಅವನತಿಗೆ ಮೂಲ ಕಾರಣವಾಯಿತು.

ಇನ್ಫೋಸಿಸ್ ಅನೇಕ ಕಾರಣಗಳಿಗೆ ದೇಶದಲ್ಲಿ ಹೊಸ ಶಕೆ ಆರಂಭಿಸಿದ ಸಂಸ್ಥೆ. ಇಲ್ಲಿಯವರೆಗಿನ ಅದರ ಯಾವೊಬ್ಬ ಸಿಇಓನೂ ಹೊರಗಿನಿಂದ ಬಂದವರಲ್ಲ. ಆ ಸಂಸ್ಥೆಯ ಟಾಪ್ ಮ್ಯಾನೇಜ್‌ಮೆಂಟ್‌ನಲ್ಲಿ ಮೇಲ್ಮುಖ ಚಲನೆ ಇತ್ತು. ತಮಗಿನ್ನೂ ವಯಸ್ಸು ಮತ್ತು ಸಾಮರ್ಥ್ಯ ಇದ್ದರೂ, ಕಂಪನಿ ಊಹೆಗೂ ನಿಲುಕದಷ್ಟು ಲಾಭ ಮತ್ತು ಸಾಮರ್ಥ್ಯ ತೊರಿಸುತ್ತಿದ್ದರೂ ನಾರಾಯಣಮೂರ್ತಿಯವರು ನಂದನ್ ನಿಲೇಕಣಿಯವರನ್ನು ಸಿಇಓ ಮಾಡಿ ತಾವು ಚೇರ್ಮನ್ ಆದರು. ಆ ಕಂಪನಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಕಾಣದಂತಹ ನಿವೃತ್ತಿ ವಯಸ್ಸಿನ ಮಿತಿ ಇತ್ತು. ಆ ಕಂಪನಿಯ ಕಾರ್ಯನಿರ್ವಹಣಾಧಿಕಾರಿಗಳಾದವರೆಲ್ಲರೂ ಸಾಮಾನ್ಯ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. infosys-murthyಶ್ರೀಮಂತಿಕೆ ಮತ್ತು ಕೌಟುಂಬಿಕ ಹಿನ್ನೆಲೆ ಇರುವವರು ಮಾತ್ರ ಈ ದೇಶದಲ್ಲಿ ಬೃಹತ್ ಉದ್ಯಮವನ್ನು ಸ್ಥಾಪಿಸಬಲ್ಲರು ಮತ್ತು ನಡೆಸಬಲ್ಲರು ಎನ್ನುವ ನಂಬಿಕೆಯನ್ನು ತೊಡೆದ ಸಂಸ್ಥೆ ಅದು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಅದಕ್ಕೆ ಹಿನ್ನಡೆ ಆಗುತ್ತಿದೆ. ವಹಿವಾಟಿನ ವಿಚಾರದಲ್ಲಿ ಅದೀಗ ದೇಶದ ಐಟಿ ವಲಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ಫೋಸಿಸ್ ಹುಟ್ಟಿದ ಹಲವಾರು ವರ್ಷಗಳ ನಂತರ ಬಂದ ಕಾಗ್ನಿಜಂಟ್ ಇಂದು ಎರಡನೇ ಸ್ಥಾನದಲ್ಲಿದೆ. ತಾವೇ ಹಾಕಿಕೊಂಡಿದ್ದ ಆದರ್ಶ ಮತ್ತು ನಿಯಮಗಳನ್ನು ಮುರಿದು ಇನ್ಫೋಸಿಸ್ ಅನ್ನು ಉಳಿಸಿ-ಬೆಳೆಸುವ ಕೆಲಸಕ್ಕಾಗಿ ನಾರಾಯಣಮೂರ್ತಿಯವರು ಇನ್ಫೊಸಿಸ್‌ನ ದೈನಂದಿನ ಉಸ್ತುವಾರಿ ಹೊತ್ತುಕೊಂಡು ವಾಪಸಾಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಮತ್ತೆ ತನ್ನ ಹಳೆಯ ಸ್ಥಾನವನ್ನು ಪಡೆದುಕೊಳ್ಳುವುದು ಕಷ್ಟವಿದೆ. ಬದಲಾದ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ತ ಸಮಯದಲ್ಲಿ ಸರಿಯಾಗಿ ಗ್ರಹಿಸಿ ಆಂತರಿಕ ಬದಲಾವಣೆಯನ್ನು ಮಾಡಿಕೊಳ್ಳದೇ ಹೋದ ಕಾರಣಕ್ಕಾಗಿ ಇನ್ಫೋಸಿಸ್ ಹಿನ್ನಡೆ ಅನುಭವಿಸುತ್ತಿದೆ.

ಮತ್ತು, ಇದೇ ಸಮಯದಲ್ಲಿ ನಾಲ್ಕೈದು ವರ್ಷಗಳ ಹಿಂದೆ ಭಾರತದಲ್ಲಿ ಹೆಸರೇ ಕೇಳಿರದಿದ್ದ ಮೈಕ್ರೋಮ್ಯಾಕ್ಸ್, ಕಾರ್ಬನ್, ಇತ್ಯಾದಿ ಭಾರತೀಯ ಮೊಬೈಲ್ ಕಂಪನಿಗಳು ಸ್ಯಾಮ್ಸಂಗ್, ನೋಕಿಯಾಗಳಿಗೆ ಪೈಪೋಟಿ ನೀಡಿ ಬೆಳೆಯುತ್ತಿವೆ.

ಹೀಗೆ ಒಂದು ಉದ್ದಿಮೆ ಏಳಲು ಮತ್ತು ಬೀಳಲು ಅನೇಕ ಕಾರಣಗಳಿರುತ್ತವೆ ಮತ್ತು ನಾವು ಅವುಗಳ ಬಗ್ಗೆ ಹೆಚ್ಚುಹೆಚ್ಚು ಭಾವತೀವ್ರತೆಯಿಂದ ಯೋಚಿಸಿದಷ್ಟೂ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತೇವೆ. ಅರೆನಿಜ ಮತ್ತು ಭಾವಾವೇಶದಿಂದ ಜನಾಭಿಪ್ರಾಯ ರೂಪಿಸುವುದು ಮತ್ತು ಸಮಾಜವನ್ನು ಕಟ್ಟಲು ಪ್ರಯತ್ನಿಸುವುದು ಒಳ್ಳೆಯ ಮಾದರಿಯಲ್ಲ.

ತಮ್ಮ ಜನಪರ ಕಾಳಜಿ ಮತ್ತು ಬದ್ಧತೆಯ ಕಾರಣಕ್ಕಾಗಿ ಡಾ. ವಸು ಮಳಲಿಯವರನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಆದರೆ ಅವರು ತಮ್ಮ ಅಂಕಣ ಲೇಖನದಲ್ಲಿ ಎತ್ತಿರುವ ವಿಚಾರಗಳು ಮತ್ತು ಮಂಡಿಸಿರುವ ವಿಧಾನಕ್ಕೆ ನನ್ನ ತಕರಾರಿದೆ. ಮೌಲ್ಯ, ಆದರ್ಶ, ಪ್ರಾಮಾಣಿಕತೆ, ವೃತ್ತಿಪರತೆಯ ಕೊರತೆ ಇರುವ ಭಾರತದ ಇಂದಿನ ಸಾರ್ವಜನಿಕ ಜೀವನದಲ್ಲಿ, ಯಾವುದೇ ಕ್ಷೇತ್ರದಲ್ಲಾಗಲಿ ಹಸ್ತಕ್ಷೇಪ ಮಾಡಿ ಸ್ವಾರ್ಥಸಾಧನೆ ಮಾಡಿಕೊಳ್ಳುವ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ, ತನಗೆ ಇಂದಿನ ವರ್ತಮಾನದಲ್ಲಿ ಯೋಗ್ಯವಲ್ಲದ ಮತ್ತು ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಂತಹ ಉದ್ದಿಮೆಗಳಿಂದ ಹೊರನಡೆದು ಸರ್ಕಾರ ಸರಿಯಾದುದನ್ನೇ ಮಾಡಿದೆ. ಸಾರ್ವಜನಿಕ ಉದ್ದಿಮೆಗಳ ನಷ್ಟ ತುಂಬಲು ಭರಿಸುತ್ತಿದ್ದ ದುಡ್ದನ್ನು ಅದು ಇಂದು nregaನರೇಗ, ಆಹಾರ-ಭದ್ರತೆ, ಆರೋಗ್ಯ, ಶಿಕ್ಷಣ ಮುಂತಾದ ಜನಪರ ಯೋಜನೆಗಳತ್ತ ಹರಿಸುತ್ತಿದೆ.

ಮತ್ತು, ಖಾಸಗೀಕರಣದ ಮುಂಚೂಣಿಯಲ್ಲಿರುವವರು ಲಾಭದಾಸೆಯಿಂದ ಸಮಾಜದಲ್ಲಿ ಅಸಮಾನತೆಯಂತಹ ತೀವ್ರ ದುಷ್ಪರಿಣಾಮಗಳನ್ನು ಉಂಟು ಮಾಡುವ ಸಮಯದಲ್ಲಿ ಅಂತಹ ಸಂಸ್ಥೆಗಳನ್ನು ಕಟ್ಟಿಹಾಕುವ ಅಧಿಕಾರ ದೇಶದ ಪಾರ್ಲಿಮೆಂಟ್‌ಗೆ ಇದ್ದೇ ಇದೆ. ಅದಕ್ಕಾಗಿ ಯೋಗ್ಯರಾದವರು ನಮ್ಮ ಜನಪ್ರತಿನಿಧಿಗಳನ್ನಾಗಿ ಮಾಡಿಕೊಳ್ಳುವತ್ತ ನಮ್ಮ ಚಟುವಟಿಕೆಗಳು ಕೇಂದ್ರೀಕೃತವಾಗಬೇಕು. ಉತ್ತಮ ಮತ್ತು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾತ್ರ ಕೆಲವರ ಹಿತಕ್ಕಿಂತ ಬಹುಜನರ ಹಿತ ಕಾಪಾಡುವ ವಾತಾವರಣ ನಿರ್ಮಾಣವಾಗುತ್ತದೆ.

7 thoughts on “ಫಲಭರಿತ ಮರವ ಕಡಿದವರು ಯಾರು..: ಒಂದು ಪ್ರತಿಕ್ರಿಯೆ

  1. ಎಂ.ಆರ್. ದತ್ತಾತ್ರಿ

    ಪ್ರಿಯ ರವಿ, ನಾನು ಇದೇ ವಿಚಾರವಾಗಿ ಬರೆಯಬೇಕೆಂದಿದ್ದೆ. ನಿಮ್ಮ ಲೇಖನವನ್ನು ಓದಿ ಸಂತೋಷವಾಯಿತು. ಖಾಸಗೀಕರಣ ಸಾರ್ವಜನಿಕ ಉದ್ಯಮವನ್ನು ಕೊಂದಿತು ಎಂದು ಎಷ್ಟೋ ದಿನ ನಾನೂ ತಿಳಿದಿದ್ದೆ. ಅದರಲ್ಲಿ ಕೊಲೆಯೆಷ್ಟು ಖುದ್ದು ಆತ್ಮಹತ್ಯೆ ಎಷ್ಟು ಎನ್ನುವುದನ್ನು ಈಗ ತಿಳಿದು ಯೋಚಿಸಿದಾಗ ವಿಷಯ ಅಷ್ಟು ಸುಲಭಕ್ಕೆ ಜನರಲೈಸ್ ಆಗುವಂತದ್ದಲ್ಲ ಎನ್ನುವುದು ಮನವರಿಕೆಯಾಯಿತು.ನಮ್ಮೆಲ್ಲಾ ಸ್ಥಿತಿಗತಿಗಳಿಗೂ ಜಾಗತೀಕರಣವನ್ನು ದೂರುವುದು ನಮಗೆ ಅಭ್ಯಾಸವಾದಂತಿದೆ. ಜಾಗತೀಕರಣವೂ ಒಂದು ಸ್ಥಿತಿಯೇ. ಜಾಗತೀಕರಣದ ಪ್ರಭಾವಕ್ಕೆ ಸಿಲುಕದ ಭೂಪ್ರದೇಶ ಯಾವುದಿದೆ ಈ ಭೂಮಿಯಲ್ಲಿ?

    Reply
  2. Ananda Prasad

    ಕೆಲವು ಕ್ಷೇತ್ರಗಳ ಖಾಸಗೀಕರಣದಿಂದ ತೊಂದರೆಯೇನೂ ಇಲ್ಲ ಬದಲಿಗೆ ಒಳ್ಳೆಯದೇ ಆಗುತ್ತದೆ. ಆದರೆ ಕೆಲವು ಸೇವೆಗಳು ಸರಕಾರದ/ಸಾರ್ವಜನಿಕ ಕ್ಷೇತ್ರದ ಉದ್ಯಮದಲ್ಲಿ ಇರುವುದು ಅಗತ್ಯ. ಇದು ಗ್ರಾಮೀಣ ಭಾಗಗಳ ದೃಷ್ಟಿಯಿಂದ ಅಗತ್ಯ. ಗ್ರಾಮೀಣ ಭಾಗಗಳಲ್ಲಿ ನಗರಗಳಲ್ಲಿ ಇರುವಷ್ಟು ಜನಸಂದ್ರತೆ ಇರುವುದಿಲ್ಲ ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಲಾಭಾಂಶ ಕಡಿಮೆ ಅಥವಾ ಕೆಲವು ಸೇವೆಗಳಿಂದ ಲಾಭ ಬರದೆಯೂ ಇರಬಹುದು. ಲಾಭಾಂಶ ಕಡಿಮೆ ಇರುವಲ್ಲಿ ಖಾಸಗಿ ಸೇವೆ ನೀಡುವ ಕಂಪನಿಗಳು ಬರುವುದಿಲ್ಲ. ಉದಾಹರಣೆಗೆ ಕಡಿಮೆ ಲಾಭ ಇರುವ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಬಸ್ಸುಗಳು ಬರುವುದಿಲ್ಲ. ಅದೇ ರೀತಿ ಕಡಿಮೆ ಲಾಭ ಇರುವ ಅಥವಾ ಲಾಭಾಂಶ ಇಲ್ಲದೆ ಅಸಲು ಮಾತ್ರ ದಕ್ಕಬಹುದಾದ ದೂರವಾಣಿ/ಮೊಬೈಲ್/ಬ್ರಾಡ್ಬ್ಯಾಂಡ್ ಇಂಟರ್ನೆಟ್/ವಯರ್ಲೆಸ್ಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ನೀಡಲು ಖಾಸಗಿ ರಂಗದ ದೂರಸಂಪರ್ಕ ಕಂಪನಿಗಳು ಗ್ರಾಮೀಣ ಪ್ರದೇಶಗಳಿಗೆ ಬರುವುದಿಲ್ಲ. ಇಂದು ಭಾರತದ ಗ್ರಾಮೀಣ ಭಾಗಗಳಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ಕೇವಲ ಬಿಎಸ್ಸೆನ್ನೆಲ್ ಮಾತ್ರ ನೀಡುತ್ತಿದೆ ಹೊರತು ಯಾವುದೇ ಖಾಸಗಿ ದೂರಸಂಪರ್ಕ ಕಂಪನಿಗಳು ನೀಡುತ್ತಿಲ್ಲ.

    Reply
  3. Ananda Prasad

    ಕೆಲವೊಮ್ಮೆ ಸರಕಾರದ ನೀತಿಗಳೂ ಸಾರ್ವಜನಿಕ ರಂಗದ ಉದ್ಯಮಗಳು ನಷ್ಟ ಹೊಂದಲು ಕಾರಣವಾಗುತ್ತವೆ. ಉದಾಹರಣೆಗೆ ಬಿಎಸ್ಸೆನ್ನೆಲ್ ಎಂಬ ಸಾರ್ವಜನಿಕ ವಲಯದ ಸಂಸ್ಥೆಯನ್ನೇ ತೆಗೆದುಕೊಂಡರೆ ಸರಕಾರವು ಬಿಎಸ್ಸೆನ್ನೆಲ್ ಸಂಸ್ಥೆಯ ಆಧುನೀಕರಣಕ್ಕೆ ಆದ್ಯತೆಯನ್ನು ಕೊಟ್ಟಿಲ್ಲ. ಇದರಿಂದಾಗಿ ಕೆಲವು ವರ್ಷಗಳ ಹಿಂದೆ ದೂರಸಂಪರ್ಕ ಕ್ಷೇತ್ರದಲ್ಲಿ ನಂಬರ್ ಒಂದು ಸ್ಥಾನದಲ್ಲಿದ್ದ ಬಿಎಸ್ಸೆನ್ನೆಲ್ ಇಂದು ಹಿನ್ನಡೆ ಅನುಭವಿಸುವಂತಾಗಿದೆ. ಖಾಸಗಿ ಕ್ಷೇತ್ರದ ಕಂಪನಿಗಳು 4ಜಿ ಮೊಬೈಲ್ ಸೇವೆಯನ್ನು ದೊಡ್ಡ ನಗರಗಳಲ್ಲಿ ಹಾಗೂ 3ಜಿ ಮೊಬೈಲ್ ಸೇವೆಯನ್ನು ಸಣ್ಣ ಪಟ್ಟಣಗಳಲ್ಲಿ ಆರಂಭಿಸಿದ್ದರೆ ಬಿಎಸ್ಸೆನ್ನೆಲ್ ಇಂಥ ಸೇವೆಯನ್ನು ಇನ್ನೂ ಆರಂಭಿಸದಂತೆ ಸರಕಾರದ ನೀತಿಗಳು ಅದನ್ನು ಕಟ್ಟಿಹಾಕುತ್ತಿವೆ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಬಿಎಸ್ಸೆನ್ನೆಲ್ ಸಂಸ್ಥೆಗೆ ಇಲ್ಲದೆ ಇರುವ ಕಾರಣ ಯಾವುದೇ ನಿರ್ಧಾರಕ್ಕೂ ಸರ್ಕಾರದ ಮರ್ಜಿಗೆ ಕಾಯಬೇಕಾಗುತ್ತದೆ. ಸರ್ಕಾರವು ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿ ಖಾಸಗಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಬಿಎಸ್ಸೆನ್ನೆಲ್ ಹಿಂದೆ ಬಿದ್ದಿದೆ. ಇದಕ್ಕೆ ಕಾರಣ ಸರಕಾರ ಸೂಕ್ತ ಕಾಲದಲ್ಲಿ ಸಮರ್ಪಕ ತಂತ್ರಜ್ಞಾನ ಅಳವಡಿಸದೆ ಇರುವುದು. ಇದರಿಂದಾಗಿ ಬಿಎಸ್ಸೆನ್ನೆಲ್ ಸಮರ್ಪಕ ಸೇವೆ ಖಾಸಗಿಯವರಿಗೆ ಸಮನಾಗಿ ನೀಡಲಾಗದೆ ಹಿಂದೆ ಬೀಳುವಂತೆ ಆಗುತ್ತದೆ. ಹೀಗೆ ಮಾಡುತ್ತಾ ಸರಕಾರ ನಂತರ ಸಂಸ್ಥೆ ನಷ್ಟದಲ್ಲಿದೆ ಎಂದು ಖಾಸಗಿಯವರಿಗೆ ಹಸ್ತಾಂತರಿಸುವ ಸಂಭವ ಉಂಟಾಗುತ್ತದೆ. ಇದನ್ನು ಖಾಸಗಿಯವರಿಗೆ ಹಸ್ತಾಂತರಿಸಿದರೆ ನಗರಗಳ ಜನರಿಗೆ ತೊಂದರೆ ಆಗುವುದಿಲ್ಲ ಏಕೆಂದರೆ ನಗರಗಳಲ್ಲಿ ಹಲವು ಖಾಸಗಿ ದೂರಸಂಪರ್ಕ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನದ ಸೇವೆಯನ್ನು ನೀಡಲು ಮುಂಚೂಣಿಯಲ್ಲಿರುತ್ತವೆ ಆದರೆ ಗ್ರಾಮೀಣ ಭಾಗಗಳಲ್ಲಿ ಅವು ಬರದೇ ಇರುವ ಕಾರಣ ತೊಂದರೆ ಆಗುತ್ತದೆ.

    Reply
  4. ಜೆ.ವಿ.ಕಾರ್ಲೊ, ಹಾಸನ

    ನಿಮ್ಮ ವಿಶ್ಲೇಷಣೆ ಸರಿಯಾಗಿದೆ ರವಿ.
    ಇತ್ತೀಚಿನ ‘ತೆಹಲ್ಕ’ದಲ್ಲಿ ಓದಿದ್ದು:
    ರಸಗೊಬ್ಬರಕ್ಕಾಗಿ ಸರಕಾರ ಪ್ರತಿ ವರ್ಷ ಖರ್ಚು ಮಾಡುತ್ತಿರುವ ಅನುದಾನದ ಮೊತ್ತ: ರು. 70-90 ಸಾವಿರ ಕೋಟಿ.
    ಇದರಲ್ಲಿ ಹತ್ತು ಮಿಲಿಯನ್ ಟನ್ನಿನಷ್ಟು ರಸಗೊಬ್ಬರ ವಾಣಿಜ್ಳ ಉದ್ದೇಶಗಳಿಗಾಗಿ ಕಳ್ಳದಾರಿಯಿಂದ ಖಾಸಗಿ ರಂಗಕ್ಕೆ ಸೋರಿ ಹೋಗುತ್ತಿದೆ. ಅಂದರೆ, ಸರಕಾರ ಭರಿಸಿರುವ ರು.2 ಸಾವಿರ ಕೋಟಿ ಅನುದಾನದಷ್ಟು. ಜೊತೆಗೆ ರು. 300 ಕೋಟಿ ಅಬಕಾರಿ ಸುಂಕದ ನಷ್ಟ.
    ಇದು ಸರಕಾರಕ್ಕೆ ಗೊತ್ತಿಲ್ದವೆಂದಲ್ಲ!

    Reply
  5. Kotethota Aruna Kumar

    ರವಿಯವರೇ ,
    ಸಾರ್ವಜನಿಕ ರಂಗದ ಕೈಗಾರಿಕೆಗಳ ಅವನತಿಗೆ ಜೋಭದ್ರ ಅಧಿಕಾರಿಶಾಹಿಯ ನಿರ್ಧಾರಗಳ ಕೊಡುಗೆ ಕೂಡ ಇದೆ.

    Reply
  6. Mahesh

    ಈ ಜಗತ್ತಿನಲ್ಲಿ ಸ್ಪರ್ಧೆಯೆಂಬುದು ಜೀವನದ ಸಹಜ ಭಾಗ ಎಂಬುದನ್ನು ಅರಿತುಕೊಂಡರೆ ನಮ್ಮ ಅನೇಕ ವೈಫಲ್ಯಗಳಿಗೆ ಕಾರಣ ಕಂಡು ಹಿಡಿಯುವುದು ಕಷ್ಟವಾಗಲಾರದು. ಇಡೀ ಜಗತ್ತನ್ನೇ ಸ್ಪರ್ಧೆಯಲ್ಲಿ ಎದುರಿಸುವಂತಹ ಬುದ್ಧಿಶಕ್ತಿ, ಕೌಶಲ ನಮ್ಮದಾಗಲಿ ಎಂದು ಹಾರೈಸೋಣ. ರವಿಯವರೇ ತುಂಬಾ ಚೆನ್ನಾಗಿ ಬರೆದಿದ್ದೀರಿ.

    Reply

Leave a Reply

Your email address will not be published. Required fields are marked *