Daily Archives: July 17, 2013

ಏಕಾಂತ ದೀಪದ ಬಿಸಿ ಮತ್ತು ಬೆಳಕು


– ಡಾ.ಎಸ್.ಬಿ. ಜೋಗುರ


 

ಇಂದಿನ ಸಾಹಿತ್ಯಕ ಸಂದರ್ಭ ಬಿಕ್ಕಟ್ಟುಗಳ, ತಲ್ಲಣಗಳ ಸಂದರ್ಭ. ಎಲ್ಲ ಬಗೆಯ ಸಾಂಸ್ಕೃತಿಕ ಧಾಳಿಗಳ ನಡುವೆ ನಿರುಮ್ಮಳನಾಗಿ ಕಾವ್ಯ ಬರೆಯುವದು ಇನ್ನೂ ದುಸ್ತರ. ಬರವಣಿಗೆಗೆ ಅಣಿಮಾಡಿಸುವ ಯಾವ ಆಹ್ಲಾದಕರ ಪ್ರಸಂಗಗಳೂ ನಮ್ಮ ಸುತ್ತ ಮುತ್ತ ಸುಳಿಯುವದಿಲ್ಲ. ಲಕ್ಕೂರ ಆನಂದ ಅವರ ಕವಿತೆಗಳಿಗೂ ಈ ಬಗೆಯ ಸಂಕೀರ್ಣತೆಯ ಕಿರಿಕಿರಿ ಇದ್ದೇ ಇದೆ. ಇಲ್ಲದಿರೆ ಉರಿವ ಏಕಾಂತ ದೀಪ ಬಿಸಿ ಮತ್ತು ಬೆಳಕು ಹರಿಸುವದಾದರೂ ಹೇಗೆ..? ಬೇರು ಕಿತ್ತಿಕೊಂಡು ಬುಡಮೇಲಾಗುತ್ತಿರುವ ಮನುಷ್ಯ ಸಂಬಂಧಗಳು, ಆಗಾಧವಾದ ನಾಗರಿಕನೊಬ್ಬನ ಅನಾಗರಿಕ ಚಹರೆ, ಅಸಮಾನತೆಯ ಗೋಡೆಗಳು, ಜಾತೀಯತೆಯ ಜಡತ್ವ ಇನ್ನಷ್ಟು ಸೂಕ್ಷ್ಮ ಮತ್ತು ಗಾಢವಾಗುತ್ತಿರುವ ಸಂದರ್ಭದಲ್ಲಿ ಉರಿವ ಏಕಾಂತ ದೀಪದ ಕಾವು ಅನಿವಾರ್ಯ ಮತ್ತು ಸಹಜ. ಹಾಗೆಂದು ಕವಿಯೊಬ್ಬ ಬದುಕಿನ ಸಂದಿಗ್ದಗಳಿಗೆ ಬೆನ್ನು ತೋರದೇ ವಾಸ್ತವದೊಂದಿಗೆ ಮುಖಾಮುಖಿಯಾದಾಗ ಮಾತ್ರ ಹರಕತ್ತಾದ, ಬರಕತ್ತಾದ ಬರವಣಿಗೆಯನ್ನು ಮಾಡಲು ಸಾಧ್ಯ. ಲಕ್ಕೂರು ಆನಂದ ಅವರ ಕವಿತೆಯೊಳಗಿನ ಕಾವು ಮತ್ತು ನಕ್ಕವರ ತುಟಿಯ ಮೇಲೆಯೂ ತನ್ನ ಋಣವನರಿಸುವ ಹಕ್ಕುದಾರಿಕೆ ಅವಾಸ್ತವವಂತೂ ಅಲ್ಲ.

ಲಂಕೇಶರ ‘ಅವ್ವ’ ಕವಿತೆಯ ನಂತರ ಅವ್ವ ಹೆಸರಿನ ನೂರಾರು ಕವಿತೆಗಳು ಬಂದಿವೆ. ಕೆಲ ಕವಿತೆಗಳು ಲಂಕೇಶರ ಅವ್ವ ನ ಹತ್ತಿರವೂ ಹೋಗಿರುವದಿರಬಹುದು ಆದರೆ ಲಂಕೇಶರ ‘ಅವ್ವ’ಳನ್ನು ಮೀರಲಾಗಿಲ್ಲ. ಹಾಗೆಂದು ಮಿಕ್ಕವರ ಅವ್ವಂದಿರು ತೂಕ ಕಡಿಮೆಯಿದ್ದವರಲ್ಲ. ಲಕ್ಕೂರ ಆನಂದರ ‘ಅವ್ವ’, ಗಂಜಿಗಾಗಿ ಹುಚ್ಚಿಯಂತೆ ಒದ್ದಾಡಿದವಳು, ಹೊಲಗದ್ದೆಗಳ ನಡುವೆ ಶಿಲೆಯಾದವಳು, ಬೊಗಸೆ ನೀರು ಕುಡಿದರೆ ಜುಲ್ಮಾನೆ ಹಾಕುವವಳು, ನಾಲ್ಕಾಣೆ ಫ಼ೀಜು ಕೂಡಾ ಕಟ್ಟದ ಬಡ ತಾಯಿ… ಮನುಷ್ಯಳಲ್ಲದೇ ಮತ್ತೇನೂ ಆಗದ ನನ್ನವ್ವನ ಕುರಿತು ಹೇಳಬೇಕೆಂದರೆ ಈ ಭಾಷೆ, ಕಾವ್ಯ, ಸಾಕಾಗುವದಿಲ್ಲ. ಎಂದು ಕವಿ ಯಥಾರ್ಥವಾಗಿ ಉಚ್ಚರಿಸಿದರೂ ಅಲ್ಲೊಂದು ‘ಅವ್ವ’ತನದ ಮೌಲ್ಯವಿದೆ ಎನ್ನುವದನ್ನು ಮರೆಯಲಾದೀತೆ..?

‘ಒಂದು ಕಪ್ ಕಾಫಿ’ ಎಂಬ ಕವಿತೆಯಲ್ಲಿ ಮನುಷ್ಯ ಸಂಬಂಧಗಳು ಸ್ಥಾಪನೆಗೊಂಡು ಗಟ್ಟಿಗೊಳ್ಳುವ ಮೊದಲೇ ಹಳಸಬಹುದಾದlakkur-anand ಸಾಧ್ಯತೆಯನ್ನು ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ. ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ ದು:ಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ ಎನ್ನುವ ದುಗುಡವನ್ನು ಕವಿ ಅನಾವರಣಗೊಳಿಸುವದಿದೆ. ‘ಕತ್ತೆ’ ಎನ್ನುವ ಇನ್ನೊಂದು ಕವಿತೆಯಲ್ಲಿ ‘ಶಾಂತಿದೂತರಿಗೆ ಸಮಾನರಾದ ವೈದ್ಯರೇ ದಯವಿಟ್ಟು ಬನ್ನಿ ನನಗೆ ಗರ್ಭಪಾತ ಮಾಡಿಸಿ ಅದು ಪವಿತ್ರವಾಗಿ ಹುಟ್ಟುವದಕ್ಕಿಂತ ಅಪವಿತ್ರವಾಗಿ ಹೊಟ್ಟೆಯಲ್ಲಿಯೇ ಸತ್ತು ಬಿಡಲಿ’ ಎಂದು ಹಂಬಲಿಸುವ, ತುಡಿಯುವ ಮನ:ಸ್ಥಿತಿಯ ಹಿಂದೆ ಸಾವಿರಾರು ವರ್ಷಗಳ ತುಳಿತದ ಹೆಜ್ಜೆಗಳ ಭಾರವಡಗಿದೆ. ‘ಇನ್ನು ದಾಹವಾಗುವದಿಲ್ಲ ಬಿಡು’ ಎಂಬ ಕವಿತೆಯಲ್ಲಿ ಜಾತಿಯ ಸ್ತರಗಳು ಹೇಗೆ ಅಂತರಗಳನ್ನು ನಿರ್ಮಿಸಿ, ನೈಸರ್ಗಿಕವಾಗಿರುವ ಅವಕಾಶಗಳನ್ನು ವಂಚಿಸಿವೆ ಎನ್ನುವದನ್ನು

ನೀನು ಮುಟ್ಟಿದರೆ ಸಾಕು
ಇಲ್ಲಿ ದಿನವೂ ಹರಿವ ನದಿಗಳು ಒಣಗಿಬಿಡುತ್ತವೆಯಂತೆ
ಹುಲುಸಾಗಿ ಬೆಳೆದ ನಿಂತ ಕಾಡುಗಳೂ
ಮರಭೂಮಿಗಳಾಗಿ ಬಿಡುತ್ತವಂತೆ

ಸಾಮಾಜಿಕ ಅಸಮಾನತೆಯನ್ನು ಪುರಷ್ಕರಿಸುತ್ತಾ, ಪೊರೆಯುತ್ತಾ ಅದನ್ನೇ ತಿಂದುಂಡು ತೇಗುವವರ ನಡುವೆ ನಿಂತು ಕವಿ ‘ಲೆಕ್ಕ ನೋಡಲು ಇನ್ನೂ ಯಾರೂ ಬರಲೇ ಇಲ್ಲ’ ಎಂದು ವಿಷಾದದಿಂದ ನುಡಿಯುತ್ತಾನೆ. ಪಾದಗಳೂರಲು ಸಿಗದೇ ಇರುವ ನೆಲದ ಬಗೆಗಿನ ಹುಡುಕಾಟದ ತವಕ ಇಲ್ಲಿದೆ. ಹಾಗೆಯೇ ಪಾದಗಳು ಕಾಲೂರಲು ಪಾಲು ಕೇಳುವದು ಸಾಮಾಜಿಕ ನ್ಯಾಯವೂ ಕೂಡಾ ಆಗಿದೆ. ‘ಏನು ಬೇಕಿದೆ’ ಎಂಬ ಇನ್ನೊಂದು ಕವಿತೆಯಲ್ಲಿ ಮನುಷ್ಯ- ಮನುಷ್ಯರನು, ಮನುಷ್ಯರಂತೆ ಕಾಣಬೇಕೆಂಬ ಉತ್ಕಟತೆಯಿದೆ. ಈ ಬಯಕೆ ನಮ್ಮ ಶಿಕ್ಷಣ, ಸಂಸ್ಕೃತಿ ಮತ್ತು ನಾಗರಿಕತೆಯ ಬಹುದೊಡ್ಡ ಅಣಕವೂ ಹೌದು.

ಈ ಕಗ್ಗತ್ತಲು ಕರಗಬೇಕಿದೆ
ಈ ಗೊಡೆಗಳು ಉರುಳಬೇಕಿದೆ
ಈ ಮೌನ ಮಾತಾಗಬೇಕಿದೆ

ಹೀಗೆ ಜೀವ-ಜೀವಗಳ ನಡುವಿನ ಕಂದಕ ಅಳಿಯಬೇಕಿದೆ, ಮನಸುಗಳನ್ನು ಬೆಸೆಯಬೇಕಿದೆ ಎಂದು ಕವಿ ಹೃದಯ ಹಾತೊರೆಯುತ್ತದೆ. ಸ್ವತ: ಸಾಯದೇ ಸುಡಗಾಡು ಸಿಗದು ಎಂಬ ಮಾತಿನಂತೆ ‘ಉರಿವ ಏಕಾಂತ ದೀಪ’ ಎಂಬ ಕವಿತೆಯಲ್ಲಿ

ಎಲ್ಲವನ್ನು ಇಷ್ಟೂ ದಿನ
ದೂರದಿಂದ ಮಾತ್ರ ನೋಡಿದ್ದೇನೆ
ಈಗಲಾದರೂ ನಾನದನ್ನು ಅನುಭವಿಸಬೇಕು
ದು:ಖವೊಂದು ಅರ್ಥವಾಗುವದು
ದು:ಖದಲ್ಲಿರುವವನಿಗೆ ಮಾತ್ರ
ಕಣ್ಣೀರ ಹನಿಯೊಂದನ್ನು ಒರೆಸಲು
ಇನ್ನೊಂದು ಕಣ್ಣೀರ ಹನಿಯೇ ಬೇಕು

‘ನಿನ್ನೊಳಗೆ ಹರಿವ ತಣಿವ ಸಾಲೇ’ ಎಂಬ ಕವಿತೆಯಲ್ಲಿಯೂ ಮನುಜನನ್ನು ಮನುಜನಂತೆ ಕಾಣಿ. ಶತಶತಮಾನಗಳಿಂದಲೂ ನಾವು ಬಸವಳದಿದ್ದೇವೆ. ಈಗಲಾದರೂ ಈ ನೆಲದ ಕಾವಾದವರ ಬಗ್ಗೆ ಕರುಣೆಯಿರಲಿ ಎಂಬ ಕವಿಯ ಕೋರಿಕೆ ನಮ್ಮ ಸಾಂಸ್ಕೃತಿಕ ವ್ಯಾಪಾರಗಳಲ್ಲಿಯ ವಿಷಾದವನ್ನು ಮತ್ತೆ ಮತ್ತೆ ಅನುರಣಿಸುವಂತಿದೆ.

ಇನ್ನಾದರೂ ಹಗಲ ಕೊನೆಯಲ್ಲಿರುವ
ಕತ್ತಲ ಕೊನರನ್ನು ಕಿತ್ತು ನೆಲಕ್ಕೆ ಮುಡಿಸು ತಂದೆಯೇ
ಈ ನೆಲದ ಕಾವಾದರೂ ಕರುಣೆಯಾಗಿ ಹರಿಯಲಿ
ಪ್ರತಿ ತೆನೆಯ ಕೊನೆಯಲ್ಲೂ
ಅನ್ನದಗಳುಗಳು ನಗಲಿ

ಹೀಗೆ ಲಕ್ಕೂರು ಆನಂದ ಅವರ ಕವಿತೆಗಳಲ್ಲಿ ಒಂದು ಬಗೆಯ ಹತಾಶೆ, ನೋವು, ರೊಚ್ಚು ಜೊತೆಗೆ ಏಕಾಂತ ದೀಪವಾದರೂ ಉರಿವ ಕಾವು ಮತ್ತು ಬೆಳಕು ಪಸರಿಸಿದಂತಿದೆ. ಎಲ್ಲ ಬರಹಗಾರರನ್ನು ಕಾಡುವಂತೆ ಲಕ್ಕೂರು ಆನಂದ ಅವರನ್ನು ಸಮಕಾಲಿನ ಸಾಂಸ್ಕೃತಿಕ ಬಿಕ್ಕಟ್ಟುಗಳು ಕಾಡಿರುವದಿದೆ. ಕೊನೆಗೂ ಉರಿವ ಏಕಾಂತ ದೀಪಕ್ಕೆ ಚೂರು ಪಾರು ಭರವಸೆಯ ಅವಶ್ಯಕತೆಯೂ ಇದೆ ಎನಿಸುತ್ತದೆ.


ಕವನ ಸಂಕಲನ : ಉರಿವ ಏಕಾಂತ ದೀಪ
ಕವಿ : ಲಕ್ಕೂರು ಆನಂದ
ಲಡಾಯಿ ಪ್ರಕಾಶನ
ಪುಟಗಳು-84 ಬೆಲೆ-ರೂ.60