ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 1

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1

ಅಭಿಮಾನದಿಂದ ಹೇಳುತ್ತೇನೆ ನಾನು ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ಆಸಾಡಿ ತಿಂಗಳ ಬಿರುಮಳೆಯ ನಡುವೆಯೂ ಮೂರು ದಿನಗಳ ತನಕ ನೋವು ತಿನ್ನುತ್ತಾ ನನ್ನವ್ವ ನನ್ನನ್ನು ನಮ್ಮ ದನಕಟ್ಟುವ ಕೊಟ್ಟಿಗೆಯಲ್ಲಿಯೇ ನೆಲಕ್ಕೆ ತಂದಳಂತೆ. ನನ್ನ ಹೊಕ್ಕಳಬಳ್ಳಿಯನ್ನು ಹೊಂದಿದ ಅಮೆಕಸವನ್ನು ಹಟ್ಟಿಯಣೆಗೆ ತಾಗಿಕೊಂಡಂತೆ ಇದ್ದ ಬಸಲೆ ಚಪ್ಪರದಡಿಯೇ ಹೂಳಲಾಯಿತಂತೆ. ಇದು ನನ್ನೊಬ್ಬನ ಕತೆಯಲ್ಲ. ನನ್ನನ್ನೂ ಒಳಗೊಂಡಂತೆ ನಮ್ಮೂರಿನಲ್ಲಿ ಬಹುತೇಕರ ಹುಟ್ಟು ಹಟ್ಟಿಯಣೆಯಲ್ಲಿ ನಡೆದುದು. ತುಂಬಿದ ಬಸುರಿಯರಿಗೆ ಹೆರಿಗೆ ನೋವು ಶುರುವಾದ ತಕ್ಷಣ ಅವರನ್ನು ವರ್ಗಾಯಿಸುತ್ತಿದ್ದುದು ಹಸು ಎಮ್ಮೆಗಳನ್ನು ಕಟ್ಟುವ ಜಾಗಕ್ಕೆ ತಾಗಿಕೊಂಡೇ ಇರುತ್ತಿದ್ದ ಕೊಟ್ಟಿಗೆಗಳಿಗೆ. ದನದ ಕಲಗಚ್ಚು ಕಾಯಿಸುವ ಬಾಯರು ಒಲೆ, ಭತ್ತಕುಟ್ಟಲು ಬಳಸುತ್ತಿದ್ದ ಕುಟ್ಟೊಒರಲು, Indian-Cow-calfಸ್ನಾನಕ್ಕಾಗಿ ಇಡುತ್ತಿದ್ದ ನೀರು ಕಾಯಿಸುವ ವ್ಯವಸ್ಥೆಯಲ್ಲವನ್ನೂ ಹೊಂದಿರುತ್ತಿದ್ದ ಹಟ್ಟಿಯಣೆಗಳೇ ನಮ್ಮ ತಾಯಂದಿರು ನಮ್ಮನ್ನು ಭೂಮಿಗೆ ಇಳಿಬಿಡುವ ತಾಣಗಳಾಗಿದ್ದವು. ಹಾಗಾಗಿ ಹುಟ್ಟಿದ ಮಕ್ಕಳನ್ನು ತಂದೆ ಮನೆಯ ಕಡೆಯವರು ನಮ್ಮ ಹಟ್ಟಿಯಣೆಗಳಲ್ಲಿ ಹುಟ್ಟಿದವನಲ್ವಾ? ಎಂದೇ ಸಂಭೋಧಿಸುತ್ತಿದ್ದುದುಂಟು. ಇಂತಹ ಹಟ್ಟಿಯಣೆಗಳಲ್ಲಿ ಹುಟ್ಟುವುದು ಮಾತ್ರವಲ್ಲದೆ ಅದೇ ಕರುಮರಿಗಳ ಜತೆಗೆ ಜನನೋತ್ತರವಾದ ಬಾಲ್ಯವನ್ನು ಕಳೆಯುವ ಬದುಕಿನ ಸುಖವನ್ನು ಕೈತುಂಬ ಚಾಚಿಕೊಂಡೇ ಬೆಳೆದ ಆನಂದ ನನ್ನೊಂದಿಗಿದೆ. ಇದಲ್ಲದೆ ಈ ನಾಲ್ಕು ಕಾಲಿನ ಹಸು-ಕೋಣ-ಎಮ್ಮೆ-ಎತ್ತುಗಳೆಂಬ ಪಶುಲೋಕ ಭಾಷಿಕವಾಗಿಯೂ ನುಡಿಗಟ್ಟು, ಗಾದೆ, ಕಥೆ ಇತ್ಯಾದಿಗಳ ಮೂಲಕವೂ ನನ್ನ ಮಾನಸಿಕ ವಲಯವನ್ನು ಹೊಕ್ಕು ಗಟ್ಟಿಯಾಗಿ ಕುಂತು ಬಿಟ್ಟಿವೆ.

ಅಕ್ಷರವೆಂಬ ಶಿಕ್ಷಣ ಕ್ರಮಕ್ಕೆ ಒಡ್ಡಿಕೊಳ್ಳುವ ಮೊದಲೇ ಹಾಡಿಹಕ್ಕಲುಗಳಲ್ಲಿರುವ ಛಿದ್ರವಾದ ದೇವರ ಲಿಂಗಗಳಿಗೊ, ಮೂರ್ತಿಗಳಿಗೋ ಸಂಬಂಧಿಸಿದಂತೆ ಕೇಳುತ್ತಿದ್ದ ಕಥೆಗಳಲಿ, ಹಾಗೆಯೇ ಜಾನಪದ ಲೋಕದ ಅನಾಥ ನಾಯಕ ನಾಯಕಿಯರಿಗೆ ಸಂಬಂಧಿಸಿದ ಕಥೆಗಳಲ್ಲಿ ಈ ಹಸುಗಳ ಲೋಕದ ಅಂಶಿಕ ಪರಿಚಯ ನಿರಂತರವಿತ್ತು. ಅದೇ ತೆರನಾಗಿ ಅಕ್ಷರ ಜಗತ್ತಿನ ಶಿಕ್ಷಣ ಕ್ರಮಕ್ಕೆ ತೆರೆದುಕೊಳ್ಳುತ್ತಿದ್ದಂತೆ, ಅನ್ನದಾತನ ಒಡನಾಡಿಯಾದ ಜಾನುವಾರುಗಳು ಮತ್ತೆ ಎದುರಾಗುತ್ತಿದ್ದವು. ಈ ಹಂತದಲ್ಲಿ ನನಗೆ ಸ್ಪಷ್ಟವಾಗಿ ನೆನಪಿರುವ ಹಾಗೆ ಮೂರನೇ ತರಗತಿಯಲ್ಲಿ ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ಉಳಿದ ಯಾವ ಪಾಠವನ್ನೂ ನೆಟ್ಟಗೆ ಮಾಡದೆ ಇದ್ದಾಗಲೂ “ಧರಣಿ ಮಂಡಲ ಮಧ್ಯದೊಳಗೆ…” ಎಂಬ ಗೋವಿನ ಹಾಡನ್ನು ರಾಗಬದ್ಧವಾಗಿ ಹಾಡಿ ಹೇಳುವುದನ್ನು ಮರೆತವರಲ್ಲ. ಆಗಿನ್ನೂ ಒಂಭತ್ತರ ಹರೆಯದ ಆಸುಪಾಸಿನ ನಾನು ಈ ಪಠ್ಯದ ಜತೆಗೆ ಮೂಡುತ್ತಿರುವ ಲಿಂಗಗಳಿಗೋ, ಬೆಳೆಯುತ್ತಿರುವ ಹುತ್ತಗಳಿಗೋ, ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೋ, indian_buffaloತಾಯ್ತನದ ಅನುಬಂಧದಲ್ಲಿ ಹಾಲು ಸೂಸುವ ಕಥೆಗಳನ್ನು ಕೇಳಿದವನಿದ್ದೆ. ಹುಟ್ಟಿದಾರಭ್ಯದಿಂದ ತೊಡಗಿ ಆಕ್ಷರಿಕವಲ್ಲದ ಮತ್ತು ಅಕ್ಷರ ಜಗತ್ತಿನ ಪಠ್ಯಗಳೆರಡರ ಮೂಲಕವೂ ನಾನು ಕೇಳಿದ ಬಹುಪಾಲು ಕಥೆಗಳು ಕೈಲೂತಿಯಂತಹ ವರ್ಣ ಶ್ರೇಷ್ಠವೋ, ಗಂಗೆ ಗೌರಿಯರಂತಹ ನಾಮ ಶ್ರೇಷ್ಠವೋ ಆಗಿದ್ದ ಹಸುಗಳಿದ್ದು, ಅಂತಹ ಕಥೆಗಳಲ್ಲಿ ನನ್ನ ಮುದ್ದಿನ ಎಮ್ಮೆಗಳಾಗಲೀ, ಕೋಣಗಳಾಗಲೀ, ಎತ್ತುಗಳಾಗಲೀ, ಕರುಹಡೆಯದ ಒಂದೇ ಕಾರಣಕ್ಕೆ “ಗೊಡ್ಡು”ಗಳೆನಿಸಿಕೊಳ್ಳುತ್ತಿದ್ದ ಬಂಜೆಹಸುಗಳಾಗಲೀ ಇರುತ್ತಿರಲಿಲ್ಲ! ಕಥೆಗಳಲ್ಲಿ ಇರುತ್ತಿದ್ದ ಬಹುಪಾಲು ಹಸುಗಳು ತುಂಬಿದ ಕೆಚ್ಚಲನ್ನು ಹೊತ್ತುಕೊಂಡು ಹಾಲು ಸುರಿಯಲು ತಯಾರಾಗಿಯೇ ನಿಂತವುಗಳು! ಯಾರೂ ಕಾಣದಂತೆಯೇ ಹುತ್ತದ ಮೇಲೆ ಹಾಲು ಸುರಿಯುವ, ಕಾಳಿಂಗನಂತಹ ಗೊಲ್ಲ ಕರೆದ ತಕ್ಷಣ ಬಂದು ಅವನ ತಂಬಿಗೆಯನ್ನು ತುಂಬುವಂತೆ ಚಲ್ಲಿ ಸೂಸಿ ಹಾಲು ಕರೆಯುತ್ತಿದ್ದ ಹಸುಗಳೇ. ಪ್ರಾಯಶಃ ಈ ಹಸುಗಳಿಗಿಂತ, ತಂಬಿಗೆ ತುಂಬುವ ಹಾಲೇ ಅತಿಮುಖ್ಯ ವಸ್ತುವೆನಿಸುತ್ತದೆ. ತುಂಬಿದ ಕೆಚ್ಚಲು, ಕರೆದಾಕ್ಷಣ ಬರುವ ಸಿಪಾಯಿ ಶಿಸ್ತು, ತಪ್ಪೇ ಮಾಡಲಾರದ ಸಾತ್ವಿಕ ಮುಖಗಳು, ಜತೆಗೆ ಬಹುಮಟ್ಟಿಗೆ ಎಲ್ಲವೂ ತಾಯಂದಿರುಗಳು. ತಮ್ಮ ಹೆಸರು (ಗಂಗೆ, ಗೌರಿ, ತುಂಗಭದ್ರೆ, ಪುಣ್ಯಕೋಟಿ), ಬಗೆ ಇತ್ಯಾದಿಗಳಲ್ಲಿ ಸ್ವಚ್ಛತೆಯನ್ನು ಮೈಗೂಡಿಸಿಕೊಂಡಿರುವ ಜತೆಗೆ ಪ್ರವೃತ್ತಿಯಲ್ಲೂ ಕನಿಷ್ಠತೆಯ ಸೋಂಕಿನಿಂದ ಮುಕ್ತವಾದಂತೆಯೇ ಇರುವ ಈ ಕೊಟ್ಟಿಗೆಯ ಕಪಿಲೆಯರನ್ನು ಅಕ್ಷರ ಮತ್ತು ಮೌಖಿಕ ಪಠ್ಯಗಳೆರಡೂ ಅಚ್ಚುಹಾಕಿ ಕೊಡುತ್ತಾ ಹೋಗುತ್ತವೆ.

ಗಂಟಿಗಳು ಮತ್ತು ಗಂಟಿ ಮೇಯಿಸುವುದು:
ನಾವು ಗಂಟಿಗಳು ಹುಟ್ಟುವ ಜಾಗದಲ್ಲಿ ಹುಟ್ಟಿದವರು. ಅವುಗಳನ್ನೇ ಬದುಕಿನ ಆಧಾರವಾಗಿ ಅವಲಂಬಿಸಿದವರು. ಹಸುವಿನ ಕುರಿತಾಗಿ ಲೋಕ ಕೊಡುವ ನಿರೂಪಣೆ ಹೇಗೇ ಇರಲಿ, ಹಸುಗಳ ಜೊತೆಗಿನ ನಮ್ಮ ಅನುಭವವೇ ಬೇರೆ. ನಮಗೊ ಹಟ್ಟಿಯಣೆಯಲ್ಲಿ ಹುಟ್ಟಿದಂದಿನಿಂದ ತಗುಲಿಕೊಂಡ ಹಸುಕರುಗಳ ಜೊತೆಗಿನ ನಂಟು, ಅವುಗಳನ್ನೇ ಬಯಲಿಗೆ ಬಿಟ್ಟು ಮೇಯಿಸುವ ಹೊಣೆಗಾರಿಕೆಯಾಗಿಯೇ ಮುಂದುವರೆಯುತ್ತದೆ. ಆದರೆ ನಾವಿದನ್ನು ಮನರಂಜನೆಯಾಗಿಯೇ ಬದಲಿಸಿಕೊಂಡವರು. ಇವುಗಳನ್ನು ಬಯಲಿಗೆ ಬಿಟ್ಟು ಅಲ್ಲಿಯೇ ಆಟದಂಗಣವನ್ನು ಅಣಿಗೊಳಿಸಿಕೊಳ್ಳುತ್ತಿದ್ದವರು. ಕಾಯಕದ ಜೊತೆಗೆ ಮನರಂಜನೆಯ ಅವಕಾಶವೂ ಆಗುತ್ತಿದ್ದ ಈ ಗಂಟಿಹಿಂಡಿನಲ್ಲಿ ಆಡುತ್ತಿದ್ದ ಲಗೋರಿ, ಚಿಣ್ಣಿದಾಂಡು, ಬೆನ್ಚೆಂಡುಗಳೆಂಬ ಬಗೆಬಗೆಯ ಆಟಗಳು ಬೇರೆಲ್ಲಿ ಸಾಧ್ಯ? ಬೆಳ್ಳಂಬೆಳಿಗ್ಗೆ ಹೊತ್ತು ಮೂಡುತ್ತಿದ್ದಂತೆ ಅವುಗಳ ಕೊರಳಹಗ್ಗವನ್ನು ತಪ್ಪಿಸಿ, ಬಾಲಹಿಡಿದು ಬಯಲಿಗೆ ಹೊಂಟೆವೆಂದರೆ ನಮಗೆ ಲೋಕ ಮರೆತು ಹೋಗುತ್ತಿತ್ತು. ಶಾಲೆ, ಮನೆ, ಊಟ ಇವೆಲ್ಲವನ್ನೂ ಮರೆತು ಹೊತ್ತೇರುವ ತನಕ ಅವುಗಳನ್ನು ಕಾಯುವ ಎಚ್ಚರದ ಜೊತೆಗೆ ಮೈಮರೆತು ಆಡುತ್ತಿದ್ದೆವು. ಹೀಗೆ ಆಡುತ್ತಾ ಹಸು-ಎತ್ತುಗಳೆಂಬ ಕಡಗಂಟಿಗಳನ್ನೂ, ಕೋಣ-ಎಮ್ಮೆಗಳೆಂಬ “ಹೋರೆಮ್ಮೆ”ಗಳನೂ ಕಾಡು-ಬಯಲುಗಳಲ್ಲಿ ಮೇಯಿಸಿಕೊಂಡು ಬೆಳೆದ ಅನುಭವವೇ ಬೇರೆ. ಅವುಗಳ ಒಡನಾಟದ ಫಲದಿಂದಾಗಿ ನಮ್ಮೊಳಗೆ ಅಚ್ಚಾದ ಜಾನುವಾರುಗಳ ಜಗತ್ತಿನಲ್ಲಿ ಲಿಂಗ-ವರ್ಗ-ಗುಣ ವೈವಿದ್ಯಗಳು ಸಹಜವಾಗಿಯೇ ಇವೆ. ಪಠ್ಯದ ಹಸು ಹಾಗೂ ಅವುಗಳು ಅಳವಡಿಸಿಕೊಂಡ ಮಿಲಿಟರಿ ಶಿಸ್ತುಗಳು, ನಾವೇ ಸ್ವಯಂ ಮೇಯಿಸಿ ಹಟ್ಟಿಗೆ ಕಟ್ಟುತ್ತಿದ್ದ ವೇಳೆ ನನಗಂತೂ ಬಹುಮಟ್ಟಿಗೆ ಕಂಡಿಲ್ಲ. ಅವು ನಮ್ಮ ಕಣ್ಣು ತಪ್ಪಿಸಿ ನಮ್ಮ ಆಟಗಳಿಗೆ ಬ್ರೇಕ್ ಕೊಡುವಂತೆ ಯಾರ್‍ಯಾರದೋ ಗದ್ದೆಗಳಿಗೆ ನುಗ್ಗುತ್ತಿದ್ದವು. ನಮ್ಮ ಅಪ್ಪಣೆ ಪಡೆಯದೇ ಅವುಗಳ ಕರುಗಳಿಗೆ ಕದ್ದುಮುಚ್ಚಿ (?) ಹಾಲೂಡುಸಿ ನಮ್ಮಿಂದ ಶಿಸ್ತಿನ ಪಾಠದ ಭಾಗವಾಗಿ ದೊಣ್ಣೆ/ಬಡ್ತಿಗೆಗಳ ಹೊಡೆತ ತಿನ್ನುತ್ತಿದ್ದವು. ಇನ್ನು ಕೆಲವೊಮ್ಮೆ ಹಾಗೆ ಬಿಟ್ಟುದಕ್ಕಾಗಿ ಅಮ್ಮಂದಿರ ಕೈಯಲ್ಲಿ ನಮಗೆ ಹೊಡೆತ ತಿನ್ನಿಸುತ್ತಿದ್ದವು. ಹೋರೆಮ್ಮೆಗಳ ಪಜೀತಿ ಇನ್ನೂ ಹೆಚ್ಚಿನದು. ಅವುಗಳಿಗೆ ನೀರಿನ ಭಯವಿಲ್ಲ. ಮಳೆಗಾಳಿಯ ನಡುವೆ ದಿಕ್ಕಾಪಾಲಾಗುವ ಅವಕಾಶವನ್ನೇ ಬಳಸಿಕೊಂಡು ತುಂಬಿದ ಹೊಳೆಯಲ್ಲಿ ಈಜಿ ಮರಾತೂರು, ಕೈಲ್ಕೆರೆ, ಕೊರಾಳವೆಂಬ ಹೊಳೆಯ ಆಚೆ ದಡದ ಊರುಗಳಲ್ಲಿ ಯಾರ್‍ಯಾರಿಗೋ ಸೇರಿದ ಬಯಲುಗಳಿಗೆ ನುಗ್ಗಿ ದಾಂದಲೆಮಾಡಿ ಕೇಂದ್ರೀಯ ಕಾರಾಗೃಹಕ್ಕೆ ರವಾನಿಸಲ್ಪಡುವಂತೆ ದೊಡ್ಡಿಗೆ ಕಟ್ಟಲ್ಪಡುತ್ತಿದ್ದವು. ಇನ್ನು ಕಡಗಂಟಿಗಳೆನಿಸಿದ ಎತ್ತು-ದನಗಳದ್ದು ಬೇರೆಯೇ ಕಥೆ. ಇವು ಬಾಲವನ್ನು ಸುರುಳಿಸುತ್ತಿ ಓಡಲು ಹಿಡಿದರೆ ಹಿಡಿಯುವುದು ಹಟ್ಟಿಯ ದಾರಿಯನ್ನಲ್ಲ. ಅವುಗಳ ಸ್ವ್ವಾತಂತ್ರ್ಯಘೋಷಣೆಗೆ ಯಾವುದು ಸರಿಯೋ ಆ ದಾರಿಯನ್ನು. ಇವುಗಳು ಹೀಗೆ ಕಂಡ ದಾರಿಹಿಡಿದು ಹಟ್ಟಿಗೆ ನೇರವಾಗಿ ಬಾರದೇ, ಯಾರದೋ ಗದ್ದೆಗಳಿಗೆ ನುಗ್ಗಿ ಮನೆಮಂದಿಗೆ ಬೈಗುಳದ ಉಡುಗೊರೆ ತರುತ್ತಿದ್ದವು. ನಮಗೋ ಮೂರ್ಖಾಸಿನ ಬೆಲೆಯಿರದ ದನಕಾಯಲೂ ಲಾಯಕ್ಕಲ್ಲದ ದುಸ್ಥಿತಿ ತರುವ ಜೊತೆಗೆ ಬಾಸುಂಡೆ ಬರುವಂತೆ ಹೊಡೆತ ಹಾಕಿಸುತ್ತಿದ್ದವು. ಮನೆಮಂದಿಯಿಂದಲೂ ಬೈಗುಳ, ಪಕ್ಕದ ಮನೆಯವರಿಂದಲೂ ಅದೇ ಆರತಿ. ಯಾತಕ್ಕೂ ಪ್ರಯೋಜನಕ್ಕಿರದವ ಎಂಬರ್ಥದ “ಎರ್‍ಡ್‌ಬಾಲ್ ಗಂಟೀನ್ನೂ ಮೇಯಿಸಲಾರ”ದವ ಎನ್ನುವ ಹೆತ್ತವರ ಹತಾಶೆಯ ಮಾತು ಬೇರೆ. ಪರೀಕ್ಷಾ ಫಲಿತಾಂಶದಲ್ಲಿ ಫೇಲಾಗುವುದಾದರೂ ಬೇಕು, ಆದರೆ ಈ ಗಂಟಿಮೇಯಿಸಲೂ ಆಗದ ನಾಪಾಸು ಸರ್ಟಿಫಿಕೇಟು ಖಂಡಿತಾ ಬೇಡ. ಅವುಗಳ ನಿಯಮೋಲ್ಲಂಘನೆ ಗದ್ದೆಗೆ ದಾಳಿಯಿಟ್ಟು ಬೈಯಿಸುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಕೆಲವಂತೂ ಉಗ್ರಪ್ರತಾಪಿಗಳು ಬೇರೆ. ಕಂಡವರನ್ನಷ್ಟೇ ಅಲ್ಲ ಮನೆಮಂದಿಗೂ ರಿಯಾಯಿತಿ ಕೊಡದೆ ಕೋಡುಮಂಡೆ ಬಳಸಿ ಎತ್ತ್ಹಾಕಿಕೊಂಡು ಪೌರುಷ ತೋರುತ್ತಿದ್ದವು.

ಇಂತಹ ಹಸು-ಕರು-ಎಮ್ಮೆಗಳನ್ನು ಬೇಸಿಗೆಯ ಕಾಲದಲ್ಲಿ ಬಯಲಿನಲ್ಲಿ ಬಿಟ್ಟುಕೊಂಡು “ಅಕ್ಕಿಹುರಿದು” indian-cowತಿಂದು ಆಟವಾಡುವಾಗ ಒಂದು ತರದ ಫಜೀತಿಯಾದರೆ ಮಳೆಗಾಲದ ಕಥೆ ಬೇರೆಯದೇ. ಮಳೆಗಾಲದಲ್ಲಿ ಇವುಗಳ ಮೇವಿಗಾಗಿ ಬಯಲಿಗೆ ಎಬ್ಬುವಂತಿರಲಿಲ್ಲ. ಎಲ್ಲಾ ಗದ್ದೆಗಳು ನೇಜಿಗೊಂಡು ಸಾಗುವಳಿಗೆ ಒಳಪಟ್ಟಿರುತ್ತಿದ್ದುದರಿಂದ ಹುಲ್ಲಿನೊಂದಿಗೆ ಹಸಿರೆಲೆಗಳನ್ನು ಹೊಂದಿರುವ ಹಾಡಿ-ಗುಡ್ಡೆಗಳೆ ಅವಗಳ ಆಡುಂಬೊಲವಾಗುತ್ತಿತ್ತು. ಹಾಡಿ-ಗುಡ್ಡೆಗಳಲ್ಲಿ ಮೇಯಿಸುವಾಗ ನಮಗೆ ಆಟದ ಬಯಲು ಸಿಕ್ಕುವುದಿಲ್ಲ. ಆದರೆ ಆಟ ನಿಲ್ಲಬೇಕಲ್ಲ. ಚಿಕ್ಕಚಿಕ್ಕ ಕಲ್ಲುಗಳನ್ನು ಬಳಸಿ ಹೆಮ್ಮಕ್ಕಳ ಜೊತೆಗೆ ಗುಡ್ನಾಡುತ್ತಿದ್ದೆವು. ನೆಲದ ಕಿರುಜಾಗಗಳನ್ನೇ ಬಳಸಿ ಜುಬಲಿ(ಬೆಟ್ಟಾ) ಆಡುತ್ತಿದ್ದೆವು.ನೆಲದಲ್ಲಿಯೇ ಚನ್ನೆಮನೆಗಳನ್ನು ಮಾಡಿಕೊಂಡು ಚನ್ನೆಯಾಟಗಳನ್ನಾಡುತಿದ್ದೆವು. ಇದರ ಜೊತೆಗೆ ಬಹುವಿಧದ ಕಾಡುಹಣ್ಣುಗಳನ್ನು ಒಟ್ಹಾಕಿಕೊಂಡು ತಿನ್ನುತಿದ್ದುದು ಮಾಮೂಲಿಯಾಗಿತ್ತು. ನಮ್ಮ ಈ ಸುಖಕ್ಕಾಗಿ ಆಟ ಮತ್ತು ಹಣ್ಣು ಹುಡುಕಾಟದಲ್ಲಿ ಬೀಳುವ ಹೊತ್ತಿನಲ್ಲಿಯೇ ನಮ್ಮ ಕಣ್‌ತಪ್ಪಿಸಿಕೊಳ್ಳುವ ಅವುಗಳ ಮರಾಣಿ೧ ಸದ್ದೂ ಕೇಳಿಸದಂತಾದಾಗ ನಾವು ಗಾಬರಿ ಬೀಳುತ್ತಿದ್ದೆವು. ಮನೆಗೆ ಹೋಗುವ ಮುನ್ನವಾದರೂ ಕಣ್ಣಿಗೆ ಬಿದ್ದರೆ ಸಾಕು ಎಂದು ಹೊಳೆಕಡು, ಯಾರ್‍ಯಾರದೋ ಗದ್ದೆಕಡುವುಗಳನ್ನು ಹುಡುಕಿ ಎಲ್ಲಿಯೂ ಕಾಣದಂತಾದಾಗ ಹರಕೆಯ ಮೊರೆಹೋಗುತ್ತಿದ್ದೆವು. ನಮಗೆ ಸುಲಭದಲ್ಲಿ ಸಾಧ್ಯವಾಗುತ್ತಿದ್ದುದು ಮತ್ತು ಗುಟ್ಟಾಗಿ ಮನೆಯವರ ನೆರವಿಲ್ಲದೆ ಗೇರುಬೀಜ ಮಾರಿದ ದುಡ್ಡಿನಲ್ಲಿಯೇ ಒಂದೆರಡು ಲಾಡು,ಜಿಲೇಬಿಗಳ ತ್ಯಾಗ ಮಾಡುವಷ್ಟಕ್ಕೇ ಪೂರೈಸಬಹುದಾಗಿದ್ದ ಹರಕೆಯೆಂದರೆ ಸ್ವಾಮಿಮನೆಯ ನಿಂಗಮ್ಮನಿಗೆ ಕಪ್ಪುಬಳೆ ಹಾಕುವುದು. ಇಲ್ಲಾ ಗಣಪತಿ ದೇವರ ಡಬ್ಬಿಗೆ ೨-೩ಪೈಸೆ ಕಾಣಿಕೆ ಹಾಕುವುದು. ಇನ್ನೂ ಸ್ವಲ್ಪ ಜಾಸ್ತಿ ಗಾಬರಿಯಾದರೆ ದುಬಾರಿ ಹರಕೆಯಾಗಿ ಗಣಪತಿಗೆ ಒಂದು ರೂಪಾಯಿ ಪಂಜಕಜ್ಜಾಯ ಮಾಡಿಸುವುದು. ಈ ಹರಕೆಗಳಿಗೂ ಕೆಲವೊಮ್ಮೆ ದನಗಳು ದಕ್ಕದೇ ಇದ್ದಾಗ ಇದ್ದೇ ಇದೆ ದೇವರಿಗೆ ಹಿಡಿಶಾಪಹಾಕುವುದು ಮತ್ತು ಕೊನೆಗೆ ಮನೆಯಲ್ಲಿ ಬೆನ್ನಿಗೆ ಎಣ್ಣೆ ಉಜ್ಜಿಸಿಕೊಳ್ಳುವುದು. ಇವೆಲ್ಲವೂ ಅಂದಿನ ಹಸಿರಾದ ನೆನಪುಗಳು. ಈ ಗಂಟಿಕರುಗಳನ್ನು ಮೇಯಿಸುತ್ತಾ, ಮಳೆ ಬಂದಾಗ ಕಂಬ್ಳಿಕುಪ್ಪೆ ಹಾಕಿಕೊಂಡು ಓಡಾಡುವ ಸಂಕಟ ಪರಿಹಾರವಾಗಲಿ ಎಂಬ ಆಶಯದಿಂದ,-“ಹಾರ್‍ಮಳೆ ಬೋರ್‍ಮಳೆ ಬೋಳ್‌ಗುಡ್ಡೆಗ್ ನಾ ಕೂತಿದಿ ಹಾರಿಯೇ……..ಹೋಗ್, ಕೂರಿಯೇ……….ಬಾ” ಎಂಬಂತೆ ಮಳೆದೂರಾಗಬಯಸಿ ಹಾಡುತ್ತಿದ್ದ ಅಹವಾಲಿನ ಸೊಲ್ಲಾಗಲೀ; ತನ್ನ ಬಾಯಿಪತ್ತಿ(ಆಹಾರ)ಯನ್ನು ಬಯಸಿ

ಹನಿಹನಿ ಮಳಿ ಬರುತಿರಬೇಕು
ವಾಂಟಿಕೊಳಾಲ್ ಉರಿಯಲೆಬೇಕು
ಗಂಟಿಕರಾಳ್ ಮೇಯ್ತಿರಬೇಕು
ನನಗೊಂದ್ ಬಡ್ಕಟಿ ಸಿಕ್ಕಲೆಬೇಕು

ಎಂಬಂತೆ ಹುಲಿರಾಯ ಹಾಡಿಕೊಳ್ಳುವ ಸೊಲ್ಲೆಂಬಂತೆ ಗುನುಗುಡುತ್ತಿದ್ದ ಸೊಲ್ಲುಗಳಾಗಲೀ ನನ್ನ ನೆನಪಿನ ಬುತ್ತಿಯಲ್ಲಿ ಖಾಲಿಯಾಗದೇ ಉಳಿದಿವೆ. ಈ ಹಾಡುಗಳು, ಅವುಗಳ ಕೊರಳಿಗೆ ಕಟ್ಟುವ ಮರಾಣಿಗಳ ಸದ್ದು ಹಾಗೂ ದನಕಾಯುತ್ತಾ ನಾವು ಕೇಳಿಸಿಕೊಳ್ಳುತ್ತಿದ್ದ ಕಥೆಗಳು, ಮೆಂದು ಹೊಟ್ಟೆ ತುಂಬಿಸಿಕೊಂಡ ಹಸು-ಎಮ್ಮೆಗಳ ಹೊಟ್ಟೆ ಮುಟ್ಟಿ ಅನುಭವಿಸುತ್ತಿದ್ದ ಖುಷಿಗಳು ಎಲ್ಲವೂ ನೆನಪಿನ ಬುತ್ತಿಯ ಸರಕುಗಳೇ. ಯಾವ್ಯಾವುದೋ ಗಿಡದ ಎಲೆ,ಬೇರುಗಳನ್ನು ಕಿತ್ತು ಅವುಗಳ ಬಾಯಿಗಿಕ್ಕಿ ಪ್ರೀತಿತೋರಿಸುತ್ತಲೇ ನಮ್ಮ ದನಿಕೇಳಿದ ತಕ್ಷಣ ಹತ್ತಿರಕ್ಕೆ ಬರುವಂತೆ ಮಾಡಿಕೊಳ್ಳುತ್ತಿದ್ದ ವಶೀಕರಣದ ತಂತ್ರಗಳು, ಮೈಮೇಲಿನ ಉಣ್ಣೆ ಎತ್ತಿ, ಮೈತೊಳೆದು ತೋರುತ್ತಿದ್ದ ಆತ್ಮೀಯತೆಗೆ ನಮ್ಮ ಕೈಮೈಗಳನ್ನು ನೆಕ್ಕಿ ಅವು ನೀಡುತ್ತಿದ್ದ ಕಚಗುಳಿಯ ವಿಶಿಷ್ಠ ಅನುಭವ ಕಳೆದು ಹೋದ ಮಾಯಾಲೋಕವೊಂದರಂತೆ ಭಾಸವಾಗುತ್ತದೆ. ಈ ಆತ್ಮೀಯತೆಯಿದ್ದೂ ಅವುಗಳನ್ನು ನಂಬಿ ನಿರುಮ್ಮಳವಾಗಿ ಕೂರುವಂತಿರಲಿಲ್ಲ. ನಂಬಿ ಕೂತಲ್ಲಿ ಪ್ರಮಾಣಪತ್ರಗಳು ಸಿದ್ಧಗೊಳ್ಳುತ್ತಿದ್ದುವು!

ಹಾಗಾಗಿ ಕಾಳಿಂಗನೆಂಬ ಗೊಲ್ಲನ ಹಸುಗಳಿಗಿದ್ದ ಸಿಪಾಯಿ ಶಿಸ್ತಿರದ ನಮ್ಮ ಹಸುಗಳ ಲೋಕವೇ ಒಂದಿದೆ ಎನಿಸುತ್ತದೆ. ಈ ಲೋಕದೊಳಗಡೆ ಹಸು ಎಂದಾಗಲೇ ನನಗೆ ಹಸಿವು-ಹಸುವುಗಳೆರಡನ್ನೂ ಕೇಳಿದೆಂತೆನಿಸುತ್ತದೆ. ನನಗನಿಸುವ ಹಾಗೆ ಈ ಎರಡರ ಅನುಬಂಧವಿಲ್ಲದಿದ್ದಲ್ಲಿ ನನ್ನವರ ಹಟ್ಟಿಗಳಿಗೆ ಅರ್ಥವೇ ಇರಲಿಲ್ಲ. ಹಟ್ಟಿ ಮತ್ತು ಹೊಟ್ಟೆಯ ನಡುವೆ ಬಹಳ ಅಂತರವೇನೂ ಇಲ್ಲ. ಹಾಗಾಗಿಯೇ ಏನೋ ಈ ಹಟ್ಟಿಗಳು ಇರುತ್ತಿದ್ದುದೇ ಮನೆಗೆ ತಾಗಿಕೊಂಡು. ನೆಲದ ಜತೆಗೆ ಗುದ್ದಾಡುತ್ತ ಬದುಕನ್ನು ಕಟ್ಟಿಕೊಳ್ಳುವ ನನ್ನವರ ಲೋಕದ (ಉದ್ಯೋಗದ ಹಸಿವು, ಹೊಟ್ಟೆಯ ಹಸಿವು, ಬೆಳೆಯ ಹಸಿವು, ಬಂಡವಾಳದ ಹಸಿವುಗಳೆಂಬ) ಹಸಿವಿನ ಹಲವು ಬಗೆಗಳಿಗೆ ಸುತ್ತಿಕೊಂಡಿರುವ ಹಸು ಕೇವಲ ಒಂದು ಸಂಗತಿಯಲ್ಲ, ಬದಲಾಗಿ ಬದುಕಿನ ಬಹುಮುಖ್ಯ ಭಾಗ. ಹುಲ್ಲು ಮಾಡುಗಳಿಗೋ, ಮರದಡಿಗೋ ಇರುತ್ತಿದ್ದ ದೈವದ ಹೆಸರಿನ ಕಲ್ಲುಚಕ್ಕೆ/ಮುಂಡಿಗೆ/ಉರಗಳ ಎದುರು ಹರಕೆಯ ಸರಕುಗಳಾಗಿ ಪ್ರತಿಬಾರಿಯ ತಿಂಗೋಡು ಪೂಜೆಗಳಲ್ಲಿ ಇರಿಸುತ್ತಿದ್ದುದು ಚಿನ್ನ ಬೆಳ್ಳಿಯ ಕಿರೀಟಗಳನ್ನಾಗಿರಲಿಲ್ಲ. ಬದಲಾಗಿ ಕಂಚು, ಹಿತ್ತಾಳೆಯಿಂದ ಮಾಡಿದ ಈ ಹಸು,ಕೋಣ,ಕರುಗಳ ರೂಹುಗಳನ್ನ! ನಾಕ್ಕಾಲ್‌ಮುಂಬು ಆಗಿ ಪರಿಭಾವಿತವಾಗಿದ್ದ ಈ ಜಾನುವಾರುಗಳನ್ನ ಹುಲಿಗಳಿಂದ, ಕಾಯಿಲೆಗಳಿಂದ ಕಾಪಾಡಿಕೊಟ್ಟ ದೈವಕ್ಕೆ ನೀಡಿದ ಕುರುಹುಗಳಿವು. ಹಾಗೆಯೇ ಕಟ್ಟೆವಸಂತ ಮಾಡಿ ಕಾಳಭೈರವನನ್ನು ಕೂಗಿ ಕರೆದು ಹರಕೆಯ ಹುಂಡಿಗಳಿಗೆ ಕಾಣಿಕೆ ಹಾಕಿ “ಪಾವುತೀರ್ಥ, ಪಾವುಕಡ್ಲೆಯನ್ನ ಮಂದಾಲಗಿರಿಗೆ ಸೇರಿಸಿಕೊಂಡು ಗಂಟಿಕರು, ಎತ್ತು-ಬೀಜ, ಮಕ್ಕಳು ಮರಿಗಳನ್ನು ತಲೆಕಾದು, ಹೋದಲ್ಲಿ ಬಂದಲ್ಲಿ ಒಳ್ಳೇದು ಕೊಡು” ಎಂದು ಮಾಡುತ್ತಿದ್ದ ಏಕಮುಖೀ ಕೇಳಿಕೆಯಲ್ಲೂ ಜಾಗಪಡೆಯುತ್ತಿದ್ದದ್ದು ಈ ಎತ್ತು ಕರುಗಳೇ. ಜೀವನ ಭದ್ರತೆಯ ಸಾಧನವಾಗಿ ನೇಲ್ (ನೇಗಿಲು), ನೊಗ, ಎತ್ತು, ಬೀಜಗಳನ್ನು ಸಮಾನವಾಗಿ ಗೌರವಿಸುವ ಕೃಷಿಲೋಕ ನೇಗಿಲು-ನೊಗಗಳಿಗೆ ಕದಿರುಕಟ್ಟಿ, ಬೀಜಕ್ಕೆ ಹತ್ರಾವದಿಯ ಪೂಜೆಮಾಡಿ, ಎತ್ತು ಕೋಣಗಳಿಗೆ ಆರ್‍ಹೂಡಿ ಬರುವ ದಿನ ಕಾಲು ತೊಳೆದು, ಕರು ದನ-ಎತ್ತುಗಳಿಗೆ ದೀಪಾವಳಿಯ ದೀಪತೋರಿಸಿ, ಕೊಡಿಹಬ್ಬದಂದು ಹುಂಡುಹಾಕಿ, ರೊಟ್ಟಿ ಕಟ್ಟಿ – ಹೀಗೆ ಎಲ್ಲವನ್ನೂ ಪೂಜೆಯ ವರ್ತುಲದೊಳಗೆ ತಂದು ಪೂಜಿಸಿ ಗೌರವಿಸುವ ಜತೆಗೆ ಬಳಕೆಯ ಸಾಧನ ಪಳೆಯುಳಿಕೆಯಾದಾಗ ಸಂಗ್ರಹಾಲಯದಲ್ಲಿರಿಸುವುದಿಲ್ಲ. “ಮ್ಯೂಸಿಯಂ ಸಂಸ್ಕೃತಿ”ಯ ಮಾದರಿಯದಲ್ಲದ ಈ “ಪ್ರೀತಿಯ” ಲೌಖಿಕ ಜಗತ್ತು ನಿರುಪಯುಕ್ತ ನೇಗಿಲನ್ನು ಬೂದುನೀರ ಒಲೆಗೆ ಹಾಕಿ ಎಣ್ಣೆನೀರ ಸ್ನಾನದ ಸರಕಾಗಿಸಬಲ್ಲದು. ಹಾಗೆಯೇ ಅನುಪಯುಕ್ತ ಸರಕಾದ ಹಸು-ಕರುಗಳನ್ನು ಅಷ್ಟೇ ಸಹಜವಾಗಿ ವಿಕ್ರಯಮಾಡಿ ಹೊಸ ಹಸು ಕರುಗಳ ವರ್ತುಲವನ್ನು ಮುಂದುವರೆಸಬಲ್ಲದು. ಕುಟುಂಬಯೋಜನೆಯನ್ನು ದಿಕ್ಕರಿಸಿಯೂ, ಹಟ್ಟಿಯ ಗಾತ್ರವನ್ನು ವಿಸ್ತರಿಸದೆ ಅದೇ ಅವಕಾಶದಲ್ಲಿ ಪ್ರೀತಿಯನ್ನು ಧಾರೆಯೆರೆದು, ಹಸುವನ್ನು ಸಾಕಿ ಹಸಿವಿಂಗಿಸಿಕೊಳ್ಳಬೇಕಲ್ಲವೇ?. ಇಂತಹ ಹಸು ಕೋಣಗಳ ಮೈತೊಳೆದು ಕೋಡ ಇಡುಕಿನಲ್ಲಿರುವ ಕೊಳೆ ತೆಗೆಯಲು ಬೀಳು/ಹುಲ್ಲಿನ ಕೋಡಶೆಳೆ೫ಹಾಕಿ ಸ್ವಚ್ಛಗೊಳಿಸಿ, ಮೈಮೇಲೆ, ಬಾಲದ ಗೊಂಚಿನಲ್ಲಿ ಮೆತ್ತಿಕೊಂಡಿರುತ್ತಿದ್ದ ಒಣಗು(ಉಣ್ಣೆ), ಚಟ್ಟ್‌ಒಣಗು, ಹೇನು-ಚೀರುಗಳನ್ನು ಎಳೆದು ತೆಗೆದು ಅವುಗಳ ಜತೆಗೇ ಹೊಳೆಯಲ್ಲಿ ಮಿಂದು ಬರುತ್ತಿದ್ದ ನಮ್ಮೊಳಗೆ ಆ ಹಸು-ಹಸಿವುಗಳೆರಡೂ ನೆನಪಾಗಿ ಕೂತುಬಿಟ್ಟಿವೆ.

ಹಟ್ಟಿಯಣೆಯಲ್ಲಿ ಹುಟ್ಟಿ ಬಹುಕಾಲದ ಬದುಕನ್ನು ಅದರ ಸುತ್ತಲೇ ಕಳೆದು ಅಲ್ಲಿಯೇ ಬದುಕಿರುವಲ್ಲಿಯವೆರೆಗೆ ನಮ್ಮದೇ ಎಮ್ಮೆ,ದನಗಳು ಕರೆದ ಹೊಚ್ಚ ಹೊಸ ಅಪ್ಪಟ ಹಾಲನ್ನು ಕುಡಿಯುವ ಅವಕಾಶವಿತ್ತು. ಆದರೆ ನಗರ ಸೇರಿಕೊಂಡ ಮೇಲೆ ದೇವಲೋಕದ ಹಸು ನಂದಿನಿಯ ಹೆಸರು ಹೊತ್ತ ಲಕೋಟೆಯಿಂದ ಸೋರುವುದನ್ನೇ ಹಾಲು ಅಂತ ಕುಡಿಯಬೇಕಾಗಿದೆ. ಬೆಳ್ಳಂಬೆಳಿಗ್ಗೆ ಓದೋ ಪೇಪರ್ ಜೊತೆಗೆ ಮನೆಯಂಗಣಕ್ಕೆ ಬಂದು ಬೀಳುವ ಹಾಲಿನ ಲಕೋಟೆಯಲ್ಲಿ ಹಾಲೇನೋ ಇರುತ್ತದೆ. ಆದರೆ ಅದರ ಜೊತೆಗೆ ನನ್ನ ಕೆಂಪಿ,ಚಿಕ್ಕು, ಬೆಳ್ಳಿಯರ ಕೆಚ್ಚಲ ವಾಸನೆಯಿಲ್ಲ. ಹೋಗಲಿ ಕನಿಷ್ಟ ಒಂದು ಎಮ್ಮೆಯ ಚಿತ್ರವಾದರೂ ಇತ್ತೇ ಅಂದರೆ ಅದೂ ಇಲ್ಲ. ಇರುವುದು ದೇವಲೋಕದ ನಂದಿನಿಯ ಹೆಸರಲ್ಲಿ ಹೈಬ್ರೀಡ್ ಹಸುವೊಂದರ ಚಿತ್ರ. ಹಾಲು ಕುಡಿಯುವುದು ಬೇರೆ, ಹಾಲು ಕೊಡುವ ಹಸುಗಳೊಂದಿಗೆ ಬದುಕುವುದು ಬೇರೆ. ನನ್ನ ಮನೆಯೊಳಗೆ ನಂದಿನಿಯ ಪ್ಯಾಕೇಟ್ ಬಂದು ಬಿದ್ದಾಗ ಆ ಹೈಬ್ರೀಡ್ ತಳಿಯ ಹಸುವಿನ ಚಿತ್ರಣ ಕಂಡಾಗಲೆಲ್ಲಾ ನನ್ನೊಳಗೆ ಅತೀವ ಸಂಕಟವಾಗುವುದುಂಟು. ಉದ್ಯೋಗದ ಬೇಟೆಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಊರು ಬಿಟ್ಟವರು ನಾವುಗಳು. ಹೀಗಿದ್ದು ನಾನು ಬದುಕಿದ ಮನೆ ಇರುವಲ್ಲಿಯೇ ಇದೆ. ಹಸು ಕಟ್ಟುತ್ತಿದ್ದ ಹಟ್ಟಿಯೂ ಇದೆ. ಆದರೆ ಈಗ ಆ ಹಟ್ಟಿಯಲ್ಲಿ ನನ್ನ ಕೆಂಪಿ, ಬುಡ್ಡಿ, ಕರಿಯಮ್ಮನಾಗಲಿ, ಕರಿಯ, ನೀಲ ಕೆಂಪಣ್ಣ್ಣನಾಗಲೀ, ಚಿಕ್ಕು, ಬೆಳ್ಳಿ ಎಮ್ಮೆಯಾಗಲೀ, ಬೆಳ್ಳು, ಕಾಳುಗಳೆಂಬ ದೀರ್ಘಕಾಯದ ಕೋಣಗಳಾಗಲೀ ಇಲ್ಲದಂತಾಗಿ ಖಾಲಿಯಂತಿದೆ. ಈಗ ಅಲ್ಲಿರುವುದೂ ನಂದಿನಿ ಪ್ಯಾಕೇಟ್ ಮೇಲೆ ಮುದ್ರಿತವಾದ kamadenu(ಆದರೆ ಜೀವಂತವಾದ) ಬೂಸಾ ತಿಂದು ಹಾಲು ಕರೆಯುವ ಯಂತ್ರ! ಬೆದೆಗೆ ಬಂದಾಗ ಪಶುವೈದ್ಯನ ಸೂಜಿಯ ಮೂಲಕ ಗರ್ಭಕಟ್ಟುವ, ಗಂಡುಕರುಗಳಾದರೆ ಹಾಲು ಕೊಡದೇ ಕೊಲ್ಲಲ್ಪಡುವ, ಏನೇನೊ ರೋಗದ ರೂಢಿಯಲ್ಲಿ ಮತ್ತೆ ಮತ್ತೆ ವ್ಯಾಕ್ಷಿನ್ ಪಡೆಯುವ ಈ ಪರದೇಶಿ ಹಸುವಿನೆದುರು ದೀಪಾವಳಿಯ ರಾತ್ರಿ ಗದ್ದೆಗೆ ಹಿಟ್ಟು ಬಡಿಸಿ ಬಂದ ಮೇಲೆ “ಆಸಾಡಿ ಹಬ್ಬದ ಆಸಿ ಕಂಡೆ, ದೀಪೋಳಿ ಹಬ್ಬದ ದೀಪ ಕಂಡೆ, ಮುಂದ್ ಬತ್ತ್ ಕೊಡಿ ಕಾಣ್” ಎಂದು ಹಾಡು ಹಾಡುತ್ತಾ ಹಿಟ್ಟು ನೀಡುವ ಅಮ್ಮ ಬದಲಾಗಲಿಲ್ಲ. ಅಮ್ಮನ ಸಿಕ್ಕ (ಮಜ್ಜಿಗೆ ತೂಗಿಡುವ ಸಾಧನ), ಕಿರ್‍ಗಾಲು, ಕಡಾಲು (ಕಡೆಗೋಲು)ಗಳು ಅಟ್ಟ ಹತ್ತಿವೆ/ಕಣ್ಮರೆಯಾಗಿವೆ. ಅಮ್ಮನ ಹಾಗೆಯೇ ಅಚ್ಚೊತ್ತಿ ನಿಂತ ನನ್ನ ಒಟ್ಟು ಹಸು ಕರುಗಳೆಂಬ ಸಂಗತಿಗಳ ಜತೆಗಿನ ಬಾಲ್ಯ ನನ್ನವರ ಹಸುವಿನ ಲೋಕದ ಪರಿಚಿತ ಮುಖವಾಗಿಯೇ ಉಳಿದುಕೊಂಡಿದೆ. ಹಾಗೆಯೇ ಇವತ್ತು ನಮ್ಮ ಹಟ್ಟಿಗಳಲ್ಲಿ ಅವತರಿಸಿರುವ ದೇವಲೋಕದ ನಂದಿನಿಯೆಂಬ ಹಾಲುಯಂತ್ರಗಳು ಅವುಗಳ ಗಂಡುಕರುಗಳ ಉದ್ದೇಶಿತ ಕೊಲೆಗಳು ನಮ್ಮ ಹಸಿಯಾದ ಹಸಿವೆಯ ಭಾಗವೇ ಆಗಿವೆ. ಹಾಗಾಗಿ ನಮ್ಮ ಪಾಲಿಗೆ ಹಸುವೆಂದರೆ ಕ್ಯಾಲೆಂಡರ್‌ಗಳಲ್ಲಿಯೋ, ವರ್ಣಚಿತ್ರಗಳಲ್ಲಿಯೋ ಮಮತೆಯ ಪೋಸ್‌ನಲ್ಲಿ ಅಂಟಿಸಲ್ಪಟ್ಟ ನಾಲ್ಕು ಕಾಲಿನ ಹುಲ್ಲು ತಿನ್ನುವ ದೇವರಲ್ಲ್ಲ. ಅಥವಾ ಹಸುಸಾಕದೇ ಪ್ಯಾಕೇಟ್ ಹಾಲು ಕುಡಿಯುವವರು ಕಲ್ಪಿಸಿಕೊಟ್ಟಿರುವ ಕಾಮಧೇನುವೊ, ಪುಣ್ಯಕೋಟಿಯೊ ಅಲ್ಲ. ಅದೊಂದು ಆಪ್ತವಾದ ಜೀವ. ಪ್ರೀತಿಗೆ ಕಾರಣವಾಗುತ್ತಾ ಬದುಕಿಗೆ ಆಧಾರವಾಗಬೇಕೆಂದು ಸಹಜ ಮನುಷ್ಯರಾದ ರೈತರು, ದನಗಾಹಿಗಳು ಇಲ್ಲಿಯವರೆಗೆ ಮತ್ತು ಇನ್ನು ಮುಂದು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರತ್ಯೇಕವಾದ ಲೋಕ. ಆ ಲೋಕದೊಳಗೆ ಪ್ರವೇಶ ಕಾಣದೆ ಮತ್ತು ಪ್ರವೇಶ ಬಯಸದ ಶುಭ್ರವಸನ ದಾರಿಗಳು ಭಾವಿಸುವಂತೆ ಒಂದೇ ಏಟಿಗೆ ಆರಾಧನೆ ಮಾಡಿಯೋ, ಪೂಜ್ಯತೆಯ ಸರಕಾಗಿ ಮ್ಯೂಸಿಯಂನಲ್ಲಿಟ್ಟೋ ಕೂರುವ ಜಗತ್ತಲ್ಲ ಅದು. ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಲಾರದೆ ಬಾಳಿನ ಬವಣೆಯಿಂದ ಬೇಯುವ ನೈಜ ಅನುಭವದ ಆ ಲೋಕದಲ್ಲಿ ಭಾವನೆಯಿದೆ, ಬದುಕಿದೆ, ವ್ಯವಹಾರವಿದೆ, ಬಳಕೆಯಿದೆ. ಇಂತಹ ಸಂಕೀರ್ಣ ಆಯಾಮದಲ್ಲಿ ನಿಜಗೊಳ್ಳುವ ಹಸುವಿನ ಲೋಕವನ್ನು ಯಾವುದೋ ಒಂದು ಚಿತ್ರಕ್ಕ್ಕೆ/ಪ್ರತಿಮೆಗೆ ಜೋತುಹಾಕಲಾಗದು. ಕಾಳಿಂಗನೆಂಬ ಗೊಲ್ಲನ ಲೋಕದಲ್ಲಿಯ ಗಂಗೆ, ಗೌರಿ, ತುಂಗೆಯರೂ ಅಲ್ಲಿದ್ದಾರೆ. ಹಾಗೆಯೇ (ಗೊಡ್ಡು) ಅಹಲ್ಯಾನಂತವರೂ ಅಲ್ಲಿದ್ದಾರೆ. ಅಂತಹ ಲೋಕದಲ್ಲಿ ದನ ಕಟ್ಟುವ ಹಟ್ಟಿಗಳು ದೇವಾಲಯವೂ ಆಗುತ್ತವೆ.(ತಾತ್ಕಾಲಿಕವಾಗಿ) ಕೆಲಹೊತ್ತಿನ ನಿಲ್ದಾಣಗಳೂ ಆಗುತ್ತವೆ. ಹಾಗೆಯೇ ಜೀತದ ಮನೆಯೂ ಆಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಹಟ್ಟಿಯಲ್ಲಿರುವುದು “ಕೊರಳಿಗೆ ಕಟ್ಟುವ ಹಗ್ಗಗಳೇ ವಿನಃ ಮಲ್ಲಿಗೆಯ ದಂಡೆಯಲ್ಲ.”

ಹಸು, ಎಮ್ಮೆ, ಎತ್ತುಗಳ ಕೊರಳಿಗೆ ಹಗ್ಗ ಕಟ್ಟಿ, ಬೆನ್ನು ಸವರಿ, ಸರಿಯೆನಿಸಿದಾಗ ಬಾಸುಂಡೆ ಬರುವಂತೆ ಬಾರಿಸಿ, ಮಾನ ತೆಗೆಯದಂತೆ ನಿಯಂತ್ರಿಸಲು ಒದ್ದಾಡಿ, ಮಳೆಗಾಲದ ಉಳುಮೆಗೆ ಜೋಡಿಲ್ಲದವರ ಪಾಡನ್ನು ಕಂಡು ಅನುಭವಿಸಿದ ನನಗೆ ಇತ್ತೀಚಿಗಿನ ದಿನಗಳಲ್ಲಿ ಅವುಗಳನ್ನು ಸಾಕುವುದೇ ಒಂದು ಶಿಕ್ಷೆಯಾಗುತ್ತಿರುವುದು ಆತಂಕದಾಯಕವೆನಿಸುತ್ತಿದೆ. ಹಿಂದೆಂದೂ ಕಂಡುಕೇಳರಿಯದ ಹಾಗೆ ದಿಡೀರ್ ಆಗಿ ಗೋವಿನ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿರುವ ಈ ಗಳಿಗೆಯಲ್ಲಿ ಅದೊಂದು ಜೀವವೆಂಬುದಕ್ಕಿಂತ ಹೆಚ್ಚಾಗಿ ಲಾಂಛನವಾಗುತ್ತಿರುವುದು ಕಳವಳಕಾರಿ ಸಂಗತಿ. ಹಸುವೆಂಬುದನ್ನು ಒಂದು ಏಕರೂಪಿ ಅಚ್ಚಿನಲ್ಲಿ ನಿರೂಪಿಸುತ್ತಿರುವ ಈ ಹೊತ್ತಿನಲ್ಲಿ ನಾನು ಕಂಡ “ಹಸುವಿನ ಲೋಕ”, ಅದರ ಪಾಡು, ಅನಿವಾರ್ಯತೆಗಳನ್ನು ಈ ಮೂಲಕ ಹಂಚಿಕೊಂಡು ಹಗುರಾಗ ಬಯಸುತ್ತೇನೆ.

(ಮುಂದುವರೆಯುತ್ತದೆ…)

Leave a Reply

Your email address will not be published.