Daily Archives: July 19, 2013

ಪೂರ್ವ-ಪಶ್ಚಿಮಗಳ ನಡುವಿನ ಅಂತರದ ಅಳಿವು-ಉಳಿವು


– ಡಾ.ಎಸ್.ಬಿ. ಜೋಗುರ


 

ಎಲ್ಲ ಕಾಲಘಟ್ಟಗಳಲ್ಲಿಯೂ ಪಶ್ಚಿಮದ ನೆಲೆಗಳನ್ನು ಬೆರಗುಗಣ್ಣಿನಿಂದ ಈಗಾಗಲೇ ಪ್ರಚಲಿತವಿರುವ ಅದೇ ಸ್ಥಾಪಿತ ನಂಬುಗೆಯಿಂದ ನೋಡುವ, ಎದುರುಗೊಳ್ಳುವ ಅವಶ್ಯಕತೆ ಸದ್ಯದ ಸಂದರ್ಭದಲ್ಲಂತೂ ಇಲ್ಲ. ಸಾಂಸ್ಥಿಕವಾಗಿ ಅವು ಬಲು ಗಟ್ಟಿಯಾದವುಗಳು ಎಂದು ಹೇಳಿಕೊಳ್ಳುವ ಪೂರ್ವದ ಪರಂಪರೆಯ ಪ್ರಮುಖ ನೆಲೆಗಳೇ ಇಂದು ಬದಲಾವಣೆಯ ಹೊಡೆತಕ್ಕೆ ಸಿಲುಕಿ ಬೆಂಡಾಗುತ್ತಿವೆ. ಇನ್ನು ನಾಗರಿಕತೆ ಮತ್ತು ಬದಲಾವಣೆಯ ತೀವ್ರತೆಯನ್ನೇ ತಿಂದು ಅದನ್ನೇ ಉಸಿರಾಡುವ ಪಶ್ಚಿಮದ ರಾಷ್ಟ್ರಗಳು ಅನೇಕ ಬಗೆಯ ಸ್ಥಿತ್ಯಂತರಗಳನ್ನು ಕಂಡುಕೊಂಡಿರುವದು ಒಂದು ಕಟು ವಾಸ್ತವ. ಒಂದು ಕಾಲದಲ್ಲಿ ಆರ್ಥಿಕ ವಿಷಯಗಳಲ್ಲಿ ಬಲಾಢ್ಯರು ಎಂದು ಖ್ಯಾತನಾಮವಾದ ರಾಷ್ಟ್ರಗಳು ಇಂದು ವಿದೇಶಿ ಸಾಲದ ವಿಷಯದಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿವೆ. ಅಮೇರಿಕಾ, ಇಂಗ್ಲಂಡ್, ಫ಼್ರಾನ್ಸ್, ಜರ್ಮನಿ, ಇಟಲಿಯಂಥಾ ಪಶ್ಚಿಮದ ರಾಷ್ಟ್ರಗಳು ಋಣಭಾರದ ವಿಷಯವಾಗಿ ಟಾಪ್ ಟೆನ್ ರಾಷ್ಟ್ರಗಳಲ್ಲಿ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿರುವದಿದೆ. ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಪಶ್ಚಿಮದ ರಾಷ್ಟ್ರಗಳು ಒಂದು ಬಗೆಯ ಆರ್ಥಿಕ ಜಿಗುಟುತನದ ಸ್ಥಿತಿಯನ್ನು ಹೊಂದುವಂತಾಗಿದೆ. ಕಡಿಮೆ ಖರ್ಚು ಮಾಡಿ, ಹೆಚ್ಚು ಉಳಿತಾಯ ಮಾಡುವ ಅನಿವಾರ್ಯತೆಗಳು ಅವರಿಗೀಗ ಎದುರಾಗಿವೆ. 2012 ರ ಸಂದರ್ಭದಲ್ಲಿ ವಿಶ್ವ ಬ್ಯಾಂಕ್ ಮಾಡಿದ ವರದಿಯಂತೆ ಅಮೇರಿಕೆಯ ಆರ್ಥಿಕತೆಗಿಂತಲೂ ಚೈನಾ ಮತ್ತು ಭಾರತದ ಆರ್ಥಿಕ ಸ್ಥಿತಿಗತಿ ಚೆನ್ನಾಗಿತ್ತು. ಭಾರತ ಅಮೇರಿಕೆಯ ಮೂರು ಪಟ್ಟು ಆರ್ಥಿಕ ಪ್ರಗತಿಯನ್ನು ಹೊಂದಿರುವ ಬಗ್ಗೆ ವಿಶ್ವ ಬ್ಯಾಂಕ್ ವರದಿ ಮಾಡಿರುವದಿತ್ತು. ಕೇವಲ ಆರ್ಥಿಕ ಹೊಯ್ದಾಟಗಳು ಮಾತ್ರ ಪಶ್ಚಿಮದ ನೆಲೆಗಳನ್ನು ಬಾಧಿಸದೇ ಸಾಂಸ್ಥಿಕ ಮೂಲಗಳು ಕೂಡಾ ಅಧ:ಪತನದ ದಾರಿಯಲ್ಲಿವೆ ಎನ್ನುವದನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ಇತಿಹಾಸದ ಅಧ್ಯಾಪಕ ನೀಲ್ ಪರ್ಗ್ಯುಸನ್ ಎನ್ನುವವರು ತಮ್ಮ ಕೃತಿಯಾದ ’ದ ಗ್ರೇಟ್ ಡಿthegreatdegenerationಜನರೇಶನ್’ ಎನ್ನುವದರಲ್ಲಿ ಅತ್ಯಂತ ಸ್ಥೂಲವಾಗಿ, ಮಾರ್ಮಿಕವಾಗಿ ಚರ್ಚಿಸಿರುವರು. ಆರ್ಥಿಕ ವಿಷಯವಾಗಿ ಪಶ್ಚಿಮದ ಕೆಲವು ರಾಷ್ಟ್ರಗಳಲ್ಲಿ ಮೇಲ್ಮುಖ ಸಂಚಲನೆಯ ಬದಲಾಗಿ ಕೆಳಮುಖ ಇಲ್ಲವೇ ಸಮಾನಾಂತರ ಸಂಚಲನೆ ಮಾತ್ರ ಸಾಧ್ಯವಾದಂತಾಗಿದೆ.

ಪಶ್ಚಿಮದ ರಾಷ್ಟ್ರಗಳಲ್ಲಿ ಅದರಲ್ಲೂ ಯುರೋಪಿನ ನೆಲೆಗಳಲ್ಲಿ ಒಂದು ಬಗೆಯ ರಭಸದ ಬದಲಾವಣೆ ಆರಂಭವಾಗಿದೆ. ಸರಿ-ತಪ್ಪುಗಳ ಲೆಕ್ಕಾಚಾರವನ್ನು ಮೀರಿದ ಈ ಬದಲಾವಣೆ ತನ್ನ ತೆಕ್ಕೆಗೆ ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು ಹೋಗುವಷ್ಟು ಸಶಕ್ತವಾಗಿದೆ. ಹಿಂದೊಮ್ಮೆ ಅಮೇರಿಕೆಯ ರಕ್ಷಣಾ ಕಾರ್ಯದರ್ಶಿಯಾಗಿದ್ದ ಡೊನಾಲ್ಡ್ ರಮ್ಸ್ ಫ಼ೀಲ್ಡ್ ಎನ್ನುವವರು ಮೂರು ಪ್ರಮುಖ ಜನ ಸಮೂಹಗಳನ್ನು ಗುರುತಿಸಿರುವದಿತ್ತು. ಒಂದನೆಯದು ಎಲ್ಲವೂ ಗೊತ್ತಿರುವವರು ಆದರೂ ನಿರ್ಲಿಪ್ತ ಭಾವನೆ ಹೊಂದಿರುವರು. ಎರಡನೆಯವರು ಗೊತ್ತಿದ್ದೂ ಗೊತ್ತಿಲ್ಲದಂತಿರುವವರು. ಮೂರನೆಯವರು ನಿಜವಾಗಿಯೂ ಯಾವುದೇ ವಿದ್ಯಮಾನಗಳ ಬಗೆಗೆ ಸರಿಯಾದ ಗ್ರಹಿಕೆ ಇಲ್ಲದವರು, ಅಂದರೆ ಏನೂ ಗೊತ್ತಿಲ್ಲದವರು. ಇಲ್ಲಿ ಮೊದಲ ಮತ್ತು ಎರಡನೆಯವರು ಅಪಾಯಕಾರಿ. ಇಂಥವರೇ ಸಾಂಸ್ಥಿಕ ಮೌಲ್ಯಗಳು ಕುಸಿಯಲು ಕಾರಣರಾಗುವವರು. ಆದರೆ ನೀಲ್ ಪರ್ಗ್ಯುಸನ್ ಹೊಸಬಗೆಯ ನಾಲ್ಕನೆಯ ಪ್ರಕಾರದ ಜನ ಸಮುದಾಯವನ್ನು ಗುರುತಿಸಿದ್ದಾರೆ. ಇವರು ಗೊತ್ತಿಲ್ಲದಿದ್ದರೂ ಗೊತ್ತಿರುವಂತೆ ನಟಿಸುವವರು. ಇವರು ಇನ್ನಷ್ಟು ಅಪಾಯಕಾರಿ. ಈ ಸಂದರ್ಭದಲ್ಲಿ ಈಟ್ಸ್ ನ ಮಾತು ನೆನಪಾಗುತ್ತದೆ. “ಉತ್ತಮರಿಗೆ ಬಲವಾದ ಆಶೋತ್ತರಗಳಿಲ್ಲ, ಆಶೋತ್ತರಗಳಿರುವವರು, ಅಗಾಧ ಶಕ್ತಿ ಇರುವವರು ನೆಟ್ಟಗಿಲ್ಲ.” ನೀಲ್ ಪರ್ಗ್ಯುಸನ್ ಹೇಳುವಂತೆ ಪಶ್ಚಿಮದ ನೆಲೆಗಳು ಸಾಂಸ್ಥಿಕ ಸುಭದ್ರತೆಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರಜಾಪ್ರಭುತ್ವ, ಬಂಡವಾಳವಾದ, ನಾಗರಿಕ ಸಮಾಜ ಮತ್ತು ಶಾಸನೀಯ ಸತ್ತೆ, ಈ ನಾಲ್ಕೂ ಸಂಸ್ಥೆಗಳ ಒಳಹರವು ಅತ್ಯಂತ ಸಂಕೀರ್ಣವಾದುದು. ಅತ್ಯಾಧುನಿಕವಾದ ಕಂಪ್ಯುಟರ್ ಒಂದರಲ್ಲಿಯ ತೀರಾ ಡೆಲಿಕೇಟ್ ಆಗಿರುವ ಸಣ್ಣ ಸಣ್ಣ ತಂತಿಗಳ ಸಂಯೋಜನೆಯಂತೆ ಅದು ಕ್ಲಿಷ್ಟವಾಗಿದೆ. ಅದರಲ್ಲಿಯ ಕಾರ್ಯಕ್ಷಮತೆಯ ಅದಕ್ಷತೆಗೆ ಕೇವಲ ಹೊರನೋಟದ ಗ್ರಹಿಕೆ ಸಾಲುವುದಿಲ್ಲ. ಸೂಕ್ಷ್ಮ ಒಳನೋಟದ ಅವಶ್ಯಕತೆಯ ಜರೂರತ್ತಿದೆ. ಪ್ರಜಾಪ್ರಭುತ್ವದಂತಹ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಅದರಲ್ಲಿ ಅಂತರ್ಗತವಾಗಬಹುದಾದ ಚುನಾವಣೆ, ಚುನಾಯಿತ ಪ್ರತಿನಿಧಿ, ಸರಕಾರ, ನಿಯಮಗಳು, ನಿರ್ಬಂಧಗಳ ಬಗ್ಗೆಯೂ ಅರಿವಿರಬೇಕಾದುದು ತೀರಾ ಅಗತ್ಯ.

ಇಂದು ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಸಾಂಸ್ಥಿಕ ರೂಪರೇಷೆಗಳು ಮೂಲ ಸ್ಥಿತಿಯಲ್ಲಿ ಉಳಿದಿಲ್ಲ. ಭಾರತದಂತಹ ಸಾಂಪ್ರದಾಯಿಕ, ಸಾಂಸ್ಥಿಕ ಪ್ರಧಾನ ಹಿನ್ನೆಲೆಯುಳ್ಳ ನೆಲದಲ್ಲಿಯೂ ಅನೇಕ ಜಿಗುಟುತನದ ಸಂಸ್ಥೆಗಳು ತಮ್ಮ ರಚನೆ ಮತ್ತು ಕಾರ್ಯ ಸ್ವರೂಪದಲ್ಲಿ ಬದಲಾವಣೆಯನ್ನು ಕಂಡುಕೊಂಡಿವೆ. east-meets-westಬೇರುಗಳು ಸಡಿಲುಗೊಂಡಿವೆ. ವಿವಾಹ, ಜಾತಿ, ಧರ್ಮದಂತಹ ಸಂಸ್ಥೆಗಳು ಈಗ ಮೇಲ್ಮುಖ ಹಾಗೂ ಕೆಳಮುಖ ಸಂಚಲನೆಗೂ ಸಿಲುಕಿರುವದಿದೆ. ಪಶ್ಚಿಮದ ರಾಷ್ಟ್ರಗಳಲ್ಲಿ ಸಾಂಸ್ಥಿಕ ಮೂಲಗಳಲ್ಲಿ ಈ ಬಗೆಯ ಭರಾಟೆಯ ಬದಲಾವಣೆಗೆ ನಾರ್ಥ್ ಡೌಗ್ಲಾಸ್, ಜಾನ್ ವಲ್ಲಿಸ್ ಮತ್ತು ಬ್ಯಾರಿ ವೈನ್ ಗಾಸ್ಟ್ ಎನ್ನುವ ಚಿಂತಕರು ಕೆಲವು ಪ್ರಮುಖ ಕಾರಣಗಳನ್ನು ಸೂಚಿಸುವದಿದೆ. ತೀವ್ರತರವಾದ ಆರ್ಥಿಕ ಸ್ಥಿತ್ಯಂತರಗಳು, ಶ್ರೀಮಂತ ನಾಗರಿಕತೆಯ ಭರಾಟೆ, ಅಪಾರ ಸಂಖ್ಯೆಯ ಹಿಂದೆಂದೂ ಕಾಣಲಾರದ ಸಂಖ್ಯೆಯ ಸಂಘಟನೆಗಳು, ಬೃಹತ್ ಪ್ರಮಾಣದ ವಿಕೇಂದ್ರೀಕೃತ ನೌಕರಶಾಹಿ ವ್ಯವಸ್ಥೆ, ಅವೈಯಕ್ತಿಕ ಸಾಮಾಜಿಕ ಸಂಬಂಧಗಳು, ಈ ಮುಂತಾದ ಸಂಗತಿಗಳೇ ಪಶ್ಚಿಮದ ರಾಷ್ಟ್ರಗಳಲ್ಲಿಯ ಸಂಸ್ಥೆಗಳು ತಮ್ಮ ಮೂಲ ರಚನೆಯಲ್ಲಿ ಮಾರ್ಪಾಡುಗಳನ್ನು ಹೊಂದುವಲ್ಲಿ ಮತ್ತು ಸಾಮಾಜಿಕ ಅನುಮತಿಗಳ ವಿಷಯದಲ್ಲಿ ಸಡಿಲುಗೊಳ್ಳಲು ಕಾರಣಗಳಾಗಿ ಕೆಲಸ ಮಾಡಿವೆ. ಇವುಗಳನ್ನು ಹೊರತು ಪಡಿಸಿ ಆಧುನೀಕರಣ, ನಗರೀಕರಣ, ಜಾಗತೀಕರಣ, ಆಧುನಿಕ ಶಿಕ್ಷಣ, ಅಂತರರಾಷ್ಟ್ರೀಯ ವಲಸೆ ಮುಂತಾದ ಬಾಹ್ಯ ಸಂಗತಿಗಳು ಕೂಡಾ ಸಂಸ್ಥೆಗಳ ಮೂಲ ಸ್ವರೂಪದಲ್ಲಿಯ ಮಾರ್ಪಾಡುಗಳಿಗೆ ಕಾರಣಗಳಾಗಿವೆ.

ಒಟ್ಟಾರೆ ಪೂರ್ವ ಮತ್ತು ಪಶ್ಚಿಮದ ಮಧ್ಯೆ ಇದ್ದ ಮೇಲರಿಮೆ-ಕೀಳರಿಮೆಯ ಗೆರೆಗಳು ಈಗೀಗ ಮಸುಕಾಗತೊಡಗಿವೆ. ಅಲ್ಲಿ ಹೇಳಿಕೊಳ್ಳಬಹುದಾದ ಅಂತರಗಳು ಈಗ ಗೋಚರವಾಗುತ್ತಿಲ್ಲ. ಪೂರ್ವ- ಪಶ್ಚಿಮಗಳ ಟಕ್ಕಾಟಿಕ್ಕಿ ಈಗ ಮೊದಲಿನಷ್ಟು ನಿಚ್ಚಳವಾಗಿಲ್ಲ. ಅದೇನಿದ್ದರೂ ಈಗ ಮಸುಕು ಮಸುಕಾಗಿದೆ. ಮುಂಬರುವ ದಿನಗಳಲ್ಲಿ ಕಣ್ಣಿಗೆ ಕಾಣದಷ್ಟು ಆ ಅಂತರ ಅಮೂರ್ತವಾಗಲಿದೆ ಎನ್ನುವ ಭವಿಷ್ಯವನ್ನು ಪಶ್ಚಿಮದ ರಾಷ್ಟ್ರಗಳ ಸಮಕಾಲಿನ ಸಂದರ್ಭದಲ್ಲಿಯ ವಿದ್ಯಮಾನಗಳೇ ನುಡಿಯುತ್ತಿವೆ.