Daily Archives: July 22, 2013

ಅವಳ ಅವ್ಯಕ್ತ ಪ್ರಪಂಚ

– ರೂಪ ಹಾಸನ

‘ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನಾದ್ರೂ ಅಳೆಯಬಹುದು ಹೆಣ್ಣಿನ ಮನಸಿನ ಆಳವನ್ನು ಅರಿತವರಿಲ್ಲ’ ಎಂದು ಯಾರು ಹೇಳಿದರೋ ತಿಳಿದಿಲ್ಲ. ಈ ಸುಂದರ ಸುಳ್ಳನ್ನು ನಂಬಿ ‘ಅವಳ’ನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿದ್ದೇ ಕಡಿಮೆ ನಮ್ಮ ಸಮಾಜ. ‘ಹೆಣ್ಣು ಸ್ವಾತಂತ್ರ್ಯಕ್ಕೆ ಅನರ್ಹ’ಳೆಂದ ಮನು, ‘ಹೆಣ್ಣು ಸುಕೋಮಲೆ ಅವಳನ್ನು ರಕ್ಷಿಸು ಕಾಪಾಡು’ ಎಂದು ಕಟ್ಟಳೆ ಬರೆದಿಟ್ಟ ಶಾಸ್ತ್ರಗಳು, ಹೆಣ್ಣೆಂದರೆ ‘ಕ್ಷಮಯಾಧರಿತ್ರಿ, ಸಹನಾಮಯಿ, ಮಾಯೆ, ಶಕ್ತಿ, ಪ್ರಕೃತಿ ದೇವತೆ, …….’ ಎಂದೆಲ್ಲಾ ವರ್ಣಿಸುವ ಕವಿಗಳ ಅತಿ ವೈಭವೀಕರಣಗಳ ಮಧ್ಯೆ ಸಿಕ್ಕು ತನ್ನದಲ್ಲದ ನೂರಾರು ಮುಖವಾಡಗಳನ್ನು ಹೊತ್ತು ನಿಜಕ್ಕೂ ನಾನೆಂದರೆ ಏನು? ಮನುಷ್ಯಳಲ್ಲವೇ? ಎಂಬ ಗೊಂದಲ ಸ್ವತಹ ಹೆಣ್ಣಿಗೇ ಮೂಡಿ, ಕಾಡಿ ಚಡಪಡಿಸುತ್ತಿದ್ದಾಳೆ.

ಅವಳ ತೀವ್ರ ಸಂವೇದನಾ ಶೀಲ ಸ್ವಭಾವ ಮತ್ತು ಪ್ರವೃತ್ತಿ ಪುರುಷನದಕ್ಕಿಂತ ಭಿನ್ನವಾದದ್ದು ಮಾತ್ರವಲ್ಲ ಸೂಕ್ಷ್ಮತರವಾದದ್ದೂ ಹೌದು, woman-insightಗಾಢವಾದದ್ದೂ ಹೌದು. ವಸ್ತು, ವಿಷಯ, ಘಟನೆ ಮತ್ತು ಸಂಬಂಧಗಳನ್ನು ಪುರುಷನಿಗಿಂತಾ ಭಿನ್ನವಾದ ಭಾವನಾತ್ಮಕ ನೆಲೆಯಲ್ಲಿ ಹಿಡಿಯಬಲ್ಲ ಇಂದ್ರೀಯ ಸಂವೇದನೆ ಮತ್ತು ಸಂವಹನತೆ ಸರಳ, ಸೂಕ್ಷ್ಮವಾಗಿರುವುದರ ಜೊತೆಗೇ ಸಂಕೀರ್ಣವಾದದ್ದೂ ಆಗಿದೆ. ಆದರೆ ಇವೆಲ್ಲವೂ ಅವಳ ಅವ್ಯಕ್ತ ಭಾವನಾ ಪ್ರಪಂಚದ ಒಳಗೆ ವ್ಯಕ್ತವಾಗದೇ ಹಾಗೆಯೇ ಉಳಿದುಬಿಡುವುದೇ ಹೆಚ್ಚು. ಅವಳ ಮೌನ ಪ್ರಪಂಚದೊಳಗೆ ಒಂದು ಸುತ್ತು ಬಂದರೆ ಹಲವು ವಿಸ್ಮಯಗಳ ಅದ್ಭುತ ಲೋಕವೊಂದು ತೆರೆದುಕೊಳ್ಳಲು ಸಾಧ್ಯವಿದೆ.

ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ಹೆಣ್ಣೆಂದರೆ ಯಶಸ್ವೀ ಪುರುಷನ ಹಿಂದೆ ನಿಂತು ಅವನೆಲ್ಲಾ ಕಾರ್ಯಗಳಿಗೂ ಸಹಕರಿಸಿ, ಕೃತಜ್ಞತಾ ಭಾವದಿಂದ ಬೀಗುವ ದಾಸಿಯಾಗಿರಬೇಕೆಂದೇ ಬಯಸುವುದು ಹಲವು ಬಾರಿ ಢಾಳಾಗಿಯೇ ಗೋಚರಿಸುತ್ತಿರುತ್ತದೆ. ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಸ್ತ್ರೀ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿರುವುದು ದಾಖಲಾಗಿದ್ದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ, ಮಹತ್ವದ ನಿರ್ಧಾರ-ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸ್ಥಾನಗಳಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಅವಳಿಗಿನ್ನೂ ಗಮನಾರ್ಹವಾದ ಸ್ಥಾನ ದೊರಕಬೇಕಿದೆ. ಅವಳ ಬುದ್ಧಿವಂತಿಕೆ, ಸಾಮರ್ಥ್ಯ, ಪ್ರತಿಭೆ, ಜಾಣ್ಮೆಗಳೆಲ್ಲವೂ ಹಿಂಬದಿಯಿಂದ ಉಪಯೋಗಿಸಲ್ಪಟ್ಟು ಶೋಷಣೆಗೊಳಪಡುವುದೇ ಹೆಚ್ಚು. ಹೀಗಾಗದಂತೆ ಎಚ್ಚರವಹಿಸಬೇಕಾದ ಅವಶ್ಯಕತೆ ಅವಳ ಮುಂದಿದೆ.

ಹೆಣ್ಣೆಂದರೆ ಹೀಗೇ……. ಅವಳೆಂದರೆ ಇಷ್ಟೇ ಎಂದು ಅವಳ ಗುಣ ಸ್ವಭಾವಗಳಿಗೆ ಕವಚ ತೊಡಿಸಿ ಇರಿಸಿದ್ದಾಗಲೂ ಹೆಣ್ಣಿನ ಅಭಿವ್ಯಕ್ತಿಗಳು ಚೌಕಟ್ಟನ್ನೂ ಮೀರಿ ದಿಟ್ಟವಾಗಿ ಹೊರಬಿದ್ದಿವೆ. ಹಾಗೇ ಸಂಘರ್ಷಕ್ಕೂ ಗುರಿಯಾಗಿವೆ. ‘ಗಿಡವೆಂದು ತಿಳಿದೆಯೋ ಹೆಣ್ಣು ಜನ್ಮದ ಒಡಲ, ಫಲಗಳನು ಮನಬಂದಂತೆ ಸೃಜಿಸುವುದಕೆ?’ ಎಂದು ಪ್ರಶ್ನಿಸಿದ ಬೆಳಗೆರೆ ಜಾನಕಮ್ಮ, ‘ಹೊಟ್ಟೆಯ ಈ ಕಿಚ್ಚು ಮುಟ್ಟಲಾಗದ ಬೆಂಕಿ ನನ್ನ ಸಿಟ್ಟೋಗಿ ತಟ್ಟಲಿ ಆ ಪರಶಿವನ ಮಡದಿಗೆ’ ಎಂದು ಶಪಿಸಿದ ಜಾನಪದ ಕವಯಿತ್ರಿ ‘ಆರೂ ಇಲ್ಲದವಳೆಂದು ಅಳಿಗೊಳಲು ಬೇಡ ಕಂಡಯ್ಯ, ಏನ ಮಾಡಿದಡೆಯೂ ನಾನಂಜುವಳಲ್ಲ, ತರಗೆಲೆಯ ಮೆಲಿದು ನಾನಿಹೆನು, ಸುರಗಿಯ ಮೇಲೆರಗಿ ನಾನಿಹೆನು ಚೆನ್ನಮಲ್ಲಿಕಾರ್ಜುನಯ್ಯ ಕರಕರ ಕಾಡಿ ನೋಡಿದರೆ ಒಡಲನೂ ಪ್ರಾಣವನು ನಿಮಗೊಪ್ಪಿಸಿ ಶುದ್ಧಳಿಹೆನು’ ಎಂದು ದಿಟ್ಟವಾಗಿ ಹೇಳಿದ ಅಕ್ಕಮಹಾದೇವಿ ತಮ್ಮ ಕಾಲಗಳಲ್ಲಿ ನಿಜ ಸಂಘರ್ಷಕ್ಕೆ ಗುರಿಯಾಗಿದ್ದಾರೆ. ಅವರು ಆತ್ಮಚರಿತ್ರೆಗಳನ್ನು ಬರೆದಿಟ್ಟಿದ್ದರೆ ಅವುಗಳು ಈಗ ದಾಖಲೆಗಳಾಗುತ್ತಿದ್ದವು. ಮಹಿಳೆಯ ಇತಿಹಾಸ ಅವಳಿಂದಲೇ ಬರೆಯಲ್ಪಟ್ಟಿದ್ದರೆ ಇಂದಿನವರೆಗಿನ ಹಾದಿಯಲ್ಲಿನ ಹೋರಾಟ, ನೋವು, ನಲಿವುಗಳು ಸ್ಪಷ್ಟವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸಂವೇದನೆಗಳಿಗೆ ಹೆಚ್ಚಿನ ಮಹತ್ವ ಬಂದಿರುವುದು ಒಂದು ಆರೋಗ್ಯಕರ ಬೆಳವಣಿಗೆ. ಅವಳೇನೆನ್ನುತ್ತಾಳೆ? ಎಂಬ ಕುತೂಹಲ, woman-abstractಅವಳೂ ನಮ್ಮಂತೆಯೇ ನಮಗೆ ಸಮಾನಳು, ಅವಳೂ ಮಾತಾಡಲಿ ಸಾಮಾಜಿಕವಾಗಿ ಪಾಲ್ಗೊಳ್ಳಲಿ ಎಂಬ ಸಮನ್ವಯ ಭಾವ, ಅವಳ ವಿಚಾರಕ್ಕೂ ಬೆಲೆಕೊಡಬೇಕೆಂಬ ಗೌರವದ ನಿಲುವುಗಳು ಒಂದಿಷ್ಟಾದರೂ ಕಾಣುತ್ತಿರುವುದು ಅವಳ ಭವಿಷ್ಯದ ಬಗೆಗೆ ಕೊಂಚ ಆಶಾದಾಯಕವಾದ ದೃಷ್ಟಿ ಇರಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಆದರೆ ಇಂದಿಗೂ ಹೆಣ್ಣಿಗೆ ತನ್ನ ಮನಸ್ಸಿನ ಎಲ್ಲ ಮುಖಗಳನ್ನೂ ಪ್ರಪಂಚದೆದುರು ಮುಕ್ತವಾಗಿ ತೆರೆದಿಡಲು ಸಾಧ್ಯವಾಗಿಲ್ಲ. ಅವಳು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಪ್ರಬುದ್ಧಳಾಗುವಷ್ಟು ವೇಗದಲ್ಲಿ ನಮ್ಮ ಪುರುಷ ಪ್ರಧಾನ ಸಮಾಜ ಬದಲಾಗಲು ಸಾಧ್ಯವಿಲ್ಲ. ಇವೆರಡರ ನಡುವಿನ ಅಂತರವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಮಹಿಳೆ ತನ್ನ ನಿಲುವುಗಳನ್ನು ಅತ್ಯಂತ ಎಚ್ಚರಿಕೆಯಿಂದ, ಘನತೆಯಿಂದ ಮಂಡಿಸಬೇಕಿರುವುದು ಇಂದಿನ ಅನಿವಾರ್ಯತೆ. ಜೊತೆಗೆ, ತನ್ನ ನಿಗೂಢ ಅವ್ಯಕ್ತ ಲೋಕದ ವಿಶಿಷ್ಟತೆಯನ್ನು ದಿಟ್ಟತನದಿಂದ ಪ್ರತಿಪಾದಿಸಲು ಹೊರಟಾಗಲೆಲ್ಲಾ ಸೂಕ್ಷ್ಮ ಗ್ರಹಿಕೆಗಳಿಲ್ಲದ ಸಮಾಜದಿಂದ ವಿವಾದಗಳು ಸಂಘರ್ಷಗಳು ಉಂಟಾಗುತ್ತವೆ. ಹೀಗಾಗಿ ಅವಳು ಪುರುಷ ನಿರ್ಮಿತ ಪೂರ್ವಗ್ರಹಗಳ ಗೋಡೆಯನ್ನು ಒಡೆಯುತ್ತಾ, ಮೊದಲು ತನಗೆ ತಾನು ಸರಿಯಾಗಿ ಅರ್ಥವಾಗಿ ನಂತರ ಹೊರಜಗತ್ತಿಗೆ ತೆರೆದುಕೊಳ್ಳುವುದು ಮುಖ್ಯ.

ಈ ಹಿನ್ನೆಲೆಯಲ್ಲಿಯೇ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅನಿಯಂತ್ರಿತವಾಗಿ, ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಂತಾ ಮಹಿಳೆಯರ ಆತ್ಮಕಥೆಗಳು ಹೆಚ್ಚು ಸ್ವಾಗತಾರ್ಹವಾದುವು. ತನ್ನ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಅವಳೇ ಯಾವುದೇ ಒತ್ತಡ, ನಿರ್ಬಂಧವಿಲ್ಲದೇ ಮುಕ್ತವಾಗಿ ತೆರೆದಿಡುವ ಸಾಮಾಜಿಕ ಸ್ಥಿತಿ ಇಂದಿಗೂ ನಿರ್ಮಾಣಗೊಂಡಿಲ್ಲವಾದರೂ ಈ ರೀತಿಯ ದಾಖಲೆಗಳು ಮಹಿಳೆಯ ಹಾಗೂ ಸಾಮಾಜಿಕ ಬದಲಾವಣೆಯ ಮೈಲಿಗಲ್ಲುಗಳಾಗುತ್ತವೆ. ಅವಳ ಸಂಘರ್ಷಗಳು ಅವಳದೇ ದಾಖಲೆಗಳ ಮೂಲಕ ಬಿಂಬಿಸಲ್ಪಟ್ಟಾಗ ನಿಧಾನವಾಗಿಯಾದರೂ ಸಮಾಜ, ಅಂತರ್ಮುಖಿಯಾಗಿರುವ ಅವಳ ಬಹುಮುಖೀ ಭಾವಗಳನ್ನು, ವಿಚಾರಗಳನ್ನು ಸ್ವಾಗತಿಸುತ್ತದೆ.