ಅಕಾಡೆಮಿಗಳು, ಪ್ರಾಧಿಕಾರಗಳು ಸಾಂಸ್ಕೃತಿಕ ಕ್ಷೇತ್ರದವರ ಗಂಜಿ ಕೇಂದ್ರಗಳಾಗಿ ಬದಲಾಗದಿರಲಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಈ ವಿಳಂಬ ಕ್ರಿಯೆ ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ಬುದ್ಧಿಜೀವಿಗಳು, ವಿದ್ವಾಂಸರು, ರಂಗಕರ್ಮಿಗಳು ಹಾಗೂ ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, beggingಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ‘ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ‘ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರಾದವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ, ಪುಸ್ತಕ ಪ್ರಾಧಿಕಾರಕ್ಕೆ, ನಾಟಕ ಅಕಾಡೆಮಿ ಅಧ್ಯಕ್ಷರಾದವರನ್ನು ರಂಗಾಯಣಕ್ಕೆ, ರಂಗಾಯಣದ ನಿರ್ದೇಶಕರಾದವರನ್ನು ನಾಟಕ ಅಕಾಡೆಮಿಗೆ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದವರನ್ನು ಮತ್ತೊಂದು ಹುದ್ದೆಗೆ ನೇಮಿಸಿದರೆ (ಹೀಗೆ ಒಂದು ಹುದ್ದೆಯನ್ನು ಅಲಂಕರಿಸಿರುವವರಿಗೆ ಮತ್ತೆ ಮತ್ತೆ ಮಣೆ ಹಾಕಿದರೆ) ಅದರಿಂದ ಯಾವ ಸಾಂಸ್ಕೃತಿಕ ಲಾಭ ಯಾರಿಗೆ ಎಂದು ಇದೇ ಸಂದರ್ಭದಲ್ಲಿ ಸ್ವತಃ ಆಕಾಂಕ್ಷಿಗಳು ಹಾಗು ಅವರ ಪರ ವಾದಿಸುವವರು ಮತ್ತು ಪ್ರಭಾವ ಬೀರಲು ಪ್ರಯತ್ನಿಸುವವರು ವಿವೇಚಿಸಬೇಕಿದೆ. ಅಕಾಡೆಮಿಗಳು, ಪ್ರಾಧಿಕಾರಗಳು ಸಾಂಸ್ಕೃತಿಕ ಕ್ಷೇತ್ರದವರ ಗಂಜಿ ಕೇಂದ್ರಗಳಾಗಿ ಬದಲಾಗದಿರಲಿ.

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

Leave a Reply

Your email address will not be published. Required fields are marked *