Daily Archives: July 25, 2013

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆ: ಮನ:ಪರಿವರ್ತನೆಯೇ ಪರಿಹಾರ.


– ಡಾ.ಎಸ್.ಬಿ. ಜೋಗುರ


 

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧದ ಮಾತು ವ್ಯಾಪಕವಾಗಿ ಕೇಳಿಬರುತ್ತಿರುವ ಬೆನ್ನ ಹಿಂದೆಯೇ ಅದಕ್ಕಿಂತಲೂ ಸರ್ವವ್ಯಾಪಕವಾಗಿ ಅವಳ ಮೇಲೆ ಜರಗುತ್ತಿರುವ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಅನೇಕ ಬಗೆಯ ಪ್ರತಿಭಟನೆಗಳನ್ನು ಮೀರಿಯೂ ಹೀಗೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಅತಿ ಮುಖ್ಯವಾಗಿ ಎರಡು ಸ್ತರಗಳು ತೊಡಗಿಕೊಂಡಿರುವದನ್ನು ಗಮನಿಸಬಹುದಾಗಿದೆ. ಒಂದು ಎಲ್ಲ ಬಗೆಯ ಅಧಿಕಾರವನ್ನು ಅನುಭವಿಸುತ್ತಾ ಅದರ ಅಮಲಿನಲ್ಲಿರುವವರು. ಇನ್ನೊಂದು ಎಲ್ಲ ಬಗೆಯ ಅಧಿಕಾರದಿಂದ ವಂಚಿತರಾಗಿ ಅಧಿಕಾರದ ಅಮಲಿಗಾಗಿ ಹಾತೊರೆಯುವವರು. ಮಹಿಳಾ ದೌರ್ಜನ್ಯದ ವಿಷಯದಲ್ಲಿ ಹೆಚ್ಚಾನು ಹೆಚ್ಚು ಸಿಕ್ಕು ಸುದ್ದಿಯಾಗುವವರು ಎರಡನೆಯ ಸ್ತರದವರು. ಮೊದಲನೆಯ ಸ್ತರದವರಿಗೆ ಬಚಾವಾಗುವ ಎಲ್ಲ ಸಾಧ್ಯತೆಗಳಿರುವದರಿಂದ ಅನೇಕ ಬಾರಿ ಅವರು ಎಸಗಿರುವ ಪ್ರಮಾದಗಳು ದಾಖಲಾಗುವದೇ ಇಲ್ಲ.

ಇತ್ತೀಚೆಗೆ ರಾಷ್ಟ್ರೀಯ ಅಪರಾಧಿ ದಾಖಲೆಗಳ ಸಂಸ್ಥೆ [ಎನ್.ಸಿ.ಆರ್.ಬಿ.] 2012 ರಲ್ಲಿ ನಮ್ಮ ದೇಶದಲ್ಲಿ ಮಹಿಳೆಯ ಮೇಲೆ ಜರುಗಿದ ದೌರ್ಜನ್ಯಗಳ ಬಗ್ಗೆ ಅಂಕಿ ಅಂಶಗಳನ್ನು ಹೊರಹಾಕಿತು. ನಾವು ನಿಜವಾಗಿಯೂ ನಾಗರಿಕ ಸಮಾಜದಲ್ಲಿಯೇ ಬದುಕಿರುವೆವಾ..? rape-illustrationಎಂದು ಪ್ರಶ್ನೆ ಮಾಡುವ ಮಟ್ಟಿಗೆ ಆ ಅಂಕಿ- ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. 2012 ರಲ್ಲಿ ಮಹಿಳೆಯ ಮೇಲೆ ಜರುಗಿದ ಒಟ್ಟು ದೌರ್ಜನ್ಯಗಳ ಪ್ರಮಾಣ 2,44,270 ರಷ್ಟಿದೆ. ಆದರೆ 2011 ರ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಸುಮಾರು 15620 ಪ್ರಕರಣಗಳು ಹೆಚ್ಚಾಗಿವೆ. ಇನ್ನು ಈ ಬಗೆಯ ದೌರ್ಜನ್ಯಗಳಲ್ಲಿ ಮೊಟ್ಟ ಮೊದಲ ಸ್ಥಾನ ಪಶ್ಚಿಮ ಬಂಗಾಲದ್ದಾಗಿದ್ದರೆ [30942] ಎರಡು ಹಾಗೂ ಮೂರನೇಯ ಸ್ಥಾನದಲ್ಲಿ ಆಂದ್ರಪ್ರದೇಶ ಮತ್ತು ಉತ್ತರ ಪ್ರದೇಶಗಳಿವೆ. ಇನ್ನು 53 ಪ್ರಮುಖ ನಗರಗಳನ್ನಿಟ್ಟುಕೊಂಡು ಮಾತನಾಡುವದಾದರೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೆಯ ಸ್ಥಾನದಲ್ಲಿದೆ. ದೆಹಲಿಯಲ್ಲಿ ಕಳೆದ ವರ್ಷ 5194 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದರೆ ಬೆಂಗಳೂರಲ್ಲಿ 2263 ರಷ್ಟು ಪ್ರಕರಣಗಳು ಬಯಲಾಗಿವೆ. ಬಲತ್ಕಾರದ ಪ್ರಕರಣಗಳಂತೂ ಬೆಚ್ಚಿ ಬೀಳಿಸುವಂತೆ ಎಲ್ಲ ವಯೋಮಾನದ ಮಹಿಳಾ ಸಮೂಹವನ್ನು ಬಾಧಿಸುತ್ತಿದೆ. ಕಳೆದ ವರ್ಷ ಸುಮಾರು 24923 ರಷ್ಟು ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಇದರ ಎರಡು ಮೂರು ಪಟ್ಟು ದಾಖಲೆಯಾಗದೇ ಉಳಿದ ಪ್ರಕರಣಗಳಿರುತ್ತವೆ. ಇನ್ನೊಂದು ಅಚ್ಚರಿಯ ಮತ್ತು ವಿಷಾದದ ಸಂಗತಿಯೆಂದರೆ ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿ ಬಹುತೇಕವಾಗಿ ಪರಿಚಿತನೇ ಆಗಿರುವ ಸಾಧ್ಯತೆಗಳು ಹೆಚ್ಚು. ಸುಮಾರು 98 ಪ್ರತಿಶತ ಆರೋಪಿಗಳು ಅತ್ಯಾಚಾರದ ಪ್ರಕರಣದಲ್ಲಿ ಆ ಹುಡುಗಿಗೆ ಪರಿಚಯದವರೇ ಆಗಿರುತ್ತಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

2012 ರ ನಂತರ ನಮ್ಮ ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಅನೇಕ ಸುಧಾರಣಾವಾದಿಗಳ, ಸ್ತ್ರೀವಾದಿಗಳ, ಮಹಿಳಾ ವಿಮೋಚನಾಕಾರರ ಗಮನ ಸೆಳೆದಿರುವದಿದೆ. ಇಲ್ಲಿಯವರೆಗೆ ಸುದ್ದಿಯೇ ಆಗದ ರೀತಿಯಲ್ಲಿ ಘಟಿಸಿ ಹೋಗುವ ಅತ್ಯಾಚಾರದ ಪ್ರಕರಣಗಳು ಈಗೀಗ ದಾಖಲಾಗುತ್ತಿವೆ, ಕಾನೂನಿನ ಕಣ್ಣಿಗೆ ಬೀಳುತ್ತಿವೆ. ಹೀಗಿರುವಾಗಲೂ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಿಲ್ಲ. ಕಳೆದ ವರ್ಷ ನಮ್ಮ ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ನಡೆದ ರಾಜ್ಯಗಳು ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶ; sowjanya-rape-murderಅನುಕ್ರಮವಾಗಿ 3425, 2049, 2046 ಮತ್ತು 1963. ಕೇವಲ ಅತ್ಯಾಚಾರ ಮಾತ್ರವಲ್ಲದೇ 1961 ರ ಸಂದರ್ಭದಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದರೂ ವರದಕ್ಷಿಣೆಯ ಸಾವು, ಹಿಂಸೆಯ ಪ್ರಮಾಣಗಳೇನೂ ಕಡಿಮೆಯಾಗಿಲ್ಲ.2012ರಲ್ಲಿ ಸುಮಾರು 106500 ವರದಕ್ಷಿಣೆಯ ಹಿಂಸೆ ಮತ್ತು ಸಾವಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಇಂಥಾ ಸಾವು ನೋವುಗಳು ಸಂಭವಿಸಿರುವದಿದೆ. ದೆಹಲಿ ಹಾಗೂ ಬೆಂಗಳೂರು ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಸುಮಾರು 100 ವರದಕ್ಷಿಣೆಯ ಸಾವುಗಳು ಘಟಿಸಿದ್ದರೆ, ಬೆಂಗಳೂರಲ್ಲಿ ಅದರ ಅರ್ಧದಷ್ಟು ವರದಕ್ಷಿಣೆಯ ಸಾವುಗಳು ವರದಿಯಾಗಿವೆ.

ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಕರಣಗಳು ಜಾಸ್ತಿಯಾಗುತ್ತಿವೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಉದಾರವಾದಿ ಸ್ತ್ರೀವಾದಿಗಳ ಪ್ರಕಾರ ಮಹಿಳೆಯ ದೌರ್ಜನ್ಯಗಳ ನಿವಾರಣೆಯಲ್ಲಿ ಕ್ರಾಂತಿ, ಚಳುವಳಿಗಿಂತಲೂ ಮುಖ್ಯವಾಗಿ ಸುಧಾರಣಾವಾದಿ ನಿಲುವು ಮತ್ತು ಮನ:ಪರಿವರ್ತನೆ ಮುಖ್ಯ ಎನ್ನುವದಿದೆ. ಅದು ನಿಜ. ಪುರುಷನನ್ನು ಹೊರಗಿಟ್ಟು ಈ ಬಗೆಯ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸಾಧ್ಯವಿಲ್ಲ. ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಜೊತೆಗೆ ಅವರ ಮನ:ಪರಿವರ್ತನೆಯೂ ಅಷ್ಟೇ ಮುಖ್ಯ.