ಸರ್ವೇಗಳು, ಜನಾಭಿಪ್ರಾಯ, ಸ್ಥಾನಗಳು, ಆಮ್ ಆದ್ಮಿ ಪಾರ್ಟಿ…


– ರವಿ ಕೃಷ್ಣಾರೆಡ್ದಿ


 

ಕಳೆದ ನಾಲ್ಕೈದು ದಿನದಿಂದ CNN-IBN ಮತ್ತು ಹಿಂದು ಪತ್ರಿಕೆಯವರು ದೇಶದಲ್ಲಿ ಇಂದು ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗಳಿಸುತ್ತದೆ ಎನ್ನುವಂತಹ ಸರ್ವೆ ನಡೆಸಿ, ಅದನ್ನು CNN-IBN ಚಾನೆಲ್‌ನಲ್ಲಿ ಮತ್ತು ಹಿಂದು ಪತ್ರಿಕೆಯಲ್ಲಿ ವಿವರಣೆ ಮತ್ತು ಚರ್ಚೆಗೆ ಒಳಪಡಿಸಿದ್ದವು. ನೆನ್ನೆ ರಾತ್ರಿ CNN-IBN ನಲ್ಲಿ ರಾಜ್‌ದೀಪ್ ಸರ್ದೇಸಾಯಿ ನಡೆಸಿಕೊಟ್ಟ ಕೊನೆಯ ಸುತ್ತಿನ ಚರ್ಚೆ ಚೆನ್ನಾಗಿತ್ತು. ಸಂದೀಪ್ ಶಾಸ್ತ್ರಿ, ರಾಮಚಂದ್ರ ಗುಹ, ಯೋಗೇಂದ್ರ ಯಾದವ್, ಸ್ವಪನ್ ದಾಸ್‌ಗುಪ್ತ, ಸುರ್ಜಿತ್ ಭಲ್ಲ ಪಾಲ್ಗೊಂಡಿದ್ದ ಈ ಚರ್ಚೆ ಅಧಿಕಾರವಿರೋಧಿ ಅಲೆ, ಭ್ರಷ್ಟಾಚಾರ, ಮೋದಿ, ರಾಹುಲ್, ಒಕ್ಕೂಟ ವ್ಯವಸ್ಥೆ, 2009 ರ ಚುನಾವಣಾ ಫಲಿತಾಂಶ, ಈಗಿನ ಪ್ರೊಜೆಕ್ಷನ್, ಮುಂತಾದುವುಗಳ ಬಗ್ಗೆ ಇತ್ತು. ಈ ಸರ್ವೆ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಗುಂಪಿಗೂ ಬಹುಮತದ ಹತ್ತಿರ ಬರುವುದಿರಲಿ, 200 ಸ್ಥಾನಗಳ ಹತ್ತಿರಕ್ಕೂ ಹೋಗಲಾಗುವುದಿಲ್ಲ. ಇದು, ಇಂದಿನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಸರ್ವೆಯ ವಿವರ:
AllIndiaPicture-2014Likeabilitypicture_2013

ಇಲ್ಲಿ ಸಂಸದ ಸ್ಥಾನಗಳ ವಿಚಾರಕ್ಕೆ ಬಂದಾಗ ಅದನ್ನು ಆಯಾಯ ಪಕ್ಷ ತೆಗೆದುಕೊಳ್ಳಬಹುದಾದ ಶೇಕಡಾವಾರು ಮತಪ್ರಮಾಣದ ಮೇಲಷ್ಟೇ ಆಧರಿಸದೆ ಇತರೆ ಸಂಗತಿಗಳ ಮೇಲೆಯೂ ಆಧರಿಸಿ ನಿರ್ಧರಿಸಿದ್ದಾರೆ ಎನ್ನಿಸುತ್ತದೆ. ಅಷ್ಟಾದರೂ ಸರ್ವೆಗಳು ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ಹೇಳುವುದು ನೈಜ ಫಲಿತಾಂಶಕ್ಕೆ ಹತ್ತಿರವೂ ಬರುತ್ತಿಲ್ಲ. ಸರ್ವೇಗಳು ಒಂದು ಪಕ್ಷ ಪಡೆಯಬಹುದಾದ ಶೇಕಡಾವಾರು ಮತಪ್ರಮಾಣವನ್ನು ಹೆಚ್ಚುಕಮ್ಮಿ ಮತದಾನದ ನಂತರ ಸಿಗುವ ಅಂಕಿಅಂಶಗಳಿಗೆ ಹತ್ತಿರಹತ್ತಿರ ಇರುವಂತೆ ಕೊಡಬಹುದೆ ಹೊರತು, ಪಕ್ಷಗಳು ಪಡೆಯುವ ಸ್ಥಾನಗಳನ್ನಲ್ಲ.

ಸರ್ವೆಯಲ್ಲಿಯ ಕೆಲವೊಂದು ವಿವರಗಳ ಬಗ್ಗೆ ಮಾತನಾಡುವುದಾದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇಕಡಾವಾರು ಮತಪ್ರಮಾಣ ಹೆಚ್ಚಿಸಿಕೊಳ್ಳಬಹುದಾದರೂ, ಈ ಸರ್ವೆ ಹೇಳುವಂತೆ ಆ ರಾಜ್ಯದಲ್ಲಿ ಸುಮಾರು 30-40 ಸ್ಥಾನಗಳನ್ನು ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಬಿಎಸ್‌ಪಿ ಜೊತೆಗಿದ್ದ ಬ್ರಾಹ್ಮಣರು ಬಿಜೆಪಿಯತ್ತ ವಾಲುತ್ತಿರುವಂತೆ ಕಾಣಿಸಿದರೂ, ಅಲ್ಲಿಯ ವಿಧಾನಸಭೆಯಲ್ಲಿ ಎರಡು ದೊಡ್ಡ ಪಕ್ಷಗಳಾಗಿರುವ SJP ಮತ್ತು BSPಗಿಂತ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎನ್ನುವುದರ ಬಗ್ಗೆ ಸಂಶಯಪಡಬೇಕಿದೆ. ಆದರೆ, ಹೀಗೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎನ್ನುವ ವಿಚಾರವನ್ನು ಪಕ್ಕಕ್ಕಿಟ್ಟರೆ ಈ ಸರ್ವೆ ಸಮಾಜ ಯಾವ ರೀತಿ ಚಿಂತಿಸುತ್ತಿದೆ ಎನ್ನುವ ಬಗ್ಗೆ ಸ್ಪಷ್ಟ ಸಂಕೇತಗಳನ್ನು ಕೊಡುತ್ತಿದೆ. ದೇಶದಾದ್ಯಂತ UPA-2 ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ವಿಶ್ವಾಸವಿಲ್ಲ. ಆದರೆ ಯಾವ ಗುಂಪಿನ ಬಗ್ಗೆಯೂ ಬಹುಸಂಕ್ಯಾತ ಮತದಾರರಿಗೆ ವಿಶ್ವಾಸವಿಲ್ಲ. ಕಾಂಗ್ರೆಸ್ ಮತ್ತು ಯುಪಿಎಯ ವೈಫಲ್ಯದ ಕಾರಣಕ್ಕೆ ಮತ್ತು ಭ್ರಷ್ಟಾಚಾರದ ಕಾರಣಕ್ಕೆ ಇತರೆ ಪಕ್ಷಗಳು, ಅದರಲ್ಲೂ ಬಿಜೆಪಿಗೆ ಅನುಕೂಲವಾಗುತ್ತಿದೆ ಎನ್ನುವುದೂ ಉತ್ತರ ಪ್ರದೇಶದ ಹಿನ್ನೆಲೆಯಲ್ಲಿ ನೋಡಿದಾಗ ಮೇಲ್ನೋಟಕ್ಕೆ ಕಾಣಿಸುತ್ತದೆ.

ಮತ್ತು, ಮೋದಿಯಿಂದಾಗಿ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿದೆ ಎನ್ನುವುದಕ್ಕೂ ಈ ಸರ್ವೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕೊಡುತ್ತಿಲ್ಲ. ಗುಜರಾತ್ ಮತ್ತು ಉತ್ತರ ಪ್ರದೇಶ ಬಿಟ್ಟರೆ ಮಿಕ್ಕ ರಾಜ್ಯಗಳಲ್ಲಿ ಬಿಜೆಪಿಗೆ ಆಯಾಯ ರಾಜ್ಯಗಳ ನಾಯಕತ್ವ ಮತ್ತು ಕಾರ್ಯಕರ್ತರಿಂದ ಸ್ಥಾನ ಭದ್ರವಾಗಿದೆಯೇ ಹೊರತು ಮೋದಿ ಕಾರಣಕ್ಕಲ್ಲ. ಬಹುಶಃ ಅದ್ವಾನಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರೂ ಬಿಜೆಪಿಯ ಸ್ಥಿತಿ ಈಗಿರುವುದಕ್ಕಿಂತ ಕಡಿಮೆಯೇನೂ ಆಗುತ್ತಿರಲಿಲ್ಲ. ದಕ್ಷಿಣ ಭಾರತದ ಜನ ಮೋದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದೂ ಸರ್ವೆಯಲ್ಲಿ ವ್ಯಕ್ತವಾಗಿದೆ.

ನೆನ್ನೆ ರಾತ್ರಿ ನಡೆದ ಚರ್ಚೆಯಲ್ಲಿ ಒಬ್ಬರು ಬಹಳ ಮುಖ್ಯವಾದ ವಿಷಯವನ್ನು ಎತ್ತಿ ತೋರಿಸಿದರು. ಲೋಕಸಭಾ ಚುನಾವಣೆ ಕೇಂದ್ರ ಸರ್ಕಾರ ರಚನೆಗಾಗಿ ನಡೆಸುವ ರಾಷ್ಟ್ರೀಯ ಚುನಾವಣೆಯೇ ಆದರೂ, ಆಯಾಯ ರಾಜ್ಯದ ವಿಷಯ ಮತ್ತು ಪೈಪೋಟಿಯ ಮೇಲೆ ಯಾರು ಗೆಲ್ಲುತ್ತಾರೆ ಎನ್ನುವುದು ನಿರ್ಧಾರವಾಗುತ್ತದೆಯೆ ಹೊರತು ಯಾವುದೇ ರಾಷ್ಟ್ರೀಯ ನಾಯಕತ್ವವಾಗಲಿ ಅಥವ ರಾಷ್ಟ್ರೀಯ ವಿಷಯದ ಆಧಾರದ ಮೇಲಾಗಲಿ ಅಲ್ಲ. ಕಳೆದ ಎರಡು-ಮೂರು ಚುನಾವಣೆಗಳಲ್ಲಿಯೂ ಹೀಗೆ ಆಗಿದೆ. 2009 ರ ಚುನಾವಣೆ ಆದನಂತರ ನಾನು ಬರೆದಿದ್ದ ಲೇಖನವೊಂದರಲ್ಲಿ ಈ ವಿಷಯದ ಬಗ್ಗೆ ಹಲವು ರಾಜ್ಯಗಳ ಉದಾಹರಣೆ ತೆಗೆದುಕೊಂಡು ವಿಶ್ಲೇಷಿಸಿದ್ದೆ. (ಆ ಲೇಖನವನ್ನು ಕೆಳಗಡೆ ಕೊಡಲಾಗಿದೆ.)

ಬಹುತೇಕ ಸ್ಥಾನಗಳಲ್ಲಿ ಅಭ್ಯರ್ಥಿಗಳು ಹೇಗೆ ಗೆಲ್ಲುತ್ತಾರೆ ಮತ್ತು ಪಕ್ಷ ಎನ್ನುವುದು ಹೇಗೆ ಗೌಣವಾಗುತ್ತದೆ ಎನ್ನುವುದಕ್ಕೆ ಕೆಲವು ಗೊತ್ತಿರುವ ವಿಚಾರಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ಎರಡು ತಿಂಗಳ ಹಿಂದೆ ನಡೆದ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಎಂಬಂತೆ ನಾಯಕಿಯೊಬ್ಬರು ಸೋತುಹೋದರು. ಅದಕ್ಕೆ ಆ ನಾಯಕಿಯ ಪಕ್ಷಕ್ಕೆ ಸೇರಿದ ಒಬ್ಬರು ನನಗೆ ಹೇಳಿದ ವಿಷಯ ಏನೆಂದರೆ ಆ ನಾಯಕಿಗೆ ಕಡೆಯ ಎರಡು-ಮೂರು ದಿನಗಳಲ್ಲಿ ಹಣವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಕಾರಣ ಏನೆಂದರೆ ಆ ಕ್ಷೇತ್ರಕ್ಕೆಂದು ಬಂದಿದ್ದ ಹಣವನ್ನು ಈಚೆಗೆ ತೆಗೆಯಲಾಗದ ಸ್ಥಿತಿ. ಯಾವ ವಾಹನದಲ್ಲಿ ಹಣ ಬಂದಿತ್ತೊ ಆ ವಾಹನ ತನ್ನ ಜಾಗ ಬಿಟ್ಟು ಹೊರಗೆ ಬಂದಿದ್ದರೆ ಐದಾರು ಕೋಟಿ ರೂಪಾಯಿಗಳ ಹಣ ಸೀಜ್ ಆಗುವ ಪರಿಸ್ಥಿತಿ. ಆದರೆ ಈ ಸಮಸ್ಯೆ ಸೈಕಲ್‌ನಲ್ಲಿ ಹಣ ಸಾಗಿಸುವವರಿಗೆ ಇಲ್ಲದೆ ಆ ನಾಯಕಿ ಸೋಲಬೇಕಾಯಿತು. ಕಡೆಯ ದಿನ ಹಣದ ಮುಖ ನೋಡಿ ಓಟು ಹಾಕುವ ನಾಲ್ಕೈದು ಸಾವಿರ ಜನ ಉಲ್ಟಾ ಹೊಡೆದಿದ್ದರೂ ಇವರು ಗೆದ್ದುಬಿಡುತ್ತಿದ್ದರು. ಹೀಗೆ, ಇಂದಿನ ಬಹುತೇಕ ಚುನಾವಣೆಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ದುರದೃಷ್ಟವಶಾತ್ ಆಯಾಯ ಕ್ಷೇತ್ರ, ಅಲ್ಲಿಯ ಅಭ್ಯರ್ಥಿಗಳು, ಸಂಪನ್ಮೂಲ ಸಂಗ್ರಹಣೆ ಮತ್ತು ನಿರ್ವಹಣೆ, ಜಾತಿ, ಇತ್ಯಾದಿಯಂತಹ ಸ್ಥಳೀಯ ವಿಷಯಗಳ ಮೇಲೆ ನಿರ್ಧರಿಸಲ್ಪಡುತ್ತಿದೆಯೇ ಹೊರತು ಒಂದು ಪಕ್ಷದ ನೀತಿ-ನಿಲುವು-ಸಿದ್ಧಾಂತಗಳ ಮೇಲಲ್ಲ. ಇದಕ್ಕೆ ಅಪವಾದಗಳು ಇಲ್ಲ ಎಂದಲ್ಲ. ಕಡಿಮೆ ಅಷ್ಟೇ. ಹಾಗಾಗಿಯೇ ಮಾಧ್ಯಮಗಳು ನಡೆಸುವ ಸರ್ವೇಗಳಲ್ಲಿ ಸ್ಥಾನಗಳ ಸಂಖ್ಯೆ ಏರುಪೇರಾಗುವುದು.

ಇನ್ನು, ಇಂದು ಕರ್ನಾಟಕದಲ್ಲಿ ಹೊಸದೊಂದು ರಾಜಕೀಯ ಪಕ್ಷದ ಔಪಚಾರಿಕ ಉದ್ಘಾಟನೆ ಆಗುತ್ತಿದೆ. aravind-kejriwalಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ಇಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ತಮ್ಮ ಸರಳತೆ, ಸ್ಪಷ್ಟತೆ, ಹೋರಾಟ, ಪ್ರಾಮಾಣಿಕತೆಯಿಂದಾಗಿ ದೇಶದಲ್ಲಿ ಒಂದು ಮಟ್ಟಕ್ಕೆ ಗುರುತಾಗಿರುವಂತಹವರು. ದೆಹಲಿಯಲ್ಲಿ ಅವರ ಪಕ್ಷ ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಲ್ಲಿ ಅದು ಬಡವರ ಮತ್ತು ಕೆಳಮಧ್ಯಮವರ್ಗದವರಿಗೆ ತೊಂದರೆ ಕೊಡುವ ದೈನಂದಿನ ವಿಷಯಗಳನ್ನೂ ಇಟ್ಟುಕೊಂಡು ಸಂಘಟನೆ ಮಾಡುತ್ತಿದೆ. ಈ ಸಾರಿಯ ದೆಹಲಿ ವಿಧಾನಸಭಾ ಚುನಾವಣೆ ಆಮ್ ಆದ್ಮಿ ಪಾರ್ಟಿಯ ಪಾಲ್ಗೊಳ್ಳುವಿಕೆಯ ಕಾರಣವಾಗಿ ಬಹಳ ಮುಖ್ಯವಾದ ಚುನಾವಣೆ ಎನ್ನುವುದು ನನ್ನ ಅಭಿಪ್ರಾಯ. ಬಹುಶಃ ದೇಶದ ಚುನಾವಣಾ ರಾಜಕೀಯ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ದಿಶೆಯನ್ನು ಅದು ತೋರಿಸಲಿದೆ. ಕೇಜ್ರಿವಾಲರ ಪಕ್ಷಕ್ಕೆ ದೆಹಲಿ ಬಿಟ್ಟರೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ ಇದೆ. ಆ ಪಕ್ಷದ ಪ್ರಕಟಣೆ ತಿಳಿಸಿರುವಂತೆ ನಮ್ಮ ರಾಜ್ಯದಿಂದ ಕೇವಲ ಅಂತರ್ಜಾಲದ ಮೂಲಕ ಆ ಪಕ್ಷಕ್ಕೆ ನೀಡಿರುವ ದೇಣಿಗೆಯೇ 42 ಲಕ್ಷ ರೂಪಾಯಿಯನ್ನು ದಾಟಿದೆಯಂತೆ (online donations). ಉತ್ತಮ ರಾಜಕೀಯ ವ್ಯವಸ್ಥೆಯನ್ನು ಬಯಸುವವರಿಗೆ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಆಯ್ಕೆ ಸೃಷ್ಟಿಯಾಗುತ್ತಿರುವುದು ಸಂತಸದ ವಿಚಾರ. ಈ ಪಕ್ಷದ ಕರ್ನಾಟಕದ ನಾಯಕತ್ವದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಅದು ಆಮ್ ಆದ್ಮಿ ಪಾರ್ಟಿಯ ಕೇಂದ್ರ ನಾಯಕತ್ವ ಇಟ್ಟುಕೊಂಡಿರುವ ಬದ್ದತೆ ಮತ್ತು ಸಾಮಾಜಿಕ ಕಾಳಜಿಯ ಚೌಕಟ್ಟಿನೊಳಗೇ ಕೆಲಸ ಮಾಡುತ್ತದೆ ಎನ್ನುವ ಭರವಸೆ ಅರವಿಂದ್ ಕೇಜ್ರಿವಾಲ್ ಮತ್ತವರ ತಂಡದ ಕಾರಣಕ್ಕಾಗಿ ಇಟ್ಟುಕೊಳ್ಳಬಹುದಾಗಿದೆ. ಒಳ್ಳೆಯ ಜನ ರಾಜಕೀಯಕ್ಕೆ ಬಂದು ಕೆಲಸ ಮಾಡಲು ಇದು ಸೂಕ್ತ ಸಮಯ. ಕರ್ನಾಟಕದಲ್ಲಿ ಲೋಕ್‍ಸತ್ತಾ, ಎಡಪಕ್ಷಗಳು, ಆಮ್ ಆದ್ಮಿ ಪಾರ್ಟಿ, ಹೀಗೆ ಹಲವು ಪರ್ಯಾಯಗಳು ಜನರ ಮುಂದಿವೆ. ಜವಾಬ್ದಾರಿಯುತ ಜನ ಕೆಲಸ ಮಾಡಲು ಮತ್ತು ನಾಯಕತ್ವ ಕೊಡಲು ಮುಂದಾಗಬೇಕಿದೆ.


ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ… ಕ್ಷಮಿಸಿ…
[ಮೇ 18, 2009]

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ ‘ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.’ ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ ಕಂಡ ನಿಸ್ವಾರ್ಥಿ ಮತ್ತು ಅತ್ಯುತ್ತಮ ಪ್ರಧಾನಿ. ಅನೇಕ ಕಾಂಗ್ರೆಸ್ ನಾಯಕರು ಅಧಿದೇವರುಗಳ ಮುಂದೆ ಮಂಡಿಯೂರುವ, ಸಾಷ್ಟಾಂಗ ಪ್ರಣಾಮ ಹಾಕುವ ಪರಿಸರದಲ್ಲೂ ತಮ್ಮ ಮತ್ತು ದೇಶದ Diginity ಉಳಿಸಿಕೊಂಡ ವ್ಯಕ್ತಿ. ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಘನತೆಯಿಂದ ಕೂಡಿದ ನಡವಳಿಕೆ. ಯಾವುದೇ ಸಂದರ್ಭದಲ್ಲೂ ಪ್ರಧಾನಿಯ ಸ್ಥಾನಕ್ಕೆ ಅಗೌರವ ಬರುವಂತಹ ನಡವಳಿಕೆಯನ್ನು, ಧಾರ್ಷ್ಟ್ಯವನ್ನು ಅವರು ತೋರಿಸಿಲ್ಲ. ಕೊನೆಗೆ ಅವರ ಯುವ ಮಕ್ಕಳೂ ಅದನ್ನು ಮಾಡಲಿಲ್ಲ. ಅಹಂಕಾರ ಮತ್ತು ಠೇಂಕಾರವೆ ಅಧಿಕಾರ ಇರುವುದರ ಕುರುಹು ಎಂಬಂತೆ ಆಗಿಹೋಗಿರುವ ಭಾರತದ ಸಂದರ್ಭದಲ್ಲಿ (ಅದರಲ್ಲೂ ವಿಶೇಷವಾಗಿ “ರಾಜಕುಮಾರ’ರ ಪ್ರಜಾಪ್ರಭುತ್ವದಲ್ಲಿ) ಈ ಎಲ್ಲಾ ವಿಷಯಗಳು ನಮ್ಮ ಗಮನ ಸೆಳೆಯಬೇಕು.

2009 ರ ಚುನಾವಣೆಯ ಫಲಿತಾಂಶ ಬಂದಿದೆ. ಜಾತ್ಯಾತೀತ ಸರ್ಕಾರ ಬರಬೇಕು ಮತ್ತು ನಿಸ್ವಾರ್ಥಿ, ಅರ್ಹ, ಯೋಗ್ಯರಾದ, ಭಾರತ ಮುಂದೆಯೂ ಹೆಮ್ಮೆಪಟ್ಟುಕೊಳ್ಳಬಹುದಾದ ಡಾ. ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನನ್ನಂತಹವರ ಆಶಾವಾದ ಒಂದು ರೀತಿಯಲ್ಲಿ ನೇರವೇರಿದೆ. ಇದು ಖಂಡಿತವಾಗಿಯೂ ಭಾರತದ ಜನ UPA ಅನ್ನು ಮತ್ತು ಡಾ. ಸಿಂಗ್‌ರನ್ನು ಪುರಸ್ಕರಿಸಿರುವ ರೀತಿ ಎಂದು ಭಾವಿಸಲು ನಾನು ಬಹುವಾಗಿಯೇ ಇಷ್ಟಪಡುತ್ತೇನೆ. I really like to believe that. ಆದರೆ ವಾಸ್ತವ ಹಾಗೆ ಆಗಿಲ್ಲ ಎಂದು ನನ್ನ ಸೀಮಿತ ಅವಲೋಕನದಲ್ಲಿ ನನಗೆ ಗಾಢವಾಗಿ ಅನ್ನಿಸುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಜನ ಮತಚಲಾಯಿಸಿರುವ ರೀತಿಯನ್ನು ನೋಡಿದರೆ, ಬಹುಪಾಲು ಕಡೆ ಚುನಾವಣೆ ಆಗಿರುವುದು ಸ್ಥಳೀಯ ವಿಷಯಗಳ ಮೇಲೆ ಮತ್ತು ಅಲ್ಲಿಯ ಪಕ್ಷಗಳ ಸಂಘಟನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ತಾಕತ್ತಿನ ಮೇಲೆ.

ಹಾಗಿದ್ದರೆ UPA ಗೆಲ್ಲಲು ಹೇಗೆ ಸಾಧ್ಯ? ಇವತ್ತಿಗೂ ಭಾರತದ ಬಹುಪಾಲು ಭಾಗದಲ್ಲಿ ಬೇರಿರುವ ಪಕ್ಷ ಎಂದರೆ ಕಾಂಗ್ರೆಸ್, ಮತ್ತು ಈ ಸಲ ಸ್ಥಳೀಯ Factors ಕಾಂಗ್ರೆಸ್‌ಗೆ ಪೂರಕವಾಗಿದ್ದವು. ಹಾಗಾಗಿ ಜನ ಸಹಜವಾಗಿಯೆ ಆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಕಳೆದ 2004 ರ ಚುನಾವಣೆಯಲ್ಲಿ ಆಗಿದ್ದೂ ಇದೆ. ಇದು ಒಂದು ರಾಷ್ಟ್ರೀಯ ಚುನಾವಣೆ ನಡೆಯುವ ರೀತಿ ಅಲ್ಲ ಮತ್ತು ಅದು ಒಟ್ಟು ದೇಶದ ಹಿತಕ್ಕೆ ಒಳ್ಳೆಯದಲ್ಲ. ಜನ ಯಾವ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕಿದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಟ್ಟುಕೊಳ್ಳದೆ, ಬಹುಪಾಲು ಸ್ಥಳೀಯ ವಿಷಯ/ಚಿತಾವಣೆ/ಪ್ರಲೋಭನೆ/ಪ್ರಭಾವಗಳ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ. ಹಾಗೆ ಮಾಡದೆ, ಈ ಬಾರಿ ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರ್ಧರಿಸಿದ್ದೇ ಆಗಿದ್ದರೆ, UPA ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕಿತ್ತು; ಹಲವಾರು ಜನ ಸುಲಭವಾಗಿ ಆರಿಸಿಬರಬೇಕಿತ್ತು; ಸೋತ ಹಲವರು ಗೆಲ್ಲಬೇಕಿತ್ತು; ಮತ್ತೊಂದಷ್ಟು ಗೆದ್ದವರು ಸೋಲಬೇಕಿತ್ತು.

ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಇಡೀ ದೇಶದ ಬಹುಪಾಲು ಜನ UPA ಎಂದರೆ ಇಲ್ಲಿ ಬಿಜೆಪಿ ಎಂದಿದ್ದಾರೆ. ಹಾಗೆ ಆಗಲು ಕಾರಣ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸಂಪನ್ಮೂಲಗಳು ಮತ್ತು ಸಂಘಟನೆ ಕಾರಣವೆ ಹೊರತು, ಜನರಿಗೆ ಇಲ್ಲಿ UPA ಯನ್ನು ಬೆಂಬಲಿಸಬಾರದು ಎಂಬ ಕಾರಣ ಅಲ್ಲವೆ ಅಲ್ಲ. ಚುನಾವಣೆಗಳಂತೂ ಈಗ ಒಂದು ವ್ಯವಸ್ಥಿತ ಆಟ. ಮೊದಲ ದಿನದಿಂದಲೆ ಹಣ ಹರಿಸಬೇಕು. ಚುನಾವನೆಯ ಹಿಂದಿನ ದಿನ ಪ್ರತಿ ಮತದಾರನ ಮನೆಗೆ ಆತನ ಕ್ರಮಸಂಖ್ಯೆಯ ಚೀಟಿ ಮುಟ್ಟಿಸಬೇಕು; ಪ್ರತಿ ಬೂತ್‌ನಲ್ಲೂ ಪೋಲಿಂಗ್ ಏಜೆಂಟ್‌ನ ವ್ಯವಸ್ಥೆ ಮಾಡಬೇಕು. ಬೂತಿನ ಹೊರಗಡೆ ಪಕ್ಷದ ವತಿಯಿಂದ ನಾಲ್ಕಾರು ಟೇಬಲ್ ಹಾಕಿಕೊಂಡು ಕೂತು ಮತ ಹಾಕಲು ಬರುವ ಮಂದಿಗೆ ಮತ್ತೊಮ್ಮೆ ಅವರ ಕ್ರಮಸಂಖ್ಯೆ ತೆಗೆದುಕೊಡಬೇಕು. ಮತ್ತೊಮ್ಮೆ ಪುಸಲಾಯಿಸಬೇಕು. ಕೆಲವೊಮ್ಮೆ ಮತದಾರರನ್ನು ಮನೆಗೇ ಹೋಗಿ ಕರೆದುಕೊಂಡು ಬರಬೇಕು. ಸಾಧ್ಯವಾದರೆ ಗುಂಪಿನ ನಾಯಕರಿಗೆ ಲಕ್ಷಾಂತರ ದುಡ್ಡು ಕೊಟ್ಟು ಮೊದಲೆ ಬುಕ್ ಮಾಡಿಕೊಳ್ಳಬೇಕು. ಒಂದೆರಡು ವಾರ ಒಂದಷ್ಟು ಜನರನ್ನು ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು. ಕಾರ್ಯಕರ್ತರನ್ನೊಳಗೊಂಡ ಪ್ರಚಾರದ ಇಡೀ Machinery ಯನ್ನು ಪ್ರಚಾರದ ಅಷ್ಟೂ ದಿನ ಹಣಕಾಸಿಗೆ ತೊಂದರೆ ಆಗದಂತೆ ನೊಡಿಕೊಳ್ಳಬೇಕು. ಮತ್ತೆ ಇದೆಲ್ಲದರಿಂದ ಹೊರತಾದದ್ದು ಜಾತಿ ಲೆಕ್ಕಾಚಾರಗಳು ಮತ್ತು ಹಣ/ಸಾರಾಯಿ/ವಸ್ತು ಹಂಚಿಕೆಗಳು. ಅಮೆರಿಕದ ಪುಟ್‌ಬಾಲ್ ಟೀಮಿನ ಕೋಚ್‌ಗಳು ಮಾಡುವ ಪ್ಲಾನಿಂಗ್‌ನಂತೆ ನಮ್ಮ ಚುನಾವಣೆಗಳನ್ನು ಎದುರಿಸುವವರೂ ಎಲ್ಲವನ್ನೂ ಪಕಡ್‌‍ಬಂಧಿಯಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಈ ಎಲ್ಲವನ್ನೂ ಬೇರೆ ಮಿಕ್ಕ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಮಾಡುವ ಮಟ್ಟ ಮುಟ್ಟಿಕೊಂಡಿದೆ. ಹಾಗಾಗಿ ಸುಲಭವಾಗಿ ಗೆದ್ದಿದೆ. ಇದು ರಾಜ್ಯ ಬಿಜೆಪಿ ಪರ ಎಂದಾಗಲಿ, ಗೆದ್ದವರು ಸೋತವರಿಗಿಂತ ಅರ್ಹರು ಎಂದಾಗಲಿ, ಕರ್ನಾಟಕದ ಜನತೆಗೆ (ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಧ್ಯಮವರ್ಗಕ್ಕೆ) UPA ಅಪಥ್ಯವಾಗಲಿ ಎಂತಲ್ಲ.

ಇದೇ ಪರಿಸ್ಥಿತಿ ದೂರದ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಿದೆ. ಅಲ್ಲಿ ಇತ್ತೀಚೆಗೆ ತಾನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ಅಲ್ಲಿ ಇಲ್ಲಿಯ ಬಿಜೆಪಿ ತೊರಿಸಿರುವ ಸಾಧನೆಯನ್ನೆ ಅಲ್ಲಿಯ ಕಾಂಗ್ರೆಸ್ ಪಕ್ಷ ತೊರಿಸಿದೆ. ದೆಹಲಿಯೂ. ಇಲ್ಲೆಲ್ಲ ಅದು UPA ಗೆ ಪೂರಕವಾಗಿದೆ.

ಇನ್ನು ನೆರೆಯ ಆಂಧ್ರ, ತಮಿಳುನಾಡು, ಕೇರಳವನ್ನೆ ತೆಗೆದುಕೊಳ್ಳಿ. ಈ ಸಲ ಆಂಧ್ರದಲ್ಲಿ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧವಾಗಿ ಆಡಳಿತಾರೂಢ ವಿರೋಧಿ ಅಲೆ ಇರಲಿಲ್ಲ. ಇದ್ದದ್ದೆಲ್ಲ ಚಿರಂಜೀವಿಯ ಪಕ್ಷ ಕಾಂಗ್ರೆಸ್ ಓಟುಗಳನ್ನು ಒಡೆಯುತ್ತದೆಯೆ ಎನ್ನುವ ಸಂಶಯ. ಆದರೆ ಪ್ರಜಾರಾಜ್ಯಂ ಪಕ್ಷಕ್ಕೆ ಈಗಿನ ಚುನಾವಣೆಗಳನ್ನು ಎದುರಿಸಲು ಬೇಕಾದ (ಮೇಲೆ ಹೇಳಿದಂತಹ) ಸಂಘಟನೆ ಮತ್ತು ಕಾರ್ಯಕರ್ತರು ಇಲ್ಲದೆ ಅದು ಹಾಗೆ ಆಗಿಲ್ಲ. ಇನ್ನು ಅಲ್ಲಿಯ ಆಡಳಿತಾರೂಢ ಕಾಂಗ್ರೆಸ್‌ಗೆ ಇರುವ ಹಣದ ಸಂಪನ್ಮೂಲಗಳನ್ನು ಮಿಕ್ಕವರಿಗೆ ಸರಿಗಟ್ಟಲು ಆಗಿಲ್ಲ. (ಕಳೆದ ಸಾರಿಯ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹರಿದ ರಿಯಲ್ ಎಸ್ಟೇಟ್/ಗಣಿ ದುಡ್ಡು ನೆನಪಿಸಿಕೊಳ್ಳಿ. ಈ ಸಲ ಆಂಧ್ರದಲ್ಲಿ ಆಗಿರುವುದೂ ಅದೇ ರೀತಿ.) ಹಣ ಇದ್ದವರು, ಪಕ್ಷ ಸಂಘಟನೆ ಇದ್ದವರು, ಹಣ-ಅಧಿಕಾರ ಪ್ರಯೋಗಿಸಬಲ್ಲವರು ಗೆದ್ದಿದ್ದಾರೆ. ಹಾಗೆಯೆ ಗ್ರಾಮೀಣ ಮಟ್ಟದಲ್ಲಿ ಅಲ್ಲಿಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯವೂ ಕೆಲಸ ಮಾಡಿದೆ. ಹೀಗಾಗಿ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಗೆದ್ದಿದೆ. ಸಹಜವಾಗಿ ಕೇಂದ್ರದ UPA ಸಹ.

ತಮಿಳುನಾಡಿನಲ್ಲೂ ಸ್ಥಳೀಯ ವಿಷಯ, ಸಂಪನ್ಮೂಲಗಳೆ ಮುಖ್ಯವಾಗಿವೆ. ಅಲ್ಲಿಯೂ ಆಡಳಿತ ವಿರೋಧಿ ಅಲೆ ಇರಲಿಲ್ಲ. ಗುಜರಾತ್-ಚತ್ತೀಸ್‍ಗಡ್-ಜಾರ್ಖಂಡ್ ನಲ್ಲೂ ಹೀಗೆ ಆಗಿದೆ. ಬಿಹಾರದಲ್ಲಿ ಈ ವಿಷಯಗಳ ಜೊತೆಗೆ ನಿತೀಶ್ ಕುಮಾರರ ಆಡಳಿತವೂ ಅವರ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತಂದುಕೊಟ್ಟಿದೆ. ಒರಿಸ್ಸಾದಲ್ಲಂತೂ ಪಟ್ನಾಯಿಕರ ಬಿಜೆಡಿ ವಿಧಾನಸಭೆಗೆ ಮೂರನೆ ಎರಡರ ಬಹುಮತ ಪಡೆದುಕೊಂಡಿದ್ದಷ್ಟೆ ಅಲ್ಲದೆ ಲೋಕಸಭೆಗೂ ತನ್ನವರನ್ನೆ ಹೆಚ್ಚಿಗೆ ಕಳುಹಿಸಿದೆ. ಇನ್ನು ನೆರೆಯ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಹಣ-ಹೆಂಡ ಹೆಚ್ಚಾಗಿ ಹರಿಯದ ದೂರದ ಪಶ್ಚಿಮ ಬಂಗಾಳದಲ್ಲೂ ಇದೇ ವಿಷಯ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ಪಕ್ಷಗಳು ಹೆಚ್ಚುಕಮ್ಮಿ ಹಂಚಿಕೊಂಡಿವೆ.

ಹೀಗೆ ಯಾವ ರೀತಿ ನೋಡಿದರೂ ಸ್ಥಳೀಯ ವಿಷಯ/ಸಂಪನ್ಮೂಲ/ಸಂಘಟನೆ/ಬಲ ಮುಖ್ಯವಾಗಿದೆಯೆ ಹೊರತು ಇಡೀ ದೇಶ “ಇದು ಕೇಂದ್ರ ಸರ್ಕಾರವನ್ನು ಆರಿಸುವ ಚುನಾವಣೆ. ನಾವು ಅದೇ ರೀತಿ ಅದನ್ನು ನೋಡಬೇಕು,” ಎಂದು ಭಾವಿಸಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಇಂತಹ ಮನೋಭಾವ ಜಾಸ್ತಿ ಆಗುತ್ತಿದೆ. ಅಕ್ಷರಸ್ಥರು ಹೆಚ್ಚಿಗೆ ಆಗುತ್ತಿರುವಾಗಲೂ, ಯುವಜನತೆ ನಿರ್ಣಾಯಕವಾಗುತ್ತಿರುವಾಗಲೂ, ಈಗಲೂ ಮುಂದುವರೆಯುತ್ತಿರುವ ಈ ವಿದ್ಯಾಮಾನ ಭಾರತದ ಪ್ರಜಾಪ್ರಭುತ್ವದ Maturity ಯನ್ನು ತೋರಿಸುತ್ತಿಲ್ಲ.

ಹೀಗೆ ಆಗದೆ, ದೇಶದ ಜನ ಡಾ. ಸಿಂಗ್‌ರನ್ನು ಅವರ ಕೆಲಸಕ್ಕಾಗಿ ಪುರಸ್ಕರಿಸಿದ್ದರೆ ಅದರ ಕತೆಯೆ ಬೇರೆ ಇರಬೇಕಿತ್ತು. ಉತ್ತಮವಾಗಬೇಕಿತ್ತು. ಸದ್ಯದಲ್ಲಿ ಇದು ಒಂದು ಒಳ್ಳೆಯ ಸಿದ್ಧಾಂತ ಮತ್ತು ವ್ಯಕ್ತಿಯನ್ನು ಬೆಂಬಲಿಸಿದಂತೆ ಕಾಣುತ್ತಿದ್ದರೂ ದೂರಗಾಮಿಯಾಗಿ ಯೋಚಿಸಿದಾಗ ಭಾರತ ಪ್ರತಿಸಲವೂ ಇದೇ ರೀತಿ Lucky ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮಾತ್ರ ಇಲ್ಲಿ ವಿವೇಕವನ್ನು ಕಾಪಾಡಬಲ್ಲದು.

One thought on “ಸರ್ವೇಗಳು, ಜನಾಭಿಪ್ರಾಯ, ಸ್ಥಾನಗಳು, ಆಮ್ ಆದ್ಮಿ ಪಾರ್ಟಿ…

  1. Ananda Prasad

    ಲೋಕಸತ್ತಾ ಪಕ್ಷ, ಎಡ ಪಕ್ಷಗಳು, ಆಮ್ ಆದ್ಮಿ ಪಕ್ಷ ಹೀಗೆ ಪಕ್ಷಗಳು ಬೇರೆ ಬೇರೆಯಾಗಿ ಹೋಗುವುದರಿಂದ ಓಟುಗಳು ಹರಿದು ಹಂಚಿ ಹೋಗುತ್ತವೆ. ಇದರ ಬದಲು ಈ ಪಕ್ಷಗಳು ಪರಸ್ಪರ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಹೋದರೆ ಓಟುಗಳು ಹರಿದು ಹಂಚಿ ಹೊಗುವುದನ್ನು ತಪ್ಪಿಸಬಹುದು. ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಯಾವ ಮೈತ್ರಿಕೂಟಕ್ಕೂ ಬಹುಮತ ಸಿಗುವುದಿಲ್ಲ ಎಂಬ ಸ್ಥಿತಿ ಉಂಟಾಗುವ ಬಗ್ಗೆ ಸಮೀಕ್ಷೆಗಳು ಹೇಳುತ್ತವೆ. ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ತೃತೀಯ ರಂಗದ ಕೂಟವೊಂದು ಅಧಿಕಾರಕ್ಕೆ ಬಂದರೆ ದೇಶಕ್ಕೆ ಒಳ್ಳೆಯದು. ಆದರೆ ಅದಕ್ಕೆ ಪೂರಕವಾದ ಪರಿಸ್ಥಿತಿ ದೇಶದಲ್ಲಿ ಇಲ್ಲ. ತ್ರತೀಯ ರಂಗ ಯಶಸ್ವಿಯಾಗಬೇಕಾದರೆ ಎಡ ಪಕ್ಷಗಳು ಅದನ್ನು ತತ್ವಬದ್ಧವಾಗಿ, ಕಾರ್ಯಕ್ರಮಗಳ ಆಧಾರದಲ್ಲಿ ಸಂಘಟಿಸಬೇಕು ಹಾಗೂ ಎಡಪಕ್ಷಗಳು ಅದರ ನೇತೃತ್ವವನ್ನು ವಹಿಸಬೇಕು. ಅಂಥ ಪರಿಸ್ಥಿತಿ ರೂಪುಗೊಳ್ಳಬೇಕಾದರೆ ಎಡಪಕ್ಷಗಳು ಕನಿಷ್ಠ ನೂರು ಸ್ಥಾನಗಳನ್ನಾದರೂ ಗೆಲ್ಲುವ ಪರಿಸ್ಥಿತಿ ರೂಪುಗೊಳ್ಳಬೇಕು. ಹೀಗಾದಾಗ ಸದೃಢ ತ್ರತೀಯ ರಂಗ ರೂಪುಗೊಂಡು ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ. ಈಗಿನ ಎಡಪಕ್ಷಗಳ ಪರಿಸ್ಥಿತಿ ನೋಡಿದರೆ ದೇಶದಲ್ಲಿ ಎಡಪಕ್ಷಗಳು ಹಿನ್ನಡೆ ಅನುಭವಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಏನು ಕಾರಣ ಎಂದು ಎಡಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಎಡಪಕ್ಷಗಳು ಹರಿದು ಹಂಚಿ ಹೋಗುವುದರ ಬದಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಇಡೀ ದೇಶದಲ್ಲಿ ಮರುಸಂಘಟನೆ ಆಗಬೇಕಾದ ಅಗತ್ಯ ಇದೆ. ಭಾರತದ ಪ್ರಸಕ್ತ ಪಕ್ಷಗಳಲ್ಲಿ ಎಡಪಕ್ಷಗಳು ಹೆಚ್ಚು ಪ್ರಜಾಸತ್ತಾತ್ಮಕ ರಚನೆ ಮತ್ತು ಪ್ರಾಮಾಣಿಕತೆ ಹೊಂದಿದ್ದರೂ ಅವುಗಳನ್ನು ಜನ ಯಾಕೆ ಪ್ರೋತ್ಸಾಹಿಸುವುದಿಲ್ಲ ಎಂಬುದು ದೇಶದ ಹಿತದೃಷ್ಟಿಯಿಂದ ಯೋಚಿಸಬೇಕಾದ ವಿಚಾರವಾಗಿದೆ. ಕಾಂಗ್ರೆಸ್, ಬಲಪಂಥೀಯ ಬಿಜೆಪಿ ಮೈತ್ರಿಕೂಟವಾದ ಎನ್. ಡಿ. ಎ. ಮೈತ್ರಿಕೂಟಕ್ಕೆ ಆಳಲು ದೇಶದಲ್ಲಿ ಅವಕಾಶ ಕೊಟ್ಟು ನೋಡಲಾಗಿದೆ. ಇದೇ ರೀತಿ ಎಡಪಕ್ಷದ ಮೈತ್ರಿಕೂಟಕ್ಕೆ ದೇಶವನ್ನು ಆಳಲು ಒಂದು ಅವಕಾಶವನ್ನು ಕೊಟ್ಟು ಏಕೆ ನೋಡಬಾರದು ಎಂಬ ಚಿಂತನೆ ಏಕೆ ದೇಶದಲ್ಲಿ ಬೆಳೆಯುತ್ತಿಲ್ಲ ಎಂಬ ಬಗ್ಗೆ ಮರುಚಿಂತನೆ ಅಗತ್ಯ ಇದೆ. ಮಧ್ಯಮ ವರ್ಗದ ಜನ ಎಡಪಕ್ಷಗಳ ಬಗ್ಗೆ ಏಕೆ ಆಕರ್ಷಿತರಾಗುತ್ತಿಲ್ಲ ಎಂಬ ಬಗ್ಗೆ ಎಡಪಕ್ಷಗಳು ಆತ್ಮಾವಲೋಕನ ಮಾಡಿಕೊಂಡು ಕಾರ್ಯಕ್ರಮ ರೂಪಿಸಬೇಕಾದ ಅಗತ್ಯ ಇದೆ. ಎಡಪಕ್ಷಗಳ ಆರ್ಥಿಕ ನೀತಿಯೇ ಬಹುಶ: ಮಧ್ಯಮ ವರ್ಗದ ಜನ ಅದರಿಂದ ದೂರ ನಿಲ್ಲಲು ಕಾರಣ ಎಂದೆನಿಸುತ್ತದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳ ಬಗ್ಗೆ ಎಡ ಪಕ್ಷಗಳು ಹೊಂದಿರುವ ಆರ್ಥಿಕ ನೀತಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗುವುದೇ ಮಧ್ಯಮ ವರ್ಗದ, ಕೆಳಮಧ್ಯಮ ವರ್ಗದ ಜನ ಅದರಿಂದ ದೂರ ನಿಲ್ಲಲು ಕಾರಣವಾಗಿರುವಂತೆ ಕಾಣುತ್ತದೆ. ದೇಶದಲ್ಲಿ ಇಂದು ಅತ್ಯಂತ ವೇಗವಾಗಿ ನಗರೀಕರಣ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಮಧ್ಯಮ, ಕೆಳಮಧ್ಯಮ, ಹಾಗೂ ಬಡವರ್ಗಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳ ಅಗತ್ಯ ಇದೆ. ಹೀಗಾಗಿ ಈ ವರ್ಗದ ಯುವಜನ ಹೊಸ ಉದ್ಯೋಗಾವಕಾಶ ನೀಡಬಲ್ಲ ಆರ್ಥಿಕ ನೀತಿಗಳ ಬಗ್ಗೆ ಹಾಗೂ ಅಂಥ ರಾಜಕೀಯ ಪಕ್ಷಗಳ ಬಗ್ಗೆ ಬೆಂಬಲ ವ್ಯಕ್ತಪಡಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದನ್ನು ಎಡಪಕ್ಷಗಳು ಗಮನಿಸಿ ತಮ್ಮ ನೀತಿಯಲ್ಲಿ ಗಮನಾರ್ಹ ಬದಲಾವಣೆ ತರದೇ ಹೋದರೆ ಎಡಪಕ್ಷಗಳು ದೇಶದಲ್ಲಿ ಅಪ್ರಸ್ತುತವಾಗುವ ಅಪಾಯವೂ ಇದೆ. ಎಡಪಕ್ಷಗಳು ಕಾಲದ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬೇಕಾದ ಅಗತ್ಯ ಇದೆ. ಇದು ದೇಶದ ರಾಜಕೀಯವನ್ನು ಆರೋಗ್ಯಕರವಾಗಿ ರೂಪಿಸುವಲ್ಲಿಯೂ ಮಹತ್ತರ ಪಾತ್ರ ವಹಿಸಬಹುದು

    Reply

Leave a Reply

Your email address will not be published. Required fields are marked *