ನಾನು ಬಡವ, ನೀನು ಬಡವಿ, ನಮ್ಮ ಘನತೆ ನುಚ್ಚುನೂರು

– ಬಿ.ಶ್ರೀಪಾದ ಭಟ್

“ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬಡತನದ ಪ್ರಮಾಣವು 2004-05 ರಲ್ಲಿ ಶೇಕಡಾ 37.2 ರಿಂದ 2009-10 ರಲ್ಲಿ ಶೇಕಡಾ 29.8 ಕ್ಕೆ ಕುಸಿದಿದೆ. 2011-12 ರಲ್ಲಿ ಭಾರತದಲ್ಲಿ ದಾರಿದ್ರ್ಯವು ಶೇಕಡ 22 ಕ್ಕೆ ಇಳಿದಿದೆ. ಇಂದು ಭಾರತದಲ್ಲಿ 27 ಕೋಟಿ ಬಡವರಿದ್ದಾರೆ. ಇವರಲ್ಲಿ 21.6 ಕೋಟಿ ಬಡವರು ಗ್ರಾಮೀಣ ಭಾರತದಲ್ಲಿದ್ದಾರೆ.”

ಮೇಲಿನ ಹೇಳಿಕೆ ಮತ್ತು ಸಂಬಂಧಪಟ್ಟ ವಿವರಗಳನ್ನು 22 ನೇ ಜುಲೈ 2013 ರಂದು ಯೋಜನಾ ಆಯೋಗವು ಪತ್ರಿಕೆಗಳ ಮೂಲಕ ಸಕಲ ಸಮಸ್ತ ಭಾರತೀಯರಿಗೆ ತಲುಪಿಸಿತು. 21 ನೇ ಶತಮಾನದ ಈ ಎರಡನೇ ದಶಕದಲ್ಲಿ ಮೂಳೆ ಮಾಂಸದ ತಡಿಕೆಯಾದ ನಗರವಾಸಿಯ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 33 ರೂಪಾಯಿ ಸಾಕಾಗುತ್ತದೆಂದೂ, ಗ್ರಾಮೀಣವಾಸಿ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 27 ರೂಪಾಯಿ ಸಾಕಾಗುತ್ತದೆಂದೂ ಈ ಯೋಜನಾ ಆಯೋಗದ ಉಪಾಧ್ಯಕ್ಷ ಮಂಟೆಕ್‌ಸಿಂಗ್ ಅಹುಲುವಾಲಿಯಾ ಅಧಿಕೃತವಾಗಿ ಘೋಷಿಸಿದ್ದಾರೆ. Poverty_4C_--621x414ಇದನ್ನು ಅವರ ಹಿರಿಯ ಗೆಣೆಕಾರ ‘ದ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ’ ಮನಮೋಹನ್ ಸಿಂಗ್ ಕೂಡ ಅನುಮೋದಿಸಿದ್ದಾರೆ. ಇನ್ನು 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ ,ಆಮ್ ಆದ್ಮಿಯ ಆಶಾದೀಪ ಸೋನಿಯಾಗಾಂಧಿ ತಮ್ಮ ಎರಡು ದಶಕಗಳ ಸುಧೀರ್ಘ ಮೌನವನ್ನು ಇಂದಿಗೂ ಸಹ ಮುರಿಯದೆ ನಿಗೂಢವಾಗಿ ವರ್ತಿಸುತ್ತ ಎಂದಿನಂತೆ ತಮ್ಮ ವೈಯುಕ್ತಿಕ ವರ್ಚಸ್ಸನ್ನು ಜತನದಿಂದ ಕಾಪಾಡಿಕೊಳ್ಳುತ್ತಿರಲಾಗಿ, ಇತ್ತ ಸುಧೀರ್ಘ ಮೌನದಲ್ಲಿರಬೇಕಾದಂತಹ ಸದರಿ ಕಾಂಗ್ರೆಸ್ ಪಕ್ಷದ ಜೋಕರ್‌ಗಳು ಕ್ಷಣಕ್ಕೊಂದು ದುರ್ನಾತ ಬೀರುವ ಹೇಳಿಕೆಗಳನ್ನು ಕೊಡುತ್ತ, ತಾವೂ ನಗೆಪಾಟಲಿಗೀಡಾಗಿ ತಮ್ಮ ಪಕ್ಷವನ್ನು ನಗೆಪಾಟಲಿಗೀಡಾಗಿಸುತ್ತಿರಲು, ಅತ್ತ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಘನತೆಯಿಂದ ಕಾರ್ಯ ನಿರ್ವಹಿಸಬೇಕಾಗಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಬದಲಾಗಿ ತನ್ನ ದಮನಕಾರಿ ಪ್ಯಾಸಿಸಂ ಅನ್ನು ಮರಳಿ ಚಾಲ್ತಿಗೆ ತರಲು ನೂರಾರು ಕಳ್ಳ ಮಾರ್ಗಗಳ ಹುಡುಕಾಟದಲ್ಲಿರಲಾಗಿ, ಇವರೆಲ್ಲರ ಕೇಂದ್ರಬಿಂದು ಇಂಡಿಯಾದ ಬಿಪಿಎಲ್ ಕಾರ್ಡುದಾರ ಮಾತ್ರ ಎಂದಿನಂತೆ ಹೊಸ ಬೆಳಕಿಗೆ ಕಾಯುತ್ತಾ ತಾನು ಗಳಿಸುತ್ತಿರುವುದೆಷ್ಟು, ಅದರಲ್ಲಿ ತನಗೆ ದಕ್ಕಿದ್ದೆಷ್ಟು, ಉಳಿಸಿದ್ದೆಷ್ಟು ಯಾವುದೂ ಗೊತ್ತಾಗದೆ, ಕ್ಷಣ ಕ್ಷಣಕ್ಕೂ ಬದುಕಬೇಕಾದ ತನ್ನ ಆತಂಕದ, ಅತಂತ್ರ ಬದುಕಿನ ಮುಕ್ತಿಗಾಗಿ ಹಂಬಲಿಸಿ ಕಾಯುತ್ತಿದ್ದಾನೆ.

“ಬದುಕಿನಲ್ಲಿ ನನ್ನ ಎಲ್ಲ ಆಸೆಗಳನ್ನು, ಬಯಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವುದು ಸಂತೋಷದಾಯಕ ಪ್ರವೃತ್ತಿಯಲ್ಲ, ಬದಲಾಗಿ ನನ್ನ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕುವುದು ಮಾತ್ರ ಸಂತೋಷದಾಯಕವಾದದ್ದು,” ಎಂದು ಪಶ್ಚಿಮದ ಆರ್ಥಿಕ ತಜ್ಞ ಜೆ.ಎಸ್.ಮಿಲ್ ಹೇಳುತ್ತಾನೆ. ಈತನ ಈ ಹೇಳಿಕೆಯನ್ನೇ ಅತ್ಯಂತ ಸೀರಿಯಸ್ ಆಗಿ ತೆಗೆದುಕೊಂಡಿರುವ ಇಂಡಿಯಾದ ಯೋಜನಾ ಆಯೋಗದ ಮಂದಿ ಇದನ್ನು ಏಕಪಕ್ಷೀಯವಾಗಿ ಅತ್ಯಂತ ಅಮಾನವೀಯತೆಯಿಂದ ಇಲ್ಲಿನ ಬಡವರ ಮೇಲೆ ಉಪಯೋಗಿಸಿಕೊಂಡಿದ್ದಾರೆ. ಆದರೆ ಭಾರತದ ಮಧ್ಯಮ ವರ್ಗ, ಮೇಲ್ವರ್ಗಗಳಿಗೆ ಮಾತ್ರ ಈ ಯೋಜನಾ ಆಯೋಗದ ಈ ಮಾನಗೇಡಿ ಹೇಳಿಕೆ ಅನ್ವಯಿಸುವುದಿಲ್ಲ. ಅಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಜಾಗತೀರಣದ ನೇರ ಫಲಾನುಭವಿಗಳಾದ ಭಾರತದ ಮಧ್ಯಮ ಹಾಗು ಮೇಲ್ವರ್ಗಗಳು ಈ ನವ ಕಲೋನಿಯಲ್ ಸಂಸ್ಕೃತಿ ಕೊಡಮಾಡಿದ ಕೊಳ್ಳುಬಾಕ ಸಂಸ್ಕೃತಿಯಿಂದ ತಿಂದುHindustan_petroleum, ತೇಗಿ ಅಜೀರ್ಣದಿಂದ ಏದುಸಿರು ಬಿಡುತ್ತಿದ್ದರೆ, ಈ ಗುಂಪಿಗೆ ನಿಮ್ಮ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕಿ ಮತ್ತು ಸಂತೋಷದಿಂದಿರಿ ಎಂದು ಹೇಳುವುದರ ಬದಲಾಗಿ ಜಾಗತೀರಣದ ಕಳೆದ ಇಪ್ಪತ್ತು ವರ್ಷಗಳಲ್ಲಿ ಸರ್ಕಾರಗಳ ಎಲ್ಲಾ ಬಗೆಯ ಪಾಲಿಸಿಗಳು, ಅಭಿವೃದ್ಧಿ ಮಂತ್ರಗಳು ಜಾರಿಗೊಳಿಸಿದ್ದು ಮಧ್ಯಮ ಮತ್ತು ಮೇಲ್ವರ್ಗಗಳ ದುರಾಸೆಗಳನ್ನು ನಿರಂತರವಾಗಿ ಪೂರೈಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಾತ್ರ. ಆದರೆ ದಾರಿದ್ರ್ಯದಲ್ಲಿರುವ ಬಹುಸಂಖ್ಯಾತ ಬಡವರ ವಿಷಯದಲ್ಲಿ ಮಾತ್ರ ಈ ಸರ್ಕಾರಗಳು ಮತ್ತು ಯೋಜನಾ ಆಯೋಗವು ಬಡವನೊಬ್ಬ ತನ್ನ ಆಸೆಗಳನ್ನು ಸೀಮಿತಗೊಳಿಸಿಕೊಂಡು ಕನಿಷ್ಟ ಮಟ್ಟದಲ್ಲಿ ಬದುಕಲು ಏನು ಬೇಕು ಎಂಬುದನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ದೇಶದ ಬಡತನ ರೇಖೆ, ದಾರಿದ್ರ್ಯವನ್ನು ಅಳೆಯುತ್ತಾರೆ. ಇದಕ್ಕಾಗಿ ಅನೇಕ ಅವೈಜ್ಞಾನಿಕ ಮಾನದಂಡಗಳನ್ನು ಬಳಸುತ್ತಾರೆ. ಈ ಅಧಿಕಾರಿಶಾಹಿಗಳು ಮತ್ತು ಸರ್ಕಾರಗಳ ಈ ದಿಕ್ಕುದೆಸೆಯಿಲ್ಲದ ನಡೆಗಳಿಂದಾಗಿಯೇ ಇಂದು ಬಡವರು ಮತ್ತು ಶ್ರೀಮಂತರ ನಡುವಿನ ಕಂದಕದ ಪ್ರಮಾಣ ದಿನದಿನಕ್ಕೂ ಅಗಾಧವಾಗುತ್ತಿರುವುದು.

ಖ್ಯಾತ ಅರ್ಥಿಕ ತಜ್ಞ ಮೋಹನ್ ಗುರುಸ್ವಾಮಿಯವರು “ಬಡತನವೆನ್ನವುದು ಒಂದು ಆರ್ಥಿಕ ಸ್ಥಿತಿ. ಹಸಿವು ದೈಹಿಕ ಸ್ಥಿತಿ. ದೈಹಿಕ ಸ್ಥಿತಿಯಾದ ಹಸಿವಿಗೆ ಕಾರಣ ಬಡತನವೆನ್ನುವ ಆರ್ಥಿಕ ಸ್ಥಿತಿ. ಇಲ್ಲಿ ಹಸಿವೆನ್ನುವುದು ಸ್ಥಿರವಾದದ್ದು. ಆದರೆ ಬಡತನದ ವಾಖ್ಯಾನ ಮತ್ತು ಸ್ಥಿತಿ ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ,” ಎಂದು ಹೇಳುತ್ತಾರೆ. food-wasteಅಂದರೆ ಅವನು ಶ್ರೀಮಂತ ಅವನ ಊಟಕ್ಕೆ 500 ರೂಪಾಯಿ ಖರ್ಚಾಗುತ್ತದೆ. ಅದು ಸಹಜ. ನೀನು ಬಡವ. ನಿನ್ನ ಊಟಕ್ಕೆ 12 ರೂಪಾಯಿ ಸಾಕು. ನೀನೇನಾದರೂ ಆ 500 ರೂಪಾಯಿಯ ಊಟಕ್ಕೆ ಪ್ರಯತ್ನಿಸೀಯ ಜೋಕೆ! ಇದೂ ಸಹಜ. ಎರಡೂ ವಾಸ್ತವವಾಗಿದ್ದರಿಂದ ಸಹಜವಾಗಿಯೇ ಇಂದು ಭಾರತದ ಬಡತನ ರೇಖೆಯ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆ!! ಅಂದರೆ ಭಾರತ ಪ್ರಕಾಶಿಸುತ್ತಿದೆ!! ಇದು ಸರ್ವಾಧಿಕಾರಿ ನರೇಂದ್ರ ಮೋದಿಯ ಅಪ್ಪಟ ಗುಜರಾತ್ ಮಾದರಿ. ನಾಮೋ ಶೈಲಿ. ಅದನ್ನೇ ಅತ್ಯಂತ ಕುರುಡಾಗಿ ಬುದ್ಧಿಗೇಡಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಇದೇ ಮಾದರಿಯನ್ನು ದಿವಾಳಿಯಾದ ಕಾಂಗ್ರೆಸ್ ನೇತೃತ್ವದ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಭಿವೃದ್ಧಿ ಮಾನದಂಡವಾಗಿ ಬಳಸಿಕೊಳ್ಳುತ್ತಿದೆ. ಜೈ ಹೋ!!

ಕೇಂದ್ರ ಯೋಜನಾ ಆಯೋಗವು 1957 ರಲ್ಲಿ ಪ್ರತಿ ವ್ಯಕ್ತಿಗೆ, ಪ್ರತಿ ತಿಂಗಳಿಗೆ 20 ರೂಪಾಯಿಯ ಆಧಾರದ ಮೇಲೆ ಬಡತನ ರೇಖೆಯನ್ನು ನಿಗದಿಪಡಿಸಿತು. ಇದನ್ನು ಪ್ರತಿಯೊಬ್ಬ ವ್ಯಕ್ತಿ ಖರ್ಚು ಮಾಡುವ ಶಕ್ತಿಗೆ ಅನುಗುಣವಾಗಿ ನಿರ್ಧರಿಸಲಾಯಿತು. ಅಂದರೆ ಅವನಿಗೆ/ಅವಳಿಗೆ ಪ್ರತಿ ತಿಂಗಳಿಗೆ 21 ರೂಪಾಯಿ ಖರ್ಚು ಮಾಡಲು ಸಾಧ್ಯವಾದರೆ ಆತ/ಆಕೆ ಬಡತನ ರೇಖೆಯಿಂದ ಮೇಲೇರುತ್ತಾರೆ. 1979 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 57 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 47 ರೂಪಾಯಿಯನ್ನು ನಿಗದಿಪಡಿಸಿತು. 2000 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 454 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 357 ರೂಪಾಯಿಯನ್ನು ನಿಗದಿಪಡಿಸಿತು. 2005 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 559 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 368 ರೂಪಾಯಿಯನ್ನು ನಿಗದಿಪಡಿಸಿತು. 2012 ರಂದು ಈ ಮೊಂಟೆಕ್ ಎನ್ನುವ ಪಂಡಿತ ನಗರವಾಸಿಗೆ ಪ್ರತಿ ತಿಂಗಳಿಗೆ 990 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 810 ರೂಪಾಯಿಯನ್ನು ನಿಗದಿಪಡಿಸಿದ್ದಾನೆ. ಅದೇ ರೀತಿ ಯೋಜನಾ ಆಯೋಗದ ಶೋಧನೆಯ ಪ್ರಕಾರ 1974 ರಲ್ಲಿ ಶೇಕಡಾ 59 ರಷ್ಟಿದ್ದ ಬಡತನ ರೇಖೆಯ ಪ್ರಮಾಣ 1984 ರಲ್ಲಿ ಶೇಕಡಾ 43 ರಷ್ಟಿತ್ತೆಂದೂ, 2012 ರ ವೇಳೆಗೆ ಶೇಕಡಾ 22 ಕ್ಕೆ ಕುಸಿದಿದೆಯೆಂದು ಅಧಿಕೃತವಾಗಿ ತಿಳಿಸಿದೆ.

ಆದರೆ ಈ ಯೋಜನಾ ಆಯೋಗದ ಇಡೀ ಅಂಕಿ ಅಂಶಗಳನ್ನು ಸಧ್ಯದ ತರ್ಕಕ್ಕಾಗಿ ಗಣನೆಗೆ ತೆಗೆದುಕೊಂಡಾಗ Dantewada Killings1984 ರಲ್ಲಿ ಬಡತನದ ರೇಖೆಯು ಶೇಕಡಾ 43 ರಷ್ಟಿದ್ದ ಸಂದರ್ಭದಲ್ಲಿ ಬಡವನೊಬ್ಬ/ನೊಬ್ಬಳು ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 38 ಗ್ರಾಂ ನಷ್ಟಿದ್ದರೆ, ಈಗ, ಅಂದರೆ 2012 ರಲ್ಲಿ ಬಡತನದ ರೇಖೆಯು ಶೇಕಡಾ 22ಕ್ಕೆ ಕುಸಿದಂತಹ ಸಂದರ್ಭದಲ್ಲಿ, ಬಡವನೊಬ್ಬ/ನೊಬ್ಬಳ ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 24 ಗ್ರಾಂಗೆ ಕುಸಿದಿದೆ!! ಅಂದರೆ ವ್ಯಕ್ತಿಯೊಬ್ಬ/ಯೊಬ್ಬಳು ಸೇವಿಸುವ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಮೇಲೆ ಬಡತನದ ರೇಖೆಯನ್ನು ನಿರ್ಧರಿಸುವುದಿಲ್ಲ, ಬದಲಾಗಿ ವ್ಯಕ್ತಿಯೊಬ್ಬ/ಯೊಬ್ಬಳು ಬಳಸುವ ಮೊಬೈಲ್, ವಾಸಿಸುವ ಸೂರು ಇತ್ಯಾದಿಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ!! ಹರ್ಷ ಮಂದರ್ ಅವರು ಹೇಳಿದ ಹಾಗೆ ಮಸಲ ಬಡತನ ರೇಖೆಯ ಕೆಳಗಿರುವ ವ್ಯಕ್ತಿಯೇನಾದರು ಶೌಚಾಲಯವನ್ನು ನಿರ್ಮಿಸಿಕೊಂಡಾಕ್ಷಣ, ವಾರಕ್ಕೆ, ತಿಂಗಳಿಗೆ ಮೊಟ್ಟೆಯನ್ನು ತಿಂದಾಕ್ಷಣ ಆತ ಬಡತನ ರೇಖೆಯಿಂದ ಮೇಲೇರಲ್ಪಡುತ್ತಾನೆ!! ಬಿಪಿಎಲ್ ಕಾರ್ಡುದಾರನಿಂದ ಎಪಿಎಲ್ ಕಾರ್ಡುದಾರನಾಗಿ ಪ್ರಮೋಶನ್! ನಾಗರಿಕರಾದ ನಾವೆಲ್ಲ ಹೇಗೆ ಬಡವನೊಬ್ಬ/ನೊಬ್ಬಳ ಬದುಕನ್ನು ಅವಮಾನಿಸುತ್ತಿದ್ದೇವೆ ನೋಡಿ!! ಅವರಿಗೆ ಘನತೆಯನ್ನೇ ನಿರಾಕರಿಸಿದ್ದೇವೆ.

ಅಲ್ಲದೆ ಬಡತನದ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆಯೆಂದು ಪಂಡಿತ ಅಹುಲುವಾಲಿಯಾ ಬೂಸಿ ಬಿಡುತ್ತಿರುವ ಈ ಸಂದರ್ಭದಲ್ಲಿ ಅವರ ಹಿರಿಯ ಗೆಣೆಕಾರ ಮನಮೋಹನ ಸಿಂಗರ ಯುಪಿಎ ಸರ್ಕಾರವು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವ, ಸೋನಿಯಾ ಮೇಡಂರ ಪ್ರತಿಷ್ಠೆಯ ಮಸೂದೆಯಾದ ಆಹಾರ ಭದ್ರತೆ ಮಸೂದೆಯ ಮೂಲ ಆಶಯವೇ ಶೇಕಡಾ 67 ರಷ್ಟಿರುವ ಭಾರತೀಯರಿಗೆ ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಧಾನ್ಯವನ್ನು ಹಂಚುವುದು. ಅಂದರೆ ಯೋಜನಾ ಆಯೋಗದ ಪ್ರಕಾರ ಬಡತನ ರೇಖೆ ಶೇಕಡಾ 22 ರಷ್ಟಿದ್ದರೆ ಕೇಂದ್ರ ಸರ್ಕಾರದ ಪ್ರಕಾರ ಶೇಕಡ 67ರಷ್ಟಿದೆ!!

ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ ಇಂಡಿಯಾ ದೇಶದಲ್ಲಿನ ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಶೇಕಡಾ 46 ರಷ್ಟಿದೆ. Manmohan Singhಇದನ್ನು ಉದಾಹರಿಸಿಯೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಇದು ಭಾರತದ ಅವಮಾನ ಎಂದು ಉದ್ಗರಿಸಿದ್ದರು. ಆದರೆ ಮಕ್ಕಳ ಅಪೌಷ್ಟಿಕತೆ ಶೇಕಡಾ 46 ರಷ್ಟಿರುವ ದೇಶದಲ್ಲಿ ಬಡತನ ರೇಖೆ ಶೇಕಡ 22 ರಷ್ಟಿರುವುದು ಬಹುಶಃ ಇಡೀ ಜಗತ್ತಿನಲ್ಲಿ ಇಂಡಿಯಾದಲ್ಲಿ ಮಾತ್ರವೇನೋ! ಇದನ್ನು ಸಾಧ್ಯವಾಗಿಸಿದ ಪಂಡಿತ ಮೊಂಟೆಕ್‌ಸಿಂಗ್‌ಗೆ ನಮೋನಮಹಃ!

ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಈ ನರೇಗ ಯೋಜನೆಯಡಿ ಪ್ರತಿಯೊಬ್ಬ ಗ್ರಾಮೀಣ ವ್ಯಕ್ತಿಗೆ ದಿನವೊಂದಕ್ಕೆ 120 ರೂಪಾಯಿಯ ಆಧಾರದ ಮೇಲೆ ಕೆಲಸ ದೊರಕುತ್ತದೆ. ಆತ ತಿಂಗಳಪೂರ್ತಿ, ಒಂದು ದಿನವೂ ಬಿಡದೆ ಕೆಲಸ ಮಾಡಿದಾಗಲೂ ಆತನ ಗಳಿಕೆ ತಿಂಗಳಿಗೆ 3720 ರೂಪಾಯಿ. ಐದು ಸದಸ್ಯರಿರುವ ಸಂಸಾರವೊಂದರಲ್ಲಿ ಈ ಆದಾಯದ ಪ್ರಕಾರ ಪ್ರತಿ ವ್ಯಕ್ತಿಗೆ 744 ರೂಪಾಯಿ ದೊರಕುತ್ತದೆ. ಇದು ಯೋಜನಾ ಆಯೋಗವು ಬಡತನ ರೇಖೆಯ ಪ್ರಮಾಣದ ಅನುಸಾರ ಗ್ರಾಮೀಣ ಮಟ್ಟಕ್ಕೆ ನಿಗದಿಪಡಿಸಿದ ಅವೈಜ್ಞಾನಿಕ ಮೊತ್ತ ರೂಪಾಯಿ 850 ಕ್ಕಿಂತಲೂ ಶೇಕಡಾ 14 ರಷ್ಟು ಕಡಿಮೆ!! ಅಲ್ಲದೆ ಈ ನರೇಗಾ ಯೋಜನೆಯ ಅನುಕೂಲ ವರ್ಷಕ್ಕೆ ಕೇವಲ 100 ದಿನಗಳು ಮಾತ್ರ. ಅಂದರೆ ಸರಾಸರಿ ವರ್ಷಕ್ಕೆ ಮೂರು ತಿಂಗಳು!! ಉಳಿದ 265 ದಿಗಳ ಕುರಿತು ಯೋಜನಾ ಆಯೋಗದ ಬಳಿ ಯಾವುದೇ ಉತ್ತರವಿಲ್ಲ.

2020 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಎಲೈಟ್ ಗುಂಪಿಗೆ ಸೇರುವ ಧ್ಯೇಯವನ್ನು ಹೊಂದಿರುವ ಇಂಡಿಯಾದ ಸರ್ಕಾರವು ಮೊದಲು ಮಾಡಬೇಕಾದ ಕೆಲಸವೇ ಸಮಾಜವಾದಿ ಸಿದ್ಧಾಂತವನ್ನು ಅತ್ಯಂತ ಸರಳ ರೂಪದಲ್ಲಿ ಗ್ರಹಿಸಿ ಅನುಷ್ಠಾನಕ್ಕೆ ತರುವುದು. ಸರಳವಾಗಿ ಹೇಳಬೇಕೆಂದರೆ ಶ್ರೀಮಂತರ, ಮಧ್ಯಮವರ್ಗಗಗಳ ಮೇರೆ ಮೀರಿದ ಅಸಹಜ ಮಟ್ಟದ ವರಮಾನ ಗಳಿಕೆಗೆ ಕಡಿವಾಣ ಹಾಕಿ ಒಂದು ಮಿತಿಯನ್ನು ನಿಗದಿಪಡಿಸುವುದು. gujarat-povertyಬಡವರಿಗೆ ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸುವುದು. ಮುಖ್ಯವಾಗಿ ಅವರ ಬದುಕಿಗೆ ಘನತೆಯನ್ನು ಮರಳಿ ತಂದುಕೊಡಬೇಕು.

ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯೊಬ್ಬ ಸೇವಿಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 1500 ಕಿಲೋ ಕ್ಯಾಲೋರಿಯಾಗಿದ್ದರೆ ಬಡತನ ರೇಖೆಗಿಂತ ಮೇಲಿರುವ ವ್ಯಕ್ತಿ ಬಳಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 2400 ಕಿಲೋ ಕ್ಯಾಲರಿಯಷ್ಟಿರುತ್ತದೆ (Nutrition intake in India – NSS Report 1999 – 2000). 1000 ಕಿಲೋ ಕ್ಯಾಲೋರಿಯಷ್ಟು ವ್ಯತ್ಯಾಸದ ಈ ಅಸಮಾನತೆಯನ್ನು ಹೋಗಲಾಡಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು. ಅಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಜನರು ಅಪಾರ ದೈಹಿಕ ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರಿಗೆ ಪೋಷಕಾಂಶಗಳ ಪ್ರಮಾಣ ಬೇರೆಲ್ಲರಿಗಿಂತಲೂ ಅಧಿಕವಿರಬೇಕು. ಇದೆಲ್ಲವೂ ಅಪಾರ ಬುದ್ಧಿವಂತಿಕೆಯ ಈ ಮೊಂಟೆಕ್ ಗ್ಯಾಂಗ್‌ಗೆ ಅರ್ಥವಾಗುವುದಿಲ್ಲವೇ?? ನಿಜಕ್ಕೂ ಇವರು ಜೀವವಿರೋಧಿಗಳು.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವ ಜನಸಂಖ್ಯೆಯನ್ನು ಆರ್ಥಿಕವಾಗಿ ಮತ್ತು ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸಲು ವರ್ಷಕ್ಕೆ ಸುಮಾರು 60000 ಕೋಟಿ ರೂಪಾಯಿ ಬೇಕಾಗುತ್ತದೆ. ಇದರ ಖರ್ಚು ದೇಶದ ಇಡೀ ಅಧಿಕಾರಶಾಹಿಯನ್ನು ಸಾಕಲು ಸರ್ಕಾರ ವ್ಯಯಿಸುವ ಖರ್ಚಾದ 2,27,000 ಕೋಟಿಗೆ ಹೋಲಿಸಿದರೆ ಶೇಕಡ 25 ರಷ್ಟು ಮಾತ್ರ. ಅಥವಾ ಜಿಡಿಪಿಯ 8,47,000 ಕೋಟಿಗೆ ಹೋಲಿಸಿದರೆ ಶೇಕಡಾ 2 ರಷ್ಟು ಮಾತ್ರ.

ಎಲ್ಲಿಯವರೆಗೂ ಶೇಕಡ 5 ರಿಂದ ಶೇಕಡ 10 ರಷ್ಟಿರುವ ಸಮಾಜದ ಮೇಲ್ಪದರ ಜನರ ಆದಾಯ, ಸುಖಲೋಲುಪ್ತ ಜೀವನ ಮತ್ತು ಅವರ ನಿರಂತರ ಮೇಲ್ಮುಖ ಚಲನೆಯೇ ದೇಶವೊಂದರ ಅಭಿವೃದ್ಧಿಯ ಮಾರ್ಗಸೂಚಿಯಾಗುತ್ತದೆಯೋ, ಎಲ್ಲಿಯವರೆಗೂ ಸರ್ಕಾರವೂ ಸಹ ನಿರ್ಲಜ್ಯವಾಗಿ ಇದನ್ನೇ ತನ್ನ ಅಭಿವೃದ್ಧಿಯೆಂದು ಕೂಗುತ್ತಿರುತ್ತದೆಯೂ, ಅಲ್ಲಿ ಆ ದೇಶದ ಆತ್ಮಸಾಕ್ಷಿ ಸತ್ತಿದೆಯೆಂದರ್ಥ. ಆ ದೇಶ ಮತ್ತೇನಲ್ಲದೆ ಒಂದು ಕೊಳೆತ ಗೊಬ್ಬರದ ಗುಂಡಿಯಷ್ಟೇ. ನಮ್ಮ ಭಾರತ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಜ್ವಲಂತ ಸಾಕ್ಷಿಯಾಗಿದೆ.

One thought on “ನಾನು ಬಡವ, ನೀನು ಬಡವಿ, ನಮ್ಮ ಘನತೆ ನುಚ್ಚುನೂರು

Leave a Reply

Your email address will not be published. Required fields are marked *