ನಿಡ್ಡೋಡಿ ವಿದ್ಯುತ್ ಸ್ಥಾವರ ಯಾಕೆ ಬೇಡ ?


– ಚಿದಂಬರ ಬೈಕಂಪಾಡಿ


 

ನೆಲದ ಮೇಲೆ ಅಂಗಾತ ಮಲಗಿದ ಇಪ್ಪತ್ತರ ಜೀವ ಅತ್ತ ಮಗುವೂ ಅಲ್ಲ, ಇತ್ತ ಯುವಕನೂ ಅಲ್ಲ. ತೆವಳುತ್ತಾ ಮನೆಯೊಳಗೇ ಕಾಲ ಕಳೆಯುವ ಮತ್ತೊಂದು ಜೀವ. ಸುಂದರ ಯುವತಿಯ ಕೈಹಿಡಿಯಲು ಯುವಕರು ಮುಂದೆ ಬರುವುದಿಲ್ಲ, ಆ ಊರಿನ ಯುವಕರಿಗೆ ಹೆಣ್ಣು ಕೊಡಲು ಹೊರಗಿನವರು ಇಚ್ಛೆಪಡುವುದಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ, ಮದುವೆ ಆದರೂ ಹೆಣ್ಣು ಗರ್ಭ ಧರಿಸುವುದಿಲ್ಲ. ಇಂಥ ವೈರುಧ್ಯಗಳಿಂದ ನಲುಗುತ್ತಿರುವ ಕೊಕ್ಕಡದ ಹೆಸರು ಕೇಳಿದರೆ ಮೈಜುಮ್ಮೆನ್ನುತ್ತದೆ. ಕಾರಣ ಮಹಾಮಾರಿ ಏಡ್ಸ್ ಅಲ್ಲ ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್ ಈ ಭಾಗದಲ್ಲಿ ಮಾಡಿರುವ ಪರಿಣಾಮ.

ನವಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಕೊಟ್ಟು mangalore-oil-refineryಕಾಟಿಪಳ್ಳ-ಕೃಷ್ಣಾಪುರ ಪುನರ್ವಸತಿ ಕೇಂದ್ರದಲ್ಲಿ ಕೇವಲ ಹನ್ನೆರಡೂವರೆ ಸೆಂಟ್ಸ್ ನಿವೇಶನದಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ ಮಾಡುತ್ತಿರುವ ಅನ್ನದಾತನ ಬದುಕು ಬವಣೆ ಅಧ್ಯಯನ ಯೋಗ್ಯ.

ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರು ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರು ಸಿಂಗಾಪುರದಂಥ ಪುನರ್ವಸತಿ ನಗರಿಯಲ್ಲಿ ಬದುಕುತ್ತಿದ್ದಾರೆ.

ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು 30 ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳು ನಳನಳಿಸುವುದಿಲ್ಲ. mangalore-pollutionಯಾಕೆಂದರೆ ಹಾರು ಬೂದಿಯ ಪ್ರಭಾವ. ಈ ಮೇಲಿನ ಎಲ್ಲವೂ ಪರಿಸರಕ್ಕೆ ಹಾನಿ ಮಾಡುತ್ತಿರುವಂಥವು ಮತ್ತು ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡದ ಕೈಗಾರಿಕೆಗಳು. ಭೂಮಿಗೆ ಪರ್ಯಾಯವಾಗಿ ಹಣಕೊಟ್ಟಿವೆ, ಆದರೆ ಬದುಕು ಕಿತ್ತುಕೊಂಡಿವೆ. ಹತ್ತಾರು ಎಕರೆ ಭೂಮಿಯ ಒಡೆಯನಾಗಿದ್ದ ಜಮೀನ್ದಾರ ಈ ಕೈಗಾರಿಕೆಗಳ ಸ್ಥಾಪನೆಯಿಂದ ಬೀದಿಗೆ ಬಿದ್ದಿದ್ದಾನೆ.

ಈಗ ನಿಡ್ಡೋಡಿ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಜನ ನಿರ್ವಸಿತರಾಗುವುದು, ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು ಹಣದ ಥೈಲಿ ಹಿಡಿದಿಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆ.

ಯಾವುದೇ ಸರ್ಕಾರವಾದರೂ ಸರಿ ಜನಸ್ನೇಹಿ, ಪರಿಸರ ಸ್ನೇಹಿ, ಸಹ್ಯ ಕೈಗಾರಿಕೆಯನ್ನು ಸ್ಥಾಪಿಸುತ್ತದೆ ಎಂದು mangalore-pollution-at-seaನಿರೀಕ್ಷೆಮಾಡುವುದು ಜನರ ಸಾಮಾನ್ಯ ಗ್ರಹಿಕೆ ಹೊರತು ವಾಸ್ತವ ಅಲ್ಲ ಎನ್ನುವುದಕ್ಕೆ ಮೇಲಿನ ಎಲ್ಲವೂ ಉದಾಹರಣೆಗಳು.

ಕಡಂದಲೆ, ಕೊಜೆಂಟ್ರಿಕ್ಸ್ ಎರಡೂ ಉದಾಹರಣೆ ಮೂಲಕ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಕೊಜೆಂಟ್ರಿಕ್ಸ್ ಗಿಂತ ಭಿನ್ನ ಹೇಗೆಂದು ಸಮರ್ಥನೆ ಕೊಡಲು ಸಾಧ್ಯವೇ?

ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭದಲ್ಲಿ ನಡೆದ ಗೋಲಿಬಾರ್ ನೆನಪಿಸಿಕೊಂಡರೆ ಒಂದು ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವೆಂದು ಭ್ರಮೆ ತರಿಸಿತೇ ಹೊರತು ಪರೋಕ್ಷವಾಗಿ ಜನರನ್ನು ಸರ್ಕಾರ ಮೋಸಗೊಳಿಸಿತು ಎನ್ನುವುದೇ ಸೂಕ್ತ.

ಗೋಲಿಬಾರ್ ವೇಳೆ ಹೋರಾಟದಲ್ಲಿ ಭಾಗವಹಿಸಿಯೋ, ಆಕಸ್ಮಿಕವಾಗಿಯೋ ಆ ಸಂದರ್ಭದಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಆಗಿಲ್ಲ. ನೆಲ-ಜಲ ನಮ್ಮದು. ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಇಲ್ಲಿ ಉದ್ಯೋಗಕ್ಕೆ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನದ ಮಾತು.

ನಾವು ನವಮಂಗಳೂರು ಬಂದರು ನಿರ್ಮಾಣವಾದ ಮೇಲೂ ಪಾಠ ಕಲಿಯಲಿಲ್ಲ. ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ ಬಂದರಿನ ಲಾಭದಲ್ಲಿ ಬಿಡಿಗಾಸೂ ಇಲ್ಲ, ಆದರೆ ಭೂಸ್ವಾಧೀನ ಮಾಡುವ ವೇಳೆ ಮಾಡಿಕೊಂಡ ನಿರ್ಣಯಗಳನ್ನು ಬೈಕಂಪಾಡಿ ಪಟೇಲ್ ಶ್ರೀನಿವಾಸ ರಾವ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಿ.

ಎಂಆರ್‌ಪಿಎಲ್ ವಿರುದ್ಧ ಹೋರಾಟ ಮಾಡಿದಾಗ ಜನರನ್ನು ಬಗ್ಗು ಬಡಿಯಲು ಅನುಸರಿಸಿದ ತಂತ್ರ ಒಡೆದು ಆಳುವ ನೀತಿ. ಒಕ್ಕಲೆಬ್ಬಿಸುವ ಸಾಮರ್ಥ್ಯವಿದ್ದವರಿಗೆ ಎಲ್ಲಾ ರೀತಿಯ ಗುತ್ತಿಗೆ ಕಾಣಿಕೆ.

ನಂದಿಕೂರು ಸ್ಥಾವರದ ವಿರುದ್ಧ ಹೋರಾಟ citizens-protest-niddodi-mangaloreಶುರುವಾದಾಗ ಧುತ್ತನೆ ಪ್ರತ್ಯಕ್ಷವಾದ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣ. ಈಗ ಅವರೆಲ್ಲಿದ್ದಾರೆ? ಅವರೊಂದಿಗೆ ಕಾಣಿಸಿಕೊಂಡಿದ್ದ ನಂದಿಕೂರಿನ ಮುಖಗಳೆಲ್ಲಿವೆ?

ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರವನ್ನು ಸಮರ್ಥಿಸಿಕೊಳ್ಳುವವರಿದ್ದರೆ ಅದು ಅವರ ಜಾಣತನ ಎನ್ನುತ್ತೇನೆ. 1200 ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ 4000 ಮೆ.ವಾ ಸಾಮರ್ಥ್ಯದ ಸ್ಥಾವರವನ್ನು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹೆಮಾಡಿಕೊಳ್ಳುವುದು ಕಷ್ಟವಲ್ಲ.

ಕರಾವಳಿ ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶ ಅತೀ ಸೂಕ್ಷ್ಮ ಎನ್ನುವ ಪರಿಣತರ ವರದಿಯನ್ನು ನಿರಾಕರಿಸುವಂತಿಲ್ಲ. ಸರ್ಕಾರಿ ಪ್ರಾಯೋಜಿತ, ಕಂಪೆನಿ ಕೃಪಾಪೋಷಿತ ಪರಿಣತರ ಅಥವಾ ಢೋಂಗಿ ಪರಿಸರವಾದಿ ಪರಿಣತರ ಮಾತಿನಲ್ಲಿ ಜನ ವಿಶ್ವಾಸವಿಡುವಂತಿಲ್ಲ.

ಧಾರಣಾ ಶಕ್ತಿ ಅಧ್ಯಯನ ಮಾಡುವ ತನಕ ಯಾವುದೇ ಕೈಗಾರಿಕೆಗಳಿಗೆ ಕರಾವಳಿಯಲ್ಲಿ ಅವಕಾಶವಿಲ್ಲ ಎನ್ನುವ ಒಂದಂಶ ಅಜೆಂಡಾ ಮಾತ್ರ ಹೋರಾಟ ಸಮಿತಿಯ ಮುಂಚೂಣಿಯಲ್ಲಿರಬೇಕು ಹೊರತು ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದು ಈಗ ಮುಖ್ಯವಲ್ಲ ಎನ್ನುವುದೇ ಜನರ ಬೇಡಿಕೆಯಾಗಬೇಕು.

ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ತ್ಯಾಜ್ಯದ ತಿಪ್ಪೇಗುಂಡಿಯೇ?

ಧಾರಾಳವಾಗಿ ಉದ್ಯೋಗ ನೀಡುತ್ತಿದ ಎಂಡಿಎಲ್ ಯಾರ್ಡನ್ನು save-niddodiಇಲ್ಲಿನ ರಾಜಕಾರಣಿಗಳು ಮುಂಬೈಗೆ ಸ್ಥಳಾಂತರಿಸಲು ಸಮ್ಮತಿಸಿದ್ದೇಕೆ? ನೆಲ, ಜಲ, ವಾಯು ಮಾರ್ಗದ ಅನುಕೂಲವಿರುವ ಕರಾವಳಿಯಲ್ಲಿ ಪರಿಸರಕ್ಕೆ ಹಾನಿಯಾಗದಂಥ ಆಟೋಮೊಬೈಲ್ ಉದ್ದಿಮೆ ಸ್ಥಾಪಿಸಿದ್ದರೆ ಸಹಸ್ರಾರು ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲವೇ? ಕರಾವಳಿಯಲ್ಲೂ ಖರ್ಗೆಯವರು ರೈಲ್ವೇ ಕೋಚ್ ನಿರ್ಮಾಣ ಕಾರ್ಖಾನೆ ಸ್ಥಾಪಿಸಲು ಮುಂದಾಗಬಾರದೇ? ಈ ಪ್ರಶ್ನೆಗಳನ್ನು ನಿಡ್ಡೋಡಿಗೆ ಓಡೋಡಿ ಬರುವ ರಾಜಕಾರಣಿಗಳಿಗೆ ಕೇಳಿ. ಮಠ ಪೀಠಾಧೀಶರು, ರಾಜಕಾರಣಿಗಳು ಸಾರಥ್ಯ ವಹಿಸಿಕೊಳ್ಳುವ ಹೋರಾಟದಲ್ಲಿ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ.

ಮಠ-ಪೀಠಾಧಿಗಳಿಂದ, ಜಾತಿ, ಧರ್ಮಗಳ ನೆಲೆಯಿಂದ ಮತ್ತು ರಾಜಕೀಯ ಪಕ್ಷಗಳ ಸೆರಗಿನ ಮರೆಯಿಂದ ಹೊರತಾದ ಹೋರಾಟವಾಗಬೇಕು. ಅಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಹಿರಿ ತಲೆಯಿಂದ ಹಿಡಿದು ಅಲ್ಲೇ ಬದುಕುವ ಕನಸು ಕಟ್ಟಿಕೊಂಡು ಹುಟ್ಟಿರುವ ಹಸುಗೂಸಿನ ತನಕ ಜನರಿಗಾಗಿ, ಜನರ ಹೋರಾಟವಾಗಬೇಕು. ಅದು ಆಗಲಿ ಎನ್ನುವ ಆಶಯ ನನ್ನದು.

4 thoughts on “ನಿಡ್ಡೋಡಿ ವಿದ್ಯುತ್ ಸ್ಥಾವರ ಯಾಕೆ ಬೇಡ ?

  1. ಜೆ.ವಿ.ಕಾರ್ಲೊ, ಹಾಸನ

    ನಿಡ್ಡೋಡಿ ಉಷ್ಣಸ್ಥಾವರದಿಂದ ಎದುರಾಗುವ ಪರಿಣಾಮಗಳಿಂದ ಸ್ಥಳೀಯರು ಆತಂಕರಾಗಿರುವುದು ಸಹಜ. ತಮಿಳುನಾಡಿನ ಕೂಡಂಕುಳದಲ್ಲಿ ಸ್ಥಾಪಿಸಲಾದ ಅಣುವಿದ್ಯುತ್ ಸ್ಥಾವರಕ್ಕೆ ಎದುರಾದ ಪ್ರತಿರೋಧವನ್ನು, ಮತ್ತು ಆ ಥರದ ಪ್ರತಿರೋಧವನ್ನು ಸ್ಥಳೀಯರು ಹುಟ್ಟು ಹಾಕಬಲ್ಲರೇ ಎಂಬ ಅನುಮಾನ, ಮತ್ತು ಪ್ರಭುತ್ವ ಅದನ್ನು ಬಗ್ಗು ಬಡಿದ ರೀತಿಯ ಕ್ರೌರ್ಯ ನೆನೆಸಿಕೊಂಡರೆ ಆತಂಕವಾಗುತ್ತದೆ!

    Reply
  2. ಮಹೇಶ

    ಮಾಲಿನ್ಯ ರಹಿತವಾದ ಕೇವಲ 1 ವರ್ಷದಲ್ಲಿ ಸಾವಿರಗಟ್ಟಲೇ ಮೆಗಾವ್ಯಾಟ್ ಪ್ಲಾಂಟ್ ಸ್ಥಾಪಿಸಲು ಸಾಧ್ಯತೆಯಿರುವ ಸೌರವಿದ್ಯುತ್ ಬಗ್ಗೆ ಯಾಕೆ ನಿರ್ಲ್ಯಕ್ಷ್ಯ ?. ಭಾರತದಲ್ಲಿ ಹೇರಳವಾಗಿ ಸೌರಶಕ್ತಿ ಹೇರಳವಾಗಿ ಲಭ್ಯವಿದೆ. ಸೌರಶಕ್ತಿಯ ಮಹತ್ವವೆಂದರೆ ವಿದ್ಯುತ್ತಿನ ಅತಿ ಹೆಚ್ಚು ಅವಶ್ಯಕತೆ ಇರುವ ಬೇಸಿಗೆಗಾಲದಲ್ಲಿ ಅದರ ಉತ್ಪಾದನೆಯೂ ಹೆಚ್ಚಾಗುತ್ತದೆ. ಯಾವ ಭಾಗದಲ್ಲಿ ವಿದ್ಯುತ್ ನ ಅವಶ್ಯಕತೆ ಇದೆಯೋ ಅದೇ ಭಾಗದಲ್ಲಿ ಸೌರ ವಿದ್ಯುತ್ ಘಟಕ ಹಾಕಬಹುದು. ವಿದ್ಯುತ್ ಪ್ರಸರಣವಾಗುವ ಸಂದರ್ಭದಲ್ಲಿ ಆಗುವ ವಿದ್ಯುತ್ ಕ್ಷಯವನ್ನು ತಡೆಯಬಹುದು. ಸೌರಶಕ್ತಿಯಿಂದ ಪಡೆದ ವಿದ್ಯುತ್ ಒಂದು ಯುನಿಟ್ ಗೆ ಸುಮಾರು 17 ರೂಪಾಯಿಗಳಾಗಬಹುದು. 17 ರೂಪಾಯಿ ಪ್ತತಿ ಯುನಿಟ್ ಇದ್ದರೂ ನಿರಂತರ ವಿದ್ಯುತ್ ಇದ್ದರೆ ಹಲವಾರು ಬಿಸಿನೆಸ್ ಗಳು ಲಾಭದಾಯಕವಾಗಿ ನಡೆಸಲು ಶಕ್ತವೆಂದೆನಿಸುತ್ತದೆ. ಆದರೂ ಸೌರಶಕ್ತಿಯಿಂದ ಸಿಗುವ ಲಾಭವನ್ನು ಗಮನಿಸಿದೆ ಪ್ಲಾಂಟ್ ಹಾಕಲು ಕಡಿಮೆಯೆಂದರೂ 5 ರಿಂದ ಹತ್ತು ವರ್ಷ ಬೇಕಾಗುವ, ಮಾಲಿನ್ಯ ಉಂಟು ಮಾಡುವ, ಜನರನ್ನು ಒಕ್ಕಲೆಬ್ಬಿಸುವ ಉಷ್ಣವಿದ್ಯುತ್, ಅಣುವಿದ್ಯುತ್ ಮೊದಲಾದ ಪ್ಲಾಂಟ್ ಹಾಕಲು ಸರಕಾರಗಳು ಆಸಕ್ತಿ ತೋರಿಸುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ.

    Reply
  3. Munna Kodihal

    ಈಗಾಗಲೆ ಸ್ಥಾಪಿಸಿರುವ 1200 ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದಲ್ಲಿ ಯೋಜನೆಗೆ ತಕ್ಕಂತೆ ವಿದ್ಯುತ್‌ನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ ಇಂತಹ ಇಕ್ಕಟ್ಟಿನ ಪರಸ್ಥಿತಿಯಲ್ಲಿ ಇನ್ನೊಂದು ಯೋಜನೆ….? ಜನರ ಜೀವನದ ಜೋತೆ ಆಟವಾಡುವ ರಾಜಕಾರಣಿಗಳಿಗೆ ಬುದ್ದಿಬರುವುದಾದರು ಯಾವಾಗ? ಸಸ್ಯ ಸಂಕುಲವನ್ನೆ ನಾಶಮಾಡಲು ಸಂಚು ಹಾಕಿರುವ ಇವರುಗಳು ಜನಪರ ಕಾಳಜಿ ಮಾಡುವುದು ಕೇವಲ ಡೊಂಗಿ ಮಾತುಗಳಷ್ಷೆ. ಜನರ ಜೀವನದ ಮೇಲೆ ಯಾವ ರೀತಿಯಾದ ಕೆಟ್ಟ ಪರಿಣಾಮ ಬಿರುತ್ತದೆ ಎಂದು ಒಮ್ಮೆ ಯೋಚಿಸುವುದು ಬೇಡವೇ? ಕೇವಲ ಉಷ್ಣವಿದ್ಯುತ್, ಅಣುವಿದ್ಯುತ್ ಸ್ಥಾವರಗಳಿಂದ ಮಾತ್ರ ವಿದ್ಯುತ್ ತಯಾರಿಸಲು ಸಾಧ್ಯಾನಾ? ಪವನ ಶಕ್ತಿ, ಸೌರ ಶಕ್ತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇವರಿಗೆಕೆ ಗೊತ್ತಾಗುತ್ತಿಲ್ಲ…..?

    Reply

Leave a Reply to ಮಹೇಶ Cancel reply

Your email address will not be published. Required fields are marked *