ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು : ಗಂಗೆ, ಗೌರಿ,..: ಭಾಗ–3

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು

ಭಾಗ – 3 : ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ನಾನು ಕಂಡಂತೆ ನಮ್ಮ ಹಟ್ಟಿಯಲ್ಲಿ ಉಳುವುದಕ್ಕೆ ಕೋಣ/ಎತ್ತು, ಹಾಲಿಗಾಗಿ ಕೆಂಪಿದನ ಮತ್ತು ಚಿಕ್ಕು ಎಮ್ಮೆಗಳು ಬಹಳ ಕಾಲದವರೆಗೆ ಇದ್ದುವು. ಈ ನಡುವೆ ಮೊಳಹಳ್ಳಿಯ ಮಾವಿನಕಟ್ಟೆಯಲ್ಲಿ ಹಾಲುಡೈರಿ ಬರುವುದು ಅಂತಾದಮೇಲೆ ಅದರ ಪರವಾಗಿ ಮತ್ತೊಂದು ಎಮ್ಮೆ ತಂದೆವು. ಬೆಳ್ಳಗಿದ್ದ ಆ ಎಮ್ಮೆಯನ್ನು ಬೆಳ್ಳಿಎಂದು ಕರೆಯುತ್ತಿದ್ದೆವು. ಅದಕ್ಕಿಂತ ಮುಂಚೆ ಇದ್ದ ಚಿಕ್ಕುವಿಗಿಂತ ಗುಣದಲ್ಲಿ ಅದು ಸ್ವಲ್ಪ ಒಳ್ಳೆಯ ಎಮ್ಮೆ. ಎರಡು ಎಮ್ಮೆಗಳನ್ನು ಕಟ್ಟಿ ಸಾಕುವುದು ದುಸ್ತರವಾಗಿ ಚಿಕ್ಕು ಎಮ್ಮೆಯನ್ನು ಯಾರಿಗೋ ಮಾರಿಬಿಟ್ಟೆವು. ಈ ನಡುವೆ 6 ವರ್ಷಗಳವರೆಗೆ ಬೆಳ್ಳಿಯ ಕಾರುಬಾರು ನಡೆಯಿತು. ಆದರೆ ಅದರ ಒಂದೇ ಒಂದು ಕರುವನ್ನು ಉಳಿಸಿಕೊಳ್ಳಲಾಗಲಿಲ್ಲ. ಎಮ್ಮೆಕರುಗಳ ಕಿರುಕೋಡುಗಳು ಕಿವಿಯ ಮೂಲವನ್ನು ಕಳೆಯುವುದಕ್ಕಿಂತ ಮುಂಚಿತವಾಗಿಯೇ ಅವು ಹೊಟ್ಟೆಬಾತುಕೊಂಡೋ, ಕಾಲುಸೋತೋ, ಸಗಣಿಗಟ್ಟಿಯಾಗಿಯೋ, ಇನ್ನು ಏನೇನೋ ಆಗಿ ಸತ್ತು ಬಿಡುತ್ತಿದ್ದವು. ಕಣ್ಣ್ಹೆಡಿಗೆ(ಬೀಳಿನಹೆಡಿಗೆ)ಯಲ್ಲ್ಲಿ ಹಾಕಿಕೊಂಡು ನೇರಳಜಡ್ಡಿಗೆ ಕರುಗಳನ್ನು ಎಳೆದು ಹಾಕುವಾಗಲೇ ಒಂದಾದರೂ ಬದುಕಿದ್ರೆ ಒಳ್ಳೆಯದಾಗಿತ್ತು ಎಂದು ಆಸೆ ಕಣ್ಣಿನಿಂದ ನೋಡುವುದಷ್ಟೇ ನಮ್ಮ ಪಾಡಾಗಿತ್ತು. ಅಂತೂ ಈ ಸಾವಿನ ಸಾಲಿನ ನಡುವೆ ಒಂದು ಎಮ್ಮೆ ಕರು, ಅದೂ ಹೆಂಗರುವೊಂದು ಉಳಿದುಕೊಂಡು ಬಿಡ್ತು. ಪ್ರೀತಿಯ ಕರುವಿಗೆ ಮನೆಯ ಕಿರಿಮಗಳಿಗೆ ಇದ್ದ ಹೆಸರನ್ನೇ ಇಟ್ಟು ಹುಲ್ಲು ತಿನ್ನಿಸಿ, ಹಿಂಡಿಕೊಟ್ಟು ಅದರ ಚಿಕ್ಕ ಚಿಕ್ಕ ಕೋಡುಗಳು ಕಿವಿಯಬುಡಬಿಟ್ಟು ಮುಂದುವರೆಯುತ್ತಿದ್ದಂತೆ ನಮಗೆ ಯುದ್ಧಗೆದ್ದ ಸಂಭ್ರಮವಿತ್ತು. ಅದು ನಿಜವೂ ಆಗುವಂತೆ ಕರು ಮೈಕೈ ತುಂಬಿಕೊಂಡು ಬೆಳೆದೇ ಬಿಟ್ಟಿತ್ತು!

ಅದು ಬೆಳೆಯಿತು. ಬೆಳೆದು ಕರುವಾದದ್ದು ಕಡಸಾಯಿತು. ಈ ನಡುವೆ ಅದಕ್ಕೊಂದು ಕೆಟ್ಟ ಚಾಳಿ ಅಂಟಿಕೊಂಡಿತು. ಬಟ್ಟೆ ಕಂಡಿತೆಂದರೆ ಹುಲ್ಲನ್ನೂ ಬಿಟ್ಟು ಬಟ್ಟೆಯನ್ನು ಬಾಯಿಗಿಟ್ಟು ಅಗಿದು ಹಾಕುತ್ತಿತ್ತು. ಕಂಡವರು ತೊಳೆದು ಒಣಗಿಸಿದ ಬಟ್ಟೆ ತಿನ್ನುವುದಕ್ಕೆ ಯಾವಾಗ ತೊಡಗಿತೋ ಅಲ್ಲಿಂದ ಪೇಚಿಗಿಟ್ಟುಕೊಂಡಿತು. ಆಚೀಚೆ ಮನೆಯವರು ಎಮ್ಮೆಯ ಕರುವಿನ ಈ ಮಂಗಾಟಕ್ಕೆ ರೋಸಿ ಹೋಗಿ, ಸಾಕಿದವರಿಗೆ ಸೋಬಾನೆ ಹೇಳಲು ಶುರುಮಾಡಿದಾಗ ಈ ಚಾಳಿ ಬಿಡಿಸುವುದು ನಮ್ಮ ಪಾಲಿನ ಸವಾಲಾಯಿತು. ತಿನ್ನಲು ಬಟ್ಟೆಯನ್ನು ಎದುರಿಗೆ ಹಿಡಿದು ಮುಸುಡಿ ಒಡೆದು ಹೋಗುವಂತೆ ಹೊಡೆದು ನೋಡಿದೆವು. ಆದರೆ ನೆತ್ತರುಕಂಡದ್ದು ಬಂತಲ್ಲದೆ, ಚಾಳಿ ಬಿಡಿಸಲಾಗಲಿಲ್ಲ. ಬಟ್ಟೆಯೊಳಗಡೆ ಚೂರಿಮುಳ್ಳು ಇಟ್ಟುಕೊಟ್ಟೆವು. Cows-pastureಇದರಿಂದ ಆ ಬಟ್ಟೆಯನ್ನು ಹೊರಗೆ ಉಗಿಯಿತಲ್ಲದೆ ಚಾಳಿ ತಪ್ಪಲಿಲ್ಲ. ಕೊನೆಗೆ ಒಂದು ಮಹಾಸಾಹಸಕ್ಕೆ ಕೈ ಹಾಕಿದೆವು. ತಿನ್ನಲು ಬಟ್ಟೆಕೊಟ್ಟು ಅದರ ಕೆಳತುದಿಗೆ ಬೆಂಕಿಕೊಟ್ಟೆವು. ಬಟ್ಟೆ ಕೊಟ್ಟ ತಕ್ಷಣ ಸಿಹಿತಿಂಡಿ ಸಿಕ್ಕವರಂತೆ ಅರ್ಧಬಟ್ಟೆಯನ್ನು ನಮ್ಮ ಕಣ್ಣೆದುರೇ ಜಗಿಯಹತ್ತಿದ ಮೇಲೆ ಅದನ್ನು ಹೆದರಿಸುವುದಕ್ಕಾಗಿ ಬಟ್ಟೆಯ ಹೊರತುದಿಗೆ ಬೆಂಕಿ ಕೊಟ್ಟೆವು. ಬಾಯಿಯ ಬಟ್ಟೆಯನ್ನು ಉಗಿಯುವ ದಾರಿಕಾಣದೆ ಮತ್ತು ಇಲ್ಲಿಯವರೆಗೆ ಬೆಂಕಿಯಿಂದ ಅಂತಹ ಅನುಭವವನ್ನೇ ಹೊಂದಿರದ ಆ ಕೆಟ್ಟಚಾಳಿಯ ಎಮ್ಮೆಯಕರು ಬೆಂಕಿಯನ್ನೂ ಲೆಕ್ಕಿಸದೆ ಬಟ್ಟೆಯ ಚಂಡೆಯನ್ನು ಜಗಿಯತೊಡಗಿದ್ದರಿಂದ ಅದರ ಮುಖ ಮೂತಿ ಸುಟ್ಟುಹೋಗಿ ಕೊನೆಗೂ ಬಟ್ಟೆಯನ್ನು ಹೊರಕ್ಕೆ ಉಗಿಯಿತು. ಬೆಂಕಿ ಹಿಡಿದ ಬಟ್ಟೆಯನ್ನು ಹೊರಕ್ಕುಗಿದ ಮೇಲೆ ಬೇರೆ ಇನ್ನೊಂದು ಬಟ್ಟೆತುಂಡನ್ನು ಕೊಟ್ಟೆವಾದರೂ ಹೆದರಿದ ಎಮ್ಮೆಕರು ಬಟ್ಟೆಗೆ ಬಾಯಿಹಾಕಲಿಲ್ಲ. ಬಟ್ಟೆಯ ಮೇಲೆ ಹಾತೊರೆಯುವುದು ಕಡಿಮೆಯಾಯಿತೆಂಬ ಖುಷಿಯ ನಡುವೆಯೂ ನಮಗೆ ಇದರ ಪರಿಣಾಮದ ಬಗೆಗೆ ಭಯವಿತ್ತು. ಹಾಗಾಗಿ ಸುಟ್ಟಗಾಯಕ್ಕೆ ಏನೂ ಆಗದಿರಲಿ ಎಂದು ಒಂದಷ್ಟು ಎಣ್ಣೆ ಉದ್ದಿ ಅಪ್ಪನಿಗೆ ಹೇಳದೆ ಸುಮ್ಮನಾದೆವು. ಆದರೆ ಒಂದೆರಡು ದಿನದಲ್ಲಿ ನಮ್ಮ ಭಯ ನಿಜಗೊಂಡಿತ್ತು. ಸುಟ್ಟಗಾಯಕ್ಕೆ ನಾವು ಅಂದು ಲೇಪಿಸಿದ ಎಣ್ಣೆ-ಬೆಣ್ಣೆಗಳಿಂದ ಏನೂ ಉಪಯೋಗವಾಗದೆ ಬಾಯಿಯ ಕೆಳತುದಿಯ ಚರ್ಮದಹಾಸು ಸಿಪ್ಪೆಯಂತೆಯೇ ಕಳಚಿಬಂದಿತ್ತು. ಒಳಗಿನ ಮಾಂಸ ಬೆಂದುಹೋಗಿತ್ತು. ಸುಟ್ಟು ಚರ್ಮಕಳಚಿ ಉಂಟಾದ ಗಾಯದ ಮೇಲೆ ನೊಣಕುಳಿತು ಇಪ್ಪಿಹಾಕಿದ ಪರಿಣಾಮವಾಗಿ ಹುಳುವಾಯಿತು. ಹುಳುಗಳು ಮಾಡಿದ ತೂತಿನಿಂದ ನೆತ್ತರು ಸೋರಲು ಶುರುವಾಯಿತು. ಸೋರುವ ನೆತ್ತರಿಂದ ಗಾಬರಿ ಬಿದ್ದ ನಾವು ಅಪ್ಪನಿಗೆ ಹೇಳಿ ಒಂದಿಷ್ಟು ಬೈಸಿಕೊಂಡು ಮದ್ದುಮಾಡುವ ಬಗೆ ತಿಳಿದೆವು. ಕಳ್ಳಿಹಾಲು, ಕರಿಮದ್ದು ಹಾಕಿ ಹುಳ ತೆಗೆದು, ಮತ್ತೆ ನೊಣಕೂರದಂತೆ ಯಾವ್ಯಾವುದೋ ಎಣ್ಣೆ ಉದ್ದಿ ಸಹಜ ಸ್ಥಿತಿಗೆ ತರಬೇಕಾದರೆ ಸಾಕುಬೇಕಾಯಿತು. ಅಂತೂ ಕಂಡವರ ಬೈಗುಳಕ್ಕೆ ಕಡಸಿನ ಮೂತಿ ಸುಟ್ಟರೂ ಅದರ ಚಾಳಿಯನ್ನು ಪೂರ್ತಿಬಿಡಿಸಲಾಗಲಿಲ್ಲ. ದಕ್ಕಿದ್ದು ಕೆಲಮಟ್ಟಿನ ನಿಯಂತ್ರಣ ಸಾಧಿಸಿದ ಯಶಸ್ಸಷ್ಟೇ.

ಈ ಕೆಟ್ಟಚಾಳಿಯ ನಡುವೆಯೂ ಅದು ಬದುಕಿ ಉಳಿದ ಒಂದೇ ಕರುವಾದ ಕಾರಣ ಮತ್ತು ನಮ್ಮೊಂದಿಗೆ ತೋರುತ್ತಿದ್ದ ಸಲುಗೆಯ ಕಾರಣದಿಂದ ಅಕ್ಕರೆಯ ಕರುವೇ ಆಗಿತ್ತು. ಕೊಂಡಾಟದ ಕಡಸು ಹೋದಲ್ಲಿ ಬಂದಲ್ಲಿ ಮನೆಮಂದಿಯ ಅಕ್ಕರೆಯ ಬಳುವಳಿ ಅನಿಭವಿಸಿ ಹುಲುಸಾಗಿ ಬೆಳೆಯಿತು. ಬೆಳೆದದ್ದು ಜಾಸ್ತಿಯಾಗಿ ಚರ್ಬಿಸೊಕ್ಕಿದ ಅದಕ್ಕೆ ಗರ್ಭನಿಲ್ಲಲಿಲ್ಲ. ಈಗ ಅದರ ನೆಣಕರಗಿಸುವ ಸರದಿ. ಹುಲ್ಲು ಒಕ್ಕುವ ಕಲ್ಲುಕಟ್ಟಿ ಎಳೆಸಿದೆವು. ಹಡ್ಲುಒಕ್ಕಲು ಉಳಿದ ಎತ್ತು,ಕರುಗಳ ಜತೆಗೆಕಟ್ಟಿ ತಿರುಗಿಸಿದೆವು. ಮಾತ್ರವಲ್ಲ ಬೆದೆಬರಲು ಅನುಕೂಲವಾಗುವಂತೆ ಉದ್ದಿನಕಾಳು ನೆನೆಹಾಕಿ ಕಡೆದುಕೊಟ್ಟು ಅಮವಾಸ್ಯೆಯ ಎದುರಿಗೆ ಬೆದೆಗೆ ಕೂಗುವಂತೆ ಮಾಡಿದೆವು. ಹೇಳಿಕೇಳಿ ಅದು ಸಹಜರೂಪದಲ್ಲಿ ಹುಟ್ಟಿದ ಕರು. ಅದಕ್ಕೆ ಕೋಣವನ್ನೇ ಹುಡುಕಬೇಕಿತ್ತು. ದುರಾದೃಷ್ಟಕ್ಕೆ ಊರಲ್ಲಿ ಶೀಲವಾಗಿರದ ಬೀಜದ ಕೋಣಗಳಿರಲಿಲ್ಲ. ಊರಲ್ಲಿ ಕೋಣಗಳಿರದೆ ಪಕ್ಕದೂರಾದ ಗುಡಿಬೆಟ್ಟಿಗೆ ಹೋಗಿ ಯಾರದೋ ಮನೆಯ ಹಟ್ಟಿಯ ಹಿಂದೆ ಕಟ್ಟಿ ಗಬ್ಬ ನಿಲ್ಲುವಂತೆ ಮಾಡಿ ಅದರ ಚೊಚ್ಚಲ ಹೆರಿಗೆಯನ್ನು ಕಂಡೆವು.

ಹೀಗೆ ಅಕ್ಕರೆ, ಅವಸ್ಥೆಗಳ ನಡುವೆ ಮನೆಯಲ್ಲಿಯೇ ಹುಟ್ಟಿನೆರೆದ ಕರು, ಎಮ್ಮೆಯಾಗಿ 8-10 ಕರುಗಳನ್ನು ಹಾಕಿದರೂ ಅವುಗಳಲ್ಲಿ ಒಂದೇ ಒಂದು ಕರುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆದೆಗೆ ಬಂದಾಗ ಮೈಮೇಲೆ ಏರಿ ಬಂದಂತೆ ತೊಕ್ಕಲಿಗೆ ಹಾತೊರೆಯುವ ಎಮ್ಮೆಗೆ ಬೆದೆಕೋಣಗಳೇ ಬೇಕಾಗಿದ್ದವು. ಡಾಕ್ಟರ್ ಕೊಡುವ ಇಂಜಕ್ಷನ್‌ಗೆ ಗಬ್ಬಕಟ್ಟದೆ ಕೆಲವು ಸುಳಿ(ಸರದಿ)ತಪ್ಪಿ ಹೋಗುತ್ತಿತ್ತು. ಹೇಗೋ ಕಷ್ಟಪಟ್ಟು ಅದರ ಬೆದೆ ಪೂರೈಸಿ ಹುಟ್ಟಿಸಿಕೊಂಡ ಕರುಗಳು 6-8 ತಿಂಗಳು ಬದುಕಿ ಯಾಕೋ ಏನೋ ಲೋಕಬಿಡುತ್ತಿದ್ದವು. ಈ ನಡುವೆ ಮೇಯಲು ಇದ್ದ ಬಿಡುಬೀಸಾದ ಜಾಗವೂ ದರಖಾಸ್ತುಗಳಿಂದಲೂ, ಕಬ್ಬಿನ ತೋಟಗಳಾದುದರಿಂದಲೂ ಕಡಿಮೆ ಬೀಳತೊಡಗಿತು. ಬಿಟ್ಟು ಮೇಯಿಸಿ ಹಟ್ಟಿಗೆ ಕಟ್ಟುವುದೇ ಬರುಬರುತ್ತಾ ತ್ರಾಸವಾಗತೊಡಗಿತು. ಎಮ್ಮೆಗೆ ವಯಸ್ಸಾಗುತ್ತಿದ್ದಂತೆ ಮನೆಯಲ್ಲಿ ಮಂದಿಯ ಸಂಖ್ಯೆಯೂ ಕಡಿಮೆಯಾಗತೊಡಗಿತು. ಉದ್ಯೋಗ ಹುಡುಕಿ, ಶಾಲೆಕಲಿತ ನಾವುಗಳು ಊರುಬಿಡುತ್ತಿದ್ದಂತೆ ಹೊತ್ತು ಹೊತ್ತಿಗೆ ಈ ಎಮ್ಮೆಯನ್ನು ಬಿಟ್ಟು ಕಟ್ಟುವ ಕ್ರಮಾನುಸರಣೆಯಲ್ಲಿ ಏರು ಪೇರುಗಳಾಗತೊಡಗಿತು. ಸಿಕ್ಕಷ್ಟು ಹೊತ್ತು ಬೇಸಿಗೆ-ಮಳೆಗಾಲವೆಂಬ ಭೇದವಿಲ್ಲದೆ ಹೊಳೆಬದಿಯಲ್ಲಿ ಒಂದಿಷ್ಟು ಮೇಯಿಸಿ, ವೈನಾಗಿ ಮೈತಿಕ್ಕಿ ಹಟ್ಟಿಯಲ್ಲಿ ಕಟ್ಟುವ ಜವಾಬ್ದಾರಿಯನ್ನು ಅಪ್ಪನೇ ನಿರ್ವಹಿಸುವಂತಾಯಿತು. ಹೀಗೆ ಮಾಡುವಾಗಲೆಲ್ಲಾ ಹೊಳೆ ನೋಡಿದ ತಕ್ಷಣ ಚಂಗುಬೀಳುವ ಎಮ್ಮೆ ಆಚೆ ಪೇರಿಕೀಳುವುದಕ್ಕೆ ಯತ್ನಿಸುವುದು, ಅಪ್ಪನಿಂದ ಹೊಡೆತ ತಿನ್ನುವುದು ಸಾಮಾನ್ಯ ಸಂಗತಿ. brahma-cow-indiaಅಪಾಯದ ಸಂಗತಿಯೆಂದರೆ ಅದು ಈ ಚಾಳಿಯನ್ನು ಮಳೆಗಾಲ-ಅರೆಗಾಲವೆಂಬ ಬೇದವಿಲ್ಲದೆ ತುಂಬಿದ ಹೊಳೆಯಲ್ಲಿಯೂ ಕಾರ್ಯರೂಪಕ್ಕೆ ತರುತ್ತಿತ್ತು. ಹೊಳೆ ತಡಿಯಲ್ಲಿಯೇ ಬದುಕಿದ ಅನುಭವ ಇರುವ ಅಪ್ಪನಿಗೆ ಹೊಳೆ ಮತ್ತು ಅದರ ನೀರು ಬಹಳದೊಡ್ಡ ಸಂಗತಿಯಾಗಿರಲಿಲ್ಲ. ಆಚೆಗೆ ಹೊರಟಾಗಲೋ, ಹೋದಮೇಲೆಯೋ ತಾನೇ ಕೊನೆಯಲ್ಲಿ ಈಜಿ ಈಚೆಗೆ ಹೊಡೆದುಕೊಂಡು ಬರುತ್ತಿದ್ದರು. ಅಪ್ಪನಿಗೆ 75 ರ ವಯಸ್ಸು ದಾಟುತ್ತಿರುವಂತೆ ಈ ಸಾಹಸ ದುಬಾರಿ ಎನಿಸತೊಡಗಿತ್ತು. ಹಾಳಾದ ಎಮ್ಮೆ ಹೊಳೆಬದಿಯಲ್ಲದೆ ಬೇರೆ ಎಲ್ಲಿಬಿಟ್ಟರೂ ಸೊಡ್ಡು ಕುತ್ತುತ್ತಿರಲಿಲ್ಲ. ಒಂದು ಹೊಳೆ ತುಂಬಿದ ದಿನ ಎಮ್ಮೆಯ ಯಥಾ ಪ್ರಕಾರದ ಜಲಪ್ರಯಾಣಕ್ಕೆ ಪ್ರತಿಯಾಗಿ ಅಪ್ಪ ತುಂಬಿದ ಹೊಳೆಗೆ ಹಾರಿ ಈಜಿಕೊಂಡು ಅದನ್ನು ಮರಳಿ ದಡಕ್ಕೆ ಎಬ್ಬುವ ಸಲುವಾಗಿ ಬಾಲಹಿಡಿದು ಬೆನ್ನಿಗೆ ಬಾರಿಸಿದ್ದೇ, ಅಪ್ಪನನ್ನು ಜಾಡಿಸಿ ಬಾಲತಪ್ಪಿಸಿಕೊಂಡು ಹಿಂತಿರುಗಿತು. ತುಂಬಿದ ಹೊಳೆ, ವಾರಾಹಿ ಯೋಜನೆಯ ಅಣೆಕಟ್ಟೆಯ ಹೆಚ್ಚುವರಿ ನೀರು ಬೇರೆ ಬಿಟ್ಟಿದ್ದರಿಂದ ಎರಡೂ ದಡಗಳು ಒಂದಾಗಿವೆ. ಅಪ್ಪನಿಗೆ ದಿಕ್ಕು ತಪ್ಪಿತು. ಹೊಳೆನೀರಿನ ಒಯ್ಲಿನಲ್ಲಿ ಹರೆಯ ಜಾರಿದ ಅಪ್ಪನ ತೊಡೆಯ ಬಲ ಸಾಕಾಗಲಿಲ್ಲ. ಕೈಕಾಲು ಬಲಿಯಲಾಗದೆ ತೇಲಿಹೋಗಿಯೇ ಬಿಟ್ಟರು. ಜೀವಮಾನ ಪೂರ್ತಿ ಹೊಳೆಯೆದುರಿಗೇ ಬೆಳೆದರೂ ತುಂಬಿದ ಹೊಳೆಯಲ್ಲಿ ಸಾಹಸ ಮಾಡಬಾರದ ವಯಸ್ಸಿನಲ್ಲಿ ಸಾಹಸಕ್ಕಿಳಿದ ಅಪ್ಪ ಹೇಗೋ ನೀರಿನಲ್ಲಿ ಬಚಾವಾಗುವ ದಾರಿ ಕಂಡುಕೊಂಡದ್ದರಿಂದ ಈಚೆಯ ದಡಕ್ಕೆ ಬರಬೇಕಾದವರು ಬರಲಾರದೇ ಹೋದರೂ, ತೇಲಿಕೊಂಡು ಯಾವುದೋ ಒಂದು ದಡಮುಟ್ಟಿ ಸುಧಾರಿಸಿಕೊಂಡರು. ದೋಣಿಯವನನ್ನು ಕರೆದು ದೋಣಿಯ ಮೂಲಕ ಈಚೆಗೆ ಬರುವಷ್ಟರಲ್ಲಿ ಹೊಳೆಯ ದಡಯೇರಿದ ಎಮ್ಮೆ ಬೈಲು ಹತ್ತಿಕೊಂಡು ಯಾರದೋ ಅಗೇಡಿಯಲ್ಲಿ ಅಗೆ(ಭತ್ತದಸಸಿ)ತಿನ್ನುತ್ತಿತ್ತು. ಅಪ್ಪನಿಗೆ ಎಮ್ಮೆಯನ್ನು ಕಾಣುತ್ತಲೇ ನೆತ್ತಿಗೇರಿದ್ದ ಕೋಪ ಮತ್ತಷ್ಟು ಹೆಚ್ಚಾಯಿತು. ‘ನನ್ನನ್ ಕೊಲ್ತಿದ್ಯಲೆ?’ ಎಂದು ಕೈಯಲ್ಲಿನ ಹೂಂಟಿಕೋಲಿಂದ ಎರಡು ಬಾರಿಸಿ, ಅದರ ಮೈಯನ್ನೂ ತೊಳೆಯದೆ ಹಾಗೆಯೇ ತಂದು ಹಟ್ಟಿಯಲ್ಲಿ ಕಟ್ಟಿ, ಮನೆ ಸೇರಿಕೊಂಡು ನಿಟ್ಟುಸಿರುಬಿಟ್ಟರು.

ಅಪ್ಪನಿಗೆ ತನ್ನ ಮೇಲೆ ಇಲ್ಲಿಯವರೆಗೆ ಇದ್ದ ಅಪಾರವಾದ ಭರವಸೆಯನ್ನು ಇನ್ನು ಮುಂದೆಯೂ ಈ ಎಮ್ಮೆಯ ಕಾರಣದಿಂದ ಪರೀಕ್ಷಿಸುತ್ತಲೇ ಹೋಗಬೇಕೆಂಬ ಉತ್ಸಾಹ ಕಡಿಮೆಯಾಗತೊಡಗಿತು. ವಯಸ್ಸುಕಳೆದರೂ, ಗಬ್ಬಕಟ್ಟಿ ಹಾಲುಕರೆಯುವ ನಿಯಮಿತತೆ ತಪ್ಪಿದರೂ ಎಮ್ಮೆಯ ಹಾರಾಟ ಕಡಿಮೆಯಾಗಲಿಲ್ಲ, ಜಾಸ್ತಿಯಾಗುತ್ತಲೇ ಹೋಯಿತು. ಹಟ್ಟಿಯಲ್ಲಿ ಹಾಕುವುದಾಗಲೀ, ಬಿಟ್ಟಾಗ ಸಿಕ್ಕುವುದಾಗಲೀ ಅದಕ್ಕೆ ಸಾಕೆನಿಸುತ್ತಿರಲಿಲ್ಲ. ಕಂಡಲ್ಲಿಗೆ ಓಡತೊಡಗುವ ಅದರಿಂದ ಬಹುದೊಡ್ಡ ಅಪಾಯ ಇರುತ್ತಿದ್ದುದು ಹೊಳೆಯ ಮೂಲಕ. ಈಗೀಗ ಅದರ ವೇಗಕ್ಕೆ ಸರಿಯಾಗಿ ಓಡಿ ಹೋಗಿ ಅಡ್ಡ ಹಾಕುವುದು ಅಪ್ಪನಿಂದ ಸಾಧ್ಯವಾಗುತ್ತಿಲ್ಲ. ನಿಯಂತ್ರಣಕ್ಕೆ ಕುಂಟಿಕಟ್ಟಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಕಾಲುಕುತ್ತಿಗೆಗೆ ಬಳ್ಳಿ ಹಾಕಿದರು. ಇದರಿಂದ ಅದರ ಓಟಕ್ಕೆ ಬ್ರೇಕ್ ಬಿದ್ದರೂ ಕಾಟಕ್ಕೆ ಬ್ರೇಕ್ ಹಾಕಲು ಆಗಲೇ ಇಲ್ಲ. ಮಾತ್ರವಲ್ಲ ಅದಕ್ಕಿರುವ ಹೊಳೆಹಾರಿ ಪೇರಿಕೀಳುವ ಹವ್ಯಾಸದ ವೇಳೆಯಲ್ಲಿಯೂ ಈ ಕಾಲುಕುತ್ತಿಗೆಗೆ ಹಾಕಿದ ಬಳ್ಳಿ ಅದರ ಜೀವಕ್ಕೂ ಅಪಾಯ ಎನಿಸತೊಡಗಿತು. ಈ ನಡುವೆ ಹೊಳೆದಾಟಿ ಹೋದಾಗ ಅಪ್ಪ ಜಾಗ್ರತೆ ಮಾಡಿ, ಸಾಹಸವನ್ನೂ ತೋರಿ ಅದನ್ನು ಹೇಗೋ ಹಟ್ಟಿಗೆಹೊಡಕೊಂಡು ಬರುತ್ತಿದ್ದರು. ಇದು ನಿತ್ಯದ ಕಾಯಕದಂತಾದಾಗ ಆಚೀಚೆಯವರು ಈ ಸಾಹಸಕ್ಕೆ ಕೊನೆಹಾಡಿ ಎಂದು ಅಪ್ಪನಿಗೆ ಬೈಯಲು ಶುರು ಮಾಡಿದರು. ಅವರಿಗೆ ವಯಸ್ಸಾದುದನ್ನು ನೆನಪಿಸಿ ಈ ಹುಚ್ಚಾಟ ಆಡದಂತೆ ಎಚ್ಚರ ಹೇಳಲು ಶುರುಮಾಡಿದರು. ನಮಗೂ ಆ ಎಮ್ಮೆಯನ್ನು ಇಷ್ಟು ದುಬಾರಿಯಾಗಿ ಪ್ರೀತಿಸುವುದು ಸಾದ್ಯವಿರಲಿಲ್ಲ. ಕೊನೆಗೂ ಅಪ್ಪ ಒಂದು ನಿರ್ಧಾರಕ್ಕೆ ಬಂದು ಅದನ್ನು ಕೊಟ್ಟುಬಿಡಲು ನಿರ್ಧರಿಸಿದರು.

ಹಾಲುಕರೆಯದ, ಗಬ್ಬಕಟ್ಟದ ಎಮ್ಮೆಯನ್ನು ಮಾರಬೇಕು ಯಾರಿಗೆ? ಪೈರಿನವರೋ, ಸಾಕುವವರೋ ಕೊಂಡ್ಕೊಂಡು ಮಾಡುವುದಾದರೂ ಏನನ್ನು? ಕೊನೆಗೂ ಆ ಎಮ್ಮೆಯ ಗಿರಾಕಿಯಾಗಿ ಅಪ್ಪನಿಗೆ ಸಿಕ್ಕಿದ್ದು ಕಂಡ್ಲೂರಿನ ಪರಿಚಿತ ಸಾಬಿಯೇ. ಚೌಕಾಸಿ ಮಾಡಿ ಒಂದು ರೇಟಿಗೆ ಒಪ್ಪಿಕೊಂಡು ಕಾಸನ್ನೂ ಕೊಡುವುದಾಗಿ ಸಂಚಕಾರಕೊಟ್ಟು ಮುಂದಿನವಾರ ಬರುವುದಾಗಿ ಹೇಳಿಹೋದ. ಆತ ಇನ್ನೊಬ್ಬನ ಜತೆಗೆ ಬಂದು ಯಥಾಪ್ರಕಾರ ಉಳಿದ ಹಣಕೊಟ್ಟು ಅಪ್ಪನಿಲ್ಲದ ವೇಳೆಯಲ್ಲಿ ಮನೆಯಲ್ಲಿರುವ ಅಮ್ಮ ಹಾಗೂ ನನ್ನ ಅಕ್ಕತಂಗಿಯರ ಅನುಮತಿ ಪಡೆದು ಹಟ್ಟಿಯಿಂದ ಎಬ್ಬಿಕೊಂಡು ನಡೆದ. ಹಟ್ಟಿಯಿಂದ ಹೊರಟು ಎರಡು ಫರ್ಲಾಂಗು ನಡೆದುಹೋಗುವುದರೊಳಗೆ, ತಾನು ಊಹಿಸಿಯೇ ಇರದ ಭೀಕರದಾಳಿಗೆ ಆತ ತುತ್ತಾಗುವಂತಾದುದು ನನ್ನೂರಿನ ಮೊದಲ ಆಕಸ್ಮಿಕ.!

ದನ, ಎಮ್ಮೆ, ಕೋಣ, ಎತ್ತುಗಳೆಂಬ ನಾಲ್ಕು ಕಾಲಿನ ಜಾನುವಾರುಗಳನ್ನು ಸಾಯುವ, ಸಾಕಲಾರದ ಸ್ಥಿತಿಯಲ್ಲಿ ಹೀಗೆ ಮಾರುತ್ತಿದ್ದುದು ಅದೇ ಮೊದಲಾಗಿರಲಿಲ್ಲ. Indian-Cow-calfಕೊನೆಯೂ ಆಗಿರಲಿಲ್ಲ. ನಾವೇ ಸಾಕಿದ ಕರು-ಕಡಸು-ಎಮ್ಮೆ ಎಲ್ಲವೂ ಆಗಿದ್ದೂ ನಮಗೆ ಅದಕ್ಕಿಂತ 75 ರ ಅಪ್ಪನೂ ಮುಖ್ಯವಾಗಿದ್ದರಲ್ಲವೇ? ನಮ್ಮಪ್ಪನಿಗೆ ಬೇರೆ ದಾರಿಯಿಲ್ಲದೆ ಕೊಡಲೇಬೇಕಾಗಿ ಕೊಟ್ಟ ಎಮ್ಮೆಯದು. ಅದಕ್ಕೆ ಪ್ರತಿಯಾಗಿ ನಮ್ಮ ಮನೆಯವರು ಕಾಸನ್ನೂ ಪಡೆದಿದ್ದರು. ಆದರೆ ನನ್ನೂರಿಗೆ ಪರಿಚಿತವೇ ಅಲ್ಲದ ಬೆಳವಣಿಗೆಯೊಂದು ಚುರುಕು ಪಡೆದುಕೊಳ್ಳುತ್ತಿದ್ದ ಕಾಲವದಾಗಿತ್ತು ಅಂತ ಕಾಣುತ್ತದೆ. ಅಲ್ಲಿ ಇಲ್ಲಿ ಗುಸುಗುಸು ಅನ್ನುತ್ತಿದ್ದ ಸಮಸ್ಯೆಯೊಂದು ನಮ್ಮ ಹಟ್ಟಿಗೆ ತಗುಲಿಕೊಂಡು ಅಂದು ನಡೆದು ಹೋಗಿತ್ತು. ಎಮ್ಮೆಯನ್ನು ಹೊಡೆದುಕೊಂಡು ಒಂದೆರಡು ಫರ್ಲಾಂಗು ಬರುವಷ್ಟರಲ್ಲಿ ನಿರಪರಾಧಿಯಾದ ಆ ಸಾಬಿ ಮತ್ತು ಆತನ ಸಹಚರನ ಮೇಲೆ ದಾಳಿ ಮಾಡಿದ ಈ ತಂಡ ಆ ಬೋಳುಗುಡ್ಡೆಯಲ್ಲಿ ನಿರ್ದಯವಾಗಿ ಕೇಳುವವರೇ ಇಲ್ಲದಂತೆ ಸಿಕ್ಕಸಿಕ್ಕಲ್ಲಿ ಬಾರಿಸಿತು. ಈ ಹೊಡೆತ ತಿಂದೂ ಆ ಸಾಬಿ ಮತ್ತು ಆತನೊಂದಿಗಿದ್ದ ಹುಡುಗ ಎಮ್ಮೆಯನ್ನು ಮರಳಿ ನಮ್ಮ ಹಟ್ಟಿಗೇ ತಂದು ಕಟ್ಟಿದರು. ನನ್ನ ಅಮ್ಮ ಮತ್ತು ಅಕ್ಕ ತಂಗಿಯರು ಹೇಳುವಂತೆ ಪೆಟ್ಟು ತಿಂದು ಬಾತುಕೊಂಡ ತನ್ನ ಕೆನ್ನೆಯನ್ನು ತೋರಿ ಆ ಮನುಷ್ಯ ಅತ್ತದ್ದು ಕರಳು ಕರಗುವಂತಿತ್ತು. ತಪ್ಪೇ ಮಾಡದ ತಮ್ಮ ಮೇಲೆ ಹೀಗೆ ದಾಳಿ ಮಾಡಬಹುದೇ ಎಂಬ ಪ್ರಶ್ನೆಗೆ ನನ್ನ ಮನೆಯಲ್ಲಿದ್ದವರಲ್ಲಿ ಅಂದು ಉತ್ತರವಿರಲಿಲ್ಲ. ಅವರಿಗೆ ಈ ನೋವಿನ ಜತೆಗೇ ಆ ಎಮ್ಮೆ ಮತ್ತೆ ಹಟ್ಟಿಗೆ ಬಂದದ್ದು ಮತ್ತಷ್ಟು ಚಿಂತೆಗಿಟ್ಟುಕೊಂಡಿತು. ನಮ್ಮದೇ ಅಕ್ಕರೆಯ ಎಮ್ಮೆ ನಮಗೆ ಅಂದು ನಿಶ್ಚಿತವಾಗಿಯೂ ಹೊರೆಯೆನಿಸಿತ್ತು. ಎಮ್ಮೆಯನ್ನು ಹಟ್ಟಿಯಲ್ಲಿ ಕಟ್ಟಿದ ಕೆಲಹೊತ್ತಿನಲ್ಲಿ ಬಂದ ಅಪ್ಪನಿಗೆ ಈ ಹೊಸ ಸಂಗತಿ ಕೇಳಿ ಸಿಟ್ಟುಬಂತು. ಹೀಗೆ ಎಮ್ಮೆಯನ್ನೂ, ಕೋಣವನ್ನೋ, ಎತ್ತಿನಗುಡ್ಡವನ್ನೋ ಅವರು ಮೊದಲನೆ ಬಾರಿ ಮಾರಿದುದಲ್ಲ. ಹಿಂದಣೆಯಲ್ಲಿ ಕಟ್ಟಲು ಜಾಗವಿಲ್ಲದಾಗ ಮುಂದಣೆಯಲ್ಲಿದ್ದು ಭಾರವಾಗುವಾಗ ಹಗುರವಾಗಲು ನನ್ನ ಅಪ್ಪನಿಗಾಗಲೀ, ಆ ಊರಿನ ಸುತ್ತಮುತ್ತಲಿನ ಎಲ್ಲರಿಗೂ ಇರುವ ಕೊನೆಯ ದಾರಿ ಇದೊಂದೇ ಆಗಿತ್ತು. ಅದು ಅವರ ಪಾಲಿಗೆ ಯಾವುದೇ ತೆರನಾದ ಕೃತಘ್ನತೆಯ ಕೆಲಸವೂ ಆಗಿರಲಿಲ್ಲ. ಹಾಗೆಯೇ ಅದನ್ನವರು ಉತ್ಸಾಹದಿಂದಲೂ ಮಾಡುತ್ತಿರಲಿಲ್ಲ. ಅಂತಹ ಯಾವುದೇ ನೀತಿಪಾಠವೂ ಅವರ ಹಟ್ಟಿಯ ಮತ್ತು ಹೊಟ್ಟೆಯ ಸಮಸ್ಯೆಯನ್ನು ನೀಗಿಸುತ್ತಿರಲಿಲ್ಲ. ಹಟ್ಟಿಯಲ್ಲಿ ಕಟ್ಟಿಕೊಳ್ಳಲಾಗದವುಗಳನ್ನು ಏನು ‘ಕೊರಳಿಗೆ ಕಟ್ಟಿಕೊಳ್ಳುವುದೇ?’ ಎಂಬ ಸರಳ, ನೇರಪ್ರಶ್ನೆ ಅವರದ್ದಾಗಿತ್ತು. ಸಾಬಿಗೆ ಬಿದ್ದಏಟು, ಏಟು ಕೊಟ್ಟ ಹುಡುಗರ ವಯಸ್ಸು ಕೇಳಿ ಅಪ್ಪ ಉರಿದುಹೋದರು. ‘ಇಪ್ಪತ್ತರಲ್ಲಿ ಯಜಮಾನ್ಕಿ ಸಿಕ್ಕುಕಾಗ, ಎಪ್ಪತ್ತರಲ್ಲಿ ಹೇಲು ಸುರುವಾಪ್ಕಾಗ’ ಎಂಬಂತೆ ಹಿರಿಯರು ಹೇಳುವ ಗಾದೆಯನ್ನು ಉಲ್ಲೇಖಿಸಿ, ‘ಅದ್ಯಾವುದಕ್ಕೊ ಯಜಮಾನಿಕೆ ಸಿಕ್ಕಿದರೆ ಮನೆಮಂದಿಗೆಲ್ಲಾ ಬಸುರು ಮಾಡುತ್ತದೆ’ ಎಂದು ಗುಟುರು ಹಾಕಿದ ಎಪ್ಪತ್ತೈದರ ಅಪ್ಪ ‘ಅದ್ಯಾವನು ಬಂದು ಹೊಡಿತಾನೆ ಬಾ ನಾನೇ ಬಂದು ಹೊಡೆದುಕೊಂಡು ಬರುತ್ತೇನೆ’ ಎಂದು ಸಾಬಿಗೆ ಧೈರ್ಯ ತುಂಬಿದರು. ಬರಿಯ ಧೈರ್ಯ ತುಂಬಿದ್ದಲ್ಲ. ಕಂಡ್ಲೂರಿನ ತನಕ ತಾವೇ ಸ್ವಯಂ ಆತನ ಜೊತೆಗೆ ಹೋಗಿ ಅಂತೂ ಆ ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ತೇಲಿಹೋಗುವ ಅಪಾಯದಿಂದ ಮುಕ್ತಿ ಕಂಡರು.

ಸಾಬಿ ಪೆಟ್ಟು ತಿಂದುದು, ಸಾಬಿಗೆ ಹೊಡೆದು ಪೌರುಷ ಮೆರೆದುದು ಎರಡೂಕಡೆ ಸುದ್ದಿಯಾಯಿತೇ ವಿನಹಾ ಸರಿ-ತಪ್ಪುಗಳ ವಿಮರ್ಶೆಗೆ ಒಳಪಡಲಿಲ್ಲ. ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ನಡೆಸಬೇಕಾಗಿದ್ದ ಸರ್ಕಸ್‌ನಿಂದ ಅಪ್ಪ ಪಾರಾದರು. ಇದೇ ಕಾರಣದಿಂದ ಪೆಟ್ಟುತಿಂದ ಅಪ್ಪನಿಗಿಂತ ತುಸು ಕಡಿಮೆ ಪ್ರಾಯದ ಮಾಲುಕೊಂಡಾತನೂ ಸುಮ್ಮನಾದ. ವಯಸ್ಕರಿಬ್ಬರ ನಡುವೆ ನಡೆದ ಈ ವ್ಯವಹಾರದಲ್ಲಿ ತಲೆಹಾಕಿ ತಮ್ಮ ತಮ್ಮ ಸಂಸ್ಕೃತಿ ಪರಂಪರೆಯ ರಕ್ಷಣೆಗಾಗಿ ಹೊಡೆದಾಟಕ್ಕೆ ನಿಂತವರು ೨೦ರ ಆಸುಪಾಸಿನ ಹುಡುಗರು. ನ್ಯಾಯವಾದ ಹಣ ನೀಡಿ, ಮಾಲುಕೊಂಡು ಬರುವಾಗ ಅಮಾನವೀಯ ಥಳಿತಕ್ಕೊಳಗಾದ ಸಾಬಿಯಕಡೆಯ ಪಡ್ಡೆಹುಡುಗರಿಗೆ ಇದೊಂದು ಶೌರ್ಯದ ಸವಾಲಾಯಿತು. ಪೆಟ್ಟು ತಿಂದ ಸಾಬಿ ತನ್ನ ಉಬ್ಬಿದ ದವಡೆಯ ನೋವು ಸುಧಾರಿಸಿಕೊಂಡು ತಣ್ಣಗಾದ. ಆದರೆ ಈ ಹುಡುಗರು ಸೇಡಿಗಾಗಿ ಕಾತರಿಸಿದರು. ಘಟನೆ ನಡೆದ ನಾಲ್ಕೆಂಟು ದಿನಗಳ ಅಂತರದಲ್ಲಿ ಸಾಬಿಯ ಮೇಲೆ ಆಕ್ರಮಣ ಮಾಡಿ ಸಾಹಸಮೆರೆದ ತಂಡದನಾಯಕನ ಮೇಲೆ ತಮ್ಮೂರಿನ ಹೆದ್ದಾರಿಯಲ್ಲಿ ಈ ಹುಡುಗರು ಮುಗಿಬಿದ್ದು ಮುಖಮೂತಿ ನೋಡದೆಯೇ ಹೊಡೆದು ಬಿಟ್ಟರು. ಅಲ್ಲಿಯವರೆಗೆ ಸಣ್ಣ ಪುಟ್ಟ ಮಟ್ಟದ ತರಲೆ ತಕರಾರಿಗಷ್ಟೇ ಸೀಮಿತವಾಗಿದ್ದ ಊರು ಬೆಂಕಿಯ ಕುಂಡವಾಯಿತು. ದಿಗ್ಭಂಧನ, ನಿಷೇಧ, ಸಂಘಟನೆ, ಹೋರಾಟ ಮುಂತಾದ ಪರಿಭಾಷೆಗಳೇ ತೇಲಾಡಿದವು.

ದೀಪಾವಳಿಯ ಕೊಯ್ಲಿಗೆ ಮೊದಲೇ ಹುರಿಹಗ್ಗ ಮಾಡಿಕೊಂಡು ಯಾರ ಹೆಸರು ಎನೇ ಆಗಿರಲಿ ಎಲ್ಲರನ್ನೂ ‘ಪುಟ್ಟಯ್ಯ ಶೆಟ್ರೇ, ಪುಟ್ಟಮ್ಮ ಶೆಡ್ತಿರೇ’ ಎಂದು ಕರೆಯುತ್ತಾ ಮುಂಗಡ ಹಗ್ಗ ಕೊಟ್ಟು, ಕೊಯ್ಲಾದ ಮೇಲೆ ಭತ್ತ ಸಂಗ್ರಹಿಸುತ್ತಿದ್ದ ಖಾದಿರನಂತವರು, ಹಳೇಬಾಟ್ಲಿ,ಪಾತ್ರೆ,ಗುಜಿರಿ ಒಟ್ಟು ಮಾಡಲು ಬರ್‍ತಾಯಿದ್ದ ಕಂಪದ ಅಹಮ್ಮದ್‌ಸಾಹೇಬರು, ಗೇರುಬೀಜ,ಕಾಸಾನಬೀಜ,ಅಟ್ಲಕಾಯಿ ಒಟ್ಟುಮಾಡಿಕೊಂಡು ಹೋಗ್ತಿದ್ದ ಗುಲ್ವಾಡಿಯ ಇಸ್ಮಾಯಿಲ್ ಇವರೆಲ್ಲಾ ಊರ ಮೇಲೆ ಬರುವುದು ಒಮ್ಮೆಗೆ ಬಂದ್ ಆಯಿತು. ಕಂಡ್ಲೂರೆಂಬ ಪಾಕಿಸ್ತಾನವನ್ನು ಬಿಟ್ಟು ಈ ಊರಮೇಲೆ ಬರುವವರಿಗೆಲ್ಲಾ ಅಘೋಷಿತವಾದ ನಿಷೇಧವೇ ಆಗ ಹೆಚ್ಚು ಕಡಿಮೆ ಜಾರಿಗೆ ಬಂದಿತ್ತು. ಬೀಡಿ ಕಂಪೆನಿಯ ಸಾಬಿಯೂ ಕೆಲ ದಿನ ಬೀಡಿ ಸಂಗ್ರಹಿಸಲು ಬರದಾದ. ಅಷ್ಟೋ ಇಷ್ಟೋ ಮೋಸ ಮಾಡಿಯೂ ಊರವರ ಪ್ರೀತಿಗಳಿಸಿ ಚೆನ್ನಾಗಿಯೇ ಮಾತಾಡಿಕೊಂಡು ತಮ್ಮ ಹೊಟ್ಟೆಪಾಡಿನ ವ್ಯವಹಾರ ಮಾಡಿಕೊಂಡಿದ್ದ ಹಳೆಯ ತಲೆಮಾರಿನ ಎರಡೂ ಕಡೆಯ ಮಂದಿ ಅಕ್ಷರಶಃ ಚಡಪಡಿಸಿದರು. cow-calfಗೇರುಬೀಜ,ಕಾಸಾನಬೀಜಗಳು ಕೊಂಕಣಿಗಳ ಇಲ್ಲವೇ ಸ್ವಧರ್ಮಿಕರ ಅಂಗಡಿಗೆ ಹೊತ್ತುಕೊಂಡು ಹೋಗಿ ಹಾಕಬೇಕಾಗಿ ಬಂದು ಹೆಂಗಸರ ಕೈಗೆ ಅಷ್ಟೋ ಇಷ್ಟೋ ಸಿಕ್ತಾಯಿದ್ದ ಕಾಸು ನೇರವಾಗಿ ಗಂಡಸರ ಕಿಸೆಗೆ ಜಮೆಯಾಗತೊಡಗಿದವು. ಈ ನಡುವೆ ಮೊದಲು ಪೆಟ್ಟುಕೊಟ್ಟು ಆಮೇಲೆ ಆಕ್ರಮಣಕ್ಕೊಳಗಾದವರ ಪರವಾಗಿ ಚಿಕ್ಕಚಿಕ್ಕ ಊರುಗಳಲ್ಲಿ ಪ್ರತಿಭಟನೆಗಳು ನಡೆದವು. ತಾವು ಮಾಡಿದುದನ್ನು ಕರ್ತವ್ಯವೆಂದೂ, ತಮ್ಮ ಮೇಲಾದುದನ್ನು ಆಕ್ರಮಣವೆಂದೂ ವ್ಯಾಖ್ಯಾನಿಸಿ ಈ ಸಭೆಗಳಲ್ಲಿ ವೇದಿಕೆಯ ಮೇಲಿಂದ ಉಗ್ರಭಾಷಣಗಳು ನಡೆದವು. ಈ ಮಾದರಿಯ ಗಿರಾಕಿಗಳನ್ನು ಕೊಳ್ಳುವವರೆಂಬುದಕ್ಕೆ ಬದಲಾಗಿ ಕದಿಯುವರೆಂದೂ, ತಾವುಗಳು ಗೋವುಗಾಳಗಕ್ಕೆ ಮುಂದಾಗಿ ಊರಳಿವನ್ನು ನಿವಾರಿಸುವಂತೆ ಕರೆಕೊಡುವ ಶಾಸನಗಳ ಮಾತನ್ನು ಪಾಲಿಸುವವರೆಂದು ಘೋಷಿಸಲಾಯಿತು. ಇದಕ್ಕೆ ಪೂರಕವಾಗಿ ದನದ ಅಪಹರಣದ ದಿಟವಾದ, ಸುಳ್ಳಿನ ಎರಡೂ ಮಾದರಿಯ ಸಂಗತಿಗಳು ಸೇರಿದ ಕಥೆಗಳು ಹುಟ್ಟಿಕೊಂಡವು. ಸಾಕುವವರ ಪರವಾಗಿ ಅವುಗಳನ್ನು ಹಗಲು-ರಾತ್ರಿ ಕಾಯುವುದು ತಮ್ಮ ಕರ್ತವ್ಯವೆಂದು ಸ್ವಯಂ ಘೋಷಿಸಿಕೊಳ್ಳುವ ಅರಿಯದ ಹರೆಯದ ಹುಡುಗರ ಪಡೆಗಳು ಹುಟ್ಟಿಕೊಂಡವು. ಈ ಪಡೆಗಳು ಗಟ್ಟಿಗೊಳ್ಳುತ್ತಿದ್ದಂತಯೇ ಊರವರಲ್ಲಿ ಚಿಂತೆ ಆವರಿಸಿಕೊಳ್ಳಹತ್ತಿತು. ಕೆಲವರು ಗುಟ್ಟಾಗಿ ಹಟ್ಟಿಯಲ್ಲಿ ಇದ್ದ-ಬಿದ್ದ ದನಕರುಗಳನ್ನು ಹೊಳೆಯ ಮೂಲಕ ದನಕೊಳ್ಳುವವರಿಗೆ ರವಾನಿಸಿ ತಮ್ಮ ಹಟ್ಟಿಯನ್ನು ಸಗಣಿ ಮುಕ್ತವಾಗಿಸಿಕೊಳ್ಳತೊಡಗಿದರು. ‘ಯಾವನು ಬಂದು ತಡೆಯುತ್ತಾನೆ ನೋಡೋಣ?’ ಎಂದು ಸ್ವಯಂ ಕೆಚ್ಚುತೋರಿ ಅಲ್ಲಗೇ ಹೋಗಿ ಮುಟ್ಟಿಸಿಬಂದಿದ್ದ ನನ್ನ ಅಪ್ಪನೂ ಮತ್ತೆ ಎಮ್ಮೆ ತರುವ ಉಸಾಬರಿಗೆ ಹೋಗಲಿಲ್ಲ. ಮಾತ್ರವಲ್ಲ ಎಮ್ಮೆಯ ಜತೆಗೆ ಗೋಮಯಕ್ಕಾಗಿ ಇದ್ದ ಒಂದೇ ಒಂದು ದನ ಹಾಗೂ ಅದರ 2 ವರ್ಷದ ಗಂಡುಕರುವನ್ನು ಅದೇ ವರ್ಷ ಗುಟ್ಟಾಗಿ ಸಾಗಹಾಕಿದ ಮೇಲೆ ಹಳೆಯ ಹಸು-ಎಮ್ಮೆಗಳ ತಳಿಗಳಿಗೆ ಖಾಯಂ ಆದ ಪೂರ್ಣವಿರಾಮಬಿತ್ತು. ಈ ಮಾರುವಿಕೆಯ ಚಾಳಿ ಮತ್ತೂ ಮುಂದುವರೆದು ಗಟ್ಟಿಮುಟ್ಟಾಗಿದ್ದ ಕೋಣಗಳನ್ನು ಉಳುವವರಿಗೆ ಮಾರಿ ಗಂಟಿಸಾಕುವ ಉಸಾಬರಿಯೇ ಸಾಕು ಎಂಬ ನಿರ್ಧಾರಕ್ಕೆ ಬಂದಂದಿನಿಂದ ನಮ್ಮ ಗದ್ದೆಗಳಲ್ಲಿ ಮಳೆಗಾಲದಲ್ಲಿ ಟ್ರಿಲ್ಲರ್‌ಗಳ ಸದ್ದಷ್ಟೇ ಕೇಳಿಸುತ್ತದೆ. ಇದು ನನ್ನೊಬ್ಬನ ಮನೆಯ ಪರಿಸ್ಥಿತಿಯಲ್ಲ. ನನ್ನೂರಿನ ಯಾವ ಮನೆಯಲ್ಲಿಯೂ ಇಂದು ಜೋಡಿಲ್ಲ. ಹಿಂದೆ ಜೋಡು ಇರುವಾಗ ಬೆಳೆಯುತ್ತಿದ್ದ ಎಳ್ಳು, ಉದ್ದು, ಹುರುಳಿ, ಅವಡೆ, ಹೆಸರು ಮುಂತಾದ ಧಾನ್ಯದ ಕಾಳುಗಳು ಮತ್ತು ಗೆಣಸಿನ ಬೆಳೆ ಪೂರ್ಣವಾಗಿ ನಿಂತು ಹೋಗಿವೆ. ನನ್ನೂರು ಚಿಕ್ಕದಾದರೂ ತಾಲೂಕಿನಲ್ಲಿಯೇ ಅತ್ಯಂತ ಸಮೃದ್ಧವಾದ ಎಳ್ಳ್ಳುಬೆಳೆಯುವ ಜಾಗವಾಗಿತ್ತು. ಗೆಣಸು,ಉದ್ದು, ಹುರುಳಿ, ಕಾಳುಕಡಿ ಏನೆಲ್ಲವನ್ನೂ ಬೆಳೆಯುವ ಮೂಲಕ ಬೇಸಿಗೆಯಲ್ಲೂ ನನ್ನೂರಿನ ಬಯಲು ಹಸಿರು ತುಂಬಿಕೊಳ್ಳುತ್ತಿತ್ತು. ಬೆಳೆಯುವ ಬಯಲು ಖಾಲಿಯಾದಂತೆ ಎಮ್ಮೆ, ಕೋಣ,ನಾಟಿಹಸು ಯಾವುದೂ ಇರದ ನನ್ನ ಹಟ್ಟಿಯೂ ವಸ್ತುಶಃ ಖಾಲಿಯಾಗಿದೆ. ಆದರೆ ಕಟ್ಟಿಟ್ಟ ಹಟ್ಟಿ ಖಾಲಿ ಎನ್ನದ ಹಾಗೆ ಈಗ ಅಲ್ಲಿ ಬೂಸಾತಿಂದು, ಹಾಲುಕರೆಯುವ ಎರಡು ಯಂತ್ರಗಳಿವೆ. ಅವುಗಳ ಹೆಣ್ಣುಕರುಗಳಿಗೆ ಮಾತ್ರ ಬದುಕುವಹಕ್ಕು ಎಂಬ ಶಾಸನವೂ ಜಾರಿಯಲ್ಲಿದೆ. ಇವುಗಳ ಗಂಡುಕರುಗಳನ್ನು ಮಾರುವ ತಾಪತ್ರಯವಿಲ್ಲ.ಅವುಗಳಿಗೆ ಕೊಡುವ ಹಾಲಿನಲ್ಲಿಯೇ ಏರುಪೇರು ಮಾಡಿ ಕೊಂದುಬಿಡುತ್ತಾರೆ. ಪಾಪ ಅವರಾದರೂ ಏನೂ ಮಾಡಿಯಾರು?

ಎಮ್ಮೆ ಕಟ್ಟಿದ ದಪ್ಪ ಮರ್ಚುಗಳು ಹಟ್ಟಿಯಗೋಡೆಯೇರಿ ಅಲ್ಲಿಯೇ ಲಡ್ಡಾಗಿವೆ. Two old and weak cows looking hungry, weak and unhealthy standinಶಾಲೆಯ ದಿನಗಳಲ್ಲಿ ಅಮ್ಮ ತುಂಬಿಕೊಡುತ್ತಿದ್ದ ಬುತ್ತಿಯಲ್ಲಿನ ದಪ್ಪನೆಯ ಕೆನೆಬರಿತ ಎಮ್ಮೆ ಹಾಲಿನ ಮೊಸರಹೆಟ್ಟೆ (ಗಟ್ಟಿಮೊಸರು) ನೆನಪಿನ ಖಜಾನೆ ಸೇರಿದೆ. ಹಿಂದಿನಂತೆ ಕಿರ್‍ಗಾಲು,ಕಡಾಲುಗಳಿಗೆ ಕೆಲಸವಿಲ್ಲ. ‘ಸಾರ್‌ಬೋರ್ ಸಕ್ಕರ್ ಬೋರ್ ಅಜ್ಜಿಮನಿಮಜ್ಜಿಗಿ ಮಜ್ಜನಾರೂ ತಿಕ್ಲಿಲ್ಲೆ’ ಎಂಬ ರೂಢಿಯ ಸೊಲ್ಲುಗಳೂ ನಮ್ಮ ಎಳೆಯ ತಲೆಮಾರುಗಳಿಗೆ ಕೇಳಿಸುತ್ತಿಲ್ಲ. ನಾಲ್ಕೆಂಟು ದಿನದ ಬೆಣ್ಣೆಸೇರಿಸಿ ಮಾಡುತ್ತಿದ್ದ ಪರಿಮಳಭರಿತವಾದ ಬಾಳಿಕೆಯ ತುಪ್ಪದ ಭರಣಿಗಳು ಖಾಲಿಕುಳಿತಿವೆ. ದೇವರ ಪೂಜೆಗೆ ನಿರಾಕೃತವೆಂದೂ, ಎಮ್ಮೆಹಾಲು ಕುಡಿದ ತಲೆಮಂದ(ಚುರುಕಲ್ಲ)ವೆಂದೂ ಕಥೆಗಳ ಮೇಲೆ ಕಥೆಗಳಿದ್ದರೂ ಕಾಣೆಯಾಗದೆ ಗಟ್ಟಿಯಾಗಿ ಉಳಿದಿದ್ದ ನನ್ನ ಹಟ್ಟಿಯ ‘ಎಮ್ಮೆ’ ಎಂಬ ಬಹುಗಾತ್ರದ ‘ರೂಹು’ ಈ ಮಹೋನ್ನತ ರಕ್ಷಣಾಕಾರ್ಯದ ಅಭಿಯಾನ ಆರಂಭವಾಗುತ್ತಿದ್ದಂತಯೇ ನಾಪತ್ತೆಯಾಗಿ ಹೋಯಿತು. ಹಟ್ಟಿಯ ಈ ಖಾಲಿತನವು ನನ್ನಂತವರ ಹೊಣೆಗಾರಿಕೆಯನ್ನೇ ಅಣಕಿಸುವಂತೆ ಎಪ್ಪತ್ತಾರರ ಅಪ್ಪನಸಾಹಸವನ್ನೇ ದರ್ಶಿಸಿ ಅಲ್ಲಿಗೇ ನಿಂತು ಬಿಡುತ್ತಿದೆ. ಬಹುಗಾತ್ರದ ಅಕ್ಕಚ್ಚು ಬೇಯಿಸುವ ಹರಿ (ಹಂಡೆ), ಅಕ್ಕಚ್ಚಿನ ಕೊಣ್ಣೆಯನ್ನು ಕೊಚ್ಚುತ್ತಿದ್ದ ಕೊಳ್ಳಿ(ದಿಮ್ಮಿ), ಅಕ್ಕಚ್ಚು ಬೇಯುತ್ತಿದ್ದಾಗಲೇ ಮಗಚಿಹಾಕಲು ಬಳಸುತ್ತಿದ್ದ ಕೊಕ್ಕೋಲು (ಸೊಟ್ಟಗಿರುವ ಬಿದಿರಕೋಲು), ಕರುಗಳಿಗೆ ಹಾಲು,ಮದ್ದು ಕುಡಿಸುತ್ತಿದ್ದ ನೆಳಾಲ್(ಬಿದಿರಲೋಟದಂತಹ ವಸ್ತು)ಗಳು ಎತ್ತ ಸರಿದುಹೋದವೋ ಅರ್ಥವೇ ಆಗುತ್ತಿಲ್ಲ!? ಹೋರ್ ಸತ್ತ್ಹೋಯ್ತೋ ಎಂಬ ಹಕ್ಕಿಯಾಗಿ ಹಾರಿದವನಿಗೆ ಸತ್ತದ್ದು ಹೋರಿಯಷ್ಟೇ ಆಗಿತ್ತು. ಆದರೆ ನಮ್ಮ ಕಾಲದಲ್ಲಿ ಹೋರಿ ಎಮ್ಮೆ ಹಸುಗಳ ಜೊತೆಗೆ ನೇಗಿಲು, ನೊಗ, ಗೋರಿ, ಅಕ್ಕಚ್ಚು, ನಳಗಳೆಂಬ ನಮ್ಮ ಒಡಿನಾಡಿಗಳಾಗಿದ್ದ ಪರಿಕರಗಳೆಲ್ಲವೂ ಜೀವ ಕಳೆದುಕೊಂಡಿವೆ.

One comment

  1. ಕೃಷಿಕರಿಗೆ ಸಾಕಲು ಕಷ್ಟವಾಗುವ ಪ್ರಾಯದ, ಹಾಲು ನೀಡದ ದನ ಅಥವಾ ಎಮ್ಮೆಗಳನ್ನು ಹಾಗೂ ಗಂಡು ಕರುಗಳನ್ನು ಮಾರಾಟ ಮಾಡುವುದು ಕೃಷಿಕರ ಮೂಲಭೂತ ಹಕ್ಕು. ಇದನ್ನು ಹಿಂದುತ್ವ ಹಾಗೂ ಧರ್ಮ, ನಂಬಿಕೆಗಳ ಹೆಸರಿನಲ್ಲಿ ತಡೆದು ತಮ್ಮ ಹಿಂದೂ ಸಹೋದರರಿಗೆ ಕಿರುಕುಳ ಕೊಡುವುದು ದಬ್ಬಾಳಿಕೆಯಲ್ಲದೆ ಮತ್ತೇನೂ ಅಲ್ಲ. ಇಂಥ ದಬ್ಬಾಳಿಕೆಯ ವಿರುದ್ಧ ಕೃಷಿಕರು ಸಂಘಟಿತರಾಗಿ ಪ್ರತಿಭಟಿಸಬೇಕಾಗಿದೆ. ನಂಬಿಕೆ ಇರುವವರು ಮತ್ತು ದನಗಳನ್ನು ಪವಿತ್ರ ಎಂದು ನಂಬಿರುವವರು ಬೇಕಾದರೆ ಸೂಕ್ತ ಹಣ ಕೊಟ್ಟು ಕೃಷಿಕರಿಂದ ಪ್ರಾಯದ, ಹಾಲು ನೀಡದ ದನ, ಎಮ್ಮೆ ಹಾಗೂ ಗಂಡು ಕರುಗಳನ್ನು ಕೊಂಡುಕೊಂಡು ಸಾಕಲಿ. ಅದು ಬಿಟ್ಟು ಅದನ್ನು ಮಾರಾಟ ಮಾಡಬಾರದು, ಮಾರಾಟ ಮಾಡಿದವರನ್ನು ಪೋಲಿಸ್ ಸ್ಟೇಶನ್ಗೆ ಕರೆದು ಬೆದರಿಸುವುದು ತೀವ್ರ ಆಕ್ಷೇಪಾರ್ಹ ಹಾಗೂ ಕೃಷಿಕರ ಮೂಲಭೂತ ಹಕ್ಕಿನ ಉಲ್ಲಂಘನೆ. ರೈತ ಸಂಘಟನೆಗಳು ಈ ಬಗ್ಗೆ ತೀವ್ರ ಪ್ರತಿಭಟನೆಯನ್ನು ಪ್ರಕಟಿಸಬೇಕಾಗಿದೆ. ಇಲ್ಲದೆ ಹೋದರೆ ಹಿಂದುತ್ವದ ಹೆಸರಿನಲ್ಲಿ ಕೃಷಿಕರ ಮೇಲೆ ಕೆಲವು ಪಾಳೇಗಾರಿ ಮನೋಭಾವದ ಹಿಂದೂ ಸಂಘಟನೆಗಳು ನಡೆಸುವ ದಬ್ಬಾಳಿಕೆಯನ್ನು ತಡೆಯಲು ಸಾಧ್ಯವಿಲ್ಲ. ದನಗಳು ವಿನಾಶದ ಅಂಚಿನಲ್ಲಿರುವ ಪ್ರಾಣಿ ಎಂದು ಕೆಲವು ಪುರೋಹಿತಶಾಹಿ ಮನೋಭಾವದ ಸಂಘಟನೆಗಳು ಹುಯಿಲೆಬ್ಬಿಸುತ್ತಿದ್ದು ಇದು ಸಂಪೂರ್ಣ ಸುಳ್ಳಿನ ಕಂತೆಯಾಗಿದೆ. ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿಯುತ್ತಿದೆ. ಬೇಡಿಕೆಗಿಂತ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಹೀಗಾಗಿ ಗೊಸಂರಕ್ಷಣಾ ಕಾನೂನು ಅನಗತ್ಯ ಹಾಗೂ ಇದು ಕೃಷಿಕರಿಗೆ ಕಿರುಕುಳ ಕೊಡುವ ಕಾನೂನಾಗಿದ್ದು ಇದರ ಅವಶ್ಯಕತೆ ಇಲ್ಲ.

Leave a Reply

Your email address will not be published.