ಚೂಪು ನಾಗರಿಕತೆಯ ಪಿಚಕಾರಿಗಳು..!


– ಡಾ.ಎಸ್.ಬಿ. ಜೋಗುರ


 

ಲೂಯೀ ವರ್ಥ ಎನ್ನುವ ನಗರ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಗರ ಎಂದರೆ ನಾಗರಿಕರು ವಾಸಿಸುವ ತಾಣ. ನಾಗರಿಕರು ಎಂದರೆ ಯಾರು..? ಪೌರ ಪ್ರಜ್ಞೆಯನ್ನು ಹೊಂದಿದವರೋ ಇಲ್ಲಾ ಭೌತಿಕ ಪ್ರಪಂಚದಲ್ಲಿ ಸಂಪೂರ್ಣವಾಗಿ ಅದ್ದಿ, ಪಾಲಿಶ್ ಆದವರೋ.. ಇಲ್ಲಾ ಪಾಶ್ಚಾತ್ತೀಕರಣದ ಅಮಲಿನಲ್ಲಿರುವರೋ.. ಈ ನಾಗರಿಕರು ಎನ್ನುವ ಪದದ ಅರ್ಥ ಶಬ್ದದ ಉತ್ಪತ್ತಿಯ ಪ್ರಕಾರ ಉದಾತ್ತ ವಿಚಾರ, ನಡತೆ, ಅಭಿರುಚಿ ಎಂದಾಗುತ್ತದೆ.

ನಮ್ಮಲ್ಲಿ ಇಂದಿಗೂ ಕೆಲವರು ಈ ಅರ್ಥಪೂರ್ಣವಾದ ಉದಾತ್ತ ನಾಗರಿಕತೆಯ ಗೊಡವೆಯೇ ಬೇಡ ಎನ್ನುವಂತೆ ಅತ್ಯಂತ ಬಾರ್ಬೇರಿಯನ್ ರೀತಿಯಲ್ಲಿ ಬದುಕುವದರಲ್ಲಿಯೇ ಪರಮ ಸುಖವನ್ನು ಅನುಭವಿಸುತ್ತಾರೆ.dont-spit-here ಆ ಯುವಕ ಯಾವುದೋ ಒಂದು ಇಂಜನಿಯರಿಂಗ್ ಕೋರ್ಸ್ ಕಲಿಯುತ್ತಿರಬೇಕು. ಸಿಟಿ ಬಸ್ಸಿನಲ್ಲಿ ಅವನ ಪಕ್ಕದಲ್ಲಿ ಕುಳಿತ ಸ್ನೇಹಿತನ ಎದುರಲ್ಲಿ ತನ್ನ ಕೋರ್ಸ್ ಬಗ್ಗೆ ಏನೋ ಹರಟುತ್ತಿದ್ದ. ಅವನ ಹಿಂದಿನ ಸೀಟಿನಲ್ಲಿ ನಾನು ನನ್ನ ಬದಿ ಇನ್ನೊಬ್ಬ ಹಿರಿಯ ಮನುಷ್ಯ ಕುಳಿತಿದ್ದ. ಮುಂದೆ ಕುಳಿತ ಯುವಕ ಹೋಳಿ ಹುಣ್ಣಿವೆಯ ಬಣ್ಣದ ಪಿಚಕಾರಿಯ ಹಾಗೆ ಮತ್ತೆ ಮತ್ತೆ ಕಿಡಕಿಯ ಹೊರಗೆ ತಲೆ ಹಾಕಿ ಪಿಚಕ್ ಅಂತ ಉಗಿಯುತ್ತಿದ್ದ. ಅವನಿಗೆ ಹಿಂದೆ ಕುಳಿತವರ ಧರಕಾರೂ ಇರಲಿಲ್ಲ. ಯಾಕೆಂದರೆ ಬೃಹತ್ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿರುವ ನಾಗರಿಕ ಸಮಾಜದ ಯುವ ಪ್ರಜೆ. ಅವನಿಗೆ ಕೇಳಲಿ ಎಂದೇ ನಾನು ನಮ್ಮ ಜನರಿಗೆ ನೀವು ಬೇಕಾದಂತಹ ಬಸ್ ಸೌಕರ್ಯ ಕೊಡಿ, ಕಿಡಕಿಯಲ್ಲಿ ಕುಳಿತು ಉಗಿಯುವದನ್ನು ಮಾತ್ರ ಬಿಡುವದಿಲ್ಲ. ಅದು ಹಿಂದೆ ಕುಳಿತವರ ಮುಖಕ್ಕೆ ಸಿಡಿದರೂ ಖಬರಿಲ್ಲ. ಎಂದು ತುಸು ಜೋರಾಗಿಯೇ ಹೇಳಿದೆ. ಆತ ಹೊರಳಿ ನನ್ನನ್ನೇ ಅಪರಾಧಿಯ ಹಾಗೆ ನೋಡಿ ಮತ್ತೂ ಅಸಹ್ಯವಾಗಿ ಉಗುಳುತ್ತಲೇ ನಡೆದ. ಹಿಂದೆ ಕುಳಿತ ಆ ಹಿರಿಯ ಯಜಮಾನ ಕಿಡಕಿಯನ್ನು ಹಾಕಿಕೊಂಡರೂ ಅವನೇನು ಉಗಿಯುವದನ್ನು ಬಿಡಲಿಲ್ಲ.

ಅದರ ಹಿಂದಿನ ದಿನವೇ ಇಂಗ್ಲಂಡಲ್ಲಿ ರಸ್ತೆಯ ಮೇಲೆ ಉಗಿಯುವವರನ್ನು ಕುರಿತು ಒಂದು ಸುದ್ದಿ ಪ್ರಕಟವಾಗಿತ್ತು. ಅಂಥವರ ಮೇಲೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವ ವರದಿ ಇತ್ತು. ಈಗಾಗಲೇ ಸಿಂಗಾಪೂರದಲ್ಲಿ ಯಾರಾದರೂ ರಸ್ತೆಯ ಮೇಲೆ ಹೀಗೆ ಪಿಚಕ್ ಎಂದು ಉಗಿದರೆ ಅಂಥವರ ಮೇಲೆ 500 ಸಿಂಗಾಪೂರ ಡಾಲರ್ ದಂಡ ವಿಧಿಸಲಾಗುವದು. ಹಾಗೆಯೇ ಬಾರ್ಸಿಲೋನಾದಲ್ಲಿಯೂ ರಸ್ತೆಯ ಮೇಲೆ ಉಗಿಯುವಂತಿಲ್ಲ. ಅಮೇರಿಕಾದಲ್ಲೂ ಅದನ್ನು ಸಹಿಸಿಕೊಳ್ಳುವದಿಲ್ಲ. gutka-spitಭಾರತದಲ್ಲಿ ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೀಗೆ ಎಲ್ಲೆಂದರಲ್ಲಿ ಉಗಿಯುವವರನ್ನು ಕಂಡು ಕೆಂಡಾಮಂಡಲರಾಗಿ ಅಂಥವರ ಮೇಲೆ 200 ರೂ. ದಂಡ ವಿಧಿಸುವಂತೆ ಸೂಚಿಸಿದ್ದರೂ ಅದಿನ್ನೂ ಬಾಯ್ಮಾತಿನ ಹಂತದಲ್ಲಿಯೇ ಇದೆ. ನಮ್ಮಲ್ಲಿಯೂ ಹೀಗೆ ಉಗಿಯುವವರ ಮೇಲೆ ಕಾನೂನು ಮೂಲಕ ಕ್ರಮ ಕೈಗೊಂಡರೆ, ದಂಡ ವಿಧಿಸಿದರೆ ಸಾಕಷ್ಟು ಆದಾಯ ಬೊಕ್ಕಸಕ್ಕೆ ಹರಿದು ಬರುವದಂತೂ ಖಾತ್ರಿ. ಆದರೆ ಬಹಳ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.

ಅವನೊಬ್ಬ ಹಿರಿಯ ನಾಗರಿಕ. ಸಂಜೆ ವಾಯುವಿಹಾರಕ್ಕೆ ಬಂದವ. ಕಿಸೆಯಲ್ಲಿ ಹಳೆಯ ಸಿನೇಮಾ ಗೀತೆಗಳನ್ನು ಗುನುಗುವ ಮೊಬೈಲ್ ಒಂದನ್ನು ಇಟ್ಟುಕೊಂಡೇ ದಿನಾಲು ವಾಕಿಂಗ್ ಬರುವ ಈತ ಪಕ್ಕಾ ನಾಗರಿಕನಂತೆ ಟೀಶರ್ಟ್ ಧರಿಸಿ ವಾಕಿಂಗ್ ಮಾಡುವ ಇವನು ಅದೊಂದು ದಿನ ತಾನು ನಡೆದಾಡುವ ರಸ್ತೆಯಲ್ಲಿಯೇ ನಿಂತು ಮುದಿ ಎತ್ತು ಉಚ್ಚೆ ಹೊಯ್ಯುವ ಹಾಗೆ ಮೂತ್ರಿ ಮಾಡುತ್ತಿದ್ದ. ಅಲ್ಲೇ ಸಮೀಪದಲ್ಲಿ ಹೆಂಗಸರು ವಾಕ್ ಮಾಡುತ್ತಿದ್ದರು. ಕ್ಯಾರೇ ಅನ್ನದೇ ತನ್ನ ಪುರುಷ ಪ್ರಾಧಾನ್ಯತೆಯನ್ನು ಮೆರೆದು ಮೂತ್ರಿ ಮಾಡಿ ತನ್ನ ಪ್ರಖರ ನಾಗರಿಕ ಪ್ರಜ್ಞೆಯನ್ನು ಮೆರೆದಿದ್ದ. ಇವನು ನಿಂತು ಮೂತ್ರಿ ಮಾಡಿದರೆ ಇವನು ತನ್ನ ಮಕ್ಕಳಿಗೆ ಓಡಾಡಿ ಮಾಡುವ ಟ್ರೆನಿಂಗ್ ನೀಡಿರಬಹುದೇ..? ನೆನೆದು ನಕ್ಕೆ..

ಇವೆರಡು ಸ್ಯಾಂಪಲ್ ಅಷ್ಟೇ.. ಬಸ್ ನಿಲ್ದಾಣಗಳಲ್ಲಿಯ ಟಾಯ್ಲೆಟ್ ಗಳು, ಪುರಾತನ ದೇಗುಲಗಳು, ವಾಸ್ತುಶಿಲ್ಪಗಳು, ಸ್ಮಾರಕಗಳು, ಕಾಲೇಜುಗಳಲ್ಲಿಯ ಬೆಂಚುಗಳು, ಗೊಡೆಗಳು ಕೂಡಾ ಇಂಥಾ ಚೂಪು ನಾಗರಿಕರಿಂದ ತಪ್ಪಿಸಿಕೊಳ್ಳಲಾಗಿಲ್ಲ. pee-in-publicಪಕ್ಕದಲ್ಲಿದ್ದವರು ಮೂಗು ಮುಚ್ಚಿದರೂ ರಾಜಾರೋಷವಾಗಿ ದಮ್ಮೆಳೆಯುವ ಇವರ ನಾಗರಿಕತೆಗೆ ಏನೆನ್ನಬೇಕು..? ಆ ದಿನ ಧಾರವಾಡದ ಚಿತ್ರಮಂದಿರ ಒಂದಕ್ಕೆ ಸಿನೇಮಾಗೆ ತೆರಳಿದ್ದೆ. ಸಾಮಾನ್ಯವಾಗಿ ಆ ಚಿತ್ರಮಂದಿರದಿಂದ ಸಿನೇಮಾ ಬದಲಾಗುವದರಲ್ಲಿದೆ ಎನ್ನುವಾಗ ನಾನು ತೆರಳುತ್ತೇನೆ. ಕಾರಣ ಸಿನೇಮಾ ಆರಂಭವಾಗುವದರಿಂದ ಹಿಡಿದು ಕೊನೆಯವರೆಗೂ ಸೀಟಿ ಹೊಡೆಯುವ ಚೂಪು ನಾಗರಿಕರ ಉಪಟಳದಿಂದ ತಪ್ಪಿಸಿಕೊಂಡು ನೆಮ್ಮದಿಯಿಂದ ನೋಡಲು. ಕಳೆದ ವರ್ಷದಲ್ಲಿ ನಾನು ಅತ್ಯಂತ ನೆಮ್ಮದಿಯಿಂದ ನೋಡಿದ ಸಿನೇಮಾ ನಾಗಾರ್ಜುನ ಅಭಿನಯದ ‘ಗಗನಂ’ ಎನ್ನುವ ತೆಲುಗು ಚಿತ್ರ. ಯಾಕೆಂದರೆ ಥೇಟರಲ್ಲಿ, ಬಾಲ್ಕನಿಯಲ್ಲಿ ಇದ್ದದ್ದೇ ಏಳು ಜನ. ಚಿತ್ರವೂ ಚೆನ್ನಾಗಿತ್ತು. ಅತ್ಯಂತ ಖುಷಿ ಎನಿಸಿತ್ತು. ಸೀಟಿ ಹೊಡೆಯುವ ಚೂಪು ನಾಗರಿಕರಿಗಿಂತಲೂ ಇನ್ನೂ ಒಂದು ಹೆಜ್ಜೆ ಮುಂದಿರುವ ತಿವಿಯುವ ನಾಗರಿಕರೆಂದರೆ ಮುಂದೆ ಕುಳಿತವರ ಸೀಟಿನ ಮೇಲೆ ಅವರ ನೆತ್ತಿಗೆ ತಾಗುವ ಹಾಗೆ ಕಾಲು ಚಾಚಿ ಸಿನೇಮಾ ನೋಡುವ ಖಾ[ಖ]ಯಿಲೆಯವರು. ಒಂದು ಹಂತದವರೆಗೂ ಸಹಿಸಿ ಹೊರಳಿ ನೋಡಿದ ಮೇಲೂ ಇವರ ನಾಗರಿಕತೆಗೆ ನಾಚಿಗೆ ಎನಿಸುವದಿಲ್ಲ. ಹೇಗೋ ಸಹಿಸಿ ಸಿನೇಮಾ ನೋಡುತ್ತಿರಲು ಮತ್ತೆ ಹಿಂದಿನಿಂದ ಪಿಚಕ್ ಅಂತ ಉಗಿಯುವ ಸದ್ದು. ಸೀಟಿನ ಕೆಳಗೆ ಬಾಗಿ ಉಗಿಯುವ ಇವರ ಪ್ರಖರ ತಿವಿಯುವ ನಾಗರಿಕತೆಗೆ ಆ ಥೇಟರ್ ಮಾಲಿಕ ಚಿತ್ರಮಂದಿರವನ್ನು ನವೀಕರಿಸಿದ್ದೇ ತಪ್ಪಾಯಿತು ಎನ್ನಬೇಕು. ಇಲ್ಲವೇ ಪಶ್ಚಾತ್ತಾಪ ಪಡಬೇಕು. ಆರಂಭದಲ್ಲಿ ಬರುವ ‘ಈ ಚಿತ್ರಮಂದಿರ ನಿಮ್ಮ ಮನರಂಜನೆಗಾಗಿ ಇದನ್ನು ಚೊಕ್ಕಟವಾಗಿಡಿ’ ಎನ್ನುವ ಸ್ಲೈಡನ್ನು ಓದುತ್ತಲೇ ಉಗಿಯುವ ಇವರ ಮನ:ಸ್ಥಿತಿಯ ನಡುವೆ ನಾಗರಿಕತೆ ಎನ್ನುವ ಪದ ವಿಲವಿಲ ಒದ್ದಾಡುತ್ತದೆ.

ಈ ಬಗೆಯ ಚೂಪು ಮತ್ತು ತಿವಿಯುವ ನಾಗರಿಕರು ಈಗೀಗ ಹೆಚ್ಚಾಗುತ್ತಿದ್ದಾರೆ. open-peeಸಾರ್ವಜನಿಕ ಪ್ರದೇಶಗಳನ್ನು ಪರಿಗಣಿಸದೇ ಎಲ್ಲೆಂದರಲ್ಲಿ ಉಗಿಯುವ, ಎಸೆಯುವ, ಸೇದುವ, ಉಚ್ಚೆ ಹೊಯ್ಯುವ, ಸಾಧ್ಯವಾದರೆ ಅದನ್ನೂ ಪಬ್ಲಿಕ್ ಪ್ಲೇಸಲ್ಲೇ ಮಾಡಿ ಮುಗಿಸುವಷ್ಟು ಕೊಳಕು ಮನ:ಸ್ಥಿತಿಗೆ ಕಾರಣವಾದರೂ ಏನು..? ಈ ದಿಶೆಯಲ್ಲಿ ನಮ್ಮಲ್ಲೂ ಒಂದು ಕಾನೂನು ಬೇಕೇ ಬೇಕು. ಎಲ್ಲೆಂದರಲ್ಲಿ ಉಗಿಯುವ, ಮೂತ್ರಿ ಮಾಡುವ, ಇನ್ನೊಬ್ಬರಿಗೆ ಕಿರಿಕಿರಿ ಮತ್ತು ಆತಂಕ ಉಂಟು ಮಾಡುವ ನಡುವಳಿಕೆಗಳನ್ನು ಶಾಸನರೀತ್ಯ ಸೆನ್ಸಾರ್ ಮಾಡುವ ಅಗತ್ಯವಿದೆ. ನಮ್ಮಂಥಾ ಅಪಾರ ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ಮಾಡಲೇಬೇಕಾದವುಗಳನ್ನೇ ಮಾಡುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಇಂಥಾ ಪಿಚಕಾರಿಗಳಿಗೆ, ಹೊಗೆ ಉಗುಳುವ ಉಗಿಬಂಡಿಗಳಿಗೆ, ಗೂಂಡಾಗಳಂತೆ ಇತರರಿಗೆ ರೇಜಿಗೆಯಾಗುವ ಹಾಗೆ ಬದುಕುವವರ ಪಾಲಿಗೆ ವರವಾಗಿ ಚೂಪುತನದ, ಒರಟುತನದ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶಿಕ್ಷಣ ಪಡೆಯುವವರ ಪ್ರಮಾಣದೊಂದಿಗೆನೇ ಹೆಚ್ಚುತ್ತಾ ನಡೆದಿರುವದು ಇನ್ನೊಂದು ವಿಷಾದ.

ನಾವು ಪಡೆಯುವ ಶಿಕ್ಷಣ ತುರ್ತಾಗಿ ನಮಗೆ ಎಟಿಕೇಟ್ಸ್, ಮ್ಯಾನರ್ಸ್‌ಗಳನ್ನು ಕಲಿಸಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗುಟಕಾ ನಿಷೇಧದ ತೀರ್ಮಾನದ ಹಾಗೆ ಇಂಥಾ ಬಾರ್ಬೇರಿಯನ್ ಬಿಹೇವಿಯರ್ಸ್‌ಗಳನ್ನು ನಿಯಂತ್ರಿಸುವ ದಿಶೆಯಲ್ಲಿ ಹೊಸ ತೀರ್ಮಾನ ತೆಗೆದುಕೊಂಡರೆ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಇನ್ನೊಂದು ಇಟ್ಟಿಗೆಯನ್ನು ಇಟ್ಟಂತಾಗಬಹುದೇನೋ..

One thought on “ಚೂಪು ನಾಗರಿಕತೆಯ ಪಿಚಕಾರಿಗಳು..!

  1. Pavan

    If we search whole Bangalore, we will not get even single toilet with clean environment…. If Government opens Public toilets and maintain properly. Then atleast we can tel people not to urinate in public… else even though we tel we cant answer their question “Elli oylanna”

    Reply

Leave a Reply

Your email address will not be published. Required fields are marked *