ನಿಡ್ಡೋಡಿ : ಬದುಕುವ ಹಕ್ಕು ಬೇಕು, ಪರಿಹಾರ ಬೇಡ


– ಚಿದಂಬರ ಬೈಕಂಪಾಡಿ


 

ಕರಾವಳಿಯ ಜನ ನಿಜಕ್ಕೂ ಬೆಚ್ಚಿಬೀಳುವಂಥ ಸ್ಥಿತಿ ನಿರ್ಮಾಣವಾಗಿದೆ. ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತದೆ ಎನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಯಾಕೆಂದರೆ ನಂದಿಕೂರು ಸ್ಥಾವರದ ಸುತ್ತಮುತ್ತಲಿನ ಹಳ್ಳಿಗಳನ್ನು ಒಂದು ಸುತ್ತು ಹಾಕಿಬಂದರೆ ಉದ್ದೇಶಿತ ನಿಡ್ಡೋಡಿ ಸ್ಥಾವರ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಹುದು. fly_ashಒಂದು ಕಾಲದಲ್ಲಿ ನಂದಿಕೂರು ಪರಿಸರದ ಹಳ್ಳಿಗಳಲ್ಲಿ ಮರಗಿಡಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದವು. ಈಗ ನೋಡಿದರೆ ಆ ಹಸಿರು ಗಿಡಗಳು ತಮ್ಮ ನಿಜ ಬಣ್ಣವನ್ನೇ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗಿವೆ. ಅಲ್ಲಿನ ಹೂವುಗಳ ಮೇಲೆ ಕಣ್ಣಾಡಿಸಿದರೆ ಸಾಕು ಈ ಸ್ಥಾವರದ ಹಾರು ಬೂದಿ ಮಾಡಿರುವ ಅವಾಂತರದ ಅರಿವಾಗುತ್ತದೆ.

ಉಷ್ಣ ವಿದ್ಯುತ್ ಸ್ಥಾವರದ ಬಹುಮುಖ್ಯ ಸಮಸ್ಯೆ ಹಾರು ಬೂದಿ ಎನ್ನುವುದನ್ನು ಆಗ ಆ ಸ್ಥಾವರದ ಅಧಿಕಾರಿಗಳು ಅದೆಷ್ಟು ನಾಜೂಕಾಗಿ ನಿರಾಕರಿಸಿದ್ದರೆಂದರೆ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸುತಿರುವುದರಿಂದ ಹಾರು ಬೂದಿ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡುವುದಿಲ್ಲವೆಂದಿದ್ದರು. ಯಾರೂ ಕೇಳಿರದ ತಾಂತ್ರಿಕತೆಯನ್ನು ಉದಾಹರಿಸಿ ಒಂದಷ್ಟು ಸಿಡಿಗಳ ಮೂಲಕ ತಮಗೆ ಅನುಕೂಲವಾಗುವಮ್ಥ ದೃಶ್ಯ ತೋರಿಸಿ ಕಾಮೆಂಟರಿ ಹೇಳಿ ಹಾರು ಬೂದಿಯನ್ನು ತಮ್ಮ ಮಾತುಗಳಿಂದಲೇ ನಿವಾರಿಸಿಕೊಂಡಿದ್ದರು. ಈಗ ನಂದಿಕೂರು ಪರಿಸರದ ಚಿಕ್ಕ ಮಕ್ಕಳಿಗೂ ಅರಿವಾಗುತ್ತಿದೆ ಹಾರು ಬೂದಿ ಮಾಡಿರುವ ಘೋರ ಪರಿಣಾಮಗಳು.

ಹಾರು ಬೂದಿಯಿಂದ ಇಟ್ಟಿಗೆ, ಸಿಮೆಂಟ್, ಡಾಮರ ಗೆ ಬಳಕೆ, ರಸ್ತೆ ನಿರ್ಮಾಣ ಹೀಗೆ ಅನೇಕ ಉತ್ಪನ್ನಗಳಿಗಾಗಿ ಬಳಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ನಿಜ ಆ ಹಾರು ಬೂದಿಯನ್ನು ಅವರು ಬಳಕೆ ಮಾಡಿಕೊಳ್ಳುತ್ತಿರಬಹುದು, ಆದರೆ ಹಾರು ಬೂದಿ ಮಾಡುತ್ತಿರುವ ಮಾಲಿನ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಜಲಚರಗಳಿಗೆ ತ್ಯಾಜ್ಯ ನೀರಿನಿಂದ ಯಾವುದೇ ಪರಿಣಾಮವಾಗುವುದಿಲ್ಲವೆಂದಿದ್ದರು. ಹಾಗಾದರೆ ಈ ಮಾತನ್ನು ಎಷ್ಟ್ರಮಟ್ಟಿಗೆ ನಂಬಬೇಕು. fly-ash-pollutionಸಮುದ್ರಕ್ಕೆ ಬಿಡಲಾಗುತ್ತಿರುವ ತ್ಯಾಜ್ಯ ನೀರಿನ ಪರಿಣಾಮಗಳನ್ನು ಅಧ್ಯಯನ ಮಾಡುವ ಅಥವಾ ಆ ನೀರನ್ನು ಮಾನಿಟರಿಂಗ್ ಮಾಡುವ ಯಾವ ವ್ಯವಸ್ಥೆಯಿದೆ ? ಎನ್ನುವುದು ಭವಿಷ್ಯದಲ್ಲಿ ಕೇಳುವಂಥ ಸ್ಥಿತಿ ಬರಲಿದೆ. ಬಾಹ್ಯವಾಗಿ ನಂದಿಕೂರು ಸ್ಥಾವರ ಮಾಡುತ್ತಿರುವ ಪರಿಣಾಮಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತೊಂದು ಕೊಕ್ಕಡದಂಥ (ಎಂಡೋಸಲ್ಫಾನ್) ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ. ಆಗ ಸರ್ಕಾರ ಅಂಥ ಸಂಕಷ್ಟಕ್ಕೆ ಒಳಗಾಗುವ ಜನರಿಗಾಗಿ ಒಂದಷ್ಟು ಪ್ಯಾಕೇಜ್ ಪ್ರಕಟಿಸಿ ಕೈತೊಳೆದುಕೊಳ್ಳಬಹುದು. ಆದರೆ ಆ ಹೊತ್ತಿಗೆ ಈಗ ಇರುವ ಹಿರಿಯರು ಇರುವುದಿಲ್ಲ. ಹೊಸ ತಲೆಮಾರಿನ ಜನ ಈ ಸ್ಥಾವರ ನಿರ್ಮಾಣಕ್ಕೆ ಕಾರಣರಾದ ಹಿರಿಯರನ್ನು ಶಪಿಸದಿರಲಾರರು ಎನ್ನುವಂತಿಲ್ಲ.

ಈಗ ಸ್ಥಾಪನೆಯಾಗಲು ಹವಣಿಸುತ್ತಿರುವ ನಿಡ್ಡೋಡಿ ಸ್ಥಾವರದ ಬಗ್ಗೆಯೂ ಒಂದಷ್ಟು ಚಿಂತನೆ ಮಾಡುವುದು ಬುದ್ಧಿವಂತಿಕೆಯಾಗಲಿದೆ. ನಂದಿಕೂರು 1200 ಮೆ.ವಾ. ಆಗಿದ್ದರೆ ನಿಡ್ಡೋಡಿ 4 ಸಾವಿರ ಮೆ.ವಾ ಸಾಮರ್ಥ್ಯದ್ದು. ಎಂ.ಆರ್.ಪಿ.ಎಲ್ ನಿಂದಾಗಿ ಪಣಂಬೂರು, ಸುರತ್ಕಲ್, ಕಾಟಿಪಳ್ಳ, ಮುಕ್ಕ, ಹಳೆಯಂಗಡಿ ಜನ ಚಿಂತಿತರಾಗಿದ್ದರೆ ಮೂಲ್ಕಿ, ಪಡುಬಿದ್ರಿ, ಬೆಳ್ಮಣ್, ನಿಟ್ಟೆ ಜನ ನಂದಿಕೂರು ಸ್ಥಾವರದಿಂದ ಸಂಕಟ ಅನುಭವಿಸುತ್ತಿದ್ದರೆ. ಉದ್ದೇಶಿತ ನಿಡ್ಡೋಡಿ ಸ್ಥಾವರ ಬಂದರೆ ಮಂಗಳೂರು, ಮೂಡುಬಿದ್ರೆ ಸಹಿತ ಕಾರ್ಕಳದವರೆಗೂ ಜನ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಡಾ.ಬಿ.ಎ.ವಿವೇಕ ರೈ ಈ ನಾಡಿನ ಹಿರಿಯ ಜಾನಪದ ವಿದ್ವಾಂಸ ಹಾಗೂ ಗ್ರಾಮೀಣ ಬದುಕನ್ನು ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಿದವರು. ಅವರು ನಿಡ್ಡೋಡಿ ಪರಿಸರದಲ್ಲಿ ಸುತ್ತು ಹಾಕಿ ಬಂದು ಹಾರು ಬೂದಿಯ ಬಗ್ಗೆ ವ್ಯಕ್ತಪಡಿಸಿರುವ ಆತಂಕಗಳು ಕಡೆಗಣಿಸುವಂಥವುಗಳಲ್ಲ. ಹರಿಸಿನಿಂದ ಕಂಗೊಳಿಸುತ್ತಿರುವ ಭತ್ತದ ಪೈರುಗಳನ್ನು ನೋಡಿದರೆ ದಿಲ್ಲಿಯಲ್ಲಿ ಕುಳಿತು ಈ ಯೋಜನೆಗೆ ಸಮ್ಮತಿಸಿದವರು ನಿಜಕ್ಕೂ ಮನುಷ್ಯರಾಗಿರಲು ಸಾಧ್ಯವೇ ? ಎನ್ನುವ ಪ್ರಶ್ನೆ ಮೂಡುತ್ತದೆ. ಮೂರು ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಪರಿಹಾರ ಧನ, ವಾಸ್ತವಕ್ಕೆಂದು ಮನೆ ನಿವೇಶನ, ಮನೆಗೊಂದು ಉದ್ಯೋಗ, ಕೆಲಸ ಬೇಡವೆಂದಾದರೆ 5 ಲಕ್ಷ ರೂಪಾಯಿ ಏಕಗಂಟಿನ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಸಿಕ್ಕ ಪರಿಹಾರ ಖರ್ಚು ಮಾಡಲು ಬಾರ್ ತೆರೆದು, ಮೋಜು ಮಸ್ತಿಗೆ ಅವಕಾಶ ಕಲ್ಪಿಸಿಕೊಟ್ಟು ಕೈಖಾಲಿ ಮಾಡಿಕೊಳ್ಳಲು ಸಾಧ್ಯ ಎನ್ನುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಿಲ್ಲ.

ಈಗ ಅಲ್ಲಿ ಹರಿಯುವ ತೊರೆಗಳಾಗಲೀ, ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆ, ಬಾವಿಗಳಾಗಲೀ ಇರಲು ಸಾಧ್ಯವಿಲ್ಲ. save-niddodiಬಾನಾಡಿಗಳು ನಿಮ್ಮ ಕಣ್ಣಿಗೆ ಕಾಣಿಸಲಾರವು, ದನ-ಕರುಗಳ ದನಿ ಕೇಳಿಸವು. ಈಗಾಗಲು ಸಾಧ್ಯವಿಲ್ಲ ಎನ್ನುವವರಿಗೆ ನಂದಿಕೂರು ಪರಿಸರದಲ್ಲಿ ಗುಬ್ಬಚ್ಚಿಗಳಿವೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಜಕಾರಣಿಗಳು ನಿಡ್ಡೋಡಿ ಸ್ಥಾವರದ ಬಗ್ಗೆ ನಿಖರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆಡಳಿತ ಪಕ್ಷದವರಿಗೆ ಮುಜುಗರವಾಗಿದ್ದರೆ, ವಿರೋಧ ಪಕ್ಷಗಳಿಗೆ ಈ ಯೋಜನೆ ಬ್ರಹ್ಮಾಸ್ತ್ರವಾಗಿದೆ. ಇದೇ ಒಂದು ಅವಕಾಶವೆಂದು ಕೆಲವರು ಸಂಘಟನೆಗೆ ಬೆಂಬಲ, ಪರವಾದ ಹೇಳಿಕೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ರಾಜಕೀಯ ರಹಿತವಾಗಿ ಇದನ್ನು ವಿರೋಧಿಸಬೇಕು ಎನ್ನುವುದು ವೈಯಕ್ತಿಕವಾದ ಅನಿಸಿಕೆ. ಹಾಗೆ ನೋಡಿದರೆ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಅತ್ಯಂತ ಗಟ್ಟಿಯಾಗಿಯೇ ಈ ಯೋಜನೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಮೆಚ್ಚುವಂಥ ನಿಲುವು. ಸರ್ಕಾರ ತಮ್ಮ ಪಕ್ಷದ್ದೇ ಆಗಿದ್ದರು ಜನವಿರೋಧಿಯಾದ ಯೋಜನೆ ಬೇಕಾಗಿಲ್ಲ ಎನ್ನುವ ಅವರ ನಿಲುವನ್ನು ಬೆಂಬಲಿಸುವುದು ಈಗಿನ ಅನಿವಾರ್ಯತೆ ಕೂಡಾ.

ನಿಡ್ಡೋಡಿ ವಿದ್ಯುತ್ ಸ್ಥಾವರ ಕರಾವಳಿಗೆ ಅನಿವಾರ್ಯವಲ್ಲ. ಕರಾವಳಿಯಲ್ಲಿ ತಯಾರಾಗುವ ವಿದ್ಯುತ್ ಕರಾವಳಿಗೇ ಮೀಸಲು ಎನ್ನುವ ವಾದವೂ ಬೇಕಾಗಿಲ್ಲ. ಇಂಥಾ ವಾದಗಳನ್ನು ಹಿಂದೆಯೂ ಮಂಡಿಸಿದ್ದರು ಅತಿ ಬುದ್ಧಿವಂತರು.

ದೇಶಕ್ಕೆ ವಿದ್ಯುತ್ ಸಮಸ್ಯೆ ಇದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಯೇ ಕರಾವಳಿಯನ್ನು ತ್ಯಾಜ್ಯದ ತಿಪ್ಪಿಗುಂಡಿ ಮಾಡಿ ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಜನರು ಅವಕಾಶ ಕೊಡಬೇಕೆನ್ನುವ ಕಟ್ಟು ಪಾಡಿಲ್ಲ. ನಮ್ಮ ಭೂಮಿ, ನಮ್ಮ ಜಲ, ನಮ್ಮ ಜೀವಚರಗಳು ಈ ಮಣ್ಣಲ್ಲಿ ಬದುಕುವ ಕನಸು ಕಟ್ಟಿಕೊಂಡಿವೆ. ತಲೆ ತಲೆಮಾರುಗಳಿಂದ ಆರಾಧಿಸಿಕೊಂಡು ಬರುತ್ತಿರುವ ಮಠ, ಮಂದಿರಗಳು, ಭೂತಾರಾಧನೆ, ನಾಗಬನಗಳಿವೆ. ಇವುಗಳನ್ನು ನಾಶಮಾಡಿ ಬೆಳಕು ಹರಿಸುವ ಅಗತ್ಯವಿಲ್ಲ. ಅಲ್ಲಲ್ಲಿ ಗೋರಿ ನಿರ್ಮಿಸಿ ಹಣತೆಗಳನ್ನು ಹಚ್ಚಿಡುವಂತೆ ಮಾಡುವ ದುಸ್ಸಾಹಸಕ್ಕೆ ಮುಂದಾಗುವುದು ಬೇಡ.

ನಮಗೆ ಬದುಕುವ ಹಕ್ಕು ಬೇಕು, ಪರಿಹಾರ ಬೇಡ ಎನ್ನುವುದು ಈ ಯೋಜನೆ ವಿರೋಧಿಸುವ ಧ್ಯೇಯ ವಾಕ್ಯವಾಗಬೇಕು. ಜನ ಮೌನ ಮುರಿಯುವುದಕ್ಕೆ ಕಾಲ ಪಕ್ವಗೊಂಡಿದೆ.

5 comments

 1. ಸರ್ಕಾರಗಳು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಬೇಕಾದ ತೀವ್ರ ಒತ್ತಡದಲ್ಲಿವೆ. ಹೀಗಾಗಿ ಅವು ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಳೀಯ ಜನತೆಯ ವಿರೋಧವನ್ನು ಲೆಕ್ಕಿಸದೆ ಹೇರುವ ಪ್ರಯತ್ನದಲ್ಲಿವೆ. ವಿದ್ಯುತ್ತಿಗಾಗಿ ಜನತೆಯ ಒತ್ತಡವೂ ಇದಕ್ಕೆ ಕಾರಣ.
  ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದಾಗ ಕಡಿಮೆ ವೆಚ್ಚದಲ್ಲಿ ಸ್ಥಿರವಾಗಿ ಉತ್ಪಾದಿಸಬಹುದಾದ ವಿದ್ಯುತ್ ಮೂಲ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕವೇ ಆಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮ ಸುತ್ತಮುತ್ತಲ ಪರಿಸರವನ್ನು ತೀವ್ರ ಹಾನಿಗೀಡು ಮಾಡುವುದರಿಂದ ಇಂಥ ವಿದ್ಯುತ್ ಸ್ಥಾವರಗಳನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಕೃಷಿ ನಡೆಸುವ ಪರಿಸರದಲ್ಲಿ ಸ್ಥಾಪಿಸದೆ ಕೃಷಿ ಇಲ್ಲದ ಬಯಲು ಸೀಮೆಯ ಒಣ ಪ್ರದೇಶಗಳಲ್ಲಿ ಸ್ಥಾಪಿಸುವುದೇ ಸೂಕ್ತ. ಇಂಥ ಸ್ಥಾವರಗಳನ್ನು ಒಂದೇ ಕಡೆ ಸ್ಥಾಪಿಸದೆ ಸಣ್ಣ ಸಣ್ಣ ಘಟಕಗಳನ್ನು ಸ್ಥಾಪಿಸುವುದರಿಂದ ಒಂದೇ ಕಡೆ ಹೆಚ್ಚಿನ ಹಾನಿ ಆಗುವುದನ್ನು ತಪ್ಪಿಸಬಹುದು ಹಾಗೂ ವಿದ್ಯುತ್ವಿತರಣೆಯಲ್ಲಿ ಉಂಟಾಗುವ ನಷ್ಟವನ್ನು ಕಡಿಮೆ ಮಾಡಬಹುದು. ದೊಡ್ಡ ಜಲ ವಿದ್ಯುತ್ ಘಟಕಗಳನ್ನು ಹೊಸದಾಗಿ ಸ್ಥಾಪಿಸುವ ಅವಕಾಶ ಕರ್ನಾಟಕದಲ್ಲಿ ಉಳಿದಿಲ್ಲ ಮತ್ತು ಅದು ಮಳೆಯ ಲಭ್ಯತೆಯನ್ನು ಅವಲಂಬಿಸಿರುವ ಕಾರಣ ನಂಬಲರ್ಹವೂ ಅಲ್ಲ. ನೈಸರ್ಗಿಕ ಅನಿಲ ಮೂಲಕ ನಡೆಯುವ ಉಷ್ಣ ವಿದ್ಯುತ್ ಘಟಕಗಳ ಸ್ಥಾಪನೆಗೆ ಆದ್ಯತೆ ಕೊಟ್ಟರೆ ಹೆಚ್ಚಿನ ಪರಿಸರ ಹಾನಿ ಇಲ್ಲದೆ ನಂಬಲರ್ಹ ವಿದ್ಯುತ್ ಉತ್ಪಾದನೆ ಸಾಧ್ಯ. ಈ ಬಗ್ಗೆ ಸರ್ಕಾರವು ಹೆಚ್ಚಿನ ಗಮನ ಹರಿಸಬೇಕು.

  ಸದ್ಯಕ್ಕೆ ಸೌರವಿದ್ಯುತ್ ಉತ್ಪಾದನೆ ತೀರಾ ದುಬಾರಿಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವಲ್ಲಿ ಅದುವೇ ದೊಡ್ಡ ತೊಡಕಾಗಿದೆ. ಗಾಳಿ ವಿದ್ಯುತ್ ಉತ್ಪಾದನೆ ಸೌರ ವಿದ್ಯುತ್ತಿನಷ್ಟು ದುಬಾರಿಯಲ್ಲದಿದ್ದರೂ ಇದು ಗಾಳಿ ಬೀಸುವಿಕೆಯನ್ನು ಅವಲಂಬಿಸುರುವ ಕಾರಣ ನಂಬಲರ್ಹ ವಿದ್ಯುತ್ ಅಲ್ಲ. ಕರ್ನಾಟಕದಲ್ಲಿ ಗಾಳಿ ವಿದ್ಯುತ್ ಉತ್ಪಾದನೆಯ ಅವಕಾಶಗಳನ್ನು ಪೂರ್ತಿಯಾಗಿ ಬಳಸಿಕೊಳ್ಳಲಾಗಿಲ್ಲ. ಹೀಗಾಗಿ ಲಭ್ಯವಿರುವ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ಉದ್ದಿಮೆಗಳು ಸ್ಪರ್ಧಾತ್ಮಕವಾಗಿ ಬೆಳೆದು ಉಳಿಯಬೇಕಾದರೆ ಕಡಿಮೆ ವೆಚ್ಚದ ವಿದ್ಯುತ್ ಅಗತ್ಯವಾಗಿರುವುದರಿಂದ ಸದ್ಯದ ಮಟ್ಟಿಗೆ ಕಲ್ಲಿದ್ದಲು ಆಧಾರಿತ/ಅನಿಲ ಆಧಾರಿತ ವಿದ್ಯುತ್ ಘಟಕಗಳು ಮಾತ್ರ ಕಡಿಮೆ ವೆಚ್ಚದ ಆಯ್ಕೆಯಾಗಿದ್ದು ಇವುಗಳನ್ನು ಪರಿಸರ ಸೂಕ್ಷ್ಮ ಹಾಗೂ ಜನವಸತಿ ಕಡಿಮೆ ಇರುವ, ಕೃಷಿ ಅಷ್ಟಾಗಿ ಇಲ್ಲದ ಪ್ರದೇಶಗಳಲ್ಲಿ ಸ್ಥಾಪಿಸುವುದರ ಕಡೆಗೆ ಸರ್ಕಾರ ಗಮನಹರಿಸಬೇಕಾಗಿದೆ. ಜನರ ವಿರೋಧವನ್ನು ಲೆಕ್ಕಿಸದೆ ಇವುಗಳನ್ನು ಪರಿಸರ ಸೂಕ್ಷ್ಮ/ಕೃಷಿ ಇರುವ ಪ್ರದೇಶಗಳಲ್ಲಿ ಸ್ಥಾಪಿಸುವುದು ಸ್ಥಾಪಿಸುವುದು ದಬ್ಬಾಳಿಕೆಯಾಗುವ ಕಾರಣ ಇಂಥ ನಿರ್ಧಾರಗಳನ್ನು ಕೃಷಿ ಕುಟುಂಬದಿಂದ ಹಾಗೂ ಸಮಾಜವಾದಿ ಹಿನ್ನೆಲೆಯಿಂದ ಸಿದ್ಧರಾಮಯ್ಯನವರು ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ಅವರಿಗೂ ಉಳಿದ ರಾಜಕಾರಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಸಮಾಜವಾದದ ಹಿನ್ನೆಲೆಯಿಂದ ಬಂದ ಕಾರಣಕ್ಕಾಗಿಯಾದರೂ ಭಿನ್ನವಾದ, ಸಮತೋಲಿತ ನಿರ್ಧಾರವನ್ನು ಸಿದ್ಧರಾಮಯ್ಯನವರು ತೆಗೆದುಕೊಳ್ಳಬೇಕು ಎಂದು ನಾಡಿನ ಪ್ರಜ್ಞಾವಂತರು ಸಿದ್ಧರಾಮಯ್ಯನವರ ಮೇಲೆ ಒತ್ತಾಯಿಸಬೇಕಾಗಿದೆ.

  ಸೌರ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ವೆಚ್ಚದಲ್ಲಿ ಮಾಡುವ ಸಾಧ್ಯತೆಗಳ ಬಗ್ಗೆ ನಮ್ಮ ದೇಶದಲ್ಲಿ ತೀವ್ರವಾದ ಸಂಶೋಧನೆ ನಡೆಸುವ ಕುರಿತು ಸರ್ಕಾರಗಳು ಗಮನಹರಿಸಬೇಕಾಗಿದೆ. ಅದೇ ರೀತಿ ನೀರನ್ನು ವಿಭಜಿಸಿ ಜಲಜನಕವನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಏನಾದರೂ ವಿಧಾನವನ್ನು ಕಂಡು ಹಿಡಿಯಲು ಸಾಧ್ಯವೇ ಎಂಬ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯ ಇದೆ. ಸದ್ಯ ಜಲಜನಕವನ್ನು ನೀರಿನಿಂದ ವಿಭಜಿಸಿ ಪಡೆಯುವ ವಿಧಾನ ದುಬಾರಿಯಾಗಿದ್ದು ಕಾರ್ಯಸಾಧ್ಯವಾಗಿಲ್ಲ. ಇಂಥ ವಿಧಾನವನ್ನು ರೂಪಿಸಲು ಸಾಧ್ಯವಾದರೆ ನಮ್ಮ ಶಕ್ತಿಯ ಅವಶ್ಯಕತೆಗಳನ್ನು ದೇಶೀಯವಾಗಿ ಉತ್ಪಾದಿಸಿಕೊಳ್ಳಲು ಸಾಧ್ಯ.

 2. ಆನಂದ ಪ್ರಸಾದ್ ರವರೇ, ಇಂದು ಸೌರಶಕ್ತಿಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಪ್ಲಾಂಟ್ ಸ್ಥಾಪಿಸಿದರೆ 8 ರಿಂದ 9 ರೂಪಾಯಿ ಪ್ರತಿ ಯುನಿಟ್ ಗೆ ಉತ್ಪಾದಿಸಲು ಸಾಧ್ಯ. ಉಷ್ಣ ವಿದ್ಯುತ್ 9 ರೂ ಗಿಂತ ಕಡಿಮೆ ಪ್ರತಿ ಯೂನಿಟ್ ಗೆ ದೊರೆಯಬಹುದು. ಆದರೆ ಒಂದು ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತೆಗೆದುಕೊಳ್ಳುವ ಸಮಯವನ್ನು ಗಮನಿಸಿ, ಕನಿಷ್ಠ ಅಂದರೆ 5 ವರ್ಷಗಳಾದರೂ ಬೇಕು. ವ್ಯವಸ್ಥಿತವಾಗಿ ಉತ್ಪಾದನೆ ನಡೆಯಲು 10 ವರ್ಷಗಳೇ ತೆಗೆದುಕೊಳ್ಳಬಹುದು. ಉಷ್ಣವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಮಾಲಿನ್ಯವಂತೂ ಹೇಳಲಸಾಧ್ಯ. ಉಷ್ಣವಿದ್ಯುತ್ ಸ್ಥಾಪಿಸಿದ ನಂತರ ಅದರಿಂದ ವಿದ್ಯುತ್ ಉತ್ಪಾದಿಸಲು ಅದಕ್ಕೆ ಕಲ್ಲಿದ್ದಲು ಬೇಕೇಬೇಕು. ಕಲ್ಲಿದ್ದಲು ಒಂದಿಲ್ಲೊಂದು ದಿನ ಖರ್ಚಾಗುವಂತದ್ದು, ಶಾಶ್ವತವಾದದ್ದಂತೂ ಅಲ್ಲ. ಇಂದು ಉಷ್ಣವಿದ್ಯುತ್ ಸ್ಥಾವರ ಹಾಕಲು ಆರಂಭಿಸಿದರೆ ಸ್ಥಾವರ ಪೂರ್ಣಗೊಳ್ಳುವ ಸಮಯದಲ್ಲಿ (5 ರಿಂದ 10 ವರ್ಷ ನಂತರ) ಕಲ್ಲಿದ್ದಲ್ಲಿನ ಬೆಲೆ ಹೆಚ್ಚಾಗಿದ್ದರೆ ಸೌರವಿದ್ಯುತ್ ಗಿಂತ ಹೆಚ್ಚು ತುಟ್ಟಿಯಾಗುವ ಎಲ್ಲಾ ಸಾಧ್ಯತೆಗಳಿವೆ.
  ಅದೇ ಸೌರವಿದ್ಯುತ್ತನ್ನು ನೋಡಿ, ಒಮ್ಮ ಪ್ಲಾಂಟ್ ಹಾಕಲು ಹೆಚ್ಚು ಹಣ ಖರ್ಚಾಗಬಹುದು. ಆದರೆ ಸೌರವಿದ್ಯುತ್ ಗೆ ಕಚ್ಛಾವಸ್ತುವಾಗಿ ಬೇಕಾದದ್ದು ಸೂರ್ಯನ ಬಿಸಿಲು ಮಾತ್ರ. ಸದ್ಯಕ್ಕಂತೂ ಅದಕ್ಕೆ ದುಡ್ಡು ಕೊಡುವ ಪರಿಸ್ಥಿತಿ ನಮ್ಮಲ್ಲಿಲ್ಲ. ದಿನಗಳೆದಂತೆ ಸೌರವಿದ್ಯುತ್ ನ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆಯೇ ಹೊರತು ಹೆಚ್ಚಾಗುವದಿಲ್ಲ. ಅದಕ್ಕಿಂತ ಬಹಳ ಪ್ರಮುಖವಾದದ್ದೆಂದರೆ ಸೌರಶಕ್ತಿ ಪ್ಲಾಂಟ್ ಹಾಕಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಬೆಲೆ ಸ್ಪಲ್ಪ ಹೆಚ್ಚಾದಂತೆ ಈಗ ಅನಿಸಿದರೂ ನಮ್ಮ ವಿದ್ಯುತ್ ಕೊರತೆಯನ್ನು ಶೀಘ್ರದಲ್ಲಿ ನಿವಾರಿಸಲು ಸಾಧ್ಯ.

  ಹೀಗಿದ್ದರೂ ನವೀಕರಣಗೊಳ್ಳದ ಸಂಪನ್ಮೂಲಗಳ ಆಧಾರದ ಮೇಲೆ ನಿಂತಿರುವ ಉಷ್ಣವಿದ್ಯುತ್ ಸ್ಥಾವರ ಹಾಕಲು ನಮ್ಮ ಸರಕಾರಗಳು ಯಾಕಿಷ್ಟು ಉತ್ಸುಕತೆ ತೋರಿಸುತ್ತದೆಯೆಂಬುದೇ ಯಕ್ಷಪ್ರಶ್ನೆ.

 3. Only problem with Solar Energy is not the production but the storage. We still don’t have efficient and cost effective storage system. There is a huge loss. As a source of energy, nothing matches the sun. It out-powers anything that human technology could ever produce. Only a small fraction of the sun’s power output strikes the Earth, but even that provides 10,000 times as much as all the commercial energy that humans use on the planet.

  Current commercial solar cells, most often made from silicon, typically convert sunlight into electricity with an efficiency of only 10 percent to 20 percent, although some test cells do a little better. Given their manufacturing costs, modules of today’s cells incorporated in the power grid would produce electricity at a cost roughly 3 to 6 times higher than current prices, or 18-30 cents per kilowatt hour.

  Any innovation in this space will radically change human lives. Germany is one country working hard on this space. Twenty-two percent of Germany’s power is generated with renewables. Solar provides close to a quarter of that. The southern German state of Bavaria, population 12.5 million, has three photovoltaic panels per resident, which adds up to more installed solar capacity than in the entire United States.

  We have long way to go!!

 4. ನಮ್ಮಲ್ಲಿಗೆ ಬಹುಷ: ಸೋಲಾರ್ ಥರ್ಮಲ್ ಪವರ್ ಪ್ಲಾಂಟ್ ಗಳು ಹೆಚ್ಚು ಅನುಕೂಲವಾಗಬಹುದು,ನಮ್ಮಲ್ಲಿಗಿಂತ ಕಡಿಮೆ ಸೂರ್ಯ ಶಕ್ತಿ ಸಿಗುವ ಯೂರೋಪಿನಲ್ಲಿ ಈಗಾಗಲೇ ಇವು ವಿದ್ಯುತ್ ಉತ್ಪಾದಿಸುತ್ತಿವೆ , ಸ್ಪೆಯಿನ್ನಲ್ಲಿ ದೊಡ್ಡ ಪ್ರಮಾಣದ ಸ್ತಾವರ ಕೆಲಸ ಮಾಡುತ್ತಿದೆ. ದುಬಾರಿಯಾದ ಫೋಟೊ ವೋಲ್ಟಾಯಿಕ್ ಫಲಕಗಳಿಗಿಂತ ಇವು ಕಡಿಮೆ ವೆಚ್ಚದ್ದೂ- ಹೆಚ್ಚು ಉಪಯೋಗದ್ದೂ ಹೌದು, ವಿದ್ಯತ್ತಿನ ಸ್ತೋರೇಜ್ ಸಮಸ್ಯಯನ್ನು, ಹಗಲಿಗೆ ಸೋಲರ್ ವಿದ್ಯತ್ತನ್ನು ರಾತ್ರಿಗೆ ಇತರ ಮೊಲಗಳ ವಿದ್ದುತನ್ನು ಹೇಗೆ ಬಳಸಬಹುದೆಂದು ಪ್ರಯೋಗಗಳು ನಡೆಯಬೇಕು. ನಮ್ಮ ನೆಲ- ಪರಿಸರ ಉಳಿಸಿಕೊಳ್ಳಲು ಈಬಗೆಯಲ್ಲಿ ಎನಾದರೂ ಮಾಡಲೇಬೇಕು ಬೇರೆ ದಾರಿ ಇಲ್ಲ..

  Reply

 5. ಸದ್ಯಕ್ಕೆ ಸೋಲಾರ್ ಥರ್ಮಲ್ ಪವರ್ ಪ್ಲಾಂಟ್ ಉತ್ಪಾದಿಸುವ ವಿದ್ಯುತ್ ಫೋಟೋ ವೋಲ್ಟಾಯಿಕ್ ವಿಧಾನಕ್ಕಿಂತ ತುಸು ಕಡಿಮೆ ದುಬಾರಿಯಾಗಿದ್ದು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವಲ್ಲಿ ತೊಡಕಾಗಿದೆ. ಭಾರತದಲ್ಲಿ 50 ಮೆಗಾವ್ಯಾಟ್ ಸಾಮರ್ಥ್ಯದ ಪ್ರಥಮ ಸೋಲಾರ್ ಥರ್ಮಲ್ ವಿದ್ಯುತ್ ಘಟಕ ರಾಜಸ್ಥಾನದಲ್ಲಿ ಕಾರ್ಯಾರಂಭ ಮಾಡಿದೆ. ಸೋಲಾರ್ ವಿದ್ಯುತ್ ಘಟಕದಲ್ಲಿ ಸೂರ್ಯನ ಉಷ್ಣತೆಯನ್ನು ಹಿಡಿದಿಟ್ಟುಕೊಂಡು ರಾತ್ರಿ ಕೂಡ ವಿದ್ಯುತ್ ತಯಾರಿಸಲು ಸಾಧ್ಯವಿರುವುದು ಒಂದು ಪ್ಲಸ್ ಪಾಯಿಂಟ್. ದ್ರವ ಲವಣ ಮಿಶ್ರಣ (ಸೋಡಿಯಂ ಮತ್ತು ಕ್ಯಾಲ್ಸಿಯಂ ನೈಟ್ರೇಟ್) ವನ್ನು ಶಾಖ ನಿರೋಧಕ ಟ್ಯಾಂಕಿಗಳಲ್ಲಿ ಸೂರ್ಯನ ಉಷ್ಣತೆಯನ್ನು ಹೀರಿಕೊಂಡು ಸಂಗ್ರಹಿಸಿಟ್ಟುಕೊಂಡು ರಾತ್ರಿ ವಿದ್ಯುತ್ ಉತ್ಪಾದಿಸಲಾಗುತ್ತದೆ (ಸೂರ್ಯನ ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುವ ಬೇರೆ ಮಾಧ್ಯಮಗಳನ್ನು ಕೂಡ ಬಳಸಬಹುದು). ಸೋಲಾರ್ ಫೋಟೋ ವೋಲ್ಟಾಯಿಕ್ ವಿಧಾನದಲ್ಲಿ ಇದು ಸಾಧ್ಯವಿಲ್ಲ. 8 ಮೀಟರ್ ಅಗಲ ಹಾಗೂ 26 ಮೀಟರ್ ಉದ್ದದ ಶಾಖ ನಿರೋಧಕ ಟ್ಯಾಂಕಿಯಲ್ಲಿ ತುಂಬಿಸಿದ ಲವಣ ಮಿಶ್ರಣ ಹಗಲು ಹೊತ್ತು ಹೀರಿಕೊಂಡ ಸೂರ್ಯನ ಉಷ್ಣತೆಯಿಂದ 100 ಮೇಘಾವ್ಯಾಟ್ ವಿದ್ಯುತ್ ಅನ್ನು ನಾಲ್ಕು ಗಂಟೆಗಳಷ್ಟು ಅವಧಿಗೆ ಉತ್ಪಾದಿಸಬಹುದು. ನಮ್ಮ ದೇಶದಲ್ಲಿಯೇ ಇದಕ್ಕೆ ಬೇಕಾದ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಅಳವಡಿಸಿದರೆ ಖರ್ಚನ್ನು ಕಡಿಮೆ ಮಾಡಲು ಸಾಧ್ಯವಿದೆ. ಇವುಗಳನ್ನು ಸದ್ಯಕ್ಕೆ ಆಮದು ಮಾಡಲಾಗಿದೆ. ನಮ್ಮ ದೇಶದಲ್ಲಿ ಸೋಲಾರ್ ಥರ್ಮಲ್ ವಿದ್ಯುತ್ ಕುರಿತು ಸಂಶೋಧನೆಗೆ ಒತ್ತು ಕೊಡಬೇಕಾದ ಅಗತ್ಯ ಇದೆ.

Leave a Reply

Your email address will not be published.