ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯೇ

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವವರು ಮಕ್ಕಳು. ಲೈಂಗಿಕ ಕಿರುಕುಳಕ್ಕೆ-ಅತ್ಯಾಚಾರಕ್ಕೆ ಒಳಗಾಗುವ, ಪರಿತ್ಯಜಿಸಲ್ಪಡುವ, ಬಾಲಕಾರ್ಮಿಕರಾಗುವ, ಶಾಲೆಯ ಮೆಟ್ಟಿಲನ್ನೇ ಹತ್ತದ, ಕುಟುಂಬ ಮತ್ತು ಪೋಷಕರಿಂದ ದುರುಪಯೋಗಕ್ಕೆ ಒಳಗಾಗುವ, ದತ್ತು ಹೋಗುವ, ಮಕ್ಕಳ ಸಾಗಣೆಗೆ ಒಳಗಾಗುವ, ಮೋಸ ಹೋಗುವ, ಕಳೆದು ಹೋದ, ಪೊಲೀಸರಿಗೆ ಸಿಕ್ಕಿರುವ, ಮಾದಕ ವಸ್ತುಗಳಿಗೆ, ಹೆಚ್.ಐ.ವಿ, ಏಡ್ಸ್ ಮುಂತಾದ ಭೀಕರ ರೋಗಕ್ಕೆ ತುತ್ತಾಗುವ…….. ಇಂತಹ ಅಸಂಖ್ಯ ಮಕ್ಕಳನ್ನು ನಮ್ಮ ಸುತ್ತ ನೋಡುತ್ತಲೇ ಇರುತ್ತೇವೆ. ಈ ಎಲ್ಲ ವಿಷಮ ಪರಿಸ್ಥಿತಿಗೂ ಅವರ ಮುಗ್ಧತೆ ಹಾಗೂ ಅಸಹಾಯಕತೆಯೇ ಮುಖ್ಯ ಕಾರಣ. ತೀರಾ ಇತ್ತೀಚೆಗಷ್ಟೇ ನಾವು ಮಕ್ಕಳನ್ನೂ ವ್ಯಕ್ತಿಗಳಂತೆ ಕಾಣಬೇಕು, ಅವರಿಗೂ ಹಿರಿಯರಿಗಿರುವಂತೆಯೇ ಸಂವಿಧಾನಾತ್ಮಕವಾದ ಹಕ್ಕುಗಳಿವೆ ಎಂದು ಅರಿಯಲು ಪ್ರಾರಂಭಿಸಿದ್ದೇವೆ. ಬೆಳಕಿಗೇ ಬರದೇ, ಎಲ್ಲಿಯೂ ದಾಖಲಾಗದೇ ಹೋಗುತ್ತಿದ್ದ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವಾದರೂ, ಇಂದು ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಿವೆ. ಆದರೆ ದೊಡ್ಡವರ ಈ ಪ್ರಪಂಚದಲ್ಲಿ ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2448 ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 714 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಮಕ್ಕಳಿಗೆ ತುರ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಇತ್ತೀಚೆಗೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಇದೊಂದು ಸ್ವಾಗತಾರ್ಹವಾದ ವಿಚಾರವೇ. ಸ್ಕಾಟ್‌ಲ್ಯಾಂಡ್‌ನಲ್ಲಿ 1996 ರಲ್ಲಿ ಪ್ರಥಮ ಮಕ್ಕಳ ನ್ಯಾಯಾಲಯ ಸ್ಥಾಪನೆಯಾದ ನಂತರ ಅನೇಕ ದೇಶಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರವು 2005 ರಲ್ಲೇ ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಎಲ್ಲ ರಾಜ್ಯಗಳೂ ಕಳೆದ ಐದು ವರ್ಷಗಳಿಂದ ಉಲ್ಲಂಘಿಸುತ್ತಲೇ ಬಂದಿವೆ! ಹೋದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ತುರ್ತಾಗಿ ದೆಹಲಿಯಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪಿಸಲು ಆದೇಶ ನೀಡಿತ್ತು. ಅದೇನಾದರೂ ಕಾರ್ಯಗತಗೊಂಡಿದ್ದರೆ, ದೇಶದಲ್ಲೇ ಮೊದಲ ಮಕ್ಕಳ ನ್ಯಾಯಾಲಯ ಅಲ್ಲಿ ಸ್ಥಾಪನೆಯಾಗುತ್ತಿತ್ತು. ಆದರೆ ನಮ್ಮ ದೇಶಕ್ಕೇ ಹೊಸದಾಗಿರುವ ಈ ಮಕ್ಕಳ ನ್ಯಾಯಾಲಯದ ಪರಿಕಲ್ಪನೆಯ ನೀಲಿ ನಕಾಶೆಯೇ ಈವರೆಗೆ ಸಿದ್ಧಗೊಂಡಿಲ್ಲ!

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು 2011-12 ನೇ ವರ್ಷವನ್ನು ‘ಮಕ್ಕಳ ಹಕ್ಕುಗಳ ವರ್ಷ’ ಎಂದು ಘೋಷಿಸಿದೆ. Streetchildrenಈಗಾಗಲೇ ದೇಶದಲ್ಲಿ ಮಕ್ಕಳ ನ್ಯಾಯ [ಮಕ್ಕಳ ಪೋಷಣೆ ಮತ್ತು ರಕ್ಷಣೆ] ಕಾಯ್ದೆ 2000 ದಲ್ಲಿಯೇ ರಚನೆಗೊಂಡಿದೆ. ಈ ಕಾಯ್ದೆ ಕುರಿತು ಕರ್ನಾಟಕ ರಾಜ್ಯ 2002 ರಲ್ಲಿಯೇ ನಿಯಮವನ್ನು ಜಾರಿಗೆ ತಂದು, ಮಕ್ಕಳ ರಕ್ಷಣೆಗೆ ಬದ್ಧವಾಗಿರುವ ಸಂಕಲ್ಪ ಮಾಡಿದೆ. ಇದರ ಒಂದು ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು 2009 ರ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಚಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯಿದೆ 2005 ರಡಿಯಲ್ಲಿನ ಸ್ವತಂತ್ರ ಶಾಸನಬದ್ಧ ಅಂಗಸಂಸ್ಥೆಯಾಗಿರುವ ಈ ಆಯೋಗವು ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ರಲ್ಲಿ ಸ್ಪಷ್ಟಪಡಿಸಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡಲೆಂದೇ ರೂಪುಗೊಂಡಿದೆ.

ಇದರ ಜೊತೆಗೆ ಈಗಾಗಲೇ, ಮಕ್ಕಳ ಪೋಷಣೆ, ರಕ್ಷಣೆ ಮತ್ತು ಕಾನೂನಿನ ನೆರವಿನ ಹಿತದೃಷ್ಟಿಯಿಂದ ಶಾಸನಬದ್ಧವಾದ ನ್ಯಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ‘ಮಕ್ಕಳ ಕಲ್ಯಾಣ ಸಮಿತಿ’ಗಳನ್ನು 2003 ರಲ್ಲೇ ನೇಮಿಸಿದೆ. ಈ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಯಲ್ಲಿಯೂ ನೇಮಕವಾಗಿದೆ. ಇದರಲ್ಲಿ 0-18 ವರ್ಷದವರೆಗಿನ ಮಕ್ಕಳು ಯಾವುದೇ ತಾರತಮ್ಯವಿಲ್ಲದಂತೆ ಪೋಷಣೆ, ರಕ್ಷಣೆ ಮತ್ತು ನ್ಯಾಯದ ನೆರವನ್ನು ಪಡೆಯುವ ಅವಕಾಶವಿದೆ. ಈ ಮಕ್ಕಳ ನ್ಯಾಯ ಮಂಡಳಿಯು ಮಕ್ಕಳ ನ್ಯಾಯ ಕಾಯ್ದೆಯ ಒಂದು ಅಂಗವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಮುಖ್ಯಸ್ಥರು ನ್ಯಾಯಾಧೀಶರಾಗಿದ್ದು, ಪ್ರಕರಣಗಳನ್ನು ನಡೆಸಲು ಇಬ್ಬರು ಸಮಾಜಸೇವಾ ಕಾರ್ಯಕರ್ತರಿರುತ್ತಾರೆ. ಜೊತೆಗೆ ಪದವಿ ಹೊಂದಿದ ಒಬ್ಬ ಅಧ್ಯಕ್ಷರು ಹಾಗೂ ಐದು ಜನ ಸದಸ್ಯರನ್ನೊಳಗೊಂಡ ಸಮಿತಿಯೂ ಕಾರ್ಯನಿರ್ವಹಿಸಬೇಕಿದೆ.

ಮಕ್ಕಳ ಹಿತರಕ್ಷಣೆಗಾಗಿಯೇ ಈ ಎಲ್ಲಾ ಸರ್ಕಾರಿ ಇಲಾಖೆ, ಆಯೋಗ, ಸಮಿತಿಗಳು ಇರುವಾಗ ಮತ್ತೆ ಪ್ರತ್ಯೇಕ, ವಿಶೇಷ ನ್ಯಾಯಾಲಯದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಹಲವರದು. ಆದರೆ ಇವುಗಳೆಲ್ಲದರ ಮಧ್ಯೆ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. childlaboursಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು 25 ವರ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಾಲಕಾರ್ಮಿಕರಿರುವರೆಂದು ಬೆಂಗಳೂರಿನ ‘ಬಾಲ ಕಾರ್ಮಿಕ ವಿರೋಧಿ ಆಂದೋಲನ’ದ ವರದಿ ತಿಳಿಸುತ್ತದೆ. ಆದರೆ ಕಾಯ್ದೆಯಡಿ ಇದುವರೆಗೆ ದಾಖಲಾಗಿರುವುದು ಕೇವಲ 446 ಪ್ರಕರಣಗಳು! ಅದರಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರು ಮಾತ್ರ! ಇದು ನಮ್ಮ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ.

ಮಕ್ಕಳ ದೌರ್ಜನ್ಯದ ಕ್ಷೇತ್ರ ಅತ್ಯಂತ ವಿಸ್ತಾರವಾದುದು. ಈ ಎಲ್ಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿರುವ ವ್ಯವಸ್ಥೆಯ ಪರಿಧಿಯಾಚೆಗೇ ಇಂದಿಗೂ ಅಸಂಖ್ಯಾತ ಮಕ್ಕಳು ನಿತ್ಯ ಶೋಷಣೆಗೆ, ಸಂಕಷ್ಟಗಳಿಗೆ ಊಹಿಸಲೂ ಸಾಧ್ಯವಿಲ್ಲದ ರೀತಿಗಳಲ್ಲಿ ಗುರಿಯಾಗುತ್ತಲೇ ಇದ್ದಾರೆ. ಮಕ್ಕಳ ಸಂಬಂಧಿತ ಈ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗದೇ, ವಿಕೇಂದ್ರಿಕರಣಗೊಳ್ಳದೇ, ಅಧಿಕಾರಿಗಳ, ಸಿಬ್ಬಂದಿಯ ನಿರ್ಲಕ್ಷ್ಯ, ನಿಷ್ಕ್ರಿಯತೆಗೆ ಒಳಗಾಗಿ ಮತ್ತು ಎಲ್ಲಕ್ಕಿಂತಾ ಮುಖ್ಯವಾಗಿ ಮಕ್ಕಳೊಂದಿಗಿನ ನೇರ ಸಂಪರ್ಕದ ಕ್ಷೇತ್ರಕಾರ್ಯ ಮಾಡದೆ, ಮಕ್ಕಳ ಮನಸ್ಸಿನ ಸೂಕ್ಷ್ಮಗಳನ್ನರಿಯದೇ ನಿರೀಕ್ಷಿತ ಪ್ರಮಾಣದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಬಾರಿ ಜಾತಿ ಹಾಗೂ ಸ್ಥಳೀಯ ರಾಜಕಾರಣದ ಪ್ರಭಾವ ಮತ್ತು ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ತಾರತಮ್ಯ ಹಾಗೂ ಲೋಪ ಉಂಟಾಗುತ್ತಿದೆ. ಪ್ರಕರಣ ದಾಖಲಾಗಿದ್ದರೂ, ಆಗದಿದ್ದರೂ ತೊಂದರೆಯಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ, ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥಗೊಳಿಸಿ ನ್ಯಾಯ ನೀಡುವ ವ್ಯವಸ್ಥೆಯನ್ನು ತುರ್ತಾಗಿ ಪುನರ್‌ರೂಪಿಸಬೇಕಿದೆ.

Leave a Reply

Your email address will not be published.