ಬಿಸಿಯೂಟ ನಿರ್ವಹಣೆ ಖಾಸಗಿಯವರ ಪಾಲಾಗದಿರಲಿ


– ಅನಂತನಾಯ್ಕ ಎನ್.


 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಘೋಷಣೆ ಯಾವುದೇ ಮಗುವು ಆಹಾರದಿಂದ ವಂಚಿತರಾಗಬಾರದು. ಹಸಿವು, ಬಡತನ, ಅಪೌಷ್ಟಿಕತೆ ಹಾಗೂ ತಾರತಮ್ಯಗಳು ಬದುಕುವ ಹಕ್ಕಿನಿಂದ ವಂಚಿಸಬಾರದು ಎಂದು ಹೇಳಿದೆ. ಹಸಿವು, ಬಡತನ ಹಾಗೂ ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದನ್ನು ಗಮನಿಸಿ ಶಾಲೆಗಳಲ್ಲಿಯೇ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಗಳ ಫಲವಾಗಿ ಬಿಸಿಯೂಟದ ಯೋಜನೆ ಜಾರಿಯಾಗಿದ್ದು ಜನ ಚಳವಳಿಗಳಿಗೆ ದೊರೆತ ಜಯ.

ಕಾರ್ಪೋರೇಟ್ ಕಂಪೆನಿಗಳ ಪರ ಸರ್ಕಾರದ ವಕಾಲತ್ತು:
ಜುಲೈ 23 ರಂದು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, “ಬಿಸಿಯೂಟದ ನಿರ್ವಹಣೆಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸಲಾಗುವುದು. ನಾನೇ ಖುದ್ದಾಗಿ ಕಂಪೆನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದಾರೆ. mid-day_mealsಈ ಹೇಳಿಕೆ ಸರ್ಕಾರದ ಹಿತಾಸಕ್ತಿ ಯಾರ ಪರ ಎಂಬುದನ್ನು ಸೂಚಿಸುತ್ತದೆ. ಇವರು ಜನತೆಯ ಪ್ರತಿನಿಧಿಗಳೋ ಅಥವಾ ಖಾಸಗೀ ಕಂಪೆನಿಗಳ ಏಜೆಂಟರೋ? ಎಂಬ ಪ್ರಶ್ನೆ ಏಳುತ್ತದೆ. ಸಾರ್ವಜನಿಕ ವ್ಯವಸ್ಥೆಯನ್ನು ನಾಶಗೊಳಿಸಿ ಖಾಸಗಿ ಅಧಿಪತ್ಯ ಸ್ಥಾಪಿಸಲು ಹೊರಟಿರುವ ಈ ಹೇಳಿಕೆಯ ಹಿಂದೆ ಶಿಕ್ಷಣದ ಹಕ್ಕು, ಆಹಾರದ ಹಕ್ಕನ್ನು ನಿರಾಕರಿಸುವುದಲ್ಲದೇ ಲಕ್ಷಾಂತರ ದಮನಿತ ಮಹಿಳೆಯರ ಉದ್ಯೋಗವನ್ನೂ ಕಸಿದುಕೊಳ್ಳುವುದಾಗಿದೆ. ಬಿಸಿಯೂಟ ಯೋಜನೆಯ ಸಮಸ್ಯೆಯ ಮೂಲವಿರುವುದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ, ಅಸಮರ್ಪಕ ನಿರ್ವಹಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಲ್ಲಿ. ಇದನ್ನು ಸರಿಪಡಿಸಲು ಹಣಕಾಸು ಖರ್ಚು, ಅಗತ್ಯ ಸೌಲಭ್ಯ ನೀಡುವ ಬದಲು ಯೋಜನೆಯನ್ನೇ ಖಾಸಗೀಕರಿಸಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಲಾಭವೇ ತಮ್ಮ ಏಕಮಾತ್ರ ಉದ್ದೇಶವೆಂದು ನಂಬಿರುವ ಕಾರ್ಪೋರೇಟ್ ಕಂಪನಿ, ಎನ್‌ಜಿಓಗಳಿಗೆ ಈ ರೀತಿ ಯೋಜನೆ ಹಸ್ತಾಂತರಿಸುವುದಾದರೆ ಜನರು ಆಯ್ಕೆ ಮಾಡಿದ ಸರ್ಕಾರದ ಕೆಲಸವೇನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಯೋಜನೆಯ ಉದ್ದೇಶ:
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ 2002-03ರಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಈಶಾನ್ಯ ವಲಯದ 7 ಜಿಲ್ಲೆಗಳ ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪ್ರಾರಂಭವಾಗಿ, ಇಂದು ರಾಜ್ಯವ್ಯಾಪಿ 1 ರಿಂದ 10 ನೇ ತರಗತಿವರೆಗೆ ವಿಸ್ತರಣೆಯಾಗಿದೆ. ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸುವುದು, ಶಾಲೆ ತೊರೆಯುವುದನ್ನು ತಡೆಯುವುದು, ಪೌಷ್ಟಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯ ಹೆಚ್ಚಿಸಿ ಶಕ್ತಿವಂತರು, ದೃಢಕಾಯರಾಗಿ ಮಕ್ಕಳನ್ನು ಬೆಳೆಸುವುದು. ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ‘ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿಗೊಳಿಸಿ ತನ್ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದು’ ಅಕ್ಷರ ದಾಸೋಹ ಕಾರ್ಯಕ್ರಮದ ಉದ್ದೇಶ.

ಈ ಯೋಜನೆಯು ಜಾರಿಯಾದಾಗಿನಿಂದ ಮಕ್ಕಳ ಹಾಜರಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. mid-day-meal-2ಅಪೌಷ್ಟಿಕತೆ ಸಣ್ಣ ಪ್ರಮಾಣದಲ್ಲಿ ದೂರ ಸರಿಯಲು ಸಹಕಾರಿಯಾಗಿದೆ. ವಿವಿಧ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಊಟ ಮಾಡುವುದು ‘ಸಮಾನತೆಯೆಡೆಗೆ ಉತ್ತಮ ಪ್ರಯತ್ನವಾಗಿದೆ’. ಶಾಲಾ ಆವರಣದಲ್ಲಿಯೇ ಬಿಸಿಯೂಟ ತಯಾರು ಮಾಡಿ ನೀಡುತ್ತಿರುವುದರಿಂದ ಮಕ್ಕಳಿಗೆ ಮನೆ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಲೆ ಎಂದರೆ ಭಯಪಡುವ ಕೆಲ ಮಕ್ಕಳಿಗೆ ತಾಯಿ ಮಮತೆ-ಪ್ರೀತಿ ನೀಡಿ ಸಂತೈಸುವಲ್ಲಿ ಅಡುಗೆ ತಯಾರಕರ ಕಾರ್ಯ ಶ್ಲಾಘನೀಯ. ಕನಿಷ್ಠ ರೂ.1100, 1000 ವೇತನ ಪಡೆಯುತ್ತಿದ್ದರೂ ಕೂಡ ಮಕ್ಕಳ ಪಾಲನೆಯಲ್ಲಿ ತೊಡಗುವ ಅಡುಗೆ ತಯಾರಕ ಮತ್ತು ಮಕ್ಕಳ ನಡುವಿನ ಒಡನಾಟ ಕಲಿಕೆಯ ಪ್ರಗತಿಗೆ ಸಹಕಾರಿಯಾಗುತ್ತಿದೆ. ಶೋಷಿತ, ಸಂಕಷ್ಟದಲ್ಲಿರುವ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ ಸಬಲೀಕರಣಗೊಳಿಸುವುದು ಈ ಯೋಜನೆಯ ಇನ್ನೊಂದು ಪ್ರಮುಖ ಅಂಶ ಹಾಗೂ ಗಮನಾರ್ಹ ಸಂಗತಿಯೂ ಹೌದು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 55,113 ಶಾಲೆಗಳಲ್ಲಿ (ಸರಕಾರಿ (48,773), ಅನುದಾನಿತ (6,340)), 61.40 ಲಕ್ಷ ವಿದ್ಯಾರ್ಥಿಗಳು ಬಿಸಿಯೂಟದ ಪ್ರಯೋಜನ ಪಡೆಯಲಿದ್ದಾರೆ. ಪ್ರತಿದಿನ ಊಟದ ವೆಚ್ಚವಾಗಿ ಕಿರಿಯ ಪಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.3.11, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.4.65, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ.6.16 ಖರ್ಚು ಮಾಡುತ್ತಿದೆ. ಈ ಕನಿಷ್ಠ ಹಣದಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯವೇ?

ಸರ್ಕಾರಿ ಸೂಚಿತ ಆಹಾರ ಪಟ್ಟಿಯಲ್ಲಿ ಅನ್ನ ಸಾಂಬಾರು, ಬಿಸಿ ಬೇಳೆಬಾತ್, ಉಪ್ಪಿಟ್ಟು, ಸಿಹಿ ಪೊಂಗಲ್ ನೀಡಲು ಆದೇಶಿಸಲಾಗಿದೆ. ಇದು ಪೌಷ್ಟಿಕ ಆಹಾರವೇ? ರೊಟ್ಟಿ, ಮುದ್ದೆ, ಮೊಟ್ಟೆ, ಮೀನು, ಮಾಂಸಾಹಾರ ಮತ್ತು ಸ್ಥಳೀಯವಾಗಿ ಸಿಗುವ ಧಾನ್ಯ ತರಕಾರಿ, ಹಣ್ಣುಗಳು ಪೌಷ್ಟಿಕವಲ್ಲವೇ? ಎಂಬುದು ಚರ್ಚೆಯಾಗಬೇಕಿದೆ. ಅಗತ್ಯ ಪೌಷ್ಟಿಕ ಆಹಾರ ನೀಡುವ ಬದಲು ಮಾತ್ರೆಗಳ ಮೂಲಕವೇ ಪೌಷ್ಟಿಕತೆ ಹೆಚ್ಚಿಸಲು ಹೊರಟ ಸರಕಾರದ ಕ್ರಮ ಎಷ್ಟು ಸರಿ? ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬಿಸಿಯೂಟದ ಜತೆ ಮೊಟ್ಟೆ, ಬಾಳೆಹಣ್ಣು ಹಾಗೂ ಅಗತ್ಯ ಕಾಳುಗಳನ್ನು ನೀಡಲಾಗುತ್ತಿದೆ.

ರಾಜ್ಯವ್ಯಾಪಿ ಪ್ರಸ್ತುತ 1,04,357 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ರೂ.1,100. ಸಹಾಯಕರಿಗೆ ರೂ.1,000 ಗಳನ್ನು ನೀಡಲಾಗುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ ರೂ 4,000, ಸಹಾಯಕ ಅಡುಗೆಯವರಿಗೆ ರೂ 3,000 ವೇತನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಸೇವಾ ಭದ್ರತೆ, ಕನಿಷ್ಠ ವೇತನ, ಅಗತ್ಯ ತರಬೇತಿ, ಸೂಕ್ತ ತರಬೇತಿಯಿಂದ ಅಡುಗೆ ತಯಾರಕರು ವಂಚಿತರಾಗಿದ್ದಾರೆ. ದೌರ್ಜನ್ಯ, ಅವಮಾನಿಸುವುದು ಹಾಗೂ ಕೆಲಸದಿಂದ ತೆಗೆದುಹಾಕುವುದು ಕೆಲವೆಡೆ ನಡೆಯುತ್ತಲೇ ಇದೆ.

ಬಿಸಿಯೂಟ ತಯಾರಿಸಲು ಅಗತ್ಯ ಸೌಲಭ್ಯಗಳ ಕೊರತೆ:
ಎಲ್ಲಾ ಶಾಲೆಗಳಿಗೂ ಸುಸಜ್ಜಿತ ಅಡುಗೆಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಬಯಲಲ್ಲಿ, ಚಪ್ಪರದಲ್ಲಿ, ತರಗತಿ ಕೋಣೆಗಳಲ್ಲಿಯೇ MID-DAY-MEALಅಡುಗೆ ತಯಾರಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇಂದಿಗೂ ಹಳ್ಳ, ಇನ್ನಿತರ ಕಡೆಯ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ. ಅವಶ್ಯವಿರುವ ಪಾತ್ರೆ, ಸ್ಟೌ, ತಟ್ಟೆ ಇನ್ನಿತರ ಪರಿಕರಗಳನ್ನು ಸಮರ್ಪಕವಾಗಿ ಪೂರೈಸಲಾಗಿಲ್ಲ. ನಿರಂತರವಾಗಿ ಶಾಲಾ ಆವರಣ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಸಿಯೂಟ ಅಡುಗೆಯಲ್ಲಿ ಹಲ್ಲಿ, ಇಲಿ, ಇನ್ನಿತರ ಕೀಟಗಳು ಬೀಳುತ್ತಿರುವ ವರದಿಗಳು ಕೆಲವೆಡೆ ಆಗಿವೆ. ಬಿಸಿಯೂಟ ಯೋಜನೆಯನ್ನು ವಿಫಲಗೊಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೂಡ ಇಂತಹ ಹೀನಕೃತ್ಯ ಮಾಡುತ್ತಿರುವ ಶಂಕೆ ಇದೆ!

ಕಳಪೆ ಪದಾರ್ಥಗಳ ವಿತರಣೆ:
ಸರಕಾರದಿಂದ ಶಾಲಾ ವಿದ್ಯಾರ್ಥಿಗೆ ಅಕ್ಕಿ, ಬೇಳೆಯನ್ನು ವಿತರಿಸಲಾಗುತ್ತಿದೆ. ಈ ಅಕ್ಕಿ ಬೇಳೆ ಕಳಪೆ ಗುಣಮಟ್ಟದ್ದು ಅಲ್ಲದೇ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೇ ಪ್ರತಿದಿನ ವಿದ್ಯಾರ್ಥಿಗಳಿಗೆ ಊಟಕ್ಕಾಗಿ ಖರ್ಚು ಮಾಡುತ್ತಿರುವ ಹಣ ಇವತ್ತಿನ ಬೆಲೆ ಏರಿಕೆಗೆ ತುಲನೆ ಮಾಡಿದರೆ ತರಕಾರಿ, ಕಾಳು, ಮಸಾಲೆ ಪದಾರ್ಥ ಕೊಳ್ಳಲು ಕಷ್ಟಸಾಧ್ಯ.

ಸೇವೆಯ ಹೆಸರಿನಲ್ಲಿ ಎನ್.ಜಿ.ಓ (ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ) ಗಳಿಂದ ಲೂಟಿ:
ಈಗಾಗಲೇ ರಾಜ್ಯದಲ್ಲಿ ಅಕ್ಷಯಪಾತ್ರೆ ಫೌಂಡೇಶನ್ (ಇಸ್ಕಾನ್), ಅದಮ್ಯ ಚೇತನ, ಸೇರಿದಂತೆ 93 ಸ್ವಯಂಸೇವಾ ಸಂಸ್ಥೆಗಳು 5,790 ಶಾಲೆಗಳಲ್ಲಿ ಸರಕಾರದಿಂದ ಹಣ ಪಡೆದು 10.68 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿವೆ. ಅಲ್ಲದೆ ಕರ್ನಾಟಕದ ಬಡ ಮಕ್ಕಳ ಚಿತ್ರಗಳನ್ನು ತೋರಿಸಿ ದೇಶ ವಿದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ. ಇಸ್ಕಾನ್ ನೀಡುವ ಊಟದಲ್ಲಿ ಇಲಿ ಇದ್ದುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಾರಗಟ್ಟಲೇ ಹಳಸಿದ ಊಟ ನೀಡಿದ ಎನ್.ಜಿ.ಓ ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ಊಟವೆಂದರೆ, ಕೇವಲ ಸಸ್ಯಾಹಾರ ಮಾತ್ರ, ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೇಕಿಲ್ಲಾ ಎನ್ನುತ್ತಲೇ ಈ ಎನ್.ಜಿ.ಓ ಗಳು ಅಹಾರದ ಹಕ್ಕಿನ ಮೇಲೆ ದಾಳಿ ಮಾಡಲು ಹೊರಟಿವೆ. ಪ್ರಾದೇಶಿಕ ಅಹಾರವನ್ನು ತಿರಸ್ಕರಿಸಲಾಗುತ್ತಿದೆ. ನೂರಾರು ಶಾಲೆಗಳಿಗೆ ಒಂದೇ ರೀತಿಯ ಊಟವನ್ನು ಸಾಗಿಸಲಾಗುತ್ತಿದೆ. ಬಿಸಿಯೂಟ ಕಲ್ಪನೆಗೆ ವಿರುದ್ಧವಾಗಿ ತಂಗಳು, ಹಳಸಿದ, ತಣ್ಣಗಾದ ಊಟವನ್ನು ನೀಡಲಾಗುತ್ತಿದೆ.

ಬಿಸಿಯೂಟ ಯೋಜನೆ ಸಮರ್ಪಕ ಜಾರಿಗೆ ಸಲಹೆಗಳು:

  • ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಬಿಸಿ ತಾಜಾ ಊಟವನ್ನು ತಯಾರು ಮಾಡಿಕೊಡಬೇಕು.
  • ಅಡುಗೆಮನೆ, ಶುದ್ಧ ಕುಡಿಯುವ ನೀರು, ಗ್ಯಾಸ್ ಸ್ಟೌ, ಪಾತ್ರೆ, ತಟ್ಟೆ ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಆಹಾರ ಪದಾರ್ಥ, ತರಕಾರಿ ಹಾಳಾಗದಂತೆ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
  • ರಾಜ್ಯವ್ಯಾಪಿ 61 ಲಕ್ಷದಷ್ಟು ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ಶಿಕ್ಷಣ ಇಲಾಖೆಯಡಿ ಬಿಸಿಯೂಟ ಯೋಜನೆ ಪ್ರಾಧಿಕಾರ/ನಿಗಮ ಅಥವಾ ನಿರ್ದೇಶನಾಲಯ ಸ್ಥಾಪಿಸಿ ನಿರ್ವಹಿಸಬೇಕು.
  • ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು (ತರಕಾರಿ, ಹಣ್ಣುಗಳು, ಮೊಟ್ಟೆ, ಮೀನು, ಮಾಂಸಾಹಾರ ಇತ್ಯಾದಿ) ಉಪಯೋಗಿಸಿ ಅಡುಗೆ ತಯಾರಿಸಲು ಮುಂದಾಗಬೇಕು. ವಾರಕ್ಕೊಮ್ಮೆಯಾದರೂ ಆಹಾರ ತಜ್ಞರು ಶಾಲೆಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು.
  • ಶಿಕ್ಷಕರನ್ನು ಈ ಯೋಜನೆಯ ಕೆಲಸಕ್ಕೆ ತೊಡಗಿಸಬಾರದು. ಯೋಜನೆಯ ಜಾರಿಗೆ ಶಾಲೆ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಅವಶ್ಯಕವಿರುವ ಹುದ್ದೆಗಳನ್ನು ಮಾರ್ಪಾಡು ಮಾಡಿ ನೇಮಕ ಮಾಡಿಕೊಳ್ಳಬೇಕು. ಶಾಲಾ ಮುಖ್ಯೋಪಾಧ್ಯಾಯರು ತಿಂಗಳ ಆಹಾರ ಪದಾರ್ಥಗಳ ಬೇಡಿಕೆ ಪಟ್ಟಿಯನ್ನು ತಯಾರಿಸಿ ನೀಡಬೇಕು.
  • ಪೋಷಕರ ಪ್ರಾತಿನಿಧ್ಯವಿರುವ ಎಸ್.ಡಿ.ಎಂ.ಸಿ ಯಲ್ಲಿ ಪಾರದರ್ಶಕವಾಗಿ ಈ ಯೋಜನೇಯ ಜಾರಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಯ ಕೆಲವರು ಅನಗತ್ಯವಾಗಿ ಕಿರುಕುಳ ನೀಡದಂತೆ ಎಚ್ಚರವಹಿಸಬೇಕು.
  • ಈ ಯೋಜನೆಯಲ್ಲಿ ದುಡಿಯುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಡ, ದಲಿತ, ಹಿಂದುಳಿದ ವರ್ಗಗಳ ದುರ್ಬಲರಾಗಿದ್ದು ಇವರ ಸೇವೆಯನ್ನು ಖಾಯಂಗೊಳಿಸಬೇಕು, ಕನಿಷ್ಠ ವೇತನ ನಿಗದಿಗೊಳಿಸಬೇಕು. (ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ 4 ಸಾವಿರ ರೂಪಾಯಿ, ಸಹಾಯಕ ಅಡುಗೆಯವರಿಗೆ 3 ಸಾವಿರ ವೇತನ ನೀಡಲಾಗುತ್ತಿದೆ). ಮಕ್ಕಳ ಕಲಿಕೆಯ ಪ್ರೇರೇಪಣೆಗೆ ಅನುಕೂಲವಾಗುವಂತೆ ಅಡುಗೆಯವರಿಗೆ ಸೂಕ್ತ ತರಬೇತಿ ನೀಡಬೇಕು.
  •  ಅಡುಗೆಯವರಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿಗಳನ್ನು ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿಗುವಂತಾಗಲು ಪ್ರತಿದಿನ ಒಬ್ಬ ವಿದ್ಯಾರ್ಥಿಗೆ ಕನಿಷ್ಠ ರೂ.20 ಗಳನ್ನು ಆಹಾರ ವೆಚ್ಚ ನೀಡಬೇಕು. ಅಡುಗೆಮನೆಯ ತಪಾಸಣೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿವಾರ ನಡೆಸಬೇಕು. ಪ್ರಾದೇಶಿಕ ಭಿನ್ನತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ವಿತರಿಸಬೇಕು.

ಇತ್ತೀಚೆಗೆ ಒಂದು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ “ಶೇಕಡಾ 98%ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿಯೇ ತಯಾರಿಸಿದ ಊಟ ಬೇಕು” ಎಂಬ ಅಂಶವನ್ನು ಹೇಳಿದ್ದಾರೆ. ಹಾಗಾಗಿ, ಸಾರ್ವಜನಿಕ ಹಾಗೂ ಸರ್ಕಾರಿ ವ್ಯವಸ್ಥೆಯ ಮೂಲಕವೇ ನಮ್ಮ ಮಕ್ಕಳಿಗೆ ಬಿಸಿಯೂಟ ಪೂರೈಕೆಯಾಗಬೇಕೇ ವಿನಾಃ ಖಾಸಗೀ ಕಾರ್ಪೋರೇಟ್ ಕಂಪೆನಿಗಳ ಇಲ್ಲವೇ ಎನ್‌ಜಿಒಗಳ ಮೂಲಕ ಪೂರೈಕೆಯಾಗುವ ‘ತಂಗಳನ್ನ’ ಅಲ್ಲ.

One comment

  1. ತುಂಬಾ ಮುಖ್ಯವಾದ, ಒಳನೋಟಗಳಿರುವ ಲೇಖನ ಅನಂತ್. ಧನ್ಯವಾದಗಳು.

Leave a Reply

Your email address will not be published.