ಜಡಗೊಂಡ ಮನೋಸ್ಥಿತಿಯನ್ನು ಪಲ್ಲಟಗೊಳಿಸಬೇಕಾದಂತಹ ಸಂಕ್ರಮಣ ಸ್ಥಿತಿ

– ಬಿ.ಶ್ರೀಪಾದ ಭಟ್

ದೇಶದ ಪ್ರಾಕೃತಿಕ ಸಂಪತ್ತಿನ ಮೇಲೆ ನವ ಕಲೋನಿಯಲ್‌ನ ಲೂಟಿಕೋರತನದ ದಾಳಿಯನ್ನು, ಭೂತಕಾಲದ ಕುರೂಪಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ರಕ್ತಪಾತಕ್ಕೆ ಕಾರಣವಾಗುವ ಆ ಮೂಲಕ ದೇಶದ ಬೌದ್ಧಿಕತೆಯ ಮೇಲೆ ಆಕ್ರಮಣ ನಡೆಸಿ ಸಾಮಾಜಿಕ ಆರ್ಥಿಕ ಮಾನಸಿಕ ಸ್ಥಿತಿಗಳನ್ನು ಕಬ್ಜಾ ಮಾಡಿಕೊಳ್ಳುವ ಫ್ಯಾಸಿಸ್ಟ್ ಸಂಘಪರಿವಾರವನ್ನು, ಮತ್ತು ಮುಖ್ಯವಾಗಿ ಜಾಗತೀಕರಣದ ಕೊಳ್ಳುಬಾಕುತನ ತನ್ನ ಅತಿರೇಕದ ಪರಮಾವಧಿಗೆ ತಲುಪಿದಂತಹ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಒಟ್ಟಾರೆ ಸಾಂಸ್ಕೃತಿಕ ಸಾಮರಸ್ಯತೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ಆದಿಮ ಸಂಸ್ಕೃತಿಯ ಜೀವಪರ ಶೈಲಿಯೂ ಸಹ ಇಂದು ಹೆಚ್ಚೂ ಕಡಿಮೆ ವಿನಾಶದ ಅಂಚಿಗೆ ತಳ್ಳಲ್ಪಟ್ಟಿದೆ.

ಹಾಗಿದ್ದಲ್ಲಿ ನಾವೆಲ್ಲ ಪುನಃ ಸ್ಥಾಪಿಸಿಕೊಳ್ಳಬಯಸುವ ಪ್ರತಿರೋಧದ ನೆಲೆಗಳು, ಕಟ್ಟಬೇಕಾದ ಜೀವತೋರಣಗಳ ಮಾದರಿಗಳಾವುವು? ನಮ್ಮ ಸಾಂಸ್ಕೃತಿಕ ಯಜಮಾನಿಕೆಯೇನು? ನಮ್ಮೆಲ್ಲರ ಸಾಂಸ್ಕೃತಿಕ ಪುನುರುಜ್ಜೀವನದ (Cultural   renaissance) ಸ್ವರೂಪಗಳೇನು? hind-swarajಗಾಂಧಿ ಮಾದರಿಯ ಹಿಂದ್ ಸ್ವರಾಜ್ ಪರಿಕಲ್ಪನೆ ಇಂದಿನ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವ ಬಗೆಗಳೇನು? ಅಂಬೇಡ್ಕರ್‌ವಾದವು ಕೇವಲ ದಲಿತರ ಸ್ವಾಭಿಮಾನದ ಅಭಿವ್ಯಕ್ತಿಯ ಹೋರಾಟ ಮಾತ್ರವಲ್ಲ ಜೊತೆಗೆ ಸ್ವದೇಶಿ ಸೋಗಿನಡಿ ದೇಶವನ್ನು ಮರಳಿ ನೂರಾರು ವರ್ಷಗಳ ಹಿಂದಿನ ವರ್ಣಾಶ್ರಮದ ಮನಸ್ಥಿತಿಯ, ಭಿನ್ನ ಭೇದಗಳ ಸಾಮಾಜಿಕ ಜೀವನದ ಮಟ್ಟಕ್ಕೆ ಕೊಂಡೊಯ್ಯಲು ಹಪಾಹಪಿಸುತ್ತಿರುವ ಸಂಪ್ರದಾಯಸ್ಥ, ಜಾತಿವಾದಿ ಸಮಾಜದೊಂದಿಗೆ ಮುಖಾಮುಖಿಯಾಗಲು ಸಹ ಅಂಬೇಡ್ಕರ್‌ವಾದವನ್ನು ನಮ್ಮೆಲ್ಲ ಪ್ರಭುದ್ದತೆಯೊಂದಿಗೆ ಬಳಸಿಕೊಳ್ಳುವ ಸಾಂಸ್ಕೃತಿಕ ಯಜಮಾನಿಕೆ, ರಾಜಕೀಯ, ಆರ್ಥಿಕ ಮಾದರಿಗಳೇನು? ಅನಗತ್ಯವಾಗಿ ಪಶ್ಚಿಮವನ್ನು ಹೀಗೆಳೆಯುವ, ಪೂರ್ವವನ್ನು ವೈಭವೀಕರಿಸುವ ನಮ್ಮೆಲ್ಲರ ಸೋಗಲಾಡಿತನದ ಎಡಪಂಥೀಯ ಚಿಂತನೆಗಳನ್ನು ಕೈಬಿಟ್ಟು ಇಂದಿನ ಸಂದರ್ಭದಲ್ಲಿ ಮೂಲಭೂತವಾಗಿ ಜಾಗತೀಕರಣದ ಎಲ್ಲ ಬಗೆಯ ಸವಲತ್ತುಗಳನ್ನು ಬಳಸಿಕೊಂಡು ಗೆಳೆಯ ಸಿ.ಜಿ.ಲಕ್ಷ್ಮೀಪತಿ ಹೇಳಿದ ಪರ್ಯಾಯ ಭಾರತವನ್ನು ಕಟ್ಟಲಿಕ್ಕಾಗಿ ಚಾರಿತ್ರಿಕ ಸಾಂಸ್ಕೃತಿಕ ಪ್ರಣಾಳಿಕೆಗಳನ್ನು ನಾವೆಲ್ಲ ರೂಪಿಸಿಕೊಳ್ಳಬೇಕಾದಂತಹ, ಜಡಗೊಂಡ ನಮ್ಮ ಮನೋಭೂಮಿಕೆಯನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಬೇಕಾದಂತಹ ಕವಲು ದಾರಿಯಲ್ಲಿ ನಾವಿದ್ದೇವೆ.

ಕಳೆದ ಶತಮಾನದ 30 ರ ದಶಕ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಇಂದಿಗೂ ಅತ್ಯಂತ ಮಹತ್ವದ, ಚಾರಿತ್ರಿಕ ಕಾಲಘಟ್ಟವಾಗಿದೆ. ಆಗ ಇಂಡಿಯಾದಲ್ಲಿ ಗಾಂಧೀಜಿ ನೇತೃತ್ವದ ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಚಳುವಳಿ ಅತ್ಯಂತ ತೀವ್ರ ಸ್ವರೂಪದಲ್ಲಿತ್ತು. ಅಂಬೇಡ್ಕರ್ ಅವರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು, ಘನತೆಯಿಂದ ಬದುಕುವ ಹಕ್ಕನ್ನು ಸಮಾಜದ ಮುಂಚೂಣಿಗೆ ತಂದು ದಲಿತರ ವಿಮೋಚನೆ ಆಗದೆ ಇಡೀ ಭಾರತೀಯ ಸಮಾಜದ ಸ್ವಾತಂತ್ರ್ಯವೂ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಭಾರತದ ಜಾತಿವಾದಿ ಮನಸ್ಸಿಗೆ ಮನವರಿಕೆ ಮಾಡಿಕೊಡುತ್ತಿದ್ದಂತಹ ಕಾಲ. Young_Ambedkarಆ ಮೂಲಕ ಬಾಬಾ ಸಾಹೇಬರು ಇಡೀ ಜಾತಿವಾದಿ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಸಂಘಟನೆಗಳ ಒಕ್ಕೂಟವನ್ನು ಪ್ರಾರಂಭಿಸಿದ್ದರು. ಜಾತಿ ವಿನಾಶದ ಕುರಿತಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದರು. ಅದೇ ಸಮಯದಲ್ಲಿ ಪಶ್ಚಿಮ ರಾಷ್ಟ್ರಗಳಲ್ಲಿ ಹಿಟ್ಲರ್, ಮುಸಲೋನಿಯಂತಹ ಫ್ಯಾಸಿಸ್ಟರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದಂಹ ಸಂಕ್ರಮಣದ, ತಲ್ಲಣಗಳ, ಅಪಾರ ಬಿಕ್ಕಟ್ಟಿನ ಕಾಲ. ಈ ಭಯಭೀತಿಯ ಕಾಲಘಟ್ಟದಲ್ಲಿಯೇ ಯುರೋಪಿಯನ್ ಪ್ರಗತಿಪರ ಲೇಖಕರು ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡರು. 15 ನೇ ಜೂನ್ 1935 ರಲ್ಲಿ ಪ್ಯಾರಿಸ್‌ನಲ್ಲಿ ಪ್ರಗತಿಪರ ಲೇಖಕರ ಸಮ್ಮೇಳನ ಜರುಗಿತು. ಅದರಲ್ಲಿ ಗಾರ್ಕಿ, ಫಾರೆಸ್ಟರ್ ಹಾಗೂ ಇನ್ನಿತರ ಪ್ರಮುಖ ಎಡಪಂಥೀಯ ಲೇಖಕರು ಭಾಗವಹಿಸಿ ಫ್ಯಾಸಿಸಂ ಅನ್ನು ವಿರೋಧಿಸಲು ಪ್ರಗತಿಪರ ಲೇಖಕರ ಒಕ್ಕೂಟಕ್ಕಾಗಿಯೇ ಒಂದು ಪ್ರಣಾಳಿಕೆಯನ್ನು ರೂಪಿಸಿದರು.

ಇವರಿಂದ ಪ್ರೇರಿತಗೊಂಡ ಇಂಡಿಯಾದ ಎಡಪಂಥೀಯ ಲೇಖಕರು ಒಂದುಗೂಡಿ 1936 ರಲ್ಲಿ ಅಂದರೆ 77 ವರ್ಷಗಳ ಹಿಂದೆ ಪ್ರಗತಿಪರ ಲೇಖಕರ ಒಕ್ಕೂಟ ಸ್ಥಾಪಿಸಿದರು. ಈ ಲೇಖಕರು ಮಹಾನ್ ಕಾದಂಬರಿಕಾರ ಮುನ್ಷಿ ಪ್ರೇಮಚಂದರಿಂದ ಸ್ಪೂರ್ತಿಯನ್ನು, ಬೆಂಬಲವನ್ನು ಪಡೆದಿದ್ದರು. ಈ ಪ್ರಗತಿಪರ ಲೇಖಕರ ಚಳುವಳಿಯ ಆಸ್ಥಿತ್ವವನ್ನು ಮೊದಲಿಗೆ ಘೋಷಿಸಿದವರು ಉರ್ದು ಲೇಖಕರಾದ ಅಹಮದ್ ಅಲಿ, ಮಾಮುದ್ ಜಫರ್ ಮತ್ತು ಸೈಯ್ಯದ್ ಸಾಜದ್ ಜಾಹಿರ್. ಇವರೊಂದಿಗೆ ಈ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ munshi_premchandಪ್ರಮುಖ ಲೇಖಕರೆಂದರೆ ಸಾದತ್ ಹಸನ್ ಮಂಟೋ, ಅಲಿ ಜವಾದ್ ಜೈದಿ, ಫೈಜ್ ಅಹ್ಮದ್ ಫೈಜ್, ಭೀಷ್ಮ ಸಹಾನಿ, ಇಸ್ಮತ್ ಚುಗತಾಯಿ, ತನ್ವೀರ್ ಹಬೀಬ್, ಕೈಫಿ ಅಜ್ಮಿ, ಕ್ರಿಷ್ಣಚಂದರ್, ರಾಜೇಂದ್ರಸಿಂಗ್ ಬೇಡಿ, ಫಿರಕ್ ಗೋರಕ್‌ಪುರಿ, ಇದ್ರಿಸ್ ಇಜಾದ್, ಮುಲ್ಕರಾಜ್ ಆನಂದ್, ಕೆ.ಎ.ಅಬ್ಬಾಸ್, ಮುಂತಾದವರು. ಈ ಲೇಖಕರು ಆ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಜನಪ್ರಿಯ ಮಾದರಿ ರಂಜನೆ, ರಮ್ಯತೆಯನ್ನು ಕಟುವಾಗಿ ಟೀಕಿಸುತ್ತ ಭಾರತದ ಜನಸಾಮಾನ್ಯರ, ಅಲ್ಪಸಂಖ್ಯಾತರ ಬದುಕನ್ನು ಅದರ ವಾಸ್ತವ ಸ್ಥಿತಿಯಲ್ಲಿ ಎದುರಿಸಿ ಅದನ್ನೇ ತಮ್ಮ ಅನುಭವದ ಸರಕನ್ನಾಗಿಸಿ ಸಾಹಿತ್ಯವನ್ನು ಸೃಷ್ಟಿಸಲು, ಇಂಡಿಯಾದ ಸಾಹಿತ್ಯವನ್ನು ಸಾಂಪ್ರದಾಯಿಕ ಶಕ್ತಿಗಳಿಂದ, ಕೋಮುವಾದಿಗಳಿಂದ ರಕ್ಷಿಸಲು ಧೃಢ ಸಂಕಲ್ಪ ಮಾಡಿದರು.

ನಂತರ ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಕರ್ನಾಟಕದಲ್ಲಿ ದಲಿತ ಸಂಘಟನೆ, ಬರಹಗಾರರ ಒಕ್ಕೂಟ, ಜಾತಿವಿನಾಶ ಸಮ್ಮೇಳನ, ಬಂಡಾಯ ಚಳುವಳಿಗಳ ಮೂಲಕವೂ ಇಲ್ಲಿನ ಪ್ರಗತಿಪರ ಲೇಖಕರು ಸಾಹಿತ್ಯವನ್ನು ಜಾತಿವಾದಿ ಸಂಕೋಲೆಗಳಿಂದ ಬಿಡುಗಡೆಗೊಳಿಸಿ ವಾಸ್ತವವಾದಿ ಮಾರ್ಗಕ್ಕೆ ಹೊರಳಬೇಕಾಗಿದೆ, ಹೊಸ ದಿಗಂತದೆಡೆಗೆ ಚಲಿಸಬೇಕಾಗಿದೆ ಎಂದು ಘೋಷಿಸಿದರು. ಇವೆಲ್ಲವೂ (ದಲಿತ ಸಂಘಟನೆ ಹೊರತುಪಡಿಸಿ) ಒಟ್ಟಾರೆಯಾಗಿ ಮತ್ತು ಸ್ಥೂಲವಾಗಿ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಧ್ಯೇಯವನ್ನಾಗಿಸಿಕೊಂಡು ಈ ಅಸ್ಮಿತೆಯನ್ನು ನಿರ್ದಿಷ್ಟವಾಗಿ ಸಾಹಿತ್ಯದ ಮೂಲಕವೇ ಬದಲಾವಣೆಯ ದಾರಿಗಾಗಿ ಬರೆಯತೊಡಗಿದರು. ಈ ಚಳುವಳಿಗಳೊಂದಿಗೆ ಗುರುತಿಸಿಕೊಂಡ ಮತ್ತು ಅದರಿಂದ ಹೊರಬಂದ ಕನ್ನಡದ ಪ್ರಮುಖ ಲೇಖಕರು ಸಾಹಿತ್ಯದೊಂದಿಗಿನ ಸಂಬಂಧವನ್ನು ಬಿಡಿಸಿಕೊಳ್ಳದೆ ಲೋಹಿಯಾ ಮತ್ತು ಮಾರ್ಕ್ಸ ಚಿಂತನೆಗಳ ಗರ್ಭದೊಂದಿಗೆ ಅನುಸಂಧಾನ ನಡೆಸುತ್ತಾ ಸಾಹಿತ್ಯಕ ನೆಲೆಯಿಂದಲೇ ಜಾತಿವಾದದ ವಿರುದ್ಧ, ಕೋಮುವಾದದ ವಿರುದ್ಧ ಮಾತನಾಡತೊಡಗಿದರು.ಈ ಮೂಲಕ ಮೂರು ತಲೆಮಾರುಗಳನ್ನು ರೂಪಿಸಿದರು. ಈ ಲೇಖಕರು ಕನ್ನಡದ ಮನಸ್ಸಿಗೆ ನೀಡಿದ ಜಾತ್ಯಾತೀತ ಧೋರಣೆ, ಸೆಕ್ಯುಲರ್ ಚಿಂತನೆಗಳು ಅನನ್ಯವಾದದ್ದು. ಮರೆಯಲಿಕ್ಕೆ ಸಾಧ್ಯವೇ ಇಲ್ಲ.

ಆದರೆ ಇಡೀ ಎರಡುವರೆ ದಶಕಗಳ ಸಾಂಸ್ಕೃತಿಕ ಚಳುವಳಿಗಳ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಅವರ ಸಮಕಾಲೀನ ಸಾಮಾಜಿಕ ಮತ್ತು ರಾಜಕಾರಣದ ಮಾದರಿಗಳು ಹೆಚ್ಚೂ ಕಡಿಮೆ ಗೈರುಹಾಜರಾಗಿತ್ತು. ಬಾಬಾ ಸಾಹೇಬರು ಕೇವಲ ದಲಿತ ಸಂಘಟನೆಗಳಿಗಷ್ಟೇ ಸೀಮಿತಗೊಂಡು ನಮ್ಮ ಲೋಹಿಯವಾದಿ, ಮಾರ್ಕ್ಸವಾದಿ ಸಾಹಿತಿಗಳ ಪ್ರಜ್ಞೆಯೊಳಗೆ ಒಂದು ಸಮಗ್ರ ಧಾರೆಯಾಗಿ ಇಳಿಯಲಿಲ್ಲ. ದಲಿತ ಸಂಘಟನೆಯ ಬಹುಪಾಲು ನಾಯಕರು, ಕಾರ್ಯಕರ್ತರು, ಲೇಖಕರು ಗಾಂಧೀಜಿಯನ್ನು ಅತ್ಯಂತ ಮುಗ್ಧವಾಗಿ, ಕೆಲವೊಮ್ಮೆ ಸಕಾರಣವಾಗಿ ಅನೇಕ ಬಾರಿ ಕುರುಡಾಗಿ ಟೀಕಿಸುತ್ತಿದ್ದಾಗ ನಮ್ಮ ಪ್ರೀತಿಯ ಬಹುಪಾಲು ದಲಿತೇತರ ಲೇಖಕರು ಸ್ವತಃ ತಾವು ಅಂಬೇಡ್ಕರ್‌ವಾದಿಗಳಾಗಿ ಗಾಂಧೀಜಿಯೊಂದಿಗೆ ಅನುಸಂಧಾನ ನಡೆಸುತ್ತ ದಲಿತ ಚಳುವಳಿಗಳಿಗೆ ಮಾರ್ಗದರ್ಶನ ಮತ್ತು ನಿರ್ದಿಷ್ಟ ಮಾದರಿಗಳನ್ನು ಕಟ್ಟಿಕೊಡಲು ವಿಫಲರಾದರೆಂದೇ ಹೇಳಬೇಕು. ಸ್ವತಂತ್ರ್ಯ ಭಾರತದಲ್ಲಿ ರಾಜಕೀಯವಾಗಿ, ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪ್ರಶ್ನಾತೀತ ನಾಯಕರಾದ ಅಂಬೇಡ್ಕರ್ ಸೋಲುತ್ತಾ ಹೋದರೆ, ಹರಿಜನ ನಾಯಕರಾಗಿ ಬಾಬು ಜಗಜೀವನ ರಾಂ ಗೆಲ್ಲುತ್ತಾ ಹೋದರು. ಈ ಮಾದರಿಯ ವೈರುಧ್ಯಗಳನ್ನು, ಔದಾರ್ಯದ ಹೆಸರಿನಲ್ಲಿ ಮೇಲುಜಾತಿಗಳ ಅಮಾನವೀಯತೆಯನ್ನು ನಮ್ಮ ಲೇಖಕರು ಅಂಬೇಡ್ಕರ್‌ವಾದಿಗಳಾಗಿ ಗ್ರಹಿಸಿದ್ದು ಕಡಿಮೆ. ಆದರೆ ಆಗಲೇ ಡಿ.ಆರ್.ನಾಗರಾಜ್ ರಂತಹವರು ಭಿನ್ನವಾಗಿ ಚಿಂತಿಸತೊಡಗಿದ್ದು.

ಅಷ್ಟೇಕೆ ಮುಸ್ಲಿಂ ಸಮುದಾಯದ Ghetto ಗಳನ್ನು ಸಹ ಸೆಕ್ಯುಲರ್‌ಗಳಾದ ನಾವು ಇಂದಿಗೂ ಅರಿತಿಲ್ಲ. ಅವರನ್ನು ಮಾನಸಿಕವಾಗಿ ಒಳಗೊಂಡೇ ಇಲ್ಲ. ಪ್ರತಿ ಸಂದರ್ಭದಲ್ಲಿಯೂ ಮೇಲ್ಮಟ್ಟದಲ್ಲಿ ವರ್ತಿಸುತ್ತಾ, ಸಂಘ ಪರಿವಾರದ ಮತೀಯವಾದದ ವಿರುದ್ಧದ ಹೋರಾಟದಲ್ಲಿ ನಮ್ಮ ಈ ಅತಿರೇಕ ಎಲ್ಲಿಗೆ ಮುಟ್ಟುತ್ತದೆಯೆಂದರೆ ಮೂಲಭೂತವಾದಿ ಪಾಪ್ಯುಲರ್ ಪ್ರಂಟ್‌ಗಳು, ಜಮಾತೆಗಳೊಂದಿಗೆ ವೇದಿಕೆ ಹಂಚಿಕೊಳ್ಳುವಷ್ಟರ ಮಟ್ಟಿಗೆ! ಆದರೆ ದುರಂತವೆಂದರೆ ಮುಸ್ಲಿಂರ Ghetto ಗಳು, ಅಲ್ಲಿನ ಮೌಢ್ಯತೆ, ಕ್ರೌರ್ಯ ನಮಗೆ ಅನುಭವವೇ ಇಲ್ಲ. ಏಕೆಂದರೆ ಸೆಕ್ಯುಲರ್ ಇಂಡಿಯನ್‌ಗಳಾದ ನಾವೆಲ್ಲ ಆ Ghetto ಗಳಿಗೆ ಇಂದಿಗೂ ಕಾಲಿಟ್ಟಿಲ್ಲ. ಅಲ್ಲಿನ ಮೌಢ್ಯತೆ, ಅರಾಜಕತೆ ನಾಶವಾಗದೆ ವಿಮೋಚನೆ ಸಾಧ್ಯವೇ ಇಲ್ಲ. ಆದರೆ ದಿನನಿತ್ಯದ ತಲ್ಲಣಗಳಲ್ಲಿ, ಅತಂತ್ರದ ಸ್ಥಿತಿಯಲ್ಲಿ ಬದುಕುತ್ತಿರುವ ಮೊಹಲ್ಲದ ಬಡವರನ್ನು ನಮ್ಮೆಲ್ಲ ಬೌದ್ಧಿಕ ಸೆಮಿನಾರ್‌ಗಳಿಗೆ, ಅಕಡೆಮಿಕ್ ಕಮ್ಮಟಗಳಿಗೆ ಒಳಗೊಳಿಸಿಕೊಳ್ಳುತ್ತಲೇ ಇಲ್ಲ ! ನಾವೊಂದು ತೀರ ! ಅವರೊಂದು ತೀರ !

ಅಷ್ಟೇಕೆ ನಮ್ಮ ಪ್ರೀತಿಯ ಬಸವಲಿಂಗಯ್ಯನವರು ನಿರ್ದೇಶಿಸಿದ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಮುಸ್ಲಿಂರನ್ನು ಚಿತ್ರಿಸಿದ್ದು ತೀರ ಒರಟಾಗಿ!! malegalalli-3ನೋಡಿದಾಗ ಮನಸ್ಸು ಕುಗ್ಗುತ್ತದೆ. ಕುವೆಂಪು ಕಾದಂಬರಿಗೆ ಅಪಚಾರವಾಗುವಂತಿದೆ. ಕಾದಂಬರಿಯಲ್ಲಿರುವ 20 ನೇ ಶತಮಾನದ ಆರಂಭದ ಘಟ್ಟದಲ್ಲಿನ ಸನ್ನಿವೇಶಗಳನ್ನು ವಿವರಿಸುವಾಗ ಮುಸ್ಲಿಂ ಯುವಕರನ್ನು ಜಮೀನ್ದಾರರು ವಸೂಲಿ ಸಾಬರಾಗಿ ಬಳಸಿಕೊಂಡು ಇವರ ಮೂಲಕವೇ ದೈಹಿಕವಾಗಿ ದಲಿತರ ಶೋಷಣೆ ನಡೆಸುತ್ತಿದ್ದರು ಎಂದು ಕುವೆಂಪು ಅಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದರು. ಇದನ್ನು 110 ವರ್ಷಗಳ ನಂತರ ಕಾಮಾಲೆ ಕಣ್ಣಿನ ಮಧ್ಯಮ ವರ್ಗಗಳ ಮುಂದೆ ನಾಟಕದಲ್ಲಿ ತೋರಿಸುವಾಗ ಈ ವಸೂಲಿ ಸಾಬರ ಚಿತ್ರಣ ಪರೋಕ್ಷವಾಗಿರಬೇಕಾಗಿತ್ತು. ಕಡೆಗೆ ಮುಸ್ಲಿಂರು ಮತ್ತು ದಲಿತರು ಹೇಗೆ ಜಮೀನ್ದಾರರ ಕೈಯಲ್ಲಿ ತಮಗರಿವಿಲ್ಲದಂತೆಯೇ ಪರಸ್ಪರ ವಿರೋಧಿಗಳಾಗಿ ದುರ್ಬಳಕೆಗೆ ಒಳಗಾಗುತ್ತಾರೆ ಎಂಬುದು ಪ್ರತ್ಯಕ್ಷವಾಗಿರಬೇಕಿತ್ತು. ಬೇರೆ ಸಂದರ್ಭಗಳಲ್ಲಿ ಯಾವದೇ ಸಮುದಾಯಗಳ ಆಶಯಗಳಿಗೆ ಭಂಗ ಬರದಂತೆ ಪರೋಕ್ಷವಾಗಿ ತೋರಿಸಲಾಗಯುತ್ತದೆ, ಆದರೆ ಮುಸ್ಲಿಂ ಸಮುದಾಯದ ವಿಷಯದಲ್ಲಿ ಎಲ್ಲವೂ ನೇರ! ದಿಟ್ಟ! ನಿರಂತರ! ಆದರೆ ಬೆಂಗಳೂರಿನಲ್ಲಿ ಈ ನಾಟಕ ಹಿಟ್ ಆಗಲಿಕ್ಕೆ ಕಾರಣರಾದ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಹೆಸರನ್ನು ಕೇಳಿರದ ಇಲ್ಲಿನ ಮಧ್ಯಮವರ್ಗ ನಾಟಕದಲ್ಲಿ ಮುಸ್ಲಿಂ ಪಾತ್ರಧಾರಿಗಳು ತಳವರ್ಗದವರ ಮೇಲೆ ದೈಹಿಕವಾಗಿ ನಡೆಸುವ ಹಲ್ಲೆಗಳ ದೃಶ್ಯಗಳನ್ನು ಚಪ್ಪಾಳೆಗಳ ಮೂಲಕ ಸಂಪೂರ್ಣವಾಗಿ ಅನಂದಿಸುತ್ತಿದ್ದರು. ನೋಡ್ರೀ ಇವ್ರು ಆಗಲೂ ಹಂಗೇನೇ, ಇಗ್ಲೂ ಹಂಗೇನೇ ಎಂದು ಮಾತನಾಡಿಕೊಳ್ಳುತ್ತಿದ್ದರು! ಈ ಮಟ್ಟದಲ್ಲಿ ಅದು ಹೇಗೆ ವಿಮೋಚನೆ ಸಾಧ್ಯ?

ಮತ್ತೊಂದು ಉದಾಹರಣೆ ಕೊಡುವುದಾದರೆ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶದ ಕುರಿತಾದ ಇಂದಿನ ವಿವಾದದ ಕಾಲದಲ್ಲಿ, ಚರ್ಚೆಯಲ್ಲಿ ಪಾಲ್ಗೊಂಡು ಮಸೀದಿ ಪ್ರವೇಶಿಸುವುದರ ಮೂಲಕ, ಅಲ್ಲಿ ನಮಾಜು ಮಾಡುವುದರ ಮೂಲಕ ಮುಸ್ಲಿಂ ಮಹಿಳೆಯರು ಆ ಧರ್ಮದ ಮೂಲಭೂತವಾದಿಗಳ ಹಿಡಿತವನ್ನು Muslim-women-mosqueಸಾರ್ವಜನಿಕವಾಗಿಯೇ ಒಡೆದು ಹಾಕುತ್ತಾ ಮಾನಸಿಕವಾಗಿ ವಿಜಯ ಸಾಧಿಸುವ ಈ ಐತಿಹಾಸಿಕ ಸಂದರ್ಭವನ್ನು ನಾವೆಲ್ಲ ಸಮರ್ಥಿಸಿ ಅವರನ್ನು ಬೆಂಬಲಿಸಬೇಕಾದಂತಹ ಸಮಯದಲ್ಲಿ ಇದರ ಬದಲಾಗಿ ಇಂದು ಮುಸ್ಲಿಂ ಮಹಿಳೆಯರಿಗೆ ಬೇಕಾಗಿರುವುದು ಶಿಕ್ಷಣ, ಮಸೀದಿ ಪ್ರವೇಶವಲ್ಲ ಎಂದು ವಿತಂಡವಾದದ ತರ್ಕ ಹೂಡುವುದು ಮತ್ತೇನಲ್ಲದೆ ಮುಸ್ಲಿಂಮೇತರರಾದ ನಮ್ಮೆಲ್ಲರ ಸೀಮಿತ ಗ್ರಹಿಕೆಗಳನ್ನು ಬಹಿರಂಗಗೊಳಿಸುತ್ತದೆ. ಶಿಕ್ಷಣ ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕಾಗಿರುವುದರಿಂದ ಅದಕ್ಕಾಗಿ ಸರ್ಕಾರವನ್ನು ನಾವು ಒತ್ತಾಯಿಸಬಹುದು.ಇಲ್ಲಿ ಪ್ರಭುತ್ವಕ್ಕೆ ನುಣಿಚಿಕೊಳ್ಳುವ ಅವಕಾಶವೇ ಇಲ್ಲ. ಆದರೆ ಮಹಿಳೆಯರ ಘನತೆಯ ವಿಷಯದಲ್ಲಿ ಪ್ರಭುತ್ವವು ಸದಾಕಾಲ ಮರೆಮೋಸದ, ಬೆನ್ನಿಗೆ ಚೂರಿ ಹಾಕುವ ಕಾಯಕದಲ್ಲಿರುತ್ತದೆ. ನಾವೆಲ್ಲ ಮುಸ್ಲಿಂರ ಈ Ghetto ಗಳೊಳಗೆ, ದಲಿತ ಸಮಾಜದ ಕೇರಿಗಳೊಳಗೆ ಒಳಗೊಳ್ಳುವಿಕೆಯ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರವೇಶಿಸದ ಹೊರತು, ಅವರ ಅವಮಾನ ಮತ್ತು ನೋವುಗಳು ನಮ್ಮೊಳಗೆ ಅಂತರ್ಗತವಾಗದೇ ಹೋದಲ್ಲಿ ಪ್ರಗತಿಪರರೆನಿಸಿಕೊಂಡ ನಮಗೇ ಈ ಜಾತೀಯತೆಯ, ಕೋಮುವಾದದ ಸರಪಣಿಗಳಿಂದ ಮುಕ್ತಿಯಿಲ್ಲ. ಕೊನೆಗೆ ನಮ್ಮ ಪ್ರಗತಿಪರತೆಯ ಸ್ವರೂಪ ಕೇವಲ ಅನುಕಂಪದ ಮಟ್ಟದಲ್ಲಿ ಉಳಿದು ಅದೆಂದೂ ಧಗಧಗಿಸುವ ಒಡಲೊಳಗಿನ ದಾವಾಗ್ನಿಯಾಗದೇ ಅಟಕ್ಕುಂಟು ಲೆಕ್ಕಕ್ಕಿಲ್ಲದ ಮೃದುವಾದಿ ಹುಸಿ ತತ್ವಗಳಾಗಿ ಉಳಿದುಬಿಡುತ್ತದೆ.

ಸಾಂಸ್ಕೃತಿಕ ಹೆಜಮನಿಯನ್ನು ವಿಶ್ವವಿದ್ಯಾಲಯಗಳ ಬುದ್ಧಿಜೀವಿಗಳು, ಇಂಟರ್ನೆಟ್ ಪಂಡಿತರು ರೂಪಿಸುವುದರ ಬದಲಾಗಿ ಈ ಮಣ್ಣಿನ ಜನ ಸಾಮಾನ್ಯರು ತಮ್ಮ ಅನುಭವದ ನೆಲೆಯಿಂದ, ಜಾತ್ರೆಗಳಿಂದ, ಚಿತ್ರಕಲೆಗಳಿಂದ, ಶಿಲ್ಪಕಲೆಗಳಿಂದ, ಹಾಡು, ನೃತ್ಯ, ವೈವಿಧ್ಯಮಯವಾದ ಅವೈದಿಕ ನೆಲಸಂಸ್ಕೃತಿಯ ಆಚರಣೆಗಳಿಂದ ಅದನ್ನು ಈ ದೇಶದ ವ್ಯವಸ್ಥೆಯೊಳಗೆ ಅಂತರ್ಗತವಾಗುವಂತೆ ಕಟ್ಟಿಕೊಡಬೇಕಾಗಿದೆ. ಅಂದರೆ ಈ ನೆಲದೊಳಗೆ ಬೇರು ಬಿಡುತ್ತಲೇ ಭವಿಷ್ಯವನ್ನು ರೂಪಿಸುವುದು ನಿರಂತರ ಪ್ರಕ್ರಿಯೆಯಾಗಬೇಕಿದೆ. ಜಾಗತೀಕರಣದ ಕಲೋನಿಯಲ್ ವ್ಯವಸ್ಥೆ ಹುಟ್ಟು ಹಾಕುವ ಉಪಭೋಗ ಸರಣಿಯನ್ನು ಮುರಿಯಲು ವಿವಿಧ ಪಂಗಡಗಳು, ವಿವಿಧ ಧರ್ಮಗಳು, ವಿವಿಧ ಜಾತಿಗಳು ತಮಗರಿವಿಲ್ಲದಂತೆಯೇ ಪರಸ್ಪರ ಒಂದುಗೂಡಲು ಸಾಂಸ್ಕೃತಿಕ ಹೆಜಮನಿಯನ್ನು ಸಶಕ್ತವಾಗಿ ಬಳಕೆಗೆ ತರಬೇಕಾಗಿದೆ. ಇದಕ್ಕಾಗಿಯೇ ನಾವೆಲ್ಲ ಸಾಮಾಜಿಕ,ಆರ್ಥಿಕ ಮತ್ತು ಮಾನಸಿಕ ನೆಲೆಗಳನ್ನು ಪ್ರಮುಖವಾಗಿ ಪರಿಗಣಿಸಿ ಸಾಂಸ್ಕೃತಿಕ ಪ್ರಣಾಳಿಕೆಯನ್ನು ರೂಪಿಸಬೇಕು.

ಒಂದು ಉದಾಹರಣೆಯ ಮೂಲಕ ವಿವರಿಸಬಹುದಾದರೆ 2002 ರ ಭೂಪಾಲ್ ಘೋಷಣೆಯನ್ನು ಅವಲೋಕಿಸಿ(’Transforming India Through a Dalit Paradigm’). ಆಗ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ದಿಗ್ವಿಜಯ್ ಸಿಂಗ್ dalit-chamber-commerceಅವರು ಚಂದ್ರಭಾನು ಪ್ರಸಾದ್ ಹಾಗೂ ಇತರ ದಲಿತ ಚಿಂತಕರೊಂದಿಗೆ ನಡೆಸಿದ ಚಿಂತನೆಗಳ ಫಲವಾಗಿ ಈ ಭೂಪಾಲ್ ಘೋಷಣೆ ಜಾರಿಗೆ ಬಂತು. ಅತ್ಯಂತ ಸರಳ ರೂಪದಲ್ಲಿ ಹೇಳಬೇಕೆಂದರೆ ಈ ಭೂಪಾಲ್ ಘೋಷಣೆಯಲ್ಲಿರುವ ಹತ್ತಾರು ಅಂಶಗಳಲ್ಲಿ ಒಂದು ಪ್ರಮುಖ ಘೋಷಣೆಯ ಪ್ರಕಾರ ಸರ್ಕಾರವು ದಲಿತರಿಂದ ಶೇಕಡ 30 ರಷ್ಟು ಸರಕನ್ನು ಕಡ್ಡಾಯವಾಗಿ ಖರೀದಿಸಬೇಕು. ದಲಿತರಿಂದ ಶೇಕಡಾ 30ರಷ್ಟು ಖರೀದಿಸಬೇಕೆಂದರೆ ದಲಿತರು ಸ್ವತಃ ಉತ್ಪಾದಕರಾಗಬೇಕು. ಇದಕ್ಕಾಗಿ ಜಾಗತೀಕರಣದ ಸವಲತ್ತುಗಳು ದಲಿತರಿಗೂ ದಕ್ಕಬೇಕು. ಹೀಗೆಯೇ ಮುಂದುವರೆಯುವ ಈ ವ್ಯಾಪಾರದ ಸರಣಿ ದಲಿತರು ಖಾಸಗಿ ಉದ್ಯಮಪತಿಗಳಾಗುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ತಮ್ಮ ಉತ್ಪಾದನೆಯಲ್ಲಿ ಶೇಕಡ 30 ರಷ್ಟು ಸರಕಿಗೆ ಸರ್ಕಾರವೇ ಗ್ರಾಹಕನಾಗಿರುವುದರಿಂದ ನಷ್ಟದ ಅಂಶ ಕಡಿಮೆ ಇರುತ್ತದೆ. ಆಗ ಉಳಿದ ಶೇಕಡ 70ರಷ್ಟನ್ನು ಖಾಸಗೀ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಆಗ ಕೊಡುಕೊಳ್ಳುವಿಕೆಯ ವ್ಯಾಪಾರದ ವಹಿವಾಟು ಶುರುವಾಗುತ್ತದೆ. ಈ ಮೂಲಕ ಅಸ್ಪೃಶ್ಯತೆಯ ಕರಾಳತೆ ನಾಶವಾಗದಿದ್ದರೂ ಅದರ ವ್ಯಾಪಕತೆ ಮತ್ತು ಪರಿಣಾಮಗಳು ತೆಳುವಾಗುವುದಂತೂ ಖಚಿತ. ಇದನ್ನೇ ಚಂದ್ರಬಾನು ಪ್ರಸಾದ್ ಅವರು ಕೆಲಸ ಕೇಳುವವರಾಗಬೇಡಿ, ಕೆಲಸ ಕೊಡುವವರಾಗಿ ಎಂದು ಹೇಳಿದ್ದು. ಅವರು ಇತರ ದಲಿತ ಉದ್ದಿಮೆದಾರರೊಂದಿಗೆ ಸ್ಥಾಪಿಸಿದ ಡಿಕ್ಕಿ ( ದಲಿತ ಛೇಂಬರ್ ಆಫ್ ಕಾಮರ್ಸ ಆಫ್ ಇಂಡಿಯಾ) ಇಂದು ಭಾರತ ಸರ್ಕಾರಕ್ಕೆ ಕೋಟಿಯಷ್ಟು ಲೆಕ್ಕದಲ್ಲಿ ತೆರಿಗೆ ನೀಡುತ್ತಿದೆ. ಒಂದು ಕ್ಷಣ ಯೋಚಿಸಿ ಪ್ರತಿಯೊಂದು ಕೆಲಸಕ್ಕಾಗಿ ಸರ್ಕಾರಕ್ಕೆ ಅರ್ಜಿ ಗುಜರಾಯಿಸುವುದರ ಬದಲು ಇದನ್ನು ಇತರೇ ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ ವರ್ಗಗಳಿಗೂ ಅನ್ವಯಿಸಿದರೆ ಈ ವರ್ಗಗಳ ಕುಶಲತೆಯನ್ನಾಧರಿಸಿ ಇಡೀ ರಾಜ್ಯದಲ್ಲಿ ವಿವಿಧ ಬಗೆಯ ಸ್ವಯಂ ಉದ್ಯೋಗಗಳನ್ನು ಹುಟ್ಟು ಹಾಕಬಹುದು. ಇದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಚರಣೆಯಲ್ಲಿ ಸರಳವೇನಿಲ್ಲ. ಆದರೆ ಇದು ಅಸಾಧ್ಯವಂತೂ ಅಲ್ಲವೇ ಅಲ್ಲ. ಆದರೆ ನಮ್ಮ ಮನೋಭೂಮಿಕೆಯಲ್ಲಿಯೇ ಅತ್ಯಂತ ದೊಡ್ಡ ಬಿಕ್ಕಟ್ಟಿದೆ. ನಾಗರೀಕತೆಯ ವಿಶ್ಲೇಷಣೆ ಮಾಡುತ್ತ ಈ ಅಕಡೆಮಿಕ್ ಬುದ್ಧಿಜೀವಿಗಳು, ಸಮಾಜ ಶಾಸ್ತ್ರಜ್ಞರು, ಫ್ರೊಫೆಸರ್‌ಗಳು ಯಾವುದೇ ಬಗೆಯ ಖಾಸಗೀ ವೃತ್ತಿಯನ್ನು, ಖಾಸಗೀ ವ್ಯಾಪಾರವನ್ನು ಬಂಡವಾಳಶಾಹಿಗಳ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ಮುಂದುವರೆದು ಈ ವಿಶ್ವವಿದ್ಯಾಲಯದ ಜನ ಇದರಿಂದ ದಲಿತರು, ಹಿಂದುಳಿದ ವರ್ಗಗಳು ಈ ಜಾಗತೀಕರಣದ ಉಪಭೋಗ ಸಂಸ್ಕೃತಿಗೆ ಶರಣಾಗುತ್ತಾರೆ, ಅಂದರೆ ಇವರು ಮುಂದೆ ನವ ಶೋಷಕರಾಗುತ್ತಾರೆ ಎಂದು ಹುಯಿಲೆಬ್ಬಿಸುತ್ತಾರೆ.

ಹಾಗಿದ್ದರೆ ಬಾಬಾ ಸಾಹೇಬರು ಹೇಳಿದ ಚಲನಶೀಲತೆಯ ಅರ್ಥವೇನು? ರಾಜ್ಯವೊಂದರಲ್ಲಿ ನಾಗರೀಕತೆ ನೆಲೆಗೊಂಡಿದೆ dicciಎಂದರೆ ಆ ಸಮಾಜದ ಎಲ್ಲ ಜಾತಿಗಳೂ, ಎಲ್ಲ ವರ್ಗಗಳು ಮೂಲಭೂತ ಅವಕಾಶಗಳನ್ನು ಪಡೆದುಕೊಂಡಿವೆ, ಅಂದರೆ ಸಮಾನವಾಗಿ ಅಲ್ಲದಿದ್ದರೂ ವಂಚಿತರಂತೂ ಅಲ್ಲ ಎಂದರರ್ಥವಲ್ಲವೇ? ಹಾಗಿದ್ದಾಗ ಬಂಡವಾಳಶಾಹಿಯ ಪರಿಕಲ್ಪನೆಯನ್ನು, ಅದರ ನುಡಿಕಟ್ಟನ್ನು ನಾವು ಇನ್ನಾದರೂ ಬದಲಿಸಕೊಳ್ಳಬೇಕಾಗಿದೆ. ತಳವರ್ಗಗಳ ಆರ್ಥಿಕ ಪ್ರಗತಿಯೆಂದರೆ ಇದು ಅವರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಬೆಳೆಸುತ್ತದೆಂದು ಮಾತನಾಡುವುದೇ ಅಮಾನವೀಯತೆ. ಏಕೆಂದರೆ ಇಂದಿಗೂ ಪ್ರಗತಿಗೂ, ಅಭಿವೃದ್ಧಿಗೂ ನಡುವೆ ಇರುವ ಅಂತರಗಳ ವಿಶ್ಲೇಷಣೆಯೇ ತೀರಾ ಗೋಜಲಾಗಿದೆ. ಸಂಕೀರ್ಣವಾಗಿದೆ. ಇಂದು ತಂತ್ರಜ್ಞಾನವನ್ನು, ಕೌಶಲ್ಯವನ್ನು ಕೇವಲ ಓದಿನ ಮೂಲಕ ಗಳಿಸಿ, ಹೊರಗಿನಿಂದ ಎರವಲು ಪಡೆದ ಜ್ಞಾನದಿಂದ ಗಳಿಸಿ ಅದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಉದ್ದಿಮೆದಾರರಾಗುವವರಲ್ಲಿ ಶೋಷಣೆಯ ಗುಣಗಳು ಅಂತರ್ಗತವಾಗಿರಲು ಸಾಧ್ಯತೆಗಳಿವೆ. ಆದರೆ ಸ್ವತಃ ಕುಶಲಕರ್ಮಿಗಳಾದ ತಳಸಮುದಾಯಗಳು, ತಮ್ಮ ಈ ಕೌಶಲ್ಯವನ್ನು ಪುಸ್ತಕದ ಜ್ಞಾನದ ಮೂಲಕವಲ್ಲದೆ ತಮ್ಮ ವೈಯುಕ್ತಿಕ ಅನುಭವದ ಮೂಲಕ ಗಳಿಸಿಕೊಂಡವರಾದ್ದರಿಂದ ಅವರಿಗೆ ಅದರ ಶ್ರಮಸಂಸ್ಕೃತಿಯ ಅನೇಕ ಮಗ್ಗಲುಗಳ ಸಂಪೂರ್ಣ ಪರಿಚಯವಿರುತ್ತದೆ. ಈ ಶ್ರಮಿಕ ವರ್ಗದ ಹಿನ್ನಲೆಯಿಂದ ಬಂದವರು ಸ್ವತಃ ಉದ್ದಿಮೆದಾರರಾದಾಗ ಅಲ್ಲಿ ಮಾನವೀಯತೆಯ ಜೀವಸೆಲೆಗಳು, ಸಹಭಾಗಿತ್ವ, ಬಹುರೂಪಿ ಸಂಸ್ಕೃತಿ, ಒಳಗೊಳ್ಳುವಿಕೆಯ ನ್ಯಾಯವಂತಿಕೆ ಹುಟ್ಟಿಕೊಳ್ಳುತ್ತವೆಯೇ ಹೊರತಾಗಿ ನವಶೋಷಕರಲ್ಲ. ಬದಲಾಗಿ ತಂತ್ರಜ್ಞಾನದ ಪರಿಕಲ್ಪನೆಯೇ ನಿಧಾನಗತಿಯಲ್ಲಿ ನಶಿಸುತ್ತ ನೆಲಸಂಸ್ಕೃತಿಯ ಬೀಜಗಳು ಮೊಳಕೆಯೊಡಲ್ಪಡುತ್ತವೆ. ವೈಯುಕ್ತಿಕ ಹಿತಾಸಕ್ತಿ ಅಳಿಸಿಹೋಗಿ, ಸಮುದಾಯದ ಹಿತಾಸಕ್ತಿಯ ಒಂದು ಚಳುವಳಿಯೇ ಶುರುವಾಗುತ್ತದೆ. ಪರಕೀಯತೆಯ ಭಾವ ಕಣ್ಮರೆಯಾಗುತ್ತದೆ. ಇದನ್ನು ನಾವು ಚಾಲ್ತಿಯಲ್ಲಿರುವ ಕಾರ್ಮಿಕ ಮತ್ತು ಮಾಲೀಕನ ಚೌಕಟ್ಟಿನಿಂದಾಚೆಗೆ, ಮತ್ತೊಂದು ಅನುಭಾವದಲ್ಲಿ ನೋಡಿದಾಗಲೇ ನಮಗೆ ಅರಿವಾಗುವುದು. ಏಕೆಂದರೆ ಮರಳಿ ನಾವು ಅತ್ಯಂತ ಮೌಢ್ಯದಿಂದ ಬೂರ್ಜ್ಞಾ ನುಡಿಕಟ್ಟನ್ನು ತರ್ಕಹೀನವಾಗಿ ಬಳಸಲು ಶುರುಮಾಡಿದರೆ ಶಿವಾಯನಮಃ!

4 thoughts on “ಜಡಗೊಂಡ ಮನೋಸ್ಥಿತಿಯನ್ನು ಪಲ್ಲಟಗೊಳಿಸಬೇಕಾದಂತಹ ಸಂಕ್ರಮಣ ಸ್ಥಿತಿ

  1. Ananda Prasad

    ದೇಶವು ಅಭಿವೃದ್ಧಿಯ ಹೆಸರಿನಲ್ಲಿ ಫ್ಯಾಸಿಸ್ಟ್ ಮೂಲಭೂತವಾದಿಗಳ ಹಿಡಿತಕ್ಕೆ ಹೋಗದಂತೆ ಇಂದು ದೇಶವ್ಯಾಪಿ ಪ್ರಗತಿಶೀಲ ಲೇಖಕರು, ಸಂಘಟನೆಗಳು ಒಗ್ಗೂಡಿ ಸಂಯುಕ್ತ ಒಕ್ಕೂಟವನ್ನು ಸ್ಥಾಪಿಸಿ ಫ್ಯಾಸಿಸಂ ಹಾಗೂ ಮೂಲಭೂತವಾದದ ಕುರಿತು ಎಚ್ಚರ ಮೂಡಿಸಬೇಕಾದ ಅಗತ್ಯ ಇದೆ. ಫ್ಯಾಸಿಸ್ಟ್ ಸ್ವರೂಪದ ಮೂಲಭೂತವಾದ ನೇರವಾಗಿ ಹೋದರೆ ಯಶಸ್ವಿಯಾಗುವುದಿಲ್ಲವೆಂದು ಅರಿತಿರುವ ಮೂಲಭೂತವಾದಿಗಳು ಅಭಿವೃದ್ಧಿಯ ವೇಷ ಹಾಕಿ ಜನರ ಅದರಲ್ಲೂ ಯುವಜನರ ಮನಸ್ಸು ಗೆಲ್ಲಲು ಹುನ್ನಾರ ನಡೆಸುತ್ತಿರುವ ಈ ಹೊತ್ತಿನಲ್ಲಿ ಯುವಜನಾಂಗವನ್ನು ಎಚ್ಚರಿಸುವ ಕೆಲಸ ದೇಶದಲ್ಲಿ ನಡೆಯಬೇಕಾದ ಅಗತ್ಯ ಇದೆ. ಅಂತರ್ಜಾಲದಲ್ಲಿ ಈಗಾಗಲೇ ಫ್ಯಾಸಿಸ್ಟ್ ಸ್ವರೂಪದ ಮೂಲಭೂತವಾದಿಗಳು ರುದ್ರನರ್ತನ ಆರಂಭಿಸಿದ್ದು ಇದು ಹಬ್ಬುತ್ತಾ ಹೋದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯ ತಟ್ಟುವ ಸಾಧ್ಯತೆ ಇದೆ. ಫ್ಯಾಸಿಸ್ಟ್ ಮೂಲಭೂತವಾದಿಗಳ ಪ್ರಧಾನ ಲಕ್ಷಣ ಎಂದರೆ ಅಬ್ಬರದ ಪ್ರಚಾರ ಹಾಗೂ ತಮ್ಮನ್ನು ಟೀಕಿಸುವವರ ಮೇಲೆ ಕೀಳು ಭಾಷೆ ಬಳಸಿ ಅವರ ಬಾಯಿ ಮುಚ್ಚಿಸಲು ಗುಂಪು ಗುಂಪಾಗಿ ಮೇಲೆ ಬೀಳುವುದು. ಅಂತರ್ಜಾಲದಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಒಬ್ಬರ ಅಭಿಮಾನಿ ಬಳಗದ ಪ್ರತಿಕ್ರಿಯೆಗಳ ಸ್ವರೂಪವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಫ್ಯಾಸಿಸ್ಟ್ ಮೂಲಭೂತವಾದಿಗಳ ಕೈ ಮೇಲಾಗುವ ಸಾಧ್ಯತೆ ಸದ್ಯಕ್ಕೆ ಇಲ್ಲವಾದರೂ ಪ್ರಗತಿಶೀಲ ಚಿಂತನೆಯ ಜನರು ಒಗ್ಗಟ್ಟಾಗಿ ದೇಶವ್ಯಾಪಿಯಾಗಿ ಜನಜಾಗೃತಿ ಮೂಡಿಸಿ ಎಚ್ಚರದ ಸ್ಥಿತಿಯಲ್ಲಿ ಇರುವುದು ದೇಶದ ಹಿತದೃಷ್ಟಿಯಿಂದ ಅಗತ್ಯ.

    Reply
  2. Naveen_H

    ಈ ಆನಂದ್ ಪ್ರಸಾದ್ ರಿಗೆ ಒಂದು ರೋಗ. ಯಾವದೇ ಚರ್ಚೆಯನ್ನು ತಂದು ಒಂದೇ ಅಂಶಕ್ಕೆ ಜೋಡಿಸೋದು. ಸರ್ಕಾರದ ಮರ್ಜೀ ಕಾಯದೇ ಸ್ವಂತ ಕಾಲ ಮೇಲೆ ನಿಂತು, ಉದ್ಯೋಗ, ಸರಕಾರೀ ಸವಲತ್ತುಗಳನ್ನು ಅಂಗಲಾಚದೆ ಸ್ವಾವಲಂಬಿಯಾಗಿ, ಇನ್ನುಳಿದ ನಾಲ್ಕು ಜನರಿಗೆ ಉದ್ಯೋಗ ಕೊಡುವ ಅನ್ನದಾತನಾಗು ಅಂತ ಲೇಖಕರು ಹೇಳ ಹೊರಟರೆ ಅದನ್ನು ಈ ಆನಂದ ಪ್ರಸಾದರು ಸಂಭಂದ ಸೂತ್ರ ಇರದ ಫ್ಯಾಸಿಸ್ಟ್ ಅಂತೆ, ಅವರ ಇಂಟರ್ನೆಟ್ ಬೆಮ್ಬಲಿಗರಂತೆ, ಹೀಗೆ ಏನೇನೊ ಹೇಳುತ್ತ ಒಟ್ಟಿನಲ್ಲಿ ಬಿಜೆಪಿ ಮೋದಿಗೆ ಅನುಕಂಪ, ಪ್ರಚಾರ ನೀಡುವ ಕಾಯಕದಲ್ಲೇ ನಿರತರಾಗಿರುತ್ತಾರೆ !!

    Reply
  3. Ananda Prasad

    ಇಲ್ಲಿ ಸಂಬಂಧಪಡದ ವಿಷಯವನ್ನೇನೂ ನಾನು ತಂದು ಜೋಡಿಸಿಲ್ಲ. ಲೇಖನದಲ್ಲಿಯೇ ಫ್ಯಾಸಿಸ್ಟ್ ಮೂಲಭೂತವಾದ ಹಾಗೂ ಅದನ್ನೆದುರಿಸಲು ಸ್ವಾತಂತ್ರ್ಯಪೂರ್ವದಲ್ಲಿಯೇ ಪ್ರಗತಿಶೀಲ ಲೇಖಕರು, ಚಿಂತಕರು ಸಂಘಟಿತರಾದ ಉಲ್ಲೇಖ ಇದೆ. ಇಂದು ಕೂಡ ದೇಶದಲ್ಲಿ ಫ್ಯಾಸಿಸ್ಟ್ ಸ್ವರೂಪದ ಮೂಲಭೂತವಾದದ ಅಪಾಯ ಮರೆಯಾಗಿಲ್ಲ. ಹೀಗಾಗಿಯೇ ಇದರ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು. ಸ್ವಲ್ಪ ಎಚ್ಚರ ತಪ್ಪಿದರೂ ಈ ಫ್ಯಾಸಿಸ್ಟ್ ಮೂಲಭೂತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಗೂ ಸಂವಿಧಾನವನ್ನು ದುರ್ಬಲಗೊಳಿಸಿ ಸರ್ವಾಧಿಕಾರಕ್ಕೆ ನೂಕಬಹುದು. ಫ್ಯಾಸಿಸ್ಟ್ ಮೂಲಭೂತವಾದಕ್ಕೆ ಶರಣಾದ ಪಾಕಿಸ್ತಾನದ ಉದಾಹರಣೆ ನಮ್ಮ ಮುಂದೆ ಇದೆ. ಇಂದಿಗೂ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವಾಗಿ ಕಟ್ಟಲು ಸಾಧ್ಯವಾಗಿಲ್ಲ. ಒಮ್ಮೆ ಫ್ಯಾಸಿಸ್ಟ್ ಮೂಲಭೂತವಾದ ಅಥವಾ ಅಂಥ ಹಿನ್ನೆಲೆ ಉಳ್ಳ ಸಂಘಟನೆಗಳು ಅಥವಾ ವ್ಯಕ್ತಿಗಳು ಅಧಿಕಾರಸೂತ್ರವನ್ನು ಹಿಡಿದರೆ ನಂತರ ಅದರಿಂದ ಹೊರಬರಲು ತೀವ್ರ ಹಾಗೂ ದೀರ್ಘ ಹೋರಾಟವೇ ಬೇಕಾಗಬಹುದು. ಮೂಲಭೂತವಾದಿ ಹಿನ್ನೆಲೆ ಉಳ್ಳ ಪಕ್ಷ ಅಥವಾ ಸಂಘಟನೆಗಳನ್ನು ಬಿಟ್ಟು ಬೇರೆ ಪರ್ಯಾಯಗಳನ್ನು ಬೆಳೆಸಲು ವಿದ್ಯಾವಂತರು ಮುಂದೆ ಬರಬೇಕು ಅಥವಾ ಬೆಂಬಲಿಸಬೇಕು. ಸ್ವಚ್ಛ ಹಿನ್ನೆಲೆ ಉಳ್ಳ ಅರವಿಂದ್ ಕೇಜರಿವಾಲ್ ಅವರಂಥವರನ್ನು ಪರ್ಯಾಯವಾಗಿ ಬೆಳೆಸಲು, ಬೆಂಬಲಿಸಲು ವಿದ್ಯಾವಂತ ಯುವಜನಾಂಗ ಮುಂದಾಗಬೇಕೇ ಹೊರತು ಮೂಲಭೂತವಾದಿ ಮನಸ್ಥಿತಿಯ ಸಂಘಟನೆ ಅಥವಾ ಅಂಥ ಸಂಘಟನೆಗಳ ಬೆಂಬಲ ಪಡೆದು ಅಬ್ಬರಿಸುವ ವ್ಯಕ್ತಿಗಳನ್ನಲ್ಲ.

    Reply
  4. samantha

    ALLA SWAMEE ! E LEKHANADALLI POPULAR FRONT ANNU MULABUTHAVADI ANTHA ANDIDDIRI , NODI SWAMI PFI AWARIGIRUWASTU DALLITHARA MELE KALAJI NIMAGE ELLARI , AWARU DALITHARA BAGGE YAWAGALU TAMMA VEDIKE YALLI VISHESHA WAGI KALAJI VAHISIDDARE ,..

    Reply

Leave a Reply

Your email address will not be published. Required fields are marked *