ಅವಳು ನನಗೆ ಬೇಕೇ ಬೇಕು ಎನ್ನುವ ತಿಕ್ಕಲುತನದ ಅಪಾಯ..!


– ಡಾ.ಎಸ್.ಬಿ. ಜೋಗುರ


 

ಹತ್ತಾರು ರೋಮ್ಯಾಂಟಿಕ್ ಮೆಸೇಜಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನಮಾನಗಳಲ್ಲಿ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತಗಳನ್ನು ಅನುಭವಿಸುವದಿದೆ. ಬರೀ ಮೋಹವನ್ನೇ ಪ್ರೀತಿಯೆಂದು ಪರಿಭಾವಿಸುವ ಹುಚ್ಚ ಖೊಡಿ ಮನಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತಿಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓ.ಕೆ. ಏನೇ ಆಗಲಿ ಅವಳು ನನಗೆ ಬೇಕೇ ಬೇಕು ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಆ ಒನ್ ವೇ ಪ್ರೀತಿಯನ್ನು ನಿರಾಕರಿಸಿದ್ದೇಯಾದರೆ ಈತ ಇದ್ದಕ್ಕಿದ್ದಂತೆ ಸೈತಾನನಾಗಿ ಆಕೆಯ ಸುಂದರ ಮುಖಕ್ಕೆ acid-attack-victimಎಸಿಡ್ ಎರಚುವ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೇಮಾ ಮಾಡಿ ದುಡ್ದು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯಿಲ್ಲ. ತಕ್ಕಲು ಹುಡುಗನೊಬ್ಬನ ಅತಿಯಾದ ಪೊಸೆಸ್ಸಿವ್ ನಿಂದಾಗಿ ಅನೇಕ ಸುಂದರ ಯುವತಿಯರು ವಿಕಾರವಾಗಿದ್ದಾರೆ. ಅಂಥಾ ಕೆಲವು ಘಟನೆಗಳಲ್ಲಿ ಎಪ್ರಿಲ್ 20-1999 ರಂದು ಹಸೀನಾ, ಫ಼ೆಬ್ರುವರಿ 2001 ರಲ್ಲಿ ನೂರಜಹಾನ್ , ಅಗಸ್ಟ್ 12-2002 ರಂದು ಶೃತಿ ಸತ್ಯನಾರಾಯಣ, ಜೂನ 24-2007 ಸರೋಜಿನಿ ಕಲಭಾಗ, ಅಗಸ್ಟ 8-2007 ಹಿನಾ ಫ಼ಾತಿಮಾ, ಅಕ್ಟೋಬರ್ 21-2008 ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರೂ ಎಸಿಡ್ ಧಾಳಿಗೆ ತುತ್ತಾದವರು. ನಿಜವಾದ ಪ್ರೀತಿ ಹೀಗೆ ಹಿಂಸೆಯನ್ನು, ಸೇಡನ್ನು ಪುರಷ್ಕರಿಸುವದಿಲ್ಲ ಎನ್ನುವುದು ತಿಳಿದಿರಬೇಕು.

ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ ಡೆತ್ ನೋಟ್ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದಾನೆ. ರೋಷನಿ ಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಈ ಲೋಕವನ್ನು ತ್ಯಜಿಸಿದ್ದಾನೆ. ಬಿಹಾರದ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಡೆತ್ ನೋಟಿನಲ್ಲಿ ನನ್ನನ್ನು ಕ್ಷಮಿಸಿ ಪ್ರತಿ ಬಾರಿಯೂ ಹುಡುಗರದೇ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ, ಆತನ ಸ್ನೇಹಿತರು ಹೇಳುವಂತೆ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೇ ಸಹಪಾಠಿಯನ್ನು ಹೀಗೆ ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ ತಾನೂ ಸಾವೀಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲ. ಕೇವಲ ಇದು ಮಾತ್ರವಲ್ಲ ಇಂಥಾ ಘಟನೆಗಳು ಬೇಕಾದಷ್ಟು ನಡೆಯುತ್ತವೆ.. ವರದಿಯಾಗುತ್ತವೆ.

ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ 23 ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಎಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು 250 ರಷ್ಟು ರೋಮ್ಯಾಂಟಿಕ್ ಆದ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿರುವದಿತ್ತು. ಇದೇ ತಿಂಗಳು ಚೆನೈನ ಎಮ್.ಜಿ.ಆರ್ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಜೋರಾಗಿ ಹೊಡೆದಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ ಮತ್ತು ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು. ಕಳೆದ ಎಪ್ರಿಲ್ ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. ೧೯ ವರ್ಷದ ಓರ್ವ ಯುವತಿಯನ್ನು 22 ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕವಾಗಿ ಒನ್ ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂಥಾ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೇ ನಿರಾಕರಣೆಯ ಹೆಸರಲ್ಲಿ ನಡೆಯುತ್ತವೆ. ಅದರಲ್ಲೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣಗಳು ಆರಂಭವಾಗುತ್ತಿವೆ. ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲಿಕ್ಕೆ ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಹುಡುಗಾಟವೇ ಪ್ರೇಮವಾಗಿ ಅನಾಹುತಗಳು ಘಟಿಸುತ್ತವೆ. ನಿರಂತರವಾಗಿ ರೋಮ್ಯಾಂಟಿಕ್ ಮೆಸೇಜಗಳನ್ನು ರವಾನಿಸುವದೇ ಪ್ರೀತಿಯ ಪರಿಪಾಠವಾಗಿದೆ. ಪ್ರೇಮ ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು.. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲ್ಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಎಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ.. ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ.

Leave a Reply

Your email address will not be published. Required fields are marked *