Daily Archives: August 19, 2013

ಉಪಚುನಾವಣೆಯ ಸಂದರ್ಭದಲ್ಲಿ ಬದಲಾಗದ ಕ್ಷುಲ್ಲಕ ರಾಜಕೀಯ ಸಂಸ್ಕೃತಿ…


– ರವಿ ಕೃಷ್ಣಾರೆಡ್ದಿ


 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಧಿ ಪೂರ್ಣವಾಗುವುದಕ್ಕಿಂತ ಮೊದಲೆ ಪ್ರತಿನಿಧಿ ಸ್ಥಾನ ತೆರವಾಗುವುದನ್ನು ತಡೆಯಲು ಆಗುವುದಿಲ್ಲ ಮತ್ತು ಉಳಿದ ಅವಧಿಗೆ ಆ ಸ್ಥಾನ ತುಂಬಲೇಬೇಕಾಗಿರುವುದು ಅನಿವಾರ್ಯ ಸಹ. ಆದರೆ, ಉಪಚುನಾವಣೆ ಎಷ್ಟು ಅನಿವಾರ್ಯ ಎನ್ನುವುದರ ಬಗ್ಗೆ ನಮ್ಮ ಚುನಾವಣಾ ಸುಧಾರಣೆಗಳ ಹಿನ್ನೆಲೆಯಲ್ಲಿ ಗಂಭೀರವಾದ ಚರ್ಚೆ ಆರಂಭವಾಗಬೇಕಿದೆ.

ನಮ್ಮ ದೇಶದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿಟ್ಟುಕೊಂಡ ಇಂಗ್ಲೆಂಡ್‌ನಲ್ಲಿ ಹೇಗೆ ಉಪಚುನಾವಣೆ ನಡೆಯುತ್ತದೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ನಮ್ಮಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ಮಾಜಿ ಪ್ರತಿನಿಧಿಯ ಪತಿ-ಪತ್ನಿ-ಸೋದರ-ಸೋದರಿ-ಮಗ-ಮಗಳು, obama-bidenಇಂತಹ ನೀತಿಗೆಟ್ಟ ಕುಟುಂಬ ರಾಜಕಾರಣವನ್ನು ಅಲ್ಲಿ ಸಹಿಸಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನನಗೆ ಸಂದೇಹಗಳಿವೆ. ಇನ್ನು ಅಮೇರಿಕದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ಮಂಗಳವಾರ ಚುನಾವಣೆಯ ದಿನ ಮತ್ತು ಅಲ್ಲಿ ಉಪಚುನಾವಣೆಗಳಿಗೆ ಆಸ್ಪದವೇ ಇಲ್ಲ. ಆ ರಾಜ್ಯದ ಸೆನೆಟ್ ಅಥವ ಕಾಂಗ್ರೆಸ್‍ಮನ್‌ನ ಸ್ಥಾನ ಕಾರಣಾಂತರಗಳಿಗೆ ತೆರವಾದರೆ ಅದನ್ನು ಆ ರಾಜ್ಯದ ರಾಜ್ಯಪಾಲನೇ ಉಳಿದ ಅವಧಿಗೆ ತನಗೆ ಸರಿತೋಚಿದವರನ್ನು ನಾಮಕರಣ ಮಾಡುತ್ತಾನೆ. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ಸೆನೆಟ್ ಸದಸ್ಯತ್ವ ಇನ್ನೂ ಎರಡು ವರ್ಷ ಇತ್ತು. ಅವರ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡೆನ್ ಅದೇ ಚುನಾವಣೆಯ ಸಂದರ್ಭದಲ್ಲಿ ನಡೆದ ಸೆನೆಟ್ ಚುನಾವಣೆಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದರು. ತದನಂತರದಲ್ಲಿ ಖಾಲಿಯಾದ ಆ ಎರಡೂ ಸೆನೆಟ್ ಸ್ಥಾನಗಳಿಗೆ ಅಲ್ಲಿಯ ಗವರ್ನರ್‌ಗಳು ತಮಗೆ ಬೇಕಾದವರನ್ನು ನಾಮಕರಣ ಮಾಡಿದರು.

ಇಲ್ಲಿಯೂ ಸಮಸ್ಯೆ ಇಲ್ಲವೇ ಎಂದರೆ, ಅದಕ್ಕೆ ಬಹುದೊಡ್ಡ ಉದಾಹರಣೆ ಖಾಲಿಯಾದ ಬರಾಕ್ ಒಬಾಮರ ಸೆನೆಟ್ ಸ್ಥಾನ. ಖಾಲಿಯಾದ ಆ ಸ್ಥಾನವನ್ನು ತುಂಬಲು ಇಲಿನಾಯ್ ರಾಜ್ಯದ ಗವರ್ನರ್ ಪರಮೋಚ್ಚ ಅಧಿಕಾರ ಹೊಂದಿದ್ದ. ಆದರೆ ಆತ, ರಾಡ್ ಬ್ಲಾಗೋಜೆವಿಚ್, ಆ ಸ್ಥಾನವನ್ನು ವ್ಯಾಪಾರಕ್ಕೇ ಇಟ್ಟುಬಿಟ್ಟ. rod_blagojevichಅಮೆರಿಕದಲ್ಲಿ ಅಪರೂಪಕ್ಕೆಂಬಂತೆ ಈತ ಆ ಸ್ಥಾನಕ್ಕೆ ಯಾರು ಹೆಚ್ಚು ದುಡ್ಡು ಕೊಡುತ್ತಾರೊ (to the highest bidder) ಅವರಿಗೆ ಕೊಡುವುದಾಗಿ ಗುಪ್ತವಾಗಿ ವ್ಯವಹಾರ ಆರಂಭಿಸಿದ. ಸುಮಾರು ಹದಿನೈದು ಲಕ್ಷ ಡಾಲರ್‌ಗಳಿಗೆ ಮಾರುವುದು ಅವನ ಉದ್ದೇಶವಾಗಿತ್ತು. ಇದು ಸುದ್ಧಿಯಾಗಿ, FBI ನವರು ಗುಪ್ತವಾಗಿ ಟೇಪ್ ಮಾಡಿಕೊಳ್ಳುವಾಗ (“I’ve got this thing, and it’s fucking golden. I’m just not giving it up for fucking nothing.”) ಸಿಕ್ಕಿಹಾಕಿಕೊಂಡ. ಗವರ್ನರ್ ಹುದ್ದೆ ಹೋಯಿತು. ಆರೋಪ ಸಾಬೀತಾಗಿ ಷಿಕಾಗೊ ನಗರದ ನ್ಯಾಯಾಲಯ ಆತನಿಗೆ 14 ವರ್ಷಗಳ ಜೈಲುವಾಸ ವಿಧಿಸಿತು. ಈಗ ಜೈಲಿನಲ್ಲಿದ್ದಾನೆ. (ಆತನನ್ನು ಅಲ್ಲಿಯ ಶಾಸನಸಭೆ ರಾಜ್ಯಪಾಲ ಹುದ್ದೆಯಿಂದ ವಜಾ ಮಾಡುವುದಕ್ಕೆ ಮೊದಲು ಬರಾಕ್ ಒಬಾಮರ ಸೆನೆಟ್ ಸ್ಥಾನಕ್ಕೆ ಇನ್ನೊಬ್ಬ ಆಫ್ರಿಕನ್ ಅಮೆರಿಕನ್‌ನನ್ನು ನಾಮಕರಣ ಮಾಡಿದ್ದ. ಆ ಸದಸ್ಯನ ಬಗ್ಗೆ ಒಬಾಮರೂ ಸೇರಿದಂತೆ ಎಲ್ಲರೂ ಸಹಮತ ಸೂಚಿಸಿದ್ದರು.)

ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡು ಲೋಕಸಭಾ ಚುನಾವಣೆಗಳನ್ನು ನೋಡಿ. ಖಾಲಿಯಾದ ಸಂಸತ್ ಸದಸ್ಯರ ಸ್ಥಾನ ತುಂಬಬೇಕು. ಆದರೆ, ಅದಕ್ಕೆ ಉಪ-ಚುನಾವಣೆಯೇ ಆಗಬೇಕೆ? ಸಾಮಾನ್ಯ ಚುನಾವಣೆಯ ತನಕ ಬೇರೊಬ್ಬರನ್ನು ರಾಜ್ಯಪಾಲರು ಅಥವ ರಾಷ್ಟ್ರಪತಿ ನಾಮಕರಣ ಮಾಡಿದರೆ ಆಗದೆ? ಈಗ ಗೆಲ್ಲಲಿರುವ ಅಭ್ಯರ್ಥಿಗಳ ಅವಧಿ ಬಹುಶ: ಏಳೆಂಟು ತಿಂಗಳು ಇದ್ದರೆ ಅದೇ ದೊಡ್ಡದು. ಇಂತಹ ಕ್ಷುಲ್ಲಕ ಚುನಾವಣೆಗೆ ಇಡೀ ರಾಜ್ಯ ಸರ್ಕಾರದ ಎಲ್ಲಾ ಸಚಿವರೂ ಕಳೆದ ಹದಿನೈದು ದಿನಗಳಿಂದ ತಮ್ಮ ಸಚಿವ ಹುದ್ದೆಯ ಕೆಲಸಗಳನ್ನು ಬಿಟ್ಟು ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ಯಾವ ರೀತಿಯ ಸಮರ್ಥನೆ ಇದೆ? ಇನ್ನು ಚುನಾವಣಾ ನೀತಿ-ಸಂಹಿತೆಯ ಕಾರಣಕ್ಕಾಗಿ ರಾಜ್ಯ ಸರ್ಕಾರ ಯಾವುದೇ ಯೋಜನೆಗಳನ್ನು ಪ್ರಕಟಿಸಲಾಗದ, ಹಮ್ಮಿಕೊಳ್ಳಲಾಗದ ಪರಿಸ್ಥಿತಿ. (ನೀತಿ-ಸಂಹಿತೆ ಇಲ್ಲದಿದ್ದರೆ ಅದು ಅಂತಹುದನ್ನು ಮಾಡಿಬಿಡುತ್ತಿತ್ತಾ ಎನ್ನುವುದು ಬೇರೆ ವಿಷಯ.)

ಬಿಜೆಪಿಯ ಭ್ರಷ್ಟ, ಕನಿಷ್ಟ, ನೀತಿಗೆಟ್ಟ ಸರ್ಕಾರ ಹೋಗಿ ಬೇರೆಯ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ನಿಟ್ಟುಸಿರು ಬಿಟ್ಟ ಅನೇಕರಲ್ಲಿ ನಾನೂ ಒಬ್ಬ. ಈ ಸರ್ಕಾರದ ಬಗ್ಗೆಗೂ ನನಗೆ ಅಂತಹ ದೊಡ್ಡ ಆಶಾಭಾವನೆಗಳೇನೂ ಇರಲಿಲ್ಲ. ಆದರೆ ಬಿಜೆಪಿಯವರಷ್ಟು ತೀರಾ ಕೆಡುವುದಿಲ್ಲ, ರಾಜಕೀಯ ವಾತಾವರಣವನ್ನು ಅಷ್ಟು ಕೆಡಿಸುವುದಿಲ್ಲ ಎಂಬ ಸಣ್ಣ ವಿಶ್ವಾಸ ಇತ್ತು. ಆದರೆ ಈ ಉಪಚುನಾವಣೆಯ ಸಂದರ್ಭದಲ್ಲಿ ಅದು ನಶಿಸಿ ಹೋಗಿದೆ. dk-sureshಕಾಂಗ್ರೆಸ್ ಪಕ್ಷ ಎರಡೂ ಲೋಕಸಭಾ ಸ್ಥಾನಗಳಿಗೆ ಆಯ್ಕೆ ಮಾಡಿರುವ ವ್ಯಕ್ತಿಗಳನ್ನು ನೋಡಿದರೆ ಇಷ್ಟು ಬೇಗ ಆ ಪಕ್ಷದ ನಾಯಕರು ಇಂತಹ ಕೆಳಮಟ್ಟಕ್ಕೆ ಇಳಿದರೇ ಎನ್ನುವ ಭಾವನೆ ಬರುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಾನೂ ಒಬ್ಬ ಮತದಾರ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಕೇಳಿದರೆ ನನ್ನಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ. (ನಾಲ್ಕೈದು ವರ್ಷಗಳ ಹಿಂದೆ ಅಮೆರಿಕದಿಂದ ಮರಳಿದ ನನ್ನ ಸ್ನೇಹಿತರೊಬ್ಬರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ಧಮಕಿ ಹಾಕಿಸಿಕೊಂಡ ವಿಚಾರ ಹೇಳಿದಾಗಿನಿಂದ, ಮತ್ತು ಆ ಸ್ಣೇಹಿತರ ಭಯಭೀತ ಮನಸ್ಥಿತಿಯನ್ನು ಗಮನಿಸಿದಾಗಿನಿಂದಲೂ ಈ ನಡುಕ ಇದೆ.) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೋಲಿಸಿದರೆ ಜನತಾ ದಳದ ಅನಿತಾ ಕುಮಾರಸ್ವಾಮಿಯವರು ವಿದ್ಯಾವಂತರು, ಇಂಜಿನಿಯರಿಂಗ್ ಪದವೀಧರೆ. ನೇರವಾಗಿ ರೌಡಿಸಮ್‌ ಮಾಡಲಾರದವರು. ಆದರೆ ಅವರ ಮೇಲೆಯೂ ಭ್ರಷ್ಟಾಚಾರದ ಆರೋಪಗಳಿವೆ. ಶಾಸಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಶಾಸನಸಭೆಯಲ್ಲಿ ಗಮನ ಸೆಳೆಯುವಂತೆ ಮಾತನಾಡಿದ್ದನ್ನು ನೋಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವ, ಯೋಗ್ಯರಾದವರು ಯಾವುದೇ ಪ್ರಮುಖ ಪಕ್ಷಗಳಲ್ಲಿ ನಾಯಕತ್ವ ವಹಿಸಲಾಗದಂತೆ ಮಾಡುತ್ತಿರುವ ಕುಟುಂಬ ರಾಜಕಾರಣವೆಂಬ ಅನಿಷ್ಟಕ್ಕೆ ರಾಜ್ಯದಲ್ಲಿಯ ಬಹುದೊಡ್ಡ ಉದಾಹರಣೆಗಳಲ್ಲಿ ಅನಿತಾ ಕುಮಾರಸ್ವಾಮಿಯವರು ಒಬ್ಬರು. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳನ್ನು ಇಲ್ಲಿಯ ಮತದಾರರು ನಿರಾಕರಿಸಬೇಕಿದೆ. (ಇದು ಆಶಯ, ವಾಸ್ತವದಲ್ಲಿ ಹೇಗೆ ಆರೇಳು ವರ್ಷಗಳ ಹಿಂದಿನ ಉಪಚುನಾವಣೆಯಲ್ಲಿ ಇಡೀ ರಾಜ್ಯಸರ್ಕಾರವೇ ಪ್ರಚಾರ ಮಾಡಿದರೂ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಗೆದ್ದರೋ ಹಾಗೆ ಇಲ್ಲಿ ಅನಿತಾರವರು ಗೆಲ್ಲುವ ಸಾಧ್ಯತೆಗಳು ಹೆಚ್ಚು ಇವೆ.) ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿ ಬೇರೆಯವರಿಗೆ ಮತ ಹಾಕುವ ಮೂಲಕ ಹಣ-ದೌರ್ಜನ್ಯ-ಕುಟುಂಬ ರಾಜಕಾರಣ, ಈ ಮೂರನ್ನೂ ಧಿಕ್ಕರಿಸಿ ತಮ್ಮ ಓಟಿನ ಹೆಚ್ಚುಗಾರಿಕೆಯನ್ನು ಇಲ್ಲಿಯ ಮತದಾರರು ಉಳಿಸಿಕೊಳ್ಳಬೇಕು.

ಇನ್ನು ಮಂಡ್ಯದ ವಿಚಾರವಂತೂ ಹೇಳುವುದೇ ಬೇಡ. ಚಿತ್ರನಟಿ ರಮ್ಯಾ ಉತ್ತಮ ರಾಜಕಾರಣಿ ಆಗುತ್ತಾರೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಜೆಡಿಎಸ್‌ನ  ಸಿ.ಎಸ್. ಪುಟ್ಟರಾಜುರವರೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹ ಕೆಲಸವನ್ನು ಅವರು ಶಾಸಕರಾಗಿದ್ದಾಗ ಮಾಡಿದ ಉದಾಹರಣೆಗಳಿಲ್ಲ. ramya-siddaramaiahಪರೋಕ್ಷ ರೀತಿಯ ಕುಟುಂಬ ರಾಜಕಾರಣ ಮತ್ತು ಜಾತಿವಾದವೇ ಇಲ್ಲಿ ನಡೆಯುತ್ತಿದೆ. ಅಲ್ಲಿಯ ಮತದಾರರಿಗೂ ಇವರಿಬ್ಬರೂ ಯೋಗ್ಯ ಪ್ರತಿನಿಧಿಗಳಲ್ಲ.

ಈ ಉಪಚುನಾವಣೆಯ ಸಂದರ್ಭದಲ್ಲಿ ನಾವೆಲ್ಲ ನಾಚಿಕೆಪಟ್ಟುಕೊಳ್ಳುವಂತಹ ಘಟನೆಗಳು ಹೇರಳವಾಗಿ ನಡೆಯುತ್ತಿವೆ. ರಮ್ಯರ ವಿಚಾರಕ್ಕಂತೂ ಅದು ಊಹಿಸಬಹುದಾದದ್ದೆ. ಆದರೆ ಈ ಸಂದರ್ಭದಲ್ಲಿ ನಮ್ಮ ರಾಜಕೀಯ ಸಂಸ್ಕೃತಿಯನ್ನು ಸಹ್ಯ ಮತ್ತು ಉತ್ತಮ ಎನ್ನಬಹುದಾದ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ನಾಡಿನ ಮುಖ್ಯಮಂತ್ರಿ ಗಂಭೀರವಾಗಿ ವಿಫಲರಾಗಿದ್ದಾರೆ. ಜೆಡಿಎಸ್‌ನವರ ಮಾತು ಮತ್ತು ನಡವಳಿಕೆ ಊಹಿಸಬಹುದಾದದ್ದೆ. ಆದರೆ, ಜೆಡಿಎಸ್ ನಾಯಕರಿಗೆ ಪ್ರತ್ಯುತ್ತರ ಕೊಡುವ ರೀತಿಯಲ್ಲಿ ಸಿದ್ಧರಾಮಯ್ಯನವರು ಮಾತನಾಡುತ್ತಿರುವುದು ಉಚಿತವಲ್ಲ. ಉಡಾಫೆಯಿಂದ, ಸೇಡಿನಿಂದ, ತಿರಸ್ಕಾರದಿಂದ ಸಿದ್ಧರಾಮಯ್ಯನವರು ಈಗ ಮಾತನಾಡಬಾರದು. ಶಾಸನಸಭೆಯಲ್ಲೂ ಅವರು ಅದನ್ನು ಮಾಡಿದರು; ಪ್ರಚಾರದ ಸಮಯದಲ್ಲೂ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಬೆಸೆಯಲು ಆಗದಿದ್ದರೂ, ಜಾತಿವಾದಿಗಳಲ್ಲದವರನ್ನೂ ಜಾತಿವಾದಿಗಳನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ನಮ್ಮ ಪಾಲಿರಬಾರದು. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಮಾತುಗಳಿಂದ ಪ್ರಚೋದಿತರಾಗಿ ಸಿದ್ಧರಾಮಯ್ಯನವರು ಮಾತನಾಡುವುದು ಅವರ ಸಂಯಮ ಮತ್ತು ಪ್ರಬುದ್ಧತೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ. ಸಿದ್ಧರಾಮಯ್ಯನವರನ್ನು ಪ್ರಚೋದಿಸುವುದರಿಂದ ದೇವೇಗೌಡರಿಗೆ ಮತ್ತು ಕುಮಾರಸ್ವಾಮಿಯವರಿಗೆ ರಾಜಕೀಯ ಲಾಭಗಳಿವೆ. ತಾವೂ ಹಾಗೆ ಮಾಡದೇ ಇರುವುದರಲ್ಲಿ ಮತ್ತು ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಉತ್ತರಿಸದೇ ಇರುವುದರಲ್ಲಿ ಸಿದ್ಧರಾಮಯ್ಯನವರ ಘನತೆ ಇದೆ; ಉತ್ತಮ ರಾಜಕೀಯ ಸಂಸ್ಕೃತಿಯನ್ನು ಉದ್ಧೀಪಿಸುವ ಅವಕಾಶ ಇದೆ. ಸಿದ್ಧರಾಮಯ್ಯನವರು ಇಂತಹ ನಡವಳಿಕೆಗಳನ್ನು ಮೀರಿ ನಡೆಯಬೇಕು.