Daily Archives: August 20, 2013

ವರ್ತಮಾನದ ಕನ್ನಡಿಯಲ್ಲಿ ನಿಚ್ಛಳ ಬಿಂಬ..


– ಡಾ.ಎಸ್.ಬಿ. ಜೋಗುರ


 

“ವರ್ತಮಾನದ ಕನ್ನಡಿಯಲ್ಲಿ” ಇದು ಕಳೆದ ನಾಲ್ಕು ದಶಕಗಳಿಂದಲೂ ತಮ್ಮದೇಯಾದ ವಿಭಿನ್ನ ಶೈಲಿಯ ಮೂಲಕ ಚೂಪಾಗಿ ತಿವಿಯುತ್ತಲೇ, ನವಿರಾಗಿ ಕಚಿಗುಳಿ ಇಡುವಂತೆ ಬರೆಯುತ್ತ ಬಂದ ಲೇಖಕ ಎಚ್.ಎಲ್.ಕೇಶವಮೂರ್ತಿಯವರ ಬದುಕು-ಬರಹದ ಸುತ್ತ ಮೈದಳೆದ ಕೃತಿ. ಜಿ.ಪಿ. ಬಸವರಾಜು ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಈ ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಅಸ್ಮಿತೆಯಿಂದ ಹಿಡಿದು ವಿನೋದದವರೆಗೆ ಎಚ್.ಎಲ್.ಕೆ. ಯವರ ಪ್ರಸ್ತಾಪ ಮತ್ತು ಪ್ರಸ್ತುತತೆ ಬಿಂಬಿತವಾದರೆ, ನಂತರದ ಚಿಂತನೆ ಮತ್ತು ಚಳುವಳಿಗಳ ಭಾಗಗಳಲ್ಲಿ ಅಲ್ಲಿಯ ಬರಹಗಳನ್ನು ಓದುತ್ತಾ ಹೋದರೆ ಎಚ್ಚೆಲ್ಕೆ ಪೂರ್ಣಪ್ರಮಾಣದಲ್ಲಿ ಹೊರಗುಳಿದಂತೆ ಭಾಸವಾಗುತ್ತದೆ. ಚಿಂತನೆ ಜಾಗತೀಕರಣ ಮತ್ತು ಚಳುವಳಿಗಳು ಯಾವುದೇ ಸಾಮಾನ್ಯ ಕೃತಿಗೂ ಸೆಟ್ ಆಗಬಹುದಾದ ರೀತಿಯಲ್ಲಿ ಮೂಡಿ ಬಂದ ಬರಹಗಳು. ಎಚ್ಚೆಲ್ಕೆ ಅವರ ನೆನಪಿನಲ್ಲಿ ಮೂಡಿ ಬಂದ ಈ ಕೃತಿ ಮತ್ತು ಚಿಂತನೆಯಲ್ಲಿ ಪ್ರೊ ಕೇಶವಮೂರ್ತಿಯವರು ಇಷ್ಟಪಡಬಹುದಾದ ರೀತಿಯಲ್ಲಿಯೇ ಇಲ್ಲಿಯ ಬರಹಗಳು ಮೂಡಿ ಬಂದಿವೆ. ಮಹನೀಯರೊಬ್ಬರ ಸ್ಮರಣೆಯಲ್ಲಿ ಮೂಡಿ ಬರುವ ಕೃತಿಗಳು ಬಹುತೇಕವಾಗಿ ಬಣ್ಣದ ತಗಡಿನ ತುತ್ತೂರಿಗಳಾಗುವದೇ ಹೆಚ್ಚು. ಆದರೆ ಈ ಕೃತಿ ಅದಕ್ಕೆ ಅಪವಾದ. ಈ ಹೊಗಳಿಕೆ.. ವೇದಿಕೆ, ಸಭೆ ಸಮಾರಂಭ, ಹಾರ ತುರಾಯಿಗಳನ್ನು ಇಷ್ಟ ಪಡದ ಎಚ್ಚೆಲ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದಲೂ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನು ಸ್ತಿತಪ್ರಜ್ಞರಾಗಿ ನೋಡಿ, ಗ್ರಹಿಸಿ ತಮ್ಮದೇಯಾದ ರೀತಿಯಲ್ಲಿ ಪ್ರತಿಕ್ರಿಯಿಸಿದವರು.

ಬಿ.ಚಂದ್ರೇಗೌಡರು ಹೇಳುವಂತೆ ‘ಎಚ್ಚೆಲ್ಕೆ ಯವರನ್ನ ಮತ್ತೊಮ್ಮೆ ಓದಬೇಕಾದ ಅಗತ್ಯವಿದೆ. ಅವರು ಹಾಸ್ಯ ಮಾಡಿಲ್ಲ, ಪ್ರಕರಣಕ್ಕೆ ಪ್ರತಿಕ್ರಿಯೆಯನ್ನಷ್ಟೇ ನೀಡಿದ್ದಾರೆ. ‘ಎಚ್ಚೆಲ್ಕೆ ಯವರು ತಮ್ಮ ಸುತ್ತಮುತ್ತಲಿನ ಬದುಕನ್ನು ತಮ್ಮದೇಯಾದ ಒಂದು ಬಗೆಯ ವಿಡಂಬನಾತ್ಮಕ ನಿಲುವಿನಿಂದ ನೋಡಿದವರು. ಮೂಲಭೂತವಾದದ ಬಗ್ಗೆ, ಜಾತಿವಾದಿಗಳ ಬಗ್ಗೆ, ಕರ್ಮಠರ ಬಗ್ಗೆ ಕುದಿವ ಮನಸ್ಸುಳ್ಳವರು. ಒಟ್ಟು ವ್ಯವಸ್ಥೆಯ ಬಗ್ಗೆ ಒಂದು ರೀತಿಯ ಅಸಮಾಧಾನ ಭಾವವಿರುವ ಮೂರ್ತಿಯವರು ಚಳುವಳಿಗಳ ಬಗೆಗೆ, ಈ ದೇಶದ ಯುವಕರ ಬಗೆಗೆ, ರಾಜಕಾರಣದ ಬಗೆಗೆ, ಪ್ರಶಸ್ತಿ ಪುರಸ್ಕಾರಗಳ ಬಗೆಗೆ, ಮಾಧ್ಯಮಗಳ ಬಗೆಗೆ ಮಹತ್ತರವಾದ ಅಭಿಲಾಷೆಯನ್ನಂತೂ ಇಟ್ಟುಕೊಂಡವರಲ್ಲ. ಅವರೇ ಹೇಳುವಂತೆ ‘ಇಡೀ ರಾಜ್ಯದಲ್ಲಿ ಚಳುವಳಿಗಳು ದಿಕ್ಕು ತಪ್ಪೋದಿಕ್ಕೆ ಕಾರಣ ಅಂದ್ರೆ ರಾಜಕೀಯದ ಆಮಿಷ. ಹಲವರು ಇದನ್ನು ಒಪ್ಪದೇ ಇರಬಹುದು, ಅದು ನನ್ನ ಅಭಿಪ್ರಾಯ.’ ಇಂದು ಸಾಹಿತ್ಯಕ ವಲಯದಲ್ಲಿ ಪ್ರಶಸ್ತಿಗಾಗಿ ಲಾಭಿ ಮಾಡುವ ಅದನ್ನು ಹೇಗಾದರೂ ಮಾಡಿ ಪಡೆದೇ ತೀರುವ ಗುಣದವರ ಬಗ್ಗೆ hlkeshavamurthyಕೇಶವಮೂರ್ತಿಯವರು ಪ್ರಶಸ್ತಿಗಳಿಗೆ ಇವತ್ತು ಯಾವುದೇ ಗೌರವವಿಲ್ಲ. ಅದರಲ್ಲೂ ಸರ್ಕಾರ ನೀಡೊ ಪ್ರಶಸ್ತಿಗಳ ಗೌರವವಂತೂ ಸಂಪೂರ್ಣ ನಾಶವಾಗಿದೆ… ಸಾಹಿತಿಗಳು ಪ್ರಶಸ್ತಿಗಳ ಆಸೆಗಾಗಿ ಸರ್ಕಾರದ ಚೇಲಾಗಳಾಗಿದಾರೆ ಅನ್ನೋದು ನಿಜ. ಅದರಲ್ಲಿ ಸುಳ್ಳೇನೂ ಇಲ್ಲ. ಹೀಗೆ ಸತ್ಯವನ್ನು ಪಾಲಿಶ್ ಮಾಡದೇ ಮಾತನಾಡುವ ಕೆಲವೇ ಕೆಲವರ ಸಾಲಲ್ಲಿ ಎಚ್ಚೆಲ್ಕೆ ನಿಲ್ಲುತ್ತಾರೆ. ದಿನೇಶ ಅಮಿನ ಮಟ್ಟು ’ಇವರೇ ನಿಜವಾದ ಮಂಡ್ಯದ ಗಂಡು’ ಅಂದದ್ದು ಕೂಡಾ ಸಾರ್ಥಕವೇ..

ಮೊದಲಿನಿಂದಲೂ ವೈಚಾರಿಕತೆಗಾಗಿ ಹಂಬಲಿಸುತ್ತಲೇ ಬೆಳೆದವರು. ಮಂಡ್ಯಕ್ಕೆ ಕೋವೂರರು ಬಂದಾಗ ಅವರು ಮಾಡಿದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವ ಹೊಣೆ ಅವರದಾಗಿತ್ತು. ಯುವಕರು ಮೊದಲು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವ ಹಂಬಲವಿರುವ ಎಚ್ಚೆಲ್ಕೆ ಅವರು ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದರೂ ಬಿ.ಜಿ.ಎಲ್. ಸ್ವಾಮಿ ಹಾಗೂ ತೇಜಸ್ವಿಯವರಂತೆ ಅನನ್ಯವಾದ ಬರವಣಿಗೆಯನ್ನು ಮಾಡುವ ಮೂಲಕ ಇಡೀ ರಾಜ್ಯದಾದ್ಯಂತ ಗುರುತಿಸಿಕೊಂಡವರು. ಲಂಕೇಶ ಪತ್ರಿಕೆಯ ಆರಂಭದಿಂದ ಪತ್ರಿಕೆಯ ಜೊತೆಗೆ ಕೆಲಸ ಮಾಡುತ್ತ ಬಂದ ಎಚ್ಚೆಲ್ಕೆ ಜನಸಮುದಾಯದ ಒಳಗೆ ನಿಂತು ಜೀವನ ಸಂದಿಗ್ಧಗಳನ್ನು ಗ್ರಹಿಸಿ ಮೊನಚಾಗಿ ಬರೆದರು. ಹೋರಾಟವೇ ಬದುಕಿನ ಭಾಗವಾಗಿಸಿಕೊಂಡಂತೆ ಬದುಕಿದ ಕೇಶವಮೂರ್ತಿಯವರು ಅನೇಕ ಬಗೆಯ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ರಾಜ್ಯದ ಕೆಲವೇ ಕೆಲವು ಅಪರೂಪದ ಚಿಂತಕರಾಗಿದ್ದ ಕೆ.ರಾಮದಾಸ್. ಲಂಕೇಶ ರಂಥವರ ಒಡನಾಟವಿದ್ದ ಕೇಶವಮೂರ್ತಿಯವರು ಯಾವತ್ತೂ ಅವರ ಒಡನಾಟಕ್ಕೆ ಚ್ಯುತಿ ಬರದ ಹಾಗೆ ಬರೆದವರು, ಬದುಕಿದವರು. ಹೊಸ ತಲೆಮಾರಿನ ಮುಂದೆ ರಾಶಿ ರಾಶಿಯಾದ ಸಾಂಸ್ಕೃತಿಕ ಸಂಘರ್ಷಗಳನ್ನು ಗುಡ್ದೆ ಹಾಕುತ್ತಾ, ಬರಹ ಬದುಕಿಗೆ ಮುಖಾಮುಖಿಯಾಗದೇ ಬೆನ್ನು ತೋರಿಸುತ್ತಲೇ ಬರೆದು ಖ್ಯಾತರಾಗಿ, ಪ್ರಶ್ಸಸ್ತಿ ಪಡೆದ ಕೆಲ ಹಿರಿಯ ಸಾಹಿತಿಗಳೂ ಇದ್ದಾರೆ. ಆದರೆ ಕೆಶವಮೂರ್ತಿ ಹಾಗಲ್ಲ. ಬರೆದಂತೆ ಬದುಕಿರುವ ಕೆಲವೇ ಕೆಲವರಲ್ಲಿ ಒಬ್ಬರು. ಹೀಗಾಗಿಯೇ ಅವರು ಈ ಬಗೆಯ ಗೌರವಕ್ಕೆ ಭಾಜನರು.

’ವರ್ತಮಾನದ ಕನ್ನಡಿಯಲ್ಲಿ’ ನಮ್ಮ ಯುವ ಬರಹಗಾರರು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬಹುದು. ಇಲ್ಲಿ ಇನ್ನಷ್ಟು ಕೇಶವಮೂರ್ತಿಯವರ ಬರಹಗಳ ಬಗ್ಗೆ ಚರ್ಚೆಯ ಅಗತ್ಯವಿತ್ತು ಎನಿಸುತ್ತದೆ. ಅವರ ಕೆಲ ನಿರ್ದಿಷ್ಟ ಬರವಣಿಗೆಗಳನ್ನು ಕುರಿತಾದ ಬರಹಗಳಿರಬೇಕಿತ್ತು. 5 ಹಾಗೂ 6 ನೇ ಭಾಗಗಳಲ್ಲಿಯ ಚರ್ಚೆ ಮತ್ತು ಚಿಂತನೆ ಈ ಕೃತಿಯಲ್ಲಿ ಸೇರ್ಪಡೆಯಾಗದೇ ಒಂದು ಪ್ರತ್ಯೇಖವಾದ ಗ್ರಂಥವಾಗಿಯೇ ಹೊರಬರಬೇಕಿತ್ತು. ಡಾ ಪುಟ್ಟಸ್ವಾಮಿಯವರು ಹೇಳುವಂತೆ ’ಪ್ರೊ ಎಚ್.ಎಲ್.ಕೇಶವಮೂರ್ತಿಯವರ ಬರಹಗಳು ಬೇರೆಲ್ಲ ವಿನೋದ ಸಾಹಿತ್ಯದ ಬರಹಗಾರಿರಿಗಿಂತ ಭಿನ್ನವಾಗುವುದು ಅವರಿಗಿರುವ ಪ್ರಖರವಾದ ಸಾಮಾಜಿಕ ಕಳಕಳಿಯಿಂದ. 1970 ರ ದಶಕದಿಂದ ಈವರೆವಿಗೂ ಒಂದೇ ಗುಣಮಟ್ಟವನ್ನು ಕಾಯ್ದುಕೊಂಡು ರಚನೆಗೊಂಡ ಅವರ ಸಾಹಿತ್ಯ ಸರಿಯಾದ ಮೌಲ್ಯಮಾಪನವಾಗದಿರುವುದು ನಮ್ಮ ಕಾಲದ ನಿಜವಾದ ಸೋಜಿಗಗಳಲ್ಲೊಂದು.’ ವರ್ತಮಾನದ ಕನ್ನಡಿಯಲ್ಲಿ ಪ್ರೊ ಕೇಶವಮೂರ್ತಿಯವರು ನಿಚ್ಛಳವಾಗಿಯೇ ಕಾಣುತ್ತಾರೆ.


ಪುಸ್ತಕ:  ವರ್ತಮಾನದ ಕನ್ನಡಿಯಲ್ಲಿ – ಎಚ್ಚೆಲ್ಕೆ ಬದುಕು-ಬರಹ ಮತ್ತು ಚಿಂತನೆಯ ಸುತ್ತ
ಸಂ- ಜಿ.ಪಿ.ಬಸವರಾಜು
ಪ್ರಕಾಶಕರು:  ವಿವೇಕ ವಿಚಾರ ವೇದಿಕೆ,  ಮಂಡ್ಯ
ಪುಟಗಳು-196,  ಬೆಲೆ-100